
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.
ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.
ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.
‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.
‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.
ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-
23
ಮಗಳು ಡಾಕ್ಟರ್ ಆಗಬೇಕು ಅನ್ನೋದು ಅಪ್ಪಾ ಅವ್ವನ ಆಸೆ. ನನಗೆ ಇಂಜಿನಿಯರ್ ಆಗಬೇಕು ಅಂತ. ಈಗ ಹೊರಳಿ ನೋಡಿದರೆ, ಎಲ್ಲರೂ ಸುಮ್ಮನೆ ಸಿಗುವುದಾದರೆ ಎತ್ತರದ್ದೇ ಸಿಗಲಿ, ಉತ್ತಮವಾದದ್ದೇ ಸಿಗಲಿ, ಅಪರೂಪದ್ದೇ ಸಿಗಲಿ ಎಂದು ಬಯಸುವುದಿಲ್ಲವೇ? ಹಾಗೇ ನಾನೂ ಇಂಜಿನಿಯರ್ ಆಗಬೇಕೆಂದು ಬಯಸಿದ್ದೆ. ಆದರೆ ಪೊಲೀಸ್ ಇಲಾಖೆ ಬಗ್ಗೆ ಅದಕ್ಕೂ ಹೆಚ್ಚಿನ ಸೆಳೆತವಿತ್ತು ಅನ್ನುವುದು ನಂತರ ಗೊತ್ತಾಗಿದ್ದು. ಎರಡೂ ಆಗಲಿಲ್ಲ ಅನ್ನೋದು ಇಂದಿನ ವಾಸ್ತವ.
ಪಿಯುಸಿ ಕಲಿಯಲೆಂದು ಬಿಜಾಪುರದ ನನ್ನ ಅಜ್ಜಿಯ ಮನೆಯಲ್ಲಿರುವುದು ಎಂದು ನಿರ್ಧಾರಿಸಿದರು ಅಪ್ಪ ಅವ್ವ. ಬಿಜಾಪುರಕ್ಕೆ ಬಂದೆ. ನನ್ನ ಅತ್ಯಂತ ಪ್ರೀತಿಯ ಅಜ್ಜಿ ಇಲ್ಲದ ಆ ಮನೆ ನಿಜಕ್ಕೂ ನನಗೆ ದೇವರಿಲ್ಲದ ಗುಡಿಯಂತೆಯೇ ಭಾಸವಾಗುತ್ತಿತ್ತು ಆರಂಭದ ದಿನಗಳಲ್ಲಿ.
ಅಜ್ಜಿಯ ಮನೆಯ ಎದುರಿಗೇ ಇರುವ KCP ಸೈನ್ಸ್ ಕಾಲೇಜಿನಲ್ಲಿ ನನ್ನ ಅಡ್ಮಿಷನ್ ಆಯಿತು. ಇಂದಿನ BLDE Association Medical college ನ ಕಟ್ಟಡ ಏನಿದೆಯೋ ಅದು ಆಗ KCP Sc ಕಾಲೇಜ್ ಆಗಿತ್ತು. ತುಂಬಾ ಸುಂದರವಾದ ಕಲ್ಲಿನ ಕಟ್ಟಡವದು. 120-150 ಜನ ವಿದ್ಯಾರ್ಥಿಗಳು ಕೂರುವಂಥಾ ದೊಡ್ಡ ದೊಡ್ಡ ಕ್ಲಾಸ್ ರೂಮುಗಳು. ದೊಡ್ಡ ದೊಡ್ಡ ಲ್ಯಾಬ್ ಗಳು. ಉತ್ತಮ ಪ್ರಾಧ್ಯಾಪಕರು. ಒಟ್ಟಿನಲ್ಲಿ ದೂರದಿಂದ ನೋಡಿದರೂ, ಒಳ ಹೊಕ್ಕರೂ, ‘ಆಹಾ ದಿವ್ಯ ಭವ್ಯ!’ ಅನಿಸುವಂಥ ವಾತಾವರಣ.
ನಾನು ಚಿಕ್ಕವಳಿದ್ದಾಗ ಆಡಿ ಬೆಳೆದ ಅಂಗಳವದು! ಆ ಕಾಲೇಜಿನ ಪ್ಯಾಸೇಜ್, ಅಂದಿನ ಸಸ್ಯಾಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗಗಳ ಮುಂದಿನ ಪುಟ್ಟ ಹೂದೋಟ, ಕಟ್ಟೆಗಳು, ಮೆಟ್ಟಿಲುಗಳು, ನೀರಿಲ್ಲದ 2 ಸ್ವಿಮ್ಮಿಂಗ್ ಪೂಲ್ಸ್, ಎಲ್ಲವೂ ನಮ್ಮ ಆಟದ ಭಾಗವಾಗಿದ್ದವು. ಹೀಗಾಗಿ ನನಗೆ kcp ಯಲ್ಲಿ ಅಡ್ಮಿಷನ್ ಆದಾಗ ಸಹಜವಾಗಿಯೇ ಖುಷಿ ಆಗಿತ್ತು. ಅದು ಬಿಜಾಪುರದ ಅಜ್ಜಿಯ ಮನೆಗೆ ಹೋಗ್ತಿದೀನಿ ಅನ್ನುವಾಗಿನ ಖುಷಿಗೆ ಸಮನಾದುದ್ದು.

ಅಪ್ಪಾರ ಫ್ರೆಂಡ್ ಬೆಂಗಳೂರಿನಿಂದ ತಂದು ಕೊಟ್ಟಿದ್ದ ಚೂಡಿದಾರ್ ಸೆಟ್ ಅದೆಷ್ಟು ಬೆಲೆ ಬಾಳುವುದಾಗಿತ್ತೆಂದರೆ, ಮಗಳು ಕಾಲೇಜಿಗೆ ಹೋಗುತ್ತಾಳೆ, ಅಲ್ಲಿ ಅವಳಿಗೆ ನಾಲ್ಕಾರು ಬಟ್ಟೆಗಳ ಅಗತ್ಯವಿದೆ ಎಂದರಿತಿದ್ದ ನಮ್ಮವ್ವ ಅದರ ಬಾಟಮ್ ಬಟ್ಟೆಯಿಂದಲೂ ಟಾಪ್ ಹೊಲೆಸಿ ಎರಡು ಸೆಟ್ ಬಟ್ಟೆ ಮಾಡಿ ಕೊಟ್ಟು ಕಳಿಸಿದ್ದಳು.
ಮೊದಲ ದಿನ ಕಾಲೇಜಿಗೆ ಹೋದಾಗ ಕ್ಲಾಸ್ ರೂಮ್, ಟೈಮ್ ಟೇಬಲ್, ಡಿಪಾರ್ಟ್ಮೆಂಟ್ಸ್ ಅಂತೆಲ್ಲ ಕೇಳಿ ತುಸು ಗಲಿಬಿಲಿ ಆಯಿತಾದರೂ ಅದಕ್ಕೂ ಮಿಗಿಲಾಗಿ ದಿಗಿಲುಗೊಂಡಿದ್ದು ಕ್ಲಾಸ್ ರೂಮಿನಲ್ಲಿ ಹೋಗಿ ಕುಳಿತಾಗ ಎಲ್ಲಾ ಪಾಠಗಳೂ ಇಂಗ್ಲಿಷಿನಲ್ಲಿ ಇದ್ದಿದ್ದು ಕಂಡು! ಕಥೆಗಿಥೆ ಆದಲ್ಲಿ ಮೆದುಳಲ್ಲಿ ತಕ್ಷಣ ಇಳಿದಿರುತ್ತಿತ್ತೋ ಏನೋ, ಎಲ್ಲಾ ಪಾಠಗಳೂ ವಿಜ್ಞಾನದ ಪಾಠಗಳೇ! ಅಷ್ಟು ದಿನ ಕನ್ನಡದಲ್ಲಿ ಓದಿದ್ದ ಎಷ್ಟೋ ವಿಜ್ಞಾನದ ಪದಗಳು ಇಂಗ್ಲಿಷಿನಲ್ಲಿ ಅವರು ಹೇಳಿದಾಗ ಅರ್ಥವಾಗುತ್ತಲೇ ಇರಲಿಲ್ಲ. ಅದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಮೇಷ್ಟ್ರುಗಳ ಪಾಠ ಮುಗಿಯಲು ಬಂದಿರುತ್ತಿತ್ತು! ಸ್ವಭಾವತಃ ಸಂಕೋಚ ಪ್ರವೃತ್ತಿಯವಳಾದ ನನಗೆ ಸಹ ವಿದ್ಯಾರ್ಥಿಗಳಲ್ಲಿ ಚರ್ಚಿಸಲು, ಅರ್ಥ ಕೇಳಲೂ ಸಂಕೋಚ.
ವಿದ್ಯಾರ್ಥಿಗಳಲ್ಲಿ ಕೆಲವರು, ನಾನು ಬಿಜಾಪುರದಲ್ಲಿ ಮೊದಲು ಕಲಿತ ಲಿಬರಲ್ ಸ್ಕೂಲಿನ ಕೆಲ ಸ್ನೇಹಿತರಿದ್ದರಾದರೂ ಅವರಿಗೂ ನನಗೂ ಮುಂಚಿನಂತೆ ಸಹಜವಾಗಿ ಮಾತಾಡಲು ಏನೋ ಮುಜುಗರ. ನಿಧಾನಕ್ಕೆ ಅದು ಕರಗಿತಾದರೂ ಅವರವರಲ್ಲೇ ಗುಂಪುಗಳಾಗಿ ನನಗೆ ಬೇರೆಯೇ ಸ್ನೇಹಿತರು ಸಿಕ್ಕರು ಆ ಮಾತು ಬೇರೆ. ಮೇಷ್ಟ್ರು ಹೇಳಿದ್ದು ಅರ್ಥವಾಗ್ತಿರ್ಲಿಲ್ಲ ಅಂದೆನಲ್ಲ ಅದೇನು ಒಂದೆರಡು ದಿನಗಳ ಮಾತೇ?! ಪೂರಾ 2 ತಿಂಗಳು ಕಕಿಮಿಕಿ ಮೇಷ್ಟ್ರು, ಅಕ್ಕಪಕ್ಕ ಕುಳಿತವರ ಮುಖ ನೋಡುವುದರಲ್ಲೇ ಕಳೆದುಹೋಯಿತು! ಅಲ್ಲಿದ್ದ ಅರ್ಧಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಪಾಡು ನನಗಿಂತ ಭಿನ್ನಾವೇನಾಗಿರಲಿಲ್ಲ. ಅವರೆಲ್ಲ ಒಂದೋ ನನ್ನಂತೆ ಹಳ್ಳಿಯಿಂದ ಇಲ್ಲವೇ ಬಿಜಾಪುರದಲ್ಲೇ ಇದ್ದೂ ಕನ್ನಡ ಮಾಧ್ಯಮದಲ್ಲಿ ಕಲಿತವರೇ ಆಗಿದ್ದರು. ಆರಂಭದಲ್ಲಿ ನನ್ನಂಥವರೆಲ್ಲರಿಗೂ ವಿಜ್ಞಾನ ಪದಗಳು ಕಬ್ಬಿಣದ ಕಡಲೆ.
ನಿಧಾನವಾಗಿ ಪಾಠಗಳು ಅರ್ಥವಾಗತೊಡಗಿದವಾದರೂ, ನಾವುಗಳು ಹಳ್ಳಿವರು, ನಮಗೆ ಇಂಗ್ಲಿಷ್ ಬರುವುದಿಲ್ಲ ಅನ್ನುವ ಕೀಳರಿಮೆ ನನಗಷ್ಟೇ ಅಲ್ಲದೆ ಅವರೆಲ್ಲರಿಗೂ ಇತ್ತು ಅನಿಸುತ್ತೆ. ಹೀಗಾಗಿ ಬಹಳಷ್ಟು ಜನ ಹಳ್ಳಿಯಿಂದ ಬಂದ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದಿಂದ ಬಂದ ಸಹಪಾಠಿಗಳೊಂದಿಗೆ ಒಡನಾಟವಿಟ್ಟುಕೊಳ್ಳದೆ ಒಂಥರಾ ತಾವು ಗುಂಪಿಗೆ ಸಲ್ಲದವರು ಎಂಬಂತೆ ಅನಾಥ ಪ್ರಜ್ಞೆ ಅನ್ನಬಹುದಾ ಅದನ್ನು…? ಹಾಗಿದ್ದುದು ಅವರ ಮುಖದ ಮೇಲೆ ಒಡೆದು ಕಾಣುತ್ತಿತ್ತು. ನಾನು ಚಿಕ್ಕವಳಿದ್ದಾಗ ಇದೇ ಊರಲ್ಲಿ ಬೆಳೆದವಳಾಗಿದ್ದರಿಂದ ನನಗದು ಅಷ್ಟು ಬಾಧಿಸಲಿಲ್ಲವಾದರೂ, ಶುರುವಿನಲ್ಲಿ ನನಗೂ ಒಂಟಿತನ ಕಾಡಿದ್ದು ಸುಳ್ಳಲ್ಲ.

ಅಲ್ಲಿನ ಅನೇಕ ಪ್ರಾಧ್ಯಾಪಕರು ನನ್ನನ್ನು ಸಣ್ಣ ಹುಡುಗಿಯಗಿದ್ದಾಗಿನಿಂದ ಬಲ್ಲವರಾದರೂ ಕಾಲೇಜಿನಲ್ಲಿ ಆ ಸಲುಗೆ ಎಳ್ಳಷ್ಟು ಉಪಯೋಗಕ್ಕೆ ಬರುತ್ತಿರಲಿಲ್ಲ. ಆದರೆ ಎಲ್ಲರಿಗೂ ನನ್ನ ಬಗ್ಗೆ ಕಾಳಜಿ ಇತ್ತು, ಅದು ಕ್ಲಾಸ್ ಮಿಸ್ ಮಾಡಿದರೆ ಇಲ್ಲವೇ ಸರಿಯಾಗಿ ಓದಿಲ್ಲವೆಂದಾಗ ಮಾತ್ರ ವ್ಯಕ್ತವಾಗುತ್ತಿತ್ತು. ಎಷ್ಟೊಂದು ಆರೋಗ್ಯಕರ ನಿಲುವು ಅಲ್ಲವೇ ಅದು!
ಶಹರಕ್ಕೆ ಬಂದ ಮೇಲೆ ಅಲ್ಲಿಯವರಂತಾಗಬೇಕು ಎಂದು ಯಾವುದೇ ವಯಸ್ಸಿನವರಾಗಲಿ ಬಯಸುತ್ತಲೇ ನಿರಾಕರಿಸುತ್ತಿರುತ್ತಾರೆ. ಆ ನಯ ನಾಜೂಕು ತಮಗಿಲ್ಲ ಅನ್ನುವ ಅರಿವು, ಸಹಜವಾಗಿ ಆಕರ್ಷಸುವ ಫ್ಯಾಷನ್, ಸಂಕೋಚಪಡುತ್ತಲೇ ಅದಕ್ಕೊಳಗೊಳ್ಳುವ ಆನಂದ, ಅದನ್ನು ವಿವರಿಸದೇ ನಿಮ್ಮಲ್ಲಿ ಅನೇಕರು ಅರ್ಥ ಮಾಡಿಕೊಳ್ಳಬಲ್ಲಿರಿ ಎಂದು ಭಾವಿಸುತ್ತೇನೆ.
ಶಹರು ನನಗೆ ಅಪರೂಪದ್ದೆನ್ನಾಗಿರಲಿಲ್ಲವಾದರೂ ಆಗಷ್ಟೇ ಶ್ಯಾಪೇಟಿಯ ಗಲ್ಲಿಯೊಂದರಲ್ಲಿ ಹುಟ್ಟಿಕೊಂಡಿದ್ದ ಬ್ಯೂಟಿ ಪಾರ್ಲರ್ ಬಿಜಾಪುರದ ಹರೆಯದ ಹೆಂಗಳೆಯರಿಗೆಲ್ಲ ಬಲು ಆಕರ್ಷಣಿಯ ಸ್ಥಳವಾಗಿತ್ತು. ಜಯಶ್ರೀ ಟಾಕೀಸ್ ಎದುರಿಗಿದ್ದ DCC ಬ್ಯಾಂಕ್ ನ ಗಳ್ಳಿಯಲ್ಲಿ ಮುಂದೆ ಸಾಗಿದರೆ ಎಡ ಬದಿಯಲ್ಲಿ, ಶತಮಾನದಷ್ಟು ಹಳೆಯದಾದ ಕಟ್ಟಡದ ಮೊದಲ ಮಹಡಿಯಲ್ಲಿ ಈ ಪಾರ್ಲರ್ ಇತ್ತು. ಮಿಸೆಸ್ ಶಾಹ್ ಅದರ ಒಡತಿ. ಮಧ್ಯವಯಸ್ಸು ಮೀರಿದ ಮಹಿಳೆ. ಯಾವ ದಿನ ಹೋದರೂ ಎಷ್ಟೊತ್ತಿಗೇ ಹೋಗಲಿ ನಮ್ಮ ಸರದಿಗಾಗಿ ಗಂಟೆ ಎರಡು ಗಂಟೆ ಕಾಯಲೇಬೇಕಿತ್ತು ಅಷ್ಟೊಂದು ಬೀಡು ಅಲ್ಲಿ.
ನನ್ನ ಗೆಳತಿ ದಾಕ್ಷಾಯಣಿಯ ಅಕ್ಕ ಶೈಲಾ, ನನ್ನನ್ನು ಮತ್ತು ದಾಕ್ಷಾಯಣಿಯನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದಳು ಒಮ್ಮೆ. ಅವಳು ಹುಬ್ಬು ಟ್ರಿಮ್ ಆಗಿ ಸರಿಯಾದ ಆಕಾರ ಪಡೆದು ಅಂದಗೊಂಡು ಅವಳು ಇನ್ನಷ್ಟು ಚೆಂದ ಕಾಣತೊಡಗಿದ್ದಳು. ಅದನ್ನು ಕಂಡು ನಮಗೂ ನಮ್ಮ ಹುಬ್ಬು ತೀಡಿಸಿಕೊಳ್ಳುವ ಆಸೆಯಯ್ತು. ನನ್ನ ತಲೆಯ ಮೇಲೆಷ್ಟು ದಟ್ಟ ಕೂದಲೋ ಅಷ್ಟೇ ದಟ್ಟ ನನ್ನ ಹುಬ್ಬಿನ ಕೂದಲು ಸಹ ಆಗ. ಹೀಗಾಗಿ ನನ್ನಲ್ಲಿನ ಆಸೆ ಬಲವಾಗಿ ಮನೆಯಲ್ಲಿ ಒಪ್ಪಿಗೆ ಕೇಳಿದಲ್ಲಿ, ಒಪ್ಪಿಗೆ ಬದಲಿಗೆ ಮುತ್ತಜ್ಜಿಯಿಂದ (ನನ್ನಜ್ಜಿ ತೀರಿಕೊಂಡಿದ್ದರು. ಆದರೆ ಅವರ ತಾಯಿ ಮುಂಚಿನಿಂದಲೂ ಮಗಳ ಮನೆಯಲ್ಲೇ ಇದ್ದರು, ಬದುಕಿದ್ದರು ಆಗ) ಒದೆ ಸಿಗುವುದು ಗ್ಯಾರೆಂಟಿ ಎಂದುಕೊಂಡು, ಮನೆಯಲ್ಲಿ ಹೇಳದೆಯೇ ಹೋಗಿ threading ಮಾಡಿಸಿಕೊಂಡು ಬಂದೆ. ಹುಬ್ಬನ್ನು ಒಪ್ಪ ಮಾಡಿಸಿಕೊಳ್ಳುವಾಗಿನ ಹುರುಪು ಮಾಡಿಸಿಕೊಂಡ ನಂತರ ಇರಲಿಲ್ಲ ನನಗೆ. ನಾನು ನಾನಾಗಿ ಕಾಣದೆ ಬೇರೆಯೇ ಕಾಣತೊಡಗಿದ್ದೆ.
ಮನೆಗೆ ಬಂದ ಮೇಲೆ ಏನಾಯಿತೆಂದರೆ…
| ಇನ್ನು ಮುಂದಿನ ವಾರಕ್ಕೆ |






Welcome back. ನೀವು ಮತ್ತೆ ಬರೆಯಲು ಶುರುಮಾಡಿದ ಮೇಲೆ ಇದೇ ಮೊದಲ ಕಂತು ನಾನು ಓದುತ್ತಿರುವುದು. ಸಾಗಲಿ ಪಯಣ.
Welcome back. ಸಾಗಲಿ ಪಯಣ