ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಲಕ್ಷ್ಮಿ ಪಾಟೀಲ್ ಅಂಕಣ – ಪುಂಡುಪೋಕರಿಗಳು ಇನ್ನೂ ಒಂದು ಹೆಜ್ಜೆ ಮುಂದುಹೋಗಿ..

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

31

ರಪ್ಪನೇ ಬೆನ್ನಿಗೊಂದು ಏಟು ಬಿತ್ತು! ತಿರುಗಿ ನೋಡಿದರೆ ನನ್ನ ಬೆನ್ನಿಗೆ ಹೊಡೆದವ ಮರಳಿ ಮೆಟ್ಟಲಿಳಿಯುತ್ತಿದ್ದ. ಅವನ ಹಿಂದೆ ಅವನ ಗೆಳೆಯರ ಹಿಂಡು. ‘ಏ!’ ಕಿರುಚಿದೆ ಅವಮಾನ ಸಿಟ್ಟಿನಿಂದ ನಡಗುತ್ತಾ.
“ಯಾರೋ ನೀ? ಎಷ್ಟು ಸೊಕ್ಕ ನಿನಗ? ನನಗ್ಯಾಕ ಹೊಡದ್ಯೋ?”
“ನಿನಗ ಗೊತ್ತಿರ್ಲಿಲ್ಲೇನ ನನಗ ಹೊಡ್ಯೂಮುಂದ ನಾ ಯಾರಂತ? ಹೊಡಸ್ಕೊಂಡ್ ಸುಮ್ನಿರಾಕ ನಾ ಏನ್ ಹೇಪ್ಲ್ಯಾ ಅಂತ ತಿಳದಿ ಏನ?” ಎಂದು ಠೇಂಕರಿಸಿದ. ವಿಚಿತ್ರ ಅನಿಸಿತು ನನಗೆ. ನಾನವನಿಗೆ ಹೊಡೆದೇ ಇರಲಿಲ್ಲ. ಆದರೂ ನಾನವನಿಗೆ ಹೊಡೆದೆ ಎನ್ನುತ್ತಿದ್ದಾನೆ. ಈಗ ಸಿಟ್ಟು ಇನ್ನೂ ಹೆಚ್ಚಾಯ್ತು.
“ನಾ ಯಾಕ ಹೊಡೀಲಿ ನಿನಗ? ಹುಚ್ಚಗಿಚ್ಚ್ ಹಿಡದತೇನ್ ನಿನಗ? ನಾಚ್ಗಿ ಬರಂಗಿಲ್ಲಾ ಹಿಂದಿಂದ ಬಂದು, ಯಾರು ಏನು ಅಂತ ನೋಡದ ಹೊಡ್ಯಾಕ? ತಡಿ ಸರ್ ಗೆ ಹೇಳ್ತೀನಿ.” ಎಂದವಳೇ ಮೆಟ್ಟಲೇರತೊಡಗಿದೆ. ಅವನು, “ಹೇಳ್ಕೊ ಹೋಗ್ ಹೋಗ” ಎನ್ನುತ್ತಾ ಮೆಟ್ಟಿಲಿಳಿದು ನಡೆದ. ನಿಂತು ನೋಡುತ್ತಿದ್ದವರೂ ಕೆಳಗಿಳಿದು ನಡೆದರು. ನಾನು ನನ್ನ ಕ್ಲಾಸಿನ ಬಾಗಿಲಲ್ಲಿ ನಿಂತು,
“ಸರ್, ಮೇ ಐ ಕಮ್ ಇನ್?” ಎಂದೆ. ಕ್ಲಾಸ್ ಶುರುವಾಗಿ ಅದಾಗಲೇ ೧೦ ನಿಮಿಷ ಕಳೆದಿತ್ತು. ಪಾಟೀಲ್ ಸರ್ ಜೂವಾಲಾಜಿ ಕ್ಲಾಸ್ ತೆಗೆದುಕೊಳ್ತಾ ಇದ್ದರು. ತುಂಬಾ ಗಂಭೀರ ಸ್ವಭಾವದ ಮೆದು ಮಾತಿನವರು ಅವರು. ಅವರಲ್ಲಿ ಆ ಹುಡುಗನ ಅನುಚಿತ ವರ್ತನೆಯ ಬಗ್ಗೆ ಹೇಳುವುದಿತ್ತು. ಅದಾಗಲೇ ಹೊರಗಿನ ಗಲಾಟೆ ಕ್ಲಾಸನ್ನು ಡಿಸ್ಟರ್ಬ್ ಮಾಡ್ತಿದೆ ಅನ್ನುವ ಸಿಟ್ಟಿತ್ತು ಅನಿಸುತ್ತದೆ. ಅದು ಗೊತ್ತಾಗದೇ ಮತ್ತು ಕ್ಲಾಸ್ ನಡೆಯುವಾಗ ಬೇರೇನೂ ಮಾತಾಡುವಂತಿಲ್ಲ ಅನ್ನುವುದನ್ನು ಮರೆತು ನಾನು ಅವರ ಬಳಿ ವಿಷಯ ತಿಳಿಸಲು ನೋಡಿದೆ. ಸಟ್ಟನೇ ರೇಗಿಬಿಟ್ಟರು, “ಏನನಕೊಂಡೀರಿ ಇದನ್ನ? ಕ್ಲಾಸೋ ಧರ್ಮಛತ್ರಾನೋ? ಹೊರಗಹೋಗ್ರಿ ಡಿಸ್ಟರ್ಬ್ ಮಾಡಬ್ಯಾಡ್ರಿ ಇಲ್ಲಿ ನಿಂತು. ಗೆಟ್ ಔಟ್!”

ಗಾಯದ ಮೇಲೆ ಉಪ್ಪು ಉಜ್ಜಿದಂಥಾ ಅವಸ್ಥೆ ನನ್ನದು. ಹೊರಗೆ ಆದ ಅವಮಾನ ಸಾಲದು ಎಂದು ತುಂಬಿದ ಕ್ಲಾಸಲ್ಲಿ ಸಹಪಾಠಿಗಳೆದುರೂ ಅವಮಾನ! ಯಾವನೋ ಬಂದು ಹೊಡೆದರೆ ಹೊಡೆಸಿಕೊಳ್ಳಲು ನಾನೇನು ಚಿಕ್ಕಮಗುವೇ?! ಯಾರವನು? ಯಾವ ಕ್ಲಾಸು? ಯಾವ ಕಾಲೇಜು? ಏನೂ ತಿಳಿದಿರಲಿಲ್ಲ ನನಗೆ. ಯಾವತ್ತೂ ಮುಖ ನೋಡಿದ ನೆನಪೂ ಇಲ್ಲ! ಅವನ್ಯಾಕೆ ಬಂದು ನನಗೇ ಹೊಡೆದ?! ಯಾಕೆ? ಯಾಕೆ? ಬೆಪ್ಪಾಗಿ ಸ್ವಲ್ಪ ಹೊತ್ತು ಕ್ಲಾಸಿನ ಗೋಡೆಗೆ ಒರಗಿ ನಿಂತೆ. ನಿಲ್ಲಲು ಶಕ್ತಿ ಸಾಲದೆನಿಸಿ ಮೆಟ್ಟಿಲ ಮೇಲೆ ಕುಳಿತೆ. ವಿನಾಕಾರಣ ಯಾವನೋ ಬಂದು ಹೊಡೆದಿದ್ದು, ಗುರುಗಳಿಗೆ ಹೇಳಲು ಹೋದರೆ ಅವರು ಗದರಿಸಿದ್ದು ಸಹಿಸಲಾಗಲಿಲ್ಲ. ಎದ್ದು ಬಿರಬಿರನೇ ನಡೆದು ಹೋಗಿ ಅಷ್ಟು ದೂರದಲ್ಲಿದ್ದ ಪ್ರಾಂಶುಪಾಲರ ಕೋಣೆ ಎದುರು ನಿಂತೆ. ಕ್ಲಾಸ್ ರೂಮಿನಿಂದ ಐದು ನಿಮಿಷ ಬೇಕೇನೋ ಅಷ್ಟು ದೂರವಿತ್ತು. ಬನ್ನೂರ್ ಸರ್ ಆಗ ಪ್ರಾಂಶುಪಾಲರಾಗಿದ್ದವರು. ಬಾಗಿಲೆದುರು ಸ್ಟೂಲ್ ಮೇಲೆ ಕುಳಿತಿದ್ದ ಪ್ಯೂನ್ ಹತ್ರ, “ಸರ್ ನ ಭೆಟ್ಟಿ ಆಗಬೇಕು, ಅದಾರೇನ್ರಿ?” ಎಂದೆ.

“ಅದಾರ ಹೋಗ್ರಿ” ಅಂದವನ ಮಾತು ಮುಗಿಯುವ ಮೊದಲೇ ಕೋಣೆಯ ಒಳಗೆ ಕಾಲಿಟ್ಟಿದ್ದೆ. ಏನೋ ಬರೆಯುತ್ತಿದ್ದವರು, ತಲೆ ಎತ್ತಿ, ಏನು ಎಂಬಂತೆ ನನ್ನತ್ತ ನೋಡಿದರು.
ಆದ ಎರಡೆರಡು ಅವಮಾನದಿಂದ ಕಣ್ಣೀರೂ ಇಂಗಿಹೋಗಿತ್ತು. “ಸರ್, ಈಗ ಅರ್ಧಾ ತಾಸಿನ ಮದ್ಲ ಹುಡುಗೊಬ್ಬ ಹಿಂದಿಂದ ಬಂದು…” ನನ್ನ ಮಾತು ಮುಗಿಯುವ ಮೊದಲೇ, ಬನ್ನೂರ್ ಸರ್, “ಅವತ್ತ ವಾರ್ನಿಂಗ್ ಕೊಟ್ಟು ಕಳಿಸಿದ್ನೆಲ್ಲ ಅಂದ್ರೂ ಕಾಡ್ತಾನಾ?” ಎಂದರು.

“ಅಂವಾ ಅಲ್ರೀ ಸರ್, ಇಂವಾ ಬ್ಯಾರೇರಿ” ಎನ್ನುತ್ತಾ ಎಲ್ಲ ವಿಷಯ ಹೇಳಿದೆ ಅವರೆದುರು.
“ಅಲ್ರೀ ಅರ್ಧಾ ತಾಸಿನ ಹಿಂದ ಹೊಡದಾ ಅಂತೀರಿ. ಅಂವಾ ಯಾರಂತ ಗೊತ್ತಿಲ್ಲ ಅಂತೀರಿ. ಹಿಂಗಿದ್ದಾಗ ಈಗ ಎಲ್ಲೆಂತ ಹುಡುಕೂದು ಅವನನ್ನ?” ಎಂದರು. ಹೌದಲ್ಲ! ಅನಿಸಿತು ನನಗೂ. ಸ್ವಲ್ಪ ಯೋಚಿಸಿದ ಮೇಲೆ ನನ್ನ ಕ್ಲಾಸಿನ ನಾಲ್ಕಾರು ಹುಡುಗರು ಆ ಘಟನೆ ನಡೆದಾಗ ಅಲ್ಲಿಂದ ಹಾಯ್ದು ಕ್ಲಾಸೆಡೆಗೆ ಧಾವಿಸಿದ್ದು ನೆನಪಾಗಿ ಆ ಬಗ್ಗೆ ಹೇಳಿದೆ.

“ಓಹ್, ಈಗ ಕ್ಲಾಸ್ ನಡೀತಿರ್ತಾವು, ಕ್ಲಾಸ್ ಬಿಡಿಸಿ ಕರ್ಸೂದರ ಹೆಂಗ? ಆಮ್ಯಾಲೆ ಬರ್ರಿ ಆ ಹುಡುಗೂರ್ನ ಕರ್ಕೊಂಡು, ಈಗ ಹೋಗ್ರಿ” ಎಂದರು. ನಾನು ಕರೆದರೆ ಆ ಹುಡುಗರು ಬರದೇ ಹೋದರೆ ಏನು ಮಾಡುವುದು ಅನಿಸಿತು. ಅದನ್ನೇ ಪ್ರಾಂಶುಪಾಲರಿಗೆ ಹೇಳಿ, “ಸರ್, ನೀವು ಕರ್ಯಾಕ ಕಳಿಸಿದ್ರ ಅವ್ರು ಬರ್ತಾರ್ರಿ” ಎಂದು ಅನುಮಾನಿಸುತ್ತಾ ಹೇಳಿದೆ. ಹೊರಗಿದ್ದ ಪ್ಯೂನನ್ನು ಒಳ ಕರೆದು ನನ್ನೊಂದಿಗೆ ನನ್ನ ಕ್ಲಾಸಿಗೆ ಆ ಹುಡುಗರನ್ನು ಕರೆತರಲು ಹೇಳಿದರು.

ನಾವು ಕ್ಲಾಸಿನ ಬಳಿ ಹೋದಾಗ ಆಗಷ್ಟೇ ಕ್ಲಾಸ್ ಮುಗಿಸಿ ಪಾಟೀಲ್ ಸರ್ ಆಚೆ ಬರುತ್ತಿದ್ದರು. ನೋಡಿ ತಲೆ ತಗ್ಗಿಸಿದೆ ನಾನು. ಹತ್ತಿರ ಬಂದವರು, “ಹಂಗೆಲ್ಲಾ ಕ್ಲಾಸ್ ನಡದಾಗ ನಡಕ್ ಬಂದು ಮಾತಾಡ್ಬಾರ್ದು. ತಪ್ಪದು. ಈಗ ಹೇಳ್ರಿ ಏನ ಹೇಳಾಕತ್ತಿದ್ರೆಲ್ಲ?”
ವಿಷಯ ತಿಳಿಸಿದೆ. “ಅಯ್ಯೊ ಸಾರಿ, ವೆರಿ ಸಾರಿ. ನನಗ ಗೊತ್ತಾಗದ ಬೈದುಬಿಟ್ಟೆ ನಿಮ್ಮನ್ನ” ಎನ್ನುತ್ತಾ ಮರಳಿ ಕ್ಲಾಸೊಳಗೆ ಹೋಗಿ, ಘಟನೆಗೆ ಸಾಕ್ಷಿಯಾಗಿದ್ದ ಹುಡುಗರನ್ನು ಕರೆದು ನನ್ನ ಜೊತೆ ಪ್ರಾಂಶುಪಾಲರ ಬಳಿಗೆ ಹೋಗಲು ತಿಳಿಸಿದರು. ಅವರಲ್ಲಿ ಒಂದಿಬ್ಬರಿಗೆ ಬರಲು ಮನಸ್ಸಿಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು ಅವರ ಚಹರೆಯಲ್ಲಿ. ಹೋಗ್ತಾ ದಾರಿಯಲ್ಲಿ ಈ ಹುಡುಗರಿಂದ ಗೊತ್ತಾಗಿದ್ದೇನೆಂದರೆ, ಆ ಹುಡುಗನಿಗೆ ಹೊಡೆದಿದ್ದು ನನ್ನ ಗೆಳತಿ ವಾಣಿ ಅಂತೆ, ಬಸ್ಸೇರುವಾಗ ಅವನ ಬೆನ್ನಿಗೆ ನಮ್ಮ ಗುಂಪಲ್ಲಿದ್ದ ಅವಳು ಹೊಡೆದಿದ್ದಕ್ಕೆ ಅದು ನಾನೆಂದು ಭಾವಿಸಿ ನನಗೆ ಹೊಡೆದಿದ್ದಂತೆ. ಎಲ್ಲಾ ಅಯೋಮಯ ನನಗೆ. ಯಾವಾಗ ಈ ವಾಣಿ ಅವನಿಗೆ ಹೊಡೆದಳು? ಗುಂಪಲ್ಲಿದ್ದಾಗ ಅಂದರೆ ನನಗೆ ಹೇಗೆ ತಿಳಿಯಲಿಲ್ಲ?! ಯಾವಾಗ ಹೊಡೆದಳು ಎಂದು ಯೋಚಿಸಿದೆನೇ ಹೊರತು ಯಾಕೆ ಹೊಡೆದಿರಬಹುದು ಎಂದು ಯೋಚಿಸುವ ಅಗತ್ಯವೇ ಇರಲಿಲ್ಲ. ವಾಣಿ, ತೆಳ್ಳಗೆ ಬೆಳ್ಳಗೆ ಇಷ್ಟುದ್ದ ಕೂದಲಿನ ಪರಮ ಸುಂದರಿ. ಓದಿನಲ್ಲಿ ಬುದ್ದಿವಂತೆ.

ಆರ್ಟ್ಸ್, ಸೈನ್ಸ್, ಕಾಮರ್ಸ್ ಎಲ್ಲಾ ವಿಭಾಗದ ಬಹುತೇಕ ಹುಡುಗರಿಗೆ ಅವಳ ಮೇಲೆ ಕ್ರಶ್! ಅವಳ ಗಮನ ಸೆಳೆಯಲು, ಅವಳನ್ನು ಮಾತಾಡಿಸಲು, ಐ ಲವ್ ಯೂ ಎಂದು ಹೇಳಲು ಏನೆಲ್ಲ ಸರ್ಕಸ್ ಮಾಡುತ್ತಿದ್ದರು. ಪುಂಡುಪೋಕರಿಗಳು ಇನ್ನೂ ಒಂದು ಹೆಜ್ಜೆ ಮುಂದುಹೋಗಿ, ಹೋಗ್ತಾ ಬರ್ತಾ ಕಮೆಂಟ್ ಪಾಸ್ ಮಾಡೋದೋ, ಲವ್ ಲೆಟರ್ ಕೊಡೋದೋ ಮಾಡಿ ಅವಳಿಂದ ಉಗಿಸಿಕೊಳ್ಳುತ್ತಿದ್ದರು. ಅಂಥವರಲ್ಲಿ ಈ ಮಹಾನುಭಾವನೂ ಒಬ್ಬನಿದ್ದು ಏನೋ ಅತಿರೇಕವಾಗಿ ಒದೆ ತಿಂದಿರ್ತಾನೆ ಅನ್ನೋದು ಹೇಳಿಯೇ ತಿಳಿಯಬೇಕಿರಲಿಲ್ಲ.
ಪ್ರಾಂಶುಪಾಲಾರ ಬಳಿ ನನಗೆ ಹೇಳಿದ್ದನ್ನೇ ಹೇಳಿ, ನನ್ನದೇನೂ ತಪ್ಪಿರಲಿಲ್ಲವೆಂದೂ ತಿಳಿಸುತ್ತಾ ಆ ಹುಡುಗನ ಹೆಸರು ಅವನು ಯಾವ ಕ್ಲಾಸಲ್ಲಿ ಓದುತ್ತಿದ್ದಾನೆ ಇತ್ಯಾದಿ ಹೇಳಿದರು ನನ್ನ ಕ್ಲಾಸ್ಮೇಟ್ಸ್. ಎಲ್ಲವನ್ನೂ ಕೇಳಿದ ಬನ್ನೂರ್ ಸರ್, ಆ ಹುಡುಗನನ್ನು ಕರೆದು ವಾರ್ನ್ ಮಾಡುವುದಾಗಿ ಹೇಳಿ,” ಹೋಗ್ರಿನ್ನ ಮುಂದಿನ ಕ್ಲಾಸ್ ಅಗಲೇ ಚಾಲೂ ಆಗಿರ್ತೈತಿ” ಎನ್ನುತ್ತಾ ನಮ್ಮನ್ನು ಕಳಿಸಿದರು.

ನಾನು ಆಚೆ ಬರುವ ಮೊದಲು, “ಏನವಾ ಇದು? ಅವತ್ತ ಆ ಹುಡಗ ಕಾಲರ್ ಹಿಡ್ಕೊಂಡು ಎಳಕೊಂಡು ಬಂದಿದ್ದಿ, ಈಗ ನೋಡಿದ್ರ ಹಿಂಗ.” ಎನ್ನಬೇಕೆ?! “ಸರ್, ಇದ್ರಾಗ ನಂದೇನ್…” ನನ್ನ ಮಾತು ಮುಗಿಯುವ ಮೊದಲೇ, ‘’ಆತಾತ್ ಹೋಗ್ರಿನ್ನ ಕ್ಲಾಸಿಗೆ” ಎಂದರು.

ಅರೇ! ಅವತ್ತು ಆ ಹುಡುಗನನ್ನು ಹಾಗೆ ಎಳೆದುಕೊಂಡು ಬರಲು ಕಾರಣ, ನಾನು ಎರಡು ಬಾರಿ ಎದುರಿಗೇ ಹೋಗಿ ನಿಂತು ವಾರ್ನ್ ಮಾಡಿದ್ದರೂ ಸಹ, ಕಾಲೇಜಿನ ಕ್ಯಾಂಪಸ್ಸಲ್ಲಿ, ಬಸ್ ಸ್ಟಾಪಲ್ಲಿ ನನ್ನನ್ನು ಕಂಡ ಕೂಡಲೇ ನನ್ನ ಹೆಸರು ಕೂಗುವುದನ್ನು, ಹಾಗವನು ಕೂಗಿದಾಗ ಜೊತೆಗಿದ್ದವರು ನಗುವುದನ್ನು ನಿಲ್ಲಿಸಿರಲಿಲ್ಲ. ಎಷ್ಟಂತ ಸಹಿಸುವುದು? ಒಮ್ಮೆ ಹಾಗೇ ಕಟ್ಟೆಯ ಮೇಲೆ ಕುಳಿತು ನನ್ನ ಹೆಸರನ್ನು ಕೂಗುತ್ತಿದ್ದವನ ಬಳಿ ನೇರ ಹೋಗಿ ಪ್ರಿನ್ಸಿಪಾಲ್ ಹತ್ತಿರ ಎಳಿದುಕೊಂಡು ಹೋಗಿದ್ದೆ. “ನನಗೇನ್ ಅಂಜಸ್ತಿ, ನಡಿ ಬರ್ತೀನಿ” ಎಂದು ಹಲ್ಕಿರಿಯುತ್ತಲೇ ಬಂದಿದ್ದ ಅವನು.

ಹಗೆ ಎಳೆದುಕೊಂಡು ಹೋಗುತ್ತಿರುವುದರಿಂದ ಅವನಿಗೆ ಅವಮಾನವಾಗುತ್ತಿದೆ, ಬಿಟ್ಟುಬಿಡಲಾ ಎಂದು ನನಗನಿಸುತ್ತಿತ್ತಾದರೂ, ಅವನ ನಗು ಕಂಡು ನನ್ನ ಅನಿಸಿಕೆಯನ್ನ ನಾನೇ ಅನುಮಾನಿಸುವಂತಾಗಿತ್ತು. ಬನ್ನೂರ್ ಸರ್ ಆ ಹುಡುಗನಿಗೆ ಸರಿಯಾಗಿ ಬುದ್ದಿ ಹೇಳಿ ಕಳಿಸಿದ್ದರು. ಅದಾದ ಮೇಲೆ ಹಾಗೆ ಕೂಗುವುದನ್ನ ನಿಲ್ಲಿಸಿದ್ದ. ಬಹುಶಃ ಈ ಘಟನೆಗಳು ಬಹಳಷ್ಟು ಜನ ವಿದ್ಯಾರ್ಥಿಗಳಿಗೆ ಗೊತ್ತಾಗಿತ್ತೋ ಏನೋ, ಮುಂದೊಮ್ಮೆ “ಏ, ಪಪ್ಪಿ ಅದಾಳ್ರೋಲೇ ಆ ಗುಂಪಿನ್ಯಾಗ ಸುಮ್ನಿರ್ರಿ” ಎಂದು ಯಾರೋ ಒಬ್ಬ ಅಂದಿದ್ದು ನನ್ನ ಕಿವಿಗೆ ಬಿದ್ದು ಒಂಥರಾ ನೆಮ್ಮದಿ ಅನಿಸಿತ್ತು ಮನಸ್ಸಿಗೆ.

ಈಗಿನ ಪುಂಡುಪೋಕರಿಗಳ ಮನಸ್ಥಿತಿಯನ್ನು ಆಗಿನವರಿಗೆ ಹೋಲಿಸಿದರೆ, ಆಗಿನವರು ಇಷ್ಟು ವಿಪರೀತದವರಾಗಿರಲಿಲ್ಲ ಎಂಬುದಂತೂ ಸತ್ಯ. ತನ್ನ ಕೋರಿಕೆಯನ್ನು ಹುಡುಗಿ ಒಪ್ಪಲಿಲ್ಲವೆಂಬ ರೋಷದಲ್ಲಿ ಅತ್ಯಾಚಾರ, ಅಸಿಡ್, ಕೊಲೆ ಮಾಡುವಂಥ ಯಾವ ಹೀನ ಅತಿರೇಕಗಳೂ ಇಲ್ಲದ ವಾತಾವರಣವಿತ್ತು ಆಗ. ಆಸಿಡ್ ಲ್ಯಾಬರೊಟರಿಯಲ್ಲಿ ಪ್ರಯೋಗಕ್ಕೆ ಮಾತ್ರ ಸೀಮಿತವಾಗಿತ್ತು. ಕೊಲೆಗಳು ಯಾವುದೋ ಕಾಲೇಜಿನಾಚೆಯ ವ್ಯಾಜ್ಯಗಳಿಂದಾಗಿ ದೊಡ್ಡವರಲ್ಲಿ ಆಗುತ್ತಿದ್ದವು, ಪ್ರೀತಿಸಲಿಲ್ಲವೆಂದಲ್ಲ.

|ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

6 June, 2022

2 Comments

  1. ಸುನಂದಾ ಕಡಮೆ

    ಬಾಲ್ಯದ ಅನುಭವಗಳು ಸದಾ ನಮ್ಮನ್ನು ಜೀವಂತವಾಗಿರಿಸುವಂಥದ್ದು..

  2. akshata

    ಕಾಲೇಜಿನ ಅನುಭವಗಳೇ ಬೇರೆ ಈಗ ಅವುಗಳನ್ನ ನೆನೆಸಿಕೊಂಡರೆ ನಗು ಬರತ್ತೆ
    Interesting ಆಗಿ ಬರ್ತಿದೆ ಬರವಣಿಗೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading