
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.
ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.
ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.
‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.
‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.
ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-
54
ಬದುಕು ನಾವೆಣಿಸಿದಂತೆ ನಡೆಯುವುದು ಬೇರೆ, ನಾವೆಣಿಸಿದಂತೆಯೇ ನಡೆಯುವುದು ಬೇರೆ. ಇದಕ್ಕಿಂತಲೂ ಬೇರೆ ಎಂದರೆ ನಾವು ಎಣಿಸುವುದೊಂದು ಅದು ಆಗುವುದು ಇನ್ನೊಂದು ಅನ್ನೋದು.
ಅಂಥದ್ದೇ ಒಂದು ನಾನು ಎಣಿಸದೇ ಇದ್ದದ್ದು ಘಟಿಸಿ, ಅದರಿಂದ ನಾನು ಛಿದ್ರ ಛಿದ್ರವಾಗಿ ಹೋಗಬೇಕಾಗಿದ್ದವಳು ಚಿಗಿತುಕೊಂಡಿದ್ದು ನನ್ನ ಬದುಕಿನ ಸೋಜಿಗವೇ ಸರಿ. ಹೀಗೆ ನಾನು ಬರೆಯುತ್ತಿರುವಾಗಲೇ ಮನಸ್ಸಿಗೆ ಬರುತ್ತಿರುವ ವಿಚಾರವೆಂದರೆ, ಯಾಕೆ ಹೊಡೆತಗಳಿಗೆ ಛಿದ್ರವಾಗಬೇಕಿತ್ತು ಎಂದು ಯೋಚಿಸುತ್ತಿದ್ದೇನೆ? ಅದು ಇತರರಿಂದ ಅನುಕಂಪ ಬಯಸುವ ಇನ್ನೊಂದು ವಿಧವಾ? ಅಥವಾ ಹೆಣ್ಣಾದ ಮಾತ್ರಕ್ಕೆ ಛಿದ್ರವಾಗಬೇಕಿತ್ತು, ಗಂಡಾದರೆ ಗಟ್ಟಿಯಾಗಿ ನಿಂತು ಎದುರಿಸುತ್ತಿದ್ದ ಎನ್ನುವ ಸಮಾಜದ ಸಿದ್ಧ ಸೂತ್ರದ ನೇಣು ನಮ್ಮಂಥ ಸಾಮಾನ್ಯರ ಕೊರಳಿಗೆ ಲಾಗಾಮಾಗಿ ಸದಾ ನಡೆಸುತ್ತಿರುವುದರ ಪರಿಣಾಮವೇ? ಛಿದ್ರವಾಗಲಿಲ್ಲ ಅನ್ನುವ ಸಮಾಧಾನ ಹೀಗೆ ಹೇಳಿಸಿತೆ ನನ್ನಿಂದ? ಅದೇನೇ ಇರಲಿ, ಕೊನೆಗೂ ಮದುವೆಯಾದ ಹತ್ತು ವರುಷಗಳ ನಂತರ ನಾನು ನನ್ನ ಆಸೆಗಳನ್ನ ಇನ್ನ್ಯಾರೋ ಪೂರೈಸಬೇಕೆನ್ನುವ ಅವಲಂಬಿಕೆಗೆ ಆತುಕೊಂಡಿದ್ದರಿಂದ ಅನುಭವಿಸಿದ ನಿರಾಸೆಗಳಿಗೆ ಗುಡ್ ಬೈ ಹೇಳಿ, ನನ್ನ ಆಸೆಗಳನ್ನ ಬಲಿ ಕೊಡದೆ ಅವುಗಳಿಗೆ ಬೆಲೆ ಕೊಡುವುದನ್ನು ಕಲಿತೆ. ನನ್ನೊಳಗಿನ ತುಡಿತಗಳ ಮಟ್ಟಿಗೆ ಇನ್ನೊಬ್ಬರ ಮೇಲಿನ ನನ್ನ ಅವಲಂಬನೆ ಕಡಿಮೆಯಾಯಿತು.
ಹೈಸ್ಕೂಲಿಗೇ ನಿಂತಿದ್ದ ನನ್ನ ಕಥೆ ಕಾದಂಬರಿಗಳ ಓದು ಮತ್ತೆ ಮುಂದುವರೆಯಿತು. ಅದರ ಫಲವಾಗಿ ಬರವಣಿಗೆ ಹುಟ್ಟಿಕೊಂಡಿತು. ಅಭಿನಯಿಸುವ ನನ್ನ ಬಾಲ್ಯದ ಕನಸಿಗೆ ರೆಕ್ಕೆ ಕಟ್ಟಿದೆ. ಹಾರತೊಡಗಿದೆ. ಜವಾಬ್ದಾರಿಗಳನ್ನು ಕಡೆಗಣಿಸದೇ, ನನ್ನಾಸೆಗಳತ್ತ ಗಮನ ಕೊಡುವುದನ್ನ ಕಲಿತುಕೊಂಡೆ. ಹಾರಾಡುವ ದಾರಿಯಲ್ಲಿ ಎಷ್ಟೆಲ್ಲಾ ಬೆಳಕು, ಕತ್ತಲೆ, ಹೂವಿನ ಘಮ, ಕೊಚ್ಚೆಯ ನಾತ, ಎಷ್ಟೆಲ್ಲಾ ಹೊಸ ದಿಕ್ಕುಗಳು, ಎಷ್ಟೆಲ್ಲಾ ಬದುಕಿನ ಆಮಿಶಗಳು, ಎಷ್ಟೆಲ್ಲಾ ಸಾಧ್ಯತೆಗಳು ಏನೆಲ್ಲಾ ತೊಡಕುಗಳು! ಮುಗಿಯಿತೇ ಬದುಕು? ಒಂದೊಮ್ಮೆ ಸಣ್ಣ ಸಣ್ಣದಕ್ಕೂ ಸಾಯಬೇಕೆಂದು ಬಯಸುತ್ತಿದ್ದ ನಾನೀಗ, ಸಾವು ಎಂದು ಬರುತ್ತದೋ ತಿಳಿದಿಲ್ಲ, ಆದರೆ ಮಾಡಬೇಕೆನ್ನುವ ಕೆಲಸಗಳು ಎಷ್ಟೆಲ್ಲಾ ಇವೆಯಲ್ಲ, ಈ ಕ್ಷಣ ಸತ್ತು ಹೋದರೆ ಅಂದುಕೊಂಡವನ್ನೆಲ್ಲಾ ಮಾಡದೇ ಸಾಯುತ್ತೇನಲ್ಲ ಎಂದು ಯೋಚಿಸುವಷ್ಟು ಆಸೆಬುರುಕಿಯಾಗಿದ್ದೇನೆ. ಅಷ್ಟು ಒಲವು ಹುಟ್ಟಿಕೊಂಡಿದೆ ಬದುಕಿನ ಮೇಲೆ. ಜೊತೆಗೆ ನಾನು ಮಾಡಬೇಕೆಂದುಕೊಂಡಿರುವ ಕೆಲಸಗಳನ್ನು ನಾನು ಹುಟ್ಟುವ ಮೊದಲೂ ನೂರಾರು ಮಾಡಿದ್ದಾರೆ ನಾನಿಲ್ಲವಾದ ನಂತರ ಮಾಡುವವರೂ ಸಾವಿರಾರು ಜನ ಇರುತ್ತಾರೆಂಬ ವಾಸ್ತವ ಪ್ರಜ್ಞೆಯೂ ಇದೆ. ಹೀಗಾಗಿ…
ನಾನು ಏನು ಹೇಳಲು ಹೊರಟೆನೆಂದರೆ ನನ್ನ ಬದುಕಿನ ಸಂಸಾರಿಕ ಪುಟಗಳಲ್ಲಿ ಹಲವನ್ನು ನಿಮ್ಮೆಲ್ಲರೆದುರು ತೆರೆದಿಡಲು ಸಾಧ್ಯವಾಗಿದ್ದು, ಜಿ ಎನ್ ಮೋಹನ್ ಸರ್, ಅವಧಿಗೆ ಅಂಕಣ ಬರೆಯಲು ಸೂಚಿಸಿ ನನ್ನ ಬದುಕಿನ ಕುರಿತೇ ಬರೆಯಲು ಹೇಳಿದ್ದರಿಂದ. ಈ ಒಂದು ಅವಕಾಶ ಒದಗಿಸಿದ ಮೋಹನ್ ಸರ್ ಗೆ ತುಂಬು ಗೌರವದೊಂದಿಗೆ ವಂದಿಸುತ್ತೇನೆ ಮತ್ತು ಇಂದಿನವರೆಗೂ ಕೊನೆ ಘಳಿಗೆಯಲ್ಲಿಯೇ ನಾನು ಬರೆದು ಕಳಿಸುವ ಒತ್ತಡವನ್ನು ಸಹಿಸಿದ ಅವಧಿಯ ಹರ್ಷಿತಾಗೆ ನಿಮ್ಮೆಲ್ಲರೆದುರು ಕ್ಷಮೆ ಕೇಳುತ್ತಾ ಪ್ರೀತಿಯಿಂದ ಧನ್ಯವಾದಗಳನ್ನು ಹೇಳುತ್ತಿರುವೆ.

ನನ್ನ ಬದುಕಿನ ಒಂದು ಘಟ್ಟದವರೆಗೆ ಹೇಳಬೇಕಾದುದನ್ನೆಲ್ಲವನ್ನೂ ಹೇಳಿರುವೆ. ಅವುಗಳಲ್ಲಿ ನೋವಿನ, ಕಷ್ಟಗಳ ಪುಟಗಳೇನಿದ್ದರೂ ನನ್ನ ಎಲ್ಲಾ ಸಂಬಂಧಗಳಿಗೆ ನೋವಾಗದಂತೆ ತೆರೆದಿಡುವುದೂ ನನ್ನ ಕರ್ತವ್ಯ ಎಂದೇ ಭಾವಿಸಿದ್ದರಿಂದ ಕೆಲವರಿಗೆ ಆ ಪುಟಗಳು ಶುಗರ್ ಕೋಟೆಡ್ ಅನಿಸಿರಲೂ ಸಾಕು. ಅಡ್ಡಿಯಿಲ್ಲ, ಯಾರನ್ನಾದರೂ ವಿಲನ್ ಮಾಡಿ ನಾನು ದೊಡ್ಡವಳಾಗಬೇಕಾದ ಅಗತ್ಯವಿಲ್ಲ ಎಂದು ನಂಬಿ ನಡೆಯುವವಳು ನಾನು. ಹಾಗೆಂದು ನೊಂದಾಗ ದೂರಿಲ್ಲ ಎಂದೇನಲ್ಲ. ನೊಂದಾಗ ಉಳಿದವರು ಬೇಯುವಷ್ಟೇ ನಾನೂ ಬೇಯುತ್ತೇನೆ, ಬೈಯುತ್ತೇನೆ ಮತ್ತದನ್ನು ಅಲ್ಲಿಗೇ ಮುಗಿಸುತ್ತೇನೆ, ಬೆಳೆಸುವುದಿಲ್ಲ. ಆದಷ್ಟೂ ನಾನುಂಡ ನೋವನ್ನ ಇನ್ನೊಬ್ಬರು ನನ್ನಿಂದಾಗಿ ಅನುಭವಿಸುವಂತಾಗಬಾರದು ಎನ್ನುವ ಎಚ್ಚರಿಕೆಯಲ್ಲಿರುತ್ತೇನೆ. ಹೀಗಾಗಿಯೇ ನನ್ನ ಇಷ್ಟು ದಿನಗಳ ಅಂಕಣ ಬರಹಗಳಲ್ಲಿ ನೀವು ಹೆಚ್ಚು ಏರಿಳಿತಗಳ ಪಾತಳಿಯನ್ನು ಕಂಡಿಲ್ಲ. ಅಂಥದ್ದೆಲ್ಲ ನನ್ನ ಬದುಕಲ್ಲಿ ಇರಲಿಲ್ಲವೆಂದೇನಲ್ಲ ಎನ್ನುವುದು ಬಲ್ಲವರಾದ ನೀವುಗಳು ಅರ್ಥ ಮಾಡಿಕೊಂಡಿರುತ್ತೀರಿ.
ನನ್ನ ಬದುಕಿನ ಇನ್ನೊಂದು ಘಟ್ಟ, ನನಗಾಗಿಯೂ ನಾನು ಬದುಕತೊಡಗಿದಾಗಿನದು, ಅದನ್ನು ಹೀಗೆ ಅಂಕಣದ ಮೂಲಕ ಹೇಳಲು ಈ ಘಟ್ಟವಿನ್ನೂ ಮಾಗಿಲ್ಲವೆಂದೇ ಭಾವಿಸುತ್ತೇನೆ. ಒಂದೊಮ್ಮೆ ಆಯುಷ್ಯ ಹೆಚ್ಚಿಗಿದ್ದು, ಎಲ್ಲಾ ಹಾರಾಟಗಳು ಮುಗಿದ ಮೇಲೆ, ಆರಾಮಾಗಿ ಕುಳಿತು ಇನ್ನೊಮ್ಮೆ ಹೀಗೆ ಬದುಕನ್ನು ಹೊರಳಿ ನೋಡುವ ಅವಕಾಶ ದಕ್ಕಿದರೆ ಆಗ ಖಂಡಿತ ಮತ್ತೆ ತಿಟ್ಠತ್ತಿ ತಿರುಗಿ ನೋಡುವುದೇ ಸೈ ಮತ್ತೆ! ಯಾಕೆಂದರೆ ಈಗಾಗಲೇ ನಿಮಗೂ ಸಾಕಷ್ಟು ಗೊತ್ತಿರುವ ನನ್ನ ಬದುಕಿನ ಈ ಎರಡನೇ ಘಟ್ಟದ ಪಯಣ ಮೊದಲನೇಯದ್ದಕ್ಕಿಂತ ತುಂಬಾ ಭಿನ್ನ! ಆ ಜಗತ್ತಿಗೂ ಈ ಜಗತ್ತಿಗೂ ನಡುವೆ ಎನಿತು ಅಂತರ! ಅದೊಂಥರ, ಇದೊಂಥರ, ಆದರೂ ಎರಡರದ್ದೂ ಒಂದೇ ತರ.
ತುಂಬಾ ಜನ ಪ್ರೀತಿಯಿಂದ ಪ್ರತೀ ವಾರವೂ ನನ್ನ ಅಂಕಣ ಓದಿ ವಾಟ್ಸಾಪಲ್ಲಿ, ಫೇಸಬುಕ್ಕಲ್ಲಿ, ಭೇಟಿಯಾದಾಗ ಪ್ರತಿಕ್ರಿಯಿಸಿದ್ದಿರಿ, ನಿಮ್ಮ ಬದುಕಿನೊಂದಿಗೆ ಹೋಲಿಸಿ ನೋಡಿದ್ದೀರಿ. ಇನ್ನೂ ಕೆಲವರು ಓದಿಯೂ ಮುಗುಮ್ಮಾಗಿರುವುದನ್ನೂ ಬಲ್ಲೆ. ಅದೂ ಒಂಥರದ ಮುದ ಮನಸ್ಸಿಗೆ. ನಿಮ್ಮೆಲ್ಲರಿಗೂ ಧನ್ಯವಾದಗಳು. ಪ್ರೀತಿಯಿರಲಿ. ಬರುತ್ತೇನೆ ನಮಸ್ಕಾರ.
| ಮುಕ್ತಾಯ |






0 Comments