ಜಯಲಕ್ಷ್ಮಿ ಕಂಡಂತೆ ಜರ್ಮನಿ ಮತ್ತು ಪ್ಯಾರಿಸ್

(ಇಲ್ಲಿಯವರೆಗೆ)

ಜಯಲಕ್ಷ್ಮಿ ಶೇಖರ್

ದಾರಿ ಕಾಣದಾಗಿದೆ
ಟಿಜಿವಿ ರೈಲು ಕಾಲ್ಸರ್ರುಹೆ, ಸ್ಟ್ರಾಸ್ ಬಗರ್ ನ್ನು ಹಾದು ಸ್ಟುಟ್ ಗಾಟ್ನರಿದ ಸುಮಾರು 700 ಕಿಮೀಗಳಷ್ಟು ದೂರದ ಪ್ಯಾರಿಸನ್ನು ತಲುಪಿದಾಗ ಬೆಳಿಗ್ಗೆ 10.15!ಬೆಚ್ಚನೆಯ ವ್ಯವಸ್ಥೆಯಿದ್ದ ರೈಲಿನಿಂದ ಹೊರಗಿಳಿದಾಗ…ಓಹ್! ಆ ಛಳಿ!ಮೈ ಮೂಳೆಗಳೆಲ್ಲ ಕೊರೆದು ಬಾಗಿ ಬೆಂಡಾಗುತ್ತವೆ ಅನಿಸಿತು. ಇಡೀ ಮೈಯನ್ನು ಮುದುರಿಸಿಕೊಂಡೆ. ಈ ಪ್ಯಾರಿಸ್ ಚಳಿಗೆ ನಾನು ತಯಾರಾದದ್ದು   ಸಾಕಾಗಿರಲಿಲ್ಲ. ಮಕ್ಕಳು,ಪತಿ ಚಳಿಯಿಂದ ನನ್ನಷ್ಟು ಬಾಧಿತರಾಗಲಿಲ್ಲ ಎಂಬುದು ಸಮಾಧಾನಕರ ಅಂಶ. ಹಲ್ಲುಗಳು ಕಟಕಟಿಸುತ್ತಾ ಚಳಿಯ ಮೇಲೆ ಕೋಪ ಕಾರುವಂತೆ ತೋರುತ್ತಿದ್ದವು. ನಮ್ಮೆಲ್ಲರ ಕೆನ್ನೆ ಮೂಗುಗಳು ಚಳಿಯ ಬಾಧೆಗೆ ಕೆಂಪಾಗಿದ್ದವು. ಬ್ರೆಡ್ ತಿಂದು ನೀರಡಿಕೆಯೆನಿಸುತ್ತಿದ್ದುದು ಪ್ಯಾರಿಸ್ ನ ರಸ್ತೆಗೆ ಕಾಲಿರಿಸಿದ್ದೇ ತಡ, ಇಂಗಿಹೋಯಿತು. ಇಡೀ ವಾತಾವರಣಕ್ಕೆ ಆವರಿಸಿದ್ದ ತೆಳುಮೋಡದ ಸ್ನಿಗ್ಧತೆಯ ಪರದೆ ಮಡಿಕೇರಿಯನ್ನು ನೆನಪಿಗೆ ತರುತ್ತಿದ್ದರೂ ನಮ್ಮೂರ ಚಳಿಯಷ್ಟು ಆಪ್ಯಾಯಮಾನವಗಿರಲಿಲ್ಲ ಈ ಚಳಿ,ಇದು ಕಠೋರ! ಕೈಗಳನ್ನು ಜೋಬಿನೊಳಗೆ ತೂರಿಸಿಕೊಂಡು ಒಬ್ಬರನ್ನೊಬ್ಬರು ಹಾಸ್ಯಮಾಡಿಕೊಂಡು ನಡೆಯತೊಡಗಿದೆವು,ಎಷ್ಟು ನಡೆದರೂ ಮೈ ಬಿಸಿಯಾಗುವ ಸೂಚನೆಯೇ ಇರಲಿಲ್ಲ. ಸ್ಟುಟ್ ಗಾರ್ಟರ್ನ ಶುಭ್ರಾತಿಶುಭ್ರ ರಸ್ತೆಗಳಿಗೆ ಹೋಲಿಸಿದರೆ ಪ್ಯಾರಿಸ್ ಕೊಳಕೋ ಕೊಳಕು.
ರಸ್ತೆಯಲ್ಲಿ ಅಲ್ಲಲ್ಲಿ ನಾಯಿ ಹೊಲಸು, ಕಸಕಡ್ಡಿಗಳನ್ನು ನೋಡಿ ಖುಶಿಯಾಯಿತು.ಮಹಿಳೆಯೊಬ್ಬಳ ನಾಯಿ ರಸ್ತೆಯನ್ನೇ ಶೌಚಾಲಯವಾಗಿ ಮಾಡಿಕೊಂಡಿತ್ತು, ಆಕೆ ಇನ್ನೊಬ್ಬಳೊಂದಿಗೆ ಹರಟೆ ಹೊಡೆಯುತ್ತಿದ್ದಳು, ನಮಗೆ ನೋರ್ಡ್ಡ ಎಟ್ ಶೆಂಪಾನಿ ಎಂಬ ಹೊಟೆಲ್ನಲ್ಲಿ ಕೋಣೆ ಕಾದಿರಿಸಲಾಗಿತ್ತು. ಆದರೆ ಆ ಹೊಟೆಲನ್ನು ಹುಡುಕಲು ಸ್ವಲ್ಪ ಕಷ್ಟಪಟ್ಟೆವು, ಕೆಲವು ದಾರಿಹೋಕರನ್ನು ಕೇಳಿದೆವು, ಅವರು ಅಂದಾಜಿನಿಂದ ಹೇಳಿದ ದಾರಿಯಲ್ಲಿ ಹೋಗಿ ಹುಡುಕಿದೆವು. ಸಿಗಲಿಲ್ಲ. ಇನ್ನೋರ್ವ ಸುಂದರ ಯುವತಿ ಯಾವುದೋ ಭಾವಲಹರಿಯಲ್ಲಿ ತೇಲಿಬರುತ್ತಿರುವಂತೆ ಬರುತ್ತಿದ್ದಳು, ಆಕೆಯನ್ನು ತಡೆದು ನಿಲ್ಲಿಸಿ ಕೇಳಿದೆವು, ಆಕೆ ನಗುಮೊಗದಿಂದಲೇ ನಮಗೆ ಸ್ಪಂದಿಸಿ ತಾನೂ ಹುಡುಕತೊಡಗಿದಳು.
ಆಕೆಯೊಡನೆ ಈ ತುದಿಯಿಂದ ಆ ತುದಿಯವರೆಗೂ ಅಡ್ಡಾಡಿದೆವು. ನಮ್ಮನ್ನು ಒಂದೆಡೆ ನಿಲ್ಲಿಸಿ ರಸ್ತೆದಾಟಿ ಹೋಗಿ ಯಾವುದೋ ಅಂಗಡಿಯಲ್ಲಿ ವಿಚಾರಿಸಿ ಬಂದು ತನಗೆ ತಿಳಿಯಲಿಲ್ಲ, ಸೋತೆನೆಂದು ಹೇಳಿ ಕೈ ಚೆಲ್ಲಿದಳು. ಆಕೆಗೆ ಸಮಾಧಾನ ಹೇಳಿ, ಆಕೆಯ ಗಲ್ಲಕ್ಕೆ ಚುಚ್ಹಿದ ಸೂಜಿಯಂಥ ಆಭರಣವನ್ನೇ ಅಚ್ಚರಿಯಿಂದ ನೋಡುತ್ತಾ ಅವಳಿಗೆ ವಿದಾಯ ಹೇಳಿದೆವು. ಅಂತೂ ಇಂತೂ ರೈಲ್ವೆಸ್ಟೇಶನ್ ಗೆ ಮತ್ತೆ ಬಂದು ಅಲ್ಲಿದ್ದ ಸೆಕ್ಯೂರಿಟಿಗಾರ್ಡನ್ನು ಕೇಳಿ, ಆತ ನಕ್ಷೆಯ ಸಹಾಯದಿಂದ ನಮ್ಮನ್ನು ಸರಿದಾರಿಗೆ ಹಚ್ಚಿದ. ಹೊಟೆಲ್ ನ ಸ್ವಾಗತಕಾರಿಣಿ ಮುಗುಳ್ನಗು ಬೀರಿ ನಮ್ಮನ್ನು ವಾಗತಿಸಿ ನಾವು ಫ್ರೆಂಚ್ ಮಾತನಾಡಬಲ್ಲೆವ ಅಂತ ಕೇಳಿದಳು, ಶೇಖರ್ ತಾನು ಅಲ್ಪಸ್ವಲ್ಪ ಜರ್ಮನ್ ಭಾಷೆಯನ್ನು ಮಾತನಾಡಬಲ್ಲೆ ಎಂದರು, ಆದರೆ ಆಕೆ ಆ ಭಾಷೆಯನ್ನು ಮಾತನಾಡಲು ನಿರಾಕರಿಸಿ ತಾನು ಇಂಗ್ಲಿಶ್ನಲ್ಲಿ ಸುಧಾರಿಸುವುದಾಗಿ ತಿಳಿಸಿದಳೂ.
2 ಘಂಟೆಯ ಮೊದಲು ಕೋಣೆ ಸಿಗಲಾರದು,ನಿಮ್ಮ ಲಗ್ಗೇಜನ್ನು ಅಲ್ಲಿರಿಸಿ ಹೊರಗೆ ತಿರುಗಿ ಬನ್ನಿ ಎಂದು ಸೂಚಿಸಿದಳು, ಆಕೆ ತೋರಿದ ಸ್ಥಳದಲ್ಲಿ ಲಗ್ಗೇಜನ್ನಿರಿಸಿ,ಆಕೆಯಿಂದ ಐಫೆಲ್ ಟವರ್ ಗೆ ಹೋಗುವ ಮಾರ್ಗವನ್ನು, ದೂರವನ್ನು ತಿಳಿದುಕೊಂಡು ಹೊರಬಂದೆವು.
ಒಂದು ಗೋಪುರ
ಫ್ರೆಂಚರಿಗೂ ಜರ್ಮನ್ನರಿಗೂ ಒಳಗೊಳಗೇ ದ್ವೇಷವಿರುವುದರಿಂದ ಇವರು ತಮಗೆ ತಿಳಿದಿದ್ದರೂ ಆ ಭಾಷೆಯನ್ನು ಮಾತನಾಡಲಿಚ್ಚಿಸುವುದಿಲ್ಲ ಎಂದು ಪತಿ ತಿಳಿಸಿದರು. ಮೆಟ್ರೊ ರೈಲು ನಿಲ್ದಾಣಕ್ಕೆ ನಡೆದುಕೊಂಡು ಹೋದೆವು. ಅಲ್ಲಿ ದಪ್ಪ ಗಾಜಿನ ಗೋಡೆಯಾಚೆಗಿನ ಕೌಂಟರ್ ನಲ್ಲಿ ಇರುತ್ತಿದ್ದ ಟಿಕೆಟ್ ಕೊಡುವವರು ಹೊರಗಿನವರೊಂದಿಗೆ ಮೈಕ್ ಮೂಲಕ ಮಾತನಾಡುತ್ತಿದ್ದರು.ಹೋಗಿ ಬರುವ ಟಿಕೆಟನ್ನು ಅಲ್ಲೇ ಕೊಳ್ಳಲಾಯಿತು.ನೀಡಲಾದ 4 ಟಿಕೆಟ್ ಗಳನ್ನು ಅವರವರು ಪಡೆದುಕೊಂಡು ಡಬ್ಬಿಯೊಂದರ ತೂತಿನೊಳಗೆ ತೂರಿಸಿದರೆ ಆ ಡಬ್ಬಿಯು ಮತ್ತೊಂದು ತೂತಿನ ಮೂಲಕ ನಾವು ತೂರಿಸಿದ ಟಿಕೆಟನ್ನುಹೊರದಬ್ಬುತ್ತಿತ್ತು. ಆಗ ರೈಲ್ವೆ ಪ್ಲಾಟ್ ಫಾರ್ಮ್ ನ ಗೇಟು ನಮಗಾಗಿ ತೆರೆದುಕೊಳ್ಳುತ್ತಿತ್ತು! ಇವೆಲ್ಲ ನೋಡಿದಾಗ ನಾವು ಯಾವುದೋ ಕಥೆಯ ಪಾತ್ರಗಳಾದಂತೆ ಅನಿಸುತ್ತಿತ್ತು. ಪ್ಯಾರಿಸ್ ನ ಲೋಕಲ್ ರೈಲುಗಳೂ ಅಷ್ಟೆ, ಸ್ಟುಟ್ಗಾಟರ್ ನ ರೈಲುಗಳಷ್ಟು ಚೊಕ್ಕಟವಿರಲಿಲ್ಲ.  ಅಲ್ಲಿನ ನೀರವತೆಯೂ ಇಲ್ಲಿರಲಿಲ್ಲ. ಸುಮಾರು 20 ನಿಮಿಷ ಪ್ರಯಾಣ ಮಾಡಿದ ಬಳಿಕ ನಾವಿಳಿಯಬೇಕಾದ ನಿಲ್ದಾಣ ಬಂದಿತು. ಸುರಂಗಮಾರ್ಗದಲ್ಲಿ ಚಲಿಸುವ ರೈಲಿನಿಂದ ಹೊರಗಿಳಿದ ಕೂಡಲೇ ಕಾಡಿಸಿ ಪೀಡಿಸುವ ಚಳಿ! ನಡೆಯುವ ಕೊರಡಿನಂತಾಗಿದ್ದ ದೇಹ, ಬಾಯಾರಿಕೆಯಾಗದು ಎಂಬುದೊಂದು ದೊಡ್ಡ ಸಮಾಧಾನ.
ಸುರಂಗದ ಬಾಯಿಯಿಂದ ಹೊರಬಂದು ಸ್ವಲ್ಪದೂರ ನಡೆದರೆ ಐಫೆಲ್ ಟವರಿರುವ ತಾಣ. ದಾರಿಯಲ್ಲಿ ಅಲ್ಲಲ್ಲಿ ಭಿಕ್ಷುಕರಿದ್ದರು, ಅವರು ಸೂಟುಬೂಟುಧಾರಿಗಳಾಗಿದ್ದರು. ಸ್ಮರಣಿಕೆಗಳನ್ನು ಮಾರುತ್ತಿದ್ದ ದೈತ್ಯಾಕೃತಿಯ ಕರಿಯರಿದ್ದರು, ಪತಿ ನನಗೆ ಬಹಳ ಜಾಗರೂಕತೆಯಿಂದಿರಲು ಹೇಳಿದ್ದರು.ಆ ಎತ್ತರೆತ್ತರದ ಮನುಷ್ಯರು ಸ್ಮರಣಿಕೆಗಳನ್ನು ಕೊಳ್ಳುವಂತೆ ಫ್ರೆಂಚೋ, ಸ್ವಹೇಲಿಯೋ ಆಫ್ರಿಕನ್ನೋ- ಯಾವುದೋ ಭಾಷೆಯಲ್ಲಿ ಒತ್ತಾಯಿಸುತ್ತಿದ್ದರು, ನಾನು ಅಚ್ಚಕನ್ನಡದಲ್ಲಿ ? ನನಗೆ ಬೇಡ, ಸುಮ್ಮನೆ ಕಾಡಬೇಡಿ, ಹಾದಿಗೆದುರಾಗಬೇಡಿ, ಅತ್ತ ಸರಿಯಿರಿ? ಎಂದು ಹೇಳುತ್ತಿದ್ದರೆ ಮಗಳಿಗೆ ನಗುವೋ ನಗು.
ದೂರದಿಂದ ಕಂಡ ಐಫೆಲ್ ಟವರ್(312 ಮೀ.ಎತ್ತರ)ಪ್ಯಾರಿಸ್ ನಗರದ ಹಿನ್ನೆಲೆಯಲ್ಲಿ, ಎತ್ತರೆತ್ತರ ಚಿಮ್ಮುತ್ತಿದ್ದ ಕಾರಂಜಿಗಳ ಹಿಂದಿನಿಂದ ಭವ್ಯವಾಗಿ ಕಾಣುತ್ತಿತ್ತು. 1889 ರಲ್ಲಿ ಫ್ರೆಂಚ್ ಕ್ರಾಂತಿಯ ನೆನಪಿಗೆ ಏರ್ಪಡಿಸಿದ್ದ ವಸ್ತುಪ್ರದರ್ಶನದ ಪ್ರವೇಶ ದ್ವಾರವಾಗಿ ಗುಶ್ಟೆವ್ ಐಫೆಲ್ ಎಂಬಾತ ಇದನ್ನು ನಿರ್ಮಿಸಿದನಂತೆ. ಈ ಗೋಪುರವು ಪ್ಯಾರಿಸ್ ನಗರದ ಸೌಂದರ್ಯ ಪ್ರಜ್ಞೆಗೆ,ಫ್ರೆಂಚ್ ಜನರ ಕಲಾವಂತಿಕೆಗೆ, ಅಭಿರುಚಿಗೆ ವಿರುಧ್ಧವಾಗಿ ಇದೆ ಎಂಬ ವಿರೋಧವೂ ವ್ಯಕ್ತವಾಗಿತ್ತಂತೆ. ಐಫೆಲ್ ಟವರ್ ನ ಮೂರು ಅಂತಸ್ತುಗಳಲ್ಲಿ ಸ್ಮರಣಿಕೆಗಳನ್ನು ಮಾರುವ ಅಂಗಡಿಗಳು,ಗೋಪುರದ ಚರಿತ್ರೆಯನ್ನು ಹೇಳುವ ಸಾಕ್ಷ್ಯಚಿತ್ರಗಳು, ಇಂಟರ್ ನೆಟ್ ಸ್ಟೇಶನ್ ಗಳು, ಟಿವಿ, ರೆಡಿಯೋ ಸ್ಟೇಶನ್ ಗಳು ಇವೆಯೆಂದು ತಿಳಿಯಿತು. ಆದರೆ ರಿಪೇರಿಯ ಕಾರಣದಿಂದಾಗಿ ಮೇಲಿನಂತಸ್ತಿಗೆ ಪ್ರವೇಶವನ್ನು ನಿಶೇಧಿಸಿದ್ದರು ಮತ್ತು ಟಿಕೆಟ್ ಗಾಗಿ ನಿಂತಿದ್ದ ಗೋಪುರದಂಥಾ ಜನಸಂದಣೀಯನ್ನು ನೋಡಿ ನಮಗೆ ಮೇಲೇರಬೇಕೆನಿಸಲಿಲ್ಲ.
ಬಳಿಯಲ್ಲಿ ಹರಿಯುತ್ತಿದ್ದ ಸೈನ್ ನದಿಯನ್ನು ವೀಕ್ಷಿಸಿ ಅಲ್ಲಿ ಸುತ್ತಮುತ್ತಲ ಪ್ರದೇಶಗಳನ್ನು,ಜನರನ್ನು ಅವಲೋಕಿಸುತ್ತಾ ತಿರುಗಾಡಿ ಹೊಟೆಲ್ ಗೆ ಹೊರಟೆವು. ದಾರಿಯಲ್ಲೆಲ್ಲೋ ತರಕಾರಿ ಬರ್ಗರ್ ತಿಂದು ಕೋಣೆಗೆ ಬಂದೆವು.ಹರಟೆ ಹೊಡೆಯುತ್ತಾ ಮಕ್ಕಳ ಆಟಗಳನ್ನು ನೋಡುತ್ತಾ ಅದರಲ್ಲಿ ಪಾಲ್ಗೊಳ್ಳುತ್ತಿದ್ದೆವು,ಸಂಜೆ ಹೊರಗೆ ಸುಮ್ಮನೆ ತಿರುಗಾಡಿ ಬರೋಣ ಎಂದು ನಿರ್ಧರಿಸಿದೆವು,ಆದರೆ ಆಟವಾಡುತ್ತಾ ಆಡುತ್ತಾ ಮಕ್ಕಳು ನಿದ್ರಾವಶರಾದರು.ನಾನೇನೋ ಓದುತ್ತಾ ಕುಳಿತೆ.ಶೇಖರ್ ಹೊರಗೆ ಸುತ್ತಾಡಿ ಬಂದರು,ಹೊರಗೆಲ್ಲೂ ಹೋಗಲು ಸಾಧ್ಯವಾಗಲಿಲ್ಲ,ಚಳಿಯೂ ಹೆದರಿಸುತ್ತಿತ್ತು.
ಹಾ! ಪ್ಯಾರಿಸ್ ದೇಖೋ!

ಬೆಳಿಗ್ಗೆ 8 ಘಂಟೆಗೆ ಮೆಟ್ರೋ ರೈಲು ಹಿಡಿದು ಚ್ಯಾಂಪ್ಸ್ ಎಲಿಸಿಸ್ ಎಂಬ ಸ್ಥಳವನ್ನು ನೋಡಹೊರಟೆವು.ಈ ರಸ್ತೆ ಪ್ಯಾರಿಸ್ ನ ಪ್ರಸಿಧ್ಧ ರಸ್ತೆ,ಬೆಂಗಳೂರಿನ ಹಳೆಯ ಮಹಾತ್ಮಾ ಗಾಂಧಿ ರಸ್ತೆಯನ್ನು ನೆನಪಿಗೆ ತರುವಂಥದ್ದು.ಹದಿನಾಲ್ಕನೇ ಲೂಯಿ ಈ ರಸ್ತೆಯನ್ನು ನಿರ್ಮಿಸಿದನಂತೆ. ಬಹಳ ಅಗಲವಾದ ರಸ್ತೆ, ರಾತ್ರಿಯಲ್ಲಿ ಬಹಳ ಸುಂದರವಾಗಿ ತೋರಬಹುದೆನಿಸಿತು. ರಸ್ತೆಯುದ್ದಕ್ಕೂ ವಿಶಾಲವಾದ ಮರಗಳು,ಪಾದಚಾರಿಗಳಿಗೆ,ಸೈಕಲ್ ಸವಾರರಿಗೆ ನಡಿಗೆ, ಸವಾರಿ ಸುಗಮವೆನಿಸಲು ನಿರ್ಮಿಸಿದ ಕಲ್ಲಿನ ಹಾದಿ! (ಗ್ರಾನೈಟ್) ಅಕ್ಕಪಕ್ಕದಲ್ಲಿದ್ದ ಪುರಾತನ ವಾಸ್ತುಶೈಲಿಯ ಕಟ್ಟಡಗಳು, ಒಟ್ಟಿನಲ್ಲಿ ಖುಷಿಯೆನಿಸುವ ವಾತಾವರಣ.
ಅಲ್ಲಿ ನಮ್ಮ ಗೇಟ್ ವೇ ಆಫ್ ಇಂಡಿಯಾವನ್ನು ಜ್ಞಾಪಿಸುವಂಥ ಮಹಾದ್ವಾರವಿತ್ತು. ಹೊಸವರ್ಷದ ಆಮೋದ ಪ್ರಮೋದ, ಜುಲೈ 14 ರ ಮಿಲಿಟರಿ ಪಥಸಂಚಲನ, ಜುಲೈ ಕೊನೆಗೆ ಆಗಮಿಸುವ ಟೂರ್ ಡಿ ಫ್ರಾನ್ಸ್ ಸೈಕಲ್ ರೇಸಿಗೆ ಈ ಮಹಾದ್ವಾರವು ಸಾಕ್ಷಿಯಾಗುತ್ತದಂತೆ. ಇಲ್ಲಿ ಹಾಸಿದ್ದ ಕಲ್ಲುಬೆಂಚಿನ ಮೇಲೆ ಕೂರೋಣವೆನಿಸಿದರೂ ಆ ತಣ್ಣಗಿನ ಸ್ಪರ್ಶಕ್ಕೆ ಹೆದರಿ, ಕೂರಲೂ ಇಷ್ಟು ಯೋಚಿಸಬೇಕೆ ಎಂದು ನಗುವೂ ಬಂದಿತು,ಅಂತೂ ಜಾಗ್ರತೆಯಿಂದ ಕುಳಿತು ಸುಮ್ಮನೇ ಸುತ್ತಲೂ ನಿರುಕಿಸುತ್ತಾ ಸಮಯ ಕಳೆದು ಮತ್ತೆ ಬಂದ ದಾರಿಯಲ್ಲೇ ಹಿಂದಿರುಗಿದೆವು.
ಕೋಣೆಯನ್ನು ಖಾಲಿ ಮಾಡಿ ನಮ್ಮ ವಸ್ತುಗಳನ್ನು ಹೊರಗಿಟ್ಟು ಪ್ಯಾರಿಸ್ ನ ರಸ್ತೆಗಳಲ್ಲಿ ಉದ್ದಾನುದ್ದಕ್ಕೆ ನಡೆಯತೊಡಗಿದೆವು. ಅಂಗಡಿಗಳನ್ನು ಗಮನಿಸಿದರೆ ಶ್ವೇತವರ್ಣದ ನಾನಾರೀತಿಯ ಗೌನುಗಳು, ಅವುಗಳ ಮೇಲೆ ಚಿತ್ರವಿಚಿತ್ರವಾದ ಕುಸುರಿ, ಹರಳಿನ ಕೆಲಸಗಳು, ಸಿಂಡರೆಲಾ ಕಥೆಯಲ್ಲಿ ಸಿಂಡರೆಲಾ ತೊಟ್ಟಂತಹ ಕಿರೀಟಗಳು,ಮುದ್ದಾದ ಪಾದರಕ್ಷೆಗಳು-ಇವುಗಳನ್ನೆಲ್ಲ ಪ್ರದರ್ಶಿಸುತ್ತಿದ್ದರು. ಎಲ್ಲ ಅಂಗಡಿಗಳೂ ಸುಮಾರು ಹೀಗೇ ಇದ್ದವು.ಆಗ ತಿಳಿಯಿತು,ಇದು ನವವಧುವೆಗೆ ಬೇಕಾಗುವ ಉಡುಗೆ ತೊಡುಗೆಗಳನ್ನು ಮಾರುವ ಅಂಗಡಿಬೀದಿ ಎಂದು.ನಮ್ಮೂರ ಚಿಕ್ಕಪೇಟೆಯ ರೇಶ್ಮೆ ಸೀರೆಗಳ ಅಂಗಡಿಗಳು ನೆನಪಾದವು. ದಾರಿ ಎಳೆದಲ್ಲಿಗೆ ನಡೆಯುತ್ತಿದ್ದೆವು. ಬಸ್ ಹತ್ತಿ ಸೈಟ್ ಸೀಯಿಂಗ್ ಎಂದು ಹೋಗುವುದಕ್ಕಿಂತ ಇದೇ ಖುಷಿ ಎನಿಸಿತು. ದಾರಿಬದಿಯಲ್ಲಿ ರಸ್ತೆ ತೊಳೆದ ನೀರು ಹರಿಯುತ್ತಾ ಇತ್ತು, ಅಪ್ಪನ ಕೈ ಹಿಡಿದು ಮುಂದೆ ನಡೆಯುತ್ತಿದ್ದ ಆದಿತ್ಯ. ಎಷ್ಟು ವಿಧದ ಅಂಗಡಿಗಳು, ಚಪ್ಪಲಿ ಅಂಗಡಿಗಳು,ದಿನಬಳಕೆಯ ಸಾಮಗ್ರಿಗಳ ಅಂಗಡಿಗಳು(ಇವರು ಬ್ರೆಡ್ ಮಾಂಸ ಬೇಯಿಸೋ ಅಡುಗೆಮನೆಗೆ ಇಷ್ಟು ಸಾಮಾನುಗಳು ಬೇಕೆ?)ಬ್ಯೂಟಿ ಸಲೂನುಗಳು,ಬಟ್ಟೆ ಅಂಗಡಿಗಳು…ನಮ್ಮ ಗಾಂಧೀ ಬಜಾರ್ ನೆನಪಾಗುತ್ತಿತ್ತು.
ಆದರೆ ಹೂ,ತರಕಾರಿ ಮಾರುವ ಅಂಗಡಿಗಳು ಕಾಣಿಸಲಿಲ್ಲ. ಬ್ರೆಡ್,ಮಾಂಸ ಮಾರುವ ಅಂಗಡಿಗಳೇ ಕಾಣಿಸುತ್ತಿದ್ದವು, ಅಲ್ಲಿ ಮಾಂಸವನ್ನು ಗೋಪುರಾಕಾರದ ಹಲ್ಲೆಗಳಾಗಿ ನೇತು ಹಾಕಿದ್ದರು!ಭವ್ಯಾಕಾರದ ಪುರಾತನ ಮನೆಗಳು,ಸೆಕ್ಸ್ ಶಾಪ್ ಎಂದು ಬೋರ್ಡು ತಗುಲಿಸಿಕೊಂಡ ವೇಶ್ಯಾವಾಟಿಕೆಗಳು, ರಸ್ತೆ, ಜನರ ಪರಿವೆಯಿಲ್ಲದೆ ಚುಂಬನಾಲಿಂಗನಗಳಲ್ಲಿ ಮತ್ತರಾದ ಜೋಡಿಗಳು-ಸಾಂಸ್ಕೃತಿಕ ಆಘಾತಕ್ಕೆ ಒಳಗಾಗಿದ್ದ ಮನಸ್ಸು ಲೆಕ್ಕ ಹಾಕಿತು-ಇನ್ನೆಷ್ಟು ದಿನ ವಾಪಸ್ ಹೋಗಲಿಕ್ಕೆ?ನಮ್ಮನ್ನು ಕರೆದೊಯ್ದು ದಾರಿ ದೂರದಲ್ಲಿ ಬೆಟ್ಟದ ಮೇಲೆ ಎದ್ದು ನಿಂತ ಚರ್ಚ್  ಒಂದನ್ನು ತೋರಿಸಿತು. ಅದುವೇ ಸಾಕರ್ ಸಿಯರ್ ಬೆಸಿಲಿಕ . ಬಂದ ದಾರಿಯನ್ನೊಮ್ಮೆ ಹಿಂದಿರುಗಿ ನೋಡಿ ನೆನಪಿಟ್ಟುಕೊಂಡು ಬೆಟ್ಟವೇರಲು ಆರಂಭಿಸಿದೆವು. ಸುತ್ತಲೂ ಕಣ್ಮನ ತುಂಬುವಂತಿದ್ದ ಹಸಿರು,ಬೆಟ್ಟವೇರಲು ಮೆಟ್ಟಿಲುಗಳೂ ಇದ್ದವು, ರಸ್ತೆಯೂ ಇತ್ತು. ನಾವು ಮೆಟ್ಟಿಲು ಮೆಟ್ಟಿಲಾಗಿ ಏರಿದೆವು. ಮೆಟ್ಟಿಲಿನ ಬದಿಗಳಲ್ಲಿದ್ದ ಅರಮನೆಯಂಥಾ ಭವ್ಯ ಮನೆಗಳು, ಏನಿರಬಹುದು, ಯಾರಿರಬಹುದು ಈ ಮನೆಗಳೊಳಗೆ! ಹೇಗಿರಬಹುದು ಅವರ ಜೀವನಕ್ರಮ, ಇಷ್ಟು ದೊಡ್ಡ ಮನೆಯಲ್ಲಿದ್ದೂ ಕೇವಲ ಬ್ರೆಡ್ಡು,ಮಾಂಸ ತಿಂದುಕೊಂಡಿರುತ್ತಾರೆಯೇ? ಅವರ ನಂಬಿಕೆಗಳೇನು ಎಂದು ವಿಚಿತ್ರವಾಗಿ ಯೋಚಿಸುತ್ತಾ ಮೆಟ್ಟಿಲುಗಳನ್ನು ಹತ್ತುತ್ತಿದ್ದೆ, ಜೀವಕ್ಕಿನಿತೂ ಆಯಾಸವೆನಿಸಲಿಲ್ಲ. ಏರುವ ಹಾದಿಯೂ ಇಷ್ಟು ಸುಗಮವಾಗಿರಬಲ್ಲುದೆ?
ಬೆಟ್ಟವೇರಿ ಸಾಕ್ರ್ ಸಿಯರ್ ನ ಅಂಗಳಕ್ಕೆ ತಲುಪಿ ಸುತ್ತಲೂ ನೋದಿದರೆ ಪ್ಯಾರಿಸ್ ನಗರದ ವಿಹಂಗಮ ನೋಟ ಕಾಣಿಸಿ ಆ ಬೃಹತ್ತಿನ ಮುಂದೆ ನಮ್ಮ ನೆಲೆ ಎಷ್ಟು ಕಿರಿದೆಂತೆನಿಸುವಂತಾಯಿತು. ಹೈದ್ರಾಬಾದಿನ ಬಿರ್ಲಾ ಮಂದಿರದ ಅಂಗಳದಿಂದ ಕಾಣುವ ಹೈದರಾಬಾದಿನ ನೋಟ ನೆನಪಾಯಿತು, ಅಲ್ಲಿ ಜನರು ದಟ್ಟೈಸಿದ್ದರು, ಪವಿತ್ರ ಬೆಸಿಲಿಕದ ಅಂಗಳದಲ್ಲೂ ಕಟ್ಟಕಡು ಸಿಗರೇಟು ನಾತವಾಗಿ, ಧೂಮವಾಗಿ ಹರಡಿತ್ತು. ಪ್ರಾರ್ಥನಾಮಂದಿರದ ಒಳಹೊರಗೆ ಜನರು ಓಡಾದುತ್ತಿದ್ದರು. ಚಪ್ಪಲಿಗಳನ್ನು ಕಳಚಬೇಕಾದ ಪ್ರಮೇಯವಿರಲಿಲ್ಲ. ನಾವೂ ಒಳಹೋದೆವು. ಚರ್ಚ್ ಕಾಯರ್ ಎನಿಸುತ್ತದೆ, ಹಾಡುತ್ತಿದ್ದರು, ಆಲಿಸಿದೆ, ಮೌನವಾಗಿ ಕಣ್ಣುಮುಚ್ಚಿ ನಿಂತೆ. ಆ ಸ್ಥಳದ ಬಗ್ಗೆ ಇದ್ದ ಸ್ಮರಣಿಕೆಯನ್ನು ತೆಗೆದುಕೊಂಡು ಹೊರಬಂದೆವು. ಈ ಬೆಸಿಲಿಕವು ಪ್ಯಾರಿಸಿನ ಅತಿ ಎತ್ತರದ ಬೆಟ್ಟ ಮೌಂಟ್ ಮಾರ್ಟರ್ನ ಮೇಲೆ ನಿಂತಿದೆ.ಡೆನಿಸ್ ಎಂಬ ಸಂತನ ಸ್ಮರಣಾರ್ಥವಾಗಿ ಕಟ್ಟಲ್ಪಟ್ಟಿದೆ ಮತ್ತು 1873ರ ನಂತರ ಪ್ರಸಿಧ್ಧಿಗೆ ಬಂದ ಸೇಕ್ರೆಡ್ ಹಾರ್ಟ್ಟ ಆಫ್ ಜೀಸಸ್ ಎಂಬ ಪಂಥಕ್ಕೆ ಇದನ್ನು ಸಮರ್ಪಿಸಲಾಗಿದೆ ಎಂದು ತಿಳಿಯಿತು.
ಕೆಲವು ಮಕ್ಕಳಿಗೆ ಅಲ್ಲಿ ನೆರೆದಿದ್ದ ಪಾರಿವಾಳಗಳ ಹಿಂಡಿನ ಒಕ್ಕಲೆಬ್ಬಿಸುವುದು ಒಂದು ಆಟವಾಗಿತ್ತು.ಅವೋ, ಬಲುಮೊಂಡು,ಈ ಮಕ್ಕಳ ಬೆದರಿಕೆಗೆ ಜಗ್ಗುತ್ತಿರಲಿಲ್ಲ. ನಮ್ಮನೆಯಲ್ಲಿ ಹಿತ್ತಲ ಬಾಗಿಲು ತೆರೆದರೆ ಪಟಪಟನೆ ರೆಕ್ಕೆ ಕೊಡವಿ ಹಾರುತ್ತಾ ನಮ್ಮನ್ನು ಬೆಚ್ಚಿಬೀಳಿಸುತ್ತಿದ್ದ ಪಾರಿವಾಳಗಳೂ ನೆನಪಾದವು. ಬೆಟ್ಟವಿಳಿಯುತ್ತಾ ನಡೆಯುತ್ತಾ ಬಂದ ಹಾದಿಯಿಂದ ಹೊಸ ಹೊಸ ಹಾದಿಗಳ ಜಾಡು ಹಿಡಿತು ಜನರನ್ನು ನೋಡುತ್ತಾ ಸಾಗಿದೆವು. ಹಿಂದೆಂದೋ ಓದಿದ್ದ ಅನುಪಮಾ ನಿರಂಜನರ ಅಂಗೈಯಲ್ಲಿ ಯೂರೊ ಅಮೆರಿಕಾ? ನೆನಪಾಯಿತು. ಪ್ಯಾರಿಸ್ ಕಲಾವಿದರು,ಸಂಗೀತಕಾರರು,ಚಿಂತಕರ ಸ್ವರ್ಗವೆಂದು ಗಣಿಸಲ್ಪಟ್ಟಿದೆ, ಇದು ಫ್ಯಾಶನ್ ಗೆ ಜಗತ್ಪ್ರಸಿಧ್ಧವಾದ ಸ್ಥಳ,ಇಲ್ಲಿನ ಜನರು ಹೊಸಹೊಸ ಉಡುಗೆ-ತೊಡುಗೆಗಳಿಗೆ ಮತ್ತು ರುಚಿರುಚಿಯಾದ ತಿನಿಸುಗಳಿಗೆ ಎಷ್ಟು ಬೇಕಾದರೂ ಹಣ ಸುರಿಯಬಲ್ಲರು. ಸುಗಂಧದ್ರವ್ಯಗಳೆಂದರೆ ಈ ಜನರಿಗೆ ಬಹಳ ಪ್ರೀತಿ.ನಾಟಕ,ಬ್ಯಾಲೆಗಳು,ಒಪೆರಾಗಳು,ಸಿನಿಮಾಗಳೆಂದರೆ ಜನ ಮುಗಿಬೀಳ್ತಾರೆ ಎಂದು ಅವರು ಬರೆದಿದ್ದರು.ಜೀವನವೆಂದರೆ ಮೋಜು ಮಾತ್ರವೆ? ನಮ್ಮ ಭಾರತೀಯ ಚಿಂತನೆಗಳು ನಮ್ಮೊಳಗನ್ನು ಶೋಧಿಸುವ ಮಾರ್ಗಕ್ಕೆ ನಮ್ಮನ್ನು ಹಚ್ಚುತ್ತವೆ,ಆ ನಿಟ್ಟಿನಲ್ಲಿ ಇವರ ಚಿಂತನೆಗಳೇನಿರಬಹುದು ಎಂಬ ಕುತೂಹಲ ಮೂಡಿತು.
ಇನ್ನೂ ಕೆಲವು ಮ್ಯುಸಿಯಂಗಳು,ಅವರ ಕಲಾಕೃತಿಗಳು ನೋಡಿದ್ದರೆ ಆ ಬಗ್ಗೆ ಏನಾದರೂ ತಿಳಿಯಬಹುದಿತ್ತೇನೋ,ಆದರೆ ಅದಕ್ಕೆ ಅವಕಾಶ ಇರಲಿಲ್ಲ.ದಾರಿಯಲ್ಲಿ ಭಾರತೀಯ ರೆಸ್ಟೊರೆಂಟ್ ಕಾಣಿಸಿತು,ಹೊರಗೆ ಕೊರೆಯುವ ಚಳಿ,ಒಳಗೆ ಸುಡುವ ಹಸಿವಿನ ಬೆಂಕಿ-ಈ ಹೊಟೆಲ್ ಕಂಡ ಕೂಡಲೇ ನಮ್ಮೆಲ್ಲರ ಮೊಗಗಳೂ ಅರಳಿದುವು.ಒಳಹೋಗಿ ನೋಡಲು ಅದು ತಮಿಳರದ್ದೆಂದು,ಮಾಂಸಾಹಾರ,ಸಸ್ಯಾಹಾರ ಎರಡೂ ಇರುವ ಹೊಟೆಲ್ ಎಂದೂ ತಿಳಿಯಿತು.ಸದ್ಯ,ಬರ್ಗರ್,ಬ್ರೆಡ್ ತಿನ್ನುವುದು ತಪ್ಪಿತಲ್ಲ ಎಂದು ಖುಷಿಯಲ್ಲಿ ರೊಟ್ಟಿ,ಪಲ್ಯಗಳೊಂದಿಗೆ ಊಟ ಮುಗಿಸಿದೆವು.ಸಪ್ಪೆಯೂಟ ಮಾಡುವ ನನಗೇ ಆ ಊಟ ತೀರಾ ಸಪ್ಪೆಯಾದರೂ ಅಮೃತಸಮಾನವೆನಿಸಿತು. 4 ಘಂಟೆಯ ರೈಲಿನಲ್ಲಿ ಸ್ಟುಟ್ ಗಾಟರ್ಗೆ ಹೊರಟು,ಹೊಟೇಲ್ ಸೇರಿದಾಗ ಸಂಜೆ 8 ಘಂಟೆಯಾದರೂ ನಮ್ಮೂರಲ್ಲಿ ಸಂಜೆ 5 ಗಂಟೆಗಿರುವಷ್ಟೇ ಸ್ಫುಟತೆ.
(ಮುಂದುವರೆಯುವುದು…)
 

‍ಲೇಖಕರು G

October 11, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anitha Naresh manchi

    ಪ್ಯಾರೀಸಿನಲ್ಲಿ ಕೊಳಕು ಕಂಡು ನಿಮ್ಗೆ ಖುಷಿಯಾಗಿದ್ದನ್ನು ನೆನೆಸಿ ನಕ್ಕೂ ನಕ್ಕೂ ಸಾಕಾಯ್ತು 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: