ಜಯರಾಮಾಚಾರಿ
ನಾಳೆ ಬೆಳಗ್ಗೆ ಕಮಲಮ್ಮನಿಗೆ ಅರವತ್ತು ತುಂಬುತ್ತದೆ ಅಂತ ಹೇಳೋಕ್ಕೆ ಸುಲಭವಾದರೂ ಅವರನ್ನು ನೋಡಿದವರು ಯಾರು ಅವರಿಗೆ ಅರವತ್ತು ತುಂಬಿದೆ ಅಂತ ಹೇಳಲಾಗಷ್ಟು ಚೆಂದ ಇದ್ದಾರೆ, ಬಿಳುಪಾದ ಹೊಳೆಯುವ ಹಸಿ ಕೆನ್ನೆಗಳು, ಜೋಲು ಬೀಳದ ಚರ್ಮ, ಮುಪ್ಪಿನ ಗೆರೆಗಳು ಕಾಣದು, ಕೂದಲಿಗೆ ಮೆಹಂದಿ ಹಾಕಿ ಕೆಂಚಗಿದೆ, ಅವರು ಮಾತಾಡುವುದರಲ್ಲಿ ನಡೆದಾಡುವುದರಲ್ಲಿ ಅವರಿಗೆ ಅರವತ್ತು ತುಂಬಿದೆ ಎಂದರೆ ಅದು ನಂಬಲಸಾಧ್ಯ.
ಹದಿನೆಂಟು ವರುಷಕ್ಕೆ ಮದುವೆಯಾಗಿ ಇಪ್ಪತೈದು ವರ್ಷಕ್ಕೆಲ್ಲ ಮೂರು ಮಕ್ಕಳ ತಾಯಿಯಾಗಿ ಅರವತ್ತು ವರ್ಷಕ್ಕೆಲ್ಲ ನಾಲ್ಕು ಮೊಮ್ಮಕ್ಕಳ ಅಜ್ಜಿಯಾಗಿದ್ದರು, ಇದ್ದ ಮೂವರು ಮಕ್ಕಳಿಗೂ ಚೆನ್ನಾಗಿ ಓದಿಸಿದ್ದರು, ಓದಿದ ಮಕ್ಕಳು ಒಳ್ಳೆಯ ಕೆಲಸ ಗಿಟ್ಟಿಸಿಕೊಂಡಿದ್ದರು, ಹಿರಿಯವಳು ಡಾಕ್ಟರ್ ಆಗಿ ತನ್ನ ಇಬ್ಬರು ಮಕ್ಕಳೊಂದಿಗೆ ಆಸ್ಟ್ರೇಲಿಯದಲ್ಲಿದ್ದಾಳೆ, ಮಿಕ್ಕ ಇಬ್ಬರು ಗಂಡು ಮಕ್ಕಳು ಎಂಜಿಯರಿಂಗ್ ಮುಗಿಸಿ ತಮ್ಮ ಮಕ್ಕಳ ಜೊತೆ ಕಮಲಮ್ಮನ ಜೊತೆ ಇದ್ದಾರೆ. ಕಮಲಮ್ಮ ಅವರ ಗಂಡ ರಘುನಾಥರಾಯರು ಮತ್ತು ಇಬ್ಬರು ಮಕ್ಕಳು ಇಬ್ಬರು ಸೊಸೆಯಂದಿರು ಮತ್ತು ಇಬ್ಬರು ಮೊಮ್ಮಕ್ಕಳು ಇರುವ ದೊಡ್ಡ ಮನೆ, ಒಂದು ಕಾಲದಲ್ಲಿ ಕಷ್ಟಪಟ್ಟ ಕಮಲಮ್ಮ ಈಗ ಸುಖವಾಗಿದ್ದಾರೆ.
ಕಮಲಮ್ಮ ಮತ್ತು ರಘುನಾಥರಾಯರ ನಡುವೆ ಮಾತು ಕಮ್ಮಿ ಮೌನ ಜಾಸ್ತಿ, ಮದುವೆಯ ಶುರುವಿನಿಂದಲೂ ಹೀಗೆಯೇ ಎಷ್ಟು ಬೇಕು ಅಷ್ಟು ಮಾತು ಮಿಕ್ಕ ಸಮಯ ಮೌನ. ಆ ಕಮ್ಮಿ ಮಾತು ಜಾಸ್ತಿ ಮೌನದಲ್ಲೇ ಅವರ ಬದುಕು ಇಲ್ಲಿಯವರೆಗೂ ಬಂದು ನಿಂತಿತ್ತು.
ನಾಳೆ ಕಮಲಮ್ಮನಿಗೆ ಅರವತ್ತು ತುಂಬುತ್ತೆ, ಮೊಮ್ಮಕ್ಕಳಿಗೆ ಮಕ್ಕಳಿಗೆ ಕಮಲಮ್ಮ ಎಂದರೆ ಇಷ್ಟ, ಪ್ರತಿ ವರ್ಷದ ಹುಟ್ಟುಹಬ್ಬದ ವೇಳೆ ಸರ್ಪ್ರೈಸ್ ಕೊಡುವ ಹಾಗೇ ಈ ಸಲವೂ ಕಮಲಮ್ಮನಿಗೆ ಸರ್ಪ್ರೈಸ್ ಕೊಡುವ ಹುನ್ನಾರ ನಡೆಸಿದ್ದರು, ಅವರ ಹುನ್ನಾರ ಈ ಸಲ ಸ್ವಲ್ಪ ಭಿನ್ನವಾಗಿತ್ತು ಪ್ರತಿವರ್ಷ ಮಧ್ಯರಾತ್ರಿ ಹೋಗಿ ಎಚ್ಚರಿಸಿ ಕೇಕ್ ಕತ್ತರಿಸಿ ಗಿಫ್ಟ್ ಕೊಟ್ಟು ಆಚರಿಸುತ್ತಿದ್ದರು, ಅದು ಅಜ್ಜಿಗೂ ಗೊತ್ತು ಈ ಸಲ ಮಧ್ಯರಾತ್ರಿ ಬೇಡ ಬೆಳಗ್ಗೆ ಕೊಡೋಣ ಅಂತ ಮೊಮ್ಮಕ್ಕಳು ತಲೆ ಓಡಿಸಿದ್ದರು, ಜೊತೆಗೆ ಅಜ್ಜನಿಗೆ ‘ಅಜ್ಜ ನೀವು ಏನಾದ್ರು ಸುಳ್ಳು ಹೇಳಿ ಬೇರೆಲ್ಲೋ ಹೋಗ್ತಾ ಇದ್ದೀರಾ ಅಂತ ಹೇಳಿ ನಮ್ಮ ರೂಮಲ್ಲೇ ಉಳ್ಕೊಳ್ಳಿ ಬೆಳಗ್ಗೆ ಅಜ್ಜಿ ಒಬ್ಳೆ ಮಲಗಿದ್ದಾಗ ಎಲ್ಲ ಹೋಗೋಣ ಅಜ್ಜಿ ಮಿಡ್ ನೈಟ್ ಬರ್ತೀವಿ ಅನ್ಕೊಂಡು ಇರ್ತಾರೆ ಆದರೆ ನಾವು ಬೆಳಗ್ಗೆ ಹೋಗಿ ಸರ್ಪ್ರೈಸ್ ಕೊಡೋಣ’ ಎಂದು ಥ್ರಿಲ್ ಆಗಿದ್ದರು, ರಘುನಾಥರಾಯರಿಗೆ ಮೊಮ್ಮಕ್ಕಳಿಗೆ ನಿರಾಸೆ ಮಾಡಬಾರದೆಂದು ಅವರು ಹೇಳಿದಂತೆ ಒಪ್ಪಿಕೊಂಡು ಕಮಲಮ್ಮನಿಗೆ ಹಿಂಗೇ ಫ್ರೆಂಡ್ ಮನೆಗೆ ಹೋಗ್ತಾ ಇದ್ದೀನಿ ಲೇಟ ಆದ್ರೆ ಬೆಳಗ್ಗೆ ಬರ್ತೀನಿ ಅಂದು ಮೊಮ್ಮಕ್ಕಳ ರೂಮು ಸೇರಿಕೊಂಡಿದ್ದರು.
ಮೊಮ್ಮಕ್ಕಳಂತೂ ರಾತ್ರಿ ಇಪ್ಪತ್ತು ಸಲ ಎದ್ದು ಸಮಯ ನೋಡಿ ಅಯ್ಯೋ ಇನ್ನೂ ಮಾರ್ನಿಂಗ್ ಆಗಿಲ್ವ ಎಂದು ಮಲಗಿಕೊಳ್ಳುತಿದ್ದರು, ಮೊಮ್ಮಕ್ಕಳಿಗೆ ಅಜ್ಜಿ ಬಗ್ಗೆ ಇರುವ ಪ್ರೀತಿ ಕಂಡು ರಘುನಾಥರಾಯರು ಮತ್ತು ಮಗ ಸೊಸೆಯಂದಿರ ಹೃದಯ ತುಂಬಿಬಂದವು, ಅಂತೂ ಬೆಳಗ್ಗೆ ಆರಕ್ಕೆ ಮೊಮ್ಮಕಳು ಎದ್ದು, ಫ್ರಿಡ್ಜಿನಲ್ಲಿ ಅಡಗಿಸಿಟ್ಟಿದ್ದ ಕೇಕು ಎತ್ತಿಕೊಂಡು ಅದರ ಜೊತೆ ಕ್ಯಾಂಡಲ್ ಗಳು, ಕೇಕು ಕತ್ತರಿಸಲು ಪ್ಲಾಸ್ಟಿಕ್ ಚಾಕು, ದೊಡ್ಡ ಪೆಪ್ಸಿ ಬಾಟಲು, ಚೀಪಿಸು, ನಾಲ್ಕೈದು ಪ್ಲಾಸ್ಟಿಕ್ ತಟ್ಟೆ ಹಿಡಿದು ಅಜ್ಜಿಯ ರೂಮನ್ನು ಒಟ್ಟಿಗೆ ನೂಕಿ
‘ಹ್ಯಾಪಿ ಬಡ್ಡೆ ಅಜ್ಜಿ’ ಎಂದು ಕಿರುಚಿದರು.
ಆದರೆ ಕಮಲಮ್ಮನವರೇ ಅವರಿಗೆಲ್ಲ ಸರ್ಪ್ರೈಸ್ ಕೊಟ್ಟಿದ್ದರು, ಅವರೆಲ್ಲೂ ಕಾಣಿಸದೆ ಇದ್ದು, ಬೆಡ್ ಪಕ್ಕದ ಟೇಬಲ್ ಬಳಿ ಗ್ಲಾಸ್ ಕೆಳಗೆ ಮಡಚಿಟ್ಟ ಕಾಗದ ಇತ್ತು. ಕಮಲಮ್ಮ ರಂಗನ ಜೊತೆ ಹೋಗಿದ್ದರು.
“ಕ್ಷಮಿಸಿ ಮಕ್ಕಳ,
ಇದೇನು ಮೊದಲ ಸಲ ಅಲ್ಲ ಓಡಿ ಹೋಗಲು ಬಯಸಿದ್ದು, ಕಾಲೇಜಿಗೆ ಹೋದ ಒಂದು ವರ್ಷದಲ್ಲೇ ರಂಗನ ಜೊತೆ ಓಡಿ ಹೋಗಲು ಪ್ರಯತ್ನಿಸಿದ್ದೆ, ರಂಗ ನನ್ನ ಮೊದಲ ಪ್ರೇಮಿ ಜೊತೆಗೆ ಕೊನೆಯ ಪ್ರೇಮಿ ಕೂಡ, ಓದಿ ಒಳ್ಳೆ ಕೆಲಸ ಸಿಕ್ಕ ಮೇಲೆಯೇ ಮದ್ವೆ ಆಗ್ತೀವಿ ಅಂದರು ಮನೇಲಿ ಅದೇನೋ ಜಾತಿ ಧರ್ಮ ಸಂಸ್ಕೃತಿ ಅಂತ ಜೋರು ಮಾತಾಡಿ ಆಗೋಲ್ಲ ಎಂದಾಗ ರಂಗನ ಜೊತೆ ಓಡಿ ಹೋಗಲು ಪ್ರಯತ್ನಿಸಿದ್ದೆ ಆಗಲಿಲ್ಲ.
ಅದಾದ ಮೇಲೆ ಇಷ್ಟವಿಲ್ಲದ ಹುಡುಗನನ್ನ ತೋರಿಸಿ ಮದ್ವೆ ಆಗು ಅಂದ್ರು ಯಾವಾಗಲೂ ಓಡಿ ಹೋಗೋಣ ಅನ್ಕೊಂಡೆ ಆಗ್ಲಿಲ್ಲ, ಆಮೇಲೆ ಓಡಿ ಹೋಗಬೇಕು ಅಂದುಕೊಂಡಾಗಲೆಲ್ಲ ಮಕ್ಕಳು ಸ್ಕೂಲು ಮದ್ವೆ ಹಿಂಗೇ ಯಾವುದು ಓಡಿ ಹೋಗಕ್ಕೆ ಬಿಡ್ಲಿಲ್ಲ, ನನ್ನ ಜವಾಬ್ದಾರಿ ಮುಗೀತು ಈಗ ನಾನು ಓಡಿಹೋದರು ತಡೆಯೋರಿಲ್ಲ ಆಗಾಗಿ ಓಡಿ ಹೋಗ್ತಾ ಇದ್ದೀನಿ ನನ್ನ ರಂಗನ ಜೊತೆ.
ಕ್ಷಮಿಸಿ ಚೆನ್ನಾಗಿರಿ”
ಮಕ್ಕಳು ಬಾಯಿ ಮೇಲೆ ಕೈ ಇಟ್ಟುಕೊಂಡರು. ಮೊಮ್ಮಕ್ಕಳಿಗೆ ಏನು ಅರ್ಥವಾಗದೆ ಅಪ್ಪ ಅಮ್ಮನ ಅಜ್ಜನ ಮುಖ ನೋಡುತ್ತಿದ್ದರು. ರಘುನಾಥರಾಯರು ಗೋಡೆ ಮೇಲಿರುತ್ತಿದ್ದ ಹಾಲು ಜೇನಿನ ಪೋಸ್ಟರ್ ಇಲ್ಲದೆ ಇರೋದು ನೋಡಿ, ಮಾತನಾಡದೆ ಈಚೆ ಬಂದರು
ಈಚೆ ಬಂದ ರಾಯರು ಮೊಬೈಲಿನಲ್ಲಿ ಹತ್ತು ನಂಬರ್ ಡಯಲ್ ಮಾಡಿದರು, ಆ ಕಡೆ ಕಾಲ್ ಪಿಕ್ ಆಯ್ತು
‘ರಘು…’
‘ಜಾನಕೀ..ಇನ್ಮೇಲೆ ನೀನು ವೃದ್ಧಾಶ್ರಮದಲ್ಲಿ ಇರೋ ಆಗಿಲ್ಲ, ಇವಾಗ ನನ್ನ ಮನೆ ಮತ್ತು ಮನ ಎರಡು ಖಾಲಿ, ಬಲಗಾಲಿಟ್ಟು ಬರಬಹುದು..ಬರ್ತೀಯ ಅಲ್ವ?’
ಸೊಗಸಾಗಿದೆ ಸರ್… ಹೇಗೋ ಅವರ ಅವರ ಜೋಡಿಯನ್ನ ಕೊನೆಗೆ ಒಂದು ಮಾಡಿದ್ದೀರಾ
ಚೆನ್ನಾಗಿದೆ. ಕೊನೆಯ ಟ್ವಿಸ್ಟ್ ಸೂಪರ್!