– ಎನ್ ಎಸ್ ಶ್ರೀಧರ ಮೂರ್ತಿ
ಇದು 1992ರ ನೆನಪು..
ಜಿ.ವಿ.ಅತ್ರಿ ಚಿತ್ರಗೀತೆಗಳ ಒಂದು ಕಾರ್ಯಕ್ರಮ ಏರ್ಪಡಿಸಿದ್ದರು. ಅದರಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಪಿ.ಬಿ.ಶ್ರೀನಿವಾಸ್ ಸೇರಿದಂತೆ ಹಲವು ಪ್ರಖ್ಯಾತ ಗಾಯಕರು ಭಾಗಿಯಾಗುವವರಿದ್ದರು. ಬೆಂಗಳೂರಿನ ಚೌಡಯ್ಯ ಸಭಾಂಗಣದಲ್ಲಿ ಕಾರ್ಯಕ್ರಮ. ಜನ ಕಿಕ್ಕಿರಿದು ಸೇರಿದ್ದಾರೆ. ಹಿಂದಿನ ದಿನ ರಾತ್ರಿಯಿಂದಲೇ ಪಿ.ಬಿ.ಶ್ರೀನಿವಾಸ್ ಅವರಿಗೆ ಜ್ವರ ಕಾಣಿಸಿಕೊಂಡಿತು. ನೂರರ ಆಸುಪಾಸಿನಲ್ಲೇ ಸುತ್ತುತ್ತಿದ್ದ ಜ್ವರದ ತಾಪದಿಂದ ಅವರಿಗೆ ಕಣ್ಣು ಬಿಡುವುದೂ ಕೂಡ ಕಷ್ಟವಾಗಿತ್ತು. ಇನ್ನು ಹಾಡುವುದು ದೂರದ ಮಾತಾಯಿತು. ಆದರೆ ಯಾರು ಏನು ಹೇಳಿದರೂ ಕೇಳದೆ ಪಿ.ಬಿ ತಮ್ಮ ಖಾಯಂ ತಾಣ ಮೌರ್ಯದಿಂದ ಚೌಡಯ್ಯಕ್ಕೆ ಬಂದರು. ಅಲ್ಲಿನ ಕಿರಿದಾದ ಸೌಡ್ವಿಂಗ್ನಲ್ಲಿ ಮಲಗಿಕೊಂಡೆ ಹಾಡಿಗೆ ಕಿವಿಗೊಟ್ಟರು. ರಾಜ ನನ್ನ ರಾಜಚಿತ್ರದ ನೂರು ಕಣ್ಣ ಸಾಲದು ಗೀತೆಯನ್ನು ಉದ್ದೇಶಿತ ಕಾರ್ಯಕ್ರಮ ಪಟ್ಟಿಯಂತೆ ಎಸ್.ಪಿ ಮತ್ತು ಪಿ.ಬಿ ಒಟ್ಟಿಗೆ ಹಾಡ ಬೇಕಿತ್ತು. ಎಸ್.ಪಿ ಹಾಡನ್ನು ಆರಂಭಿಸಿದರು. ಪಿ.ಬಿ ಭಾಗವನ್ನು ಅತ್ರಿ ಹಾಡಲು ಸಿದ್ದರಾಗಿದ್ದರು. ಹಾಡು ಅರ್ಧಕ್ಕೆ ಬರುತ್ತಿದ್ದಂತೆ ಪಿ.ಬಿ ಆವೇಶ ಬಂದವರಂತೆ ವೇದಿಕೆಗೆ ಹತ್ತಿರದಲ್ಲಿ ಇದ್ದ ನನ್ನ ಕೈಹಿಡಿದು ಕೊಂಡೇ ನುಗ್ಗಿದರು. ಮೈಕ್ ತೆಗೆದುಕೊಂಡವರೇ
ಜನುಮ ಜನುಮದಲ್ಲೂ
ನೀನು ನನ್ನವಳೇನೆ
ಎಂದು ಹಾಡಲು ಆರಂಭಿಸಿದರು. ಆ ಕ್ಷಣದ ರೋಮಾಂಚನ ಪದಗಳಲ್ಲಿ ವಿವರಿಸಲು ಆಗುವಂತಹದಲ್ಲ. ಅಷ್ಟು ಮಧುರವಾಗಿ ಪಿ.ಬಿ ಎಂದೂ ಹಾಡಿಲ್ಲವೇನೋ ಎನ್ನುವಂತಹ ಜೀನಿನ ಹೊಳೆ ಹರಿಯುತ್ತಿತ್ತು. ಎಸ್.ಪಿ. ಅವರ ಕಣ್ಣಲ್ಲೂ ಆನಂದ ಭಾಷ್ಟ ಹೊಮ್ಮುತ್ತಿತ್ತು. ಹಾಡು ಮುಗಿದಾಗ ಕೇಳಿ ಬಂದ ಕರತಾಡನ ಹತ್ತು ನಿಮಿಷಗಳಾದರೂ ನಿಲ್ಲಲಿಲ್ಲ.
ಇದು ಪಿ.ಬಿ.ಶ್ರೀನಿವಾಸ್ ಅವರ ಜೊತೆಗಿನ ನನ್ನ ಮೊದಲ ಭೇಟಿ. ಅಲ್ಲಿಂದ ಮುಂದಿನ ಎರಡು ದಶಕಗಳಲ್ಲಿ ಹಲವಾರು ಗಂಟೆಗಳನ್ನು ಅವರ ಜೊತೆಗೆ ಕಳೆದಿದ್ದೇನೆ. ಆಗೆಲ್ಲಾ ಗಾಯಕರ ಬಿಂಕ ಬಿಗುಮಾನಗಳಿಲ್ಲದೆ ಸಹಜವಾದ ಕುತೂಹಲ ಅವರಲ್ಲಿರುವುದನ್ನು ಕಂಡು ಬೆರಗಾಗಿದ್ದೇನೆ. ಒಂದು ಹಾಡು ಹಿಟ್ ಆದ ಕೂಡಲೇ ಚಂದ್ರಲೋಕದಿಂದ ಇಳಿದು ಬಂದವರಂತೆ ಆಡುತ್ತಿರುವ ಗಾಯಕರನ್ನು ಸುತ್ತಲೋ ನೋಡುತ್ತಿರುವಾಗ ಪಿ.ಬಿ.ಎಸ್ ಅಂತಹವರು ವಿರಳರಲ್ಲಿ ವಿರಳರು ಎನ್ನ ಬಹುದೇನೋ.
***
ಪಿ.ಬಿ. ಅವರು ಹಿನ್ನೆಲೆ ಗಾಯಕರಾಗಲು ಯಾರು ಕಾರಣ? ಹಲವಾರು ಕಥೆಗಳಿವೆ, ಹಲವಾರು ಹೆಸರುಗಳಿವೆ, ಆದರೆ ಯಾರಿಗೂ ಗೊತ್ತಿಲ್ಲದ ಒಂದು ಹೆಸರು ಮತ್ತು ಅದರ ಹಿನ್ನೆಲೆಯ ಕಥೆಯೊಂದನ್ನು ಪಿ.ಬಿ ನನಗೆ ಹೇಳಿದ್ದರು. ಪಿ.ಬಿ ಅವರ ತಂದೆಗೆ ಮಗ ವಕೀಲನಾಗ ಬೇಕು ಎಂಬ ಕನಸಿತ್ತು. ಅದಕ್ಕಾಗಿ ಎಲ್.ಎಲ್.ಬಿ ಓದಿದರು. ಅದಕ್ಕಾಗಿ ಮದರಾಸಿಗೆ ಬಂದರು. ಆಗ ಹುಟ್ಟಿಕೊಂಡಿತು ಸಂಗೀತಾಕ್ತ ಗೆಳೆಯರ ಬಳಗ. ಎಂ.ಎಸ್.ವಿಶ್ವನಾಥನ್, ಜಿ.ಕೆ.ವೆಂಕಟೇಶ್ ಅವರಲ್ಲಿ ಮುಖ್ಯರಾದವರು. ಈ ಮೂವರಿಗೂ ನೌಷಾದ್ ಮಾನಸಿಕ ಗುರು. ಅವಕಾಶ ಸಿಕ್ಕಾಗ ಜೆಮೆನಿ ಸ್ಟೂಡಿಯೋದಲ್ಲಿ ಸಮೂಹ ಗಾನದಲ್ಲಿ ಹಾಡುಗಳನ್ನು ಹೇಳುತ್ತಿದ್ದರು. ಏಮಿನಿ ಶಂಕರಶಾಸ್ತ್ರಿಗಳು ಅಲ್ಲಿನ ನಿವರ್ಾಹಕರು ಅವರು ಮೂವರಿಗೂ ಅವಕಾಶವನ್ನು ನೀಡಿದರು. ಅದು ಹೇರಳವಾಗಿ ತಮಿಳು ಚಿತ್ರಗಳು ಹಿಂದಿಗೆ ಡಬ್ ಆಗುತ್ತಿದ್ದ ಕಾಲ. ಹಿಂದಿಯನ್ನು ಚೆನ್ನಾಗಿ ಬಲ್ಲ ಪಿ.ಬಿ ಅವರಿಗೆ ಅವಕಾಶಗಳು ಹೆಚ್ಚಾಗಿ ಸಿಕ್ಕವು. ಮಿಸ್ ಸಂಪತ್ಚಿತ್ರದಲ್ಲಿ ಸಮೂಹಗಾನದಲ್ಲಿ ಪಿ.ಬಿ ಹಾಡುತ್ತಿದ್ದರು. ಆಗ ಜೆಮಿನಿ ಸ್ಟೂಡಿಯೋದ ಮಾಲೀಕರಾದ ಎಸ್.ಎಸ್.ವಾಸನ್ ಬಂದರು. ಅವರು ಪಿ.ಬಿ ಕಂಠಸಿರಿಯನ್ನು ಕೇಳಿ ಎಂತಹ ಕಂಠ, ಹಾಡಿದರೆ ಅಲ್ಲ.. ಗುನುಗಿದರೂ ಕಲ್ಲೂ ಕೂಡ ಕರಗ ಬೇಕು ಎಂದರು. ಎಂದು ಸುಮ್ಮನಾಗಲಿಲ್ಲ. ತಮ್ಮ ಸ್ನೇಹಿತರಾದ ಆರ್. ನಾಗೇಂದ್ರ ರಾಯರ ಬಳಿ ಹೇಳಿಕೊಂಡರು. ಪ್ರತಿಭೆಯನ್ನು ಗುರುತಿಸುವಲ್ಲಿ ರಾಯರು ಸಿದ್ದಹಸ್ತರು. ತಾವು ನಿಮರ್ಿಸುತ್ತಿದ್ದ ಜಾತಕಫಲ ಚಿತ್ರದ ಕನ್ನಡ, ತಮಿಳು, ತೆಲಗು ಮೂರೂ ಅವತರಿಣಿಕೆಯಲ್ಲೂ ಪಿ.ಬಿ.ಎಸ್. ಅವರಿಗೆ ಅವಕಾಶವನ್ನು ನೀಡಿದರು.
ಮುಂದೆ ನಿರ್ಮಾಣವಾಗಿದ್ದು ಇತಿಹಾಸ!
***
ಪಿ.ಬಿ.ಶ್ರೀನಿವಾಸ್ ಅವರಿಗಿರುವ ಪದವಿಗಳ ಪಟ್ಟಿಯಲ್ಲಿ ಎಲ್.ಓ.ಎಲ್ ಎಂ ಪದವಿ ಕೂಡ ಸೇರಿದೆ. ಅದು ಯಾರೂ ಅವರಿಗೆ ಕೊಟ್ಟ ಪದವಿಯಲ್ಲ. ತಾವೇ ಸೇರಿಸಿಕೊಂಡಿದ್ದ. ಹೀಗೆದಂದರೆ ಲವ್ವರ್ ಅಫ್ ಲಾಂಗ್ವೇಜಸ್ ಎನ್ನುತ್ತಿದ್ದರು ಪಿ.ಬಿ. ಎಂಟು ಭಾಷೆಗಳನ್ನು ಸಮರ್ಥವಾಗಿ ಮಾತನಾಡುತ್ತಿದ್ದ ಅವರಿಗೆ ಭಾಷಾಪ್ರೇಮ ಒಂದು ಕಲೆಯಾಗಿ ಒಲಿದಿತ್ತು. ಗಜಲ್ ಅವರಿಗೆ ಪ್ರಿಯವಾದ ಸಂಗೀತ ಪ್ರಕಾರ. ಆಕಾಶವಾಣಿಯಲ್ಲಿ ಉದಯ ವಾರ್ತೆಯನ್ನು ಕೇಳುತ್ತಾ ಅದರ ಕಡೆ ಒಲವನ್ನು ಬೆಳೆಸಿಕೊಂಡ ಅವರು ಮಿಜರ್ಾ ಗಾಲಿಬ್ನ ಗಜಲ್ಗಳನ್ನು ಕೇಳುತ್ತಾ ರಚನೆಗೂ ತೊಡಗಿದರು. ಎಂಟೂ ಭಾಷೆಗಳಲ್ಲಿ ಅವರು ಗಜಲ್ಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಅವರು ಬರೆದ ಗಜಲ್ಗಳ ಧ್ವನಿಸುರಳಿ ಕೂಡ ಬಂದಿದೆ. ಅದಕ್ಕೆ ಮಹೇಶ್ ಪ್ರೇಮಗೀತೆಗಳು ಎಂಬ ತಪ್ಪಾದ ಶೀರ್ಷಿಕೆಯನ್ನು ನೀಡಿದ್ದರು ಎಂದು ಪಿ.ಬಿ ಯಾವಾಗಲೂ ಪೇಚಾಡಿಕೊಳ್ಳುತ್ತಿದ್ದರು. ಅವರ ಪ್ರಕಾರ ಗಜಲ್ನಲ್ಲಿರುವ ಪ್ರೇಮ ಇಂದ್ರಿಯಗಮ್ಯವಾದದ್ದಲ್ಲ. ದೈವಿಕವಾದದ್ದು. ಒಂದು ಸಲ ಹೀಗಾಯಿತು ಜೆಮಿನಿ ಗಣೇಶನ್ ಮತ್ತು ಪಿ.ಬಿ ದಕ್ಷಿಣ ಆಫ್ರಿಕಾ ಪ್ರವಾಸ ಹೋಗಿದ್ದರು. ಹಿಂದಿರುಗಿ ಮುಂಬೈಗೆ ಬಂದಾಗ ಆಗ ಅಲ್ಲಿ ದೂರದರ್ಶನದ ನಿರ್ದೇಶಕರಾಗಿದ್ದ ಪಿ.ಬಿ.ಕೃಷ್ಣಮೂರ್ತಿ ಹೇಗೂ ಬಂದಿದ್ದೀರಿ ಕೆಲವು ಗಜಲ್ಗಳನ್ನು ಹಾಡಿಹೋಗಿ ಎಂದರು.
ಆದರೆ ಅಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದವರಿಗೆ ಪಿ.ಬಿ ಮಹತ್ವ ಗೊತ್ತಿರಲಿಲ್ಲ. ದಕ್ಷಿಣ ಭಾರತದಿಂದ ಬಂದವರು ಎಂಬ ತಾತ್ಸಾರದಿಂದ ಏನೋ ಕೆಲವು ಲೈಟ್ ಮ್ಯೂಸಿಕ್ ಹಾಡಿ ಹೋಗಿ ಎಂದರು. ಪಿ.ಬಿ ಪ್ರತಿಕ್ರಿಯಿಸದೆ ಸ್ಟೂಡಿಯೋಕ್ಕೆ ಹೋದವರೆ ಅವರದೇ ರಚೆನೆ ರೋಜ್ ಹಂ ಹಾಡಲು ಆರಂಭಿಸಿದರು. ಗಾಜಿನ ಬಾಗಿಲಿನಿಂದ ಆಚೆಗೆ ಕುಳಿತವರ ಬದಲಾಗುತ್ತಿದ್ದ ಮುಖಭಾವವನ್ನು ಗುರುತಿಸ ಬಹುದಾಗಿತ್ತು. ಪಿ.ಬಿ ಹೊರ ಬಂದ ಕೂಡಲೇ ಅವರ ಕಾಲಿಗೆ ಬಿದ್ದ ಆ ಅಧಿಕಾರಿ ಕ್ಷಮಿಸಿ ದಕ್ಷಿಣ ಭಾರತದವರು ಇಷ್ಟು ಸೊಗಸಾಗಿ ಗಜಲ್ ಹಾಡಬಲ್ಲರು ಎಂದು ನಾವು ಊಹಿಸಿಯೂ ಇರಲಿಲ್ಲ ಎಂದು ಇನ್ನೂ 8-10 ಗಜಲ್ಗಳನ್ನು ಪಿ.ಬಿಯವರಿಂದ ಹಾಡಿಸಿದರು.
***
ಚಿಕ್ಕ ವಯಸ್ಸಿನಿಂದಲೂ ಪಿ.ಬಿ.ಎಸ್ ಅವರಿಗೆ ಲತಾಮಂಗೇಶ್ಕರ್ ಅವರ ಹಾಡುಗಳು ಎಂದರೆ ಪಂಚಪ್ರಾಣ. ಅವರ ಜೊತೆ ಯುಗಳ ಗೀತೆಯನ್ನು ಹಾಡುವ ಅವಕಾಶ ಸಿಕ್ಕಿದ್ದು ಪಿ.ಬಿ. ಅವರ ವೃತ್ತಿ ಜೀವನದ ರೋಮಾಂಚಕ ನೆನಪು. ಮೈಭೀ ಲಡಕೀ ಹೂಂ ಚಿತ್ರದಲ್ಲಿ ಅವರು ಲತಾ ಮಂಗೇಶ್ಕರ್ ಜೊತೆ ಯುಗಳ ಗೀತೆ ಹಾಡಿದರು. ಲತಾಜೀ ಕೂಡ ಇವರ ಗಾಯನವನ್ನು ಇಷ್ಟ ಪಟ್ಟಿದ್ದು ಸಹಜವಾಗೇ ಆನಂದವನ್ನು ತಂದಿತ್ತು. ಹಿಂದಿಯಲ್ಲಿಯೂ ಪಿ.ಬಿ.ಎಸ್ ಅವರಿಗೆ ಹಲವಾರು ಅವಕಾಶಗಳು ಸಿಕ್ಕಿದ್ದವು. ಗುಣಮಟ್ಟದ ಕುರಿತು ಎಂದೂ ರಾಜಿಗೆ ಸಿದ್ದರಾಗದ ಪಿ.ಬಿ.ಎಸ್. ಒಪ್ಪಿಕೊಂಡಿದ್ದಕ್ಕಿಂತ ತಿರಸ್ಕರಿಸಿದ್ದೇ ಹೆಚ್ಚು. ಟೊಪ್ಪಿವಾಲನಿಗೆ ಅಹಂಕಾರ ಹೆಚ್ಚು ಎಂದು ಮುಂಬೈ ಮಂದಿ ಮಾತನಾಡಿಕೊಂಡರು. ಇಂದು ಪಿ.ಬಿ.ಎಸ್.ಅವಕಾಶ ವಂಚಿತ ಎಂಬ ಮಾತುಗಳು ಬಂದಾಗ ಅವರು ಇದನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಪಿ.ಬಿ.ಶ್ರೀನಿವಾಸ್ ಅವರನ್ನು ನಾವು ಟೋಪಿ ಇಲ್ಲದೆ ನೋಡಿದ್ದೇ ಇಲ್ಲ. ಇದಕ್ಕೆ ಕಾರಣವೇನು ಎಂದು ಕೇಳಿದಾಗ ಪಿ.ಬಿ.ಎಸ್ ವಿಶೇಷ ಕಾರಣವೇನಿಲ್ಲ ಛಳಿಗೆ ಎಂದು ಆರಂಭದಲ್ಲಿ ಟೋಪಿ ಹಾಕುತ್ತಿದ್ದೆ, ಕ್ರಮೇಣ ಅದೇ ಅಭ್ಯಾಸವಾಯಿತು. ಬಿಳಿ ಗೆರೆ ಇದ್ದ ಕಪ್ಪು ಟೋಪಿಯನ್ನು ಆರ್ಡರ್ ಮಾಡಿ ತರಿಸಲಾರಂಭಿಸಿದೆ, ಅದೇ ನನ್ನ ಗುರುತು ಕೂಡ ಆಗಿಬಿಟ್ಟಿತು. ಎಂದಿದ್ದರು. ತಮ್ಮ ತಂದೆ ನಿಧನರಾದ ನಂತರ ಪಿ.ಬಿ.ಎಸ್. ಟೋಪಿ ಬಿಟ್ಟು ಪೇಟ ಧರಿಸಲಾರಂಭಿಸಿದರು. ಅದರಲ್ಲೂ ಮೈಸೂರು ಪೇಟ ಅವರಿಗೆ ವಿಶೇಷ ಮೆರುಗನ್ನು ನೀಡಿತ್ತು.
***
ಪಿ.ಬಿ.ಶ್ರೀನಿವಾಸ್ ಅವರ ತಾಯಿ ಶೇಷಗಿರಿಯಮ್ಮ ತುಂಬಾ ಸುಮಧುರವಾಗಿ ಹಾಡುತ್ತಿದ್ದರು. ಗಾಯಕರಾಗಲು ಅವರಿಗೆ ತಾಯಿಯದೇ ಪ್ರೇರಣೆ. ಕಷ್ಟಕಾಲದಲ್ಲಿ ಸದಾ ಬೆಂಬಲವಾಗಿ ನಿಂತ ತಮ್ಮ ತಾಯಿ ಎಂದರೆ ಪಿ.ಬಿ.ಎಸ್ ಅವರಿಗೆ ಅಚ್ಚುಮೆಚ್ಚು. ಆಕೆ ನನ್ನ ದೇವತೆ ಎನ್ನುವಷ್ಟು ಭಾವುಕತೆ. ತಾಯಿಯವರಿಗೆ ಇದ್ದ ದೊಡ್ಡ ಆಸೆ ಎಂದರೆ ತನ್ನ ಮಗಳ ಮದುವೆ ಬಂಧು ಮಿತ್ರರು, ನೆರೆಹೊರೆಯವರು ಬೆರಗಾಗುವಂತೆ ಆದ್ದೂರಿಯಾಗಿ ನಡೆಯ ಬೇಕು ಎನ್ನುವುದು. ಅದರಂತೆ ಪಿ.ಬಿ.ಎಸ್ ತಮ್ಮ ತಂಗಿಯ ಮದುವೆಯನ್ನು ಬಹು ವಿಜೃಂಭಣೆಯಿಂದ ನೆರವೇರಿಸಿದರು. ಇದರಿಂದ ಆನಂದತುದಲಿತರಾದ ಅವರ ತಾಯಿ ತಂಗಿ ಮದುವೆ ಮಾಡಲು ಎಷ್ಟೊಂದು ಖರ್ಚು ಮಾಡಿದ್ದೀಯ. ನಿನಗೂ ಸಂಸಾರವಿದೆ. ಮಕ್ಕಳಿದ್ದಾರೆ. ಅವರ ಭವಿಷ್ಯಕ್ಕೆ ಹಣ ಬೇಕಾಗುತ್ತದೆ. ನನ್ನ ತೃಪ್ತಿಗೆ ಇಷ್ಟೊಂದು ಖಚರ್ು ಮಾಡಿದ ನೀನು ನನಗೆ ಇನ್ನೇನು ಮಾಡುವುದು ಬೇಕಾಗಿಲಲ್ಲ. ನಾನು ಹೋದ ಮೇಲೆ ಕೂಡ ಅಪರಕ್ಕೆ ಎಂದು ಖಚರ್ು ಮಾಡಬೇಡ ಬದಲಾಗಿ ನನ್ನ ನೆನಪಿಗೆ ಹತ್ತಾರು ಕಾಲ ಉಳಿಯುವಂತಹ ಹಾಡನ್ನು ಹಾಡು ಎಂದಿದ್ದರು. ಕಾಲ ಉರಳಿ ಅಂತಹ ಸಂದರ್ಭವೂ ಬಂದಿತು. ಪಿ.ಬಿ.ಶ್ರೀನಿವಾಸ್ ಅವರ ತಾಯಿ ನಿಧನರಾಗಿ ಕುಟುಂಬವೆಲ್ಲಾ ಶೋಕದಲ್ಲಿ ಮುಳುಗಿರುವಾಗ ಗೆಳೆಯ ಆರ್.ಎನ್.ಜಯಗೋಪಾಲ್ ಅವರ ಫೋನ್ ಬಂದಿತು. ವಿಷಯ ಗೊತ್ತಿಲ್ಲದ ಅವರು ಹೀಗೆ ಒಂದು ಹಾಡಿನ ಧ್ವನಿಮುದ್ರಣ ತುತರ್ಾಗಿ ಆಗಬೇಕಿತ್ತು ಬರುತ್ತೀಯಾ ಎಂದು ಕೇಳಿದರು. ದು:ಖದಲ್ಲಿ ಮುಳುಗಿ ಹೋಗಿದ್ದರೂ ಪಿ.ಬಿ.ಎಸ್ ಅವರಿಗೆ ತಾಯಿಯ ಮಾತು ನೆನಪಾಯಿತು ಈಗ ತಾನೆ ನಮ್ಮ ತಾಯಿ ತೀರಿಕೊಂಡರು. ದಹನ ಕ್ರಿಯೆ ಮುಗಿಸಿದ ನಂತರ ನೇರವಾಗಿ ಸ್ಟೂಡಿಯೋಕ್ಕೆ ಬರುತ್ತೇನೆ ಎಂದರು. ಆಗ ಜಯಗೋಪಾಲ್ ಅಪ್ರತಿಭರಾಗಿ ವಿಷಯ ಗೊತ್ತಿರಲಿಲ್ಲ, ಪರವಾಗಿಲ್ಲ ಬಿಡು ಬೇರ ವ್ಯವಸ್ಥೆ ಮಾಡಿಕೊಳ್ಳುತ್ತೇನೆ ಎಂದರೂ ಪಿ.ಬಿ ಒಪ್ಪಲಿಲ್ಲ. ಅದರಂತೆ ದಹನಕ್ರಿಯೆ ಮುಗಿಯುತ್ತಿದ್ದಂತೆ ಸ್ಟೂಡಿಯೋಕ್ಕೆ ಬಂದರು. ಉಕ್ಕಿ ಬರುತ್ತಿದ್ದ ದು:ಖವನ್ನು ತಡೆದುಕೊಂಡು ಹಾಡಿದರು. ಆ ಗೀತೆಯೇ ಸೊಸೆ ತಂದ ಸೌಭಾಗ್ಯ ಚಿತ್ರದ ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ. ಈ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ ಅಕ್ಷರಶ: ಕಣ್ಣೀರಿಡುತ್ತಿದ್ದ ಪಿ.ಬಿ.ಶ್ರೀನಿವಾಸ್ ಅಮ್ಮನ ಆಸೆಯಂತೆ ಆ ಹಾಡು ಹತ್ತಾರು ವರ್ಷ ಉಳಿದುಕೊಂಡಿತು ಎಂದು ಭಾವುಕರಾಗುತ್ತಿದ್ದರು.
***
ಫೆಬ್ರವರಿ 23ರಂದು ಅಪರ್ಣ ಪೋನ್ ಮಾಡಿದರು. ನಾಳೆ ಪಿ.ಬಿ.ಶ್ರೀನಿವಾಸ್ ಬರುತ್ತಿದ್ದಾರೆ. ಪ್ರೆಸ್ಕ್ಲಬ್ನಲ್ಲಿ ಅವರಿಗೆ ಸನ್ಮಾನ ನಾನು ಕಾರ್ಯಕ್ರಮ ನಿರ್ವಹಣೆ ಮಾಡಬೇಕು ಅವರ ಬಗ್ಗೆ ಒಂದಿಷ್ಟು ವಿವರಗಳು ಬೇಕು ಎಂದರು. ಒಂದಿಷ್ಟು ಅವರ ಬಗ್ಗೆ ನೆನಪುಗಳನ್ನು ಹೆಕ್ಕಿಕೊಂಡೆ. ಅವತ್ತೆಲ್ಲಾ ಅವರ ಗೀತೆಗಳೇ ಕಾಡುತ್ತಿದ್ದವು. ಮರುದಿನ ಏನೋ ಅನ್ನಿಸಿದಂತೆ ಮೌರ್ಯ ಹೋಟಲ್ಗೆ ಪೋನ್ ಮಾಡಿ ಪಿ.ಬಿ.ಎಸ್. ಬಂದಿದ್ದಾರಾ ಎಂದು ಕೇಳಿದೆ. ನಿರೀಕ್ಷೆಯಂತೆ ಬಂದಿದ್ದರು. ಭೇಟಿ ಮಾಡಿದೆ. ಆಗಲೇ ಮೇ7ರ ಕಾರ್ಯಕ್ರಮದ ಬಗ್ಗೆ ಅವರು ಹೇಳಿದ್ದಿರು. ಆದರೆ ದಿನಗಳು ಉರುಳುತ್ತಿದ್ದರೂ ಕಾರ್ಯಕ್ರಮದ ಬಗ್ಗೆ ಎಲ್ಲೂ ಮಾಹಿತಿ ಬರದಿದ್ದರಿಂದ ಏಪ್ರಿಲ್ ಆರರಂದು ಅವರಿಗೆ ಪೋನ್ ಮಾಡಿದೆ. ಮಗ ನಂದಕಿಶೋರ್ ಪೋನ್ ತೆಗೆದುಕೊಂಡವರು ಕಾರ್ಯಕ್ರಮವನ್ನು ಖಚಿತ ಪಡಿಸಿದರು. ಹತ್ತು ನಿಮಿಷಕ್ಕೆಲ್ಲಾ ಪಿ.ಬಿ.ಎಸ್ ಅವರೇ ಪೋನ್ ಮಾಡಿದರು. ಹಲವು ವಿಷಯಗಳನ್ನು ಮಾತನಾಡಿದರು. ಮುಖ್ಯವಾಗಿ ಭಾರತೀಯ ಚಿತ್ರರಂಗದ ಶತಮಾನೊತ್ಸವದ ಬಗ್ಗೆ ನಮ್ಮಲ್ಲಿ ಇತಿಹಾಸದ ಕುರಿತು ಇರುವ ಅವಜ್ಞೆಯ ಬಗ್ಗೆ, ಸಾಂಸ್ಕೃತಿಕ ಗ್ರಹಿಕೆಗಳ ಕೊರತೆಯ ಬಗ್ಗೆ, ಇವನ್ನೆಲ್ಲಾ ಲೇಖನ ಮಾಡಲೆ ಎಂದು ಕೇಳಿದೆ ಆಯಿತು ಎಂದರು. ಅದು ಏಪ್ರಿಲ್ 11ರ ವಿಜಯವಾಣಿ ಸಂಚಿಕೆಯಲ್ಲಿ ಪ್ರಕಟವಾಯಿತು. ಅವತ್ತು ಚಾಂದ್ರಮಾನ ಯುಗಾದಿ, ಬೆಳಿಗ್ಗೆಗೇ ಲೇಖನದ ಲಿಂಕ್ ಕಳುಹಿಸಿ ನಂದಕಿಶೋರ್ ಅವರಿಗೆ ವಿಷಯ ತಿಳಿಸಿದೆ. ಸಂಜೆಗೆ ಪಿ.ಬಿ.ಎಸ್. ಪೋನ್ ಮಾಡಿದರು. ಯುಗಾದಿ ಶುಭಾಶಯ ಹೇಳಿದರು. ಹಲವು ವಿಷಯಗಳನ್ನು ಮಾತನಾಡಿದರು. ಇಲ್ಲೆಲ್ಲಾ ಏಪ್ರಿಲ್ 14ರಂದು ಯುಗಾದಿ ಅವತ್ತು ಇನ್ನೊಮ್ಮೆ ಶುಭಾಶಯ ಹೇಳುವೆ ಎಂದು ಜೋಕ್ ಮಾಡಿದರು.
ಅವರು ಹೇಳಿದ್ದು ತಮಾಷೆಗೆ ಎಂದು ಗೊತ್ತಿದ್ದರೂ ಏಪ್ರಿಲ್ 14ರಂದು ಅವರು ಪೋನ್ ಮಾಡಬಹುದೇನೋ ಎಂದು ಪದೇ ಪದೇ ಮೊಬೈಲ್ ನೊಡಿಕೊಳ್ಳುತ್ತಿದ್ದೆ. ಮಧ್ಯನ್ಹ ಒಂದು ಗಂಟೆ ಸುಮಾರಿಗೆ ಅವರ ಮೊಬೈಲ್ನಿಂದ ಪೋನ್ ಬಂದಿತು. ಅಳಿಯ ಮುರುಳಿ ಮಾತನಾಡಿ ಮಾವ ಹೋಗಿಬಿಟ್ಟರು ಎಂದರು. ಇದೆಂಹ ಶಾಕ್.. ಸತ್ಯವನ್ನು ಅರಗಿಸಿಕೊಳ್ಳಲಾರದೆ ಕೆ.ಎಸ್.ಎಲ್.ಸ್ವಾಮಿಯವರಿಗೆ ಪೋನ್ ಮಾಡಿದೆ. ವಿಧಿ ನಮ್ಮ ಪ್ರಯತ್ನವನ್ನು ಸುಳ್ಳಾಗಿಸಿತ್ತು
ಪಿ.ಬಿ.ಶ್ರೀನಿವಾಸ್ ಅಮರ ಗಾನಲೋಕಕ್ಕೆ ಹೊರಟು ಬಿಟ್ಟಿದ್ದರು
ಉಳಿಸಿ ಕಣ್ಣನೀರ ನಮ್ಮ ಪಾಲಿಗೆ!







ಪಿ ಬಿ ಎಸ್ ಪ್ರತಿವಾದಿ ಭಯಂಕರ ಶ್ರೀನಿವಾಸ, ಶ್ರೇಷ್ಠ ಗಾಯಕರ ನುಡಿನಮನ ಮನಮುಟ್ಟುವಂತಿದೆ…ಇಂತಹ ಧೀಮಂತನನ್ನು ಸಮೀಪದಿಂದ ನೋಡುವ ಅವಕಾಶವೊಂದು ಧಾರವಾಡದಲ್ಲಿ ನನಗೂ ಸಿಕ್ಕದ್ದು ನನ್ನ ಪುಣ್ಯ
ಪಿ. ಬಿ. ಎಸ್. ವ್ಯಕ್ತಿತ್ವ ಬಹಳ ಸೊಗಸಾಗಿ ಲೇಖಕರು ತಿಳಿಸಿ ಕೊಟ್ಟಿದ್ದಾರೆ.ಅಭಿನಂದನೆಗಳು.
Haadu, haadugaarara abhimaani naanu.
Lekhana tumba chennagide!
ಚೆನ್ನಾಗಿದೆ.
ಪಿ. ಬಿ. ಎಸ್. ಅವರು ನಟ ರಾಜಕುಮಾರ್ ಅವರ ಸ್ವಂತ ಧ್ವನಿಯೇ ಆಗಿದ್ದರು. ರಾಜಕಪೂರ್ ಅವರಿಗೆ ಮುಕೇಶ್ ಇದ್ದ ಹಾಗೆ. ನಟ ರಾಜಕುಮಾರ್ ಅವರು ತಾವೇ ಸ್ವಂತಕ್ಕೆ ಹಾಡಲು ಶುರು ಮಾಡಿದಾಗ ಸ್ವಲ್ಪ ಕಿರಿಕಿರಿಯೇ ಆಗಿತ್ತು. ಕನ್ನಡ ಸಿನೆಮಾ ಲೋಕಕ್ಕೆ ಒಂದು ತರಹದ ಹಾನಿ ( ಪಿ ಬಿ ಎಸ್ ಧ್ವನಿ) ಆದರೆ ಒಂದು ತರಹದ ಲಾಭ (ಅಣ್ಣಾವ್ರ ಧ್ವನಿ) ಆಗಿತ್ತು. ಇಲ್ಲದಿದ್ದರೆ ಕವಿ ಕಾಳಿದಾಸ ಸಿನೇಮಾದ ಹಾಡು, ಹುಟ್ಟಿದರೆ ಕನ್ನಡ ನಾಡು ಈ ಹಾಡುಗಳಿಂದ ಕನ್ನಡಿಗರು ವನ್ಚಿತರಾಗಬೇಕಿತ್ತು. ಅಣ್ಣಾವ್ರ ನವರಸಗಳ ವೈವಿಧ್ಯದ ನಟನೆಗೆ ಪಿ ಬಿ ಎಸ್ ರವರ ಧ್ಹ್ವನಿಯ ವೈವಿಧ್ಯತೆ ಅಪ್ಪತವಾಗಿ ಹೊಂದಾಣಿಕೆಯಾಗುತ್ತಿತ್ತು. ಕನ್ನಡದ ಈ ಮಹಾ ಗಾಯಕರ ಜತೆ ಕಳೆದ ಆತ್ಮೀಯ ಕ್ಷಣಗಳನ್ನು ಮೆಲುಕು ಹಾಕಿ ಪಿ ಬಿ ಶ್ರೀ ಯವರ ನೆನಪು ಜೀವಂತ ಮಾಡಿದ ಶ್ರೀಧರ ಮೂರ್ತಿಯವರಿಗೆ ಧನ್ಯವಾದಗಳು.
I had the fortune of meeting this colossus of a singer in the US. I was swept away by his simplicity and down to earth nature. We spoke for nearly 30 minutes about his songs and the present situation of cinema music. He was very sad that now a days singing is equated with shouting and there is no melody in the new songs that are being composed. A great human being and a great singer..Namma PBS.
ಸಾರ್, ಒಂದು ವಿಷಯ ನೀವೂ ಗಮನಿಸಿರುತ್ತೀರಿ:
ಗಂಧದಗುಡಿ ಚಿತ್ರದ “ನಾವಾಡುವ ನುಡಿಯೇ ಕನ್ನಡ ನುಡಿ” ಹಾಡನ್ನು ಡಾ. ಪಿ ಬಿ ಎಸ್ ಹಾಡಿದ್ದರು.
ಅದೇ ಹಾಡನ್ನು ಗಂಧದ ಗುಡಿ -2 ಕ್ಕೆ ಡಾ ರಾಜ್ ಕುಮಾರ್ ಮತ್ತೆ ಹಾಡಿದರು.
ಡಾ ಪಿ ಬಿ ಎಸ್ ಹಾಡಿದ ಬಗೆಯ ತೇಜಸ್ಸು ಸ್ವತಃ ಡಾ ರಾಜ್ ಹಾಡಿದಾಗ ಕೇಳಲಿಲ್ಲ.
ಎರಡೂ ಹಾಡುಗಳನ್ನೂ ಚರಿತ್ರೆ ತಕ್ಕಡಿಗಿಟ್ಟು ತೂಗುತ್ತದೆ ಎಂಬ ಸತ್ಯ ಡಾ ರಾಜ್ ರಿಗೆ ತಿಳಿದಿತ್ತು.
ಈಗಲೂ ಎರಡೂ ಹಾಡುಗಳನ್ನು ಒಂದರ ನಂತರ ಮತ್ತೊಂದು ಕೇಳಿದಾಗ ಡಾ ಪಿ ಬಿ ಎಸ್ ರ ಸ್ವರಗಾಂಭೀರ್ಯದ ಸುನಾದ ಕಾಡುತ್ತದೆ.
ನಿಮ್ಮ ಲೇಖನಕ್ಕೆ ಧನ್ಯವಾದಗಳು.