ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಗವೆಲ್ಲ ನಗುತಿರಲಿ, ಜಗದಳವು ನನಗಿರಲಿ!

– ಚಾಮರಾಜ ಸವಡಿ

ಬಾಲ್ಯದಲ್ಲಿ ಇದನ್ನು ಬಾಯ್ತುಂಬಾ ಹಾಡುತ್ತಿದ್ದೆವು. ಎಷ್ಟೋ ದಿನಗಳವರೆಗೆ, ಅದನ್ನು ಬರೆದ ಕವಿ ಈಶ್ವರ ಸಣಕಲ್ಲ ಎಂಬುದೇ ಗೊತ್ತಿರಲಿಲ್ಲ.
ಮುಂದೆ ಪ್ರಜಾವಾಣಿಯ ಧಾರವಾಡ ವರದಿಗಾರನಾಗಿ ಪೇಡಾ ನಗರಿಗೆ ತೆರಳಿದಾಗ, ಈಶ್ವರ ಸಣಕಲ್ಲ ಆಗೀಗ ನೆನಪಾಗಿ ಕಾಡಿದ್ದುಂಟು. ತಮ್ಮ ಈ ಕವಿತೆಯಿಂದ ಈಶ್ವರ ಎಷ್ಟು ಜನಪ್ರಿಯರಾಗಿದ್ದರೆಂದರೆ, ಸಿಡಿಮಿಡಿಗೊಂಡ ದ.ರಾ. ಬೇಂದ್ರೆ, ’ನಾನು ಬೇಂದ್ರೆ, ಅವನು ಸಣ(ಸಣ್ಣ)ಕಲ್ಲ’ ಎಂದು ಗೇಲಿ ಮಾಡಿದ್ದೂ ಉಂಟು.
ಇಂಥ ಕುಟುಕು ಹೇಳಿಕೆ ನೀಡುವುದರಲ್ಲಿ ಬೇಂದ್ರೆ ತಮ್ಮ ಕವನಗಳಷ್ಟೇ ಸುಪ್ರಸಿದ್ಧರು ಎಂಬುದು ಬೇರೆ ಮಾತು. ಆದರೆ, ಈಶ್ವರ ಸಣಕಲ್ಲರ ಆ ಸುಪ್ರಸಿದ್ಧ ಗೀತೆ ಹತ್ತಿಪ್ಪತ್ತು ವರ್ಷಗಳ ನನ್ನ ಅಲೆದಾಟದಲ್ಲಿ ಮರೆತೇಹೋಗಿತ್ತು. ಮೊದಲ ಒಂದೆರಡು ಸಾಲುಗಳು ಮಾತ್ರ, ನಾಲಿಗೆಗೆ ಅಂಟಿದ ದ್ರವದಂತೆ ಗಟ್ಟಿಯಾಗಿ ಉಳಿದಿದ್ದವು.
ಮೊನ್ನೆ ನನ್ನ ಪುಸ್ತಕ ಸಂಗ್ರಹದಲ್ಲಿದ್ದ ಕವನ ಸಂಗ್ರಹವೊಂದನ್ನು ತಿರುವುತ್ತಿದ್ದಾಗ, ಹಠಾತ್ತನೇ ಈಶ್ವರ ಸಣಕಲ್ಲರ ಈ ಕವಿತೆ ಕಣ್ಣಿಗೆ ಬಿದ್ದಿತು. ನನಗಾದ ಆನಂದ ಹೇಳತೀರದು. ಇನ್ನೇನು ಕಂಪ್ಯೂಟರ್‌ ಆಫ್‌ ಮಾಡಿ ಮಲಗಬೇಕೆಂದು ಸಿದ್ಧನಾದವ, ಅವರ ಕವಿತೆ ಹಾಕಲೇಬೇಕು ಎಂದು ಕೂತೆ.
ಈ ಕವಿತೆ ಬಗ್ಗೆ ವಿವರಣೆ ಬರೆಯುವುದೇ ವ್ಯರ್ಥ. ಏಕೆಂದರೆ, ಎಲ್ಲವೂ ಸ್ವಯಂವೇದ್ಯ. ಸರಳ. ಸ್ಪಷ್ಟ. ನೀವೇ ಓದಿ:

ಕೋರಿಕೆ

 
ಜಗವೆಲ್ಲ ನಗುತಿರಲಿ,
ಜಗದಳವು ನನಗಿರಲಿ!
ನಾನಳಲು ಜಗವೆನ್ನನೆತ್ತಿಕೊಳದೇ?
ನಾ ನಕ್ಕು, ಜಗವಳಲು ನೋಡಬಹುದೇ?
 
ತೆರವಾಗಿ ನನ್ನೆದೆಯು,
ಧರೆಯೆದೆಯು ಉಕ್ಕಿರಲಿ!
ಧರೆಯೊಳಗೆ ತೇಲಿಸುವೆನೆನ್ನೆದೆಯನು!
ಧರೆ ಬತ್ತಿ, ಎನ್ನೆದೆಯು ಉಕ್ಕಲೇನು?
 
ಪೊಡವಿಯೈಸಿರಿವಡೆದು,
ಬಡತನವು ನನಗಿರಲಿ
ಕೈಯೊಡ್ಡೆ ಪೊಡವಿಯೆನಗಿಕ್ಕದೇನು?
ಪೊಡವಿಯೇ ಮೈಯಳಿಯೆ, ಮಾಡಲೇನು?
 
ವಿಶ್ವವನು ತುಂಬಿರುವ
ಈಶ್ವರನೆ ಅಳತೊಡಗೆ,
ಸೈತಿಡಲು, ಸೈಪಿಡಲು ಬರುವನಾವಂ?
’ಹೇ ತಂದೆ’, ಎನಲೆನ್ನನವನೆ ಕಾವಂ?
 
– ಈಶ್ವರ ಸಣಕಲ್ಲ
 
(ಪೊಡವಿ – ಭೂಮಿ; ಸೈಪು – ಪುಣ್ಯ, ಅದೃಷ್ಟ; ಸೈತು – ನೇರ, ದಿಟ್ಟ, ಸರಿ)
 
 
 

‍ಲೇಖಕರು G

26 February, 2013

9 Comments

  1. mmshaik

    nenapisiddakke thanks..!!nanngu agaag nenpige barutittu..mattomme Odide.

  2. Gopaal Wajapeyi

    ಹೌದು ಚಾಮರಾಜರೆ… ಈ ಕವಿತೆ ನಮಗೂ ಹತ್ತನೆಯ ಕ್ಲಾಸಿನ ಪಠ್ಯದಲ್ಲಿ ಇತ್ತು. ಎಂದೂ ಮರೆಯದ ಹಾಡುಗಳಲ್ಲಿ ಇದೂ ಒಂದು. ಪಾಪ, ಸಣಕಲ್ಲರು, ಸಣ್ಣ ಕಲ್ಲಿನಂತೆಯೇ ಯಾರಿಗೂ ಕಾಣದೆಯೇ ಬದುಕಿ ಬಾಳಿದವರು. ಬಹಳ ಹಿಂದೆ ಅವರ ಕುರಿತು ನಾನೊಂದು ಲೇಖನ ಬರೆದಿದ್ದೆನೆಂದು ನೆನಪು.
    ಮತ್ತೆ ಈ ಕವಿತೆಯನ್ನು ಓದಿಸಿದ್ದಕ್ಕಾಗಿ ಥ್ಯಾಂಕ್ಸ್.

  3. ರೂಪ ಹಾಸನ

    ಪ್ರಿಯ ಚಾಮರಾಜ್,
    ಇದು ನನ್ನ ಮೆಚ್ಚಿನ ಪದ್ಯವೂ ಹೌದು. ಮತ್ತೊಮ್ಮೆ ಓದಿಸಿದ್ದಕ್ಕೆ ವಂದನೆಗಳು.
    ರೂಪ

  4. -ರವಿ ಮೂರ್ನಾಡು

    ಪ್ರಕಟಿಸಿದ್ದು ಒಳ್ಳೆಯದಾಯಿತು. ಚಿನ್ನ ಮಣ್ಣೊಳಗಿದ್ದರೂ ಹೊರಗೆ ಬರುವುದೇ ಹೀಗೆ. ಅದು ಅದರ ಧ್ವನಿಯ ಶಕ್ತಿ. ನಿಮ್ಮ ಮೂಲಕ ತನ್ನಿಂತಾನೆ ಪ್ರಕಟವಾಗಿದೆ. ಈಶ್ವರ ಸಣಕಲ ಈ ಕವಿತೆಯಲ್ಲಿ ಇಲ್ಲೇ ಪದ ಕ್ಯಾನ್ವಾಸಿನಲ್ಲಿ ಜೀವಂತವಾಗಿದ್ದಾರೆ. ಕಾವ್ಯ ಪ್ರಿಯರ ಎದೆಗೆ ನುಗ್ಗಲಿ.

  5. K.V.Tirumalesh

    ಶ್ರೀ ಸವಡಿಯವರೇ,
    ಶ್ರೀ ಈಶ್ವರ ಸಣಕಲ್ಲರ ಈ ಸೊಗಸಾದ ಕವಿತೆಯನ್ನು ನೆನಪಿಗೆ ತಂದುದಕ್ಕಾಗಿ ಕೃತಜ್ಞತೆಗಳು! ನವೋದಯ ಕಾಲದಲ್ಲಿ ಇಂಥ ಎಷ್ಟೊಂದು ಕವಿತೆಗಳು ಹುಟ್ಟಿಬಂದುವು ಎನ್ನುವುದು ವಿಸ್ಮಯದ ವಿಷಯ. ಆದರೆ `ಕೋರಿಕೆ’ಯಲ್ಲಿನ ಪದಪ್ರಯೋಗ `ಜಗದಳಲು’ ಎಂದಿರಬೇಕಲ್ಲವೇ? ಅಥವಾ `ಜಗದಳುವು’ ಎಂದಿರಬಹುದು. ನಿಮ್ಮ ಪುಸ್ತಕದಲ್ಲಿ `ಜಗದಳವು’ ಎಂದೇ ಇದೆಯೇ? `ಅಳವು’ ಬೇರೆ `ಅಳಲು’ ಬೇರೆ. ಇಲ್ಲಿ ಕವಿ ಉದ್ದೇಶಿಸುವುದು ದುಃಖವನ್ನು (`ಅಳಲು’), ಅಳತೆಯನ್ನಲ್ಲ. ಟೈಪು ಮಾಡುವಾಗ ಆದ ತಪ್ಪಿರಬಹುದು.
    ನಿಮ್ಮ,
    ಕೆ.ವಿ. ತಿರುಮಲೇಶ್

  6. ರವಿ ಮೂರ್ನಾಡು

    ಅಸಾಮಾನ್ಯ ಪ್ರಾಪಂಚಿಕ ನಡೆಗಳು ಭಾವಗಳಿಗೆ ಜೀವ ತುಂಬುತ್ತಿವೆ ಇಲ್ಲಿರುವ ಲಯದ ಪಕ್ವತೆಯಲ್ಲಿ. ಮತ್ತೆ ಮತ್ತೆ ಓದಿದಷ್ಟು ವಿಶಾಲವಾಗಿ ತೆರೆದುಕೊಳ್ಳುವ ಕಡಲಿನಂತೆ. ಅರಗಿಸಿಕೊಂಡಷ್ಟು ಚುಂಬಿಸುವ ಅಲೆಗಳಂತೆ. ಮಾನ್ಯ ತಿರುಮಲೇಶ್ ಅವರ ಮಾತಿನಂತೆ ಅದು ಖಂಡಿತವಾಗಿ “ಜಗದಳಲು” .
    ಇಂತಹದ್ದೊಂದು ಪ್ರಾರ್ಥನಾ ಯೋಗ “ಸಂತ ಕವಿ”ಗೆ ಮಾತ್ರ ಸಾಧ್ಯ.
    ಈ ಕಾವ್ಯವನ್ನು ಪ್ರಥಮವಾಗಿ ಓದುತ್ತಿದ್ದೇನೆ. ಹಲವು ಪ್ರತಿಮೆಗಳು ಜೀವಂತ ಓಡಾಡಿ ಮೊರೆಯಿಡುವ ಪರಿ ಅತ್ಯಾಶ್ಚರ್ಯವೆನಿಸಿತು.

  7. ಮೂರ್ತಿ ದೇರಾಜೆ

    ಮಾನ್ಯ ಸವಡಿಯವರೆ….ತುಂಬಾ ಖುಷಿ ಆಯ್ತು…ಬಹಳ ವರ್ಷಗಳ ಹಿಂದೆ ….. ಗರ್ತಿಕೆರೆ ರಾಗಣ್ಣನವರು ಈ ಹಾಡನ್ನು ಹಾಡಿದಾಗ…. ಆನಂದವೋ…ವಿಷಾದವೋ….ತಲ್ಲಣವೋ ……..ಏನೋ ಒಂದು ಹೇಳಲಾಗದ ಭಾವ…. ಮತ್ತೆ ಮತ್ತೆ ಅವರಿಂದ ಈ ಹಾಡನ್ನು ಹಾಡಿಸಿ,ಕೇಳುತ್ತಿರುತ್ತೇನೆ….ಅದು ಆನಂದವೇ…ಎನ್ನುವುದು ಅರ್ಥವಾಗಿದೆ…………..ತುಂಬಾ Thanks ನಿಮಗೆ…ಆ ಹಾಡಿನ ಲಿಂಕ್ ಇಲ್ಲಿದೆ….http://www.divshare.com/download/23789832-a4f –ಮೂರ್ತಿದೇರಾಜೆ

  8. savitri

    ಈ ಪದ್ಯದ ಮೊದಲ ಎರಡು ಸಾಲುಗಳು ಯಾವಾಗಿನಿಂದಲೋ ನನ್ನ ತಲೆಯಲ್ಲಿ ಹೊಕ್ಕಿದ್ದವು. ಉಳಿದ ಇಡೀ ಪದ್ಯ ಮತ್ತು ಕವಿಯ ಬಗ್ಗೆ ಏನೂ ಗೊತ್ತಿರಲಿಲ್ಲ. ಎಂಥ ಚೆಂದದ ಪದ್ಯ. ಧನ್ಯವಾದಗಳು ಸರ್!

  9. Dr B V Kambalyal

    Wonderfull & meaningfull poem which I used to sing in my childhood.I am now 80 plus years old My synceer thanks to great & umble poet Ishwar Sanakallaji.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading