ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಗದೀಶ್ ಕೊಪ್ಪ ಅವರ ’ಪುತ್ರಶೋಕ’ ಬಿಡುಗಡೆ

ಜಗದೀಶ್ ಕೊಪ್ಪ ಅವರ ಈ ಪುಸ್ತಕ ಭಾನುವಾರ ಬಿಡುಗಡೆಯಾಗಲಿದೆ

ಪುಸ್ತಕದ ಆಹ್ವಾನ, ಮುಖ ಪುಟ ಮತ್ತು ಒಂದು ಅಧ್ಯಾಯ ಅವಧಿ ಓದುಗರಿಗಾಗಿ

ಅಧ್ಯಾಯ-1

ಕತ್ತಲ ಹಾದಿಯಲ್ಲಿ ಕನಸುಗಳ ಅರಸುತ್ತಾ..
ಅದು 1976 ಮಾರ್ಚ್ ಹತ್ತರ ದಿನಾಂಕ. ಕೇರಳದ ರಾಜಧಾನಿ ತಿರುವನಂತಪುರದ ಮನಮೋಹನ ಪ್ಯಾಲೆಸ್ ಎಂಬ ಗೃಹ ಸಚಿವರ ನಿವಾಸದಲ್ಲಿ ನೀರವ ಮೌನ ಆವರಿಸಿತ್ತು. ಅಲ್ಲಿನ ಪರಿಸರ, ದೇಶದೆಲ್ಲೆಡೆ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ಕರಾಳ ಛಾಯೆ ಈ ಐತಿಹಾಸಿಕ ನಿವಾಸದ ಮೇಲೂ ಕವಿದಿರಬಹುದೇನೊ ಎಂಬಂತಿತ್ತು. ಆದರೆ, ಖಾಕಿ ಸಮವಸ್ತ್ರ ಧರಿಸಿದ ಪೊಲೀಸರು ಮಾತ್ರ ಅಲ್ಲಿ ಕಾಣುತ್ತಿರಲಿಲ್ಲ.
ಆ ದಿನ ಗೃಹಸಚಿವರಾಗಿದ್ದ ಕೆ.ಕರುಣಾಕರನ್ರವರು ನಮ್ಮನ್ನು ಹೆಚ್ಚು ಹೊತ್ತು ಕಾಯಿಸಲಿಲ್ಲ. ಕಛೇರಿಯ ಕೊಠಡಿಯಲ್ಲಿ ಅವರನ್ನು ಕಾಣಲು ನಮಗೆ ಅನುಮತಿ ದೊರೆಯಿತು. ಇದು ನನ್ನ ಪಾಲಿಗೆ ನ್ಯಾಯವನ್ನು ಅರಸಿ ತಟ್ಟುತ್ತಿರುವ ನಾಡಿನ ದೊರೆಯ ಕಟ್ಟ ಕಡೆಯ ಮನೆಯ ಬಾಗಿಲಾಗಿತ್ತು. ಕಾಣೆಯಾದ ನನ್ನ ಮಗನನ್ನು ಅರಸುತ್ತಾ ನ್ಯಾಯ ಕೇಳಲು ನಾನು ಗೃಹ ಸಚಿವರ ಮನೆಯ ಅಂಗಳಕ್ಕೆ ಕಾಲಿಟ್ಟಿದ್ದೆ. ಕ್ಯಾಲಿಕಟ್ ನಗರದ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ಪದವಿಯಲ್ಲಿದ್ದ ನನ್ನ ಮಗ ಪಿ. ರಾಜನ್ನನ್ನು ಪೊಲೀಸರು ಕಾಲೇಜಿನ ಮುಂಭಾಗದ ಗೇಟ್ ಬಳಿ ಬಂಧಿಸಿ ವಿಚಾರಣೆಗಾಗಿ ಕೊಂಡೊಯ್ದಿದ್ದರು. ಈ ಸಂಬಂಧ ಗೃಹ ಸಚಿವ ಕೆ.ಕರುಣಾಕರನ್ರವರನ್ನು ಕಾಣಲು ಅವರ ನಿವಾಸಕ್ಕೆ ನನ್ನ ಇಬ್ಬರು ಆತ್ಮೀಯರೊಡನೆ ಹೋಗಿದ್ದೆ. ಅವರಲ್ಲಿ ಒಬ್ಬ ನನ್ನ ಮಾಜಿ ವಿದ್ಯಾಥರ್ಿ ಸುರೇಂದ್ರನ್ ಹಾಗೂ ಇನ್ನೊಬ್ಬರು, ಅವನ ಗೆಳೆಯರಾದ ಪ್ರೊ. ವೆನ್ನಲ ಎನರ್ಾಕುಲಂ. ಪ್ರೊ. ವೆನ್ನಲರವರಿಗೆ ಕರುಣಾಕರನ್ ಮತ್ತು ಕುಟುಂಬದವರು ತೀರಾ ಆತ್ಮೀಯರಾಗಿದ್ದರು.
ನಾನು ಮತ್ತು ನನ್ನ ಶಿಷ್ಯ ಸುರೇಂದ್ರನ್ ಎನರ್ಾಕುಲಂ ತಲುಪುವ ಉದ್ದೇಶದಿಂದ ಹಿಂದಿನ ಸಂಜೆ ಕ್ಯಾಲಿಕಟ್ ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸಿದ್ದೆವು. ಬೆಳಗಿನ ಜಾವ ಎರಡು ಗಂಟೆಗೆ ಎರ್ನಾಕುಲಂ ರೈಲು ನಿಲ್ದಾಣ ತಲುಪಿದ ನಾವಿಬ್ಬರೂ ಬೆಳಕು ಹರಿಯುವವರೆಗೂ ಅಲ್ಲಿನ ಸಿಮೆಂಟ್ ಬೆಂಚಿನ ಮೇಲೆ ವಿಶ್ರಾಂತಿ ಪಡೆದವು. ಒಂದೇ ಸಮನೆ ದಾಳಿಯಿಡುತ್ತಿದ್ದ ಸೊಳ್ಳೆಗಳು ಹಾಗೂ ಬೀಸುತ್ತಿದ್ದ ತಣ್ಣನೆಯ ಶೀತಗಾಳಿಯ ನಡುವೆ ನಾನು ಮತ್ತು ಶಿಷ್ಯ ಸುರೇಂದ್ರನ್ ಸೂರ್ಯನ ಬೆಳಕಿಗಾಗಿ ನಿಲ್ದಾಣದಲ್ಲಿ ಕಾಯುವುದು ಅನಿವಾರ್ಯವಾಗಿತ್ತು. ಅಲ್ಲಿನ ಚಳಿಗಾಳಿಯ ನಡುವೆಯೂ ನನ್ನ ಒಡಲೊಳಗೆ ಅಗ್ನಿ ಪರ್ವತವೊಂದು ಬಾಯಿ ತೆರೆದಿತ್ತು. ನಾನು ಒಳಗೊಳಗೆ ಬೇಯುತ್ತಿದ್ದೆ. ಎನರ್ಾಕುಲಂ ನಗರದ ಸಮೀಪ ಕೇವಲ ನಾಲ್ಕು ಕಿಲೋಮೀಟರ್ ಅಂತರದಲ್ಲಿ ನನ್ನ ಮನೆಯಿತ್ತು. ನನ್ನ ಮಗನ ತಾಯಿ ಮತ್ತು ಅವನ ಸಹೋದರಿಯರು ಆ ಮನೆಯೊಳಗೆ ತಣ್ಣಗೆ ನಿದ್ರಿಸುತ್ತಿದ್ದರು. ಮಗನ ಬಂಧನದ ಸುದ್ಧಿಯನ್ನು ನಾನು ಮನೆಯಲ್ಲಿ ಪತ್ನಿಗಾಗಲಿ ಅಥವ ಹೆಣ್ಣು ಮಕ್ಕಳಿಗಾಗಲಿ ತಿಳಿಸಿರಲಿಲ್ಲ.

ಬೆಳಕರಿದ ತಕ್ಷಣ ನಾನು ಮತ್ತು ಸುರೇಂದ್ರನ್, ಎನರ್ಾಕುಲಂ ನಗರದಲ್ಲಿದ್ದ ಪ್ರೊ. ವೆನ್ನೆಲ ಅವರ ಮನೆಗೆ ಹೋದೆವು. ನನ್ನ ಮಗನನ್ನು ಪೊಲೀಸರು ಬಂಧಿಸಿದ ನಂತರ ಅವನು ಕಾಣೆಯಾಗಿರುವುದರ ಬಗ್ಗೆೆ ನಾನು ಅವರಿಗೆ ವಿವರಿಸಿದೆ. ನನ್ನ ಮಗನ ಸಾಂಸ್ಕೃತಿಕ ಚಟವಟಿಕೆಗಳ ಕುರಿತು ಕೇಳಿ ತಿಳಿದಿದ್ದ ಅವರಿಗೂ ಸಹ ರಾಜನ್ ನಾಪತ್ತೆಯಾದ ವಿಷಯ ಚಿಂತೆಗೀಡುಮಾಡಿತು. ಪ್ರೊ. ವೆನ್ನೆಲ, ಕೆ.ಕರುಣಾಕರನ್ ಅವರ ಕುಟುಂಬಕ್ಕೆ ತೀರಾ ಹತ್ತಿರವಾಗಿದ್ದ ಕಾರಣ, ಅವರ ಮನೆಗೆ ಯಾವುದೇ ಅನುಮತಿಯಿಲ್ಲದೆ ಹೋಗಬಹುದಾದ ಹಾಗೂ ಅವರ ನಿವಾಸದ ಎಲ್ಲಾ ಕೋಣೆಗಳಲ್ಲಿ ಮುಕ್ತವಾಗಿ ತಿರುಗಾಡಬಲ್ಲ ವ್ಯಕ್ತಿಯಾಗಿದ್ದರು. ಕರುಣಾಕರನ್ ಅವರ ಪತ್ನಿ ಶ್ರೀಮತಿ ಕಳ್ಳಿನಕುಟ್ಟಿ ಅಮ್ಮ ಮತ್ತು ಪ್ರೊ. ವೆನ್ನೆಲಾ ಅವರ ಸಂಬಂಧ, ಸಹೋದರ-ಸಹೋದರಿಯ ಸಂಬಂಧದ ರೀತಿಯಲ್ಲಿ ಇತ್ತು. ಹೀಗಾಗಿ ಅವರು ಕೂಡಲೆ, ನಮ್ಮನ್ನು ತಿರುವನಂತಪುರಕ್ಕೆ ಕರೆದುಕೊಂಡು ಹೋಗಿ ಕರುಣಾಕರನ್ ಅವರನ್ನು ಭೇಟಿ ಮಾಡಿಸಿದರು.
ಕೆ. ಕರುಣಾಕರನ್, ತಮ್ಮ ನಿವಾಸದ ಕಛೇರಿಯಲ್ಲಿ ತೀರಾ ಆತ್ಮೀಯವಾಗಿ, ಮುಖದ ತುಂಬಾ ನಗೆ ತಂದುಕೊಂಡು ನಮ್ಮನ್ನೆಲ್ಲಾ ಬರಮಾಡಿಕೊಂಡರು ಆದರೆ, ನನ್ನನ್ನು ನೋಡುತ್ತಿದ್ದಂತೆ ಅವರ ಮುಖದ ಮೇಲಿದ್ದ ಮಂದಹಾಸ ಕಳೆಗುಂದತೊಡಗಿತು ಅಥವಾ ಹಾಗೆ ನಾನು ಭ್ರಮಿಸಿದೆನೋ? ಗೊತ್ತಿಲ್ಲ. ಅವರು ನನ್ನನ್ನು ಬರಸೆಳೆದು ಅಪ್ಪಿಕೊಂಡು ನಂತರ ಕೈ ಹಿಡಿದುಕೊಂಡು ಈ ವಿಷಯವನ್ನು ನೀವು ನನಗೆ ಮೊದಲೆ ಏಕೆ ತಿಳಿಸಲಿಲ್ಲ? ಎಂದು ಪ್ರಶ್ನಿಸಿದರು. ಯೋಚಿಸಬೇಡಿ, ನಿಮ್ಮ ಮಗನ ಯೋಗಕ್ಷೇಮ ನನ್ನ ಪಾಲಿಗಿರಲಿಎಂದು ಅವರು ಹೇಳುತ್ತಿದ್ದಂತೆ ನನ್ನ ಎದೆಯೊಳಗೆ ಬತ್ತಿಹೋಗಿದ್ದ ಆಸೆಯ ಬಳ್ಳಿಯೊಂದು ಚಿಗುರತೊಡಗಿತು.
ರಾಜನ್ ಎನ್ನುವ ಹೆಸರು ಕೇಳಿದ್ದೀನಿ, ಈ ಹೆಸರು ನನಗೆ ಪರಿಚಿತವಾದ ಹೆಸರು ಅನಿಸುತ್ತಿದೆ. ಆತ ಈಗ ತುಂಬಾ ತೊಂದರೆಯಲ್ಲಿದ್ದಾನೆ ಅಂತಾ ಕಾಣುತ್ತೆೆ ಎಂದು ಕರುಣಾಕರನ್ ತಮ್ಮ ಮಾತು ಮುಂದುವರಿಸುತ್ತಿದ್ದಾಗ, ಅವರ ಮುಂದೆ ನಿಂತಿದ್ದ ನಾನು, ನನ್ನ ಎರಡು ಕೈಗಳನ್ನು ಜೋಡಿಸಿ ಸಹಾಯ ಮಾಡುವಂತೆ ದೀನನಾಗಿ ಬೇಡಿಕೊಂಡೆ. ನನ್ನ ಕಣ್ಣಾಲಿಗಳು ತುಂಬಿ, ಕೆನ್ನೆಗಳ ಮೇಲೆ ಕಣ್ಣೀರು ಹರಿಯತೊಡಗಿದವು.
ಗದ್ಗದಿತ ಧ್ವನಿಯಲ್ಲಿ ನಾನು ಮಾತು ಮುಂದುವರಿಸಿದೆ.
ನನ್ನ ಮಗ ರಾಜನ್ಗೆ ಅಂತಹ ಧೈರ್ಯವಿಲ್ಲ. ಕ್ಯಾಲಿಕಟ್ ಹೊರ ವಲಯದಲ್ಲಿದ್ದ ಕಯನ್ನ ಪೊಲೀಸ್ ಠಾಣೆಗೆ ನಕ್ಸಲ್ ಉಗ್ರರು ದಾಳಿ ನಡೆಸಿ, ಬಂದೂಕಗಳನ್ನು ಅಪಹರಿಸಿದ ಪೆಬ್ರವರಿ 28 ರ ರಾತ್ರಿ ನನ್ನ ಮಗ ರಾಜನ್, ಫರೂಕಿ ಎಂಬ ಊರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಸ್ಪಧರ್ೆಯಲ್ಲಿ ಪಾಲ್ಗೊಂಡಿದ್ದ. ಅವನು, ಛಾತಮಂಗಲಂನ ರೀಜನಲ್ ಇಂಜಿನಿಯರಿಂಗ್ ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿಯಾಗಿದ್ದಾನೆ ಎಂದೆ.
ನನ್ನ ಭುಜದ ಮೇಲೆ ಕೈ ಹಾಕಿ ಸಂತೈಸುವ ಧ್ವನಿಯಲ್ಲಿ ಮಾತನಾಡತೊಡಗಿದ ಕರುಣಾಕರನ್, ನಾನು ಈ ಬಗ್ಗೆ ವಿಚಾರಿಸುತ್ತೇನೆ, ನನ್ನ ಕೈಲಾದ ಸಹಾಯ ಮಾಡುತ್ತೇನೆ, ನಮ್ಮಗಳ ಈ ಸಂಬಂಧದಲ್ಲಿ ಇದನ್ನೂ ಮಾಡದಿದ್ದರೆ ಹೇಗೆ ಎಂದರು.
ಪುನಃ ಎರಡು ಹಸ್ತಗಳನ್ನು ಜೋಡಿಸಿ, ನನ್ನ ಹಣೆಗೆ ಒತ್ತಿಕೊಂಡು, ಶಿರಬಾಗಿ ಅವರಿಗೆ ನಮಸ್ಕರಿಸಿದೆ. ಗೃಹಸಚಿವರ ವೈಭವಯುತ ಅರಮನೆಯಂತಹ ಆ ಬಂಗಲೆಯ ಮೇಲೆ ಬೀಳುತ್ತಿದ್ದ ಸೂರ್ಯನ ಬೆಳಕಿನಿಂದಾಗಿ ನನ್ನ ಕಣ್ಣುಗಳು ಮಂಜಾಗತೊಡಗಿದವು. ಇದು ಭವಿಷ್ಯದಲ್ಲಿ ನನ್ನ ಬದುಕಿಗೆ ಆವರಿಸಿಕೊಳ್ಳುವ ಕತ್ತಲೆಯ ಸೂಚನೆಯಂತಿತ್ತು ಆದರೆ. ಆ ದಿನ ಅದು ನನ್ನ ಅರಿವಿಗೆ ಬರಲಿಲ್ಲ
1976ರ ಫೆಬ್ರವರಿ 26 ರಂದು ನಾನು ನನ್ನ ಮಗನನ್ನು ಕೊನೆಯಬಾರಿಗೆ ಭೇಟಿ ಮಾಡಿದ್ದೆ. ಆತ ಕ್ಯಾಲಿಕಟ್ ನಗರದ ಹೊರವಲಯದ ಮೈಸೂರು ರಸ್ತೆಯಲ್ಲಿ ಮುವತ್ತು ಕಿಲೊಮೀಟರ್ ದೂರದಲ್ಲಿದ್ದ ಛಾತಮಂಗಲಂ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದ. ನಾನು ಕ್ಯಾಲಿಕಟ್ ನಗರದ ಸಕರ್ಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಹಿಂದಿ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಾ, ಜನರಲ್ ಹಾಸ್ಪಿಟಲ್ ಎದುರುಗಿನ ಕೇರಳ ಭವನ್ ಎಂಬ ಲಾಡ್ಜ್ನಲ್ಲಿ ವಾಸವಾಗಿದ್ದುಕೊಂಡು ವಾರಾಂತ್ಯದಲ್ಲಿ ಎನರ್ಾಕುಲಂ ಸಮೀಪದ ನನ್ನ ಮನೆಗೆ ಹೋಗಿ ಬರುತ್ತಿದ್ದೆ. ರಾಜನ್ ಕಾಲೇಜಿನ ಹಾಸ್ಟಲ್ನಲ್ಲಿ ವಾಸವಾಗಿದ್ದ. ಹಣದ ಅವಶ್ಯಕತೆ ಇದ್ದಾಗ ಮಾತ್ರ ಸಂಜೆ ವೇಳೆಯಲ್ಲಿ ನನ್ನ ರೂಮಿಗೆ ಬಂದು ಹಣ ಪಡೆದು ಹೋಗುತ್ತಿದ್ದ. 26 ರ ಸಂಜೆ ಅವನು ರೂಮಿಗೆ ಬಂದಿದ್ದಾಗ, ಮುಂದಿನ ವಾರ ರಜೆಗೆ ಮನೆಗೆ ಬರುವಂತೆ ಆತನಿಗೆ ತಿಳಿಸಿದ್ದೆ. ಆತ ಊಂ ಎಂದು ತಲೆಯಾಡಿಸಿದ್ದ. ಅದು ನನ್ನ ಮತ್ತು ಅವನ ಕೊನೆಯ ಭೇಟಿಯಾಯಿತು.
ನಾನು ಮೂಲತಃ ತ್ರಿಶೂರು ಜಿಲ್ಲೆಯ ಚೆಪು ಬಳಿಯ ತಿರುವಲ್ಲಕ್ಕಾವು ಎಂಬ ಹಳ್ಳಿಯವನು. ಅಲ್ಲಿದ್ದ ಪಿತ್ರಾಜರ್ಿತ ಆಸ್ತಿಯನ್ನು ಮಾರಾಟ ಮಾಡಿ ಎನರ್ಾಕುಲಂ ನಗರದ ಹೊರವಲಯದ ಪರಂಭಿತಹಾರ ಎಂಬ ರಸ್ತೆಯಲ್ಲಿ ಸ್ವಂತದ ಮನೆಯೊಂದನ್ನು ನಿಮರ್ಿಸಿಕೊಂಡಿದ್ದೆ. ನಾನು ಮತ್ತು ಪತ್ನಿ ಇಬ್ಬರೂ ಸೇರಿ ನಮ್ಮ ಹೊಸ ಮನೆಗೆ ಸೌಹಾರ್ದ ನಿಲಯ ಎಂದು ಹೆಸರಿಟ್ಟಿದ್ದೆವು. ನನ್ನ ಮನೆಯಲ್ಲಿ ನಾನು, ಪತ್ನಿ, ರಾಜನ್ ಸೇರಿದಂತೆ ನಮ್ಮ ಮೂವರು ಮಕ್ಕಳು, ಹಾಗೂ ನನ್ನ ಸಹೋದರಿ ಕೊಚಮ್ಮಣ್ಣಿ ವರಸಯುರ್ ಮತ್ತು ಆಕೆಯ ಪತಿ ಅಚ್ಯುತ ವಾರಿಯರ್ ವಾಸವಾಗಿದ್ದೆವು. ಅಚ್ಯುತವಾರಿಯರ್ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದ ಜೊತೆಗೆ ನನ್ನ ಪತ್ನಿ ರಾಧಾಳ ಸಹೋದರನಾಗಿದ್ದ.
ಮಾಚರ್್ ಒಂದರ ಬೆಳಿಗ್ಗೆ ಎಂದಿನಂತೆ ನಾನು ಹೋಟೆಲ್ ರೂಮಿನಿಂದ ಕಾಲೇಜಿಗೆ ತೆರಳಿದಾಗ, ಪೊಲೀಸರು ನನ್ನ ಮಗ ರಾಜನ್ನನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡ ವಿಷಯ ತಿಳಿಯಿತು. ಆತನ ಸಹಪಾಠಿ ಕರ್ಮಚಂದ್ರನ್ ಎಂಬಾತ ನಾನು ಕೆಲಸ ಮಾಡುತ್ತಿದ್ದ ಕಾಲೇಜಿಗೆ ದೂರವಾಣಿಯ ಮುಖಾಂತರ ವಿಷಯ ತಿಳಿಸಿದ್ದ. ಆಗ ಸುಮಾರು ಬೆಳಗಿನ ಹತ್ತು ಗಂಟೆ ಸಮಯ. ಕೂಡಲೇ ನಾನು ಕಾಲೇಜಿನ ಪ್ರಾಂಶುಪಾಲರ ಅನುಮತಿ ಪಡೆದು ರಾಜನ್ ಓದುತ್ತಿದ್ದ ಇಂಜಿನಿಯರಿಂಗ್ ಕಾಲೇಜಿನ ಬಳಿ ತೆರಳಿದೆ.
ಛಾತಮಂಗಲಂ ತಲುಪುವ ವೇಳೆಗೆ ಇಮಜಿನಿಯರಿಂಗ್ ಕಾಲೇಜಿನಲ್ಲಿ ಸ್ಮಶಾನ ಮೌನ ಆವರಿಸಿತ್ತು. ಮಾಚರ್್ ಒಂದರ ಬೆಳಿಗ್ಗೆ ತನ್ನ ಹಾಸ್ಟಲ್ನಿಂದ, ಕಾಲೇಜಿಗೆ ತೆರಳಲು ಗೇಟ್ ಬಳಿ ಬಂದಾಗ, ರಾಜನ್ಗಾಗಿ ಕಾಯುತ್ತಿದ್ದ ಪೊಲೀಸರು ಆತನನ್ನು ಬಂಧಿಸಿ ಕರೆದೊಯಿದ್ದರು. ಆತ ಹಿಂದಿನ ರಾತ್ರಿ ಫರೂಕಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪಧರ್ೆಯಲ್ಲಿ ಭಾಗವಹಿಸಿ ಬೆಳಗಿನ ಜಾವ ಕ್ಯಾಲಿಕಟ್ ನಗರಕ್ಕೆ ಬಂದಿದ್ದ. ನನಗೆ ತಿಳಿದು ಬಂದ ಮಾಹಿತಿ ಪ್ರಕಾರ, ಆ ದಿನ ಬೆಳಗ್ಗೆ 7-30 ರಲ್ಲಿ ರಾಜನ್ನನ್ನು ಬಂಧಿಸಿ ಕ್ಯಾಲಿಕಟ್ ನಗರಕ್ಕೆ ಕೊಂಡೊಯ್ದ ಪೊಲೀಸರು, ಆನಂತರ ಆತನನ್ನು ವಿಚಾರಣೆಗಾಗಿ ಕೇರಳ ಎಲೆಕ್ಟ್ರಿಕಲ್ ಬೋಡರ್್ ಕಚೇರಿ ಹಿಂಭಾಗ ನಿರ್ಜನ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದ ಕಕ್ಕಾಯಂ ಎಂಬ ಕ್ಯಾಂಪಿಗೆ ಕರೆದುಕೊಂಡು ಹೋಗಿದ್ದರು. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಸೇರಿದಂತೆ ಬಹಳ ಮಂದಿ ವಿದ್ಯಾಥರ್ಿಗಳು ಕ್ಯಾಂಪಿನ ಬಳಿ ತೆರಳುವುದು ಬೇಡ ಎಂದು ನನಗೆ ಸಲಹೆ ನೀಡಿದರು. ಅಲ್ಲಿಗೆ ಹೋದರೆ, ಏನೂ ಪ್ರಯೋಜನವಾಗಲಾರದು ಎಂಬುದು ಅವರುಗಳ ಆಲೋಚನೆಯಾಗಿತ್ತು. ಆದರೆ, ನಾನು ಕಕ್ಕಾಯಂ ಕ್ಯಾಂಪಿನತ್ತ ಹೆಜ್ಜೆ ಹಾಕತೊಡಗಿದೆ.
ಕ್ಯಾಲಿಕಟ್ ನಗರದ ಕೇರಳ ವಿದ್ಯುತ್ ನಿಗಮದ ಕಚೇರಿಯ ಹಿಂದೆ ಅನತಿ ದೂರದಲ್ಲಿ ನಿರ್ಜನ ಪ್ರದೇಶದ ಕೊಳವೊಂದರ ಸಮೀಪ ಕಲ್ನಾರು ಛಾವಣಿಯನ್ನು ಹೊದಿಸಲಾಗಿದ್ದ ಹಳೆಯ ಗೋದಾಮಿನ ಕೋಣೆಯೊಂದನ್ನು ಅರೋಪಿಗಳ ವಿಚಾರಣೆಗಾಗಿ ಕೇರಳ ಪೊಲೀಸರು ಶಿಬಿರವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಕೊಳದ ಮೇಲೆ ಅಳವಡಿಸಲಾಗಿದ್ದ ತಾತ್ಕಾಲಿಕ ಬಿದಿರಿನ ಸೇತುವೆಯನ್ನು ದಾಟಿ ಅಲ್ಲಿಗೆ ಹೋಗಬೇಕಾಗಿತ್ತು. ಕ್ಯಾಂಪಿನ ಕೊಠಡಿಯ ಮುಂದೆ ರೈಫಲ್ ಹಿಡಿದು ಕಾವಲು ಕಾಯುತ್ತಿದ್ದ ಪೊಲೀಸ್ ಪೇದೆಯೊಬ್ಬನ ಬಳಿ ತೆರಳಿ, ನನ್ನ ಮಗ ರಾಜನ್ ಕುರಿತು ವಿಚಾರಿಸಿದೆ. ತುಂಬಾ ಗಂಭೀರವಾಗಿದ್ದ ಆ ವ್ಯಕ್ತಿ ನನ್ನ ಪ್ರಶ್ನೆಗೆ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ನೇರವಾಗಿ ಕೊಠಡಿಯೊಳಕ್ಕೆ ತೆರಳಿದ ಆತ, ನಂತರ ವಾಪಸ್ ಬಂದು ಒಳಕ್ಕೆ ಪ್ರವೇಶವಿಲ್ಲ ಎಂದಷ್ಟೆ ಉತ್ತರಿಸಿದ ಅಲ್ಲದೆ, ನಿಮ್ಮ ಮಗ ರಾಜನ್ ಕ್ಯಾಂಪ್ನ ಒಳಗಡೆ ಸುರಕ್ಷಿತವಾಗಿ ಇದ್ದಾನೆ ಎಂದು ಸಹ ನುಡಿದ. ಆತನ ಮಾತು ಕೇಳುತ್ತಿದ್ದಂತೆ ಮನಸ್ಸಿಗೆ ಸಮಾಧಾನವಾಯಿತು. ನನ್ನ ಪರಿಚಯ ತಿಳಿಸಿ, ನನ್ನ ಮಗನನ್ನು ಭೇಟಿಯಾಗಬೇಕು ಎಂದು ಅವನಲ್ಲಿ ಪ್ರಾರ್ಥಿಸಿದೆ.
ಆತ ನನ್ನ ವಿನಂತಿಗೆ ಯಾವ ಪ್ರತಿಕ್ರಿಯೆಯನ್ನು ನೀಡದೆ, ಸುಮ್ಮನೆ ಕಲ್ಲಿನಂತೆ ನಿಂತುಬಿಟ್ಟ. ನಾನು ತಾಳ್ಮೆ ಕಳೆದುಕೊಂಡವನಂತೆ ಜೋರಾಗಿ ಸಿಟ್ಟಿನಿಂದ ಮಾತನಾಡ ತೊಡಗಿದೆ. ನನ್ನ ಈ ವರ್ತನೆಗೆ ಬೆಚ್ಚಿದ ಪೊಲೀಸ್ ಪೇದೆ ಶಾಂತವಾದ ದ್ವನಿಯಲ್ಲಿ ಕ್ಷಮಿಸಿ ನಾನು ನಿಮಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಉತ್ತರಿಸಿದ. ಆ ಸಂದರ್ಭದಲ್ಲಿ ಆತನ ಮುಖ ಸಹ ಬಾಡತೊಡಗಿತು. ಕೆಲವು ನಿಮಿಷಗಳು ಕಳೆದ ನಂತರ ನಾನು ಮತ್ತೊಮ್ಮೆ ಅವನಲ್ಲಿ ದಯವಿಟ್ಟು ಜಯರಾಮ್ ಪಡಿಕ್ಕಲ್ ಎಂಬ ಅಧಿಕಾರಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡು ಎಂದು ಅಂಗಲಾಚಿದೆ. ಜಯರಾಮ್ ಪಡಿಕ್ಕಲ್ ಎಂಬ ಅಧಿಕಾರಿ ಕ್ಯಾಲಿಕಟ್ ನಗರ ಮತ್ತು ಜಿಲ್ಲೆಯ ಕ್ರೈಮ್ ಬ್ರ್ಯಾಂಚಿನ ಡೆಪ್ಯೂಟಿ ಜನರಲ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಾ, ಕಕ್ಕಾಯಂ ವಿಚಾರಣಾ ಕ್ಯಾಂಪಿನ ಅಧಿಕೃತ ಸಾಮಂತನಾಗಿದ್ದ.
ನಾನು ಆ ಪೊಲೀಸ್ ಪೇದೆಯ ಎದುರು ಸ್ಪಧರ್ೆಗೆ ಬಿದ್ದವನಂತೆ, ಹಠ ಹಿಡಿದು ನಿಲ್ಲುವ ಮಗುವಿನ ಹಾಗೆ ನಿಂತುಬಿಟ್ಟೆ. ಆತ ನನ್ನ ಮುಖ ನೋಡಲು ನಿರಾಕರಿಸಿದವನಂತೆ ಅತ್ತ ಇತ್ತ ನೋಡುತ್ತಾ, ಬಲಗೈಯಲ್ಲಿ ರೈಫಲ್ ಹಿಡಿದು ನಿಂತಿದ್ದ. ನಾನು ಕ್ಯಾಂಪಿನ ಹೊರಗೆ ನಿಂತಿದ್ದ ವೇಳೆಯಲ್ಲಿ ಒಳಗಡೆ ಪೊಲೀಸರ ಚಿತ್ರಹಿಂಸೆಯನ್ನು ತಾಳಲಾರದೆ, ವಿಚಾರಣಾ ಕೈದಿಗಳು ಗೋಳಾಡುತ್ತಿದ್ದ ಶಬ್ಧ ಅಸ್ಪಷ್ಟವಾಗಿ ನನ್ನ ಕಿವಿಗೆ ಬೀಳುತ್ತಿತ್ತು. ಹಲವು ನಿಮಿಷಗಳ ನಂತರ ನಿರಾಸೆಯಿಂದ ನಾನು ಹಿಂತಿರುಗಲು ಕೊಳದ ಮೇಲಿನ ಸೇತುವೆ ಬಳಿ ತೆರಳಿದಾಗ, ಮಗ ರಾಜನ್ ಅಪ್ಪಾ ಎಂದು ಆರ್ತನಾದದಲ್ಲಿ ಕೂಗಿದಂತಾಗಿ ತಕ್ಷಣ ಹಿಂತಿರುಗಿ ಕ್ಯಾಂಪ್ನತ್ತ ನೋಡಿದೆ, ನನ್ನನ್ನೆ ದೃಷ್ಟಿಸಿ ನೋಡುತ್ತಿದ್ದ ಪೊಲೀಸ್ ಪೇದೆ, ನನ್ನ ನೋಟವನ್ನು ಎದುರಿಸಲಾಗದೆ, ಬೇರೆ ಕಡೆ ಮುಖ ಮಾಡಿದ.
ನಾನು ಕೇರಳದ ಗೃಹ ಸಚಿವರಾಗಿದ್ದ ಕೆ.ಕರುಣಾಕರನ್ ಅವರನ್ನು ಭೇಟಿ ಮಾಡಿ ಬಂದ ನಂತರ, ಒಂದು ದಿನ ಮಾತೃಭೂಮಿ ದಿನಪತ್ರಿಕೆಯ ವರದಿಗಾರ ಸದರಿಕೊಯಾ ಎಂಬಾತ ನನಗೆ ದೂರವಾಣಿ ಕರೆಮಾಡಿದ. ಆತ ಕರುಣಾಕರನ್ ಆಪ್ತ ವಲಯದ ಪತ್ರಕರ್ತರಲ್ಲಿ ಒಬ್ಬನಾಗಿದ್ದ. ಈ ಹಿಂದೆ ಆತನನ್ನು ಮೂರು ಬಾರಿ ಭೇಟಿ ಮಾಡಿ ನನ್ನ ಮಗನ ಬಗ್ಗೆ ತಿಳಿಯಲು ಪ್ರಯತ್ನಿಸಿದ್ದೆ. ಆದರೆ ಆತನಿಂದ ಯಾವಾಗಲೂ ರಾಜನ್ ಪೊಲೀಸರ ಕಸ್ಟಡಿಯಲ್ಲಿದ್ದಾನೆ ಎಂಬ ಸಿದ್ಧ ಉತ್ತರ ಸಿಗುತ್ತಿತ್ತು. ಆದರೆ, ಈ ಬಾರಿ ಕರೆ ಮಾಡಿದ ಆತ, ನನ್ನ ಮಗ ರಾಜನ್ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾನೆ ಎಂಬ ಮಾಹಿತಿ ನೀಡಿದ. ಇದು ನಿನಗೆ ಹೇಗೆ ತಿಳಿಯಿತು? ಎಂಬ ನನ್ನ ಪ್ರಶ್ನೆಗೆ ಆತ ಬಲ್ಲ ಮೂಲಗಳಿಂದ ಮಾಹಿತಿ ಸಂಗ್ರಹಿಸಿದೆ ಎಂದಷ್ಟೆ ಉತ್ತರಿಸಿದ. ಆತನ ಮಾತು ಕಗ್ಗತ್ತಲಿನಲ್ಲಿ ಬೆಳಕಿನ ಬೆಳ್ಳಿಗೆರೆಯೊಂದನ್ನು ಕಂಡಂತೆ ನನಗೆ ಭಾಸವಾಗತೊಡಗಿತು. ಮಗನನ್ನು ಕಾಣುವ ತವಕದೊಂದಿಗೆ ತಪ್ಪಿಸಿಕೊಂಡಿದ್ದಾನೆ ಎನ್ನಲಾದ ನನ್ನ ಮಗ ರಾಜನ್ಗಾಗಿ, ನಾನು ಕ್ಯಾಲಿಕಟ್, ಎನರ್ಾಕುಲಂ, ತ್ರಿಶೂರ್ ಹೀಗೆ ಎಲ್ಲೆಡೆ ಹುಡುಕಾಡತೊಡಗಿದೆ.
ಈ ನಡುವೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ವಹಾಬುದ್ಧೀನ್ ತಮ್ಮ ಸಹೋದ್ಯೊಗಿ ಪ್ರೊಫೆಸರ್ ಒಬ್ಬರ ಜೊತೆ ಕಕ್ಕಾಯಂ ಪೊಲೀಸ್ ಕ್ಯಾಂಪಿಗೆ ತೆರಳಿ ಪೊಲೀಸ್ ಅಧಿಕಾರಿ ಜಯರಾಮ ಪಡಿಕ್ಕಲ್ನನ್ನು ಭೇಟಿ ಮಾಡಿ ಬಂದರು. ಆದರೆ, ಕಾಲೇಜಿನ ಪ್ರೊಫೆಸರ್ಗಳು ಎಂಬ ಕನಿಷ್ಟ ಸೌಜನ್ಯವನ್ನೂ ತೋರದೆ ಅತ್ಯಂತ ಕಟುವಾಗಿ ಮತ್ತು ಕೆಟ್ಟದಾಗಿ ನಡೆದುಕೊಂಡ ಆತನ ವರ್ತನೆಯ ಬಗ್ಗೆ ಇಬ್ಬರೂ ಬೇಸರಗೊಂಡಿದ್ದರು. ಕ್ಯಾಂಪಿನ ಒಳಕ್ಕೆ ತಮ್ಮ ಪ್ರೊಫೆಸರ್ ಬಂದಿರುವುದನ್ನು ನೋಡಿದ ವಿದ್ಯಾಥರ್ಿಗಳು ಕೊಂಚ ಧೈರ್ಯ ತಂದುಕೊಂಡರು. ಆ ವಿದ್ಯಾಥರ್ಿಗಳ ನಡುವೆ ರಾಜನ್ ಇರಲಿಲ್ಲ ಎಂಬುದು ಸಹ ನನಗೆ ಆನಂತರ ದೃಢಪಟ್ಟಿತು. ಹಾಗಾಗಿ ರಾಜನ್ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ ಎಂಬ ಮಾತೃಭೂಮಿ ಪತ್ರಿಕೆಯ ವರದಿಗಾರನ ಮಾತು ನನ್ನೊಳಗೆ ಹೊಸ ಆಸೆ ಮತ್ತು ಕನಸು ಚಿಗುರಲು ಸಹಕಾರಿಯಾಯಿತು.
ರಾಜನ್ ಮನೆಗೆ ಬಂದೇ ಬರುತ್ತಾನೆ ಎಂದು ದೃಢವಾಗಿ ನಂಬಿಕೊಂಡೆ. ರಾತ್ರಿಯ ವೇಳೆ ಮಗ ಹಸಿದು ಬಂದರೆ, ಊಟವಿರಲಿ ಎಂದು ಪತ್ನಿಗೆ ತಿಳಿಸಿ ಊಟ ಇಟ್ಟುಕೊಂಡು ಕಾಯುತ್ತಿದ್ದೆ. ಹಸಿರಾದ ಚಿಗುರು ಬಾಳೆ ಎಲೆಯ ಮೇಲೆ ಅವನಿಗಾಗಿ ಹರಡಿದ ಹಬೆಯಾಡುತ್ತಿದ್ದ ಬಿಸಿ ಬಿಸಿ ಅನ್ನ ಆರಿ ತಣ್ಣಗಾಯಿತೆ ವಿನಃ, ಮಗ ಮಾತ್ರ ಮನೆಗೆ ಬರಲಿಲ್ಲ. ಪ್ರತಿ ರಾತ್ರಿ ನಿದ್ದೆಗೆಟ್ಟು ಮಗನಿಗಾಗಿ ಬಾಗಿಲು ತೆರೆದು ಕಾಯುತ್ತಿದ್ದೆ. ಹೊರಗಡೆ ನಾಯಿಗಳು ಬೊಗಳುವ ಶಬ್ಧವಾದರೆ ಸಾಕು ಬಾಗಿಲ ಬಳಿ ಓಡೋಡಿ ಬರುತ್ತಿದ್ದೆ. ಎದೆಯೊಳಗೆ ಮಡುವುಗಟ್ಟಿದ ನೋವು, ನಿಟ್ಟುಸಿರು ಇವುಗಳನ್ನು ತಾಳಲಾರದೆ, ಒಮ್ಮೊಮ್ಮೆ ಅಯ್ಯೋ ಮಗನೆ ಎನ್ನುತ್ತಾ ಒಳಗೊಳಗೆ ಛೀರಿಡುತ್ತಾ ಗೋಳಿಡುತ್ತಿದ್ದೆ. ನಾನು ಮಗನ ಅಗಲಿಕೆಯ ಸಂಕಟವನ್ನು ತಾಳಲಾರದೆ ಗಟ್ಟಿಯಾಗಿ ಮನೆಯೊಳಗೆ ಅಳುವಂತಿರಲಿಲ್ಲ ಏಕೆಂದರೆ, ಮಗನ ಬಂಧನ ಸುದ್ಧಿಯನ್ನಾಗಲಿ ಅಥವಾ ನಾಪತ್ತೆಯಾದ ಸಂಗತಿಯನ್ನಾಗಲಿ ಮನೆಯಲ್ಲಿ ಮಡದಿ ಮತ್ತು ಮಕ್ಕಳಿಗೆ ತಿಳಿಸಿರಲಿಲ್ಲ. ಒಡಲೊಳಗೆ ಬಾಯಿ ತೆರೆದ ಅಗ್ನಿ ಪರ್ವತವನ್ನು ಹೊತ್ತುಕೊಂಡು, ಹೊರಗಡೆ ತಣ್ಣನೆಯ ಹಿಮಪರ್ವತದಂತೆ, ಇದ್ದುಕೊಂಡು ಬದುಕುವ ಸ್ಥಿತಿ ನನ್ನದಾಗಿತ್ತು.
 
 

‍ಲೇಖಕರು G

1 August, 2014

1 Comment

  1. vasanthn

    ಈ ಪುಸ್ತಕ ಮತ್ತೆ ಸಾಕೇತ್ ರಾಜನ್ ನಂತಹ ಹೋರಾಟಗಾರನ ನೆನಪನ್ನು ಮರುಕಳಿಸುತ್ತಿದೆ. ಈ ಪುಸ್ತಕದ ಇಂಗ್ಲೀಷ್ ಅವತರಣಿಕೆಯಲ್ಲಿ subtitle ಇಲ್ಲ.ಇಲ್ಲಿ subtitle ಏಕೆ ಕೊಡಲಾಗಿದೆ. ಇದು ಅಷ್ಟು ಸೂಕ್ತವಾದ subtitle ಅಲ್ಲ. ಇದು ಕ್ರಾಂತಿಕಾರಿ ಎಡಪಂಥೀಯ ಚಿಂತನೆಗಳ ಬಗ್ಗೆ ಒಲವಿದ್ದ ಒಬ್ಬ ಯುವಕ ಹೇಗೆ ಪೊಲೀಸರಿಂದ ಹತನಾದ ಎಂಬ ನೋವಿನ ಚಿತ್ರಣ. ಪುಸ್ತಕದ ಅನುವಾದಕರಿಗೆ ಅಭಿನಂದನೆಗಳು.
    ಸಾಕೇತ್ ರಾಜನ್ ನಂತಹ ನೈಜ ಹೋರಾಟಗಾರರ ಬಗ್ಗೆ ಕೂಡ ಇಂತಹ ಪುಸ್ತಕದ ಪ್ರಕಟಣೆಯ ಅವಶ್ಯಕತೆ ಇದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading