ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಗತ್ತು ಸೀತೆಯನ್ನು ದೇವಿ ಎನ್ನುತ್ತದೆ, ಜೀವಿಯ ನಡವಳಿಕೆಯನ್ನು ಅನೈತಿಕತೆ ಎನ್ನುತ್ತದೆ

ಚಿತ್ರಪಟ ರಾಮಾಯಣದ ಸೀತೆ ಮತ್ತು ಜನುಮದ ಜೋಡಿಯ ಜೀವಿ

ಎನ್ ಸಂಧ್ಯಾರಾಣಿ

ಉದಯವಾಣಿಯಲ್ಲಿ ಪ್ರಕಟವಾಗಿದ್ದ ಬರಹ

ಒಂದೇ ಸಮಯದಲ್ಲಿ ನೋಡಿದ ಒಂದು ನಾಟಕ ಮತ್ತು ಓದಿದ ಒಂದು ಪುಸ್ತಕ ನನ್ನನ್ನು ಕಲಕಿದ ಪರಿ ಅನನ್ಯ. ಚಿತ್ರಪಟ ನನ್ನ ಅರಿವಿನ ಮಟ್ಟದಲ್ಲಿ ಪ್ರಶ್ನೆಗಳನ್ನೇ ಎಬ್ಬಿಸಿದರೆ, ಪನ್ನಾಲಾಲ್ ಪಟೇಲರ ಪುಸ್ತಕ ನನ್ನ ಆತ್ಮವನ್ನೇ ಹಿಂಡಿತ್ತು. ಪುಸ್ತಕ ಮುಗಿಸಿ ಇಟ್ಟವಳ ಕಣ್ಣಲ್ಲಿ ನೀರಿನ ಬನಿ ನಿಲ್ಲುತ್ತಲೇ ಇಲ್ಲ… ಅಂದು ನನ್ನ ಎದೆಯೇರಿ ಕೂತ ಜೀವಿ ಈಗಲೂ ನನ್ನ ಕೈ ಬಿಟ್ಟೇ ಇಲ್ಲ…

ಮೊದಲು ನೋಡಿದ್ದು ನಾಟಕ…

ಚಿತ್ರಪಟ ರಾಮಾಯಣವನ್ನು ರಂಗದ ಮೇಲೆ ತಂದವರು ಬಿ ಜಯಶ್ರೀಯವರ ಸಾಂಗತ್ಯ ತಂಡದ ಕಲಾವಿದರು. ನಾಟಕ ಸೊಗಸಾಗಿದೆ ಎಂದು ಕೇಳಿದ್ದೆ. ಜೊತೆಗೆ ಜಯಶ್ರೀಯವರ ಸಿರಿಕಂಠದ ಆಕರ್ಷಣೆ ಬೇರೆ, ನಾಟಕದುದ್ದಕ್ಕೂ ಜೊತೆಯಾಗುವ ಚಿತ್ರಪಟಗಳು ನಾಟಕದಷ್ಟೇ ಆಕರ್ಷಣೀಯ.

ಯುದ್ಧ ಮುಗಿದಿದೆ, ರಾವಣ ಸತ್ತಿದ್ದಾನೆ, ರಾಮ – ಸೀತೆ ಅಯೋಧ್ಯೆಯಲ್ಲಿ. ಆದರೆ ಶೂರ್ಪನಖಿಯ ಯುದ್ಧ ಇನ್ನೂ ಮುಗಿದಿಲ್ಲ. ರಾಮ ಸೀತೆಯರನ್ನು ಬೇರೆ ಮಾಡಿ, ರಾಮನನ್ನು ಮದುವೆಯಾಗುವವರೆಗೂ ಅವಳ ಹಠ ತೀರುವುದಿಲ್ಲ. ಅದಕ್ಕಾಗಿ ಆಕೆ ವೇಷ ಮರೆಸಿಕೊಂಡು ಅಯೋಧ್ಯೆಗೆ ಬರುತ್ತಾಳೆ.

’ಬರೆದ ಚಿತ್ರಕ್ಕೆ ಕಣ್ಣು ಬಿಡಿಸಿದರೆ, ಆ ಚಿತ್ರಕ್ಕೆ ಜೀವ ಬರ್ತೈತಿ’ ಅಂತಾಳೆ ಸೀತೆ. ಒಂದು ಅಂಗ ಹೇಗೆ ಚಿತ್ರಕ್ಕೆ ಜೀವ ತುಂಬುತ್ತದೆಯೋ ಹಾಗೆ ಒಂದು ದೃಶ್ಯ ನಾಟಕದ ಆತ್ಮ ಎನ್ನುವುದಾದರೆ, ಅದು ಇಲ್ಲಿದೆ..

ಕೊರವಂಜಿ ವೇಷ ಹಾಕಿದ ಶೂರ್ಪನಖಿ ’ನಾನು ನಿನ್ನ ಬಾಲ್ಯದ ಗೆಳತಿ’ ಎಂದು ಹೇಳಿಕೊಂಡು ಸೀತೆಯ ಅಂತಃಪುರಕ್ಕೆ ಬರುತ್ತಾಳೆ. ಸೀತೆಯ ತವರಿನ ಮನೆಯ ಗುರುತು ಹೇಳುತ್ತಾ, ’ಆಚಿಗೆ ಸಾವಿರ ಕಂಬ, ಈಚಿಗೆ ಸಾವಿರ ಕಂಬ, ಪಾಗಾರದಾಗ ಪಾರಿಜಾತದ ಗಿಡ’ ಅಂತ ಸೀತೆಯ ಚಿತ್ತದೊಳಗೆ ಚಿತ್ರಕ್ಕಂಟಿದ ಮುಸುಕು ಸರಿಸುತ್ತಾ ಹೋಗುತ್ತಾಳೆ. ’ಪಾರಿಜಾತದ ಹೂ ಅದಾವೇನೆ’ ಎಂದು ಕೇಳುವ ಸೀತೆಯತ್ತ ತನ್ನ ಸಂಚಿಯಿಂದ ಹೂ ತೆಗೆದು ರೊಚ್ಚಿನಿಂದ ತೂರುತ್ತಾ ಹೋಗುತ್ತಾಳೆ. ’ಅಯ್ಯೋ ಹಿಂಗ ಹೂ ಚಲ್ಲಬೇಡವ್ವ, ನನ ಗಂಡ ಬಂದರೆ ಏನು ಹೇಳಲಿ’ ಎಂದು ಆತಂಕಗೊಳ್ಳುವ ಸೀತೆಯನ್ನು ಕೊರವಂಜಿ, ’ಈಗಲೂ ನಿನ್ನ ಗಂಡನಿಗೆ ಅನುಮಾನ ತೀರಿಲ್ಲವೇನೆ’ ಅಂದು ಕೇಳುತ್ತಾಳೆ. ’ಗಂಡಿನ ಮನಸ್ಸು ನೂರು ಕೋವೆಗಳ ಹುತ್ತ, ಒಮ್ಮೆ ಒಳ ಹೊಕ್ಕ ಅನುಮಾನದ ಹುಳ ಅಲ್ಲೇ ಗಿರಕಿ ಹೊಡೆಯುತ್ತದೆ….’, ಸೀತೆಯ ಸ್ವಗತ. ’ಆದ್ರ ನೀ ಅಗ್ನಿ ಹೊಕ್ಕು ಬಂದ ಪತಿವ್ರತೆ..’, ’ಅಗ್ನಿಯೂ ಪುರುಷ ಅಲ್ಲೇನ…? ಪರಪುರುಷನ ತೋಳು ತಾಕಿ ಬಂದೆ ಅಂತ ನನ್ನ ಗಂಡ ಕೇಳಲಿಲ್ಲ ಅನ್ನೋದು ನನ್ನ ಭಾಗ್ಯ ಅಂತಾಳೆ ಸೀತೆ. ಆ ಒಂದು ಮಾತಿನಲ್ಲಿನ ದನಿಯಲ್ಲಿ ಸೀತೆ, ರಾಮ ಇಬ್ಬರೂ ನಮ್ಮ ಅರಿವಿನಳವಿಗೆ ಸಿಕ್ಕಿಬಿಡುತ್ತಾರೆ. ಬೆಂಕಿ ಹಾದು ಬಂದ ಜಾನಕಿ ಈಗ ಗಂಡನೇ ದೇವರೆನ್ನುವ ಮುಗ್ಧೆಯಲ್ಲ, ಗಂಡನೂ ಮನುಷ್ಯ ಎಂದು ತಿಳಿದ ಪ್ರೌಢೆ..

ನಾಟಕದಲ್ಲಿ ಮೊದಲು ಮನಸ್ಸನ್ನು ಸೆಳೆದದ್ದು ಚಂದ್ರನಖಿಯ ಕಲ್ಪನೆ. ಹಾ ಇಲ್ಲಿ ಶೂರ್ಪನಖಿ ಕೇವಲ ಒಬ್ಬ ರಾಕ್ಷಸಿಯಲ್ಲ, ಅವಳಲ್ಲೇ ಒಬ್ಬ ಚಂದ್ರನಖಿಯೂ ಇದ್ದಾಳೆ. ಆಕೆ ಎರಡು ಹೆಣ್ಣುಗಳ ಸಾಂದ್ರ ರೂಪ. ಒಬ್ಬಾಕೆ ಸುಂದರಿ, ರಾಮನೇ ಬೆರಗಾಗುವ ತೇಜಸ್ವಿನಿ, ಕಣ್ಣು ಸೆಳೆವ ಚಂದ್ರನಖಿ. ಇನ್ನೊಬ್ಬಳು ಹೆಣ್ಣಿನ ಸಿಟ್ಟಿನ, ಛಲದ ಪ್ರತಿರೂಪ, ಶೂರ್ಪನಖಿ. ರಾಮನ ಪ್ರೇಮ ಬಯಸುವಾಗ ಆಕೆ ಚಂದ್ರನಖಿ, ರಾಮನ ನಿರಾಕರಣೆಯ ಆಘಾತದಿಂದ ಕಾಲಪ್ಪಳಿಸಿ ನಿಲ್ಲುವಾಗ ಆಕೆ ಶೂರ್ಪನಖಿ. ಈ ಕಲ್ಪನೆಯೇ ಅದ್ಭುತ ಅನ್ನಿಸಿತು. ಆಕೆಯ ಪ್ರೇಮ ಯಾಚನೆ, ಅದನ್ನು ನಿರಾಕರಿಸುವಾಗ ನಿರಾಕರಣೆಯ ನೈತಿಕತೆಯನ್ನು ಮರೆಸಿ ವಿಜೃಂಭಿಸುವ, ಲಕ್ಷ್ಮಣನನ್ನು ಕರೆದು ಆಕೆಯ ಮೂಗನ್ನು ಕತ್ತರಿಸಲು ಆಣತಿ ಕೊಡುವ ರಾಮನ ಕ್ರೌರ್ಯ. ಹೆಣ್ಣಿನೆಡೆಗಿನ ರಾಮನ ಕ್ರೌರ್ಯಕ್ಕೆ ಎಷ್ಟೆಷ್ಟು ಮುಖಗಳು…ಕೈಕೇಯಿಯನ್ನೂ ಕ್ಷಮಿಸಿ ತಲೆಬಾಗುವ, ಮಂಥರೆಯ ನಡುವಳಿಕೆಗೂ ಸಮರ್ಥನೆ ಹುಡುಕುವ, ಶಬರಿಯ ಕಾಯುವಿಕೆಗೆ ಅರ್ಥ ಒದಗಿಸಿದ ರಾಮ ತನ್ನ ಸಂಗಾತಿಯಾಗಿರುವ, ಆಗಬಯಸುವ ಹೆಣ್ಣಿನೆಡೆಗೆ ಹೇಗೆ ಇಂತಹ ಕ್ರೌರ್ಯ ಬೆಳೆಸಿಕೊಂಡಿರುತ್ತಾನೆ? ಇಂದ್ರನ ಜೊತೆ ಸೇರಿದ ಗೌತಮನ ಹೆಂಡತಿಯನ್ನು ಕ್ಷಮಿಸುವಾಗ ಇರುವ ಉದಾರತೆ ತನ್ನ ಹೆಂಡತಿ ಕೇವಲ ಪರಪುರುಷನ ಮನೆಯಲ್ಲಿ ಇದ್ದಳು ಎಂದ ಮಾತ್ರಕ್ಕೆ ಎಲ್ಲಿ ಮರೆಯಾಗಿಬಿಡುತ್ತದೆ? ಅವಳನ್ನು ಬೆಂಕಿಗೆ ನೂಕುವ, ಶೂರ್ಪನಖಿಯ ಕಿವಿ ಮೂಗು ಕತ್ತರಿಸಲು ಆಜ್ಞಾಪಿಸುವ ಈ ಕ್ರೌರ್ಯದ ಮೂಲ ಎಲ್ಲಿಯದು…? ಸೀತೆಯಾಗಲಿ, ಶೂರ್ಪನಖಿಯಾಗಲಿ ಒಲಿದು, ಒಲವಿಗೆ ಸೋತು ಬಂದ ಹೆಣ್ಣು ಇಷ್ಟು ಸಸಾರವ ರಾಮನಂಥ ರಾಮನಿಗೂ..?

ನಾಟಕ ಮುಂದುವರಿಯುತ್ತದೆ…

ಕೊರವಂಜಿ ರಾವಣನನ್ನು ಹೊಗಳುತ್ತಾ, ಕೈಯಳೆತೆಯಲ್ಲಿ ಸೀತೆಯಂತ ಚಲುವಿ ಇದ್ದರೂ ಅವಳ ಮನಸ್ಸಿಗೆ ಬೆಲೆ ಕೊಟ್ಟು ದೂರವೇ ಉಳಿದ ರಾವಣ ಹೇಗೆ ರಾಮನಿಗಿಂತಾ ಉತ್ತಮ ಎಂದು ಹಾಡುತ್ತಾ ಸೀತೆಯನ್ನು ರಾವಣನ ಚಿತ್ರ ಬಿಡಿಸಲು ಪ್ರೇರೇಪಿಸುತ್ತಾಳೆ, ಅಷ್ಟರಲ್ಲಿ ಜಗದ ರೀತಿ ನೀತಿ ಅರಿತ ಜಾನಕಿ, ತಾನು ಕಂಡದ್ದು ಆತನ ಉಂಗುಷ್ಟವನ್ನು ಮಾತ್ರ ಅನ್ನುತ್ತಾಳೆ! ಅದನ್ನೇ ಬಿಡಿಸು ನಾನು ಹೊರಟು ಹೋಗುತ್ತೇನೆ ಎಂದು ಕೊರವಂಜಿ ಹಠ ಹಿಡಿಯುತ್ತಾಳೆ. ವಿಧಿ ಇಲ್ಲದೆ ಸೀತೆ ಚಿತ್ರ ಬಿಡಿಸುತ್ತಾ ಹೋಗುತ್ತಾಳೆ…. ನೆಲದ ಮೇಲೆ ಮೊದಲು ಮೂಡುವುದು ಉಂಗುಷ್ಠ, ಆಮೇಲೆ ಸೀತೆಯ ಮನದಲ್ಲಿ, ಸೀತೆಯ ಕೈಯಲ್ಲಿ ರಾವಣನ ಬಿಂಬ ಬೆಳೆಯುತ್ತಾ ಹೋಗುತ್ತದೆ….ಉಂಗುಷ್ಠ, ಬೆರಳು, ಹರಡಿದ ಪಾದಗಳು, ಧೃಡವಾದ ಮೀನಖಂಡಗಳು, ತೊಡೆ, ಧೀರ ನಿಲುವು, ಬಲವಾದ ತೋಳುಗಳು, ತೇಜವನ್ನು ಹೊಮ್ಮಿಸುವ ಮುಖ…. ಆದರೆ ಕಣ್ಣುಗಳನ್ನು ಬರೆಯಲು ಮಾತ್ರ ಸೀತೆ ಒಪ್ಪುವುದಿಲ್ಲ, ’ಕಣ್ಣು ಬಂದರೆ ಚಿತ್ರಕ್ಕ ಜೀವ ಬರ್ತೈತಿ’ ಅಂತಾಳೆ, ನಿಜ ಕಣ್ಣುಗಳು ಬೆರೆತಾಗಲ್ಲವೇ ಸಂಬಂಧಗಳಿಗೂ ಜೀವ ಬರುವುದು……?

ಈ ಸಂದರ್ಭದಲ್ಲಿ ನಾಟಕದಲ್ಲಿ ಒಂದು ಅದ್ಭುತವಾದ ಹಾಡಿದೆ. ರಾವಣನ ಚಿತ್ರ ಕಂಡು ಕೊರವಂಜಿ ಇಂತಹ ಸುಂದರನನ್ನು ಪತಿಯಾಗಿ ಪಡೆದ ಮಂಡೋದರಿಯ ಭಾಗ್ಯವೇ ಭಾಗ್ಯ ಎನ್ನುತ್ತಾ, ಹೇಗೆ ರಾವಣನ ಇಪ್ಪತ್ತು ಕೈ ಮಂಡೋದರೆಯನ್ನು ಪ್ರೀತಿ ಮಾಡುತ್ತದೆ ಎಂದು ಹಾಡುತ್ತಾ ಹೋಗುತ್ತಾಳೆ! ಈ ಹಾಡಿನ ಕಲ್ಪನೆ, ಹಾಡಿನ ರೀತಿ ಎರಡೂ ಸುಂದರ.

ಆಮೇಲೆ ತಾನು ಬಂದ ಉದ್ದೇಶ ನೆನಸಿಕೊಂಡ ಕೊರವಂಜಿ ಬಾಯಾರಿದೆ, ಸ್ವಲ್ಪ ಹಾಲು ಕೊಡೆ ಎಂದು ಕೇಳಿ ಸೀತೆಯನ್ನು ಒಳಗೆ ಕಳಿಸುತ್ತಾಳೆ.

ಸೀತೆ ಒಳಗೆ ಹೋದ ಮೇಲೆ ಶೂರ್ಪನಖಿ ರಾವಣನ ಪಟಕ್ಕೆ ಕಣ್ಣು ಬರೆಯುತ್ತಾಳೆ, ಪಟಕ್ಕೆ ಜೀವ ಬರುತ್ತದೆ. ಸೀತೆಯ ಎದೆಯಾಳದಲ್ಲಿ ಉಂಗುಷ್ಠದಷ್ಟಿದ್ದ ರಾವಣನ ನೆನಪು ಬೆಳೆಯುತ್ತಾ, ಬೆಳೆಯುತ್ತಾ ಜೀವ ತಳೆದು, ಸೀತೆಯ ಅಂತಃಪುರದಲ್ಲಿ ವಿಜೃಂಭಿಸತೊಡಗುತ್ತದೆ. ತನ್ನ ಮನದಲ್ಲಿ ಮೂಡಿದ ಅಂಗುಷ್ಟದ ಚಿತ್ರ ಹೀಗೆ ಮನಸ್ಸನ್ನು ಮೀರಿ, ಚಿತ್ರಪಟದ ಚೌಕಟ್ಟನ್ನು ದಾಟಿ ಪ್ರಕಟಗೊಳ್ಳುವುದನ್ನು ನೋಡಿ ಸೀತೆ ಕಂಗಾಲು. ತಳಮಳಗೊಳ್ಳುತ್ತಾ, ಮನಸ್ಸನ್ನು ಅಂಗೈಲಿ ಹಿಡಿದಿಡುತ್ತಾ ರಾವಣನ ಪಟವನ್ನು ಕಷ್ಟಪಟ್ಟು ಚೌಕಟ್ಟಿನಲ್ಲಿ ಬಂಧಿಸಿಡುವುದು ಎಷ್ಟು ಸಾಂಕೇತಿಕ…. ಪಟ ಚೌಕಟ್ಟನ್ನು ದಾಟಿದರೆ…

ಅಷ್ಟರಲ್ಲಿ ರಾಮನ ಹೆಜ್ಜೆ ಸಪ್ಪಳ ಕೇಳುತ್ತದೆ, ಸೀತೆ ಅವಸರವಸರವಾಗಿ ಪಟವನ್ನು ಪಲ್ಲಂಗದಡಿಯಲ್ಲಿ ಬಚ್ಚಿಡುತ್ತಾಳೆ. ಒಳಬಂದ ರಾಮನೆದೆಯಲ್ಲಿ ಅನುಮಾನದ ಹುಳು ಹೊರಳಾಡುತ್ತದೆ. ಕನ್ನಡಿಯಲ್ಲಿ ನಗೆಯ ಎಂಜಲು ಇಣುಕಿದಂತೆ, ನೆಲದಲಿ ಮತ್ಯಾವುದೋ ಹೆಜ್ಜೆಯ ಬಿಸುಪು ಉಳಿದಂತೆ, ಹಾಲಿನ ಗಿಂಡಿ ಕೆಳಗೆ ಬಿದ್ದಿದೆ, ಹಾಲು ನೆಲದ ಪಾಲಾಗಿದೆ, ಗಾಳಿ ತುಂಬಾ ಪಾರಿಜಾತದ ಗಂಧ. ಆಡಲಾರ, ಅನುಭವಿಸಲಾರ. ಅದು ಅಂತಃಪುರ, ಹೊರಗೆ ಕಾವಲು. ಯಾರು ಬಂದಾರು ಒಳಗೆ? ಆದರೆ ಮನಸ್ಸಿನ ಕಲಮಲ ನಿಲ್ಲುತ್ತಿಲ್ಲ. ಅದೇ ಅನುಮಾನದಲಿ ಸೀತೆಯನ್ನು ಕರೆದುಕೊಂಡು ಬಂದು ಪಲ್ಲಂಗದ ಮೇಲೆ ಕೂರುತ್ತಾನೆ. ಟೊಳ್ಳು ಬಿದ್ದ ಪಲ್ಲಂಗ ಕುಸಿಯುತ್ತದೆ! ರಾಮ ಕೊಂದ ರಾವಣ ಈಗ ಸೀತೆಯ ಮನದಲ್ಲಿ ಮೂಡಿ, ಚಿತ್ರ ಪಟವಾಗಿ, ಜೀವ ತುಂಬಿಕೊಂಡು ರಾಮನನ್ನು ಅಸಹಾಯಕನನ್ನಾಗಿಸುತ್ತದೆ.

ರಾಮನ ಸಿಟ್ಟು ಮೇರೆ ಮೀರುತ್ತದೆ.

ಅದು ತನ್ನ ಸೃಷ್ಟಿ, ಹಾಗಾಗಿ ತನ್ನ ಕರುಳ ಕುಡಿಯಂತೆ, ತಾಯಿ ಮಗನ ಸಂಬಂಧ ತಮ್ಮದು ಎನ್ನುತ್ತಾ, ಸೀತೆ ಚಿತ್ರ ಪಟವನ್ನು ಹರಿದೊಗೆಯುತ್ತಾಳೆ. ಇಲ್ಲಿ ಸೀತೆ ಸಮಾಜದ ರೀತಿ-ನೀತಿ ಅರಿತ ಹೆಣ್ಣು, ಮನಸ್ಸಿನೊಳಗಿನ ಪಟಕ್ಕೆ ಕಟ್ಟು ಹಾಕಿ, ಚೌಕಟ್ಟಿನೊಳಗೇ ಕೂರಿಸುವುದು ಅವಳಿಗೆ ಸಮಾಜ, ಬದುಕು ಕಲಿಸಿಕೊಟ್ಟಿದೆ.

ಆದರೆ ಜೀವಿ ಹಾಗಲ್ಲ, ಆಕೆ ಮಣ್ಣಿನ ಮಗಳು, ನೇರವಂತಿಕೆ, ಸಹಜ ಸ್ಪಂದನ ಅವಳಿಗೆ ಭೂಮಿಯಲ್ಲಿ ಕಾಳು ಮೊಳಕೆ ಒಡೆಯುವಷ್ಟೇ ಸಹಜ. ಭೂಮಿ ಸುತೆ ಸೀತೆ. ಆದರೆ ಆಕೆ ಅಯೋಧ್ಯೆಯ ಮಣ್ಣಿನಲ್ಲಿ ಹೆಜ್ಜೆ ಇಟ್ಟ ಮೇಲೆ ನಾಜೂಕಿನ ರೀತಿ ನೀತಿ, ಬದುಕುವ ಬಗೆ ತಿಳಿದವಳು. ಆದರೆ ಜೀವಿ ತನ್ನ ಮನಸ್ಸನ್ನು ಸಂಪೂರ್ಣವಾಗಿ ಪ್ರೇಮಕ್ಕೆ ಒಡ್ಡಿಕೊಂಡವಳು. ಮಳೆ, ತಂಗಾಳಿ, ಬಿರುಗಾಳಿ, ಸುಡು ಬಿಸಿಲು ಹೀಗೆ ಪ್ರೀತಿಯ ಎಲ್ಲಾ ಬಗೆಗೂ ಎದೆಯಾರ ಸ್ಪಂದಿಸಿದವಳು..

ಚಿತ್ರಪಟ ರಾಮಾಯಣ ನೋಡಿದ ಮರು ದಿನ ನಾನು ಓದಿದ ಪುಸ್ತಕ ಜನುಮದ ಜೋಡಿ, ’ನೀನು ಓದಲೇ ಬೇಕಾದ ಪುಸ್ತಕ’ ಎಂದು ಸ್ನೇಹಿತ ಅದನ್ನು ಕೈಗಿಟ್ಟಿದ್ದ, ಒಂದು ಅತ್ಯುತ್ತಮ ಅನುವಾದ ಹೇಗಿರಬೇಕು ಅನ್ನುವುದಕ್ಕೆ ಉದಾಹರಣೆ ಈ ಪುಸ್ತಕ.. ಇಲ್ಲಿ ನಾವು ಕೇವಲ ಓದುಗರಾಗಿ ಉಳಿಯುವುದು ಸಾಧ್ಯವೇ ಇಲ್ಲ, ಇಲ್ಲಿನ ಮಿಡಿತ, ತಳಮಳ, ತೊಳಲಾಟಗಳು ನಮ್ಮೆದೆಯಲ್ಲೂ ಜಾಗ ಹುಟ್ಟುಹಾಕಿಕೊಳ್ಳುತ್ತವೆ.

ಪುಸ್ತಕದ ಕಥೆ ಸರಳ, ಜಾತ್ರೆಗೆಂದು ಹೊರಟ ಕಾನಜಿಗೆ ರಾಟುವಾಳದ ತೊಟ್ಟಿಲೊಳಗೆ ಅಕಸ್ಮಾತಾಗಿ ನಾಯಿಂದರ ಹುಡುಗಿ ಜೀವಿ ಜೊತೆಯಾಗುತ್ತಾಳೆ. ಅಷ್ಟೆ, ಆಮೇಲೆ ಅವರಿಬ್ಬರ ಜೀವಒಂದು ಸರಳ ರೇಖೆಯಂತೆ ಕಥೆ ಸಾಗುತ್ತದೆ, ಆದರೆ ಅದರ ಎಲ್ಲಾ ಸಂಕೀರ್ಣ ಭಾವಗಳೂ ನಮ್ಮಲ್ಲಿ ಒಡಮೂಡುತ್ತವೆ. ಜಾತ್ರೆಗೆಂದು ಹೊರಟ ಕಾನಜಿಗೆ ರಾಟುವಾಳದ ತೊಟ್ಟಿಲೊಳಗೆ ಅಕಸ್ಮಾತ್ತಾಗಿ ನಾಯಿಂದರ ಹುಡುಗಿ ಜೀವಿ ಜೊತೆಯಾಗುತ್ತಾಳೆ. ಅಷ್ಟೆ, ಆಮೇಲೆ ಅವರಿಬ್ಬರ ಜೀವನವೂ ಸಾಕ್ಷಾತ್ ಆ ರಾಟುವಾಳದ ತೊಟ್ಟಿಲಂತೆ ಆಗಿಬಿಡುತ್ತದೆ, ಯಾವ ನಿಯಂತ್ರಣವೂ ಅವರ ಕೈಯಲ್ಲಿಲ್ಲ… ಆ ತೊಟ್ಟಿಲು ಅವರಿಬ್ಬರ ಮುಂದಿನ ಬದುಕಿನ ಸಂಕೇತ.. ಗೌಡರ ಹುಡುಗ ಕಾನಜಿ, ನಾಯಿಂದರ ಹುಡುಗಿ ಜೀವಿ, ಅವರಿಬ್ಬರನ್ನು ಒಂದಾಗಲು ಬಿಡದ ಜಾತಿಯ ಅಡ್ಡಗೋಡೆ, ಗೋಡೆಯ ಅಸ್ತಿಭಾರ ಗಟ್ಟಿಯಾಗಿಡುವ ಹಳ್ಳಿಯ ಸಾಮಾಜಿಕ ವ್ಯವಸ್ಥೆ. ಇವೆಲ್ಲದರ ನಡುವೆಯೂ ಟಿಸಿಲೊಡೆಯುವ, ಪ್ರೀತಿಯೊಂದನ್ನೇ ಬಸಿದುಕೊಂಡು ಬದುಕುವ ಅವರ ಒಲವು.

ಪ್ರೀತಿ ತೋರಿಸುವ ದಾರಿಗಳು ಅನೂಹ್ಯ. ಆ ಪ್ರೀತಿ ಅವರಿಬ್ಬರಲ್ಲಿ ಹೇಗೆ ಏಕರೂಪವಾಗಿ ಪ್ರವಹಿಸುತ್ತದೆ ಎಂದರೆ, ಜೀವಿ ತನ್ನವಳಾಗದಿದ್ದರೂ ಸರಿ ತನ್ನ ಕಣ್ಣೆದುರಲ್ಲಿ ಇದ್ದರೂ ಸಾಕು ಎಂದು ಕಾನಜಿ ಅವಳನ್ನು ತನ್ನೂರಿನ ನಾಯಿಂದ ಧೂಳನನ್ನು ಮದುವೆಗಾಗಲು ಕೇಳುತ್ತಾನೆ. ಆ ಘಳಿಗೆಯಲ್ಲಿ ಅವನು ತನ್ನನ್ನೇ ವರಿಸು ಎಂದು ಕೇಳುವವನೇನೋ ಎಂದು ಕಾತರದಲ್ಲಿ ತುಡಿಯುತ್ತಿರುವ ಜೀವಿ ಮರುಮಾತಿಲ್ಲದೆ, ಗಂಡು ಯಾರು, ಏನು ಎಂದೂ ಸಹ ಕೇಳದೆ ಒಪ್ಪಿಕೊಳ್ಳುತ್ತಾಳೆ. ಮನೆಯಲ್ಲಿ ಹೇಳದೆ ಕೇಳದೆ ಸರಿರಾತ್ರಿಯಲ್ಲಿ ತನ್ನವನ ಜೊತೆಗೆ ಹೊರಟು ಬಿಡುತ್ತಾಳೆ…… ಬೇರೆಯವನ ಮಡದಿಯಾಗಲು. ಪ್ರೀತಿ ಅಂದರೆ ಹಾಗೆ ಸಂಪೂರ್ಣ ಶರಣಾಗತಿಯಾ? ಧೂಳ ವಿಧುರ, ಅಲ್ಲದೆ ಅಂಗವಿಕಲ, ಅದ್ಯಾವುದೂ ಅವಳ ಕಣ್ಣಿಗೆ ಕಾಣುವುದೇ ಇಲ್ಲ. ಕಾನಜಿಯನ್ನುಳಿದು ಇನ್ನೇನೂ ಅವಳ ಕಣ್ಣಿಗೆ ಕಾಣುವುದೇ ಇಲ್ಲ.. “ಹೋರಿಯ ಕುಲದ ನೆಲೆ ಕೊಂಬಿನಲ್ಲಿ, ಕುದುರಿಯದು ಕಿವಿಯಲ್ಲಿ ಅಂತಾರಲ್ಲ, ಹಾಗೆ ಮನುಷ್ಯನದು ಆತನ ಎದೆಯ ಕುದಿಯಲ್ಲಿ ಅಂತ ನನಗಂತೂ ಅನ್ನಿಸ್ತದೆ ನೋಡು..” ಅನ್ನುವ ಸಾಲುಗಳು ಪ್ರೇಮ ಹೃದಯಜನ್ಯ, ಮನುಷ್ಯನ ಇರುವಿಕೆ ಪ್ರೇಮ ಜನ್ಯ ಎಂಬುದನ್ನು ಮನಗಾಣಿಸಿಬಿಡುತ್ತವೆ.

ಮದುವೆಯೂ ಆಗಿಬಿಡುತ್ತದೆ. ಆದರೆ ಧೂಳನನ್ನು ವರಿಸಿ ಜೀವಿ ಯಾವ ಸುಖವನ್ನೂ ಸುರಿದುಕೊಳ್ಳುವುದಿಲ್ಲ, ಒಳಗೊಳಗೇ ಧೂಳನಿಗೂ ಗೊತ್ತು ಅವಳಂಥಹ ಚಂದುಳ್ಳಿ ಚಲುವಿಗೆ ತಾನು ಸರಿ ಜೋಡಿಯಲ್ಲ ಅಂತ, ಈ ಕೀಳರಿಮೆ ಮುಚ್ಚಿಕೊಳ್ಳಲು, ಅವಳ ಮೇಲೆ ಅಧಿಕಾರ ಸ್ಥಾಪಿಸಲು ಅವನು ಹಿಡಿಯುವ ದಾರಿ, ಅವಳನ್ನು ಹೊಡೆದು ಬಡಿದು ಊರವರ ಮುಂದೆ ತನ್ನ ಗಂಡಸ್ತನ ಸಾಬೀತು ಪಡಿಸಿಕೊಳ್ಳುವುದು. ಸಹಿಸುತ್ತಾಳೆ ಜೀವಿ. ಅವನ ಕುಡಿತ, ಬಡಿತ, ಊರವರ ಅನುಮಾನದ ನೋಟ, ಚುಚ್ಚು ಮಾತು …ಎಲ್ಲವನ್ನೂ… ಅವಳ ಚಿತ್ತಭಿತ್ತಿಯಲ್ಲಿರುವ ಒಂದೇ ಚಿತ್ರ ಕಾನಜಿ, ಕಾನಜಿ ಮತ್ತು ಕಾನಜಿ. ಎಲ್ಲೂ ಅವಳು ಲೌಕಿಕ ಜಾಣತನ ತೋರಿಸುತ್ತಾ ಕಾನಜಿಯನ್ನು ಹೀಗಳೆಯುವುದಿಲ್ಲ, ಅವನೊಡನೆ ತನ್ನ ಸಂಬಂಧ ಅಲೌಕಿಕ, ಪವಿತ್ರ ಎಂದು ಪದಗಳ ಚೌಕಟ್ಟನ್ನು ಹಾಕುವುದಿಲ್ಲ, ಅವನನ್ನು ಕೆಟ್ಟವನನ್ನಾಗಿಸಿ, ಪತಿಯನ್ನು ಹೊಗಳಿ ತನ್ನ ಪಾತಿವ್ರತ್ಯ ಸಾಬೀತು ಪಡಿಸಿಕೊಳ್ಳುವುದಿಲ್ಲ, ಆಕೆ ಗೆಲ್ಲುವುದು ಇಲ್ಲಿ, ತಪ್ಪೋ ಸರಿಯೋ ಅವಳ ಪ್ರೀತಿಗೆ, ಅದರ ಪರಿಣಾಮಕ್ಕೆ ಅವಳು ಪೂರ್ಣ ಜವಾಬ್ದಾರಿ ಹೊರುತ್ತಾಳೆ, ಅವಳ ಮಟ್ಟಿಗೆ ಪ್ರೇಮವೇ ಸತ್ಯ, ಪ್ರೇಮವೇ ಶಿವ.. ಪ್ರೇಮವೇ ಕಾನಜಿ…

ಇನ್ನು ಕಾನಜಿ : ಮನಸ್ಸಿನ ವ್ಯಾಪಾರ ಬಲ್ಲವರು ಯಾರು? ಮನಸ್ಸು ಎಂದು ತರ್ಕದ ಮಾತು ಕೇಳಿದೆ? ತಾನು ಕಂಡ ಕ್ಷಣದಿಂದ ಪ್ರೀತಿಸಿದ, ಧೇನಿಸಿದ, ಕಣ್ಣೆದುರಲ್ಲಿದ್ದರೆ ಸಾಕು ಎಂದು ಕನವರಿಸಿದ ಜೀವಿ ತನ್ನ ಊರಿನಲ್ಲೇ ಇದ್ದಾಳೆ, ತನ್ನ ಗೆಳೆಯನ ಮನೆಯ ಜಗಲಿಯಾಚಿಗೆ ಅವಳ ಮನೆ, ಆದರೆ ಅವಳು ಇರುವ ಮನೆ ತನ್ನದಲ್ಲ, ಅವಳು ಹೆಜ್ಜೆ ಇಡುವ ಅಂಗಳ ತನ್ನದಲ್ಲ, ಹೋಗಲಿ ಅವಳು ಸುಖವಾಗಿ ಆದರೂ ಇದ್ದಾಳಾ ಅಂದರೆ ಅದೂ ಇಲ್ಲ, ಅವಳನ್ನು ಇಂತಲ್ಲಿಗೆ ತಂದು ಸೇರಿಸಿದವ ತಾನು ಎಂಬ ಅಪರಾಧಿಪ್ರಜ್ಞೆ ಬೇರೆ ಅವನನ್ನು ದಹಿಸ ತೊಡಗುತ್ತದೆ.. ಅವನ ಪ್ರೀತಿ ಕೇವಲ ದೈಹಿಕವಲ್ಲ, ಬರೀ ಐಹಿಕವೂ ಅಲ್ಲ, ಅಗ್ನಿಯಲ್ಲಿ ಬಿದ್ದ ಉಮೆಯನ್ನು ಹೆಗಲ ಮೇಲೆ ಹೊತ್ತು ತಿರುಗಿದ ಶಿವನ ಪ್ರೀತಿ ಅದು… ತಾನೂ ಉರಿಯುತ್ತಾನೆ, ತಾನು ಬೇಯುತ್ತಾನೆ..ಊರಿಗೇ ಊರೇ ಅವನೆಡೆಗೆ ಗೌರವದಿಂದ, ಅವನ ವ್ಯಕ್ತಿತ್ವದೆಡೆಗೆ ಒಂದು ಭಯದಿಂದ ನೋಡುವಾಗ, ಈತ ಧೂಳನ ಎದಿರು ಹಿಡಿಯಾಗಿ ಬೇಡುತ್ತಾನೆ, ’ಜೀವಿಯದೇನೂ ತಪ್ಪಿಲ್ಲ, ಅವಳನ್ನು ಚಂದ ನೋಡಿಕೋ’ ಅಂತ. ಅವಳಿಗಾಗಿ ಎಲ್ಲ ಆರೋಪ ಹೊರುತ್ತಾನೆ. ಅವಳನ್ನು ಅರೋಪಗಳಿಂದ ತಪ್ಪಿಸಲು ಪರದಾಡುತ್ತಾನೆ. ಕಡೆಗೆ ತಾನಿದ್ದರೆ ಅವಳಿಗೆ ಸುಖವಿಲ್ಲ ಎಂದುಕೊಂಡು ಊರು ಬಿಟ್ಟು ಪಟ್ಟಣಕ್ಕೆ ಹೊರಟು ಹೋಗುತ್ತಾನೆ. ಅವಳು ತನ್ನ ಕಣ್ಣೆದುರಿಗಿದ್ದರೆ ಸಾಕು ಎಂದು ಅವಳನ್ನು ಊರಿಗೆ ತರುವ ಕಾನಜಿ ತಾನೇ ಊರು ಬಿಟ್ಟು ತೆರಳುತ್ತಾನೆ, ಅವನು ಹೇಳಿದ ಎಂದು ಅವನು ಹೇಳಿದವನೊಂದಿಗೆ ತಾಳಿ ಕಟ್ಟಿಸಿಕೊಳ್ಳುವ ಜೀವಿ ಒಬ್ಬಳೇ ಉಳಿಯುತ್ತಾಳೆ ಒಲೆಯ ಮೇಲಿನ ಅನ್ನದ ಕುದಿಯಂತೆ..

ಬೇಡದ ಮದುವೆಯನ್ನೂ, ತನ್ನವನಾಗದ ಗಂಡನನ್ನೂ ಸಹಿಸಿಕೊಳ್ಳಲು ಜೀವಿಗಿದ್ದ ಒಂದೇ ಒಂದು ಕಾರಣವೂ ತಪ್ಪುತ್ತದೆ, ಅವಳನ್ನು ಜೀವನಕ್ಕೆ ಬೆಸೆದಿದ್ದ ಒಂದೇ ಒಂದು ಕೊಂಡಿ ಕಳಚಿ ಬೀಳುತ್ತದೆ, ಜೀವಿಗೆ ಬದುಕಲು ಕಾರಣಗಳಿರುವುದಿಲ್ಲ, ಹಾಗೆ ಇದುವರೆಗೂ ಅವಳಿಗೆ ಸಾಯಲೂ ಸಹ ಕಾರಣ ಇರುವುದಿಲ್ಲ. ಅವಳ ಬದುಕಿಗೆ ಕಾರಣವಾಗಿ ಬಂದ ಕಾನಜಿ ಅವಳ ಸಾವಿಗೆ ಒಂದು ಕಾರಣ ಒದಗಿಸಿ ನಿರ್ಗಮಿಸುತ್ತಾನೆ.

ತನಗೆ ಎಂದು ರೊಟ್ಟಿಯಲ್ಲಿ ವಿಷ ಕಲಸಿಟ್ಟು ರೊಟ್ಟಿ ಬಡಿಯತೊಡಗುತ್ತಾಳೆ ಜೀವಿ. ಅಷ್ಟರಲ್ಲಿ ಕುಡಿದು ಮನೆಗೆ ಬಂದ ಧೂಳ ಅವಳನ್ನು ಸಾಯುವಂತೆ ಹೊಡೆಯುತ್ತಾನೆ. ನೆರೆಹೊರೆಯವರು ಬಂದು ಅವಳನ್ನು ಬಿಡಿಸಿಕೊಂಡು ತಮ್ಮ ಮನೆಗೆ ಕರೆದುಕೊಡು ಹೋಗುತ್ತಾರೆ, ಧೂಳ ಆ ರೊಟ್ಟಿ ತಿನ್ನುತ್ತಾನೆ…. ಗಂಡನನ್ನು ಕೊಂದವಳು ಎಂಬ ಹೊಸ ಆರೋಪ ಅವಳ ಮೇಲೆ…. ಅವಳ ಅಂತಃಪ್ರಜ್ಞೆ ಬಿಡುಗಡೆಯ ಒಂದೇ ದಾರಿ ಎಂದರೆ ಅರಿವನ್ನು ಕಳಚಿಕೊಳ್ಳುವುದು ಎಂದು ಗುರುತಿಸುತ್ತದೆ. ಜೀವಿ ಹುಚ್ಚಿಯಾಗುತ್ತಾಳೆ…

ಜೀವಿ ಕಾನಜಿಯನ್ನು ಮನಸಿನಲ್ಲಿಟ್ಟುಕೊಡ ಹೆಣ್ಣು ಎಂದು ದೂಷಿಸಿದ ಊರು ಅವಳು ಹುಚ್ಚಿಯಾದಾಗ ಅವಳನ್ನು ಪೊರೆಯುತ್ತದೆ. ಪುಸ್ತಕದ ಸೊಗಸಿರುವುದು ಇಲ್ಲಿ. ಇಲ್ಲಿ ಯಾವುದೂ ಕಪ್ಪು ಬಿಳುಪು ಪಾತ್ರಗಳಿಲ್ಲ. ಎಲ್ಲರೂ ರಕ್ತ ಮಾಂಸಗಳುಳ್ಳ, ಪ್ರೀತಿ ದ್ವೇಷ ಇರುವವರು. ಜೀವಿಯನ್ನು ಮೊದಲು ಬೈದವರೇ ಅವಳು ಹುಚ್ಚಿಯಾದಾಗ ಮರುಗುತ್ತಾರೆ.

ಮತ್ತೆ ಕಾರ್ತಿಕ ಹುಣ್ಣಿಮೆ ಬರುತ್ತದೆ, ಮತ್ತೆ ಜಾತ್ರೆ, ಊರವರು ಮಲಾಪಹಾರಿ ನದಿಯಲ್ಲಿ ಮುಳುಗೆದ್ದರೆ ಜೀವಿಯ ಹುಚ್ಚು ಕಡಿಮೆ ಆದೀತೆಂದು ಅವಳನ್ನು ರಮಿಸಿ ಜಾತ್ರೆಗೆ ಕರೆದುಕೊಂಡು ಬರುತ್ತಾರೆ. ಅಲ್ಲಿಗೆ ಬರುತ್ತಾನೆ ಕಾನಜಿ. ಜಾತ್ರೆಯಲ್ಲಿ ಶುರುವಾದ ಅವರ ಪ್ರೀತಿ ಜಾತ್ರೆಯಲ್ಲಿ ಮುಗಿಯುತ್ತದೆ, ಮಲಾಪಹಾರಿ ನದಿಯಲ್ಲಿ ಮುಳುಗದೆಯೇ ಜೀವಿಯ ಶಾಪ ವಿಮೋಚನೆ ಆಗುತ್ತದೆ. ’….ಅಲ್ಲ ಅವಳು ಬಾಳುವೆಯ ಹೊಳೆಯೊಳಗೆ ಮುಳುಗೆದ್ದದ್ದು ಸಾಲದೇನು! ಅದಕ್ಕಿಂತ ಮಲಾಪಹಾರಿ ಇನ್ನಾವುದು?’ ಅನ್ನುತ್ತಾನೆ ಕಾನಜಿ. ಕಾದಂಬರಿ ಮುಗಿಯುವುದು ಈ ಮಾತುಗಳಿಂದ…’ಏನಪಾ, ಮನುಷ್ಯನ ಆಟಾ, ಅವನ ಎದಿಯಾಗ ಹಿಡಿ ನೆತ್ತರ ಇರಾಣಿಲ್ಲ; ಆದರ ಅದರ ಒಲವಿನ ಆಳ ಮುಗಿಲಿನಾ ಅಳತೆಗೂ ಮೀರೈತಲ್ಲಪಾ ಅಂತೀನಿ!”.

ಹೀಗೆ ಪರಸ್ಪರ ಭಿನ್ನ ವ್ಯಕ್ತಿತ್ವದ, ಭಿನ್ನ ಹಿನ್ನಲೆಯ ಇಬ್ಬರು ಸ್ತ್ರೀಯರು ಒಂದೇ ಸಮಯದಲ್ಲಿ ಎದಿರಾಗಿ ನನ್ನನ್ನು ಇನ್ನಿಲ್ಲದಂತೆ ಕಾಡಿಬಿಟ್ಟರು. ಯಾರು ಸರಿ? ಯಾವುದು ಸರಿ?? ಸಮಾಜದ ನೀತಿ ನಿಯಮಗಳಿಗೆ ತನ್ನನ್ನು ಒಪ್ಪಿಸಿಕೊಂಡು, ಅದರ ಚೌಕಟ್ಟಿನೊಳಗಣ ಚಿತ್ರವಾಗುಳಿದ ಸೀತೆಯಾ ಅಥವಾ ತನ್ನೆದೆಯ ದನಿಗೆ ಮಾತ್ರ ಕಿವಿಯಾಗಿ ಪ್ರೇಮದ ನಿಯಮಗಳನ್ನು ಮಾತ್ರ ಒಪ್ಪಿಕೊಂಡ ಜೀವಿಯಾ? ಜಗತ್ತು ಸೀತೆಯನ್ನು ದೇವಿ ಎನ್ನುತ್ತದೆ, ಜೀವಿಯ ನಡವಳಿಕೆಯನ್ನು ಅನೈತಿಕತೆ ಎನ್ನುತ್ತದೆ. ಆದರೆ ಜೀವಿಯ ನೋವಿಗೆ ನಮ್ಮ ಕಣ್ಣಲ್ಲಿ ಬರುವ ಕಂಬನಿ ಯಾಕೆ ಇವ್ಯಾವುದನ್ನೂ ಲೆಕ್ಕಿಸುವುದಿಲ್ಲಾ??

 

‍ಲೇಖಕರು G

26 November, 2012

11 Comments

  1. sunil rao

    just wonderful.
    namma naatakagaLa moolaka paatragala upachaarikate haagu sathyagaLannu ethavattaagi hididittirodu waah!!!

    as usual sandhya avare nimma baraha chandada beLadingaLU

  2. suma sudhakiran

    ಹೆಣ್ಣಿನ ಮನದ ಸೂಕ್ಷ್ಮಗಳ ಸೊಗಸಾದ ಚಿತ್ರಣ…ನೀವು ನೋಡಿದ,ಓದಿದ ಪಾತ್ರಗಳು ನಿಮ್ಮಲ್ಲಿ ಎಬ್ಬಿಸಿದ ಚಿಂತನೆಯ ಅಲೆಗಳನ್ನು ನಮಗೂ ಸೊಗಸಾಗಿ ದಾಟಿಸಿದ್ದೀರಿ .

    ” ಹೆಣ್ಣಿನೆಡೆಗಿನ ರಾಮನ ಕ್ರೌರ್ಯಕ್ಕೆ ಎಷ್ಟೆಷ್ಟು ಮುಖಗಳು…ಕೈಕೇಯಿಯನ್ನೂ ಕ್ಷಮಿಸಿ ತಲೆಬಾಗುವ, ಮಂಥರೆಯ ನಡುವಳಿಕೆಗೂ ಸಮರ್ಥನೆ ಹುಡುಕುವ, ಶಬರಿಯ ಕಾಯುವಿಕೆಗೆ ಅರ್ಥ ಒದಗಿಸಿದ ರಾಮ ತನ್ನ ಸಂಗಾತಿಯಾಗಿರುವ, ಆಗಬಯಸುವ ಹೆಣ್ಣಿನೆಡೆಗೆ ಹೇಗೆ ಇಂತಹ ಕ್ರೌರ್ಯ ಬೆಳೆಸಿಕೊಂಡಿರುತ್ತಾನೆ? ”
    ಈ ನಿಮ್ಮ ಪ್ರಶ್ನೆ ನನ್ನನ್ನೂ ಯಾವತ್ತೂ ಕಾಡಿದ ಪ್ರಶ್ನೆ ….ಬಹುಶಃ ರಾಮನೆಡೆಗೆ ನಮಗಿರುವ ಈ ಥೆರನಾದ ಆಕ್ಷೇಪಕ್ಕೆ ಕಾರಣ ಆ ಪಾತ್ರವನ್ನು ನಾವು ಸಮಕಾಲೀನ ಪ್ರಪಂಚಕ್ಕೆ ಹೋಲಿಸಿಕೊಳ್ಳುವುದೇ ಆಗಿರಬಹುದು . ಆದರೆ ಇದನ್ನು ಬರೆದ ಕಾಲದಲ್ಲಿದ್ದ ಸಾಮಾಜಿಕ ರೀತಿನೀತಿಗಳಲ್ಲಿ ಅವನ ವರ್ತನೆಗೆ ಸಮರ್ಥನೆ ಇತ್ತೆನ್ನಿಸುತ್ತದೆ. ಕವಿಯ ಕಲ್ಪನೆಯಲ್ಲಿ ಅರಳುವ ಆದರ್ಶಪುರುಷ ರಾಮ ಆಗಿನ ಪುರುಷಪ್ರಧಾನ ಸಮಾಜದ ಪ್ರತಿನಿಧಿಯಷ್ಟೇ. ಅಲ್ಲಿ ಆದರ್ಶ ರಾಜನೂ ಆದ ಆತ ಅಹಲ್ಯೆ ,ಮಂಥರೆ,ಕೈಕೇಯಿ ಮುಂತಾದ ತನ್ನ ಪ್ರಜೆಗಳ ವಿಜಾರದಲ್ಲಿ ತುಂಬ ಉದಾರವಾದ ಕ್ಷಮಾಗುಣವನ್ನು ತೋರಿಸಿದರೂ , ವಯಕ್ತಿಕ ವಿಚಾರ ಬಂದಾಗ ಬೆರಳು ತೋರಿಸುವಂತಿರಬಾರದು ಎಂಬ ವಿಚಾರವಷ್ಟೇ ಮುಖ್ಯವಾಗಿ ಕಠಿಣಹೃದಯಿಯಾಗುತ್ತಾನೆ.

  3. Usha Rai

    Sandhya, vishleShaNe thumba chennaagide. eradara comparison chennaagi maadiddeeri. naataka noduvudu kaShTa. janumada jodi pusthaka odabeku.

  4. Shwetha Hosabale

    ನೀವು ಬರೆದಿದ್ದನ್ನ ಓದಿ ನಾಟಕ ನೋಡಬೇಕೆನಿಸಿತು…ಚದುರಂಗರ ‘ಬಿಂಬ’ ನಾಟಕವನ್ನು ಬಹಳ ಹಿಂದೆ ಓದಿದ್ದರ ನೆನಪು…ಆವಾಗ ಅದು ಪೂರ್ತಿಯಾಗಿ ಮನಸ್ಸೊಳಗೆ ಇಳಿದಿರಲಿಲ್ಲ…ಈಗ ನೀವು ಬರೆದಿದ್ದನ್ನು ಓದಿ ಎಷ್ಟು ಚೆನ್ನಾಗಿದೆಯಲ್ಲ ಅನಿಸಿತು…ತುಂಬಾ ಚೆನ್ನಾಗಿದೆ ಮನಸ್ಸಿಗೆ ಕಾಡಿದ್ದನ್ನು ಬರೆದಿದ್ದು.

  5. Jayalaxmi Patil

    ಸಂಧ್ಯಾ, ಸುಪರ್ಬ್! ‘ಚಿತ್ರಪಟ’ವನ್ನು ಚೆನ್ನಾಗಿ ವಿಶ್ಲೇಷಿಸಿದ್ದೀರಿ. ‘ಜನುಮದ ಜೋಡಿ’ ನಾನು ಓದಿಲ್ಲವಾದರೂ ನಿಮ್ಮ ಬರಹ ಕಾದಂಬರಿಯನ್ನು ಪರಿಚಯಿಸಿತು.

  6. veda

    Olleya vishleshane sandhya. odi e kshanave nataka nodabeku, JJ pustaka odabeku ennuvashtu.

  7. ಉಷಾಕಟ್ಟೆಮನೆ

    ಅದ್ಭುತ ನಿರೂಪಣೆ. ಒಳನೋಟಗಳುಳ್ಳ ಬರಹ. ಸಂಧ್ಯಾಳಿಂದ ಇಂತಹ ಬರಹಗಳನ್ನೇ ನಾನು ಯಾವಗಲೂ ನಿರೀಕ್ಷಿಸುತ್ತೇನೆ.

  8. sandhya

    ಓದಿ ಪ್ರತಿಕ್ರಯಿಸಿದ ಎಲ್ಲರಿಗೂ ನನ್ನ ಥ್ಯಾಂಕ್ಸ್…. ನಾನು ತುಂಬಾ ಪ್ರೀತಿಯಿಂದ ಬರೆದ ಬರಹ ಇದು, ಹಾಗಾಗಿ ನಿಮ್ಮ ಮೆಚ್ಚುಗೆಗೆ ಮತ್ತಷ್ಟು ತೂಕ…

  9. bharathi bv

    Sandhya ninna lekhana odida mele aa naatka nodle beku anta decide maadibitte … tumba chennaagi bardiddi

  10. suseela

    Hi Sandhya, I read all the articles. I am really amazed about ur intensity of the issues. U describe the small issues, like face book,& one word I miss u very deeply.It touchs the hearts. The above analaisation of the drama & the book & the comparison is fantastic. Hats off to u.

  11. umasekhar

    ನಾಟಕ ನೊದಿಲ್ಲ ಮತ್ತು ಪುಸ್ತಕ ವೊದಿಲ್ಲ ಎನ್ದು ಬೇಜರಗ್ಥಿದೆ ನಿಮ್ಮಸಮೀಕ್ಶನೆ ಓದಿ, ಬರೆದದ್ದು ತುಮ್ಬ ಚೆನ್ನಗಿದೆ. ನಾಟಕ ನೊದಿದನ್ತೆಯೆ ಇದೆ. ಉತ್ತರ ನಿಧಾನ
    ಆಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading