ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಚೌಕಟ್ಟು ನೂತನ – ಚಿಂತನೆ ಸಾಂಪ್ರದಾಯಿಕ’, ’ಯಾನ’ ಬಗ್ಗೆ ಸಿ ಎನ್ನಾರ್ ಬರೆದಿದ್ದಾರೆ

’ಯಾನ’ ಪುಸ್ತಕದ ಬಗ್ಗೆ ಸಿ ಎನ್ ರಾಮಚಂದ್ರನ್ ಬರೆದಿದ್ದಾರೆ, ಪ್ರೀತಿಯಿಂದ ’ಅವಧಿ’ಗೆ ಕಳಿಸಿದ್ದಾರೆ. ಈ ಓದು ನಿಮಗಾಗಿ

***

ಸಿ ಎನ್ ರಾಮಚಂದ್ರನ್

ಎಸ್. ಎಲ್. ಭೈರಪ್ಪ, ಯಾನ
ಬೆಂಗಳೂರು: ಸಾಹಿತ್ಯ ಭಂಡಾರ, 2014 ಪು. 217; ಬೆಲೆ: 190/-
ಕತ್ತಲಿನ ಶಕ್ತಿಯ ಮುಂದೆ ಬೆಳಕಿನ ಹೆಣಗಾಟ ದುರ್ಬಲ –ಈ ಮಾತು ಭೈರಪ್ಪನವರ ಇತ್ತೀಚಿನ, ಮಾರುಕಟ್ಟೆಗೆ ಬಂದ ದಿನವೇ (ಪತ್ರಿಕೆಯೊಂದರಲ್ಲಿ ಬಂದಂತೆ) ‘10,000’ ಪ್ರತಿಗಳಷ್ಟು ಮಾರಾಟವಾದ ಯಾನ ಕಾದಂಬರಿಯ ಪಾತ್ರವೊಂದರ ದಿನಚರಿಯಲ್ಲಿ ಬರುತ್ತದೆ. ಈ ಮಾತು, ಒಟ್ಟಾರೆಯಾಗಿ, ಈ ಕಾದಂಬರಿಗೂ ಅನ್ವಯಿಸುವಂತೆ ನನಗೆ ಕಾಣುತ್ತದೆ.
ಯಾನ ಕಾದಂಬರಿಯ ಸಂವಿಧಾನವನ್ನು ಹೀಗೆ ಗುರುತಿಸಬಹುದು: ಖಭೌತ ವಿಜ್ಞಾನಿ ಸುದರ್ಶನ ಮತ್ತು ಫೈಟರ್ ಪ್ಲೇನ್ ಪೈಲಟ್ ಉತ್ತರಾ ಭಾರತದ ಒಂದು ಮಹತ್ವಾಕಾಂಕ್ಷೆಯ ನಕ್ಷತ್ರಯಾನದಲ್ಲಿ 37 ವರ್ಷಗಳನ್ನು ಕಳೆದಿರುವಾಗಿನಿಂದ ಕಾದಂಬರಿ ಪ್ರಾರಂಭವಾಗುತ್ತದೆ. ಉತ್ತರಾಗೆ ಶೈತ್ಯಾಗಾರದಲ್ಲಿ ರಕ್ಷಿಸಲ್ಪಟ್ಟಿದ್ದ ಅಜ್ಞಾತ ದಾನಿಗಳ ಗರ್ಭಾಂಕುರಗಳಿಂದ ಹುಟ್ಟಿರುವ ಇಬ್ಬರು ಮಕ್ಕಳಿದ್ದಾರೆ, ಮೇದಿನಿ ಮತ್ತು ಆಕಾಶ. ಅವರಿಬ್ಬರ ವಿವಾಹವೇರ್ಪಟ್ಟಾಗ ಅವರ ಮನಸ್ಸಿನಲ್ಲಿ ಎದ್ದ ಒಂದು ಪ್ರಶ್ನೆಗೆ (‘ಅಕ್ಕ-ತಮ್ಮ ಇವರ ಮದುವೆ ಸಾಧುವೆ?’) ಉತ್ತರವನ್ನು ಕಂಡು ಹಿಡಿಯಲು ಅವರು ತಮ್ಮ ‘ತಂದೆ-ತಾಯಂದಿರ’ ದಿನಚರಿಗಳನ್ನು ಓದುತ್ತಾರೆ. ಈ ದಿನಚರಿಯ ಮೂಲಕ ಅವರಿಗೆ ಸುದರ್ಶನ, ಉತ್ತರಾ ಮತ್ತು ಅವಳ ‘ಪತಿ’ ಫೈಟರ್ ಪೈಲಟ್ ಯಾದವ್, ಇವರುಗಳ ಬಗ್ಗೆ ಮಾಹಿತಿ ದೊರಕುತ್ತದೆ. ಅಲ್ಪ ಸ್ವಲ್ಪ ತೊಳಲಾಟದ ನಂತರ ಆಕಾಶ್ ಮತ್ತು ಮೇದಿನೀ ಉತ್ತರಾಳನ್ನು ತಮ್ಮ ‘ಅಮ್ಮ’ನೆಂದು ಒಪ್ಪಿಕೊಂಡು ಅವರ ಕೆಲಸವನ್ನು ಮುಂದುವರೆಸಲು ಸಿದ್ಧರಾಗುವಲ್ಲಿಗೆ ಕಾದಂಬರಿ ಮುಗಿಯುತ್ತದೆ.
ಮೊದಲಿಗೆ, ಈ ಕೃತಿ ‘ವೈಜ್ಞಾನಿಕ ಕಾದಂಬರಿ’ ಎಂಬ ಪ್ರಭೇದವನ್ನು ಹೋಲುವುದರಿಂದ, ಅದರ ಬಗ್ಗೆಯೇ ಒಂದೆರಡು ಮಾತುಗಳು. ನಕ್ಷತ್ರಯಾನದ ಯೋಜನೆಯನ್ನು ರೂಪಿಸಿದವರಲ್ಲಿ ಮುಖ್ಯರಾದ ಡಾ. ವೆಂಕಟ್ ಅದನ್ನು ಹೀಗೆ ವಿವರಿಸುತ್ತಾರೆ: ಸೂರ್ಯನ ಗುರುತ್ವದ ಆಚೆಗೆ ಹೋಗಿ ನಮಗೆ ಹತ್ತಿರದ ಪ್ರಾಕ್ಸಿಮಾ ಸೆಂಟಾರಿಸ್ ನಕ್ಷತ್ರದ ವಲಯಕ್ಕೆ ಪ್ರಯಾಣ ಮಾಡಿ, ಅಲ್ಲಿ ಯಾವುದಾದರೂ ಗ್ರಹವಿದೆಯೇ, ಇದ್ದರೆ ಜೀವಿಸಲು ಯೋಗ್ಯವಾಗಿದೆಯೆ ಅನ್ನುವುದನ್ನು ಖುದ್ದು ಅನ್ವೇಶಿಸುವುದು. ಸುಮಾರು ಮೂವತ್ತು ನಲವತ್ತು ಸಾವಿರ ವರ್ಷದ ಪ್ರಯಾಣ ಇದು. . . . (ಈ ನೌಕೆಯಲ್ಲಿಯೇ) ಒಂದು ಸಾವಿರ ತಲೆಮಾರುಗಳ ಸೃಷ್ಟಿ, ಶಿಕ್ಷಣ, ಸಂತಾನೋತ್ಪತ್ತಿಗಳು ನಡೆಯುತ್ತವೆ. ಇಂತಹ ಯೋಜನೆಯ ಸಾಧ್ಯಾಸಾಧ್ಯತೆಗಳೇನೇ ಇರಲಿ, ಉದ್ದೇಶವಂತೂ ಪೂರಾ ಅಯೋಮಯವಾಗಿ ಕಾಣುತ್ತದೆ: 30-40 ಸಾವಿರ ವರ್ಷಗಳ ವರೆಗೆ ಭೂಮಿಯ ಮೇಲಿರುವ ವಿಜ್ಞಾನಿಗಳು ಸಂಗ್ರಹಿಸುವ ದತ್ತಾಂಶವನ್ನು ಉಪಯೋಗಿಸುವವರು ಯಾರು? ಅಲ್ಲಿಯವರೆಗೆ ಮಾನವ ಕುಲ ಹೀಗೇ ಇರುತ್ತದೆಯೆ? ಅಷ್ಟು ವರ್ಷಗಳ ಅವಧಿಯಲ್ಲಿ ಸ್ತ್ರೀಯೇ ಗರ್ಭ ಧರಿಸಿ ಮಕ್ಕಳನ್ನು ಪಡೆಯುವ ವಿಧಾನ ಹಾಗೆಯೇ ಇರುತ್ತದೆಯೆ? ಇತ್ಯಾದಿ. ಆದರೆ, ಭೈರಪ್ಪನವರೇ ಹೇಳುವಂತೆ, ಇದು ವೈಜ್ಞಾನಿಕ ಕಾದಂಬರಿಯಲ್ಲ; ಆ ಪ್ರಭೇದದ ಚೌಕಟ್ಟನ್ನು ಉಳಿಸಿಕೊಂಡು, ಆ ಮೂಲಕ ‘ಮುಂದಿನ ಶತಮಾನಗಳಲ್ಲಿ ಘಟಿಸುವ ಮಾನವ ಅನುಭವಗಳನ್ನು ಹುಡುಕುವ’ (‘ಹಿನ್ನುಡಿ’) ಒಂದು ಸಾಹಿತ್ಯಕೃತಿ. ಎಂದರೆ, ಈ ಚೌಕಟ್ಟು ಕೆಲವು ಪ್ರಶ್ನೆಗಳನ್ನು ಎತ್ತುವುದಕ್ಕೆ ಸಂದರ್ಭವೊಂದನ್ನು ಸೃಷ್ಟಿಸುತ್ತದೆ.

ಈ ಚೌಕಟ್ಟಿನ ಮೂಲಕ ಕಾದಂಬರಿಕಾರರು ಎತ್ತುವ ಎರಡು ಬಗೆಯ ಪ್ರಶ್ನೆಗಳೆಂದರೆ: ವೈಚಾರಿಕ ನೆಲೆಯಲ್ಲಿ, ವಿಜ್ಞಾನ-ನೈತಿಕತೆ-ನಂಬಿಕೆ-ಧರ್ಮ ಇವುಗಳ ಸಂಬಂಧವೇನು? ಮತ್ತು ವ್ಯಕ್ತಿಗಳ ನೆಲೆಯಲ್ಲಿ, ವಿಜ್ಞಾನ ಹಾಗೂ ತಂತ್ರಜ್ಞಾನಗಳು ಅಗಾಧವಾಗಿ ಬೆಳೆಯುವ ಭವಿಷ್ಯದಲ್ಲಿ ಸ್ತ್ರೀ-ಪುರುಷ ಸಂಬಂಧಗಳು ಹೇಗಿರುತ್ತವೆ (ಅಥವಾ ಹೇಗಿರಬೇಕು)?
ವೈಚಾರಿಕ ನೆಲೆಯಲ್ಲಿ, ನಾವು ವಿಜ್ಞಾನಕ್ಕೂ ಧರ್ಮಕ್ಕೂ/ ಅಧ್ಯಾತ್ಮಕ್ಕೂ ಏನೂ ಸಂಬಂಧವಿಲ್ಲ ಎಂದು ನಂಬುತ್ತೇವೆ . ಆದರೆ, ಇದನ್ನು ‘ಪಶ್ಚಿಮದ’ ನಿಲುವೆಂದು ಲೇಖಕರು ಖಂಡಿಸುತ್ತಾರೆ. ಪಶ್ಚಿಮದ ಚಿಂತಕರು ಬುದ್ಧಿ ಮತ್ತು ಭೌತವಸ್ತುಗಳೆಂಬ ವಿಂಗಡಣೆ ಮಾಡಿ ಅವುಗಳನ್ನು ಮತ್ತೆ ಒಂದುಗೂಡಿಸಲಾರದೆ ತೊಳಲುತ್ತಿದ್ದಾರೆ. . . . ಭೌತವಸ್ತುವೂ ಬುದ್ಧಿಯ ಒಂದು ರೂಪ ಎಂದು ಕೆಲವು ಅಲ್ಪಸಂಖ್ಯಾತರು ಹೇಳುತ್ತಾರೆ (ಪು.179). ಎಂದರೆ, ಭಾರತೀಯ ಸಂಸ್ಕೃತಿಯ ನೆಲೆಯಲ್ಲಿ ವಿಜ್ಞಾನ ಮತ್ತು ಅಧ್ಯಾತ್ಮಗಳ ನಡುವೆ ನಿಕಟ ಸಂಬಂಧವಿದೆ ಎಂಬುದು ಕಾದಂಬರಿಯ ನಿಲುವು. ಈ ಕಾರಣದಿಂದಲೇ, ವಿವೇಕಾನಂದರು ಅಧ್ಯಾತ್ಮಚಿಂತನೆಯ ಶಿಖರವೆಂದು ಗುರುತಿಸುವ ‘ನಾಸದೀಯ ಸೂಕ್ತ’ವನ್ನು ಆಧುನಿಕ ಖಭೌತ ವಿಜ್ಞಾನದ ಮಹಾಸ್ಫೋಟ ಸಿದ್ಧಾಂತದ ಪೂವರ್ಾಭಿವ್ಯಕ್ತಿ (ಪು. 184) ಎಂದು ವಿಜ್ಞಾನಿ ಸುದರ್ಶನ ಗ್ರಹಿಸುತ್ತಾರೆ; ಮತ್ತು ಅನಂತರ ಸೂಯರ್ೋಪಾಸನೆಯ ‘ಅಸಾವಾದಿತ್ಯೋ ಬ್ರಹ್ಮ’ ಎಂಬ ಮಂತ್ರದ ಮಹತ್ವವನ್ನು ದೀರ್ಘವಾಗಿ ವ್ಯಾಖ್ಯಾನಿಸುತ್ತಾರೆ.
ವಿಜ್ಞಾನಕ್ಕೆ ಅಧ್ಯಾತ್ಮದ ನಿಕಟ ಸಂಬಂಧವಿದೆಯೆಂದ ಮೇಲೆ, ವಿಜ್ಞಾನ ಮತ್ತು ನೈತಿಕತೆ ಹಾಗೂ ವಿಜ್ಞಾನ ಮತ್ತು ನಂಬಿಕೆ ಇವುಗಳ ಸಂಬಂಧವನ್ನು ಸಮಥರ್ಿಸುವುದು ಸುಲಭ. ಪರಿಣಾಮತಃ, ಎಷ್ಟೇ ಸೂರ್ಯರುಗಳಿರಲಿ, ಎಷ್ಟೇ ಗೆಲಾಕ್ಸಿಗಳಿರಲಿ, ಅವುಗಳ ದೇಶಕಾಲಗಳು ಎಷ್ಟೇ ವ್ಯತ್ಯಾಸಗೊಳ್ಳುತ್ತಿರಲಿ, ಅವುಗಳನ್ನು ಅರಿಯುವ ಪ್ರಜ್ಞೆಯು ಒಂದೇ ಆಗಿರುವುದರಿಂದ ಅದರಿಂದ ರೂಪುಗೊಳ್ಳುವ ನೀತಿ ನಿಯಮಗಳೂ ಒಂದೇ ಆಗಿರುತ್ತವೆ (ಪು.189) ಎಂದು ಪ್ರವಾದಿಯಂತೆ ಸುದರ್ಶನ್ ದಾಖಲಿಸಬಲ್ಲರು. ಅಕಸ್ಮಾತ್ ಯಾರಿಗಾದರೂ ‘ಪ್ರಜ್ಞೆಯೂ ದೇಶಕಾಲಗಳಿಗನುಗುಣವಾಗಿ ಬದಲಾಗುತ್ತದೆ, ಒಂದೇ ಆಗಿರಲು ಸಾಧ್ಯವಿಲ್ಲ’ ಎಂದು ತೋರಿದರೆ, ಅವರೆಲ್ಲರೂ ‘ಪಶ್ಚಿಮ ಬುದ್ಧಿಯವರು’ ಎಂದು ಸರಾಗವಾಗಿ ತಿರಸ್ಕರಿಸಬಹುದು. ಅತ್ಯಂತ ಶ್ರೇಷ್ಠ ಮಟ್ಟದ ವೈಜ್ಞಾನಿಕ ಪಾಂಡಿತ್ಯ ಹಾಗೂ ತಾಂತ್ರಿಕ ನೈಪುಣ್ಯವನ್ನು ಬೇಡುವ ನಕ್ಷತ್ರನೌಕೆಗೆ ಚಾಲನೆ ಕೊಡುವ ಮೊದಲು ಡಾ. ವೆಂಕಟ್ ತಿರುಪತಿಗೆ ಹೋಗಿ, ಆ ನಕ್ಷತ್ರ ನೌಕೆಯ ಬೆಳ್ಳಿ ಪ್ರತಿಮೆಯನ್ನು ಕಾಣಿಕೆಯಾಗಿ ಅರ್ಪಿಸುವುದು ಕನಿಷ್ಠ ಪಕ್ಷ ಚರ್ಚಾಸ್ಪದವೆಂದೂ ಸುದರ್ಶನ್ಗಾಗಲಿ ವೆಂಕಟ್ ಅವರಿಗಾಗಲಿ ಕಾಣುವುದಿಲ್ಲ.
ವಿಜ್ಞಾನ, ನೈತಿಕತೆ, ಧಾರ್ಮಿಕ ನಂಬಿಕೆ ಇವುಗಳ ಸಂಬಂಧಗಳು ಇನ್ನೂ ಗೋಜಲಾಗಿ ಕಾಣುವುದು ಉತ್ತರಾಳ ಪಾತ್ರದಲ್ಲಿ; ಕಾದಂಬರಿಯ ಅತಿ ದುರ್ಬಲ ಹಾಗೂ ಕೃತಿಯ ವೈಚಾರಿಕತೆಯಲ್ಲಿರುವ ಸ್ವವಿರೋಧಗಳನ್ನು ಎತ್ತಿ ತೋರುವ ಪಾತ್ರ ಉತ್ತರಾಳದ್ದು. ಅಸಾಧಾರಣ ಧೈರ್ಯ, ಇಚ್ಛಾಶಕ್ತಿ ಹಾಗೂ ಬುದ್ಧಿಮತ್ತೆಗಳ ಸಂಯೋಗದಿಂದ ಯುದ್ಧವಿಮಾನದ ಪೈಲಟ್ ಆಗುವ ಉತ್ತರಾ, ನಕ್ಷತ್ರಯಾನದಲ್ಲಿ ಅಡುಗೆ ಮಾಡುವ, ಬಾನ್ಸಾಯ್ ಗಿಡಗಳನ್ನು ಬೆಳೆಸುವ ಮತ್ತು ತನ್ನ ಗರ್ಭಕೋಶವನ್ನು ಉಪಯೋಗಿಸುವ ಸ್ತ್ರೀಯಾಗುವಾಗ, ತನ್ನ ಎಲ್ಲಾ ಬಗೆಯ ತರಬೇತಿ ಹಾಗೂ ವಿದ್ಯೆ ವ್ಯರ್ಥವಾಗುತ್ತಿವೆಯೆಂದು ಅವಳಿಗೆ ಎಂದೂ ಅನಿಸುವುದಿಲ್ಲ. ಇದಕ್ಕೆ ವಿರುದ್ಧವಾಗಿ, ತಾನು ಪ್ರೀತಿಸಿದ ಹಾಗೂ ಸಾಂಕೇತಿಕವಾಗಿ ವಿವಾಹವಾದ ಯಾದವ ತನ್ನನ್ನು ಕೈಬಿಟ್ಟನೆಂಬ ಕಾರಣಕ್ಕಾಗಿ ಮಾತ್ರ ಕೊರಗುತ್ತಾಳೆ. ಮಹಾನ್ ವಿಜ್ಞಾನಿ ಡಾ. ವೆಂಕಟ್ ತಮ್ಮ ಯೋಜನೆಗೆ ಉತ್ತರಾಳನ್ನೇ ಏಕೆ ಆರಿಸುತ್ತಾರೆಂದರೆ, ಅವರೇ ಹೇಳುವಂತೆ ಅತ್ಯುತ್ತಮ ತಾಯಿಯಾಗುವ ಸಕಲ ಅಂಶಗಳೂ ಉತ್ತರಾರಲ್ಲಿದ್ದುವು (ಪು. 169). ಅಂತಹ ಉತ್ತರಾ ಪ್ರಣಾಳ ಶಿಶುಗಳಾದ ಆಕಾಶ್ ಮತ್ತು ಮೇದಿನೀ ಇವರುಗಳಿಗೆ ‘ ದೇಹ ಸಂಬಂಧಕ್ಕೆ ಶಾಸ್ತ್ರದ ಬಂಧವಿರಬೇಕು’ ಎಂದು ಆಗ್ರಹಿಸಿ, ವಿವಾಹದ ದಿನ ಕಂಪ್ಯೂಟರ್ನಿಂದ ಸಪ್ತಪದಿಯ ಮಂತ್ರಗಳನ್ನು ಕೇಳಿಸುತ್ತಾ ಅವರಿಗೆ ‘ಶಾಸ್ತ್ರೋಕ್ತವಾಗಿ’ ವಿವಾಹವನ್ನು ಮಾಡಲು ನಿರ್ಧರಿಸುತ್ತಾಳೆ. (ವೀರ್ಯ ಮತ್ತು ಅಂಡಗಳ ಗುಪ್ತದಾನಿಗಳು ಹಿಂದುಗಳಾಗಿರದಿದ್ದರೆ!) ಕೊನೆಯಲ್ಲಿ, ತನ್ನ ವಿದ್ಯೆ, ತರಬೇತಿ, ಸಾಮರ್ಥ್ಯ, ಎಲ್ಲವನ್ನೂ ಮರೆತು ಆಕಾಶ್ ಮತ್ತು ಮೇದಿನೀ ಅವಳನ್ನು ‘ಅಮ್ಮ’ ಎಂದು ತಬ್ಬಿಕೊಂಡಾಗ ಸಾರ್ಥಕತೆಯನ್ನು ಅನುಭವಿಸುತ್ತಾಳೆ. ಅವಳಂತೆಯೇ ಮುಂದಿನ ಸಾವಿರ ಜೋಡಿಗಳಲ್ಲಿಯೂ ಹೆಣ್ಣು ಅಮ್ಮನಾಗುವುದು ಮತ್ತು ಗಂಡು ಕಂಪ್ಯೂಟರ್ ತಜ್ಞನಾಗಿ ಆ ಯಾನವನ್ನು ಮುನ್ನಡೆಸುವುದು – ಈ ಪಧ್ದತಿ ಮುಂದುವರೆಯುತ್ತದೆ.
ಅರ್ಥಾತ್, ಭೂಮಿಯ ಮೇಲಾಗಲಿ ನಕ್ಷತ್ರಲೋಕದಲ್ಲಾಗಲಿ, ಇಂದಾಗಲಿ ಇನ್ನು ಹತ್ತು ಸಹಸ್ರ ವರ್ಷಗಳ ನಂತರ ಆಗಲಿ, ಸ್ತ್ರೀ ‘ಒಂದು ಗರ್ಭಕೋಶ’ ಮತ್ತು ಆ ಕಾರಣಕ್ಕಾಗಿ ಪೂಜೆಗೊಳ್ಳುವ ‘ದೇವಿ’ ಎಂಬಂತಹ ನಿಲುವು ಇದು. (ಉತ್ತರಾ ತಾನು ಗರ್ಭಾಂಕುರವನ್ನು ಸ್ವೀಕರಿಸಿ ಮಕ್ಕಳಿಗೆ ಜನ್ಮ ಕೊಡುತ್ತೇನೆ ಎಂದು ನಿರ್ಧರಿಸಿದಾಗ, ಸುದರ್ಶನ್ ಅವಳ ಕಾಲುಗಳ ಮೇಲೆ ತನ್ನ ತಲೆಯಿಟ್ಟು ಪೂಜಿಸುತ್ತಾನೆ.) ಸ್ತ್ರೀ-ಪುರುಷ ಸಂಬಂಧಗಳನ್ನು ಕುರಿತು ಇಂತಹ ನಿಲುವನ್ನು ತಾಳುವ ಕಾದಂಬರಿಯಲ್ಲಿ ಯಾವ ಅತ್ಯಾಚಾರದಲ್ಲಿಯೂ ಹೆಂಗಸು ತೃಪ್ತಿ ಕಾಣುವುದಿಲ್ಲ ಅನ್ನೂದು ತಪ್ಪು. . . . ಗಂಡಸು ತನ್ನನ್ನು ಬಲಾತ್ಕರಿಸಲಿ ಅಂತ ಎಷ್ಟೋ ಹೆಂಗಸರು ಬಯಸುತ್ತಾರೆ ( ಪು. 129) ಎಂಬಂತಹ ಹೇಳಿಕೆಯಾಗಲಿ; ಡಾ. ವೆಂಕಟ್ ತಿರುಪತಿಗೆ ಹೋಗಿ ನಕ್ಷತ್ರಯಾನದ ನೌಕೆಯ ಬೆಳ್ಳಿ ಪ್ರತಿಮೆಯನ್ನು ಅರ್ಪಿಸಿದುದನ್ನು ಕುರಿತು ಅವೈಜ್ಞಾನಿಕ, ಜಾತ್ಯಾತೀತ ಅನ್ನುವ ದೊಡ್ಡ ದೊಡ್ಡ ಶಬ್ದಗಳಲ್ಲಿ ಬೊಬ್ಬೆ ಹೊಡೆಯುತ್ತಾರೆ (ಪು.173) ಎಂಬಂತಹ ಧರ್ಮನಿರಪೇಕ್ಷತೆಯನ್ನು ಕುರಿತ ತಿರಸ್ಕಾರವಾಗಲಿ; ತನ್ನ ಗಂಡನ ವಿವಾಹಪೂರ್ವ ಲೈಂಗಿಕತೆಯ ಬಗ್ಗೆ (ಅವನು ಉತ್ತರಾಳೊಡನೆ ನೂರು ದಿನ ಅಂತರಿಕ್ಷದಲ್ಲಿರುವಾಗ ಅವಳೊಡನೆ ಅನೂಚಾನವಾಗಿ ಲೈಂಗಿಕ ಸಂಪರ್ಕವನ್ನು ಇಟ್ಟುಕೊಂಡಿರುತ್ತಾನೆ) ಕೇಳುವ ಯಾದವನ ಹೆಂಡತಿ ರಜನಿಯು ಕಾದಂಬರಿಯಲ್ಲಿ ತೀವ್ರ ವಿಡಂಬನೆಗೆ ಗುರಿಯಾಗುವುದಾಗಲಿ — ಇವು ಯಾವುವೂ ಅನಿರೀಕ್ಷಿತವೆಂದು ಕಾಣುವುದಿಲ್ಲ.
ಕೊನೆಯಲ್ಲಿ ಕಾಡುವ ಪ್ರಶ್ನೆ: ಅತ್ತ ರೋಚಕ ವೈಜ್ಞಾನಿಕ ಕಥೆಯೂ ಆಗದ ಇತ್ತ ಗಂಭೀರ ಸಾಮಾಜಿಕ ಚಿಂತನೆಯನ್ನೊಳಗೊಂಡ ಕಾದಂಬರಿಯೂ ಆಗದ, ಯಾನದಂತಹ ಕೃತಿಯನ್ನು ಅಪಾರ ಸಂಖ್ಯೆಯ ಓದುಗರನ್ನು ಪಡೆದಿರುವ, ಪರ್ವ, ನಿರಾಕರಣೆ, ಜಲಪಾತ, ಇತ್ಯಾದಿ ಕಾದಂಬರಿಗಳನ್ನು ರಚಿಸಿರುವ ಭೈರಪ್ಪನವರು ಬರೆಯುವಂತಾಯಿತೆ?

‍ಲೇಖಕರು G

11 August, 2014

6 Comments

  1. Prabhakar M. Nimbargi

    ಅಪಾರ ಸಂಖ್ಯೆಯ ಓದುಗರನ್ನು ಪಡೆದಿರುವ, ಪರ್ವ, ನಿರಾಕರಣೆ, ಜಲಪಾತ, ಇತ್ಯಾದಿ ಕಾದಂಬರಿಗಳನ್ನು ರಚಿಸಿರುವ ಭೈರಪ್ಪನವರು ಯಾನದಂತಹ ಕೃತಿಯನ್ನು ಬರೆಯುವಂತಾಯಿತೆ? Is it not a pity that drove him to do so?

  2. Kiran

    Every author has freedom to experiment with subjects. This is true for every good/great/mediocre author across the languages of globe.
    Similarly, every reader has the right to accept or reject the work.
    One should remember to critisize the work and not the author.
    CNR sir, it was you who taught us the last point in your emphatic way!

  3. Geetha B U

    Agree with kiran. Creation of characters, story , the depiction is all the author ‘s prerogative. Judge the novel..( disappointing…) not the author.

  4. M.A.Sriranga

    ‘ಯಾನ’ ಕಾದಂಬರಿಯನ್ನು ಓದುವಾಗ ಮತ್ತು ವಿಮರ್ಶಿಸುವಾಗ ನನಗೆ ಕಂಡಂತೆ ಈ ಮೂರು ಅಂಶಗಳನ್ನು ಗಮನಿಸಬೇಕಾಗುತ್ತದೆ ಎಂದು ಅನಿಸುತ್ತದೆ.
    (೧) ವಿಜ್ಞಾನಿಗಳಿಗೆ ಜನ ಸಾಮಾನ್ಯರಂತೆ ದೇವರಲ್ಲಿ ಭಕ್ತಿ/ನಂಬಿಕೆ ಇರುವುದು ಒಂದು ಅಪಮೌಲ್ಯವಾಗುತ್ತದೆಯೇ? ಡಾ. ವೆಂಕಟ್ ಮತ್ತು ಅವರ ತಂಡದವರು ರೂಪಿಸಿದ ಬಾಹ್ಯಾಂತರಿಕ್ಷ ನೌಕೆಯ ಯಶಸ್ಸು/ಅಪಯಶಸ್ಸು ‘ದೇವರ ಮೇಲಿನ ನಂಬಿಕೆ ಅಥವಾ ದೇವರ ಶಕ್ತಿಯ ಮೇಲೆ ನಿಂತಿಲ್ಲ ಎಂಬುದು ಅವರಿಗೆ ಗೊತ್ತಿದೆ. ಆದರೂ ಅವರೂ ತಿರುಪತಿಗೆ ಅದರ ಬೆಳ್ಳಿಯ ಪ್ರತಿಕೃತಿ(model)ನೊಂದಿಗೆ ಹೋಗುತ್ತಾರೆ. ಇದೇ ರೀತಿ ನಮ್ಮ ಇಸ್ರೋದ ಖ್ಯಾತ ವಿಜ್ಞಾನಿಯೊಬ್ಬರು ಸಹ ಬೆಳ್ಳಿಯ ಪ್ರತಿಕೃತಿಯೊಂದಿಗೆ ತಿರುಪತಿಗೆ ಹೋಗಿ ಪೂಜೆ ಸಲ್ಲಿಸಿದ ಫೋಟೋ ಮತ್ತು ವರದಿ ದಿನ ಪತ್ರಿಕೆಗಳ ಮುಖಪುಟದಲ್ಲೇ ಬಂದಿತ್ತು. ಅಂದಮೇಲೆ ಯಾವುದು ಅಂದು ವಾಸ್ತವಾಗಿ ನಡೆದಿತ್ತೋ ಅದೇ ಸಂಗತಿ ಡಾ. ವೆಂಕಟ್ ಅವರ ಪಾತ್ರದಲ್ಲಿ ಪ್ರತಿಫಲನಗೊಂಡಿದೆ. ವಿಜ್ಞಾನ ದೇವರು ಇದ್ದಾನೆ ಎಂದೂ ಹೇಳಿಲ್ಲ ಇಲ್ಲ ಎಂದೂ ಹೇಳುತ್ತಿಲ್ಲ. ಆ ಬಗ್ಗೆ ನಮಗೆ ಗೊತ್ತಿಲ್ಲ ಎಂದಷ್ಟೇ ಹೇಳಿದೆ.ಅಲ್ಲವೇ?
    (೨) ಇಂದು ಸಂಶೋಧನೆಗಳನ್ನು ನಡೆಸುತ್ತಿರುವ ವಿಜ್ಞಾನಿಗಳು ನಾಳೆ ಇದರ ಭವಿಷ್ಯ ಏನಾಗಬಹುದು/ಅದನ್ನು ಮುಂದೆ ಯಾರಾದರೂ ಮುಂದುವರಿಸುತ್ತಾರೋ ಇಲ್ಲವೋ/ಇದು ಯಶಸ್ವಿ ಆಗುತ್ತದೆಯೇ ಎಂಬುದನ್ನು ಯೋಚಿಸುತ್ತಾ ಕೂರುವುದಿಲ್ಲ. ಶಿಕ್ಷಕ/ಪ್ರಾಧ್ಯಾಪಕ/ಕಾರ್ಮಿಕ ಇತರರಂತೆ ಅವರೂ ತಮ್ಮ ಕೆಲಸ ಮಾಡುತ್ತಾ ಹೋಗುತ್ತಾರೆ . ನಮ್ಮಂತಹ ಮಾಮೂಲಿ ಜನಗಳಿಗಿಂತ ಸ್ವಲ್ಪ ಹೆಚ್ಚಾಗಿ ತಮ್ಮ ಕೆಲಸದ ಬಗ್ಗೆ ಶ್ರದ್ಧೆ ಇಟ್ಟು ಮಾಡುತ್ತಾರೆ. ರೈಟ್ ಸಹೋದರರು ಮೊದಲ ಬಾರಿಗೆ ವಿಮಾನದ ಪರಿಕ್ಷಾರ್ತ ಹಾರಾಟ ನಡೆಸಿದ್ದಾಗ ಅದು ಕೇವಲ ಹತ್ತು ಅಡಿ ನೆಲದಿಂದ ಮೇಲಕ್ಕೆ ಹಾರಿ ಕೆಳಗೆ ಇಳಿದಾಗ ಅದನ್ನು ನೋಡಲು ಸೇರಿದ್ದ ಜನಸ್ತೋಮ ಅವರನ್ನು ಕಿಚಾಯಿಸಿ,ಹಾಸ್ಯ ಮಾಡಿತಂತೆ. ಇದು ಆಗದ ಹೋಗದ ಕೆಲಸ ಎಂದು. ಆದರೆ ಅವರು ಮುಂದುವರೆಸಲಿಲ್ಲವೇ? ಇನ್ನು ‘ಯಾನ’ದಲ್ಲಿ ಬರುವಂತೆ ಅಷ್ಟು ದೀರ್ಘ ಕಾಲ ಈ ಭೂಮಿಯ ಮೇಲೆ ಜನಗಳು ಬದುಕಿರುತ್ತಾರೆಯೇ? ಬದುಕಿದ್ದರೂ ಈಗಿರುವಂತೆಯೇ ಇರುತ್ತಾರೆಯೇ ಎಂಬ ಪ್ರಶ್ನೆ ಸಹಜವಾದದ್ದೇ. ಅದಕ್ಕೆ ವೈಜ್ಞಾನಿಕವಾಗಿ ಸದ್ಯಕ್ಕೆ ಉತ್ತರವನ್ನು ಊಹಿಸಲು ಹೇಗೆ ತಾನೇ ಸಾಧ್ಯ? ಇಂತಹದೊಂದು ಪ್ರಯತ್ನ ನಡೆದರೆ ಹೇಗಿರಬಹುದೆಂಬ ಒಂದು ಊಹೆಯ ಮೇಲೆ ‘ಯಾನ’ದ ಕತೆ ನಿಂತಿದೆ. ಇಂದು ವಾಪಸ್ಸು ಬರುವ ಖಾತರಿಯೇ ಇಲ್ಲದ ‘ಮಂಗಳಯಾನ’ಕ್ಕೆ ಹೋಗಲು ಜನ ರೆಡಿಯಾಗಿ ನಿಂತಿಲ್ಲವೇ? ಮಾನವನ ಈ ಸಾಹಸವೇ ಎಲ್ಲಾ ಸಂಶೋಧನೆಗಳ ಮೂಲವಲ್ಲವೇ?
    (೩) ‘ಯಾನ’ದಲ್ಲಿ ಬಂದಿರುವ ವೈಜ್ಞಾನಿಕ ಅಂಶಗಳನ್ನು ನಮ್ಮ iisc ಮತ್ತು , isro ದ ವಿಜ್ಞಾನಿಗಳು ಪರಿಶೀಲಿಸಿದ್ದಾರೆ ಎಂದು ‘ಹಿನ್ನುಡಿ’ಯಲ್ಲಿ ಹೇಳಲಾಗಿದೆ. ಆ ವಿಜ್ಞಾನಿಗಳ ಹೆಸರುಗಳನ್ನೂ ಹೇಳಲಾಗಿದೆ. ಜತೆಗೆ ಇದಕ್ಕೆ ಸಂಬಂಧಿಸಿದಂತೆ ಒಬ್ಬರು ವಿಜ್ಞಾನಿಯ ಲೇಖನವೂ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇಂತಹ ಸನ್ನಿವೇಶದಲ್ಲಿ ಸಾಹಿತ್ಯಕ್ಕೆ/ವಿಮರ್ಶೆಗೆ ಬೇಕಾದ “ಸತ್ಯ” ಯಾವುದು ಎಂಬ ಪ್ರಶ್ನೆಯನ್ನಂತೂ ‘ಯಾನ’ ಹುಟ್ಟುಹಾಕಿದೆ. .

  5. Renuka A Kathari

    Obba kavi vijnadada bagge higu vichara madabahudendu torisikottidare tumba khushi agide sir

  6. Prakash. R

    I had read about the earlier works of S.L. Byrappa, but I had not read any of his novels. I have heard from my wife and many others that many of his earlier novels are classics. Byrappa, as a writer stood in high esteem in my own minds.
    Yaana was the first S.L. Byrappa novel that I read and I was disappointed. I think that any good novel has a focus and purpose and it could be anything – fiction, detective, melodrama, science based, issue based, entertainment, etc., But I could not see a focus or purpose in Yaana.
    The only thing that I could visualise as good was the concept of the novel, story with several facts and issues being woven round a very very long haul space travel, which by itself is imaginative.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading