ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೈತ್ರಿಕಾ ಹೆಗಡೆ ಹೊಸ ಕಥಾ ಸಂಕಲನ ‘ನೀಲಿ ಬಣ್ಣದ ಸ್ಕಾರ್ಫು’

ಚೈತ್ರಾ ಹೆಗ್ಡೆ

ಊರಿನ‌ ಕಡೆ ಹೋಗಿ ನನ್ನವರಿಗೆಲ್ಲ ಪುಸ್ತಕ ಕೊಟ್ಟು ಬಂದೆ. ನನ್ನ ಕಥೆಗಳಲ್ಲಿನ ವಸ್ತುಗಳು ಬಹುತೇಕ ನನ್ನ ಸುತ್ತಮುತ್ತಲಿನದೇ. ‘ಯೇ ದೊಸತಿ’ ಕಥೆ ಓದಿ ‘ನಿಂಗೆ ಒಸಿ ಆಟ ಗೊತ್ತಾ?’ ಎಂದು ಕೇಳಿದವರಿದ್ದಾರೆ. ಇನ್ಯಾವುದೋ ಕಥೆಯ ಅಂತ್ಯ ನೋಡಿ ‘ನಿಜಕ್ಕೂ ಹೀಗೆ ಆಗಿತ್ತಾ?’ ಎಂದು ಕೇಳಿದವರೂ ಇದ್ದಾರೆ. ಅದು ಕಥೆ ಅಷ್ಟೇ, ನಾನು ನೋಡಿದಕ್ಕೆ ಕೇಳಿದಕ್ಕೆ ನನ್ನದೇ ಕಲ್ಪನೆ ಕೊಟ್ಟು ವಿವರಿಸಿದ್ದು, ವಿಸ್ತರಿಸಿದ್ದು ಎಂದು ಅರ್ಥ ಮಾಡಿಸುವುದು ಕಷ್ಟ. ಮೂಕಮ್ಮ ಅಂತೊಂದು ಕತೆ ಇದೆ. ಆ ಮೂಕಮ್ಮ ನಿಜಕ್ಕೂ ಇದ್ದಾಳೆ. ನನ್ನ ಚಿಕ್ಕಮ್ಮನ ಊರಿನಲ್ಲಿ ಅವಳಿರುವುದು.

ಮೊನ್ನೆ ಚಿಕ್ಕಮ್ಮ ವಿಡಿಯೋ ಕಾಲ್ ಮಾಡಿದಾಗ ಮೂಕಮ್ಮ ಇಣುಕಿದಳು. ಅವಳಿಗೆ ಓದಲು ಬರುವುದಿಲ್ಲ, ಅದಕ್ಕೆ ಅವಳು ಆ ಕಥೆಯನ್ನು ಒದಿಲ್ಲ. ಅಲ್ಯಾರೋ ‘ನಿನ್ ಮೆಲೆ ಕಥೆ ಬರದ್ದು’ ಎಂದು ಹೇಳುತ್ತಿದ್ದರೂ ಅವಳಿಗದರ ಬಗ್ಗೆ ಯಾವ ಕುತೂಹಲವೂ ಇಲ್ಲದೇ ‘ಬೆಂಗಳೂರಿಗೆ ಬಂದಿದ್ನೇ, ವಾಹನ ಎಲ್ಲ ಮೈಮೇಲೆ ಓಡಾಡ್ತೆ ನಿಂಗ್ಳ ಬೆಂಗಳೂರಲ್ಲಿ, ಕಾಲ್ಮೇಲೆ ಹತ್ಸಬುಡತ್ವನ‌ ಕಾಣ್ತು’ ಎಂದು‌ ನಕ್ಕಳು.

ಒಂದು ಕುಣಿತ ಕುಣಿ ನೋಡನ ಅಂದಿದಕ್ಕೆ ತಾನೇ ಭಾಗವತಿಕೆ ಮಾಡಿಕೊಂಡು ‘ಸುಟ್ ಕಾಲ್ ನೋಯ್ತೆ’ ಎನ್ನುತ್ತಲೇ ಯಕ್ಷಗಾನ ಮಾಡಿದಳು. ಮರುದಿನ ಚೈತ್ರಂಗೆ ವಿಡಿಯೊ ಕಾಲ್ ಮಾಡು ಎಂದು ಹಟ ಮಾಡಿ ಮತ್ತೆ ಕಾಲ್ ಮಾಡಿಸಿ ಮಾತಾಡಿದಳು. ಮೂಕಮ್ಮ ಕಥೆಯನ್ನು ಮೂಕಮ್ಮನೇ ಓದಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದಳು? ಎನಿಸಿತು. (ಆ ಕಥೆ ಪೂರ್ತಿಯಾಗಿ ಅವಳ‌ ಕಥೆಯಲ್ಲವಾದರೂ ಅದರಲ್ಲಿರುವ ಮೂಕಮ್ಮನಂತೂ ಅವಳೇ)

ಇನ್ನು ನನ್ನ ಕಥಾ ಸಂಕಲನದಲ್ಲಿರುವ ಎಲ್ಲ ಕಥೆಗಳನ್ನೂ ಬರೆದಿದ್ದು ಕಂಚಿಮನೆಯ ಮೆತ್ತಿಯ‌ ಮೇಲೆ ಕುಳಿತು. ಅಲ್ಲಿ‌ ನಾನು ಬರೆಯಲೆಂದೇ ಒಂದು ಜಾಗ ಮಾಡಿಕೊಂಡಿದ್ದೆ. ಅಲ್ಲಿ ಹೋಗಿ ಕುಳಿತ ವಿನಹ ಒಂದು ಸಾಲೂ ಹುಟ್ಟುವುದಿಲ್ಲ ಎಂಬಷ್ಟು ಆ ಜಾಗವನ್ನು ಹಚ್ಚಿಕೊಂಡಿದ್ದೆ. ಈ ಸೀರ್ಯಲ್ ಬರವಣಿಗೆ ಶುರುವಾದ ಮೇಲೆ ಎಲ್ಲೆಂದರಲ್ಲಿ ಅಂದರೆ ತೀರ ಜಯನಗರದಲ್ಲಿ ಶಾಪಿಂಗ್ ಮಾಡುತ್ತ ಮೊಬೈಲಲ್ಲಿ ಸೀನ್ ಪೇಪರ್ ಬರೆದಿದ್ದಿದೆ. ಊರಿಗೆ ಹೋಗುವಾಗ ರಾತ್ರಿ ಬಸ್ಸಲ್ಲಿ ತುಳುಕಾಡುತ್ತ ಡೈಲಾಗುಗಳನ್ನ ಟೈಪ್ ಮಾಡಿದ್ದಿದೆ. ಆದರೆ ಕಥೆಗಳು ಹುಟ್ಟಲು ನನಗೀಗಲೂ ಕಂಚಿಮನೆಯ ಮೆತ್ತಿಯೇ ಬೇಕು.

ಅಂದ ಹಾಗೇ ನನ್ನ ಕಥಾ ಸಂಕಲನವನ್ನು ಇನ್ನೂ ಓದದವರು ಕೊಂಡು ಓದಿ. ಈಗ ಅಂಕಿತ ಪುಸ್ತಕ ಮಳಿಗೆಯಲ್ಲೂ ‘ನೀಲಿ ಬಣ್ಣದ ಸ್ಕಾರ್ಫು’ ಲಭ್ಯವಿದೆ.

‍ಲೇಖಕರು Admin

8 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading