ಸತೀಶ ಕುಲಕರ್ಣಿ
ಸುಡುಸುಡುವ ಹಗಲು, ಅಬ್ಬರದ ಚುನಾವಣಾ ದಿನಗಳ ನಡುವೆ ಈ ಬಾರಿಯ ಕಾರ್ಮಿಕ ದಿನಾಚರಣೆ (ಮೇ 1) ಬಂದಿದೆ. ಹಾವೇರಿ ಕೆ.ಇ.ಬಿ ಕಛೇರಿಯ ಆವರಣದಲ್ಲಿ ಹೀಗೊಂದು ಕಾರ್ಮಿಕ ಸ್ಮಾರಕವಿದೆ. ದುಡಿಯುವವರ ಕಾಯಕಕ್ಕೆ ಕೊಡುವ ಗೌರವ ಸಂಕೇತವಾಗಿ ಕಂಗೊಳಿಸುತ್ತಿದೆ.
ಇಪ್ಪತ್ತೆರಡು ವರ್ಷಗಳ ಹಿಂದೆ (06 -08 -2001) ನಿರ್ಮಾಣಗೊಂಡ ಸ್ಮಾರಕ ಹೋರಾಟಗಾರರಿಗೊಂದು ಈಗಲೂ ಚೈತನ್ಯದ ಕೇಂದ್ರ ಬಿಂದು. ಅಂದಾಜು ಒಂದು ಲಕ್ಷ ರೂಪಾಯಿಯಲ್ಲಿ ಪ್ರತಿ ಕೆ.ಇ.ಬಿ ನೌಕರನ ದೇಣಿಗೆ ಇದಕ್ಕೆ ಸಂದಿದೆ. ಆ ದಿನಗಳಲ್ಲಿ ಮುಂಚೂಣಿಯಲ್ಲಿದ್ದ ಕಾರ್ಮಿಕ ನಾಯಕ ಎನ್. ಜಯರಾಜು, ಸಿ.ಎ. ಕೂಡಲಮಠ ಮುಂತಾದವರ ಶ್ರದ್ಧೆ ಮತ್ತು ಶ್ರಮದ ಫಲವಾಗಿ ಕಟ್ಟಲ್ಪಟ್ಟದ್ದು. ಅಂದಿನ ಛೇರಮನ್ನರಾಗಿದ್ದ ವ್ಹಿ.ಬಿ. ಬಳಿಗಾರ ಇದನ್ನು ಉದ್ಘಾಟಿಸಿದ್ದರು.
ಅಗಲಿ ಹೋದ ಕಾರ್ಮಿಕರನ್ನು ಸ್ಮರಿಸುತ್ತಲೇ ಹೊಸ ತಲೆಮಾರಿಗೆ ಕಾರ್ಮಿಕ ಹೋರಾಟದ ಕಳಕಳಿಯನ್ನು ತುಂಬುವ ಕಪ್ಪುಗಲ್ಲಿನ ಸ್ಮಾರಕವಿದು. ಹಗಲು ರಾತ್ರಿಯನ್ನದೆ ಜೀವದ ಹಂಗು ತೊರೆದು ದುಡಿಯುವ ಲೈನ್ ಮೆನ್ ರ ಅನ್ನ ಅಸ್ತ್ರಗಳಾದ ಪಾನಾ ಪಕ್ಕಡ ಸಂಕೇತ ಇಲ್ಲಿದೆ.
ಮುಗಿವ ಕೈಗಳಿಗಿಂತ ದುಡಿವ ಕೈಗಳು ಮೇಲು, ಕಾರ್ಮಿಕ ಚಿರಾಯು ಎನ್ನುವ ಮಲ್ಲಿಗೆಯಂತಹ ಅಕ್ಷರಗಳು ಇಲ್ಲಿ ಅರಳಿವೆ.
ನಾಡಿಗೆ ಬೆಳಕು ಕೊಟ್ಟು
ಸಾವು ಕತ್ತಲೆಯ ಸೇರಿದ
ಸಾವಿರಾರು ಕಾರ್ಮಿಕರ
ಅಮರ ಸ್ಮರಣೆಯ ಸ್ಮಾರಕ









0 Comments