
ಡಾ ಹೇಮಾ ಪಟ್ಟಣಶೆಟ್ಟಿ
ಪ್ರಕಟ: ಕನ್ನಡ ಪ್ರಭ, ಸಾಪ್ತಾಹಿಕ, ೭-೧೧-೧೯೯೯
ಭಾವಜೀವಿಯು ನಾನು ನನ್ನೆದೆಯ ನಂಬಿರುವ
ತುಂಬಿರುವ ಕನಸುಗಳೆ ಕಲ್ಪವೃಕ್ಷ
ಎಂದು ಹಾಡಿದ ಚೆನ್ನವೀರ ಕಣವಿಯವರ ಕನಸು-ಕಲ್ಪವೃಕ್ಷದ ಇನೊಂದು ಫಲ ಈಗ ೧೯೯೮ರ ಪಂಪ ಪ್ರಶಸ್ತಿ ರೂಪದಲ್ಲಿ ಅವರಿಗೆ ಲಭಿಸಿದೆ. ಇದು ಪ್ರೊ. ಸಂ.ಶಿ. ಭೂಸನೂರಮಠ ಮತ್ತು ಡಾ. ಎಂ.ಎಂ. ಕಲಬುರ್ಗಿಯವರ ನಂತರ ಧಾರವಾಡಕ್ಕೆ ಸಂದ ಮೂರನೆಯ ಗೌರವ.
ಐವತ್ತು ವರ್ಷಗಳಿಂದ ನಿರಂತರವಾಗಿ, ನಿಷ್ಠೆಯಿಂದ ಕಾವ್ಯೋದ್ಯೋಗದಲ್ಲಿ ತೊಡಗಿದ ಕಣವಿಯವರು ಅನೇಕ ಉತ್ತಮ ಕವಿತೆಗಳನ್ನು ರಚಿಸಿ ಆಧುನಿಕ ಸಂದರ್ಭದ ಮಹತ್ವದ ಕವಿಗಳಲ್ಲಿ ಒಬ್ಬರಾಗಿದ್ದಾರೆ. ಇವರ ಆರಂಭದ ಕವಿತೆಗಳಲ್ಲಿ ಆದರ್ಶಪ್ರಿಯತೆ, ರಮ್ಯ ಮನೋಭಾವ, ನಿಸರ್ಗ ಪ್ರೀತಿ, ವ್ಯಕ್ತಿತ್ವ ನಿರ್ಮಾಣದ ಅಭೀಪ್ಸೆ ಗಮನ ಸೆಳೆಯುತ್ತವೆ.
೧೯೫೩ ರಲ್ಲಿ ಪ್ರಕಟಗೊಂಡ ಅವರ ಮೂರನೆಯ ಸಂಕಲನ ‘ಆಕಾಶಬುಟ್ಟಿ’ಯಲ್ಲಿ ಕಣವಿಯವರ ಆಸಕ್ತಿಯ ಕ್ಷಿತಿಜ ವಿಸ್ತಾರಗೊಂಡಿದೆ. ಕವಿದೃಷ್ಟಿ ಸಾಮಾಜಿಕ ಅಂಶಗಳತ್ತ ಹರಿದಿದೆ. ಸಮಾಜದ ಲೋಪ-ದೋಷಗಳು ವಿಡಂಬನೆಗೆ ಗುರಿಯಾಗಿವೆ. ಅದರಿಂದ ಸಹಜವಾಗಿಯೇ ವ್ಯಂಗ್ಯದ ಧಾಟಿಯನ್ನು ಪಡೆದಿವೆ. ಮುಂದೆ ನವ್ಯದ ಭಾಷಾ ಬಳಕೆ, ಲಯದ ಸಾಧ್ಯತೆ, ಅನುಭವಗಳನ್ನು ಒರೆಗೆ ಹಚ್ಚಿ ನೋಡುವ ರೀತಿಯನ್ನು ಇವರು ಪ್ರಜ್ಞಾಪೂರ್ವಕವಾಗಿ ಸ್ವೀಕರಿಸಿದರು. ಅಲ್ಲಿಯ ವಿಷಾದ, ಒಂಟಿತನ, ಕಾಮದ ಭರಾಟೆ, ಹರಿತ ವ್ಯಂಗ್ಯಗಳು ಇವರ ಸ್ವಭಾವಕ್ಕೆ ಅತೀತವಾದದ್ದರಿಂದ ಅವುಗಳನ್ನು ನಿರಾಕರಿಸಿದರು. ಬದುಕಿನಲ್ಲಿ ಸ್ನೇಹ, ಪ್ರೀತಿ, ಸಹನೆಗಳನ್ನು ಮೌಲ್ಯಗಳೆಂದು ಭಾವಿಸುವ ಕಣವಿಯವರು ಕಟುತ್ವ ಕಹಿಗಳಿಂದ ದೂರವೇ ಉಳಿದಿದ್ದಾರೆ.

ಅಲ್ಲ ಸಲ್ಲದ ವಿಷಯ ವಿಪರೀತ ಭಾವನೆಯ
ವಿಷಗಾಳಿ ಎನ್ನ ಬಳಿ ಸುಳಿಯದಿರಲಿ
ಸೊಲ್ಲು ಸೊಲ್ಲಿಗೆ ಪರರನಣಕಿಸುವ ಕೆಣಕಿಸುವ
ಅಶಿವ ನುಡಿ ಎನ್ನ ಕಿವಿ ಸೇರದಿರಲಿ!
ಎಂದು ಬಯಸುವ ಕಣವಿ ಜೀವನದುದ್ದಕ್ಕೂ ಹಾಗೆಯೇ ನಡೆದು ಕೊಂಡಿದ್ದಾರೆ. ತಮಗಿಂತ ಹಿರಿಯರಲ್ಲಿ ಆದರ ಭಾವ, ಕಿರಿಯರಲ್ಲಿ ವಾತ್ಸಲ್ಯಮಯತೆ ಹಾಗೂ ಸರೀಕರಲ್ಲಿ ನಿರ್ಮಲ ಸ್ನೇಹ ತೋರುತ್ತ ಬಂದಿದ್ದಾರೆ. ಅಂತೆಯೇ ಸಾಹಿತ್ಯಿಕ, ಸಾಂಸ್ಕೃತಿಕ ವಲಯಗಳಲ್ಲಿ ಅವರೊಬ್ಬ ಅಪರೂಪದ ವ್ಯಕ್ತಿ ಎನಿಸಿದ್ದಾರೆ. ಸರಳತೆ, ಸಜ್ಜನಿಕೆ, ಅಚ್ಚುಕಟ್ಟುತನ, ಸೌಜನ್ಯ, ಶುಚಿತ್ವ, ಅನಸೂಯೆ ಅವರ ವ್ಯಕ್ತಿತ್ವಕ್ಕೆ ಕಾಂತಿಯನ್ನಿತ್ತಿವೆ.
ನಿಸರ್ಗ ಸೌಂದರ್ಯ, ಜನತೆಯ ಪ್ರೀತಿ, ಮಾನವೀಯತೆಗಳಿಗೆ ಅವರು ತಮ್ಮ ಜೀವನದಲ್ಲಿ ವಿಶೇಷ ಪ್ರಾಧಾನ್ಯತೆ ನೀಡುತ್ತ ಬಂದಿದ್ದಾರೆ.
ಜೀವನದ ಮೌಲ್ಯಗಳೆಂದು ಆರಾಧಿಸಿದ್ದಾರೆ. ಕವಿಯ ಮೌಲ್ಯಗಳೇ ಅವನ ಕಾವ್ಯ ಮೌಲ್ಯಗಳಾಗುವುದು ಸ್ವಾಭಾವಿಕ. ಆದರೆ ಇತ್ತೀಚಿನ ದಿನಗಳಲ್ಲಿ ಬದುಕು ಮತ್ತು ಬರೆಹಗಳಲ್ಲಿ ಈ ತಾದಾತ್ಮ್ಯ ಕಾಣುವುದು ವಿರಳವಾಗಿದೆ. ಇಂಥ ಸಂದರ್ಭದಲ್ಲಿ ನಡೆ-ನುಡಿ-ಬರೆಹಗಳಲ್ಲಿ ಏಕಾತ್ಮಕತೆಯನ್ನು ಸಾಧಿಸಿದ ಕಣವಿ ಅವರು ನಿಜಕ್ಕೂ ಆದರ್ಶಪ್ರಾಯರಾಗಿದ್ದಾರೆ.
ನಿರಂತರವಾಗಿ ತೊರೆ ಮೊರೆತ ಹಚ್ಚ ಹಸುರಿನ
ಕಣಿವೆ. ಗುಡುಗು ಮಿಂಚುಗಳ ಗದ್ದಲವಿರದ
ಶ್ರಾವಣದ ಬೆಳ್ಮೋಡಗಳ ಹಾಯಾಗಿ ಹರಡಿ-
ಕೊಂಡಾಕಾಶ.
ಎಂದು ಕವಿ ಜಿ. ಎಸ್. ಶಿವರುದ್ರಪ್ಪನವರು ಕವನಿಸಿದ್ದು ಕಣವಿಯವರ ವ್ಯಕ್ತಿತ್ವ ಹಾಗೂ ಕವಿತ್ವ ಎರಡನ್ನೂ ನಿರ್ವಚಿಸುತ್ತದೆ.
ಕಣವಿಯವರು ಹೊಸ ಹೊಸ ಕಾವ್ಯ ಪ್ರಯೋಗಗಳಿಗೆ ತಮ್ಮನ್ನು ತೆರೆದುಕೊಂಡಿದ್ದಾರೆ. ಅವರ ಮಣ್ಣಿನ ಮೆರವಣಿಗೆ’, ಶಿಶು ಕಂಡ ಕನಸು’, ಕಾಲ ನಿಲ್ಲುವುದಿಲ್ಲ’ ಮೊದಲಾದವುಗಳನ್ನು ಈ ನಿಟ್ಟಿನಲ್ಲಿ ಗಮನಿಸಬಹುದು.
ಮೊದಲಿನಿಂದಲೂ ಕಣವಿಯವರಿಗೆ ಅಷ್ಟಷಟ್ಟದಿ- ಸಾನೆಟ್ ಪ್ರಿಯವಾದ ಪ್ರಕಾರವಾಗಿದೆ. ಈ ಕಾವ್ಯಶಿಲ್ಪದಲ್ಲಿ ಅವರ ಸಾಧನೆ ಅಪ್ರತಿಮವಾದುದು. ಮುಕ್ತ ಛಂದದಲ್ಲಿ ಬರೆಯುವಾಗ ವಾಚಾಳಿತನಕ್ಕೀಡಾಗುವ ಅಪಾಯದಿಂದ ಪಾರಾಗಲು ಕಣವಿಯವರ ಕಾವ್ಯ ಪ್ರತಿಭೆ ಕಂಡುಕೊಂಡ ಚಿಕಿತ್ಸಕ ಕ್ರಮ ಸಾನೆಟ್.’ ಎಂದು ಶಾಂತಿನಾಥ ದೇಸಾಯಿಯವರು ಹೇಳಿದ್ದು ಅರ್ಥಪೂರ್ಣವಾದ ಮಾತು. ಕನ್ನಡದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸುನೀತಗಳನ್ನು ರಚಿಸಿದವರು ಕಣವಿಯವರೇ.

ಕಣವಿ ಕಾವ್ಯ ಬತ್ತದ ಒರತೆಯ ಹಾಗೆ ನಿರಂತರತೆ ಮತ್ತು ಶುಚಿತ್ವವನ್ನು ಕಾಪಾಡಿಕೊಂಡು ಬಂದಿದೆ. ಅವರ ಕಾವ್ಯಸೆಲೆ ಸದಾ ಜೀವಂತವಾಗಿದೆ. ಆಕ್ರೋಶರಹಿತವಾದ ಒಂದು ಸಮಾಧಾನದ ಧಾಟಿ ಅವರ ಕವನದುದ್ದಕ್ಕೂ ಕಂಡುಬರುತ್ತದೆ. ಮೆಲುದನಿ ಅವರ ಕಾವ್ಯದ ಜೀವಾಳ.
ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ
ಪಾರಿಜಾತವು ಹೂವ ಸುರಿಸಿದಂತೆ
ಮುಟ್ಟಿದರೆ ಮಾಸುತಿಹ ಮಂಜು ಹನಿ ಮುತ್ತಿನಲಿ
ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ
ನಾವು ಆಡುವ ಮಾತು ಹೀಗಿರಲಿ ಗೆಳೆಯ
ಮೃದು ವಚನ ಮೂಲೋಕ ಗೆಲ್ಲುವುದು ತಿಳಿಯ.
ಕಣವಿಯವರು ವಿಮರ್ಶೆಯನ್ನೂ ಬರೆದಿದ್ದಾರೆ. ಆದರೆ ಪ್ರಧಾನವಾಗಿ ಅವರು ಕವಿ. ಅವರ ಕಾವ್ಯ ಸಾಧನೆಯನ್ನು ಗುರುತಿಸಿ ಕನ್ನಡ ನಾಡು ಮತ್ತು ಸಾಂಸ್ಕೃತಿಕ ಲೋಕ ಅವರಿಗೆ ಅನೇಕ ಗೌರವ, ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ೬೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ನಿಡುಮಾಮಿಡಿ ಜಗದ್ಗುರುಗಳಿಂದ ‘ಕವನ ಕಲಾರವಿ’ ಪ್ರಶಸ್ತಿ ಹಾಗೂ ಚಿನ್ನದ ಪದಕ, ಚಿತ್ರದುರ್ಗ ಬೃಹನ್ಮಠದ ‘ಸಾಹಿತ್ಯ ಭಾಸ್ಕರ’ ಪ್ರಶಸ್ತಿ – ಹೀಗೆ ಈ ಪಟ್ಟಿ ಬೆಳೆಯುತ್ತ ಹೋಗುತ್ತದೆ.
ಕಣವಿಯವರಿಗೆ ಐವತ್ತು ತುಂಬಿದಾಗ ಚೆಂಬೆಳಕು ಅಭಿನಂದನ ಗ್ರಂಥ ಅರ್ಪಿಸಲಾಗಿದೆ. ಅವರು ಎಪ್ಪತ್ತರ ಗಡಿ ದಾಟಿದ ಸಂದರ್ಭದಲ್ಲಿ ಗುರುಲಿಂಗ ಕಾಪಸೆಯವರು ಕಣವಿ ಸ್ನೇಹಿತರಿಂದ, ಆಸಕ್ತರಿಂದ ಕವಿ-ಕಾವ್ಯ ಕುರಿತು ಕವಿತೆಗಳನ್ನು ಬರೆಸಿ ಸಮರ್ಪಿಸಿದ ಮುಗಿಯದ ಹಾಡು ಅಭಿನಂದನ ಗ್ರಂಥ ವಿನೂತನವಾಗಿದೆ. ಎಲ್ಲಕ್ಕಿಂತ ಮುಖ್ಯವಾದ ಸಂಮಾನವೆಂದರೆ ಸಹೃದಯ ಓದುಗರ ಪ್ರೀತಿ, ಅಭಿಮಾನಗಳೆಂದು ಕಣವಿ ಅವರು ನಂಬಿದ್ದಾರೆ.
ಚೆನ್ನವೀರ ಕಣವಿ ಹುಟ್ಟಿದ್ದು ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ, ೧೯೨೮ರ ಜೂನ್ ೨೮ರಂದು. ಬೆಳೆದದ್ದು ಶಿರುಂಜ ಗ್ರಾಮದಲ್ಲಿ. ಅಲ್ಲಿ ತಂದೆ ಸಕ್ಕರೆಪ್ಪನವರು ಪ್ರಾಥಮಿಕ ಶಾಲಾ ಮಾಸ್ತರರಾಗಿದ್ದರು. ಆಚಾರ ವಿಚಾರಗಳಲ್ಲಿ ಕಟ್ಟುನಿಟ್ಟಿನವರು, ಸಜ್ಜನರು, ಸಾಹಿತ್ಯದಲ್ಲಿ ಆಸಕ್ತಿ ಹೊಂದಿದವರು. ತಾಯಿ ಪಾರ್ವತಮ್ಮ ವಿಶಾಲ ಹೃದಯಿ, ಕೆಲಸದಲ್ಲಿ ತುಂಬ ಅಚ್ಚುಕಟ್ಟು. ಇವರಿಬ್ಬರ ಸ್ವಭಾವಗಳ ಮಿಳಿತ ಚೆನ್ನವೀರ. ಗ್ರಾಮೀಣ ಪರಿಸರದಲ್ಲಿ ಲಭ್ಯವಾಗುವ ಹಲವು ಶ್ರೀಮಂತ ಅನುಭವಗಳು, ಕಣವಿಯವರಿಗೆ ದಕ್ಕಿವೆ. ಅಂತೆಯೇ ಅವರ ಕವಿತೆಗಳಲ್ಲಿ ಗ್ರಾಮ್ಯಭಾವದ ಪ್ರತೀಕಗಳು ಸಶಕ್ತವಾಗಿ ಮೈದಾಳಿವೆ.
ಚಿಕ್ಕಂದಿನಲ್ಲಿ ತಮ್ಮ ಮನೆ ಎದುರಿನ ಅರಳೆ ಮರದಲ್ಲಿ ಸಂಜೆ ಹೊತ್ತು ಕಿಲಿಕಿಲಿಗುಟ್ಟುತ್ತ ಗಿಳಿಗಳು ಉದುರಿಸಿದ ಪುಚ್ಚಗಳನ್ನಾಯ್ದು ತಮ್ಮ ಪುಸ್ತಕದಲ್ಲಿ ಇಡುತ್ತಿದ್ದಂತೆಯೇ ಈಗಲೂ ಕಣವಿ ಅವರು ತಮ್ಮ ಕೋಮಲ, ಬೆಚ್ಚನ್ನ ಭಾವಗಳ ಕುತಣಿ ಅನುಭವಗಳನ್ನು ಕಾವ್ಯ ಹೊತ್ತಿಗೆಯಲ್ಲಿ ಜೋಪಾನ ಮಾಡುತ್ತ ಬಂದಿದ್ದಾರೆ.
ಗರಗದಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದ ಕಣವಿಯವರು ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ಒಂದನೇ ನಂಬರ್ ಪಡೆದು ಪಾಸಾದರು. ಮುಂದೆ ಧಾರವಾಡ ಮುರುಘಾಮಠದ ಉಚಿತ ಪ್ರಸಾದ ನಿಲಯದಲ್ಲಿದ್ದು ಅಭ್ಯಾಸ ಮುಂದುವರಿಸಿದರು. ಆರ್.ಎಲ್.ಎಸ್. ಹೈಸ್ಕೂಲ್‌ದಲ್ಲಿ ಎಸ್.ಎಸ್.ಸಿ. ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ವ್ಯಾಸಂಗ ಮಾಡಿದರು. ಅದೇ ವರ್ಷ ೧೯೫೨ರಲ್ಲಿ ಶಾಂತಾದೇವಿಯವರೊಂದಿಗೆ ಮದುವೆಯೂ ಆಯಿತು. ಗೃಹಸ್ಥರಾದ ಕಣವಿಯವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣಾ ಮತ್ತು ಪ್ರಕಟಣಾ ವಿಭಾಗದ ಕಾರ್ಯದರ್ಶಿ ಯಾಗಿ ನೌಕರಿ ಸಿಕ್ಕಿತು. ಮುಂದೆ ಡಾ. ಬಿ.ಎಸ್. ಗದ್ದಗಿಮಠರ ನಿಧನಾನಂತರ ೧೯೫೬ರಲ್ಲಿ ನಿರ್ದೆಶಕರಾಗಿ ಬಡ್ತಿ ಹೊಂದಿ, ೧೯೮೩ರಲ್ಲಿ ನಿವೃತ್ತರಾಗುವ ವರೆಗೆ ಅಲ್ಲಿ ಸೇವೆ ಸಲ್ಲಿಸಿದರು.
ಕಣವಿಯವರ ಗೌರವ ಕಿರೀಟಕ್ಕೆ ಈಗ ಪಂಪ ಪ್ರಶಸ್ತಿಯ ಹೊಸ ಗರಿ ಮೂಡಿದೆ. ಈ ಸಂದರ್ಭದಲ್ಲಿ ಸಂತಸ ಹಂಚಿಕೊಳ್ಳಲು ಸೀದಾ ಅವರ ಮನೆ ಚೆಂಬೆಳಕುಗೇ ಹೋದೆ. ಕಣವಿ ದಂಪತಿಗಳ ಪ್ರೀತ್ಯಾದರಗಳ ಸ್ವಾಗತ, ನನ್ನ ಹಾರ್ದಿಕ ಅಭಿನಂದನೆಯೊಂದಿಗೆ ಮಾತು ಸುರುವಾಯಿತು.

ಹೇಮಾ: ನಿಮಗ ಪಂಪ ಪ್ರಶಸ್ತಿ ಬಂದದ್ದಕ್ಕೆ ನಮಗೆಲ್ಲಾ ಭಾಳ ಸಂತೋಷ ಆಗೇದ. ಇದು ಇನ್ನೂ ಸ್ವಲ್ಪ ಮೊದದು ಬರಬೇಕಿತ್ತು ಅಂತೇನರ ಅನಿಸೇದ ಏನು ನಿಮಗ?ಒಂದು ಶುಭ್ರ ನಗು.
ಕಣವಿ: ನನಗೂ ಸಂತೋಷ ಆಗೇದ, ಆದರ ಮೊದಲಽ ಬರಬೇಕಿತ್ತು ಅಂತೇನೂ ಅನಿಸಿಲ್ಲ. ಆಯಾ ಕಾಲಕ್ಕೆ ಎಲ್ಲಾ ಬರಕೋತ ಹೋಗ್ಯಾವ.
ಕಣವಿಯವರ ನಿರ್ಲಿಪ್ತ ಭಾವ, ಸಮಚಿತ್ತ ಉಪಮಾತೀತ.
ಬರುವುದೆಲ್ಲ ಬರಲಿ ಬಿಡು
ಏಕೆ ಅದರ ಚಿಂತೆ?
ದುಃಖ ಸುಖವು ನಗೆಯು ಹೊಗೆಯು
ಎಲ್ಲ ಅಂತೆ ಅಂತೆ.
ಹೇಮಾ: ಈ ಪ್ರಶಸ್ತಿ ನಿಮಗಿಂತ ಹಿರಿಯರಿಗೆ ಯಾರಿಗಾದರೂ ಬರಬೇಕಿತ್ತು ಅಂತೇನರ ಅನಿಸೇದ ಏನು ನಿಮಗ?
ಕಣವಿ: ಊಂ, ಹಾಂ! ಈ ಪ್ರಶ್ನೆ ಬ್ಯಾರೆ ಯಾರೂ ಕೇಳಿದ್ದಿಲ್ಲ. ಈಗ ನೀವು ಕೇಳಿದ ಮ್ಯಾಲ ಲಕ್ಷ್ಯಕ್ಕೆ ಬಂತು. ಇದು ಪ್ರಶಸ್ತಿ ಅಂತ ಅಲ್ಲ. ಒಟ್ಟ ಪರಮೇಶ್ವರ ಭಟ್ಟರಿಗೆ ಒಂದು ದೊಡ್ಡ ಪ್ರಶಸ್ತಿ ಬರಬೇಕಿತ್ತು. ಭಾಳ ಕೆಲಸ ಮಾಡ್ಯಾರ. ಆದರೂ ಅಷ್ಟ ಲಕ್ಷ್ಯಕ್ಕೆ ಬಂದಿಲ್ಲ ಅವರು.
ಇಂಥ ಮಾತುಗಳಿಂದಲೇ ಕಣವಿ ಎತ್ತರದವರಾಗಿರುವುದು. ಅವರ ಪ್ರಾಂಜಲ ಮನಸ್ಸಿನ ಉತ್ತರದಿಂದ ಅವರ ಸುತ್ತಲೂ ಬೆಳಕಿನ ಪ್ರಭೆಯನ್ನು ಕಂಡಷ್ಟು ಖುಷಿಯಾಯಿತು. ಅದರೊಂದಿಗೆ ಹಿಂದಿನ ದಿನದ ಒಂದು ಪ್ರಸಂಗ ಕಣ್ಣಿಗೆ ಕಟ್ಟಿತು:
ಧಾರವಾಡದಲ್ಲಿ ನಾಲ್ಕಾರು ದಿನಗಳಿಂದ ಕಾರ್ನಾಡ ನಾಟಕೋತ್ಸವ ಕಲಾಭವನದಲ್ಲಿ ನಡೆದಿತ್ತು. ಪ್ರತಿ ದಿನ ತಪ್ಪದೇ ಕಣವಿ ದಂಪತಿಗಳು ಬರುತ್ತಿದ್ದರು. ಹಿಂದಿನ ದಿನ ಕಲಾಭವನದ ಬಾಗಿಲಲ್ಲೇ ಅವರಿಗೆ ಎದುರಾದ ಕೀರ್ತಿನಾಥ ಕುರ್ತಕೋಟಿ ನಿಮಗೆ ಪಂಪ ಪ್ರಶಸ್ತಿ ಬಂತು. ಅಭಿನಂದನೆಗಳು. ಅಂದರು. ಕಣವಿಯವರು ತಮ್ಮ ಎಂದಿನ ತೆಳು ನಗೆಯನ್ನು ಬೀರುತ್ತ ಕೈ ಎತ್ತಿ ಇತ್ತೀಚೆಗೆ ಹಾಕಿಕೊಳ್ಳುತ್ತಿರುವ ಟೊಪ್ಪಿಗೆ ಹಿಡಿದುಕೊಳ್ಳುತ್ತ, ಆ ಪಂಪನೆಲ್ಲಿ! ಈ ಗಾಂಪನೆಲ್ಲಿ! ಅಂದರು- ಬಿಎಂಶ್ರೀಯವರನ್ನು ನೆನಪಿಸಿಕೊಳ್ಳುವಂತೆ.
ಇದನ್ನೆಲ್ಲ ನೋಡುತ್ತಿದ್ದ ನನಗೆ ಕಣವಿಯವರ ಈ ಪ್ರತಿಕ್ರಿಯೆ ಕಾಮನಬಿಲ್ಲಿನ ಹಲವು ಅರ್ಥಗಳನ್ನು ಹೊಳೆಯಿಸಿತು. ಇದು ಕಣವಿ ವೈಶಿಷ್ಟ್ಯ. ಮೃದು ವಚನದಲ್ಲೇ ಖಚಿತಾರ್ಥ, ನೇರ ಗುರಿ.
ಹೇಮಾ: ಕಣವಿಯವರೇ, ನಿಮ್ಮ ಮೊದಲ ಕವಿತೆ ಯಾವುದು?
ಕಣವಿ: ನನ್ನ ೧೩-೧೪ರ ವಯಸ್ಸಿನೊಳಗ ಬರೆದ ಸೃಷ್ಟಿಯ ಸೊಬಗು’ ಅನ್ನುವ ಕವಿತೆ. ಅದು ನನ್ನ ಹೈಸ್ಕೂಲ್ ಮ್ಯಾಗಝಿನ್‌ದೊಳಗ ಪ್ರಕಟ ಆಗಿತ್ತು.
ಹೇಮಾ: ಅದಕ್ಕೂ ಮೊದಲು ಪ್ರಾಥಮಿಕ ಶಾಲೆಯೊಳಗಿದ್ದಾಗಽ ಬರೀತಿದ್ರಿ ಅಂತ…?
ಕಣವಿ: ಹಾಂ, ಹೌದು, ಹತ್ತ ಹನ್ನೊಂದನೇ ವಯಸ್ಸಿನೊಳಗ. ರವಿವಾರಕ್ಕೊಮ್ಮೆ ಪ್ರಭಾತಫೇರಿಗೆ ಹೋಗತಿದ್ದೆ. ಆಗ ಹಾಡುವ ದೇಶಭಕ್ತಿ ಗೀತೆಗಳಿಂದ ಪ್ರಭಾವಿತ ಆಗಿ ಅದಽ ಧಾಟಿ ಅನುಕರಿಸಿ ಒಂದು ಪದ್ಯ ಬರೆದಿದ್ದೆ. ಅದು ಬರೇ ಒಂದ್ ಪ್ರಯತ್ನ ಅನಬಹುದು…
ಹೇಮಾ: ನಿಮ್ಮ ಕಾವ್ಯ ರಚನೆಗೆ ಅನುಕೂಲವಾಗೂವಂಥ ಸಾಹಿತ್ಯದ ವಾತಾವರಣ ಮೊದಲಽ ಇತ್ತೇನು? ಆಗ ನಿಮ್ಮ ಗೆಳೆಯರು, ಆಪ್ತರು ಯಾರ್‍ಯಾರಿದ್ದರು?
ಕಣವಿ: ಧಾರವಾಡದ ನಿಸರ್ಗ ಸೌಂದರ್ಯನಽ ನನ್ನ ಕಾವ್ಯರಚನೆಗೆ ಚೇತನವಾಗಿ ಪರಿಣಮಿಸಿತ್ತು. ಅಲ್ಲದೆ ಆಗ ನಮ್ಮದ ಗೆಳೆಯರದು ಒಂದು ಬಳಗ ರೂಪುಗೊಂಡಿತ್ತು. ಚಿದಂಬರ ದೀಕ್ಷಿತ, ಕೀರ್ತಿನಾಥ ಕುರ್ತಕೋಟಿ, ಶಂಕರ ಮೊಕಾಶಿ, ವಸಂತ ಕವಲಿ, ಶಿವೇಶ್ವರ ದೊಡ್ಡಮನಿ ಮುಂತಾದವರು ವಾರಕ್ಕೊಮ್ಮೆ ಮಾಳಮಡ್ಡಿಯ ನನ್ನ ರೂಮಿನೊಳಗ ಸೇರ್‍ತಿದ್ದಿವಿ. ಅದಕ್ಕೆ ಕಾವ್ಯಾನುಭವ ಮಂಟಪ’ ಅಂತ ಹೆಸರು. ಅಲ್ಲಿ ತಮ್ಮ ತಮ್ಮ ಕವಿತಾ ವಾಚನ, ವಿಮರ್ಶೆ, ಹರಟೆ, ಚಹಾಪಾನ ನಡೀತಿತ್ತು.
ಶಿವೇಶ್ವರ ದೊಡಮನಿ ನವಲೂರಿನಿಂದ ಬರ್‍ತಿದ್ದ. ಹೆಚ್ಚಿನ ವ್ಯಾಳ್ಯಾ ನನ್ನ ರೂಮಿನೊಳಗಽ ಕಳೀತಿದ್ದ. ಅವನೂ ಕವಿತಾ ಬರೀತಿದ್ದ. ನಾವಿಬ್ಬರೂ ಒಂದಽ ಹಾಳ್ಯಾಗ ಈ ಕಡೆ ನನ್ನದು, ಆ ಕಡೆ ಅವನ ಕವಿತಾ ಬರದು ಪತ್ರಿಕೆಗೆ ಕಳಸತಿದ್ದಿವಿ. ೧೯೫೦ ರೊಳಗ ಅಂವ ವಿಷಮ ಜ್ವರದಿಂದ ಏಕಾಏಕಿ ತೀರಿಕೊಂಡ. ನನ್ನ ಜೀವನದ ಮೊದಲ ದೊಡ್ಡ ಆಘಾತ ಅದು. ಅದರಿಂದನಽ ಸಾವು ನನ್ನ ಕಾವ್ಯದ ಜಿಜ್ಞಾಸೆಗಳಲ್ಲಿ ಒಂದಾಗಿ ಸೇರಿಹೋಯ್ತು. ಸಾವಿನ ನಿಗೂಢತೆ ಮತ್ತ ಕಠೋರತೆ ನನ್ನ ಮನಸ್ಸಿನಲ್ಲಿ ಇವತ್ತಿಗೂ ಉಳದದ.
೫೦ ವರ್ಷಗಳ ಹಿಂದಿನ ಮಾತು ನೆನಪಿಸಿಕೊಂಡು ಹೇಳುವಾಗ ಕಣವಿಯವರಲ್ಲಿ ೨೦ ರ ಉತ್ಸಾಹ ಪುಟಿಯುತ್ತಿತ್ತು. ಗೆಳೆಯ ಶಿವೇಶ್ವರನ ಮಾತು ಬಂದಾಗ ಭಾವಜೀವಿಯ ದನಿ ಒದ್ದೆಯಾಗಿತ್ತು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಕಾಲೇಜು, ವಿಶ್ವವಿದ್ಯಾಲಯ, ಪ್ರಸಾರಾಂಗಗಳು ತಮ್ಮ ಸಾಹಿತ್ಯಕ ಬೆಳವಣಿಗೆಗೆ ಪುಷ್ಟಿ ನೀಡಿದ್ದನ್ನು ಕೃತಜ್ಞತೆಯಿಂದ ನೆನಪಿಸಿಕೊಂಡರು.
ಹೇಮಾ: ಬೇಂದ್ರೆಯವರು ಬೆಳಗಾವಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದೊಳಗ ಹಕ್ಕಿ ಹಾರುತಿದೆ ನೋಡಿದಿರಾ ಕವಿತೆ ಓದಿದ್ದು ಅವರ ಜೀವನದ ಒಂದು ಮಹತ್ವದ ಅನುಭವ ಆಗಿಹೋಯಿತು. ಅಂಥಾ ಪ್ರಸಂಗ ನಿಮ್ಮ ಅನುಭವದೊಳಗೂ ಬಂದಿರಬೇಕಲ್ಲ?
ಕಣವಿ: ಒಂದೆರಡು ಹೇಳಬಹುದು. ಒಂದು, ೧೯೪೭ ರ ಸ್ವಾತಂತ್ರ್ಯೋತ್ಸವ ಸಂದರ್ಭ. ಕರ್ನಾಟಕ ಕಾಲೇಜಿನ ಬಯಲೊಳಗ ಬೃಹತ್ ಸಭೆ ಸೇರಿತ್ತು. ನಾನು ಬಂಧದಿಂ ಬಿಡುಗಡೆಗೆ’ (ಅಗಸ್ಟ್ ಹದಿನೈದು) ಅನ್ನುವ ಪದ್ಯ ಓದಿದೆ. ಇಡೀ ಸಭಾದೊಳಗ ಒಂದು ರೀತಿ ಆವೇಶ ತುಂಬಿತು. ನನಗೆ ಒಂದು ಅಪೂರ್ವ ಅನುಭವ ಅದು. ನನ್ನ ಆತ್ಮವಿಶ್ವಾಸವನ್ನೂ ಹೆಚ್ಚಿಸಿತು.
ಇನ್ನೊಂದು, ೧೯೫೬ರ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದೊಳಗ ನನ್ನ ಕವಿತೆ ‘ವಿಶ್ವಭಾರತಿಗೆ ಕನ್ನಡದಾರತಿ’ಯನ್ನು ಶಾರದಾ ಹಾನಗಲ್ ಅವರು ರಾಗ ಸಂಯೋಜಿಸಿ ಹಾಡಿದ ಸಂದರ್ಭ. ಅದನ್ನ ಕೇಳಿದ ಕುವೆಂಪು ಅವರು ನನ್ನನ್ನು ತಮ್ಮ ಹತ್ತಿರ ಕರೆದು, ‘ನಿಮ್ಮ ಕವಿತಾ ಹಾಡಿದ್ದು ಕೇಳಿ ನನಗೆ ರೋಮಾಂಚನವಾಯು.’ ಅಂತ ಉದ್ಗರಿಸಿದರು. ಅದರಿಂದ ನನಗೂ ರೋಮಾಂಚನದ ಅನುಭವ.
ಕಣವಿಯವರ ಕಣ್ಣಿನಲ್ಲಿ ಅಭಿಮಾನದ ಮಿಂಚು ಹೊಳೆಯಿತು.
ಹೇಮಾ: ಹೌದು, ಆ ಹಾಡು ನನಗೂ ಸೇರ್‍ತದ. ಅದು ಜನಪ್ರಿಯನೂ ಅದ, ಕಾವ್ಯದ ಸತ್ವವನ್ನೂ ಒಳಗೊಂಡದ. ಈಗಲೂ ಅನೇಕ ಕಾರ್ಯಕ್ರಮ ದೊಳಗ ಸ್ವಾಗತಗೀತೆ ಅಥವಾ ಪ್ರಾರ್ಥನಾ ಪದ್ಯವಾಗಿ ಅದನ್ನ ಹಾಡ್ತಾರ. ನೀವು ಅದನ್ನ ಯಾವಾಗ ಬರೆದಿದ್ದಿರಿ?
ಕಣವಿ: ಯಾವಾಗ ಅಂದರ, ಅದು ಒಂದು ರೀತಿ ಸಾಂದರ್ಭಿಕ ಕವಿತೆ. ಪಾವಟೆಯವರು ಬನಾರಸ್ ಯುನಿವರ್ಸಿಟಿಯಲ್ಲಿದ್ದಾಗ ಅಲ್ಲಿ ಕುಲಗೀತೆ ಅಂತ ಹಾಡೂ ಸಂಪ್ರದಾಯ ಇತ್ತಂತ. ಅದನ್ನ ಇಲ್ಲಿನೂ ಸುರು ಮಾಡಬೇಕಂತ ಅವರು ನನಗ ಒಂದು ಹಾಡು ಬರೆದು ಕೊಡಲಿಕ್ಕೆ ಹೇಳಿದರು. ಬರೆ ಅವರು ಕೇಳಿದ್ದಕ್ಕೆ ನಾನು ಬರದಿದ್ದರೆ ನೀವು ಹೇಳಿದಂಗ ಒಳ್ಳೇ ಕವಿತೆ ಆಗತಿತ್ತೊ ಇಲ್ಲೊ, ಆದರ ಕರ್ನಾಟಕದ ಬಗ್ಗೆ ಕನ್ನಡದ ಬಗ್ಗೆ ಬರೀಬೇಕು ಅಂತ ಹೊಳಹು ಹಾಕ್ತಾನೇ ಇದ್ದೆ. ನನ್ನ ತಲಿಯೊಳಗ ಇದ್ದದ್ದಕ್ಕೂ ಅವರು ಕೇಳಿದ್ದುಕ್ಕೂ ಕೂಡಿ ಬಂತು.
೩ ದಿನದೊಳಗ ಬರೆದುಕೊಟ್ಟೆ. ಶಾರದಾ ಹಾನಗಲ್ ಅದಕ್ಕೆ ಭಾಳ ಛಂದ ರಾಗ ಸಂಯೋಜನೆ ಮಾಡ್ಯಾರ, ಹಿಂದುಸ್ತಾನಿಯೊಳಗ. ಈಗೀಗ ಕರ್ನಾಟಕದೊಳಗೂ ಹಾಡ್ತಾರ. ನನಗದು ಸೇರಿಲ್ಲ. ಆ ಹಾಡಿನೊಳಗ ಗಂಗೆ ತುಂಗೆ ಕಾವೇರಿ ಪವಿತ್ರಿತ ಅಂತ ಹೇಳುವಾಗ ಅದು ಏರ್‍ತಾನಽ ಹೋಗಬೇಕು. ಅದರಿಂದ ಭಾವದ ಔನ್ನತ್ಯ ಅರ್ಥ ಆಗ್ತದ. ಅನುಭವಕ್ಕೆ ಬರ್‍ತದ, ಕರ್ನಾಟಕಿಯೊಳಗ ಹಿಂಗಾಗೂದುಲ್ಲ. ಗಂಗೆ ತುಂಗೆ ಕಾವೇರಿ ಆದ ಮ್ಯಾಲ ಒಡೀತಾರ, ಪವಿತ್ರಿತ ಬ್ಯಾರೆ ಅಂತಾರ. ಇದರಿಂದ ಗರಿಮೆ ಸಾಧಿತ ಆಗೂದುಲ್ಲ.
ಹೇಮಾ: ನವೋದಯದ ನೀವು ನವ್ಯದ ಕಡೆಗೆ ವಾಲಿದ್ದಕ್ಕೆ ಪ್ರೇರಣೆ ಏನು?
ಕಣವಿ: ಕಟ್ಟೀಮನಿಯವರು ಪ್ರಕಟಿಸುತ್ತಿದ್ದ ‘ಉಷಾ’, ‘ಸ್ವತಂತ್ರ’ ಪತ್ರಿಕೆಯೊಳಗೆ ನನ್ನ ಪದ್ಯ ಅಡಿಗರ ಪದ್ಯ ಒಟ್ಟೊಟ್ಟಿಗೆ ಬರ್‍ತಾ ಇದ್ದುವು. ಅದರಿಂದ ನಮ್ಮ ನಡುವ ಪತ್ರ ವ್ಯವಹಾರ ಸುರು ಆತು. ಆದರ ಅದಕ್ಕಿಂತ ಮೊದಲಽ ಆಡುಮಾತಿನ ಲಯ ಬಳಸಿ ಪದ್ಯ ರಚಿಸಬೇಕು ಅಂತ ನನಗೆ ಅನಸತಿತ್ತು. ನನ್ನ ‘ನಿಯಮೋಲ್ಲಂಘನ’ ಕವಿತೆಯಲ್ಲಿ ಈ ಪ್ರಯೋಗ ಕಾಣಬಹುದು. ಅಡಿಗರ ಪದ್ಯಗಳನ್ನ ತುಗೊಂಡು ನಾನು, ಶಿವೇಶ್ವರ ಚರ್ಚೆ ಮಾಡತಿದ್ದಿವಿ. ನವ್ಯ ಧಾಟಿ, ಕವಿತಾ ಬಂಧ, ಭಾಷೆ ದುಡಿಸಿ ಕೊಳ್ಳುವ ರೀತಿ, ಲಯ, ನುಡಿಯಿಂದ ನುಡಿಗೆ ಸಹಜ ಭಾವದ ಬೆಳವಣಿಗೆ- ಇವುಗಳನ್ನೆಲ್ಲ ಅಡಿಗರ ಕಾವ್ಯದಿಂದ ಅರ್ಥಮಾಡಿಕೊಳ್ಳಲು ನಮಗ ಸಾಧ್ಯ ಆಯಿತು. ‘ಸಾವಯವ ಸಮಗ್ರೀಕರಣ’ದ ತಿಳಿವು ಮೂಡಿತು. ಹೀಗಾಗಿ ನವ್ಯವನ್ನು ಅಭಿವ್ಯಕ್ತಿ ಮಾರ್ಗವಾಗಿ ಒಪ್ಪಿಕೊಂಡೆ.
ಹೇಮಾ: ಪ್ರಖರ ವ್ಯಕ್ತಿತ್ವದ ಅಡಿಗರು ಮತ್ತು ಸೌಮ್ಯ ಸ್ವಭಾವದ ಶಿವರುದ್ರಪ್ಪನವರ ಜೊತೆ ಸ್ನೇಹ ನಿಮಗ ಏಕಕಾಲದಲ್ಲಿಯೇ ಸಾಧ್ಯ ಆಗಿತ್ತು. ಅದಕ್ಕೆ ನಿಮ್ಮ ಹೊಂದಾಣಿಕೆ ಅಥವಾ ಸಮನ್ವಯ ಮನೋಭಾವ ಕಾರಣ ಏನು?
ಕಣವಿ: ಒಳ್ಳೆಯ ಗುಣ ಯಾವ ವಸ್ತುವಿನಲ್ಲೇ ಇರಲಿ, ವ್ಯಕ್ತಿಯಲ್ಲೇ ಇರಲಿ ಅದನ್ನ ಮೆಚ್ಚುವ ಸ್ವಭಾವ ನನ್ನದು. ಆಗ ಹೇಳಿದೆನಲ್ಲ, ಅಡಿಗರ ಕಾವ್ಯ ನನಗೆ ಇಷ್ಟ ಆಯಿತು. ಅವರು ಕುಮಟಾದಲ್ಲಿ ಲೆಕ್ಚರರ್ ಇದ್ದಾಗ ಒಮ್ಮೆ ಇಲ್ಲಿ ಆಕಾಶವಾಣಿ ಭಾಷಣಕ್ಕೆ ಬಂದಿದ್ದರು. ಅದಽ ಮೊದಲ ಸಲ ಅವರನ್ನು ಪ್ರತ್ಯಕ್ಷ ನೋಡಿದ್ದು. ಹೊಸದಾಗಿ ಮನೆ ಮಾಡಿದ್ದೆ. ಅವರನ್ನ ಊಟಕ್ಕ ಕರದೆ. ಸ್ನೇಹ ಬೆಳೀತು. ಮುಂದ ಅವರು ಅಲ್ಲೆ ನಾನು ಇಲ್ಲೆ. ಸಂಪರ್ಕ, ಪತ್ರೋತ್ತರ ಕಡಿಮೆ ಆದುವು. ಆದರ ಶಿವರುದ್ರಪ್ಪನವರ ಸ್ನೇಹ ಬೇರೆ ರೀತಿಯದು. ನಮ್ಮಿಬ್ಬರದೂ ಒಂದಽ ಮನೋಧರ್ಮ. ನಮ್ಮಲ್ಲಿ ಭಾವನಾತ್ಮಕ ಸ್ನೇಹ ಬೆಳದು- ಇನ್ನೂ ಬೆಳೀತಾನ ಬಂದದ.
ವ್ಯಕ್ತಿಗಳೊಂದಿಗಷ್ಟೇ ಅಲ್ಲ ಸ್ಥಳ, ವಸ್ತು, ವಿಷಯಗಳ ಬಗೆಗೂ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುವ ಕಣವಿ ಅದನ್ನು ಉಳಿಸಿಕೊಳ್ಳುವ ಕಲೆಗಾರಿಕೆಯನ್ನೂ ಸಾಧಿಸಿದ್ದಾರೆ.
ಹೇಮಾ: ನಿಮ್ಮ ಕಾವ್ಯದಲ್ಲಿ ಬದುಕಿನ ಸುಖದಾಯಕವಾದ ನಲಿವಿನ ಮುಖವೇ ಹೆಚ್ಚು ಕಾಣ್ತದ. ನೋವು, ದುರಂತಕ್ಕೆ ನೀವು ದನಿ ನೀಡಿದ್ದು ಕಡಿಮೆ. ಇದರಿಂದ ಬದುಕಿನ ಸಮಗ್ರತೆಯ ಅಭಿವ್ಯಕ್ತಿ ಆದ್ಹಂಗ ಆಗೂದುಲ್ಲ….?
ಕಣವಿ: ನನ್ನ ಬದುಕಿನಲ್ಲೂ ನೋವು, ದುಃಖದ ಅನುಭವ ಆಗ್ಯಾವ. ಆದರ ನನಗ ಬದುಕಿನ ಸೌಂದರ್ಯದ ಕಡೆಗೆ- ಅದು ನಿಸರ್ಗ ಆಗಿರಬಹುದು, ಹೃದಯ ಸೌಂದರ್ಯ, ಸ್ವಭಾವ ಅಥವಾ ವ್ಯಕ್ತಿತ್ವ ಸೌಂದರ್ಯ ಇರಬಹುದು- ಆ ಕಡೆ ಹೆಚ್ಚಿನ ಒಲವು ಅದ. ಇದರಿಂದ ಮನಸ್ಸಿಗೆ ಸಮಾಧಾನ ಆಗ್ತದ. ಅದನ್ನ ಉಳಿದವರಿಗೂ ನೀಡಬೇಕು ಅನ್ನೂದು ನನ್ನ ಉದ್ದೇಶ.
ಬಿಡಿಸಿದಷ್ಟೂ ಬಾಳು ಬರಿ ಗುಂಜು ತೊಡಕು
ಕಂಡ ಕಂಡಡೆಯಲ್ಲಿ ಕರುಣೆಯನೆ ಹುಡುಕು;
ಅವರಿವರ ಅಲ್ಪತನಕಿನ್ನೇನು ಬೇಕು?
ನಿನ್ನ ನೋವಿಗೆ ನಿನ್ನ ಕಂಬನಿಯೆ ಸಾಕು.
ಎಂಬ ಕಣವಿ ಸಾಲು ನನ್ನ ಕಿವಿಯಲ್ಲಿ ಗುಂಯ್‌ಗುಟ್ಟಿದವು.
ಹೇಮಾ: ವೈಯಕ್ತಿಕ ನೋವುಗಳನ್ನು ಅಭಿವ್ಯಕ್ತಿಸಬಾರದು ಅಂತ ಬಿಟ್ಟಿರೇನು ಅಥವಾ ಅದರ ಅಭಿವ್ಯಕ್ತಿ….?
ಕಣವಿ: ಹೂಂ. ಹಂಗ ಅಲ್ಲಾ. ಜೀವನದೊಳಗ ಕಷ್ಟ ನೋವು ಇದ್ದದ್ದೇ. ಅದನ್ನ ಶಮನಗೊಳಿಸಲಿಕ್ಕೆ ಉತ್ಸಾಹದ ಮುಖವನ್ನು ಎತ್ತಿ ಹೇಳಬೇಕು ಅನ್ನೂದು ನನ್ನ ಧೋರಣೆ.
ಇದು ಕಣವಿ ಅವರು ತಮಗೆ, ತಮ್ಮ ಕಾವ್ಯಕ್ಕೆ ಹಾಕಿಕೊಂಡ ಲಕ್ಷ್ಮಣರೇಖೆ. ಅವರ ಕಾವ್ಯದಲ್ಲಿ ನವಿರಾದ ವ್ಯಂಗ್ಯವಿದ್ದರೂ ಅದರಲ್ಲಿ ತೀಕ್ಷ್ಣತೆ ಇರುವುದಿಲ್ಲ ಎನ್ನುವುದರ ಕಡೆಗೆ ನಮ್ಮ ಮಾತು ಹೊರಳಿತು. ರಾಜಕೀಯ ವಸ್ತು ನಿರ್ವಹಣೆಯಲ್ಲಿ ಅದು ಹೇಗೆ ಪ್ರತಿಫಲನೆಗೊಂಡಿದೆ ಎಂದು ಹೇಳುತ್ತ ಕಣವಿಯವರು ತಮ್ಮ ಸಂಗ್ರಹ ತೆಗೆದು ಅಪರಾವತಾರ, ಲಾಗ, ಜಗದೇಕಮಲ್ಲ, ವಿನೂತನ ಕವಿಯ ಕೈಫಿಯತ್ತು ಮುಂತಾದ ಕವನಗಳನ್ನು ವಿವರಿಸಿದರು. ಉದಾಹರಿಸುತ್ತ ಓದಿ ತೋರಿಸಿದರು. ಮೈಮರೆತು ಕುಳಿತೆ. ಅವರ ಕಾವ್ಯವಾಚನದ ರೀತಿಯೇ ಹಾಗೆ!
ನಡುವೆ ಒಂದು ಸ್ವಾರಸ್ಯಕರ ಪ್ರಸಂಗ ನೆನಪಿಸಿಕೊಂಡರು. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ೭೦ ರ ದಶಕದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಹಿತ್ಯಗೋಷ್ಠಿ ನಡೆಸುತ್ತಿದ್ದರು. ಅಲ್ಲಿ ಒಮ್ಮೆ ಕಣವಿ ಮೃತ್ಯು ಘೋಷಣೆ’ ಪದ್ಯ ವಾಚಿಸಿದರು. ಅದು ನವ್ಯ ಕಾವ್ಯದ ಮೃತ್ಯುಘೋಷಣೆ ಅಂತ ಸುದ್ದಿಯಾಯಿತು. ಇವರು ಕುವೆಂಪು ಅವರ ಭೆಟ್ಟಿಗೆ ಹೋದಾಗ ಅವರೂ ತುಂಬ ಚೆನ್ನಾಗಿ ಕವಿತೆ ಓದಿದಿರಂತೆ ಎಂದು ಸೂಚ್ಯವಾಗಿ ಅದನ್ನೇ ಹೇಳಿದರಂತೆ. ಕಣವಿ ನಕ್ಕು ಸುಮ್ಮನಾದರಂತೆ. ಆ ಕವಿತೆಯಲ್ಲಿ ನವೋದಯ, ನವ್ಯ ಎರಡರ ವಿಡಂಬನೆಯೊಂದಿಗೆ ಇವೆರಡನ್ನೂ ಬೈಯುತ್ತ, ನೆಲೆ ನಿಂತವರನ್ನು ನಿಂತ ಕಾಲ ಮೇಲೆ ಗುಳೇ ಹೊರಡಿಸುವ ಕಾಲೆಳೆಯುವ ಮೂರನೆಯ ಗುಂಪಿನವರನ್ನು, ಅಕಾವ್ಯ’ ಪತ್ರಿಕೆ, ಕಂಬಾರ ಮುಂತಾದ ಎಲ್ಲದರ ಪ್ರಸ್ತಾಪವಿರುವುದನ್ನು ಬಿಚ್ಚಿ ಹೇಳಿದರು, ಮೋಜೆನಿಸಿತು.
ಕಣವಿಯವರೊಂದಿಗೆ ಆಪ್ತವಾಗಿ ಹರಟುವಾಗ ಹಲವು ಸಾಹಿತಿಗಳ ಬಗ್ಗೆ, ಪ್ರಸಂಗಗಳ ಬಗ್ಗೆ ಏನೆಲ್ಲ ಮತ್ತೊಬ್ಬರಿಗೆ ಹೇಳಬಹುದಾದ ಹೇಳಬಾರದ ವಿಷಯಗಳು ನುಸುಳುತ್ತವೆ. ಅವುಗಳ ಅಭಿವ್ಯಕ್ತಿಯಲ್ಲೂ ಕಣವಿಯವರು ಶಾಲೀನತೆ ಉಳಿಸಿಕೊಳ್ಳುವುದೇ ಅವರ ವೈಶಿಷ್ಟ್ಯ. ಬರೆದ ಕವಿತೆಗಿಂತ ಬರೆಯದ ಕವಿತೆ ಭಾರ’ ಎಂಬ ತುಡಿತದ ಕಣವಿ ಆ ಭಾರವನ್ನೂ ಇಳುಹಿ ಹಗುರಾಗಲಿ.
ಹೇಮಾ: ಕಣವಿಯವರೇ, ನಿಮ್ಮ ದಾಂಪತ್ಯದ ಬಗ್ಗೆ ಒಂದು ಪ್ರಶ್ನೆ. ನಿಮ್ಮಿಬ್ಬರೊಳಗೆ ಜಗಳ, ಝಟಾಪಟಿ ಆಗ್ತಿರಬೇಕಲ್ಲ?
ಕಣವಿ: ಯಾಕಿಲ್ಲ… ದಾಂಪತ್ಯ ಅಂದ ಮ್ಯಾಲ ಇರೂವಽ. ಜಗಳ ಅಂತ ಅಲ್ಲ, ಮತಭೇದ ಇರ್‍ತಾವ.
ಹೇಮಾ: ಆಗ ನೀವು ಏನ ಮಾಡ್ತೀರಿ?
ಕಣವಿ: ಒಮ್ಮೊಮ್ಮೆ ಜೋರರಿಲೆ ಮಾತಾಡ್ತೀನಿ. ಸಿಟ್ಟಾಗ್ತೇನಿ….
ತಕ್ಷಣ ಶಾಂತಕ್ಕ ಹೊರ ಬಂದರು- ಮಗ್ಗಲು ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು- ಸುಮ್ಮನಾಗಿ ಬಿಡ್ತಾರ ಅವರು. ಅಂದರು.
ನಾನು ನಗುತ್ತ ನೀವ್ಯಾಕ ಬಂದ್ರಿ ಶಾಂತಕ್ಕ, ನೀವ ಇಲ್ಲದಾಗ ಕೇಳೂ ಮಾತದು… ಎಂದೆ. ನಗೆಯಲ್ಲಿ ಅವರಿಬ್ಬರೂ ಸೇರಿಕೊಂಡರು.
ಕಣವಿ: ಒಂದು ಮಾತು ಖರೆ ಹೇಮಾ ಅವರ, ಭಾಳ ಸಂದರ್ಭದೊಳಗ ನನಗ ಅನಿಸೇದ, ಅವರ ಅಭಿಪ್ರಾಯನಽ ಸರಿ ಇರ್‍ತದ. ವ್ಯವಹಾರ, ಹಣಕಾಸು, ಮಕ್ಕಳು, ಮನಿ, ಎಷ್ಟೋ ಸಲ ನನ್ನ ವೈಯಕ್ತಿಕ ವಿಷಯಗಳಲ್ಲಿ ಸಹ ಅವರ ಅಭಿಪ್ರಾಯ ಸರಿ ಅನಸ್ತದ, ನನ್ನ ಮತಭೇದ ತತ್ಕಾಲ ಆಗಿರ್‍ತದ. ದಾಂಪತ್ಯದಲ್ಲಿ ಸಭ್ಯ ಪುರುಷನೊಬ್ಬನ ಸಮರ್ಪಣಾ ಭಾವ, ಅದರಿಂದ ಅವನಿಗೂ ದೊರೆಯುವ ಸಮಾಧಾನ ಇಡೀ ಕುಟುಂಬವನ್ನು ಸ್ವಸ್ಥವಾಗಿಡಬಲ್ಲುದು ಎಂಬ ನನ್ನ ನಂಬಿಕೆ ದೃಢವಾಯಿತು.

ಹೇಮಾ: ಇತ್ತೀಚೆಗೆ ಮುಖ್ಯವಾಗಿ ಈ ದಶಕದೊಳಗ ಸಾಹಿತ್ಯ ವಿಮರ್ಶೆಯೊಳಗ ಸ್ತ್ರೀವಾದಿ ವಿಮರ್ಶೆ ಒಂದು ಹೊಸ ದೃಷ್ಟಿಕೋನವಾಗಿ, ಪರಿಕಲ್ಪನೆಯಾಗಿ ಮೂಡಿ ಬಂದಿದೆ. ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಕಣವಿ: ಈಗೀಗಂತೂ ಆ ಸಾಹಿತ್ಯ ಬೆಳೀತಾ ಇದೆ. ಮೊನ್ನೆ ಒಂದು ಪುಸ್ತಕ ಹೊಸಿಲಾಚೆ ಹೊಸ ಹೆಜ್ಜೆ’ ಅಂತ ನೋಡಿದೆ- ನೀವೂ ನೋಡಿರ ಬಹುದು- ಹೊಸ ಧೋರಣೆಗಳು… ಇದರ ಅರ್ಥನಽ ಬೇರೆ ಅದ, ಅನಕೃ ಬರೆದ ಹೊಸಿಲು ದಾಟಿದ ಹೆಣ್ಣು ಅರ್ಥನಽ ಬೇರೆ ಇತ್ತು….
ಸ್ತ್ರೀವಾದಿ ವಿಮರ್ಶೆಯ ಪ್ರಶ್ನೆಗೆ ಉತ್ತರ ಸ್ತ್ರೀವಾದಿ ಸಾಹಿತ್ಯ ರಚನೆ ಕಡೆಗೆ ವಾಲಿತ್ತು.
ಹೇಮಾ: ಅದು ಸರಿ ಕಣವಿಯವರೆ, ನಾನು ಕೇಳಿರೂದು ಸ್ತ್ರೀ ಕೇಂದ್ರಿತ ವಿಮರ್ಶೆ ಬಗ್ಗೆ, ಮಹಿಳಾ ಸಾಹಿತ್ಯದಲ್ಲಿ ಮಾತ್ರ ಅಲ್ಲ, ನಿರಂಜನ, ಕಟ್ಟೀಮನಿ ಮುಂತಾದವರ ಸಾಹಿತ್ಯದಲ್ಲೂ ಅವರು ಸ್ತ್ರೀ ಸಂಬಂಧೀ ವಿಷಯವನ್ನು ಯಾವ ದೃಷ್ಟಿಯಿಂದ ಚಿತ್ರಿಸಿದ್ದಾರೆ. ಲಿಂಗಪ್ರಭೇದ ಮೂಲವಾದ ಅಸಮಾನತೆಯ ಬಗ್ಗೆ ಅವರ ಅಭಿಪ್ರಾಯ ಏನು ಅನ್ನೂದನ್ನು ನೋಡೂದು.
ಕಣವಿ: ಹಾಂ, ಹಂಗಿದ್ದರ ಅದಕ್ಕೆ ಸ್ಟಾಂಡರ್ಡ್ ಏನು? ಅದರ ಬಗ್ಗೆ ಕನ್ನಡದಲ್ಲಿ ಹೆಚ್ಚು ಏನೂ ಪ್ರಕಟ ಆದ್ಹಂಗ ಕಾಣೂದುಲ್ಲ, ತೇಜಸ್ವಿನಿ ಪುಸ್ತಕ ನೋಡಿದ್ದೆ. ಅದೂ ಸ್ಪಷ್ಟ ಇಲ್ಲ. ಸ್ತ್ರೀವಾದಿ ವಿಮರ್ಶೆಯ ಧೋರಣೆ, ಮಾನದಂಡಗಳು ಸ್ಪಷ್ಟ ಆಗಬೇಕು. ಈಗ ಅದರ ಅಗತ್ಯ ಅದ.
ನಮ್ಮ ಶ್ರೇಣೀಕೃತ ವ್ಯವಸ್ಥೆಯಲ್ಲಿ ಸ್ತ್ರೀವಾದಿ ಮನೋಧರ್ಮ ಬೆಳೆಸಿಕೊಳ್ಳಲು ಸೂಕ್ಷ್ಮ ಸಂವೇದನೆ, ಮಾನವೀಯ ಮೌಲ್ಯಗಳ ಅಗತ್ಯ ಇದೆ. ಸ್ತ್ರೀವಾದ ಏಕವಾದ ಅಲ್ಲ, ಅಂತೆಯೇ ವಿಭಿನ್ನ ಅಪೇಕ್ಷೆಗಳು ಕೆಲವೊಮ್ಮೆ ಅವುಗಳಲ್ಲಿಯ ವೈರುಧ್ಯಗಳು ಗೊಂದಲವನ್ನು ಉಂಟುಮಾಡುವ ಸಾಧ್ಯತೆ ಇದೆ…. ಇತ್ಯಾದಿ ಮಾತುಗಳಾದವು.
ಕಣವಿಯವರು ಚಹಾ ಮಾಡುತ್ತೇನೆಂದು ಎದ್ದರು. ಮುಂದೆ ಎರಡೇ ನಿಮಿಷಗಳಲ್ಲಿ ಶಾಂತಕ್ಕ ಚಹದ ಕಪ್ಪುಗಳೊಂದಿಗೆ ಬಂದರು. ಇದು ಅವರ ದಾಂಪತ್ಯದ ರೀತಿ, ಒಬ್ಬರ ಮನಸ್ಸಿನಲ್ಲಿದ್ದುದಕ್ಕೆ ಇನ್ನೊಬ್ಬರು ಕ್ರಿಯಾರೂಪ ನೀಡುತ್ತಾರೆನಿಸಿತು. ಹೊರಬಂದೆ. ಮೇಲೆ ಶುಭ್ರ ಆಕಾಶ- ಕಣವಿಯವರ ನಂಬಿಕೆಯಂತೆ. ಮಗ್ಗುಲಲ್ಲಿ ಅವರ ಮಾಸದ ಮುಗುಳ್ನಗೆಯ ಸಾಕಾರದಂತೆ ಅರಳಿ ನಿಂತ ಹೂವುಗಳು. ಹೌದು. ಹೂವು ಹೊರಳುವವು ಸೂರ್ಯನ ಕಡೆಗೆ…. ಗುನುಗುನಿಸಿತು ನನ್ನ ಮನ.






0 Comments