ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚುನಾವಣೆಯ ಬವಣೆಗಳು…

ಗೊರೂರು ಶಿವೇಶ್

ಸರ್ಕಾರಿ ನೌಕರರಿಗೆ ಅದರಲ್ಲೂ ಶಿಕ್ಷಕರಿಗೆ ಅವರ ವೃತ್ತಿ ಜೀವನದಲ್ಲಿ ಅನಿವಾರ್ಯ ಕರ್ಮವೆಂದರೆ ಚುನಾವಣೆ ಕೆಲಸ. ಗ್ರಾಮ ಪಂಚಾಯಿತಿ, ನಗರಸಭೆ, ತಾಲ್ಲೂಕು, ಜಿಲ್ಲಾ ಪಂಚಾಯ್ತಿ, ವಿಧಾನಸಭೆ, ಲೋಕಸಭೆ ಮುಂತಾಗಿ ಬಹುತೇಕ ಪ್ರತಿವರ್ಷ ಚುನಾವಣಾ ಕಾರ್ಯಗಳು ಇದ್ದೇ ಇರುತ್ತವೆ. ಚುನಾವಣೆ ಘೋಷಣೆಯಾಗಿ ‘ನೀತಿಸಂಹಿತೆ ಜಾರಿ’ ಎಂದು ಚುನಾವಣಾ ಆಯೋಗ ಘೋಷಿಸಿದೊಡನೆ ‘ಈ ಬಾರಿಯಾದರೂ ಚುನಾವಣಾ ಆದೇಶ ಬಾರದಿರಲಪ್ಪ’ ಎಂದುಕೊಂಡರೂ ಬಹುತೇಕರಿಗೆ ತಪ್ಪಿಸಿಕೊಳ್ಳುವ ಭಾಗ್ಯವಿರುವುದಿಲ್ಲ. ‘ಮತಗಟ್ಟೆ ಅಧಿಕಾರಿಯಾಗಿ ನಿಮ್ಮನ್ನು ನೇಮಕ ಮಾಡಲಾಗಿದೆ ಎಂಬ ಆದೇಶ ಪಡೆದಾಗ ಸಣ್ಣಗೆ ಶುರುವಾಗುವ ಆತಂಕ ನಿಟ್ಟುಸಿರುನೊಂದಿಗೆ ಶಮನವಾಗುವುದು ಫಲಿತಾಂಶ ಹೊರ ಬಂದು ಸುಸೂತ್ರವಾಗಿ ಮುಗಿದಿದೆ ಎಂದು ತಿಳಿದಾಗ ಮಾತ್ರ. 

ಇಪ್ಪತೈದು ವರ್ಷಗಳ ಹಿಂದೆ ಚುನಾವಣಾ ಆದೇಶಗಳು ನಮ್ಮ ಕೈಸೇರುವಷ್ಟರಲ್ಲಿ ಹಲವು ಬಾರಿ ರಿಪೇರಿಯಾಗಿರುತ್ತಿದ್ದವು. ಒಂದೇ ಆದೇಶದಲ್ಲಿ ಇಡೀ ಮತಗಟ್ಟೆ ಅಧಿಕಾರಿಗಳ ಹೆಸರುಗಳು ನಮೂದಾಗಿರುತ್ತಿದ್ದವು. ಅವರಲ್ಲಿ ಹಲವರು ತಮ್ಮ ಹಣ, ಪ್ರಭಾವ ಬಳಸಿ ತಪ್ಪಿಸಿಕೊಂಡ ಪರಿಣಾಮ ಮೂಲ ಆದೇಶದ ಹೆಸರಿನ ಮೇಲೆ ಒಡೆದು, ಇಲ್ಲವೆ ‘ವೈಟ್ನರ್’ ಹಚ್ಚಿ ನಮ್ಮ ಕೈಸೇರುತ್ತಿದ್ದವು. ಮೇಲಿನ ಎರಡೂ ಇಲ್ಲದ ನಾವು ಹೋಗದೆ ಇದ್ದರೆ ಇದು ‘ಅರೆಸ್ಟ್ ವಾರೆಂಟ್’ ಕೂಡಾ ಹೌದು ಎಂಬ ಪದಗುಚ್ಛಗಳಿಗೆ ಹೆದರಿ ತರಬೇತಿಗೆ ದೌಡಾಯಿಸುತ್ತಿದ್ದೆವು. 

ತರಬೇತಿ, ಚುನಾವಣಾ ಸಾಮಗ್ರಿ ನೀಡುವುದು (ಮಸ್ಟರಿಂಗ್) ಮತ್ತು ಹಿಂದಕ್ಕೆ ಪಡೆಯುವುದು (ಡಿ.ಮಸ್ಟರಿಂಗ್) ಎಲ್ಲವೂ ಅಲ್ಲಿಯ ರಿಟರ್ನಿಂಗ್ ಆಫೀಸರ್‍ರ ಆಸಕ್ತಿ ಮತ್ತು ದಕ್ಷತೆಗೆ ಸಾಕ್ಷಿಯಾಗುತ್ತವೆ. ತಾಲ್ಲೂಕು ಕಛೇರಿಯ ಅಧಿಕಾರಿಗಳು, ನೌಕರರು ಪ್ರತಿವರ್ಷ ಅದೇ ಕೆಲಸವನ್ನು ನಿರ್ವಹಿಸಿ ಯಾಂತ್ರಿಕವೆನ್ನುವಷ್ಟರ ಮಟ್ಟಿಗೆ ಒಗ್ಗಿ ಹೋಗಿರುತ್ತಾರೆ. ಅಂಥವರಿಂದ ಸಮರ್ಥವಾಗಿ, ಸುಗಮವಾಗಿ ಎಲ್ಲರೂ ಮೆಚ್ಚುವಂತೆ ಚುನಾವಣಾ ಕೆಲಸವನ್ನು ನಿರ್ವಹಿಸುವುದರಲ್ಲಿ ಅವರ ಚಾತುರ್ಯದ ಪ್ರದರ್ಶನವಾಗುತ್ತದೆ. ಮತಪತ್ರಗಳ ಮೂಲಕ ಚುನಾವಣೆ ನಡೆಯುತ್ತಿದ್ದ ಸಂದರ್ಭ ‘ಭೂತ’ ಎಂದೇ ಪ್ರಸಿದ್ಧವಾದ ‘ಬೂತ್’ ಪೆಟ್ಟಿಗೆಗೆ ‘ಹಸಿರುಸೀಲ್’ ಹಾಕಿ ಮುಚ್ಚುವುದು ಮತ್ತು ಕೊನೆಗೆ ಮತಪತ್ರದ ಲೆಕ್ಕ ಕೊಡುವುದು ಬಹಳ ಮುಖ್ಯವಾಗಿದ್ದು, ತರಬೇತಿಯ ಸಂದರ್ಭದಲ್ಲಿ ಅದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಒಬ್ಬ ತರಬೇತಿ ಅಧಿಕಾರಿಯಂತೂ ಯಾರಾದರೂ ಮಾತನಾಡುತ್ತ ಕುಳಿತಿದ್ದರೆ ‘ಟೆಂಡರ್ ಓಟಿಗೂ ಛಾಲೇಂಜ್ ಓಟಿಗೂ ವ್ಯತ್ಯಾಸ ಹೇಳಿ’, ‘ಬನ್ನಿ ಗ್ರೀನ್ ಸೀಲ್ ಹಾಕಿ ತೋರಿಸಿ’ ಎಂದೋ ಇಲ್ಲವೆ ‘ಬ್ಯಾಲೆಟ್’ ಪೇಪರ್ ಅಕೌಂಟ್ ಹೇಗೆ ಮಾಡುವುದು ತೋರಿಸಿ’ ಎಂದು ಪಂಥಾಹ್ವಾನ ನೀಡುತ್ತಿದ್ದರು. ಸಿನಿಮಾ ಥಿಯೇಟರ್‍ಗಳಲ್ಲಿ ಸಾವಿರಾರು ನೌಕರರ ಎದುರಿಗೆ ನೀಡಲಾಗುತ್ತಿದ್ದ ಇಂಥ ತರಬೇತಿಯಲ್ಲಿ ಆಹ್ವಾನಗಳನ್ನು ಎಲ್ಲೊ ಒಬ್ಬಿಬ್ಬರು ಸ್ವೀಕರಿಸುತ್ತಿದ್ದರೆ ಉಳಿದಂತೆ ‘ಎಲ್ಲರೆದುರು ಮಾನ ಹೋಗುವ’ ಪ್ರಸಂಗ ತಪ್ಪಿಸಿಕೊಳ್ಳಲು ತೆಪ್ಪಗಾಗಿ ಗಾಢವಾಗಿ ಕೇಳಿಸಿಕೊಳ್ಳುವಂತೆ ಅಭಿನಯಿಸುತ್ತಿದ್ದರು.

ಕಿಂಡಿಯೊಳಗೆ ಎಡಗೈ ತೋರಿಸಿ, ಸ್ಪ್ರಿಂಗನ್ನು ಎಳೆಯುತ್ತಾ ಅದೇ ಸಂದರ್ಭದಲ್ಲಿ ಬಲಗೈಯಿಂದ ‘ಲಾಕನ್ನು ತೆಗೆಯುವ ಆ ಕೌಶಲ ಕಲಿಯುವವರೆಗೂ ಬ್ರಹ್ಮಾಂಡ ವಿದ್ಯೆಯೆ ಆಗಿತ್ತು. ಅದರ ಜೊತೆಗೆ 301 ತಿಂದ ಪ್ರಾರಂಭವಾಗಿ 900ರಿಂದ ಕೊನೆಗೊಳ್ಳುವ ಮತಪತ್ರಗಳ ಸಂಖ್ಯೆಯನ್ನು ಕಳೆದಾಗ 599 ಬರುತ್ತಿತ್ತು. ಆಗ ಅದಕ್ಕೆ  ಒಂದನ್ನು ಸೇರಿಸಿದರೆ ಅದು ಒಟ್ಟು ಮತಪತ್ರಗಳು ಎಂದರೆ ಒಟ್ಟು ಆರುನೂರು ಮತಪತ್ರಗಳು ಎಂಬ ಲೆಕ್ಕ ಹೇಳುತ್ತಿದ್ದರೆ ನಮ್ಮಲ್ಲೇ ಹಲವರಿಗೆ ಗೊಂದಲ. ಇದೆ ಗೊಂದಲ ಕೆಲವೊಮ್ಮೆ ಚುನಾವಣಾ ದಿನವೂ ಮುಂದುವರಿದು ಕೆಲವರು ಅಲ್ಲೂ ಅದೇ ತಪ್ಪನ್ನು ಮಾಡಿಕೊಂಡು ತಂದಿರುತ್ತಿದ್ದರು.

ಇನ್ನೂ ಮಸ್ಟರಿಂಗ್ ದಿನ ಕೋಳಿ ಕೂಗುವ ಮುನ್ನವೆ ಮನೆ ಬಿಟ್ಟು ಮಸ್ಟರಿಂಗ್ ಕೇಂದ್ರ ಸೇರುತ್ತಿದ್ದೆವು. ಕೆಲವೆಡೆ ಚುನಾವಣಾ ಸಿಬ್ಬಂದಿಗಳೆಲ್ಲವೂ ಒಂದೆಡೆ ಸೇರುವಂತೆ ಮತಗಟ್ಟೆ ಸಂಖ್ಯೆ ಹಾಕಿ ಚೇರು, ಟೇಬಲನ್ನು ಹಾಕಿದರೆ ಇನ್ನೂ ಕೆಲವೆಡೆ ಮೈಕ್‍ನಲ್ಲಿ ಕೂಗಿ ಜೊತೆಗಾರರನ್ನು ಸಂಘಟಿಸಬೇಕಾದ ಅನಿವಾರ್ಯತೆ. ಅಷ್ಟರಲ್ಲಿ ನಾವು ಹೋಗಬೇಕಾದ ಮತಗಟ್ಟೆಗಳಿರುವ ಊರುಗಳನ್ನು ಪರಸ್ಪರರಿಗೆ ತಿಳಿಸಿ ‘ಸ್ಥಳ ಪುರಾಣ’ವನ್ನು ಸಂಗ್ರಹಿಸಲು ಪ್ರಾರಂಭಿಸುತ್ತಿದ್ದೆವು.

‘ಒಹೋ. ಅದು ತುಂಬಾ ದೂರ………… ಓ. ಇದೇ ಇಲ್ಲೇ ಹತ್ರ ಜೀಪ್‍ನಲ್ಲೇ ಹೋಗಬಹುದು…………….. ಆ ಊರು ತುಂಬಾ ಕಷ್ಟ. ಊಟ ತಿಂಡಿ ಸಿಗೋದಿಲ್ಲ………… ಅಲ್ಲಿ ಕಳೆದ ಸಾರಿ  ಗಲಾಟೆಯಾಗಿತ್ತು. ಜ್ವಾಪಾನವಾಗಿರಿ’ ಮುಂತಾಗಿ ಸೂಚನೆ, ಸಲಹೆ, ಎಚ್ಚರಿಕೆಗಳು ಪುಃಖಾನುಪುಃಖವಾಗಿ ಬರತೊಡಗುತ್ತವೆ. ಇನ್ನೂ ಒಬ್ಬೊಬ್ಬರಾಗಿ ಬಂದು ಪರಿಚಯವಾಗುವಷ್ಟರಲ್ಲಿ ಹನ್ನೊಂದು ಮುಟ್ಟಿರುತ್ತದೆ.

 ‘ಚುನಾವಣೆ ಸಾಮಗ್ರಿಗಳನ್ನು ತೆಗೆದುಕೊಂಡು ಬಂದರೆ ಕಾಯ್ಕೊಂಡು ಕೂತಿರಬೇಕಾಗುತ್ತದೆ. ಸ್ವಲ್ಪ ನಿಧಾನಕ್ಕೆ ತಗೊಳಣ ಸಾರ್’ ಎಂಬ ಸಲಹೆ ಸಂಗಡಿಗರಿಂದ ಬರುತ್ತದೆ. ಇದು ಕೇವಲ ಅರ್ಧಗಂಟೆಯಷ್ಟೆ ಮುಂದೂಡಬಹುದು ಅಷ್ಟೇ. ಎರಡು ಮತಪೆಟ್ಟಿಗೆ, ರಟ್ಟುಗಳು, ಮತಪತ್ರಗಳು ಇತರೆ ಸಾಮಾಗ್ರಿಗಳು ಹೇಗೆ ನಾಲ್ಕು ಜನರಿಗೂ ಎರಡೂ ಕೈ ಹಿಡಿಯುವಷ್ಟು ಚುನಾವಣಾ ಸಾಮಾಗ್ರಿಗಳು. ಇನ್ನೂ ಅವುಗಳನ್ನು ಗುಡ್ಡೆ ಹಾಕಿಕೊಂಡು ‘ಚೆಕ್’ ಮಾಡಿಕೊಳ್ಳುವುದು ಇನ್ನೊಂದು ಸಾಹಸ. ಮತಪತ್ರ ಕೈಗೆ ದೊರತೊಡನೆ ಅಲ್ಲಿಯವರೆಗೆ ಇದ್ದ ತಮಾಷೆಯು ಮಾಯವಾಗಿ ಗಂಭೀರತೆ ತನ್ನಷ್ಟಕ್ಕೆ ಮೂಡುತ್ತದೆ. ಅದರಲ್ಲೂ ಸಾವಿರಕ್ಕಿಂತಲೂ ಹೆಚ್ಚು ಮತದಾರರಿದ್ದರೆ ಬಿ.ಪಿ. ನಿಧಾನವಾಗಿ ಏರಲು ಪ್ರಾರಂಭವಾಗಿರುತ್ತದೆ. ‘ಆ ಕವರ್ ಇಲ್ಲ,’ ಈ ಸಾಮಾಗ್ರಿ ಇಲ್ಲ’ ಮುಂತಾಗಿ ಸಾಮಾಗ್ರಿ ವಿತರಕರ ಬಳಿ ಪರೇಡು ಮಾಡುವುದು, ಅವರಿಂದ ‘ರೂಟ್ ಆಫೀಸರ್ ಕೈಲಿ ಕೊಟ್ಟು ಕಳುಸ್ತೀನಿ’ ಎಂದು ಸಿದ್ಧ ಉತ್ತರ ಪಡೆದು ಹಿಂತಿರುಗುವುದು, ಸಂಜೆ ಬರುವ ರೂಟ್ ಆಫೀಸರ್ ‘ಯಾವ್ದು ಕೊಟ್ಟಿಲ್ಲ. ಇರದ್ರಲ್ಲಿ ಅಡ್ಜೆಸ್ಟ್ ಮಾಡಿಕೊಂಡು ಎಲೆಕ್ಷನ್ ಮುಗಿಸಿ’ ಎಂದು ಹೇಳುವುದು ಮಾಮೂಲಿ. ಅದೆ ರೀತಿ ‘ಮತಗಟ್ಟೆಯಲ್ಲಿ ಎಲ್ಲವೂ ವ್ಯವಸ್ಥೆಯಾಗಿದೆ ’ ಎಂದರೂ ಅಲ್ಲಿಗೆ ನಿಯೋಜನೆಯಾಗಿರುವ ಸಹಾಯಕನನ್ನು ಮನೆ ಮನೆಗೆ ಅಟ್ಟಿ ಟೇಬಲ್, ಕುರ್ಚಿಗಳನ್ನು ತರಿಸುವುದು ಬಹಳಷ್ಟು ಸಂದರ್ಭದಲ್ಲಿ ಸಾಮಾನ್ಯ.

ಬಹುತೇಕ ಮತಗಟ್ಟೆಗಳು ಸರ್ಕಾರಿ ಪ್ರಾಥಮಿಕ ಶಾಲೆಗಳು ಆಗಿರುತ್ತವೆ. ಅಲ್ಲಿಗೆ ತಲುಪಿದೊಡನೆ ಮೊದಲು ಅಲ್ಲಿರುವ ಭಾವಚಿತ್ರಗಳೆಡೆಗೆ ಗಮನಹರಿಯುತ್ತಿದೆ. ಅಲ್ಲಿರುವ ರಾಷ್ಟ್ರನಾಯಕರ ಚಿತ್ರಗಳು ಮತದಾರರನ್ನು ಪ್ರಭಾವಿಸಬಹುದು ಎಂಬ ಕಾರಣಕ್ಕಾಗಿ ಅವರ ಪೋಟೋಗಳನ್ನು ಗೋಡೆಯಡೆಗೆ ತಿರುಗಿಸುವುದು, ಶಾಲೆಯ ಹೊರಗೆ ಬರೆಸಿದ ಚಿತ್ರಗಳಾದರೆ ಅವುಗಳನ್ನೆಲ್ಲ ಕವರ್ ಮಾಡುವುದು, ಮತ್ತೊಂದು  ತಲೆನೋವು ವಿವಿಧ ಅನುದಾನಗಳನ್ನು ಬಳಸಿ ಬರೆಸಿದ ಇಲ್ಲವೆ ನಿರ್ಮಿಸಿದ ಅಕ್ಷರ ಚಪ್ಪರಗಳನ್ನು ಒಮ್ಮೊಮ್ಮೆ ಕಿತ್ತು ಮೂಲೆ ಸೇರಿಸಿದ್ದು ಉಂಟು.

ಇನ್ನೂ ಯಾರಿಗೆ ಎಷ್ಟೇ ಚುನಾವಣೆ ಅನುಭವಗಳಾಗಿದ್ದರೂ ಪ್ರತಿ ಚುನಾವಣೆಗಳು ಹೊಸ ಅನುಭವ ನೀಡುವುದು ಸಾಮಾನ್ಯ. ನನ್ನ ಮೊದಲನೇ ಚುನಾವಣಾ ಅನುಭವ ಹೊಳೆನರಸಿಪುರದ ಒಂದು ಹಳ್ಳಿಯಲ್ಲಿ ಗ್ರಾಮಪಂಚಾಯಿತಿ ಚುನಾವಣೆ ‘ನಮ್ಮೂರಲ್ಲಿ ಹಂಗೇನಿಲ್ಲ, ತುಂಬಾ ಶಾಂತವಾದ ಊರು’ ಎಂದು ಹಿಂದಿನ ದಿನ ಚುನಾವಣಾ ಏಜೆಂಟ್‍ಗಳು ಬಡಾಯಿ ಕೊಚ್ಚಿದರು. ಆದರೆ ಮತದಾನ ಪ್ರಾರಂಭವಾದ ಒಂದು ಗಂಟೆಯೊಳಗೆ ಹೊರಗೆ ಹೊಡೆದಾಟ, ಇಟ್ಟಿಗೆಗಳು, ಕಲ್ಲುಗಳು ತೂರಾಡಲಾರಂಭಿಸಿದವು. ನೋಡುನೋಡುತ್ತಿದ್ದಂತೆ ಒಬ್ಬನ ತಲೆಗೆ ಇಟ್ಟಿಗೆ ತಾಗಿ ರಕ್ತ ಸುರಿಯಲಾರಂಬಿಸಿತು. ಅದನ್ನು ಕಂಡ ಆ ಕುಟುಂಬದವರು ಗೊಳೋ ಎನ್ನಲು ಆರಂಭಿಸಿದೊಡನೆ ತೂರಾಟ ಇನ್ನೂ ಹೆಚ್ಚಾಯಿತು. ನಮಗೆ ಮತಗಟ್ಟೆಯೊಳಗೆ ನುಗ್ಗಿ ಮತ ಪೆಟ್ಟಿಗೆಯನ್ನು ಹೊತ್ತೊಯ್ದರೆಂಬ ಹೆದರಿಕೆ. ಇದ್ದ ಒಬ್ಬ ಹೋಂಗಾರ್ಡ್ ಒಳಗೆ ಬಂದು ಬಾಗಿಲು ಹಾಕಿದ. ನಮಗೂ ಏನೂ ತಿಳಿಯದ ಸ್ಥಿತಿ. ಅರ್ಧ ಗಂಟೆ ಕಳೆಯಿತು. ಫೋನ್ ವ್ಯವಸ್ಥೆ ಇಲ್ಲ. ಸರಿ ಸಿಟಿಗೆ ಹೋಗಿ ಪೋಲಿಸರನ್ನು ಕರೆತರುವಂತೆ ಹೋಂಗಾರ್ಡ್‍ನ್ನು ಕಳುಹಿಸಿದೆವು. ಅಷ್ಟರಲ್ಲಿ ಅಲ್ಲಿಗೆ ಬಂದ ದುರೀಣರೊಬ್ಬರು ‘ಸಾರ್ ಇಲ್ಲವೆ ಚುನಾವಣೆ ಮುಂದೂಡಿ, ಇಲ್ಲವೆ ಮತದಾನ ಪ್ರಾರಂಭಿಸಿ’ ಎಂದರು. ನಮ್ಮನಮ್ಮಲ್ಲಿ ಚರ್ಚಿಸಿ ಪೋಲೀಸ್ ಬರುವವರೆಗೂ ಮಹಿಳೆಯರಿಗೆ ಮತದಾನ ಮಾಡಲು ವ್ಯವಸ್ಥೆ ಮಾಡಿ, ಪೋಲೀಸ್ ಬಂದ ನಂತರ ಎಲ್ಲರಿಗೂ ಮತದಾನ ನೀಡಿ ‘ಸಾಕಪ್ಪ’ ಎಂದುಕೊಂಡು ಮನೆ ಸೇರಿದೆವು.

ಇನ್ನೂ ಚುನಾವಣಾ ಆಯೋಗದ ನೀತಿಗಳು ವಿವಿಧ ರೀತಿಯ ಮತದಾರರು ಹೇಗೆ ಮತ ಚಲಾಯಿಸಬಹುದೆಂದು ಹೇಳುತ್ತವೆ. ಕುರುಡರು, ವಿಕಲಚೇತನರು, ಅಸಹಾಯಕರು ಹೀಗೆ. ಆದರೆ ಕುಡಿದವರಿಂದ  ಹೇಗೆ ಮತ ಚಲಾಯಿಸಬೇಕೆಂಬುದು ಎಲ್ಲೂ ದಾಖಲಾಗಿಲ್ಲ. ಹೀಗಾಗಿ ಅವರದೇ ಹಾವಳಿ. ಎಲ್ಲಾ ಪಕ್ಷಗಳೂ ಮದ್ಯದ ವಿಷಯದಲ್ಲಿ ಸಮಾನ ನೀತಿ ಸಂಹಿತೆ ಅನುಸರಿಸಿ ವಿತರಿಸುವುದರಿಂದ ಇವರನ್ನು ನಿಯಂತ್ರಿಸುವುದು, ಯಾವುದೇ ಮತಗಟ್ಟೆ ಅಧಿಕಾರಿಗಳಿಗೆ ಸವಾಲೇ ಸರಿ. ಈಗ ಜರುಗಿದ ಚುನಾವಣೆಯಲ್ಲಿ ಮೂರು ಗಂಟೆಯಾದರೂ ಬಹಳಷ್ಟು  ಗಂಡಸರು ಮತ ಚಲಾವಣೆ ಮಾಡಿರಲಿಲ್ಲ. ಈ ಬಗ್ಗೆ ಏಜೆಂಟರಲ್ಲಿ ವಿಚಾರಿಸಿದೆ. ಇನ್ನೂ ‘ಒಂದು ರೌಂಡು ಸಿಗುತ್ತೆ ಎಂದು ಕಾಯುತ್ತಿದ್ದಾರೆ’ ಎಂದ ಒಬ್ಬ ಏಜೆಂಟ್. ಇದಕ್ಕೆ ಅನುಗುಣವಾಗಿ ‘ನಾನಿನ್ನು ಓಟು ಮಾಡಿಲ್ಲ’ ಎಂದು ಉಂಗುರದ ಬೆರಳನ್ನು ತೋರಿಸಿಕೊಂಡು ಕೆಲವರು ಓಡಾಡುತ್ತಿದ್ದರು. ಒಳಗೆ ಸೇರಿದ ಗುಂಡು ಅವರೊಳಗಿನ ಗಂಡನ್ನು ಎಚ್ಚರಿಸಿರುತ್ತದೆ. ಉದ್ದನೆಯ ಕ್ಯೂನಲ್ಲಿ ತಮ್ಮ ವಿಕಟ ಅಟ್ಟಹಾಸವನ್ನು ತೋರಿತ್ತಿರುವಂತೆಯೆ ಹಿಂದೆ-ಮುಂದೆ ನಿಂತಿದ್ದವರು ವಾಸನೆ, ಆರ್ಭಟ ತಡೆಯಲಾರದೆ ‘ಸಾರ್ ಇವರನ್ನು ಮೊದ್ಲು ಓಟು ಮಾಡ್ಸಿ ಕಳಿಸಿ’ ಎನ್ನುತ್ತಾರೆ. ಇನ್ನು ಆತ ಒಳಬಂದರೆ ಏಜೆಂಟರ ಕಡೆ ನೋಡುತ್ತಾ ಕಣ್ಣು ಚಿಮುಕಿಸುವುದೇನು ? ಪೋಲಿಂಗ್ ಅಧಿಕಾರಿಗಳನ್ನು ವ್ಯಘ್ರ ಕಣ್ಣುಗಳಿಂದ ನೋಡುವುದೇನು? ಬೆರಳಿಗೆ ಇಂಕ್ ಹಾಕಲು ಬರುವ ಮಹಿಳಾ ಪೋಲಿಂಗ್ ಅಧಿಕಾರಿಗಳ ಬಳಿ ಹುಸಿ ನಗುವುದೇನು ? ಓಟಿನ ಮತಪತ್ರಕ್ಕೆ ಕೊಟ್ಟಲ್ಲೇ ಒತ್ತಲು ಹೋಗುವ ದಾಷ್ಟ್ರ್ಯವೇನು ? ಆತನಿಗೆ ಒಮ್ಮೆ ನಯವಾಗಿ, ಇನ್ನೊಮ್ಮೆ ಗಟ್ಟಿಯಾಗಿ ಗದರಿ ಅವನ ಕೈಯಲ್ಲಿ ಮತ ಚಲಾಯಿಸಿ ಆಚೆ ಕರೆತರಲು ಸಾಕುಸಾಕಾಗಿ ಹೋಗುತ್ತದೆ. ಇನ್ನೂ ಆಚೆ ಹೋಗದೆ ಏಜೆಂಟರ ಬಳಿ ಮಾತಾಡಲು ನಿಲ್ಲುವ ಇವರನ್ನು ಆಚೆಗೆ ತಳ್ಳುವ ಕ್ರಿಯೆ ಇತರರಿಗೆ ಒಳ್ಳೆಯ ರಂಜನೆ. ಸಾಲಿನಲ್ಲಿ ಇರುವ ಸ್ತ್ರೀಯರೂ ಇಂಥವರಿಗೆ ಕಂಡಾ ಬಟ್ಟೆ ಉಗಿಯುವರಾದರೂ ನಮಗಾಗಲಿ ಅಲ್ಲಿರುವ ಗಂಡಸರಿಗಾಗಲಿ ಆ ದೈರ್ಯವಿಲ್ಲ. ಎಲ್ಲಿ ನಾಟಕೀಯ ಘಟನೆಗಳು ಸಂಭವಿಸಿ ಮತ್ತೊಂದು ಅವಘಡಗಳಿಗೆ ನಾಂದಿ ಹಾಡಬಹುದೆಂದು ಎಚ್ಚರಿಕೆ.

ಅರಕಲಗೂಡಿನ ಪಕ್ಕದ ಹಳ್ಳಿಯೊಂದರಲ್ಲಿ ಚುನಾವಣೆ ಮದ್ಯಾಹ್ನ ಮೂರು ಗಂಟೆ ಸಮಯ. ಆಗಲೇ ಮತ ಚಲಾವಣೆ ಮಾಡಿದಾತ ಇನ್ನೊಮ್ಮೆ ಯಾರದೋ ಹೆಸರು ಸಂಖ್ಯೆ ಬರೆದುಕೊಂಡು ಬಂದು ಮತ ಚಲಾಯಿಸಲು ನಿಂತಿದ್ದಾನೆ. ಬೆರಳಿಗೆ ಹಾಕಿರುವ ಇಂಕನ್ನು ಒರೆಸಿಕೊಂಡು ವಾದಕ್ಕೆ ನಿಂತಿದ್ದಾನೆ. ಆಗ ಗುರುತು ಚೀಟಿ ಇಲ್ಲದ ಕಾರಣ ಏಜೆಂಟರೆ ಆಧಾರ. ಆದರೆ ಅವನ ಆರ್ಭಟಕ್ಕೆ ಹೆದರಿ ‘ಹೋಗ್ಲಿ ಕೊಡಿಸಾರ್’ ಎನ್ನುತ್ತಿದ್ದಾರೆ. ಇದು ಏಕೋ ಸರಿ ಹೋಗಲಿಲ್ಲ ಎಂದು ಪೋಲೀಸರಿಗೆ ತಿಳಿಸಿದೆ. ಅವರು ಜೀಪಿನಲ್ಲಿ ಕರೆದೊಯ್ದರು. ಮುಕ್ಕಾಲು ಗಂಟೆ ಕಳೆಯಿತು. ಇನ್ನೂ ಪರವಾಗಿಲ್ಲ ಎನ್ನುವಷ್ಟರಲ್ಲಿ ಅತ ಮತ್ತೆ ಹಾಜರಾಗಿದ್ದ. ಕರೆದುಕೊಂಡು ಹೋಗಿದ್ದವರೆ ಮತ್ತೆ ಕರೆತಂದು ಬಿಟ್ಟು ಹೋಗಿದ್ದರು.  ಮುಂದೆ ಮತದಾನ ಮುಗಿಸುವಷ್ಟರಲ್ಲಿ ‘ಸಾಕಪ್ಪಾ ಈ ಚುನಾವಣಾ ಸಹವಾಸ’ ಎನಿಸಿತು.

ಇನ್ನೂ ಸಂಜೆಯಾಗುತ್ತಿದ್ದಂತೆ ನಕಲಿ ಮತದಾರರ ಹಾವಳಿ ಹೆಚ್ಚು. ಊರು ಬಿಟ್ಟಿರುವವರ, ಮತ ಇನ್ನೂ ಹಾಕದವರ ಸಂಖ್ಯೆ ಗುರುತುಹಾಕಿಸಿಕೊಂಡು ಅವರ ಹೆಸರು, ತಂದೆಯ ಹೆಸರು ಉರು ಹಚ್ಚಿಕೊಂಡು  ಬರುವವರ ಸಂಖ್ಯೆ ಹೆಚ್ಚುತ್ತಿತ್ತು. ಏಜೆಂಟರು ಕೆಲವೊಮ್ಮೆ ಮೌನವಹಿಸಿದರೆ, ಕೆಲವೊಮ್ಮೆ ತಕರಾರು ತೆಗೆಯುತ್ತಿದ್ದರು. ಆಗ ಪರಸ್ಪರರ ನಡುವೆ ಜಗಳ. ‘ನಮ್ಮೂರಲ್ಲಿ ಹಂಗೇನಿಲ್ಲ ನಾವೆಲ್ಲ ಒಂದೇ, ಪಾರ್ಟಿ ಮಾತ್ರ ಬೇರೆ’ ಎನ್ನುತ್ತಿದ್ದವರು ಈಗ ಪರಸ್ಪರ ಜಗಳವಾಡಿ ಈಗ ನಮ್ಮ ಬಳಿ ಬಂದು ‘ಸಾರ್, ಓಟು ಹಾಕ್ಸಿದ್ರೆ ಸರಿ ಇರಲ’್ಲ ಎಂದು ನಮಗೆ ಧಮಕಿ ಹಾಕುತ್ತಿದ್ದರು. ಈಗ ಮತದಾರನಿಗೆ ಮತ್ತೊಮ್ಮೆ ಮನೆಯ ಹಿಂದೆ ಮುಂದೆ ಚಿಕ್ಕಪ್ಪ, ದೊಡ್ಡಪ್ಪರನ್ನೆಲ್ಲ ಕುರಿತು ಪ್ರಶ್ನಿಸಿ ಉತ್ತರ ಬಾರದಿದ್ದಾಗ ಹಿಂದೆ ಕಳುಹಿಸಲಾಗುತ್ತಿತ್ತು.

ಚುನಾವಣಾ ನೀತಿ ನಿಯಮವಳಿಗಳು ಬಿಗಿಯಾಗಿ ಈಗ ಗುರುತು ಚೀಟಿ ಕಡ್ಡಾಯವಾಗಿದೆ. ಇದು ಬಹುತೇಕ ನಕಲಿ ಮತದಾನಕ್ಕೆ ಕಡಿವಾಣ ಹಾಕಿದೆ. ಮತಪತ್ರದ ಬದಲು ಮತಯುಂತ್ರದ  ಬಳಕೆ ಮತಗಟ್ಟೆ ಅಧಿಕಾರಿಗಳ ಕೆಲಸವನ್ನು ಹಗುರಗೊಳಿಸಿದೆ. ಹಿಂದೆ ಏಳುನೂರು- ಎಂಟನೂರು ಮತಪತ್ರದ ಹಿಂಭಾಗದಲ್ಲಿ ಸಹಿ ಹಾಕುವುದು, ಅದರ ಕೌಂಟರ್ ಫಾಯಿಲ್‍ಗಳ ಮೇಲೆ ಸಹಿ ಪಡೆಯುವುದು, ಅವರ ಹೆಸರು ಹುಡುಕುವುದು ಜೊತೆಗೆ ಮತ ಚಲಾಯಿಸಿದ ಮತಪತ್ರಗಳನ್ನು ಡಬ್ಬಕ್ಕೆ ಹಾಕಿರುವ ಬಗ್ಗೆ ಗಮನಹರಿಸುವುದು ಮುಂತಾದ ಒತ್ತಡಗಳು ಕಡಿಮೆಯಾಗಿವೆ. ಕೆಲವರು ಟೇಬಲೊಳಗಿನ ಡ್ರಾಯರ್‍ಗಳಲ್ಲಿ ಇನ್ನೂ ಕೆಲವರು ಮತಪತ್ರಗಳನ್ನು ಹೊರಗೆ ಒಯ್ದು ತಲೆನೋವಾಗುತ್ತಿದ್ದ ಪರಿಸ್ಥಿತಿಯಿಂದ ಹೊರಬಂದಂತಾಗಿದೆ.

ಇನ್ನೂ ವಯಸ್ಸಾದವರು ಆಶಕ್ತರೆಂದು ಕರೆದು ತರುವವರದ್ದು ಇನ್ನೊಂದು ಸಮಸ್ಯೆ. ಕುಟುಂಬದ ಸದಸ್ಯರೊಂದಿಗೆ ಬಂದರೆ ಸಮಸ್ಯೆಯಿಲ್ಲ. ಕೆಲವೊಮ್ಮ ಒಬ್ಬರೆ ಬರುವ ಇಂಥ ಅಶಕ್ತರನ್ನು ಕರೆತಂದು ತಾವೇ ಮತಚಲಾಯಿಸುವವರನ್ನು ಹದ್ದುಗಣ್ಣಿನಿಂದ ಕಾಯಬೇಕಾದ ಅನಿವಾರ್ಯತೆ .ಇಲ್ಲವೆಂದರೆ ಏಜೆಂಟರು ತಕರಾರು ತೆಗೆದು ಸಮಸ್ಯೆ ಸೃಷ್ಠಿಸುತ್ತಾರೆ. ಇನ್ನೂ ಇಂಥವರನ್ನು ಕರೆತರುವವರೆವಿಗೂ ಸ್ಕೂಟರ್, ಆಟೋ ಮುಂತಾಗಿ ಜಾಗ್ರತೆ ವಹಿಸಿ ಕರೆತರುವವರಾದರೂ ಓಟು ಹಾಕಿದ ನಂತರ ‘ಕ್ಯಾರೆ’ ಎನ್ನದೆ ‘ಬಂದ ದಾರಿಗೆ ಸುಂಕವಿಲ’್ಲ ಎನ್ನುತ್ತ ಹೋಗುವವರು ಹಲವರು. 

“ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ” ಎಂಬುದಕ್ಕೆ ಮತದಾನವು ಒಂದು ಸಾಕ್ಷಿಯಾದರೆ ಶೇ. 70ರಷ್ಟು ಸಾಕ್ಷರತೆ ಸಾಧಿಸಿದ್ದೇವೆ ಎಂಬುದನ್ನು ಅಣಕಿಸುವಂತೆ ಮತದಾನದ ರಿಜಿಸ್ಟರ್ “ಸಾಕ್ಷಿ” ಎಂಬಂತೆ ಕಣ್ಣೆದುರಿಗೆ ಸಿಗುತ್ತದೆ. ಪ್ರತಿ ಪುಟದಲ್ಲಿ ಅರ್ಧಕ್ಕಿಂತ ಹೆಚ್ಚು ಬರಿ ಹೆಬ್ಬೆಟ್ಟುಗಳೇ ತುಂಬಿರುತ್ತವೆ.

ಇನ್ನೂ ಮತಯಂತ್ರವನ್ನು ಕಳೆದ ಮೂರ್ನಾಲ್ಕು ಚುನಾವಣೆಗಳಲ್ಲಿ ಬಳಸುತ್ತಾ ಬಂದಿರುವುದರಿಂದ ಕೊಂಚ ಅದರ ತಿಳುವಳಿಕೆ ಮೂಡುತ್ತಿದೆ. ಆದರೂ ಕೆಲವರು ಒಳಗೆ ಹೋಗಿ ಏನೂ ಮಾಡಲು ತೋಚದೆ ನಿಲ್ಲುತ್ತಾರೆ. ಅಂಥವರಿಗೆ ಹೊರಗೆ ಕರೆದು ಕಂಟ್ರೋಲ್ ಯೂನಿಟ್ ಬಳಿ ಇರÀುವ ಅಧಿಕಾರಿಯು ತನ್ನ ಬಳಿ ಬರುವ ಮಾದರಿ ಮತಯಂತ್ರದ ಚಿತ್ರ ತೋರಿಸಿ ‘ನೋಡಿ, ಈ ರೀತಿ ಚಿಹ್ನೆಗಳು ಇದ್ದು, ನಿಮಗೆ ಬೇಕಾದ ಚಿಹ್ನೆಯ ಮುಂದಿರುವ ಬಟನ್ ಒತ್ತಿ’ ಎಂದು ಹೇಳಿಕಳಿಸಿದ್ದರೂ ಹಾಗೆಯೇ ನಿಲ್ಲುತ್ತಿದ್ದರು. ಅದನ್ನು ಕಂಡ ನಾನು ‘ಚಿಹ್ನೆಯ ಮುಂದಿರುವ ಗುಂಡಿಯನ್ನು ಒತ್ತಿ’ ಎನ್ನಲು ಅವರು ಅದನ್ನು ಒತ್ತಿ ಅದರ ಸದ್ದು ಬರುತ್ತಿತ್ತು. ಇದು ಹೇಗೆ ? ಎಂದು ಪ್ರಶ್ನಾರ್ಥಕವಾಗಿ ಆ ಅಧಿಕಾರಿ ನನ್ನೆಡೆ ನೋಡಲು “ನೋಡಿ ನೀಲಿ ಗುಂಡಿಯ ಬಟನ್ ಕೊಂಚ ಆಳದಲ್ಲಿರುವುದರಿಂದ ‘ಗುಂಡಿ’ ಎಂದೊಡನೆ ಗುಂಡಿಗಳು ನೆನಪಾಗಿ ಸುಲಭವಾಗಿ ಓಟು ಮಾಡುತ್ತಿದ್ದಾರೆ” ಎಂದೆ ನಾನು.

ಹಿಂದೆ ಬೆಳಿಗ್ಗೆ ಐದಕ್ಕೆ ಎದ್ದು ಕತ್ತಲಲ್ಲಿ ಬ್ಯಾಟರಿ ಹಿಡಿದು ಕೆರೆಗೆ ಹೋಗಿ ಗುಂಡಿ – ಗೊಟರು ಇಳಿದು ತಳ ಹಿಡಿದಿದ್ದ ನೀರಿನಲ್ಲಿ ಶೌಚಾದಿಗಳನ್ನು ಮುಗಿಸಬೇಕಾದ ಅನಿವಾರ್ಯತೆ ಈಗಿಲ್ಲ. ಸರ್ವ ಶಿಕ್ಷಣ ಅಭಿಯಾನದಿಂದಾಗಿ ಎಲ್ಲೆಡೆ ಶೌಚಾಲಯಗಳು ಇವೆ. ಊಟ-ತಿಂಡಿಗಳು ನಮ್ಮ ಆ ದಿನದ ಅದೃಷ್ಟಕ್ಕೆ ಅನುಗುಣವಾಗಿ ಕೆಲವೆಡೆ  ಏಜೆಂಟರೆ ಮಾತಾಡಿಕೊಂಡು ಒಬ್ಬೊಬ್ಬರು ಒಂದೊಂದು ಹೊತ್ತು ನೀಡಿದರೆ ಇನ್ನೂ ಕೆಲವೆಡೆ ದುಡ್ಡು ಕೊಟ್ಟು ತಿನ್ನಬೇಕಾದ ಪರಿಸ್ಥಿತಿ. ನಗರ, ತಾಲ್ಲೂಕು, ಹೋಬಳಿ ಕೇಂದ್ರಗಳಿಗೆ  ಬಿದ್ದರಂತೂ ಹೋಟೆಲ್ ಊಟವೇ ಗ್ಯಾರಂಟಿ. ಊಟ ಕೊಟ್ಟವರೂ ಕೆಲವೊಮ್ಮೆ ವಶೀಲಿ ಬಾಜಿಗೆ ಬಾರದಿರುವುದಿಲ್ಲ. ಮತಪತ್ರದ ಚುನಾವಣೆ ಇದ್ದಾಗ ಇಬ್ಬರು ಏಜೆಂಟರು ಬಂದು ‘ಸಾರ್ ಉಳಿದ ವೋಟು ಯಾಕೆ ವಾಪಸ್ ತಗೊಂಡು ಹೋಯ್ತೀರಿ. ನಮಗೆ ಕೊಡಿ ನಾನರ್ಧ, ಅವನರ್ಧ ಕೆಚ್ಚಾಕ್ತೀವಿ’ ಎಂದರು. “ಹಾಗೆ ಕೊಟ್ರೆ ಅಲ್ಲಿ ನಮ್ಮನ್ನು ಕೆಚ್ಚಾಕ್ತಾರೆ. ನಡೀರಿ ಮೊದ್ಲು ಇಲ್ಲಿಂದ” ಎಂದು ಬೈದು ಕಳುಹಿಸಬೇಕಾಯಿತು. 

ಇನ್ನೂ ಚುನಾವಣಾ ಸಾಮಾಗ್ರಿ ಹಿಂತಿರುಗಿ ನೀಡುವ (ಡೀಮಸ್ಟರಿಂಗ್) ಅನುಭವ ಇನ್ನೊಂದು ಬಗೆಯದು. ಇತ್ತೀಚೆಗೆ ಚುನಾವಣೆಗಳಲ್ಲಿ ಮೆ ತಿಂಗಳಲ್ಲಿ ನಡೆಯುವುದರಿಂದ ಸಂಜೆ ಅದೊಡನೆ ಮಳೆ ಹೇಳಿ ಕಳುಹಿಸಿದಂತೆ ಬರುತ್ತದೆ. ಅಲ್ಲಿ ನಾ ಮೊದಲು ತಾ ಮೊದಲು ಎನ್ನುತ್ತಾ ಚುನಾವಣಾ ಸಾಮಾಗ್ರಿಗಳನ್ನು ಮೊದಲು ಸಾಗುಹಾಕಿದರೆ ಸಾಕು ಎಂಬಂತೆ ಅಲ್ಲಿ ನೂಕಾಟ, ಒಮ್ಮೊಮ್ಮೆ ಬೈದಾಟವೂ ಇರುತ್ತದೆ. ಇದರ ನಡುವೆ ‘ಬಸ್ ಬೇಗ ಬಂತು’ ಎಂದು ತರಾತುರಿಯಲ್ಲಿ ಬಂದು ಅಲ್ಲಿ ಸಂಪೂರ್ಣಗೊಳಿಸಲಾಗದ ಇತರೆ ಕೆಲಸಗಳನ್ನು ಮಾಡಿ ಮುಗಿಸಲು ಮೇಣದ ಬತ್ತಿ ಹಚ್ಚಿಕೊಂಡು ಅರಗು ಹಿಡಿದು ಕುಳಿತವರು ಖಂಡಿತ ಕಾಣಸಿಗುತ್ತಾರೆ.

ಕೊನೆಗೂ ಎಲ್ಲಾ ಸಾಮಾಗ್ರಿಗಳನ್ನು ನೀಡಿ ನಿಟ್ಟುಸಿರು ಬಿಟ್ಟು ಅವರವರ ಸಂಭಾವನೆ ಹಂಚಿಕೊಂಡು ಊರ ಕಡೆ ಹೊರಟ ಚುನವಣಾ ಬಸ್ಸು ಹತ್ತಿದರೆ ಎಲ್ಲರೂ ತಮ್ಮ ತಮ್ಮ ಬೂತ್‍ಗಳಲ್ಲಿ ನಡೆದ ಸಾಹಸಗಾಥೆಗಳನ್ನು ವರ್ಣಿಸುತ್ತಿರುತ್ತಾರೆ. ಇನ್ನೂ ಕೆಲವು ಮಹಿಳೆಯರಿಗೆ ಇಷ್ಟೊತ್ತಲ್ಲಿ ಊರು ಸೇರುವ ಪರಿ ಹೇಗೆ ಎಂಬ ಚಿಂತೆ ಮೂಡಿರುತ್ತದೆ.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುವಂತೆ ಪ್ರತಿ ವರ್ಷವೂ ಈ ಚುನಾವಣೆಗಳು ಬರುತ್ತವೆ. ಬೇವು-ಬೆಲ್ಲದ ಸಿಹಿ ಕಹಿಯನ್ನು ನೀಡುತ್ತಲೆ ಇರುತ್ತವೆ. 

‍ಲೇಖಕರು avadhi

7 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading