ಚುನಾವಣೆಗೆ ಮುನ್ನ ದೇವನೂರು ಮಾತನಾಡಿದ್ದು..

 

 

 

ಡಿ.ಎಸ್. ನಾಗಭೂಷಣ

ಕೃಪೆ: ಹೊಸ ಮನುಷ್ಯ

 

 

1. ಪಕ್ಷದ ಕೆಲಸ ಹೇಗೆ ನಡೆದಿದೆ?

ಸ್ಲೋ ಅಂಡ್ ಸ್ಟಡಿ ವಿನ್ಸ್ ದಿ ರೇಸ್ ಎಂಬಂತೆ ನಡೆದಿದೆ. ಕವಯಿತ್ರಿ ಸವಿತಾ ನಾಗಭೂಷಣ್ ಅವರು ಸ್ವರಾಜ್ ಇಂಡಿಯಾ ಪಕ್ಷಕ್ಕೆ ಸೇರಿದಾಗಲೇ ಸೂಕ್ಷ್ಮಮತಿಗಳಾದ ನಿಮಗೆ ಇದು ಅರ್ಥವಾಗಬೇಕಾಗಿತ್ತು!

2. ಇನ್ನೈದು ತಿಂಗಳುಗಳಲ್ಲಿ ಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಗಂಭೀರ ಸ್ಪರ್ಧೆ ಒಡ್ಡುವ ಇರಾದೆ ನಿಮಗಿದೆಯೇ? ಅಥವಾ ಇನ್ನೂ ದೂರದ ಗುರಿ ಇಟ್ಟುಕೊಂಡಿದ್ದೀರೋ?

ತಾತ್ಕಾಲಿಕವಾಗಿ ಸ್ವರಾಜ್ ಇಂಡಿಯಾ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವುದು ಹಾಗೂ ಚುನಾವಣಾ ಸಂದರ್ಭವನ್ನು ಬಳಸಿಕೊಂಡು ಪಕ್ಷವನ್ನು ಪ್ರಚಾರಕ್ಕೆ ತರುವುದು ಮತ್ತು ಮುಂದಿನ ಚುನಾವಣೆಗಳಲ್ಲಿ ವ್ಯಾಪಕತೆಯನ್ನು ಪಡೆಯುವತ್ತ ಆಲೋಚಿಸಲಾಗುತ್ತಿದೆ.

3. ಮೇಲಿನ ಪ್ರಶ್ನೆಯನ್ನು ಏಕೆ ಕೇಳುತ್ತಿರುವೆನೆಂದರೆ, ಇಂದಿನ ರಾಜಕೀಯ ಚರ್ಚೆಗಳ ಮಧ್ಯೆ ‘ಸ್ವರಾಜ್ ಇಂಡಿಯಾ’ ಎಂಬ ಪಕ್ಷದ ಪ್ರಸ್ತಾಪವೇ ಇಲ್ಲವಾಗಿದೆ!

ಈಗ ನೀವು ಪ್ರಸ್ತಾಪ ಮಾಡುತ್ತಿದ್ದೀರಲ್ಲ? ನನ್ನಂತಹ ನಿಮ್ಮಂತಹ ಸಣ್ಣ ಸಣ್ಣವರೇ ಸೇರಿಕೊಂಡು ದೊಡ್ಡದಾಗುವ ಪ್ರಯತ್ನ ಇದಾಗಿರುವುದರಿಂದ ಈ ರೀತಿ ನಿಮಗೆ ಅನ್ನಿಸುತ್ತಿರಬಹುದು.

4. ನೀವು ;ಸರ್ವೋದಯ ಕರ್ನಾಟಕವನ್ನು ‘ಸ್ವರಾಜ್ ಇಂಡಿಯಾದಲ್ಲಿ ವಿಲೀನಗೊಳಿಸಲು ಇದ್ದ ಕಾರಣಗಳಾದರೂ ಏನು?

ನಾವು ಹೇಳುತ್ತಿದ್ದುದನ್ನೇ ಸ್ವರಾಜ್ ಇಂಡಿಯಾವು ಕೂಡ ಸಮರ್ಥವಾಗಿ ಹೇಳತೊಡಗಿದಾಗ ; ಜತೆಗೆ ಸರ್ವೋದಯ ಕರ್ನಾಟಕವು ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿಯ ವ್ಯಾಪ್ತಿಯನ್ನು ಮೀರಬೇಕಾದ ಅಗತ್ಯ ಕಂಡದ್ದರಿಂದ ಮತ್ತು ಸ್ವಾಯತ್ತತೆ, ಭಾಗವಹಿಸುವಿಕೆ ಪ್ರಜಾಪ್ರಭುತ್ವ (ಪಾರ್ಟಿಸಿಪೇಟರಿ ಡೆಮಾಕ್ರೆಸಿ) ಸ್ವರಾಜ್ ಇಂಡಿಯಾದ ತಳಪಾಯವಾದ್ದರಿಂದ ವಿಲೀನಗೊಳಿಸಲಾಯಿತು. ಹೆಸರನ್ನು ಉಳಿಸಿಕೊಳ್ಳಬೇಕು, ನಾವೇ ಮಾಡಬೇಕು ಎಂಬ ವಾಂಛೆ, ಪ್ರತಿಷ್ಠೆ ಇಲ್ಲದಿರುವುದು ಕೂಡ ವಿಲೀನಗೊಳಿಸುವುದಕ್ಕೆ ಕಾರಣ ಇರಬಹುದು.

5. ‘ಸರ್ವೋದಯ ಕರ್ನಾಟಕ’ ಪಕ್ಷದ ಮೂಲಕ ಮಾಡಲಾಗದಂತಹ ರಾಜಕಾರಣವನ್ನು ‘ಸ್ವರಾಜ್ ಇಂಡಿಯಾ’ ಮೂಲಕ ಮಾಡಬಹುದು ಎಂದು ನಿಮಗನ್ನಿಸಲು ಕಾರಣಗಳೇನು? ರಾಜ್ಯ ರಾಜಕಾರಣ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಜಿಗಿಯುವ ಉದ್ದೇಶವಾದರೂ ಏನು?

ನಿಮ್ಮ ನಾಲ್ಕನೇ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನು ದಯವಿಟ್ಟು ಗಮನಿಸಿ.

6. ‘ಸರ್ವೋದಯ ಕರ್ನಾಟಕ’ದಂತೆಯೇ ನಿಮ್ಮ ಹೊಸ ಪಕ್ಷ ದಲಿತ ಚಳುವಳಿ ಮತ್ತು ರೈತ ಚಳುವಳಿಗಳ ಪಳಯುಳಿಕೆಗಳನ್ನೇ ನಂಬಿ ನಡೆದಂತಿದೆ?

ನಿಮ್ಮ ಮನೆಯಲ್ಲೇ ಸ್ವರಾಜ್ ಇಂಡಿಯಾ ಇರುವಾಗ ನೀವು ಈ ಪ್ರಶ್ನೆಯನ್ನು ಕೇಳಬಾರದಿತ್ತು!

7. ನಿಮ್ಮ ಪಕ್ಷ ಕನಿಷ್ಠ ಕರ್ನಾಟಕದ ರಾಜಕಾರಣದ ಮೇಲೆ ಯಾವಾಗ, ಎಂತಹ ಪರಿಣಾಮ ಬೀರಬಹುದೆಂದು ನೀವು ನಿರೀಕ್ಷಿಸುತ್ತೀರಿ?

ಮುಂದಿನ ಚುನಾವಣೆಗಳು ಮುಗಿದ ಮೇಲೆ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ನಗರ ಸಭೆಗಳ ಸ್ಥಳೀಯ ಚುನಾವಣೆಗಳಲ್ಲಿ ಸ್ವರಾಜ್ ಇಂಡಿಯಾ ಪಕ್ಷವು ಎಷ್ಟು ವ್ಯಾಪಕವಾಗಿ ಸ್ಪರ್ಧಿಸುತ್ತದೆ ಹಾಗೂ ಎಷ್ಟು ರಚನಾತ್ಮಕವಾಗಿರುತ್ತದೆ ಎಂಬುದರ ಮೇಲೆ ಪರಿಣಾಮ ಬೀರುವುದು ನಿರ್ಧರಿತವಾಗುತ್ತದೆ. ನಮ್ಮ ಕಣ್ಣು ಸ್ಥಳೀಯ ಸಂಸ್ಥೆಯ ಚುನಾವಣೆಗಳ ಮೇಲಿದೆ.

8. ನೀವು ನಿಮ್ಮ ಹೊಸ ಪಕ್ಷಕ್ಕಾಗಿ ಮಂಡಿಸುತ್ತಿರುವ ಭವಿಷ್ಯದ ನಕ್ಷೆ ನೋಡಿ ಈ ಪ್ರಶ್ನೆಯನ್ನು ಕೇಳಬೇಕೆನಿಸಿದೆ. ನಿಮಗೆ ಇನ್ನೂ ಎಷ್ಟು ವರ್ಷ ಕೈ ಕಾಲು-ಬುದ್ಧಿ ಮನಸ್ಸುಗಳು ಗಟ್ಟಿ ಅಥವಾ ಸಮವಿರುತ್ತದೆಂದು ನೀವು ಭಾವಿಸಿದ್ದೀರಿ? ನಿಮ್ಮ ಆಯಸ್ಸು ಎಷ್ಟಿರಬಹುದೆಂದು ಅಂದಾಜು ಮಾಡಿದ್ದೀರಿ?[ಈಗಿನ ನಿಮ್ಮ ಆರೋಗ್ಯದ ಸ್ಥಿತಿಯ ಆಧಾರದ ಮೇಲೆ]

ನಿಮ್ಮ ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಮೇಲೂ ‘ಏನ ಮಾಡಿದರೇನು ಭವ ಹಿಂಗದೂ!’ ಎಂಬಂತೆ ಮತ್ತೆ ಪ್ರಶ್ನೆ ಕೇಳಿದ್ದೀರಿ. ಇರಲಿ, ಪ್ರಿಯ ನಾಗಭೂಷಣ್ ನಾನು ಈ ಗಳಿಗೆಯಲ್ಲಿ ಉಸಿರಾಡುತ್ತಿರುವೆ. ಮುಂದಿನ ಘಳಿಗೆ ಹೋಗೋ ಗೊತ್ತಿಲ್ಲ. ಒಂದು ನೆನಪಿರಲಿ, ನಾಗಭೂಷಣ್, ನಾವು ನೆಡುವ ಬೀಜದ ಸಸಿಯ ಫಲ ನಾವೇ ತಿನ್ನಬೇಕೆಂದು ನೆಟ್ಟಿರುವುದಿಲ್ಲ. ಬಹುಶಃ ನೀವೂ ಕೂಡ.

9. ‘ಸ್ವರಾಜ್ ಇಂಡಿಯಾ’ ಸ್ಥಾಪನೆಯಾಗುತ್ತಿದ್ದಂತೆಯೇ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಮ್ಮ ಶಾಸಕ ಪುಟ್ಟಣ್ಣಯ್ಯನವರನ್ನು ಉದ್ದೇಶಿಸಿ ‘ನೀವು ಎಂದಿದ್ದರೂ ನಮ್ಮ ಕಡೆಯೇ ಬರಲಿದ್ದೀರಿ!’ ಎಂದು ಆಡಿದ ಮಾತನ್ನು ನೀವು ಹೇಗೆ ಅರ್ಥೈಸುತ್ತೀರಿ?

ಮುಖ್ಯಮಂತ್ರಿಗಳ ಮಾತಿಗೆ ಪುಟ್ಟಣ್ಣಯ್ಯನವರು ಕೊಟ್ಟ ಉತ್ತರವನ್ನು ಯಾಕೆ ನಿಮ್ಮ ಹೊಟ್ಟೆಯೊಳಗೆ ಇಟ್ಟುಕೊಂಡಿದ್ದೀರಿ? ಪುಟ್ಟಣ್ಣಯ್ಯನವರು ಮುಖ್ಯಮಂತ್ರಿಗಳಿಗೆ ಕೊಟ್ಟ ಉತ್ತರದಲ್ಲೇ ನಿಮ್ಮ ಪ್ರಶ್ನೆಗೂ ಅದರೊಳಗೇ ಉತ್ತರ ಇಲ್ಲವೇ?

10. ಮುಖ್ಯಮಂತ್ರಿಗಳಿಗೆ ಪುಟ್ಟಣ್ಣಯ್ಯ ಏನು ಉತ್ತರಿಸಿದರೋ ನೆನಪಿಲ್ಲ. ನೆನಪಿಲ್ಲ ಅಂದರೆ ನೆನಪಿಟ್ಟುಕೊಳ್ಳುವಂತಹ ಮಾತನ್ನೇನೂ ಬಹುಶಃ ಅವರು ಆಡಿರಲಾರರು. ಆದರೆ ನಿಮಗೆ ನೆನಪಿರುವುದರಿಂದ ದಯವಿಟ್ಟು ಅದೇನೆಂದು ತಿಳಿಸಿ.

ನಿಮಗೆ ನೆನಪಿಲ್ಲದ್ದನ್ನು ಗೊತ್ತುಗುರಿಯಿಲ್ಲದೇ ಕಲ್ಲೆಸೆಯುವಂತೆ ಕೇಳಿದ್ದೀರಲ್ಲ ನಾಗಭೂಷಣ್! ಇದು ನಿಮಗೆ ಭೂಷಣವೇ?

11. ನಿಮ್ಮದು ರಾಜಕಾರಣ ಮಾಡುವಂತಹ ವ್ಯಕ್ತಿತ್ವವಲ್ಲ ಎಂದು ಬಹಳ ಜನ ಅಭಿಪ್ರಾಯಪಡುತ್ತಾರೆ. ನಿಮ್ಮ ಪ್ರತಿಕ್ರಿಯೆ ಏನು?

ನನ್ನದೂ ಅದೇ ಅಭಿಪ್ರಾಯ. ಆದರೆ ನನ್ನ ಎದುರಿಗಿರುವ ವಾಸ್ತವಗಳು ಕಷ್ಟಪಟ್ಟಾದರೂ ನಾನು ರಾಜಕಾರಣವನ್ನು ಮಾಡುವಂತೆ ಮಾಡುತ್ತಿವೆ. ನಿಮ್ಮನ್ನು ನೀವು ಸಂಯಮಿಸಿಕೊಂಡು ನೀವೂ ರಾಜಕಾರಣಕ್ಕೆ ಬರುವಂತಾಗಲಿ ಎಂದು ಪ್ರಾರ್ಥಿಸುವೆ.

12. ಈಗ ವಿವಾದಾತ್ಮಕ ಎನಿಸಿರುವ ಭೀಮಾ-ಕೋರೆಗಾಂವ್ ಪ್ರಕರಣವನ್ನು ನಾವು ಹೇಗೆ ನೋಡಬೇಕೆಂದು ನಿಮಗನ್ನಿಸುತ್ತದೆ?

ಸಂಕೀರ್ಣ ಇದೆ. ಈಗಷ್ಟೇ ತಿಳಿದುಕೊಳ್ಳುತ್ತಿರುವೆ. ಇದರ ನಾಡಿ ಹಿಡಿಯಬೇಕಾಗಿದೆ.

[ಸವಿತಾ ನಾಗಭೂಷಣ ಅವರು ತಾವು ಯಾವುದೇ ಪಕ್ಷದ ಸದಸ್ಯತ್ವವನ್ನೂ ಇದುವರೆಗೆ ಪಡೆದಿಲ್ಲವೆಂದೂ, ಕೆಲವು ಗೆಳೆಯರ ಕೋರಿಕೆಯ ಮೇರೆಗೆ ಸ್ವರಾಜ್ ಇಂಡಿಯಾ ಪಕ್ಷದ ಶಿವಮೊಗ್ಗ ಜಿಲ್ಲ ಸಲಹಾ ಸಮಿತಿಯ ಸದಸ್ಯರಾಗಿದ್ದು, ಮುಂದಿ ದಿನಗಳಲ್ಲಿ ಆ ಪಕ್ಷದ ನಡಾವಳಿಯನ್ನು ಗಮನಿಸಿ ಅದರ ಸದಸ್ಯತ್ವವನ್ನು ಪಡೆಯುವ ಬಗ್ಗೆ ಯೋಚಿಸಲಾಗುವುದೆಂದು ತಿಳಿಸಿದ್ದಾರೆ-ಸಂ]

‍ಲೇಖಕರು avadhi

February 9, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Lalitha siddabasavayya

    ಇದು ಇಬ್ಬರು ಬುದ್ಧಿವಂತ/ಹೃದಯವಂತ ರ ನಡುವಿನ ಮಾತುಗಳ ಮಸೆತ . ಪತ್ರಕರ್ತ ಮತ್ತು ರಾಜಕಾರಣಿಯ ನಡುವಿನ ಪ್ರಶ್ನೋತ್ತರ ಯಾ ಸಂದರ್ಶನದ ಚಹರೆ ಇದಕ್ಕಿಲ್ಲ.

    ರಾಜ ಮತ್ತು ರಾಜಸತ್ತೆಗಳ ಉತ್ಪನ್ನ ಪದವಾದ ರಾಜಕೀಯದ ಮೊದಲ ಮತ್ತು ಕೊನೆಯ ಲಕ್ಷಣ ಕುಯುಕ್ತಿ. ವ್ಯಕ್ತಿತ್ವಗಳನ್ನು ಕೊಂದು ಬದುಕುವುದೇ ಅದರ ಸಾಧನೆ. ಪುರಾತನದ್ದೂ ಅಷ್ಟೇ, ನವನವೀನ ರಾಜಕಾರಣದ್ದೂ ಅಷ್ಟೇ. ಈ ಲಕ್ಷಣಗಳಿಗೆ ತುಸವೂ ಹೊಂದದ ಮಾದೇವಣ್ಣ ಅಸಲಿಗೆ ರಾಜಕಾರಣಿಯೆ ಅಲ್ಲ. ಅವರು ಎಂದೂ ಸಂಭವಿಸಲಾರದ ಒಳ್ಳೆಯ ರಾಜಕಾರಣದ ಕನಸು ಕಾಣುವವರು. ಅವರ ಪ್ರತಿ ಮಾತನ್ನೂ ಮೆಚ್ಚಿ ಆರಾಧಿಸುವ ನನ್ನಂಥ ಲೆಕ್ಕವಿರದಷ್ಟು ಕನ್ನಡಿಗರೂ ಹಾಗೆಯೇ. ಬಂದಾವೆ ಆ ದಿನಗಳೆಂದು ಅವರೊಂದಿಗೆ ಮುಗಿಲು ನೋಡುವವರು. ಈ ಕುರಿತೆ ಒಂದೂ ಪ್ರಶ್ನೆಯೂ ಇದೆ ಮೇಲಿನ ಮಾತ್ಮಸೆತದಲ್ಲಿ.

    ಪತ್ರಕರ್ತನ “ಸಲ್ಲಕ್ಷಣ” ಚಾಣಾಕ್ಷತೆ. ಬಣವೆಯಲ್ಲಿ ಇಲ್ಲದ ಸೂಜಿ ಹುಡುಕಿ ತೆಗೆಯುವ ನಾಜೂಕುತನ ಅವರದು. ಅಲ್ಲಿ ಸೂಜಿ ಇಲ್ಲದಿದ್ದರೆ ಅವರೆ ಒಂದನ್ನು ಹೊಂಚಿ ಅಲ್ಲಿ ಮಡಗಿ ಆಮೇಲೆ ಹುಡುಕಿ ತೋರಿಸುವ ಕೈ ಚಳಕದ ತಜ್ಞರವರು. ಈ “ಸಲ್ಲಕ್ಷಣ” ಬೂಚಣ್ಣನಿಗಿಲ್ಲ. ಅವರದೇನಿದ್ದರೂ ಇದ್ದುದನ್ನು ಇದ್ದ ಹಾಗೆ ಬಾಯಲ್ಲಾಡಿಯೇ ತೋರಿಸುವ ನೇರವಂತಿಕೆ. ನೇರವಂತಿಕೆಯ ತಂಗಿಯೆ ಜಗಳಗಂಟಮ್ಮ. ಪತ್ರಕರ್ತರು, “ಯಶಸ್ವಿ ಪತ್ರಕರ್ತರು” ಎಂದಾದರು ಜಗಳಕ್ಕಿಳಿದದ್ದು ಕಂಡಿದ್ದೀರಾ ? ಸೋ ಬೂಚಣ್ಣನೂ ಅಷ್ಟೇ , ಎಂದೂ ಧರೆಗಿಳಿಯದ ಸತ್ಯವಂತ ಸಮಾಜದ ಕನಸು ಕಾಣುವವರು. ಅವರ ನೇರವಂತಿಕೆಯನ್ನು ಆರಾಧಿಸುವ ನಾವೂ ಅಷ್ಟೇ, ಸಹ ಕನಸುಗಾರರು.

    ಈ ಇಬ್ಬರು ಬುದ್ಧಿವಂತ/ಹೃದಯವಂತ ಕನಸುಗಾರರನ್ನು ಅವರ ಹಿಂಬಾಲಕರನ್ನು ನಂಬಿ ಕನ್ನಡಾಂಬೆ ಬಹುಶಃ ಸಂನ್ಯಾಸ ತೆಗೆದುಕೊಳ್ಳಬೇಕಾಗುತ್ತದೆ. ಆದುದರಿಂದ ಅವರಿಬ್ಬರೂ “ಯಶಸ್ವಿ” ಗಳಾಗಲು ಬದಲಾಗಲೆ ಬೇಕು. ಆದರೆ ಗ್ರಹಚಾರವಶಾತ್ ಇತಿಹಾಸದಲ್ಲೆಲ್ಲೂ ಇಂತಹ ವ್ಯಕ್ತಿತ್ವಗಳು ಬದಲಾದ ಪೂರ್ವ ದೃಷ್ಟಾಂತ ಇಲ್ಲ.

    ನಮ್ಮ ” ಜನದ” ಮನೆಗಳಲ್ಲಿ ಮಹಾದೇವ ಮತ್ತು ನಾಗಭೂಷಣ ಎನ್ನುವ ಹೆಸರುಗಳು ಬಹಳ. ಒಂದೇ ಮನೆಯಲ್ಲಿ ಇಬ್ಬಿಬ್ಬರು ಅದನ್ನೆ ಇಟ್ಟುಕೊಂಡಿರುತ್ತಾರೆ. ಮತ್ತು ಅವೆಲ್ಲವೂ ಪರ್ಯಾಯ ನಾಮಾಂತರ ಹೊಂದಿ ಮಾದೇವಣ್ಣ , ಬೂಚಣ್ಣ ಆಗುತ್ತವೆ. ಹಾಗೆಯೆ ಇಲ್ಲಿ ನಾನು ಒಂದು ಸಲುಗೆ ತೆಗೆದುಕೊಂಡು ಕರೆದಿದ್ದೇನೆ. ಅವರು ಅನ್ಯಥಾ ಭಾವಿಸಲಾರರೆಂದು ನಂಬಿದ್ದೇನೆ.

    ಪ್ರತಿಕ್ರಿಯೆ
  2. Nagraj Harapanahalli

    ಡಿ.ಎಸ್.ನಾಗಭೂಷಣ ಅವರ ಪ್ರಶ್ನೆಗಳಲ್ಲೇ‌ ಒಂಥರಾ ಅಸಹನೆ,ತಿವಿತ, ನಿರಾಶವಾದ ಇದೆ. ಈಚೆಗೆ ಅವರು ಯಾಕೆ ಹೀಗಾದರೂ, ಸನಾತನರೇ ಬಲ್ಲರು. ದೇವನೂರು ಬಿತ್ತಿದ ಬೀಜ ಎಂದೂ ವಿಫಲವಾಗದು. ರಾಜಕಾರಣದ ವ್ಯಾಕರಣ, ಸೋಶಿಯಲ್ ಎಂಜಿನಿಯರಿಂಗ್ ನಾಗಭೂಷಣ ಅವರಿಗಿಂತ ದೇವನೂರು ಅವರಿಗೆ ಚೆನ್ನಾಗಿ ಗೊತ್ತಿದೆ. ಕೋಮುವಾದದ ವಿಷದ ಬಗ್ಗೆ ಒಂದೇ ಒಂದು ಪ್ರಶ್ನೆ ಎತ್ತಿಲ್ಲ ನಾಗಭೂಷಣ ಅವರು. ಎಂಥ ವಿಪರ್ಯಾಸ ????

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: