
ಎಲ್ಲರಿಗೂ ಆಶ್ಚರ್ಯವೆಂದರೆ ‘ನುಡಿಸಿರಿ’ ಹುಟ್ಟಿಕೊಂಡದ್ದು ಹೇಗೆ ಎನ್ನುವ ಬಗ್ಗೆ. ಬಹುತೇಕ ಜನ ಇದು ಆಳ್ವರು ಹುಟ್ಟುಹಾಕಿದ್ದು ಎನ್ನುವುದು ಗೊತ್ತು ಆದರೆ ಅದರ ಹಿಂದೆ ಕೂಡಾ ಒಂದು ಕತೆಯಿದೆ ಎನ್ನುವುದು ಗೊತ್ತಿಲ್ಲ. ಈ ಕಾರಣಕ್ಕೆ ಹೇಳುತ್ತೇನೆ.

2004 ಅಖಿಲ ಭಾರತ 71 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೂಡಬಿದ್ರೆಯಲ್ಲಿ. ಆಗ ಕಮಲ ಹಂಪನಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. 66 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳೂರಲ್ಲಿ ನಡೆದಿತ್ತು. ಅದಕ್ಕೆ ಸಮಾರೋಪ ಭಾಷಣ ಮಾಡಬೇಕಿದ್ದ ಡಾ.ಶಿವರಾಮ ಕಾರಂತು ವಿಧಿವಶರಾಗಿದ್ದರು. ಬಲುಬೇಗ ದಕ್ಷಿಣ ಕನ್ನಡ ಜಿಲ್ಲೆಗೆ ಎರಡನೇ ಸಾಹಿತ್ಯ ಸಮ್ಮೇಳನ ಬಂದ ಬಗ್ಗೆ ಕುತೂಹಲವಿತ್ತು ಕೂಡಾ. ಆದರೂ ಸಾಹಿತ್ಯ ವಲಯದಲ್ಲಿ ಏನೂ ಬೇಸರವಿಲ್ಲದೆ ಈ ಸಾಹಿತ್ಯ ಸಮ್ಮೇಳನ ನಡೆಸಿಕೊಟ್ಟರು.
ಆಗ ಮೂಡಬಿದ್ರೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ ಇದರ ಉಸ್ತುವಾರಿ ವಹಿಸಿಕೊಳ್ಳುವವರು ಡಾ.ಮೋಹನ್ ಆಳ್ವರನ್ನು ಬಿಟ್ಟರೆ ಅಂಥ ಸಾಹಿತ್ಯ ಸಮ್ಮೇಳನಕ್ಕೆ ತಲೆಕೊಡಲು ಬೇರೆಯವರು ಇರಲಿಲ್ಲವೆನ್ನಲೇಬೇಕು. ಇದಕ್ಕೆ ಕಾರಣವೂ ಇದೆ. ಸಹಜವಾಗಿ ಡಾ.ಮೋಹನ್ ಆಳ್ವರ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದರು. ಅವರಲ್ಲಿದ್ದಷ್ಟು ಮೂಲಭೂತ ಸೌಕರ್ಯ ಇತರರಲ್ಲಿ ಇರಲಿಲ್ಲ ಕೂಡಾ. ಡಾ.ಮೋಹನ್ ಆಳ್ವರು ಕಲೆ, ಸಂಸ್ಕೃತಿಗಳ ಬಗ್ಗೆ ಆಸಕ್ತಿಹೊಂದಿದವರು. ಸಾಹುತ್ಯದ ಬಗ್ಗೆಯೂ ಆಸಕ್ತಿ ಇತ್ತು. ಅವರಿಗೂ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮೂಡಬಿದ್ರೆಯಲ್ಲಿ ಆಗಬೇಕು ಎನ್ನುವ ಅಭಿಲಾಷೆ ಕೂಡಾ ಇತ್ತು.
ಅಂತು ಸಾಹಿತ್ಯ ಸಮ್ಮೇಳದ ದಿನ ಬಂದೇಬಿಟ್ಟಿತು. ಎಲ್ಲವೂ ಅಂದುಕೊಂಡಂತೆಯೆ ಆಯಿತು. ಮಾಧ್ಯಮಗಳು ಕೂಡಾ ಅದ್ದೂರಿ ಪ್ರಚಾರ ಕೊಟ್ಟವು. ಜೈನಕಾಶಿ ಮೂಡಬಿದ್ರೆಯಲ್ಲಿ ಸಾಹಿತ್ಯ ಸಮ್ಮೇಳನ ಯಶಸ್ವಿ. ಆದರೆ ಡಾ.ಮೋಹನ್ ಆಳ್ವರು ಗಮನ ಸೆಳೆದದ್ದೂ ಸಮಯ ಪಾಲನೆಗೆ. ಸಮಯ ಮೀರಿದರೆ ಅವರು ಸಹಿಸುತ್ತಿರಲಿಲ್ಲ. ಈ ಕಾರಣಕ್ಕೆ ಅವರು ಕೆಲವರ ಬಳಿ ಜಗಳ ಕೂಡಾಮಾಡಿದ್ದರು, ಬೇಡದ ಮನುಷ್ಯ ಎನಿಸಿಕೊಂಡರು. ಆದರೂ ಸಮಯ ಪಾಲನೆಯನ್ನು ಮಾತ್ರ ಬಿಟ್ಟುಕೊಡಲಿಲ್ಲ. ಇಡೀ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಎಲ್ಲವೂ ಸಮಯಕ್ಕೆ ಸರಿಯಾಗಿ ನಡೆದದ್ದೂ ಮೂಡಬಿದ್ರೆಯಲ್ಲಿ ಎನ್ನುವಂತಾಯಿತು.
ಡಾ.ಮೋಹನ್ ಆಳ್ವರ ಮೊಂಡುತನ ಎಷ್ಟೆಂದರೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೇ ಧ್ವಜರೋಹಣ ಮಾಡಬೇಕಿತ್ತು. ಆಗ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಹರಿಕೃಷ್ಣ ಪುನರೂರು ಬರುವುದು ಐದು ನಿಮಿಷ ತಡವಾಗಿತ್ತು. ಆ ಕೆಲಸವನ್ನು ಜಿಲ್ಲ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಮಾಡಿಮುಗಿಸಲು ಡಾ.ಮೋಹನ್ ಆಳ್ವರು ಕಾರಣರಾಗಿದ್ದರು. ಇದು ಬಾರೀ ಪ್ರಮಾಣವಾದರೂ ಹರಿಕೃಷ್ಣ ಪುನರೂರು ಅಷ್ಟೇನೂ ತಗಾದೆ ತೆಗೆಯಲಿಲ್ಲ. ಆದರೂ ಡಾ.ಆಳ್ವರಿಗೂ ಸಂಘಟಕರಿಗೂ ಒಂದು ರೀತಿಯ ಮುನಿಸು ಇತ್ತೆನ್ನಬಹುದು.
ಸರ್ಕಾರದಿಂದ ಬರಬೇಕಾದ ಅನುದಾನ, ಸ್ಥಳೀಯರಿಂದ ಕೂಡಬೇಕಾದ ಸಹಾಯ ಇತ್ಯಾದಿ ..ಇತ್ಯಾದಿಗಳು ಬರುವುದು ವಿಳಂಭವಾಯಿತು. ಆದರೂ ಸಾಹಿತ್ಯ ಸಮ್ಮೇಳನ ಮುಗಿದಿತ್ತು, ಇದಕ್ಕೆ ಡಾ. ಮೋಹನ್ ಆಳ್ವರ ಮುಸ್ಸದ್ದಿತನವೇ ಕಾರಣವೆನ್ನುವುದು ಮಾತ್ರ ಸುಳ್ಳಲ್ಲ.
ಈ ವಿಚಾರದಲ್ಲಿ ಡಾ.ಮೋಹನ್ ಆಳ್ವರಿಗೆ ಅಸಮಾಧಾನವಿತ್ತು. ಬಹಿರಂಗವಾಗಿ ಹೇಳುವ ಸ್ಥಿತಿಯಿರಲಿಲ್ಲ. ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿರುವುದಕ್ಕೇ ಮಾಧ್ಯಮಗಳ ಜನರಿಗೆ ವಂದಿಸಲು ಡಾ.ಮೋಹನ್ ಆಳ್ವರ ಮುಂದಾದರು. ಎಲ್ಲಾ ಪತ್ರಿಕೆಗಳ ಮಂದಿಗೆ ವಿಶೇಷವಾಗಿ ಅಭಿನಂಧಿಸಿದ್ದರು. ಆದರೂ ಅವರಿಗೆ ಏನನ್ನಿಸಿತೋ ಒಂದು ಔತಣ ಕೂಟವನ್ನು ಮಾಧ್ಯಮದವರಿಗೆಂದೇ ಮಂಗಳೂರಲ್ಲಿ ಆಯೋಜಿಸಿದರು.
ಆಗ ನಾನು ‘ಕನ್ನಡಪ್ರಭ’ ಪತ್ರಿಕೆಯ ಪ್ರಧಾನ ವರದಿಗಾರನಾಗಿದ್ದೆ. ಈ ಔತಣ ಕೂಟಕ್ಕೆ ಬರಬೇಕೆಂದು ವೈಯಕ್ತಿಕವಾಗಿ ಡಾ.ಮೋಹನ್ ಆಳ್ವರು ವಿನಂತಿಸಿದ್ದರು. ನಾನು ಆ ಔತಣ ಕೂಟಕ್ಕೆ ಹೋಗಿದ್ದೆ. ಮೊದಲು ಮಾಧ್ಯಮದವರಿಗೆ ತಮ್ಮ ಅಭಿನಂದನೆ ಹೇಳಿದರು. ತಮ್ಮ ನೋವನ್ನು ಹೇಳಿಕೊಂಡರು. ಮೂಲಭೂತ ಸೌಕರ್ಯಕ್ಕೆ ಒಂದು ರೂಪಾಯಿಯನ್ನು ಪಡೆದಿರದ ಡಾ.ಮೋಹನ್ ಆಳ್ವರಿಗೆ ತಾವು ಇಷ್ಟು ವೆಚ್ಚಮಾಡಿದರೂ ಕೊಂಕು ಮಾತುಗಳನ್ನು ಕೇಳಬೇಕಾಯಿತಲ್ಲವೆಂದು ಅಲವತ್ತು ಕೊಂಡರು. ಆದರೆ ಯಾರನ್ನೂ ದ್ವೇಷಿಸಲು ಇಷ್ಟಪಡಲಿಲ್ಲ. ಇನ್ನು ಮುಂದೆ ಸಾಹಿತ್ಯ ಸಮ್ಮೇಳನದ ಉಸಾಬರಿಯೇ ಬೇಡ ಎನ್ನುವಷ್ಟರ ಮಟ್ಟಿಗೆ ಬಂದಿದ್ದರು.
ಆಗ ನಾನು ಹೇಳಿದೆ ‘ ನೀವು ಮೂಲಭೂತ ಸೌಕರ್ಯ, ವಿದ್ಯಾರ್ಥಿಗಳು, ಶಿಕ್ಷಕರು, ವಸತಿಗಳೆಲ್ಲವನ್ನೂ ನೀಡಿದ್ದೀರಿ. ಸಹಜವಾಗಿಯೇ ಇವುಗಳ ಲೆಕ್ಕ ಹಾಕಿದರೆ ಅದೇನೂ ಸಣ್ಣಮೊತ್ತವಲ್ಲ. ನಿಮಗೆ ಅನುಭವ ಸಿಕ್ಕಿದೆ, ನಿಮಗೆ ಉತ್ಸಾಹವೂ ಇದೆ. ಹೀಗಿರುವಾಗ ನೀವೇಕೆ ಸಾಹಿತ್ಯ ಸಮ್ಮೇಳನಕ್ಕೇ ಪರ್ಯಾಯವಾಗಿ ನೀವೇ ಪ್ರತೀ ವರ್ಷ ಸಮ್ಮೇಳನ ಮಾಡಬಾರದು ’ ಎಂದಿದ್ದೆ.
ಹೌದು ಮಾಡಬಹುದು ಎಂದು ಡಾ.ಮೋಹನ್ ಆಳ್ವ ಹೇಳಿದರು. ಅದನ್ನು ನಮ್ಮ ಸಂಸ್ಥೆಯಿಂದಲೇ ಮಾಡಬಹುದು. ಯಾರೊಬ್ಬರಿಂದಲೂ ಹಣಕ್ಕೆ ಹೋಗಬಾರದು. ಎಷ್ಟೇ ಕಷ್ಟವಾದರೂ ಸರಿ ನೋಡೋಣ ಎಂದಿದ್ದರು.
ಮುಂದೆ ಅದರ ಬಗ್ಗೆ ಚರ್ಚಿಸಿದ್ದರು. ಅದಕ್ಕೇ ವಿದ್ವಾಂಸರ ಬಳಗವನ್ನೇ ಕಟ್ಟಿದರು. ಕನಸು ಕಟ್ಟುವ, ವಿಚಾರ ಮಂಡಿಸುವ, ಅವಲೋಕಿಸುವ ಯೋಜನೆ ರೂಪುಗೊಂಡಿತು.
ಇದರ ಪರಿಣಾಮವೇ ಮೊದಲು ಆಳ್ವಾಸ್ ನುಡಿಸಿರಿ, ನಂತರ ನುಡಿಸಿರಿ. ಹೀಗೆ ಬಂತು ನುಡಿಸಿರಿಯ ಕತೆ. ಯಾರಿಗೆ ಗೊತ್ತುಂಟೊ ಇಲ್ಲವೋ, ಆದರೆ ಅಂದು ಔತಣ ಕೂಟದಲ್ಲಿ ಈ ನುಡಿಸಿರಿ ಹುಟ್ಟಿಕೊಂಡಿತು ಎನ್ನುವುದಂತೂ ದಿಟ !.
ಇದಕ್ಕೆ ಪೂರಕವಾಗಿ ನುಡಿಸಿರಿಯ ಕುರಿತು ಮೊದಲ ಸಲ ನನ್ನಿಂದಲೇ ನುಡಿಸಿರಿ ಹಾಡು ಬರೆಸಿದರು. ಆ ಹಾಡು ಪ್ರತೀ ವರ್ಷವೂ ಬದಲಾಗುತ್ತಿತ್ತು. 9 ನೇ ವರ್ಷದಲ್ಲಿ ಆ ಹಾಡು ಬದಲಾವಣೆಗೊಂಡಿತು.
ಮೂಡಬಿದ್ರೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವೊಂದು ನಡೆದಿದ್ದಾಗ 1986-87 ರಲ್ಲಿ ನಾನು ಮತ್ತು ಮನೋಹರ ಪ್ರಸಾದ್ ಮೂಡಬಿದ್ರೆ ಅತಿಥಿಗೃಹದಲ್ಲಿ ತಂಗಿದ್ದೆವು. ಆಗ ರಾತ್ರಿ ತಿಂಗಳ ಬೆಳಕಲ್ಲಿ ಕುಳಿತು ಮಾತನಾಡಲು ಡಾ.ಮೋಹನ್ ಆಳ್ವರು ಬಂದಿದ್ದರು. ಆ ದಿನಗಳು ಡಾ.ಆಳ್ವರ ಮಟ್ಟಿಗೆ ಲೋಕಾಭಿರಾಮವಾಗಿದ್ದವು. ಈಗ ಅವರೇ ಪ್ರತೀ ವರ್ಷವೂ ಸಮ್ಮೇಳನ ನಡೆಸುತ್ತಿದ್ದಾರೆ. ಈಗ ಬಿಜಿ ಬಿಜಿ. ಹೌದು ಆ ದಿನಗಳು ಕಳೆದು ಹೋಗಿವೆ. ಮೂಡಬಿದ್ರಿಯೂ ಬೆಳೆದಿದೆ, ಸಾಹಿತ್ಯವೂ ಬೆಳೆದಿದೆ. ನಮಗೂ ವಯಸ್ಸಾಗಿದೆ, ನೆನಪು ಮಾತ್ರ ಉಳಿದುಕೊಂಡಿದೆ.







0 Comments