ಚಿದಂಬರ ಬೈಕಂಪಾಡಿ ನೆನಪಿಸಿಕೊಂಡಂತೆ ವಡ್ಡರ್ಸೆ ಮತ್ತು ರಾಮಕೃಷ್ಣ ಹೆಗಡೆ

– ಚಿದಂಬರ ಬೈಕಂಪಾಡಿ

ಪತ್ರಕರ್ತರಾದವರಿಗೆ ಅದರಲ್ಲೂ ವರದಿಗಾರರಾಗಿದ್ದರೆ ವೃತ್ತಿಯಲ್ಲಿ ಗುರುತಿಸಿಕೊಳ್ಳಲು ಅವಕಾಶಗಳು ಅನೇಕ ಇರುತ್ತವೆ. ಆದರೆ ಅಂಥ ಅವಕಾಶಗಳನ್ನು ಮಾಡಿಕೊಡುವಂಥ ಸಾಧ್ಯತೆಗಳು ತೀರಾ ಕಡಿಮೆಯೇ. ಯಾಕೆಂದರೆ ಒಂಥರಾ ಅಳುಕು ತಮ್ಮ ಸಹೋದ್ಯೋಗಿಗಳ ಬಗ್ಗೆ ಇದ್ದೇ ಇರುತ್ತದೆ. ಹೆಚ್ಚೆಚ್ಚು ಅವಕಾಶ ಪಡೆದು ಪ್ರಚಾರಕ್ಕೆ ಬಂದು ಬಿಟ್ಟರೆ ತನ್ನ ಸ್ಥಾನಕ್ಕೆ ಕುತ್ತು ಬರುವುದೇನೂ ಎನ್ನುವಂಥ ಭಯ ಕಾಡುತ್ತಿರುತ್ತದೆ. ಅಂಥವರು ಆಯಕಟ್ಟಿನ ಸ್ಥಳಗಳಿಗೆ, ಪ್ರತಿಷ್ಠಿತರ ಸಂದರ್ಶನಕ್ಕೆ ಒಬ್ಬರನ್ನೇ ಕಳುಹಿಸುವುದಿಲ್ಲ, ತಾವೂ ಬರುತ್ತಾರೆ.
ಇದು ಪತ್ರಿಕೋದ್ಯಮದಲ್ಲಿ ಒಂದು ವರ್ಗದವರ ವರಸೆಯಾದರೆ ಮತ್ತೆ ಕೆಲವರು ಹೊರಗೆ ಸುತ್ತಾಡುವ ಅಂದರೆ ದೇಶದ ಒಳಗೆ ವಿಮಾನದಲ್ಲಿ, ದೇಶದ ಹೊರಗೆ ಪ್ರಧಾನಿ, ರಾಷ್ಟ್ರಪತಿಗಳ ಜೊತೆ, ವಿದೇಶಾಂಗ ವ್ಯವಹಾರ ಮಂತ್ರಿಗಳ ಜೊತೆ ಪ್ರವಾಸಕ್ಕೆ ಹೋಗುವ ಅವಕಾಶವಿದ್ದರೆ ತಾವೇ ಬಾಚಿಕೊಂಡುಬಿಡುತ್ತಾರೆ. ಇದು ಇನ್ನೊಂದು ವರ್ಗ.
ಮತೊಂದು ವರ್ಗ ಕಿರಿಯರನ್ನು ದುಡಿಸುತ್ತಾರೆ…ಸಾಕು ಬೇಕೆನ್ನುವಷ್ಟು ದುಡಿಸುತ್ತಾರೆ. ಆದರೆ ಈ ದುಡಿಮೆಯಲ್ಲಿ ಕಿರಿಯರಿಗೆ ಅಪಾರ ಲಾಭವಾಗುತ್ತದೆ. ಅಂಥ ಲಾಭವನ್ನು ಪಡೆದ ಪತ್ರಕರ್ತ ನಾನು ಎನ್ನುವುದನ್ನು ಮನಪೂರ್ವಕವಾಗಿ ದಾಖಲಿಸುತ್ತೇನೆ.

ವಡ್ಡರ್ಸೆ ರಘು ರಾಮ ಶೆಟ್ಟಿಯವರು ರಾತ್ರಿ 9 ಗಂಟೆಗೆ ಮನೆಗೆ ಹೊರಡುತ್ತೇನೆ ಎಂದಾಗಲೂ ಇಷ್ಟು ಬೇಗ ಮನೆಗೆ ಹೋಗಿ ಏನು ಮಾಡ್ತೀಯೋ ಇರೋ ಎನ್ನುತ್ತಿದ್ದರು. ಲೈಬ್ರರಿಯಲ್ಲಿ ಏನಾದರೂ ಓದಿ ಕಾಲ ಕಳೆದರೂ ಅವರಿಗೆ ಖುಷಿ, ಆದರೆ ಮನೆ ಹೊರಡುತ್ತೇನೆ ಎಂದರೆ ಮಾತ್ರ ಸಿಡುಕು. ಮುಂಗಾರು ಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿದ್ದ ಆತ್ರಾಡಿ ಸಂತೋಷ್ ಹೆಗ್ಡೆ ಅವರಿಗೆ ಸಂದರ್ಶನ ಲೇಖನ ಮಾಡಿಸುವುದೆಂದರೆ ಅಪಾರ ಆಸಕ್ತಿ, ಆದ ಕಾರಣವೇ ಚಿದು ಅವನನು ಮಾತನಾಡಿಸು, ಇವನ ಬಗ್ಗೆ ಲೇಖನ ಮಾಡು ಎಂದೆಲ್ಲ ಪ್ರೀತಿಯಿಂದ ತಲೆ ತಿನ್ನುತ್ತಿದ್ದರು. ಆಗ ಯಾಕಾದರೂ ಇವರು ಕಿರಿಕ್ ಮಾಡ್ತಾರೆ, ಎಷ್ಟು ದುಡಿದರೂ ಇವರಿಗೆ ತೃಪ್ತಿ ಎನ್ನುವುದೇ ಇಲ್ಲವಲ್ಲ ಎನ್ನುವ ಸಿಟ್ಟು ಬರುತ್ತಿತ್ತು. ಅದಕ್ಕೆ ನನ್ನ ತಿಳುವಳಿಕೆಯ ಕೊರತೆ ಹೊರತು ಅವರ ತಪ್ಪಲ್ಲ. ಮುಂದೆ ಇಂಥ ಅವಕಾಶಗಳು ಬೇಕು ಎಂದರೂ ಸಿಗಲಾರವು ಎನ್ನುವ ಅರಿವಿನಕೊರತೆಯಿಂದ ಸಿಟ್ಟು ಮಾಡಿಕೊಳ್ಳುತ್ತಿದ್ದೆ. ಅಂಥ ಸಿಟ್ಟು ಮಾಡಿಕೊಂಡ ಘಟನೆಯಲ್ಲಿ ಇದೂ ಒಂದು.
ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರನ್ನು ಕಂಡರೆ ವಡ್ಡರ್ಸೆ ರಘುರಾಮ ಶೆಟ್ಟರಿಗೆ ಅಷ್ಟಕ್ಕಷ್ಟೇ, ಆದರೂ ಮುಖ್ಯಮಂತ್ರಿ ಎನ್ನುವ ಕಾರಣಕ್ಕೆ ಅವರಿಗೆ ಕೊಡಬೇಕಾದ ಮಹತ್ವವನ್ನು ಸುದ್ದಿಯಲ್ಲಿ ಕೊಡುವುದಕ್ಕೆ ಅವರಿಂದ ಆಕ್ಷೇಪ ಇರಲಿಲ್ಲ.
ರಾಮಕೃಷ್ಣ ಹೆಗಡೆ ಅವರು 1985ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಸ ಬಂದಿದ್ದರು. ಕಾಂಗ್ರೆಸ್ ನವರಿಗೆ ಅಧಿಕಾರ ಕಳೆದುಕೊಂಡ ಸಂಕಟ. ಜನತಾಪಕ್ಷದವರಿಗೆ ಅಧಿಕಾರ ದಕ್ಕಿಸಿಕೊಂಡ ಹಮ್ಮು ಎನ್ನುವುದಕ್ಕಿಂತಲೂ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಹುದ್ದೆಯನ್ನು ಹೈಜಾಕ್ ಮಾಡಿಕೊಂಡ ಹೆಮ್ಮೆ.
ವಡ್ಡರ್ಸೆಯವರು ನನ್ನನ್ನು ಕರೆದು ತಮ್ಮಾ ಹೆಗಡೆ ಬರ್ತಾ ಇರೋ ವಿಷ್ಯ ಗೊತ್ತಾ ಎಂದರು. ಹೌದು ಎಂದೆ. ಹಾಗಾದರೆ ಎಲ್ಲಾದರೂ ಸರಿ ಅವರನ್ನು ಭೇಟಿ ಮಾಡಿ ಸಂದರ್ಶನ ಮಾಡಿಕೊಂಡು ಬಾ ಎಂದರು. ಅವರ ಪ್ರವಾಸ ಕಾರ್ಯಕ್ರಮದ ಪಟ್ಟಿಯಲ್ಲಿ ಕೊಲ್ಲೂರಿನಲ್ಲಿ ವಾಸ್ತವ್ಯ ಮಾಡಿ ಮರುದಿನ ಉತ್ತರ ಕರ್ನಾಟಕಕ್ಕೆ ತೆರಳುವರು ಎಂದಿತ್ತು. ಉಳಿದಂತೆ ಎಲ್ಲೂ ಅವರನ್ನು ಭೇಟಿ ಮಾಡುವುದು ಸಾಧ್ಯವೇ ಇರಲಿಲ್ಲ.
ಆಗ ಅಮರನಾಥ ಶೆಟ್ಟಿ ಅವರು ಮೀನುಗಾರಿಕೆ, ಧಾರ್ಮಿಕ ದತ್ತಿ ಮಂತ್ರಿಯಾಗಿದ್ದರು. ಅವರಿಗೆ ಫೋನ್ ಮಾಡಿದೆ ರಾಮಕೃಷ್ಣ ಹೆಗಡೆಯವರ ಸಂದರ್ಶನ ಬೇಕಾಗಿತ್ತು ಎಲ್ಲಿ ಭೇಟಿ ಮಾಡಬಹುದೆಂದು ಕೇಳಿದೆ. ಅವರೂ ಖಚಿತವಾಗಿ ಹೇಳುವ ಸ್ಥಿತಿಯಲ್ಲಿರಲಿಲ್ಲ. ಬಿ.ಅಪ್ಪಣ್ಣ ಹೆಗ್ಡೆ ಅವರನ್ನು ಸಂಪರ್ಕಿಸಿ ಕೇಳಿಕೊಂಡೆ. ಕೊಲ್ಲೂರಿಗೆ ರಾತ್ರಿ ತಡವಾಗಿ ಬರುತ್ತಾರೆ, ಆದರೆ ತಡರಾತ್ರಿ ಭೇಟಿಗೆ ಅವಕಾಶ ಕೊಡುವ ಬಗ್ಗೆ ಭರವಸೆ ಕೊಡಲಾರೆ ಎಂದರು.
ವಡ್ಡರ್ಸೆಯವರಿಗೆ ಸಂದರ್ಶನಕ್ಕೆ ಅವಕಾಶ ಮಾಡಿಸಿಕೊಡಬಹುದು, ಆದರೆ ಅವರು ಯಾರಿಗೇ ಫೋನ್ ಮಾಡಿ ಹೆಗಡೆ ಅವರನ್ನು ಭೇಟಿ ಮಾಡಿಸಲು ಕೇಳುವುದಿಲ್ಲ. ಕೊನೆಗೆ ಮತ್ತೊಮ್ಮೆ ಅಪ್ಪಣ್ಣ ಹೆಗ್ಡೆ ಅವರಿಗೆ ಹೇಗಾದರೂ ಸರಿ ಅವಕಾಶ ಮಾಡಿಸಿಕೊಡಲೇಬೇಕೆಂದು ಪಟ್ಟು ಹಿಡಿದೆ. ತುಂಬಾ ಆತ್ಮೀಯವಾಗಿದ್ದ ಕಾರಣ ಮುಂಚಿತವಾಗಿ ಉಡುಪಿಗೆ ಬನ್ನಿ ಅಲ್ಲಿ ಮಾತನಾಡಿಸಿ ಹೇಳುತ್ತೇನೆ ಎಂದರು.
ಅವರು ಹೇಳಿದಂತೆ ಮಣಿಪಾಲ ವ್ಯಾಲಿವ್ಯೂವ್ ನಲ್ಲಿ ಕಾದುಕುಳಿತೆ. ಮುಸ್ಸಂಜೆ ಹೊತ್ತಿಗೆ ಮುಖ್ಯಮಂತ್ರಿ ಬಂದರು, ನೂರಾರು ಕಾರುಗಳು, ಸೂಟು, ಬೂಟು ಧಾರಿಗಳು ನೂಕು ನುಗ್ಗಲು, ಇವರೊಂದಿಗೆ ರಾಜಕಾರಣಿಗಳ ದಂಡು. ಆ ಪರಿಯ ನೂಕಾಟ ತಳ್ಳಾಟದಲ್ಲಿ ರಾಮಕೃಷ್ಣ ಹೆಗಡೆಯವರೊಂದಿಗೆ ಮಾತನಾಡುವುದು ಬಿಡಿ ಹತ್ತಿರಕ್ಕೂ ಸುಳಿಯಲಾಗುತ್ತಿರಲಿಲ್ಲ. ಅಮರನಾಥ ಶೆಟ್ಟಿ, ಅಪ್ಪಣ್ಣ ಹೆಗ್ಡೆ, ಎಚ್.ರಾಮಯ್ಯ ನಾಯ್ಕ ಅವರ ಜೊತೆಯಲ್ಲಿದ್ದರು. ಅಲ್ಲೊಂದು ಸೆಮಿನಾರ್ ಉದ್ಘಾಟನೆ, ನಂತರ ಕ್ಯಾಂಪಸ್ ವೀಕ್ಷಣೆ ಇತ್ಯಾದಿ.. ಇತ್ಯಾದಿ.(ವ್ಯಾಲಿವ್ಯೂವ್ ಹೆಗಡೆ ಅವರಿಗೆ ತುಂಬಾ ಲಕ್ಕಿ. ಚುನಾವಣೆ ಫಲಿತಾಂಶ ಬಂದಾಗ ಇದೇ ವ್ಯಾಲಿವ್ಯೂವ್ ನಲ್ಲಿದ್ದವರು, ಮುಖ್ಯಮಂತ್ರಿ ಆಯ್ಕೆ ಮಾಡಲು ವಿಮಾನ ಹತ್ತಿ ಬೆಂಗಳೂರಿಗೆ ಹೋದವರು ಮರು ದಿನ ಅವರೇ ಮುಖ್ಯಮಂತ್ರಿಯಾಗಿದ್ದರು).

ಇವರು ಎಲ್ಲಿ ಬೇಕಾದರೂ ಸುತ್ತಾಡಲಿ ನನಗೆ ಅವರ ಸಂದರ್ಶನ ಮಾತ್ರ ಬೇಕಿತ್ತು. ಇನ್ನು ಇಲ್ಲೇ ಕಾಲ ಕಳೆದರೆ ಕೊಲ್ಲೂರಿಗೆ ತಲಪುವುದು ಕಷ್ಟವಾದೀತು ಅಂದು ಕೊಂಡು ನೇರವಾಗಿ ಕೊಲ್ಲೂರಿಗೆ ಹೋದೆ. ಮೊದಲೇ ಅಪ್ಪಣ್ಣ ಹೆಗ್ಡೆ ಅವರಿಗೆ ಹೇಳಿ ರೂಮು ಮಾಡಿಸಿಕೊಂಡಿದ್ದ ಕಾರಣ ಬಚಾವ್, ಇಲ್ಲದಿದ್ದರೆ ನನಗೆ ದೇವಸ್ಥಾನದ ಜಗಲಿಯೇ ಗತಿಯಾಗುತ್ತಿತ್ತು ಆ ರಾತ್ರಿ.
ಕಾದೇ ಕಾದೇ ರಾತ್ರಿ ಹತ್ತು ಗಂಟೆ ಹೊತ್ತಿಗೆ ಸಾಲುಗಟ್ಟಿ ಕಾರುಗಳು ಬಂದವು ಅದರಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರೂ ಇದ್ದರು. ಮೊದಲೇ ಜಾಗ ಹಿಡಿದು ಅವರು ವಾಸ್ತವ್ಯ ಮಾಡಲಿದ್ದ ಗೆಸ್ಟ್ ಹೌಸ್ ತಲುಪಿದ್ದ ಕಾರಣ ಅನುಕೂಲವಾಯಿತು. ಹೆಗಡೆ ಜೊತೆಗೆ ಸಾಲುಗಟ್ಟಿ ಅವರ ಹಿಂಬಾಲಕರು ಬರುತ್ತಿದ್ದರು. ಹೆಗಡೆಯವರು ವಿಶಾಲವಾದ ಹಾಲ್ ನಲ್ಲಿ ಕುಳಿತರು. ಪಕ್ಕದಲ್ಲಿ ಅಮರನಾಥ ಶೆಟ್ಟಿ, ಬಿ.ಅಪ್ಪಣ್ಣ ಹೆಗ್ಡೆ, ರಾಮಯ್ಯ ನಾಯ್ಕ್, ಎಂ.ಸಂಜೀವ ಹೀಗೆ ಜನತಾ ನಾಯಕರ ದಂಡು. ಆ ಜನಜಂಗುಳಿಯಲ್ಲೂ ನನ್ನನ್ನು ಗುರುತಿಸಿದ ಅಪ್ಪಣ್ಣ ಹೆಗ್ಡೆ ನನ್ನನ್ನು ಹತ್ತಿರ ಕರೆದು ಹೆಗಡೆಯವರಿಗೆ ಪರಿಚಯ ಮಾಡಿಕೊಟ್ಟು ಇವರಿಗೆ ನಿಮ್ಮ ಸಂದರ್ಶನ ಬೇಕಂತೆ, ಈಗಲೂ ಆದೀತು, ಬೆಳಿಗ್ಗೆಯೂ ಆಗಬಹುದು ಎಂದರು.
ಸಂದರ್ಶನಕ್ಕೆ ಏನಾದರೂ ಸಂದರ್ಭ ಬೇಕಲ್ಲವೇ ? ಎಂದರು ರಾಮಕೃಷ್ಣ ಹೆಗಡೆ. ವಡ್ಡರ್ಸೆ ರಘುರಾಮ ಶೆಟ್ಟ್ರು ನಿಮ್ಮನ್ನು ಮಾತನಾಡಿಸಿ ಬರಬೇಕು ಎಂದಿದ್ದಾರೆ ಒಂದು ಅರ್ಧ ಗಂಟೆಯಾದರೂ ಸಾಕು ಎಂದೆ.
ವಡ್ಡರ್ಸೆ ಹೆಸರು ಕೇಳಿದ ತಕ್ಷಣ ಹೆಗಡೆ ಸೆಟೆದವರಂತಾಗಿ ಓಹೋ ಶೆಟ್ಟ್ರು ಮುಂಗಾರು ಪತ್ರಿಕೆಗೆ, ಹಾಗಾದರೆ ಏನೋ ಇರಬೇಕು ಎಂದರು ನಿಧಾನವಾಗಿ ಗಡ್ಡ ನೇವರಿಸುತ್ತಾ. ಹಾಗೇನೂ ಇಲ್ಲಾ ಸಾರ್ ಹೇಗೂ ಜಿಲ್ಲೆಗೆ ಬಂದಿದ್ದೀರಿ, ಪತ್ರಿಕೆಯೂ ಇಲ್ಲಿಂದಲೇ ಪ್ರಕಟವಾಗುವುದರಿಂದ ಆಸಕ್ತಿ ಎಂದೆ.
ನನ್ನ ಮಾತು ಕೇಳಿಸ್ಕೊಂಡು ನಕ್ಕವರೇ ನೀವು ಬೆಳಿಗ್ಗೆ ಆರು ಗಂಟೆಗೆ ಇಲ್ಲಿಗೆ ಬಂದು ಬಿಡಿ, ಇಲ್ಲಿ ಚಳಿ ಬೇರೆ ಇದೆ ಏಳಬಹುದಲ್ಲ ಬೇಗಾ ಎಂದರು. ಆಯ್ತು ಎಂದೆ. ಅಲ್ಲಿಂದ ರೂಮಿಗೆ ಬಂದು ಮಲಗಿದೆ, ನಿದ್ದೆ ಬರಲೊಲ್ಲದು. ಮುಂಜಾನೆ ಆರುಗಂಟೆಗೆ ಕೊರೆಯುವ ಚಳಿಯಲ್ಲಿ ಈ ರಾಜ್ಯದ ಮುಖ್ಯಮಂತ್ರಿ ಸಂದರ್ಶನ ಮಾಡಬೇಕು. ನಿದ್ದೆ..ಎಚ್ಚರ..ನಿದ್ದೆ ಎಚ್ಚರ ಹೀಗೇ ರಾತ್ರಿ ಕಳೆದು ಮುಂಜಾನೆ ಐದು ಗಂಟೆಯಾಗುತ್ತಿದ್ದಂತೆಯೇ ಸ್ನಾನ ಮಾಡಿ ಸರಿಯಾಗಿ 5.55ಕ್ಕೆ ಅವರ ಗೆಸ್ಟ್ ಹೌಸ್ ತಲುಪಿದೆ. ಗೇಟ್ ನಲ್ಲಿದ್ದ ಕಾವಲುಗಾರನಿಗೆ ವಿಷಯ ತಿಳಿಸಿದೆ. ಅಲ್ಲೇ ನನಗೆ ನಿಲ್ಲಲು ಹೇಳಿ ತಾನೊಬನೇ ಗೆಸ್ಟ್ ಹೌಸ್ ನೊಳಕ್ಕೆ ಹೋಗಿ ವಾಪಸ್ ಬಂದವನೇ ಬನ್ನಿ ಎಂದ.
ನಿನ್ನೆ ರಾತ್ರಿ ಕುಳಿತಿದ್ದ ವಿಶಾಲ ಹಾಲ್ ನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿ ಬರುತ್ತಾರೆ ಕಾಯುತ್ತಿರಿ ಎಂದವನೇ ಗೇಟ್ ನತ್ತ ಹೋದ.
ಐದು ನಿಮಿಷವೂ ಆಗಿರಲಾರದು ಮೈತುಂಬಾ ನಸುಗೆಂಪು ಬಣ್ಣದ ಶಾಲನ್ನು ಹೊದ್ದುಕೊಂಡು ರಾಮಕೃಷ್ಣ ಹೆಗಡೆಯವರು ನನ್ನತ್ತ ಬಂದರು. ನಾನು ಎದ್ದು ನಿಂತು ನಮಸ್ಕರಿಸಿದೆ. ಕುಳಿತುಕೊಳ್ಳೀ..ಕುಳಿತುಕೊಳ್ಳಿ ಎಂದವರೇ ತಾವೂ ಎದುರಿನ ಸೋಫಾದಲ್ಲಿ ಕುಳಿತರು.
ನಿಮ ಊರು ಎಲ್ಲಿ, ಎಷ್ಟು ವರ್ಷದಿಂದ ಪತ್ರಿಕೆಯಲ್ಲಿದ್ದೀರಿ, ಏನು ಓದಿದ್ದೀರಿ ಇತ್ಯಾದಿ..ಇತ್ಯಾದಿ ಪ್ರಶ್ನೆ ಕೇಳಿ ಒಂಥರಾ ನನ್ನ ಸಂದರ್ಶನಮಾಡಿದಂತಾಯಿತು. ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವಷ್ಟರಲ್ಲಿ ಬಿಸಿ ಬಿಸಿ ಕಾಫಿ ಬಂತು ನನಗೆ. ಇಲ್ಲ ನೀವು ಕುಡಿಯಿರಿ ಎಂದವರೆ ಕುಡಿದಾಗಲಿ ಮತ್ತೆ ಮಾತಾಡೋಣವೆಂದರು. ಪರವಾಗಿಲ್ಲ ಸಾರ್ ನಿಮಗೆ ತಡವಾಗಬಹುದು ಎಂದೆ. ಛೇ..ಛೇ ಕಾಫಿ ಕುಡಿಯಿರಿ ಎಂದರು.
ರಾಜ್ಯದ ಮುಖ್ಯಮಂತ್ರಿ ಮಾಮೂಲಿ ಮನುಷ್ಯರಷ್ಟು ಸರಳವಾಗಿ ನನ್ನಂಥವನ ಜೊತೆ ಮಾತನಾಡುತ್ತಿದ್ದಾರಲ್ಲ ಆ ಕ್ಷಣ ಅರ್ಥವಾಗಲಿಲ್ಲ ಅಚ್ಚರಿಯಾಗಿತ್ತು.
ಕಾಫಿ ಕುಡಿದ ನಂತರ ಮಾತಿಗೆ ಶುರು… ನೀವು ಮುಖ್ಯಮಂತ್ರಿಯಾಗಿ ಆಯ್ಕೆಯಾದ ವಿಧಾನದಿಂದ ಹಿಡಿದು ಸಚಿವ ಸಂಪುಟವನ್ನು ನಿಯಂತ್ರಿಸುತ್ತಿರುವ ತನಕವೂ ಹೆಗಡೆಯವರ ಮಾತೇ ಅಂತಿಮ ಎನ್ನುಂಥ ಧೋರಣೆ ಕಾಣುತ್ತಿದೆ ಎನ್ನುವ ಮಾತಿದೆಯಲ್ಲ ಎಂದೆ.
ಆ ಕೊರೆಯುವ ಚಳಿಯಲ್ಲೂ ಹೆಗಡೆಯವರು ಸ್ವಚ್ಛಂದವಾಗಿ ನಕ್ಕರು. ಈ ಮಾತು ಬೇರೆ ಯಾರೂ ಆಡುತ್ತಿಲ್ಲ ಸ್ವತ: ಶೆಟ್ರು ಮತ್ತವರ ಹಾಗೆ ಯೋಚಿಸುವವರು ಹೇಳುವ ಮಾತು ಎಂದರು. ಕ್ಷಮಿಸಿ ಸಾರ್. ಶೆಟ್ಟ್ರು ನನಗೆ ಯಾವ ಪ್ರಶ್ನೆಯನ್ನೂ ಕೇಳಲು ಹೇಳಿಲ್ಲ, ನಾನೇ ನಾನಾಗಿ ಪತ್ರಿಕೆಯಲ್ಲಿ ಬರುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಕೇಳುತ್ತಿದ್ದೇನೆ ಎಂದೆ.
ಹಾಗೇನಿಲ್ಲಾ… ನೀವು ಪ್ರಶ್ನೆ ಕೇಳಿದ್ದಕ್ಕೆ ನನ್ನ ಆಕ್ಷೇಪವಲ್ಲ, ಕಾಂಗ್ರೆಸ್ ಕಲ್ಚರ್ ನ ಯೋಚನೆಗಳ ಬೇರುಗಳ ಗುಣವೇ ಹೀಗೆ. ಸರ್ವಾಧಿಕಾರ, ಏಕಚಕ್ರಾಧಿಪತ್ಯ ನೀವು ಏನೇ ಹೇಳಿ ಅದೆಲ್ಲವೂ ಕಾಂಗ್ರೆಸ್ ಪಳಯುಳಿಕೆ. ಇದು ತೊಲಗಬೇಕು ಮಾತ್ರವಲ್ಲ ಬುಡಸಹಿತ ಕಿತ್ತೆಸೆಯಬೇಕು. ಇದೆಲ್ಲವೂ ದಿನಬೆಳಗಾಗುವಷ್ಟರಲ್ಲಿ ಆಗುವ ಕೆಲಸವಲ್ಲ ಹೀಗೆ ಸುದೀರ್ಘವಾಗಿ ಮಾತನಾಡಿದರು.
ಮಾತಿನಲ್ಲಿ ಆಕ್ರೋಷವಿಲ್ಲದಿದ್ದರೂ ಅವರು ಬಳಸುವ ಪದಗಳಲ್ಲಿ ಮೊನಚಿತ್ತು, ಅತ್ಯಂತ ಸಮತೋಲನವಾಗಿ, ತಾಳ್ಮೆಯಿಂದ ಉತ್ತಾರಿಸುತ್ತಾ ಎಲ್ಲೂ ಬೇಕಾಬಿಟ್ಟಿಯಾಗಿ ಜರೆಯುವಂಥ ಭಾಷೆ ಬಳಸದೆ ಅರ್ಧಗಂಟೆಗೂ ಹೆಚ್ಚು ಕಾಲ ಮನಬಿಚ್ಚಿ ಮಾತನಾಡಿದರು. ಈ ಮಧ್ಯೆ ಅಪ್ಪಣ್ಣ ಹೆಗಡೆ, ಅಮರನಾಥ ಶೆಟ್ಟಿ, ರಾಮಯ್ಯ ನಾಯ್ಕ್ ಕೂಡಾ ಸೇರಿಕೊಂಡರು. ಜನ ಜಂಗುಳಿಯಾಗುತ್ತಿದ್ದಂತೆಯೇ ಮಾತಿಗೆ ವಿರಾಮ ಹಾಕಿದೆ.
ಅಪ್ಪಣ್ಣ ಹೆಗ್ಡೆ, ಅಮರನಾಥ ಶೆಟ್ರು, ರಾಮಯ್ಯ ನಾಯ್ಕ್ ನನ್ನ ಬಗ್ಗೆ ಹೆಗಡೆಯವರಿಗೆ ಒಳ್ಳೆಯ ಮಾತು ಹೇಳಿದರು. ಕೊನೆಯಲ್ಲಿ ಹೆಗಡೆಯವರು ಹೇಳಿದ ಮಾತು ಜರ್ನಲಿಸಂಗೆ ಇಂಥ ಯುವಕರು ಬರಬೇಕು, ಆಗ ಬೆಂಗಳೂರಿನ ಜರ್ನಲಿಸಂನಲ್ಲಿ ಏನಾದರೂ ಒಂದಷ್ಟು ಸುಧಾರಣೆ ನಿರೀಕ್ಷೆ ಮಾಡಬಹುದೇನೋ ಎಂದರು. ಅವರು ಯಾವ ಅರ್ಥದಲ್ಲಿ ಹೇಳಿದರೋ ಗೊತ್ತಿಲ್ಲ ಆದರೆ ನನಗೆ ಈಗಲೂ ಅನ್ನಿಸುವುದು ನಾನು ಬೆಂಗಳೂರಿಗೆ ಹೋಗದೆ ತಪ್ಪು ಮಾಡಿದೆನೇನೋ ಎಂದು.
ಆದರೂ ರಾಮಕೃಷ್ಣ ಹೆಗಡೆಯವರ ಜೊತೆ ಕೊಲ್ಲೂರಿನಲ್ಲಿ ಕಳೆದ ಆ ಮುಂಜಾನೆ ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ಕ್ಷಣ ಅಂದುಕೊಳ್ಳುತ್ತೇನೆ. ಯಾಕೆಂದರೆ ರಾಜಕಾರಣದ ಚಾಣಕ್ಯ ಎಂದೇ ಖ್ಯಾತರಾಗಿದ್ದ ಹೆಗಡೆಯವರು ಕೂಡಾ ರಾಜಕಾರಣದಲ್ಲಿ ಹೇಗೆ ದೂರಸರಿಸಲ್ಪಟ್ಟರು ಎನ್ನುವುದು ಜೀರ್ಣಿಸಿಕೊಳ್ಳಲಾಗದ ಸತ್ಯ. ಹಾಗೆಯೇ ರಾಜಕಾರಣದ ಆಳ-ಒಳಸುಳಿಗಳು ಹೇಗಿರುತ್ತವೆ ಎನ್ನುವುದನ್ನು ಯಾರೂ ಪೂರ್ಣವಾಗಿ ಬಲ್ಲವರಿಲ್ಲ. ಎಲ್ಲ ಕಾಲಕ್ಕೂ ರಾಜಕಾರಣ ಒಂದೇ ಸೂತ್ರ, ಪಟ್ಟುಗಳು ಫಲಕೊಡುವುದಿಲ್ಲ ಎನ್ನುವುದಕ್ಕೆ ರಾಮಕೃಷ್ಣ ಹೆಗಡೆಯವರೇ ಒಳ್ಳೆಯ ಉದಾಹರಣೆ.
 

‍ಲೇಖಕರು G

May 6, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Hanumanth Ananth Patil

    ಚಿದಂಬರ ಬೈಕಂಪಾಡಿಯವರಿಗೆ ವಂದನೆಗಳು
    ವಡ್ಡರ್ಸೆ ರಘುರಾಮ ಶೆಟ್ಟರು ಮತ್ತು ರಾಮಕೃಷ್ಣ ಹೆಗಡೆಯವರ ಕುರಿತ ಬರಹ ಗಮನ ಸೆಳೆಯಿತು ಆಳ ಒಳನೋಟಗಳಿರುವ ಓದುಗನನ್ನು ಚಿಂತನೆಗೆ ಹಚ್ಚುವ ಲೇಖನ. ಇವೆರಡೂ ಕಾಲಗರ್ಭ ಸೇರಿದ ವ್ಯಕ್ತಿ ವ್ಯಕ್ತಿತ್ವಗಳು ಅವನ್ನು ವರ್ತಮಾನಕ್ಕೆ ತಂದು ಮುಖಾ ಮುಖಿಯಾಗಿಸಿದ್ದೀರಿ. ಹೆಗಡೆಯವರು ಒಂದು ಕ್ಲೀಷ್ಟ ಕಾಲಘಟ್ಟದಲ್ಲಿ ಮುಖ್ಮಮಂತ್ತಿ ಯಾಗಬೇಕಾಗಿ ಬಂದುದು ಆ ಸಂದರ್ಭಗಳನ್ನು ಅವರು ಎದುರಿಸಿದ ರೀತಿ ಅವರೊಬ್ಬ ಪಕ್ವ ಧೀಮಂತ ಜೊತೆಗೆ ಹೃದಯವಂತ ಎನ್ನುವುದಕ್ಕೆ ಸಾಕ್ಷಿ. ವೈಚಾರಿಕ ಸಾಮಾಜಿಕ ಮತ್ತು ರಾಜಕೀಯ ಭಿನ್ನತೆಗಳೇನೆ ಇರಲಿ ಅವರೊಬ್ಬ ಸುಸಂಸ್ಕೃತ ರಾಜಕಾರಣಿಯಾಗಿದ್ದರು. ಮುರಾರ್ಜಿ ದೇಸಾಯಿಯವ ನಂತರ ಕೆಂದ್ರದಲ್ಲಿ ಕಾಂಗ್ರಸ್ಸೆತರ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಕೊಡುಗೆ ನಗಣ್ಯವಲ್ಲ, ಆದರೂ ಅವರನ್ನು ಮೂಲಗುಂಪು ಮಾಡುವಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆದ ಫಿತೂರಿಗಳು ನಮ್ಮ ದೇಶ ಸಾಗಿ ಬಂದ ಬಂದ ಮಾರ್ಗದ ದಿಕ್ಸೂಚಿ ಇದು ವಸ್ತುಸ್ತಿತಿ ಹಾಗಂತ ನಾನು ಹೆಗಡೆಯವರ ಬೆಂಬಲಿಗನೋ ಅಭಿಮಾನಿಯೂ ಅಲ್ಲ. ಎಸ್.ಎಂ.ಕೃಷ್ಣ ಮತ್ತು ಜೆ.ಹೆಚ್.ಪಟೇಲರನ್ನು ಹೊರತು ಪಡಿಸಿದಂತೆ ಅವರ ನಂತರದಲ್ಲಿ ಅಗಿ ಹೋದ ರಾಜ್ಯದ ಮುಖ್ಯ ಮಂತ್ರಿಗಳ ಕಾರ್ಯವೈಖರಿಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಅದೇ ರೀತಿ ವಡ್ಡರ್ಸೆಯವರು ನಂಬಿದ ಮೌಲ್ಯಗಳು ರಾಜಿಯಾಗದ ಮನಸ್ತಿತಿಗಳು ಪತ್ರಿಕೋದ್ಯಮ ಹೇಗೆ ಇರಬೇಕು ಎಂಬುದಕ್ಕೆ ಉದಾಹರಣೆಯಾಗಿದ್ದರು. ನಿಮ್ಮ ಲೇಖನ ಯೋಚಿಸುವಂತೆ ಮಾಡಿತು ಉತ್ತಮ ಬರಹ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: