ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿತ್ರಕಲಾ ಪರಿಷತ್‌ನಲ್ಲಿ ಏಕವ್ಯಕ್ತಿ ಕಲಾಪ್ರದರ್ಶನ…

ಗಣಪತಿ ಅಗ್ನಿಹೋತ್ರಿ

‘ಹುಡುಕಾಟ’

ಈ ಪದವೇ ಹೇಳುವಂತೆ ಇಡೀ ಪ್ರಕ್ರಿಯೆಯೇ ಅನಂತ. ಅಂತ್ಯವಿರಲು ಸಾಧ್ಯವಿಲ್ಲ. ಕಲಾವಿದೆ/ಕಲಾವಿದನಾದವನು ಎಂದೆಂದೂ ಹರಿಯುವ ನೀರಾಗಿರುತ್ತಾನೆ. ಹರಿಯುವ ನೀರಾಗಿರದೆ, ನಿಂತಲ್ಲೇ ನಿಂತಿರುತ್ತಾನೆ ಎಂದಾದರೆ ಕಲಾವಿದೆ/ಕಲಾವಿದ ಅನಿಸಿಕೊಳ್ಳಲು ಸಾಧ್ಯವೇ? ಖಡಾಖಂಡಿತವಾಗಿ ಕಲಾವಿದೆ/ಕಲಾವಿದ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕಲೆಯನ್ನು ಸೃಷ್ಠಿಸುವವ, ಕಲೆಯ ಅಭ್ಯಾಸದಲ್ಲಿ ತೊಡಗಿಕೊಂಡಿರುವವ ಅಥವಾ ಕಲಾ ಪ್ರದರ್ಶನದ ಪ್ರಕ್ರಿಯೆಯಲ್ಲಿ ತೊಡಗಿರುವ ವ್ಯಕ್ತಿ ಹರಿಯುವ ನೀರಾಗಿರದೆ, ನಿಂತ ನೀರಾಗಿರಲು ಸಾಧ್ಯವೇ? ಇಲ್ಲ… ಕ್ರಿಯಾಶೀಲ, ಕ್ರಿಯಾತ್ಮಕ ಗುಣವನ್ನೇ ಹೊಂದಿರುತ್ತಾರೆ.

ಬಹುಶಃ ಅನಂತ ಅಥವಾ ಅಂತ್ಯವಿಲ್ಲದ್ದು ಎಂಬ ಮಾತಿಗೆ ಹೆಚ್ಚಿನ ವಿವರಣೆ ಬೇಕಿಲ್ಲ. ಯಾವುದಾದರೂ ಕಲಾವಿದೆ/ಕಲಾವಿದ, ‘ಇಂದಿಗೆ ಹುಡುಕಾಟ ನಿಲ್ಲಿಸಿದೆ’ ಎಂದು ತಾನು ಹೇಳಿಕೊಳ್ಳಬಹುದೇ ಹೊರತು, ನಿಂತಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವೇ?. ಸಾಧ್ಯವಿಲ್ಲ, ಸಾಧ್ಯ ಎಂಬುದನ್ನು ಒಪ್ಪಿಕೊಳ್ಳುವುದೂ ತುಸು ಕಷ್ಟಸಾಧ್ಯ.

“a person who creates art (such as painting, sculpture, installation art, performance art, music, or writing) using conscious skill and creative imagination” ಈ ಸಾಲು ಬಹಳ ಸರಳವಾಗಿ ಕಲಾವಿದ ಪದದ ಅರ್ಥ ಹೇಳುತ್ತಿದೆ. ಆದರೆ ಅಷ್ಟೇ ಆಳವಾದ, ಗಂಭೀರವಾದ ವಿವರಣೆಯನ್ನೂ ಈ ಸಾಲುಗಳ ಮೂಲಕವೇ ನೀಡಲು ಸಾಧ್ಯವಿದೆ. ಅಂತಿಮವಾಗಿ ಕಲೆಗೆ ಸಂಬಂಧಿಸಿದ ಚಟುವಟಿಕೆಯ ಮೂಲಕ ಹುಡುಕಾಟದ ಮನೋಭಾವ ಇರುವ ವ್ಯಕ್ತಿತ್ವದವನೇ ಆಗಿರುತ್ತಾನೆ. ಆ ಗುಣವೇ ಆತನನ್ನು ಕಲಾವಿದನನ್ನಾಗಿ ನಿರೂಪಿಸಿದೆ ಎಂಬುದು ಅಷ್ಟೇ ಸತ್ಯ.

ಯಾಕೆ ಈ ವಿವರಣೆ ಎಂದರೆ, ಕರ್ನಾಟಕ ಚಿತ್ರಕಲಾ ಪರಿಷತ್‌ನ ಗ್ಯಾಲರಿ 1, 2 ಮತ್ತು 3ರಲ್ಲಿ ಮೂವರು ಉದಯೋನ್ಮುಖ ಮತ್ತು ವೃತ್ತಿಪರ ಕಲಾವಿದರ ಏಕವ್ಯಕ್ತಿ ಕಲಾಪ್ರದರ್ಶನಗಳು ನಡೆಯುತ್ತಿವೆ. ಬೆಂಗಳೂರಿನವರಾದ ಹರಿಪ್ರಸಾದ ಬಿ.ಎನ್, ಮಂಗಳೂರಿನವರಾದ ವಿಶ್ವಾಸ್ ಎಂ. ಮತ್ತು ರಾಮಕೃಷ್ಣ ವಿ.ನಾಯಕ ಅವರು ತಮ್ಮ ಇತ್ತೀಚಿನ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಗ್ಯಾಲರಿ 1ರಲ್ಲಿ ರಾಮಕೃಷ್ಣ ನಾಯಕ ಅವರ ಕಲಾಕೃತಿಗಳು, ಗ್ಯಾಲರಿ 2ರಲ್ಲಿ ಹರಿಪ್ರಸಾದ್ ಬಿ.ಎನ್. ಅವರ ಕಲಾಕೃತಿಗಳು ಹಾಗೂ ಗ್ಯಾಲರಿ 3ರಲ್ಲಿ ವಿಶ್ವಾಸ್ ಅವರ ಕಲಾಕೃತಿಗಳು ಅನಾವರಣಗೊಂಡಿವೆ.

‘ರಾಮ’-‘ಕೃಷ್ಣ’ರ ಹುಡುಕಾಟ!

ರಾಮಕೃಷ್ಣ ನಾಯಕ ಅವರ ಕಲಾಕೃತಿಗಳಲ್ಲಿ ಈ ಮೇಲೆ ನಾನು ಪ್ರಸ್ತಾಪಿಸಿದ ಹುಡುಕಾಟದ ತುಡಿತ ಸ್ಪಷ್ಟವಾಗಿ ಗೋಚರಿಸುತ್ತವೆ. ಅಮೂರ್ತ ನೆಲೆಯಲ್ಲಿ ನಿಲ್ಲಬಹುದಾದ ಕಲಾಕೃತಿಗಳನ್ನು ರಾಮಕೃಷ್ಣ ಪ್ರದರ್ಶಿಸಿದ್ದಾರೆ. ಅವರ ಹುಡುಕಾಟ ದಾರಿಯಲ್ಲಿ ಮಾಧ್ಯಮ ಬದಲಾವಣೆ ಗಮನಾರ್ಹ. ಮರದ ಹಲಗೆಯ ಮೇಲ್ಪದರವನ್ನು ತಿಳಿಯಾಗಿ ಸುಟ್ಟಿರುವುದು. ಅದಕ್ಕೆ ತಕ್ಕುದಾದ ಒಂದಿಷ್ಟು ಲೋಹದ ತುಣುಕು, ತಂತಿ, ಮೊಳೆ, ಸ್ಪ್ರಿಂಗ್, ಚಾಣ, ಇತ್ಯಾದಿ ವಸ್ತುಗಳನ್ನು ಬಳಸಿಕೊಂಡು ತಮ್ಮ ಕ್ಯಾನ್ವಾಸ್ ಮೇಲಿನ ಅಮೂರ್ತದ ಮೂರ್ತ ರೂಪದ ಮೂಲ ಇಲ್ಲಿದೆ ಎನ್ನುವಂತೆ ಹೇಳ ಹೊರಟಿರುವುದು ಸ್ಪಷ್ಟ. ಅಲ್ಲದೆ, ಅವರ ಹುಡುಕಾಟ ಮುಂದುವರಿದಿದೆ ಎನ್ನುವುದಕ್ಕೆ ಸಾಕ್ಷಿಯೂ ಹೌದು.

ರಾಮಕೃಷ್ಣ ನಾಯಕ ಅವರ ಕೆಲವು ಕಲಾಕೃತಿಗಳು ಅಸ್ಥಿರ ಭಾವ ಮೂಡಿಸುವ ಬೇರೆಯದೇ ನೆಲೆಯಲ್ಲಿ ನಿಲ್ಲುವಂತವು. ಬಹುಶಃ, ಈ ಕೆಲವು ಕಲಾಕೃತಿಗಳು ಸರಣಿ ಸಂಬಂಧಿತ ಕಲಾಕೃತಿಗಳ ಜೊತೆಗೂಡಿಸದೇ ಇದ್ದಿದ್ದರೆ ಇನ್ನಷ್ಟು ಪರಿಣಾಮಕಾರಿ ಅನಿಸುತ್ತಿದ್ದವು. ಯಶಸ್ಸಿಗಾಗಿ ನಡೆಸಲಾಗುವ ಹುಡುಕಾಟ ‘ರಾಮ’-‘ಕೃಷ್ಣ’ರದ್ದು ಎಂದು ಹೇಳಬಹುದು. ಅಂದರೆ ಯಶಸ್ಸು ತನಗಾಗಿ ಕಾದಿದೆ ಎನ್ನುವುದರ ಮೇಲಿನ ಅವರ ಆತ್ಮವಿಶ್ವಾಸ ಮೆಚ್ಚಿಕೊಳ್ಳುವಂತದ್ದು. “SPACE” prakruthi time and space ಶೀರ್ಷಿಕೆಯೂ ಅವರ ಕಲಾಕೃತಿಗಳಲ್ಲಿ ಹುಡುಕಾಡುವ ಪ್ರಯತ್ನಕ್ಕೆ ನೋಡುಗನನ್ನು ಕರೆದೊಯ್ಯುವಂತಿವೆ.

ಗ್ರಾಮೀಣ ಸೊಗಡು ನಗರ ಬದುಕು!

ಹರಿಪ್ರಸಾದ ಬಿ.ಎನ್. ಅವರ ಕಲಾಕೃತಿಗಳಲ್ಲಿಯೂ ಹುಡುಕಾಟವಿದೆ. ಅದನ್ನು ಅನುಭವದ ಕೊರತೆ ಎಂದು ಭಾವಿಸಿದರೆ ಮೂರ್ಖತನವಾದೀತು. ಹರಿಪ್ರಸಾದ್ ಅವರ ಪ್ರಯೋಗಾತ್ಮಕ ಗುಣವನ್ನು ಅವರ ಕಲಾಕೃತಿಗಳಲ್ಲಿ ನೋಡಬಹುದಾಗಿದೆ. ಕಲಾವಿದೆ/ಕಲಾವಿದ ತನ್ನ ಅನ್ವೇಷಣಾ ಪ್ರವೃತ್ತಿಯ ವೇಗವನ್ನು ಅಥವಾ ಗತಿಯನ್ನು ತೀವ್ರಗೊಳಿಸಿದಾಗ ಸಹಜವಾಗಿ ವಿಕಸನದ ಪಥದಲ್ಲಿ ಸಾಗುತ್ತಾನೆ. ಈ ಪ್ರಕ್ರಿಯೆ ಹರಿಪ್ರಸಾದ ಅವರನ್ನು ಆವರಿಸಿಕೊಂಡಿದೆ. ಇದು ಮೇಲ್ನೋಟಕ್ಕೆ ಕಲಾವಿದ ಇನ್ನಷ್ಟು ಪಳಗಬೇಕು ಎಂಬ ಸಂದೇಶ ನೀಡಬಹುದು. ಆದರೆ, ಅದೇ ನಿರ್ಣಯವಾಗಿಸುವುದು ತಪ್ಪಾಗುತ್ತದೆ. ಹರಿಪ್ರಸಾದ ಅವರ ಕಲಾಕೃತಿಗಳ ರಚನಾ ಕ್ರಮ ಗಮನಿಸಿದಾಗ ನೋಡುಗನ ಮನಸ್ಸಿನಲ್ಲಿ ಮೂಡಬಹುದಾದ ಒಂದು ಪ್ರಶ್ನೆ ಏನೆಂದರೆ, ಹರಿಪ್ರಸಾದ ಅವರು ಅನಗತ್ಯವಾಗಿ ಸ್ಥಿರಶೈಲಿಯಾಗಿಸಿಕೊಳ್ಳುವ ಪ್ರಯತ್ನಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೇನೋ ಅನಿಸಿಬಿಡುತ್ತದೆ. ಇದೊಂದು ಅನಗತ್ಯ ಪ್ರಯತ್ನ. ಅಭ್ಯಾಸ ನಿರಂತರವಾಗಿ ಸಾಗುತ್ತಿರುವ ಸಂದರ್ಭದಲ್ಲಿ ಸ್ಥಿರಶೈಲಿಗಾಗಿ ತಮ್ಮನ್ನೇ ತಾವು ಕಟ್ಟಿಹಾಕಿಕೊಳ್ಳಬೇಕಿಲ್ಲ. ಅಭ್ಯಾಸ ಗಟ್ಟಿಗೊಳಿಸುತ್ತಾ ಹೋದಾಗ ಸ್ವಂತಿಕೆ ಕಲಾಕೃತಿಗಳಲ್ಲಿ ಗೋಚರಿಸುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಹರಿಪ್ರಸಾದ್ ಅವರು ಕ್ರಿಯಾಶೀಲರಾಗಿಯೂ, ಕ್ರಿಯಾತ್ಮಕರಾಗಿಯೂ ಕಾಣಿಸಿಕೊಳ್ಳುತ್ತಾರೆ.

ಹರಿಪ್ರಸಾದ ಅವರ ಉಳಿದೆಲ್ಲಾ ಕಲಾಕೃತಿಗಳ ನಡುವೆ ತಿಳಿಗಂದು ಬಣ್ಣದಿಂದ ರಚಿಸಲ್ಪಟ್ಟ ಅಮೂರ್ತತೆಯ ನಡುವಲ್ಲಿ ಕಾಣಿಸುವ ‘ಹೆಣ್ಣು-ಗಂಡಿನಾಕೃತಿ’ಯ ಕಲಾಕೃತಿ ಮತ್ತು ಎರಡು ‘ಪಕ್ಷಿ’ಗಳ ಕಾದಾಟ, ಅದನ್ನು ವೀಕ್ಷಿಸುತ್ತಿವೆಯೇನೋ ಎಂಬಂತಿರುವ ಇನ್ನಷ್ಟು ಪಕ್ಷಿಗಳನ್ನು ಒಳಗೊಂಡಿರುವ ಕಲಾಕೃತಿ ಗಮನ ಸೆಳೆಯುವಂತಿವೆ. ಅಷ್ಟೇ ಅಲ್ಲ ಅವರ ಪ್ರಬುದ್ಧತೆಯನ್ನು ಈ ಕಲಾಕೃತಿಗಳಲ್ಲಿ ನೋಡಬಹುದಾಗಿದೆ.

ಕಲಾಕೃತಿಗಳಲ್ಲಿ ‘ವಿಶ್ವಾಸ’ ಅಭಿವೃಕ್ತಿ!

ವಿಶ್ವಾಸ್ ಎಂ. ಅವರ ಕಲಾಕೃತಿಗಳಲ್ಲಿ ಪ್ರಮುಖವಾಗಿ ಕಾಣಿಸುವುದು, ಪ್ರಕೃತಿಯನ್ನು ತಾಯಿ ಸಮಾನ ಅಥವಾ ಹೆಣ್ಣು ಎಂಬ ಮನೋಭಾವದಿಂದ ನೋಡಿದ್ದಾರೆ ಎಂಬ ಅಂಶ. ಪಂಚ ಮಹಾಭೂತಗಳ ಅಮೂರ್ತ ಭಾವ ಹೇಳುವ ಅವರ ಪ್ರಯತ್ನದ ಜೊತೆಗೆ ಮನುಷ್ಯ ಪ್ರಕೃತಿಯನ್ನು ಬಳಸಿಕೊಂಡ ಹಾಗೂ ಬಳಸಿಕೊಳ್ಳುತ್ತಿರುವ ವಾಸ್ತವವನ್ನು ಕಲಾಕೃತಿಗಳಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಮನುಷ್ಯೇತರ ಜೀವಿ ಎನಿಸುವ ಮರವೊಂದು ಹೇಗೆ ಮನುಷ್ಯ ಜೀವನದ ಭಾಗವಾಗಿ ಅಸ್ಥಿತ್ವ ಉಳಿಸಿಕೊಳ್ಳುತ್ತದೆ ಎನ್ನುವುದನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ಬಣ್ಣ ಮತ್ತು ಕ್ಯಾನ್ವಾಸ್ ದುಡಿಸಿಕೊಳ್ಳುವಲ್ಲಿ ಇನ್ನಷ್ಟು ಪ್ರಯೋಗಶೀಲರಾಗಿ ನಿರ್ವಹಿಸಬಹುದಿತ್ತೇನೋ ಅನಿಸುತ್ತದೆ.

ನೆರಳು ನೀಡಿ ಮನುಷ್ಯ ಸೇರಿದಂತೆ ಪ್ರಾಣಿ-ಪಕ್ಷಿಗಳಿಗೆ ಆಸರೆಯಾಗುವ ಮರವನ್ನು ಅದರ ಬುಡದಲ್ಲಿ ನಿಂತು ನೋಡಿದಾಗ ಗೋಚರಿಸುವ ವಿಭಿನ್ನ ದೃಷ್ಟಿಕೋನ ಗಮನಾರ್ಹ. ಅಂದಹಾಗೇ ಬಹುತೇಕ ಕಲಾಕೃತಿಗಳಲ್ಲಿ ಒಂದೇ ದೃಷ್ಟಿಕೋನ ಪ್ರತಿಬಿಂಬಿಸಿದಾಗ ಏಕತಾನತೆ ಸಹಜವಾಗಿ ನೋಡುಗನನ್ನು ಕಾಡುವ ಅಪಾಯವಿರುತ್ತದೆ. ಸರಣಿ ಕಲಾಕೃತಿಗಳು ಏಕಕಾಲದಲ್ಲಿ ಪ್ರದರ್ಶನಗೊಂಡಾಗ ಏಕತಾನತೆ ಸಾಮಾನ್ಯ. ಆದರೆ ಈ ಅಭಿಪ್ರಾಯ ಮೂಡದ ರೀತಿಯಲ್ಲಿ ನಿರ್ವಹಿಸುವುದು ಪ್ರಮುಖವೆನಿಸುತ್ತದೆ. ವಿಶ್ವಾಸ್ ಅವರು ಈ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲರು. ಆ ಸಾಮರ್ಥ್ಯವಿದೆ ಎನ್ನುವುದನ್ನೂ ಈ ಪ್ರದರ್ಶನದಲ್ಲಿ ಕಾಣಲು ಸಾಧ್ಯವಿದೆ.

ಈ ಮೂವರು ಕಲಾವಿದ ಮಿತ್ರರಿಗೆ ಶುಭವಾಗಲಿ. ಅವರ ಕಲಾಕೃತಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ವೀಕ್ಷಕರ ಗಮನ ಸೆಳೆಯುವಂತಾಗಲಿ.

ಈ ಮೂವರ ಏಕವ್ಯಕ್ತಿ ಕಲಾಪ್ರದರ್ಶನ ಮೇ 7ರ ತನಕ ಸಾರ್ವಜನಿಕರ ವೀಕ್ಷಣೆಗೆ ಲಭ್ಯ. ಬಿಡುವು ಮಾಡಿಕೊಂಡು ನೋಡಿ ಬನ್ನಿ.

‍ಲೇಖಕರು avadhi

5 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading