ಚಿಕ್ ಚಿಕ್ ಸಂಗತಿ: ಅನ್ ಪಡ್ ಗಧಾ

****
ಜಿ ಎನ್ ಮೋಹನ್

 

ಹಂದಿ..
ನಾಯಿ..
ಕೋತಿ..
ಎಮ್ಮೆ..
ಕೋಣ..
ರಾಕ್ಷಸಿ..
ರಾಕ್ಷಸ..

ನಾನು ಕೇಳುತ್ತಲೇ ಇದ್ದೆ ಒಂದಾದರೊಂದರ ಮೇಲೆ ಬೈಗುಳದ ಬಾಣಗಳು ಆ ಕಡೆಯಿಂದ ಈ ಕಡೆಗೆ, ಈಕಡೆಯಿಂದ ಆ ಕಡೆಗೆ ಚಿಮ್ಮುತ್ತಿದ್ದವು. ಯಾರಿಗೆ ಯಾರೂ ಕಡಿಮೆ ಇಲ್ಲ ಎನ್ನುವಂತೆ ಒಂದು ಅಸ್ತ್ರಕ್ಕೆ ಇನ್ನೊಂದು ಪ್ರತ್ಯಾಸ್ತ್ರ. ನಾನೂ ಕಿವಿಗೊಟ್ಟು ಅವರ ಬೈಗುಳಗಳ ಎರಚಾಟವನ್ನು ಕೇಳುತ್ತಾ ಕುಳಿತಿದ್ದೆ.

ಆಗ ಆತ ‘ನೀನೊಂದು ಕತ್ತೆ’ ಎಂದ . ಅಲ್ಲಿಯವರೆಗೆ ತನ್ನ ಅಣ್ಣನಿಗೆ ಏಟಿಗೆ ಎದುರೇಟು ಕೊಡುತ್ತಿದ್ದ ಆ ತಂಗಿಗೆ ತನ್ನ ಬಳಿ ಇದ್ದ ಅಸ್ತ್ರಗಳೆಲ್ಲಾ ಖಾಲಿಯಾಗಿ ಹೋಯಿತು ಎಂದು ಗೊತ್ತಾಗಿ ಹೋಯಿತು. ಅವಳು ಕಕ್ಕಾಬಿಕ್ಕಿಯಾದಳು. ಅರೆ! ನನ್ನ ಬಳಿ ಬೈಗುಳವೇ ಇಲ್ಲ ಎಂದರೆ ಹೇಗೆ, ತಾನು ಸೋಲೊಪ್ಪಿಕೊಂಡಂತೆ ಎಂದು ಒದ್ದಾಡಿಹೋದಳು. ಸ್ವಲ್ಪ ಹೊತ್ತು ಅಷ್ಟೇ.. ಮರುನಿಮಿಷ ಸಾವರಿಸಿಕೊಂಡವಳೇ-

‘ನೀನೊಂದು ಅನಕ್ಷರಸ್ಥ ಕತ್ತೆ’
ಎಂದು ಬೈದಳು.

ಅಲ್ಲಿಗೆ ನೋಡಿ ಆ ಬೈಗುಳದಾಟ ಮುಗಿದೇ ಹೋಯಿತು. ‘ಅನಕ್ಷರಸ್ಥ ಕತ್ತೆ’ ಎಂದು ಬೈಸಿಕೊಂಡ ಅಣ್ಣ ಸುಮ್ಮನಾಗಿ ಹೋದ. ಮತ್ತೆ ಒಂದು ಬಾಣವನ್ನೂ ಎತ್ತುವ ಸಾಹಸಕ್ಕೆ ಹೋಗಲಿಲ್ಲ. ಆತ ತಬ್ಬಿಬ್ಬಾಗಿ ಕುಳಿತಿದ್ದ. ಅನಕ್ಷರಸ್ಥ ಎನ್ನುವುದು ಕೇವಲ ಬೈಗುಳವಾಗಿರಲಿಲ್ಲ. ಅದು ಬೈಗುಳಗಳ ಬೈಗುಳವಾಗಿತ್ತು.

ಅದು ಆಗಿದ್ದು ಹೀಗೆ., ನಾನು ಆಗತಾನೆ ಈಟಿವಿ ಹೊಕ್ಕಿದ್ದೆ. ರಾಮೋಜಿ ಫಿಲಂ ಸಿಟಿಯಲ್ಲಿ ಎರಡು ತಿಂಗಳು ಇರಬೇಕಾಗಿ ಬಂದಿತ್ತು. ಎದ್ದರೆ ಬಿದ್ದರೆ ಕಣ್ಣೆದುರು ಸಿನೆಮಾ.. ಸಿನೆಮಾ.. ಸಿನೆಮಾ..
ಮಲಗಿದರೆ ಎದ್ದರೆ ತಲೆಯಲ್ಲಿ ರೀಲ್ ಗಳೇ ಓಡುತ್ತಿತ್ತು. ಆಗಲೇ ಗೆಳೆಯ ರಂಗನಾಥ ಮರಕಿಣಿ ‘ಒಂದಷ್ಟು ದಿನ ಬಾ ನನ್ನ ಮನೆಯಲ್ಲಿರು. ಹೈದ್ರಾಬಾದ್ ನಲ್ಲಿ ಚೈನಿ ಮಾಡೋಣ..’ ಎಂದಿದ್ದ. ನಾನು ಅದಕ್ಕೇ ಕಾಯುತ್ತಿದ್ದವಂತೆ ಹಾರಿ ಅವನ ಮನೆ ತಲುಪಿಕೊಂಡಿದ್ದೆ.

ಅವನ ಜೊತೆ ಮಾತನಾಡುತ್ತಾ ಅಡ್ಡಾಗಿದ್ದಾಗಲೇ ನನಗೆ ಅಲ್ಲಿದ್ದ ಗೋಡೆಯಾಚೆಯಿಂದ ಈ ಅಣ್ಣ ತಂಗಿ ಜಗಳ ಕೇಳಿಸಿದ್ದು.
ಆತ ‘ಗಧಾ’ ಎಂದ ಆಕೆ ‘ಅನ್ ಪಡ್ ಗಧಾ’ ಎಂದು ತಿರುಗೇಟು ಕೊಟ್ಟಳು.
ಅಲ್ಲಿಗೆ ಜಗಳ ಉಸಿರಿಲ್ಲದೇ ಹೋಯಿತು

ನಾನೂ ಸಹಾ ಒಂದು ಕ್ಷಣ ಬೆರಗಾಗಿ ಹೋದೆ
ಹೌದಲ್ಲಾ ನನ್ನ ಜೀವನದಲ್ಲೇ ಈ ರೀತಿಯ ಬೈಗುಳ ನನ್ನಕಿವಿಗೆ ಬಿದ್ದಿರಲಿಲ್ಲ.
ಅನಕ್ಷರಸ್ಥ ಎನ್ನುವುದು ಎಷ್ಟು ಕೆಟ್ಟದ್ದು ಅಲ್ಲವಾ..

ನನ್ನ ಮನಸ್ಸು ಆ ಕ್ಷಣ ಅಲ್ಲಿರಲಿಲ್ಲ.. ದೂರದ, ಬಹುದೂರದ ಕ್ಯೂಬಾಗೆ ಹಾರಿ ಹೋಗಿತ್ತು
ಅಲ್ಲಿ ಸಹಾ ಅನ್ ಪಡ್ – ಅನಕ್ಷರಸ್ಥ ಎನ್ನುವುದನ್ನು ದೊಡ್ಡ ಬೈಗುಳ ಎಂದು ಭಾವಿಸಿಕೊಂಡವರು ಇದ್ದರು
ಬರೀ ಒಬ್ಬಿಬ್ಬರಲ್ಲ, ಇಡೀ ದೇಶಕ್ಕೆ ದೇಶವೇ ಹಾಗೆ ಭಾವಿಸಿತ್ತು

ಹಾಗಾಗಿಯೇ ಕ್ರಾಂತಿಯಾದ ತಕ್ಷಣವೇ ಫಿಡೆಲ್ ಕ್ಯಾಸ್ಟ್ರೊ ಸರ್ಕಾರ ಮೊದಲು ಕೈಗೆತ್ತಿಕೊಂಡಿದ್ದು
ಈ ಕಳಂಕ ತೊಳೆಯುವ ಕೆಲಸವನ್ನು
ಅನ್ಅ ಪಡ್ ಎನ್ನುವ ಪದವನ್ನೇ ತಮ್ಮ ದೇಶದ ಕಪ್ಪು ಬೋರ್ಡ್ ನಿಂದ ಅಳಿಸಿಹಾಕಲು ಮುಂದಾಗಿಬಿಟ್ಟರು

‘ನೆಲವನ್ನಲ್ಲ, ಮೊದಲು ನಿಮ್ಮನ್ನು ಉತ್ತುಕೊಳ್ಳಿ’ ಎಂದು ಕ್ಯಾಸ್ಟ್ರೊ ಕರೆ ನೀಡಿದರು.
ಅದುವರೆಗೂ ಕ್ಯೂಬಾ ಎನ್ನುವುದು ಅಂಧಕಾರದ ಲೋಕ. ಬರೀ ಜೀತಗಾರರು. ಇಲ್ಲಾ, ಹಸಿವಿನಿಂದ ನರಳುತ್ತಿರುವವರು.
ಹವಾನಾ ಎನ್ನುವ ರಾಜಧಾನಿ ಅಮೆರಿಕಾದ ಸಕ್ಕರೆ ಹಾಗೂ ಸಿಗಾರ್ ಕಂಪನಿಗಳ ಒಬ್ಬಿಬ್ಬರು ಮಾಲೀಕರ ಕೈನಲ್ಲಿತ್ತು

ಹಾಗಾಗಿಯೇ ಮೊದಲು ನಮ್ಮನ್ನು ಉತ್ತುಕೊಳ್ಳಬೇಕು ಎಂದು ನಿರ್ಧರಿಸಿಬಿಟ್ಟರು.
ಅಕ್ಷರ ಕಲಿಸುವುದು ಹೇಗೆ?. ಆಗಲೇ ಶಾಲೆ ಕಲಿತ ಒಂದಿಷ್ಟು ಮಕ್ಕಳು ತಮ್ಮ ಅಪ್ಪ ಅಮ್ಮನಿಗೆ ‘ಆ ಆ ಈ ಈ’ ಕಲಿಸಲು ಆರಂಭಿಸಿದ್ದು
ಅಪ್ಪ ಅಮ್ಮನೇ ಮಕ್ಕಳಿಗೆ ಶರಣಾಗಿದ್ದರು
ಅಪ್ಪ ಅಮ್ಮ ಇಬ್ಬರೂ ಮಕ್ಕಳಿಗೆ ವಿದ್ಯಾರ್ಥಿಗಳಾಗಿದ್ದರು
ಅಕ್ಷರ ಎನ್ನುವುದು ಮ್ಯಾಜಿಕ್ ಮಾಡಿತ್ತು

ಅಲ್ಲಿಂದ ಶುರುವಾಯಿತು ‘ಒಂದು ದೀಪ, ನೂರು ಪುಸ್ತಕ’ ಯೋಜನೆ
ಒಂದು ಚಿಮಣಿ ದೀಪ ಹಿಡಿದ ಒಬ್ಬ ಶಾಲಾ ವಿದ್ಯಾರ್ಥಿ ಹಳ್ಳಿಗಳತ್ತ ಹೋಗಿ ನೂರಾರು ಜನರಿಗೆ ಅಕ್ಷರ ಕಲಿಸುತ್ತಾ ಹೋದರು

‘ಅಕ್ಷರವೆಂದರೆ ಅಕ್ಷರವಲ್ಲ ಅರಿವಿನ ಗೂಡು
ಚಿಲಿಪಿಲಿ ಎನ್ನುತ್ತಾ ಮೇಲಕ್ಕೆ ಹಾರುವ ಹಕ್ಕಿನ ಹಾಡು ಕೇಳು..’

ನಾನು ದಕ್ಷಿಣ ಕನ್ನಡಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳಿತ್ತು
ದಕ್ಷಿಣ ಕನ್ನಡದ ಮೂಲೆ ಮೂಲೆಗೂ ಸಾಕ್ಷರತಾ ಸೈನಿಕರು ನುಗ್ಗುತ್ತಿದ್ದರು.
ಆಗಲೇ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ನೇರ ೧೦ ನೇ ತರಗತಿ ಪರೀಕ್ಷೆ ಬರೆದು
ಎಲ್ಲರೂ ನೋಡನೋಡುತ್ತಿದ್ದಂತೆಯೇ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದಳು.

ಆಗ ನಾನು ಹೌದಲ್ಲಾ ಅಕ್ಷರ ಎಂದರೆ ಕೂಲಿಕಾರರಿಗೂ ವಿಮೋಚನೆ ಎಂದುಕೊಳ್ಳುತ್ತಿರುವಾಗಲೇ
ಪಕ್ಕದ ಕೇರಳದ ಕೊಟ್ಟಾಯಂ ನಿಂದ ಅಮೀನಾಬಿ ಮಾತನಾಡಿದ್ದು

ಆಕೆಗೆ ವೇದಿಕೆ ಎಂದರೆ ಏನು ಎಂದೇ ಗೊತ್ತಿರಲಿಲ್ಲ
ನಾಕು ಜನ ಇದ್ದೆಡೆ ಇದ್ದೂ ಗೊತ್ತಿರಲಿಲ್ಲ
ಅಂತಹ ಅಮೀನಾಬಿ ಈಗ ಮೈಕ್ ಮುಂದೆ ನಿಂತಿದ್ದಳು. ೬೦ ದಾಟಿತ್ತು
ಆಕೆ ಹೇಳುತ್ತಿದ್ದಳು – ನಾನು ಯಾವಾಗಲೂ ಇವರ ಹಿಂದೆ ಹೋಗುತ್ತಿದ್ದೆ.
ಅವರು ೧೦ ಹೆಜ್ಜೆ ಮುಂದೆ ಹೋದರೆ ಹಿಂದೆ ನಾನು ಕುರಿಯಂತೆ ಹಿಂಬಾಲಿಸುತ್ತಿದ್ದೆ
ಆದರೆ ಈಗ ಹಾಗಲ್ಲ ನಾನು ಮುಂದೆ ಇರುತ್ತೇನೆ, ಇವರು ನನ್ನ ಹಿಂದೆ ಹಿಂದೆ ಬರುತ್ತಾರೆ ಎಂದಳು

ಕುರಿಯಂತೆ ಎಂದು ಮಾತ್ರ ಹೇಳಲಿಲ್ಲ.

ಎಲ್ಲರಿಗೂ ಅಚ್ಚರಿ- ಹೇಗಪ್ಪಾ ಎಂದು
ಅದು ಆಕೆಗೂ ಗೊತ್ತಾಯಿತೇನೋ ಬಿಡಿಸಿಡುತ್ತಾ ಹೋದಳು
ಗಂಡನ ಹಿಂದೆ ಹೆಂಡತಿ ಹೋಗಬೇಕು ಇದು ನೆಲದ ಕಾನೂನು
ಆದರೆ ಅದು ಬದಲಾಗಬಹುದು ಅಕ್ಷರದಿಂದ ಎನ್ನುವುದು ನನಗೆ ಗೊತ್ತೇ ಇರಲಿಲ್ಲ
ನಾನು ಬೀಡಿ ಕಟ್ಟುವಾಗ ಅಕ್ಷರ ಕಲಿಸುತ್ತಾ ಹೋದರು
ನಾನು ಅಕ್ಷರವನ್ನೂ ಕಲಿತೆ. ಅಂಕಿ ಗುರುತಿಸುವುದನ್ನೂ ಕಲಿತೆ
ಹಾಗಾಗಿ ನನಗೆ ಈಗ ದೂರದಿಂದ ಬರುವ ಬಸ್ ಯಾವುದು ಎಲ್ಲಿ ಹೋಗುತ್ತೆ ಗೊತ್ತಾಗುತ್ತೆ
ಹೊರಗಡೆ ಹೋದಾಗ ನಾವು ಇರುವುದು ಎಲ್ಲಿ, ಎಲ್ಲಿಗೆ ಹೋಗಬೇಕು ಎಂದು ತಿಳಿಯುತ್ತೆ

ಇಷ್ಟು ದಿನ ಇವರು ಮುಂದಿದ್ದರೂ ಅವರನ್ನು ನಿಲ್ಲಿಸಿ ಇವರನ್ನು ನಿಲ್ಲಿಸಿ
ದಾರಿ ಎಲ್ಲಿಗೆ ಹೋಗುತ್ತೆ ಎಂದು ಕೇಳುತ್ತಾ ಹೋಗುತ್ತಿದ್ದರು
ಈಗ ನನಗೆ ಗೊತ್ತು ಕೇಳುವ ಪ್ರಶ್ನೆಯೇ ಇಲ್ಲ
ಹಾಗಾಗಿ ಇವರೇ ನನ್ನನ್ನು ಮುಂದೆ ಹೋಗಲು ಬಿಡುತ್ತಾರೆ

ನನಗೆ ಗೊತ್ತೇ ಇರಲಿಲ್ಲ ಅಕ್ಷರ ಕಲಿತರೆ ಹೆಣ್ಣು ಗಂಡಸಿಗಿಂತ ಮುಂದೆ ಇರಬಹುದು ಎಂದು
ಅಕ್ಷರಕ್ಕೆ ನಮಸ್ಕಾರ ಎಂದಳು

‘ದಿ ಟೆಲಿಗ್ರಾಫ್’ ನನಗೆ ತುಂಬಾ ಇಷ್ಟದ ಪೇಪರ್
ಯಾಕೆಂದರೆ ಅವರು ೮ ಕಾಲಮ್ ನಷ್ಟು ಅಗಲದ ಫೋಟೋ ಬೇಕಾದರೂ ಹಾಕುತ್ತಾರೆ
ಒಂದು ದಿನ ಅದರ ಪುಟ ಬಿಡಿಸಿದೆ
ಪೇಪರ್ ನ ಆಷ್ಟೂ ಅಗಲ ಒಂದು ಫೋಟೋ ಕಂಡಿತು
ಏನೆಂದು ನೋಡಿದರೆ ಸಮುದ್ರ ತೀರದಲ್ಲಿ ನೂರಾರು ದೋಣಿಗಳು ನಿಂತಿವೆ.
ಅದರಲ್ಲಿ ಮೀನುಗಾರರು ಮಾತ್ರ ಪತ್ತೆ ಇಲ್ಲ
ಎಲ್ಲಿ ಎಂದು ನೋಡಿದರೆ ಆಗೋ ಆ ದೂರದಲ್ಲಿ ಅವರು ಮರಳ ಮೇಲೆ ಅಕ್ಷರ ತಿದ್ದುತ್ತಿದ್ದಾರೆ

‘ದೇವರು ರುಜು ಮಾಡಿದನು..’ ಎನ್ನುವುದು ಆಕಾಶದಲ್ಲಿ ಹಾರುವ ಹಕ್ಕಿಗೆ ಮಾತ್ರ ಸೀಮಿತವೇನು?
ಇಲ್ಲಿ ಈ ಮರಳ ದಂಡೆಯಲ್ಲೂ ಮರಳನ್ನೇ ಸ್ಲೇಟ್ ಮಾಡಿಕೊಂಡ ಅಷ್ಟೂ ಮೀನುಗಾರರು ಅಕ್ಷರ ತಿದ್ದಿದ್ದರು
ಅಲ್ಲೂ.. ‘ದೇವರು ರುಜು ಮಾಡಿದನು’

ಹೀಗೆ ಒಂದು ದಿನ ಮಂಗಳೂರಿನ ಬಂದರ್ ನಲ್ಲಿ ನನ್ನಿಷ್ಟದ ಎಗ್ ಬುರ್ಜಿ ತಿಂದು ಕೈ ಒರೆಸಲು ಹೋದೆ
ಒಂದು ಕ್ಷಣ ಅಲ್ಲಿದ್ದ ಹುಡುಗಿಯ ಫೋಟೋ ನೋಡಿ ಕೈ ತಡೆಯಿತು ಕಣ್ಣಿಗೆ ಕೆಲಸ ಕೊಟ್ಟೆ
ಅರೆ! ಆ ಹುಡುಗಿ.. ಅದೇ ಹುಡುಗಿ..

ಸುಳ್ಯದ ರಬ್ಬರ್ ತೋಟದಲ್ಲಿ ಇದ್ದ ಕೂಲಿಗಾರರ ಮಗಳು
ತಾನೂ ರಬ್ಬರ್ ಹಾಲು ಇಳಿಸಲು ಮರದಿಂದ ಮರ ಸುತ್ತುತ್ತಿದ್ದವಳು
ಒಂದೇ ಏಟಿಗೆ ೧೦ ನೇ ತರಗತಿ ಪಾಸಾದವಳು
ಕರಿಕೋಟು ತೊಟ್ಟು ನಿಂತಿದ್ದಾಳೆ
ಏನೆಂದು ಮತ್ತೆ ಮತ್ತೆ ಓದಿದೆ
ಆ ಹುಡುಗಿ, ರಬ್ಬರ್ ತೋಟದ ಅದೇ ಹುಡುಗಿ ಉಡುಪಿಯ ಕಾನೂನು ಕಾಲೇಜಿನಲ್ಲಿ ಪದವಿ ಮುಗಿಸಿದ್ದಳು,
ಚಿನ್ನದ ಪದಕಗಳೊಂದಿಗೆ

ಗಧಾ- ಅನ್ ಪಡ್ ಗಧಾ ಎನ್ನುವುದು ಮತ್ತೆ ನೆನಪಾಗಲು ಕಾರಣವಿದೆ

ಅಕ್ಷರ ಎನ್ನುವುದು ಅಕ್ಷರ ಮಾತ್ರವಲ್ಲ ಎಂದು ಕ್ಯಾಸ್ಟ್ರೊ ಗೆ ಗೊತ್ತಿತ್ತು
ಇಡೀ ಅಮೆರಿಕಾ ಕ್ಯೂಬಾವನ್ನು ನಾಶ ಮಾಡಲು ಪದೇ ಪದೇ ಎರಗುವಾಗ
ತನ್ನ ದೇಶದ ಜನರಿಗೆ ಏನಾಗುತ್ತಿದೆ ಎನ್ನುವದು ಅರ್ಥವಾಗುವುದಾದರೂ ಹೇಗೆ
ಹಾಗಾಗಿಯೇ ಅವರು ಮೊದಲು ನಿರ್ಧರಿಸಿದರು- ಕತ್ತಲ ಕೋಣೆಯಿಂದ ಮಾತ್ರವಲ್ಲ,
ಅಕ್ಷರ ಇಲ್ಲದ ಅಂಧಕಾರದಿಂದಲೂ ನನ್ನ ಜನರನ್ನು ಹೊರತರಬೇಕು ಎಂದು

ನಮ್ಮಿಂದ ಇನ್ನು ಒಂದು ಗುಲಗಂಜಿಯೂ ನಿಮ್ಮೆಡೆ ಬರುವುದಿಲ್ಲ ಎಂದು ಅಮೆರಿಕಾ ಘೋಷಿಸಿಬಿಟ್ಟಾಗ
ಕ್ಯೂಬಾದಲ್ಲಿ ಪಯರು ಎದೆಮಟ್ಟಕ್ಕೆ ಬೆಳೆದು ನಿಂತಿತ್ತು
ಕಟಾವು ಮಾಡಲು ಕತ್ತಿಗಳಿಲ್ಲ, ಟ್ರಾಕ್ಟರ್ ಗಳಿಲ್ಲ,
ಇದ್ದದ್ದನ್ನು ರಿಪೇರಿ ಮಾಡಿಕೊಳ್ಳಲು ಬಿಡಿ ಭಾಗಗಳೂ ಇಲ್ಲ ಎಂದು

ಆಗಲೇ ಕ್ಯೂಬಾ ಮಕ್ಕಳತ್ತ ನೋಡಿದ್ದು
ಮಕ್ಕಳು ‘ಶಾಲೆ ಈಗ ಹೊಲದ ಬಳಿಗೆ’ ಎಂದು ಹೊರಟೇಬಿಟ್ಟರು.
ಕಬ್ಬು ಕಟಾವು ಮಾಡುತ್ತಲೇ ಅಂಧಕಾರವನ್ನೂ ಕತ್ತರಿಸಿ ಕತ್ತರಿಸಿ ಹಾಕಿದರು

ಒಂದು ದಿನ ಹೀಗಾಯಿತು
ಅಮೆರಿಕಾದಿಂದ ಪೆಟ್ರೋಲ್ ಡೀಸಲ್ ನಿಂತು ಹೋಯಿತು
ಸೋವಿಯತ್ದಿಂ ದೇಶ ದಿಂದ ಬರಲಿ ಎಂದರೆ ಆ ದೇಶವೇ ಮುಗುಚಿಬಿದ್ದಿತು

ಆಗ ರಾತ್ರೋರಾತ್ರಿ ಕ್ಯೂಬನ್ನರು ನಿರ್ಧರಿಸಿಬಿಟ್ಟರು
ನಾವು ಇನ್ನು ನಡೆದೇ ಸಿದ್ಧ.
ತಮ್ಮ ಬಳಿ ಇದ್ದ ಕಾರು ಸ್ಕೂಟರ್ ಗಳೆಲ್ಲ ನಿಂತಲ್ಲೇ ನಿಲ್ಲಿಸಿದರು

ಅಮೆರಿಕಾದ ಪತ್ರಿಕೆಗಳು ಗೇಲಿ ಮಾಡಿದವು-
ಆಗ ಕ್ಯೂಬನ್ನರು ಮಾತನಾಡಿದರು
ಮಕ್ಕಳಿಗೆ ಶಾಲೆಗೇ ಹೋಗಲು ವಾಹನ ಬೇಕು
ಅವರ ವಾಹನಕ್ಕೆ ಬೇಕಾದ ಪೆಟ್ರೋಲ್ ಉಳಿಸಲು ನಾವು ಕಾಲ್ನಡಿಗೆಗೆ ಶರಣಾಗಿದ್ದೇವೆ
ಅವರು ಕಲಿಯುತ್ತಿರುವುದು ಅಕ್ಷರವನ್ನು

ಹೀಗೆ ಮಂಗಳೂರಿನಲ್ಲಿ ಇದ್ದವನಿಗೆ ಮಂಗಳೂರು ಕೇರಳ ಎಲ್ಲವೂ ಪಾಠ ಕಲಿಸುತ್ತ ಹೋದವು
ನಾನೂ ಸಹಾ ಇದನ್ನೆಲ್ಲಾ ಕೌತುಕದ ಕಣ್ಣಿನಿಂದ ನೋಡುತ್ತಾ ಗುಲ್ಬರ್ಗಾ ತಲುಪಿಕೊಂಡೆ
ಹಾಗೆ ಒಂದು ಪುಟ್ಟ ಹಳ್ಳಿ ಹೊಕ್ಕೆ, ಅವರಾಧ ಎಂಬ ಹಳ್ಳಿ

ಒಂದು ನೋವಿನ ರಾಗ ಕೇಳಿಸಿತು
ಏನು ಎಂದು ಕಿವಿಗೊಟ್ಟೆ

‘ಹಚ್ಚಬೇಡ ಹಚ್ಚಬೇಡವ್ವಾ
ಜೀತಕ್ಕ ನನ್ನನ್ನ
ಎಳೆಬಾಳೆ ಸುಳಿ ನಾನವ್ವಾ

ಹಚ್ಚಬೇಕು ಹಚ್ಚಬೇಕವ್ವಾ
ಸಾಲೀಗಿ ನನ್ನನ್ನ..’

ಎನ್ನುವ ಹಾಡು. ಬೀದಿ ನಾಟಕದ ತಂಡ ಅಧೋ ರಾತ್ರಿಯಲ್ಲಿ ಶಾಲೆ ಮೆಟ್ಟಿಲು ಹತ್ತುವಂತೆ ಕರೆಯುತ್ತಿದ್ದರು
ಅಲ್ಲೇ ಅನತಿ ದೂರದಲ್ಲಿ ಮೂರು ರಾಟೆಯ ಭಾವಿ
ಅದರ ಮರೆಯಲ್ಲಿ ಒಂದು ಜೋಡಿ ಕಣ್ಣು ಆ ಹಾಡುವವರನ್ನೇ ಇಣುಕಿ ನೋಡುತ್ತಿತ್ತು

ಇನ್ನು ತನ್ನನ್ನು ಉತ್ತುಕೊಳ್ಳುವ ದಿನ ದೂರ ಇಲ್ಲ ಎಣಿಸಿಹೋಯಿತು

***
ಮಾಣಿಕ್ ಸರ್ಕಾರ್ ಬಂದಿದ್ದಾರೆ
ತ್ರಿಪುರಾದಿಂದ
ಕೇಳುತ್ತಿದ್ದಾರೆ- ನಮ್ಮ ರಾಜ್ಯದಲ್ಲಿ ಅಕ್ಷರ ಗೊತ್ತಿಲ್ಲದವರನ್ನು ಹುಡುಕಿ ತೋರಿಸಿ ಎಂದು
ಈ ಎಲ್ಲಾ ನೆನಪಾಗಿ ಹೋಯಿತು

‍ಲೇಖಕರು admin

January 10, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. ಅಮರದೀಪ್. ಪಿ.ಎಸ್.

    ಸರ್ ಚೆನ್ನಾಗಿದೆ ಚಿಕ್ ಚಿಕ್ ಸಂಗತಿ.

    ಪ್ರತಿಕ್ರಿಯೆ
  2. Shylesh

    ನೆಲವನ್ನಲ್ಲ, ಮೊದಲು ನಿಮ್ಮನ್ನು ಉತ್ತುಕೊಳ್ಳಿ’…

    ಪ್ರತಿಕ್ರಿಯೆ
  3. ಪ್ರವೀಣ್.ಸಿ

    ವಿದ್ಯೆ ಒಂದಿದ್ದರೆ ಗೆದ್ದೇ……ಎಂದರ್ಥ
    ಉಪಯುಕ್ತ ಮಾಹಿತಿ….ಸಾರ್

    ಪ್ರತಿಕ್ರಿಯೆ
  4. Mala Shylesh

    Very well written Sir….”Education is the Movement from darkness to light….”

    ಪ್ರತಿಕ್ರಿಯೆ
  5. Premalatha B

    Wonderful writings in this column!!
    I have been thoroughly enjoying reading them!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: