ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿಂತಾಮಣಿ ಕೊಡ್ಲೆಕೆರೆ ಓದಿದ ‘ಸೋನ ಪಾಪಡಿ’

ರಾಜಶೇಖರ ಕುಕ್ಕುಂದಾ ಅವರ ಹೊಸ ಕೃತಿ ‘ಸೋನ ಪಾಪಡಿ’. ಮಕ್ಕಳ ಕವಿತೆಗಳ ಈ ಕೃತಿಗೆ ಖ್ಯಾತ ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ ಅವರು ಬರೆದ ಬೆನ್ನುಡಿ ಹಾಗೂ ಕುಕ್ಕುಂದಾ ಅವರ ಕವಿತೆ ಹಾಗೂ ಮಾತುಗಳು ಇಲ್ಲಿವೆ-

This image has an empty alt attribute; its file name is CHINTAMANI-KODLAKERE.jpg

ಚಿಂತಾಮಣಿ ಕೊಡ್ಲೆಕೆರೆ

‘ರಾಜಶೇಖರ ಕುಕ್ಕುಂದಾ’ ಕಾವ್ಯನಾಮದೊಂದಿಗೆ ಬರೆಯುವ ರಾಜಶೇಖರ ಅಲ್ಲೂರಕರ್ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕಾಗಿಣೆ ನದಿ ತೀರದ `ಕುಕ್ಕುಂದಾ’ ಗ್ರಾಮದವರಾಗಿದ್ದು, ಪ್ರಸ್ತುತ ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಇನ್ಸ್ಟ್ರುಮೆಂಟೇಷನ್ ವಿಭಾಗದಲ್ಲಿ ಸಂಯೋಜಿತ ಪ್ರಾಧ್ಯಾಪಕರು.

ಶಿಶುಕಾವ್ಯದಲ್ಲಿ ಬಾಲ್ಯದಿಂದಲೂ ಆಸಕ್ತಿ ತಳೆದಿರುವ ಅವರು ತಮ್ಮ ಸಹಜ-ರಮ್ಯ-ವಿಶಿಷ್ಟ ಕಾವ್ಯ ಪ್ರಯೋಗಗಳಿಂದ ಕಾವ್ಯಾಸಕ್ತರ ಗಮನ ಸೆಳೆದವರು; ಮಕ್ಕಳ ಸಾಹಿತ್ಯಾಸಕ್ತಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ‘ಸಂಧ್ಯಾ’ ಗೆಳೆಯರ ಬಳಗದಲ್ಲಿ ಗುರುತಿಸಿಕೊಂಡವರು. ಅವರ ಕವಿತೆಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ಪಠ್ಯಪುಸ್ತಕಗಳಲ್ಲಿ ಮತ್ತು ಶಿಶುಗೀತೆಯ ಅಲ್ಬಂಗಳಲ್ಲಿ ಸೇರಿವೆ; ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಆಕಾಶವಾಣಿಯಲ್ಲಿಯೂ ಮಕ್ಕಳ ಧಾರಾವಾಹಿ ಮತ್ತು ಕವಿತೆಗಳು ಪ್ರಸಾರಗೊಂಡಿವೆ.

ಪ್ರಜಾವಾಣಿ ಪತ್ರಿಕೆಯ ದೀಪಾವಳಿ ಶಿಶುಕಾವ್ಯ ಸ್ಪರ್ಧೆಯಲ್ಲಿ ಹಲವು ಬಾರಿ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘವು ಮಕ್ಕಳ ಸಾಹಿತ್ಯಕ್ಕೆ ನೀಡುವ 2012 ನೇ ಸಾಲಿನ ‘ನಾ ಡಿಸೋಜಾ’ ಪುರಸ್ಕಾರ, 2013 ನೇ ಸಾಲಿನ ‘ಅಮ್ಮ’ ಪುರಸ್ಕಾರಗಳು ಇವರಿಗೆ ಸಂದಿವೆ. ಪ್ರಕಟಿತ ಮಕ್ಕಳ ಕವಿತಾ ಸಂಕಲನಗಳು: ‘ಚೆಲುವ ಚಂದಿರ’, ‘ಗೋಲ ಗುಮ್ಮಟ’, ‘ಪುಟಾಣಿ ಪ್ರಾಸಗಳು’.

ಪ್ರಿಯ ಗೆಳೆಯ ರಾಜಶೇಖರ ಕುಕ್ಕುಂದಾ ಅವರು ಶಾಲಾ ವಿದ್ಯಾರ್ಥಿ ಆಗಿದ್ದ ಕಾಲದಿಂದಲೇ ಬರೆಯುತ್ತ ಬಂದವರು. ಆ ಎಳೆಯ ಮನಸಿನ ಲಹರಿ, ಮುಗ್ಧ ಕಣ್ಣುಗಳ ನೋಟ ಇವನ್ನೆಲ್ಲ ಇಂದಿಗೂ ಕಾಪಾಡಿಕೊಂಡು ಬಂದಿರುವ ಈ ಕವಿಯ ಪುಟಾಣಿ ಪ್ರಾಸ ಪದ್ಯಗಳಂತೂ ತಮ್ಮ ತಮಾಷೆಗಳಿಂದ ಮುದ್ದು ಪುಟಾಣಿಗಳನ್ನು ಅಪಾರವಾಗಿ ರಂಜಿಸಬಲ್ಲವು. ಇಂಥ ಪದ್ಯಗಳನ್ನೆಲ್ಲ ಒಟ್ಟು ಮಾಡಿ ಕನ್ನಡದ ಮಕ್ಕಳು ಸವಿಯಲೆಂದು ಹೊಸರುಚಿಯ ಸಿಹಿ ತಿನಿಸನ್ನೇ ಇದೀಗ ಅವರು ಸಿದ್ಧಪಡಿಸಿದ್ದಾರೆ. 

This image has an empty alt attribute; its file name is Soan-Papdi-1024x764.jpg

ಈ ಪದ್ಯಗಳಲ್ಲಿ ಕವಿ, ಮಕ್ಕಳ ಮನಸಿನಲ್ಲಿ ಹುಟ್ಟುವ ಚಿತ್ರ ವಿಚಿತ್ರ ಕಲ್ಪನೆ, ವಿನೋದ, ವಿಚಾರಗಳನ್ನು ಅಷ್ಟೇ ರಂಜಕವಾಗಿ ಚಿತ್ರಿಸಿದ್ದಾರೆ. ಉಪ್ಪಿಟ್ಟಿನ ಕುರಿತು ಮಕ್ಕಳಿಗೆಲ್ಲ ಇರುವ ಬೇಸರ, ಸ್ಕೂಲೇ ಇರಬಾರದೆಂಬ ಅವರ ಒಳ ಆಸೆ, ಆನ್ಲೈನ್ ಪಾಠದ ಹೊಸ ಸನ್ನೀವೇಶ, ಸೈಕಲ್ ಪ್ರೀತಿ, ಮಳೆ-ಮೋಡ-ಗುಬ್ಬಿ ಮಕ್ಕಳ ಕುತೂಹಲ ಹಬ್ಬುವ ಹಲವು ದಿಕ್ಕುಗಳು. ಈ ಎಲ್ಲವಕ್ಕೂ ಇಲ್ಲಿ ಎಡೆ ಇದೆ. ಉತ್ತರ ಕರ್ನಾಟಕದ ಆಡು ಮಾತಿನಲ್ಲಿ ಅವರು ಬರೆದಿರುವ ‘ಚಿಕ್ಕ್ಯಾ ಚಿಕ್ಕ್ಯಾ ಎಲ್ಲ್ಹೋದಾ?’ ಪದ್ಯವನ್ನು ವಿಶೇಷವಾಗಿ ಉಲ್ಲೇಖಿಸಬೇಕು. ‘ನೆಲುವಿನ್ ಮ್ಯಾಲಿನ್ ಹಾಲ್ ಕುಡಿದು’, `ಕಪ್ಪುಬಸ್ಸಿಯೆಲ್ಲಾ ಒಡ್ದು’ಓಡಿದ ಚಿಕ್ಕ್ಯಾ ಎಲ್ಲಿ ಹೋದನೆಂದು ಕವಿತೆ ಇನ್ನೂ ಹುಡುಕುತ್ತಲೇ ಇದೆ. ಮಕ್ಕಳನ್ನು ಸೆಳೆಯಲೆಂದು ಕವಿ `ಸೋನ ಪಾಪಡಿ’ಯನ್ನು ನೀಡಿದ್ದಾರೆ. 

ಮಕ್ಕಳ ಪದ್ಯಗಳು ಮಕ್ಕಳನ್ನು ತಲುಪಬೇಕು! ನಾಡಿನಾದ್ಯಂತ ಬಹುಪಾಲು ತಂದೆ, ತಾಯಿ ಆಸ್ಥೆ ವಹಿಸಿ ಇಂಥ ಒಳ್ಳೆಯ ಪದ್ಯಗಳನ್ನು ಮಕ್ಕಳಿಗೆ ಓದಿ ಹೇಳಿ ಅವರಲ್ಲಿ ಆಸಕ್ತಿ ಹುಟ್ಟಿಸಬೇಕು. ಆಗ ಖಂಡಿತ ಸಾಹಿತ್ಯ ಓದುವ ಅಭಿರುಚಿ ಮಕ್ಕಳಲ್ಲಿ ಮೂಡುತ್ತದೆ. ಇದು `ನೆಲುವಿನ್ ಮ್ಯಾಲಿನ್ ಹಾಲು’. ಸೋನಪಾಪಡಿ ತಿಂದು, ಈ ಹಾಲು ಕುಡಿದು ಮಕ್ಕಳು ಪುಷ್ಟಿ ಪಡೆದು ನಲಿಯಲಿ.‌

ಆಟಕ್ಕ್ಹೋಗಣ್ಬಾ!
(ಚಿತ್ರ: ಸಂತೋಷ್ ಸಸಿಹಿತ್ಲು)


This image has an empty alt attribute; its file name is ifDDhqcIhiWoT_NbRs2sjwj1o2UMs323QCqjOwSijBuw2RbMZxj3snPw5mc2-YwCptngoSkfVDMTm0CLIi9fVMqMpP5OP1GsOv45hibM5_vY34-7EEB3YDijaJdGvHbD7Ywhjd0=s0

ಕೈ ಕೈ ಹಿಡ್ದು
ಸಣ್ಣಕ್ಜಿಗ್ದು
ಆಟಕ್ಕ್ಹೋಗಣ್ಬಾ!

ಚಾಟೀ ಹಿಡ್ದು
ಚಕ್ಡೀ ಹೊಡ್ದು
ತೋಟಕ್ಕ್ಹೋಗಣ್ಬಾ!

ಅಂಗೀ ತೆಗ್ದು
ಚಡ್ಡೀ ಬಿಗ್ದು
ಬಾವೀಗಿಳಿಯೋಣ್ಬಾ!

ಬೆಕ್ಕೀಗ್ಹಿಡ್ದು
ನಾಯೀಗ್ಬಡ್ದು
ದಿಕ್ಕೆಟ್ಟೋಡಣ್ಬಾ!

ಬುತ್ತೀ ಬಿಚ್ಚಿ
ರೊಟ್ಟೀ ಕಚ್ಚಿ
ಕತ್ತರ್ಸ್ಹೊಡಿಯೋಣ್ಬಾ!

ಗುಡ್ಡಾ ಸುತ್ತಿ
ಮ್ಯಾಲಕ್ಕ್ಹತ್ತಿ
ಮುಗ್ಲೀಗ್ಮುಟ್ಟೋಣ್ಬಾ!

ಕುರೀ ಕುರೀ ಕುರಿ
(ಚಿತ್ರ: ಸಂತೋಷ್ ಸಸಿಹಿತ್ಲು)


This image has an empty alt attribute; its file name is 6iHd-K-Ebvd6Do9wqDfCdu0ezxgMknphDmRUpaHamSSeOmLQg85EOT9b5xlPQ7c7QWRyCztsZ-3SUMdFeRJFFm5ezA14aabgkDCEG347nsl0ScJuT5BmfO57qJK8aWf1lghLZlE=s0

ಕುರೀ ಕುರೀ ಕುರಿ
ದೊಡ್ಡೀ ತುಂಬಾ ಕುರಿ
ಕೋಚೀಂಗಂತ ಬಂದೇಬಿಟ್ತು
ಕೋಟಾದೊಂದು ನರಿ!

(‘ಕೋಟಾ’ ಎಂಬುದು ರಾಜಸ್ಥಾನದಲ್ಲಿ ಕೋಚಿಂಗ್-ಗೆ ಹೆಸರಾದ ಊರು.)

ಚಪ್ಪರಿಸುವ ಮೊದಲು

ರಾಜಶೇಖರ ಕುಕ್ಕುಂದಾ

ನಾನು ಮಕ್ಕಳ ಪದ್ಯಗಳಿಂದ ಬಹಳ ಆಕರ್ಷಿತ; ಅವುಗಳ ಮೋಡಿಗೆ ಒಳಗಾಗಿ ನನ್ನನ್ನೇ ನಾನು ಮರೆತದ್ದಿದೆ. ಬಾಲ್ಯದಲ್ಲಿ  ಗೆಳೆಯರೊಡಗೂಡಿ ಶಾಲೆಯ ಪಠ್ಯಕ್ಕಿರುವ ಗದ್ಯವನ್ನೇ ಪದ್ಯದಂತೆ ಹಾಡಿ ಖುಷಿಪಟ್ಟಿದ್ದೇನೆ. ಜಿ.ಪಿ.ರಾಜರತ್ನಂ, ಪಂಜೆ ಮಂಗೇಶರಾಯ, ಸಿದ್ಧಯ್ಯ ಪುರಾಣಿಕ, ದಿನಕರ ದೇಸಾಯಿ-ಮುಂತಾದ ನವೋದಯ ಕಾಲದ ಪ್ರಮುಖ ಕವಿಗಳ ಮಕ್ಕಳ ಪದ್ಯಗಳಲ್ಲಿನ ಸೂಜಿಗಲ್ಲಿನ ಸೆಳೆತ, ಅವರ ಸಹಜ ಸೃಜನ ಕ್ರಿಯೆ ಇಂದಿನವರ ಪದ್ಯಗಳಲ್ಲಿ ಅಪರೂಪ.

ಇಂದಿನ ಮಕ್ಕಳ ಆಶಯಕ್ಕೆ ತಕ್ಕಂತೆ, ಅವರ ಮನ ಸೆಳೆಯುವಂತೆ ಬರೆಯುವುದು ಬರೆಯುವವರಿಗೊಂದು ದೊಡ್ಡ ಸವಾಲು. ನಮ್ಮ ಮತ್ತು ಇಂದಿನ ಮಕ್ಕಳ ಬಾಲ್ಯಕ್ಕೂ ಇರುವ ಕಾಲದ ಅಂತರದ ‘ಬಿಟ್ಟ ಸ್ಥಳ’ ತುಂಬುವಲ್ಲಿ ನಾವು ಯಶಸ್ಸು ಕಾಣಬೇಕಾಗಿದೆ. ಅಂಥ ಪ್ರಯತ್ನವನ್ನು ಡಾ. ಸುಮತೀಂದ್ರ ನಾಡಿಗ, ಡಾ. ಎಚ್. ಎಸ್. ವೆಂಕಟೇಶಮೂರ್ತಿ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಡಾ. ಶ್ರೀನಿವಾಸ ಉಡುಪ, ಡಾ ಆನಂದ ಪಾಟೀಲ, ಡಾ. ಚಿಂತಾಮಣಿ ಕೊಡ್ಲೆಕೆರೆ, ಡಾ. ಕೆ.ವಿ.ತಿರುಮಲೇಶ-ಮುಂತಾದವರು ಮಾಡಿದ್ದಾರೆ.  ಸಾಹಿತ್ಯ ಯಾರದ್ದೇ ಆಗಿರಲಿ, ಅದು ಎಷ್ಟೇ ಸೊಗಸಾಗಿ ಮುದ್ರಣಗೊಂಡಿರಲಿ, ಅದನ್ನು ಎಷ್ಟೇ ಢಾಣಾ ಡಂಗುರ ಮಾಡಿ ಪ್ರಚುರಪಡಿಸಿರಲಿ;ಮಕ್ಕಳು ಓದಿ ಖುಷಿಪಟ್ಟು ಎದೆಗಪ್ಪಿಕೊಳ್ಳದ ಹೊರತು ಅದು ಮಕ್ಕಳ ಸಾಹಿತ್ಯವಾಗುವುದಿಲ್ಲ.

ಶುದ್ಧವಾದ ಜೇನು ಹೇಗೆ ನೂರಾರು ವರುಷವಿಟ್ಟರೂ ಕೆಡುವುದಿಲ್ಲವೋ ಹಾಗೆಯೇ ಮಕ್ಕಳ ಪದ್ಯಗಳು ರೂಪು ತಳೆಯಬೇಕು; ಮತ್ತು ಅವು ಮಕ್ಕಳಿಗೆ ಕವಿ ‘ಮಹಲಿಂಗರಂಗ’ರ ನುಡಿ ‘ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ’ ಸುಲಭವಾಗಿರಬೇಕು ಎಂಬುದು ನನ್ನ ಅಭಿಮತ. ಹಾಗೆ ಅಂದುಕೊಂಡು ಮೈದಳೆದ ಈ ‘ಸೋನ ಪಾಪಡಿ’ ಮಕ್ಕಳ ಬಾಯಿಯಲ್ಲಿ ಕರಗಿ ಮನಕ್ಕೆ ಮುದ ನೀಡುವಂತಾಗಲಿ ಎಂಬುದು ನನ್ನ ಆಶಾಭಾವನೆ.    

‍ಲೇಖಕರು Admin

25 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading