
ಎಚ್ ಗೋಪಾಲಕೃಷ್ಣ
ನಿಮಗೆ ಅಂದರೆ ಬೆಂಗಳೂರಿಗರಿಗೆ ಚಳಿ ಅಂದರೆ ವರ್ಷದಲ್ಲಿ ಮೂರೇ ತಿಂಗಳು, ಅದಕ್ಕೇ ಹಾಂಗೆ ಆಕಾಶ ತಲೆ ಮೇಲೆ ಬಿದ್ದ ಹಾಂಗೆ ಆಡ್ತೀರ… ನಮ್ಮ ಕಡೆ ಇದ್ದಿದ್ದರೆ ಅದು ಹೇಗೆ ಜೀವಿಸ್ತಾ ಇದ್ರೋ.. ಅಂತ ನಮ್ಮ ಬಹುದೂರದ ಬಂಧು ಹನುರಾಜು ಡಿಸೆಂಬರ್ ತಿಂಗಳಲ್ಲಿ ನಮ್ಮ ಮನೆಗಳಿಗೆ ಭೇಟಿ ನೀಡಿದಾಗ ನಮ್ಮನ್ನು ಛೇಡಿಸೋದು ಉಂಟು. ಅವರು ಅಲ್ಲೆಲ್ಲೋ ವರ್ಷ ಪೂರ್ತಿ ಹಿಮ ಸುರಿಯತ್ತಲ್ಲಾ ಅಂತಹ ಕಡೆ ಉದ್ಯೋಗ ಅರಸಿ ಹೋದವರು ಅಲ್ಲೇ ತಳ ಊರಿದ್ದಾರೆ. ಆರ್ಥಿಕವಾಗಿ ನಮ್ಮೆಲ್ಲರನ್ನೂ ಮೀರಿದವನು.ನಮ್ಮನ್ನೆಲ್ಲಾ ಕೊಂಡುಕೊಳ್ಳುವಶ್ಟು ಕಾಸಿದೆ ಅವನ ಹತ್ರ ಅಂತ ನಮ್ಮ ದೂರದ ಅಜ್ಜಿ ಆಗಾಗ ಹೇಳುತ್ತಾಳೆ ಮತ್ತು ಹಂಗಿಸುತ್ತಾಳೆ. ಹನುರಾಜ್ ಅವರು ಆಗಾಗ್ಗೆ ಅಂದರೆ ಮೂರು ವರ್ಷಕ್ಕೆ ಅಥವಾ ಐದು ವರ್ಷಕ್ಕೆ ಇಲ್ಲಿಗೆ ಬಂದು ಅವರು ಎಷ್ಟು ಚೆನ್ನಾಗಿ ಬದುಕ್ತಾ ಇದ್ದಾರೆ, ಅವರ ಹಣಕಾಸು, ಆಸ್ತಿ ಪಾಸ್ತಿ ಹೇಗಿದೆ ಅನ್ನುವ ಒಂದು ಚಿತ್ರಣ ನಮ್ಮ ಹೆಣ್ಣು ಮಕ್ಕಳ ಮುಂದೆ ಇಟ್ಟು ಸಂಭ್ರಮ ಪಡುತ್ತಾರೆ. ಮತ್ತು ಇಲ್ಲಿನ ನೇಟಿವ್ ಗಳಿಗೆ ಹೊಟ್ಟೆ ಉರಿಸಿದ ಒಳ ಸಂತೋಷವನ್ನು ಕೊಂಚ ಹೆಚ್ಚಾಗಿಯೇ ಪಡುತ್ತಾರೆ ಎಂದು ನಮ್ಮ ಫ್ಯಾಮಿಲಿಯ ಗಂಡು ಪಾಳ್ಯದ ಗುಮಾನಿ. ಹೆಣ್ಣು ಪಾಳ್ಯದವರಿಗೆ ನಾವು ಗಂಡು ಪಾಳ್ಯದವರು ಈ ಗುಮಾನಿ ಬಗ್ಗೆ ಹೇಳಿಲ್ಲ. ಕಾರಣ ಸ್ಪಷ್ಟ, ನಾವು ಆತನ ಪಾದದ ಲೆವೆಲ್ ಗೆ ಸಹ ಇಲ್ಲ!
ನಮ್ಮ ಹೆಣ್ಣು ಮಕ್ಕಳೂ ಸಹ ಅವರ ಸಂಭ್ರಮದಲ್ಲಿ ಪಾಲು ಗೊಳ್ಳುತ್ತಾರೆ ಮತ್ತು ಅವರದೇ ಆದ ವಿಶಿಷ್ಟ ರೀತಿಯಲ್ಲಿ ಇವರು ಇಲ್ಲಿ ಈ ಊರಿನಲ್ಲಿ ಎಷ್ಟು ಸುಖ ಸಂತೋಷ ನೆಮ್ಮದಿಯಿಂದ ಜೀವನ ಸಾಗಿಸ್ತಾ ಇದ್ದಾರೆ ಅಂತ ಒಂದು ಹಿಂಟ್ ಅವರಿಗೆ ತಲುಪಿಸುತ್ತಾರೆ. ಇದು ಅಂದರೆ ಈ ಸಂಗತಿ ಇಲ್ಲಿಯವರೆಗೂ ನನಗೆ ಗೊತ್ತೇ ಇರಲಿಲ್ಲ. ಕಳೆದೆರಡು ವರ್ಷಗಳ ಹಿಂದೆ ಹನುರಾಜು ಇಲ್ಲಿಗೆ ಬಂದಾಗ ಈ ವಿಷಯ ತುಂಬಾ ಗುಟ್ಟಾಗಿ ತಿಳಿಯಿತು.
ಅಂದ ಹಾಗೆ ಹನುರಾಜು ಅವರ ಒರಿಜಿನಲ್ ಹೆಸರು ಅದಲ್ಲ. ಆಂಜನೇಯ ಅವರ ಮನೆ ದೇವರು. ತಾತ ರಾಘವೇಂದ್ರ ಸ್ವಾಮಿ ಭಕ್ತರು.ಮೊಮ್ಮಗುವಿಗೆ ರಾಯರ ಹೆಸರು ಅಂತ ಮನಸಲ್ಲೇ ಇವರು ಅಂದುಕೊಂಡರೆ ಅಜ್ಜಿ ಆಂಜನೇಯ ಸ್ವಾಮಿಗೆ ಹರಕೆ ಹೊತ್ತಿತ್ತು. ಹನು ರಾಜು ಹುಟ್ಟಿದಾಗ ಅಜ್ಜಿ ತಾತ ಇಬ್ಬರೂ ತಮ್ಮತಮ್ಮ ಹರಕೆ ಪ್ರಕಾರ ಹೆಸರು ಅಂದರು. ನಾಮಕರಣ ಶಾಸ್ತ್ರಕ್ಕೆ ಬಂದಿದ್ದ ಕುಲ ಪುರೋಹಿತರು, ಅವರೂ ಸಹ ಇವರ ಸಂಬಂಧ ದವರೇ_ಇಬ್ಬರನ್ನೂ ದೇವರ ಮುಂದೆ ಕೂಡಿಸಿ ಇಬ್ಬರ ಹರಕೆಯೂ ಈ ಡೇ ರುವ ಹಾಗೆ ಹನುಮ ರಾಘವ ಅಂತ ಹೆಸರು ಇಟ್ಟುಬಿಟ್ಟರು. ಆಂಜನೇಯ ದೇವರಿಗೆ ಹನುಮ ದೇವರು ಅಂತಲೂ ಹೆಸರು ಇದೆಯಲ್ಲ.. ಮಗು ದೊಡ್ಡದಾಯಿತು, ಕಾಲೇಜು ಪಾಲೇಜು ಮುಗಿಸಿ ಹೊರದೇಶಕ್ಕೆ ಹಾರಿತಲ್ಲಾ ಆಗ ಅದಕ್ಕೆ ಹೆಸರಿನ ಸಮಸ್ಯೆ ದೊಡ್ಡದು ಅನ್ನಿಸಿತು.ಹನುಮ ರಾಘವ ಹ್ರಸ್ವ ಹೊಂದಿ ಹನುರಾಜ್ ಆಯಿತು. ನಾವು ಬಂಧುಗಳು ಪ್ರೀತಿ ಮತ್ತು ವಿಶ್ವಾಸದಿಂದ ಹನುರಾಜು ಅಂತ ಕರೆದರೆ ಮಿಕ್ಕವರಿಗೆ ಹೊರಗಿನವರಿಗೆ ಅವನು ಹನುರಾಜ್..!

ಕಳೆದ ಸಲ ಅವನು ಬಂದಿದ್ದಾಗ ಅವರ ಊರಿಂದ ಹೆಂಗಸರಿಗೆ ಗಂಡಸರಿಗೆ ಸ್ವೆಟರ್ ತಂದ. ಹೆಂಗಸರಿಗೆ ದೊಡ್ಡ ರೋಲ್ ಶಾಲು ತಂದು ಇಲ್ಲೇ ಕಟ್ ಮಾಡಿಸಿ ಅಂಚು ಹೊಲಿಸಿ ಕೊಟ್ಟಿದ್ದ. ಎಲ್ಲಾ ಹೆಂಗಸರಿಗೂ ಅದೇ ಥಾರ್ ಮರು ಭೂಮಿ ಮಣ್ಣಿನ ಬಣ್ಣದ ಶಾಲು ಸಿಕ್ಕಿತ್ತು. ಎಲ್ಲರೂ ಯಾವುದಾದರೂ ಫಂಕ್ಷನ್ ನಲ್ಲಿ ಅದೇ ಶಾಲು ಹೊದ್ದು ಬಂದರೆ ಫಜೀತಿ ಆಗುತ್ತಿತ್ತಾ…. ಅದರಿಂದ ಆ ಶಾಲಿನ ಪ್ರಯೋಜನ ಇಲ್ಲವೇ ಇಲ್ಲ ಅಂದರೂ ಸರಿ.
ಗಂಡಸರಿಗೂ ಸಹ ಮಾಸಲು ಹಿಮ ಬಣ್ಣದ ಸ್ವೆಟರ್ ತಂದಿದ್ದ, ಎಲ್ಲರಿಗೂ ಅದೇ ಸೇಮ್ ಬಣ್ಣ. ಇದು ಒಂದೇ ದಿವಸ ಯಾರೇ ಇಬ್ಬರು ತೊಟ್ಟರೂ ಅವರ ಹೆಂಡತಿಯರಿಗೆ ಹಿಂದಿನಿಂದ ನೋಡಿದಾಗ ಕನ್ಫ್ಯೂಸ್ ಆಗುತ್ತಿತ್ತು. ಈ ಕಾರಣದಿಂದ ಗೌರಿ ತನ್ನ ಗಂಡ ಅಂತ ತಿಳಿದು ಸರಸಿ ಗಂಡನ ಬೆನ್ನಿಗೆ ಬಾರಿಸಿದ್ದು ದೊಡ್ಡ ಸುದ್ದಿ ಮಾಡಿತ್ತು. ಎಲ್ಲರೂ ಒಟ್ಟಿಗೆ ಸೇರಿದಾಗ ಗಂಡಸರು ಈ ಸ್ವೆಟರ್ ಹಾಕ ತಕ್ಕದ್ದಲ್ಲ ಅಂತ ಹೆಂಗಸರ ಅನುಭವದ ಮೂಲಕ ನಿರ್ಧಾರ ಮಾಡಿದ್ದರು!
ಅವನು ಬಂದದ್ದು ಅಕ್ಟೋಬರ್ ಕೊನೆಗೆ. ನವಂಬರ್ ಎರಡನೇ ವಾರದಲ್ಲಿ ಸ್ವೆಟರ್ ಶಾಲು ವಿತರಣೆ ಆಗಿದ್ದು. ಅದೇ ತಿಂಗಳ ಮೂರನೇದೋ ನಾಲ್ಕನೇದೋ ವಾರದಲ್ಲಿ ಎಲ್ಲಾ ಬಂಧುಗಳನ್ನು ಸೇರಿಸಿ ಹನುರಾಜ್ ಒಂದು ಫಂಕ್ಷನ್ ಮಾಡಿದ. ಆ ಫಂಕ್ಷನ್ ನಲ್ಲೇ ಒಂದೇ ತರ ಶಾಲು ಹೊದ್ದು ಕೊಂಡರೆ ಅದೇನು ಎಡವಟ್ಟು ಆಗುತ್ತೆ ಅಂತ ಲೇಡೀಸ್ ಗೆ ಗೊತ್ತಾಗಿದ್ದು…! ಕಾಮಾಕ್ಷಿ ಜಡೆಯನ್ನು ತನ್ನ ಹೆಂಡತಿಯದ್ದು ಅಂದುಕೊಂಡು ಪ್ರಾಣೇಶ ಎಳೆದು ಆಕೆ ಹಿಂದೆ ತಿರುಗಿ ಇವನನ್ನು ನೋಡಿ ಕಿಸಕ್ ಅಂದಿದ್ದಳು.ಜಡೆ ಎಳೆದ ಅಂತ ಪ್ರಾಣೇಶ ನ ಹೆಂಡತಿಗೂ ಸೇರಿದ ಹಾಗೆ ಇಡೀ ಪಟಾಲಂ ಗೆ ಡಂಗೂರ ಬೇರೆ ಹೊಡೆದಳು.
ಸುಮಾರು ಗಂಡಸರೂ ಸಹ ಈ ಶಾಲಿನ ಕಾರಣದಿಂದಾಗಿ ಪೆದ್ದು ಪೆದ್ದಾಗಿ ವರ್ತಿಸಿ ಇಡೀ ಸಮುದಾಯದ ಮುಂದೆ ಇಡೀ ಹತ್ತು ಜನ್ಮಕ್ಕೆ ಆಗುವಷ್ಟು ಸರಕು ಒದಗಿಸಿದ್ದು. ಇದರ ವಿವರ ನಿಮಗೆ ಇನ್ನೊಮ್ಮೆ ಸವಿವರವಾಗಿ ತಿಳಿಸುತ್ತೇನೆ. ಬಿದ್ದು ಬಿದ್ದು ನಗುವಶ್ಟು ಸರಕು ಅದು…
ಹೇಳೋ ಹಾಗಿಲ್ಲ ಬಿಡೋ ಹಾಗಿಲ್ಲ ಅಂತ ಆಯ್ತಲ್ಲಾ. ಅವರು ಶಾಲು ಸ್ವೆಟರ್ ತಂದುಕೊಟ್ಟು ನಮ್ಮ ಹೊಟ್ಟೆ ಉರಿಸಿದರೆ ನಾವು ಹೇಗೆ ಮುಯ್ಯಿ ತೀರಿಸಬೇಕು ಅಂತ ಹೆಣ್ಣು ಸದಸ್ಯರೇ ತೀರ್ಮಾನ ತಗೊಂಡರಾ…. ಅದೂ ತೀರ್ಮಾನ ಯಾವಾಗ ತೆಗೆದುಕೊಂಡರು ಅಂದರೆ ಈ ಮೊದಲನೇ ಫಂಕ್ಷನ್ ಆದ ಮೇಲೆ.
ಒಂದೊಂದು ಮನೆಲೂ ಫಂಕ್ಷನ್ ಮಾಡಿ ಹನುರಾಜ್ ಫ್ಯಾಮಿಲಿ ನ ಕರೆದರು. ಆತನೂ ಸಂಭ್ರಮದಿಂದ ಹೆಂಡತಿನ, ಮೂರು ಹೆಣ್ಣು ಮಕ್ಕಳು, ಎರಡು ಗಂಡು ಹುಡುಗರ ಸಂಗಡ ಬಂದ. ಮಕ್ಕಳಿಗೆ ನಂಟರನ್ನು ತೋರಿಸುವ ಆಸೆಗಿಂತ ಹೆಚ್ಚಾಗಿ ಇವರೆಲ್ಲ ಎಷ್ಟು ಬಡವರು ಅಂತ ಮಕ್ಕಳಿಗೆ ತೋರಿಸೋಕೆ ಬಂದ ಅಂತ ನಮ್ಮ ಲೇಡಿ ಪಟಾಲಂ ಆರೋಪ.
ಚಳಿ ಗಾಲದ ಸಂಭ್ರಮದ ಅಡಿಗೆ ಪ್ರತಿ ಮನೆಯಲ್ಲೂ. ಮೊದಲನೇ ಫಂಕ್ಷನ್ ನಲ್ಲಿ ಹುಳಿಯನ್ನ ಮೊಸರನ್ನ, ಮಿಡಿ ಉಪ್ಪಿನ ಕಾಯಿ ಜತೆಗೆ ಹುರುಳಿ ಹಪ್ಪಳ, ಆಲೂಗೆಡ್ಡೆ ಚಿಪ್ಸ್. ನೋಡಿ ಹಪ್ಪಳ ನಮ್ಮನೇಲಿ ಮಾಡಿದ್ದು, ನಮ್ಮ ಮಹಡಿ ಮೇಲೆ ಬಿಸಿಲು ಹೇಗೆ ಬೀಳುತ್ತೆ ಅಂತೀರಾ? ಒಂದು ವಾರದಲ್ಲಿ ಹತ್ತು ವರ್ಷಕ್ಕೆ ಆಗೋಷ್ಟು ಹಪ್ಪಳ ಸಂಡಿಗೆ ಮಾಡ್ಕೋ ಬೋದು. ಆದರೆ ನಾವು ಬರೀ ಒಂದು ವರ್ಷಕ್ಕೆ ಆಗೋಷ್ಟನ್ನೇ ಮಾಡ್ಕೊತಿವಿ. ಮತ್ತೆ ಮುಂದಿನ ವರ್ಷ ಮಾಡಬೇಕಲ್ಲಾ… ನೀವು ವಾಪಸ್ ಹೋಗಬೇಕಾದರೆ ಹುರುಳಿ ಹಪ್ಪಳ, ಮಿಡಿ ಮಾವಿನಕಾಯಿ ಉಪ್ಪಿನ ಕಾಯಿ, ಬಾಳ ಕ ದ ಮೆಣಸಿನಕಾಯಿ ಪ್ಯಾಕ್ ಮಾಡಿರ್ತಿನಿ.. ಯಜಮಾನರನ್ನ ಕಳಿಸಿ…
ಎರಡನೇ ಫಂಕ್ಷನ್ನಲ್ಲಿ ಮಾವಿನ ಕಾಯಿ ಚಿತ್ರಾನ್ನ ಮಾವಿನ ಕಾಯಿ ಸಾರು ಅಮಟೆ ಉಪ್ಪಿನ ಕಾಯಿ ಸ್ಪೇಶಲ್ಲು. ಅದರ ಜತೆಗೆ ಹಾಗಲ ಕಾಯಿ ಹಪ್ಪಳ, ಹುಚ್ಚೆಳ್ಳು ಚಟ್ನಿಪುಡಿ.
ನಮ್ಮನೇಲಿ ಮಾಡಿದ್ದು. ಮನೆ ಹಿಂದೆ ಮಾವಿನ ಮರ ಇದೆ ನೋಡಿ ಅದರದ್ದೇ ಕಾಯಿ. ಸಾರೂ ಅದರದ್ದೇ ಹುಚ್ಚೆಳ್ಳು ಇಲ್ಲಿ ಒಂದೇ ಕಡೆ ಸಿಗೋದು. ಹಾಗಲ ಕಾಯಿ ಸೀಸನ್ ನಲ್ಲಿ ಅದನ್ನ ರುಬ್ಬಿ ಹಪ್ಪಳ ಹಾಕ್ತೀವಿ. ಹಲಸಿನ ಹಪ್ಪಳ ತುಂಬಾ ಅಂದರೆ ತುಂಬಾ ಚೆನ್ನಾಗಿರುತ್ತದೆ. ಬನ್ನಿ ಹಿತ್ತಲಲ್ಲಿ ಹಲಸಿನ ಮರ ತೋರಿಸ್ತೀನಿ ಆಂತ ಹಲಸಿನ ಮರ ಮಾವಿನ ಮರ ತೋರಿಸಿ ಹೊಟ್ಟೆ ಉರಿಸಿದ ತೃಪ್ತಿ ಸಿಕ್ತಾ.ನೋಡಿ ಈ ಮರದ್ದೆ ಹಲಸಿನ ಕಾಯಿ ಹಾಕಿ ಹಪ್ಪಳ ಮಾಡಿದೆ. ಬಿಸಿಲು ಹೇಗಿದೆ ನೋಡಿ, ತುಂಬಾ ಬೇಗ ಒಣಗುತ್ತೆ. ವರ್ಷಕ್ಕೆ ಆಗೋಷ್ಟೂ ಮಾತ್ರ ಮಾಡ್ಕೊತೀ ವಿ, ಬೇಕಾದರೆ ಇನ್ನೂ ಜಾಸ್ತಿ ಮಾಡ್ಕೋ ಬೋದು. ಆದರೆ ಮುಂದಿನ ವರ್ಷ ಏನ್ಮಾಡೋದು….?
ಪ್ರತಿ ಮನೇಲಿ ಇದೇ ಮಾತು, ಅಡಿಗೆ ಮಾತ್ರ ಬೇರೆ. ಹಾಗೂ ಇಲ್ಲಿನ ಬಿಸಿಲಿನ ಬಗ್ಗೆ ವಿಶೇಷ ಹೆಗ್ಗಳಿಕೆ ಹಪ್ಪಳ ಸಂಡಿಗೆ ಬಾಳ ಕ ಮಾಡುವುದರ ಬಗ್ಗೆ ವಿವರಣೆ…
ಊರಿಗೆ ಹೋಗೋದಕ್ಕೆ ಮೊದಲು ಹನುಮನ್ನ ಕಳಿಸು. ಹಾಗಲಕಾಯಿ ಹಪ್ಪಳ, ಮಿಡಿ ಉಪ್ಪಿನಕಾಯಿ, ಹುಚ್ಚೆಳ್ಳು ಚಟ್ನಿಪುಡಿ ಪ್ಯಾಕ್ ಮಾಡಿ ಇಟ್ಟಿರ್ತಿನಿ. ಹಲಸಿನ ಹಪ್ಪಳ, ಹುರುಳಿ ಹಪ್ಪಳ ನಿಮ್ಮಲ್ಲಿನ ಚಳಿಗಾಲಕ್ಕೆ ಹೇಳಿ ಮಾಡಿಸಿದ್ದು, ಅದನ್ನೂ ಕಟ್ಟಿ ಕೊಡ್ತೀನಿ.ಪಾಪ ನಿಮ್ಮೂರಲ್ಲಿ ಇದೆಲ್ಲಾ ಸಿಗಲ್ಲ….

ಮುಂದಿನ ಫಂಕ್ಷನ್ ನಲ್ಲಿ ಆಲೂಗೆಡ್ಡೆ ಹಪ್ಪಳ, ನಿಂಬೆ ಉಪ್ಪಿನಕಾಯಿ, ಸಾಸಿವೆ ಚಿತ್ರಾನ್ನ, ಬೋಂಡಾ, ಸುವರ್ಣ ಗೆಡ್ಡೆ ಚಿಪ್ಸು…. ಊಟ ಮುಗಿಸಿ ಹೊರಟಾಗ ಹಿಂದಿನ ಮನೆಯದೇ ಉಪಚಾರ ಪ್ಯಾಕ್ ಮಾಡುವ ಪದಾರ್ಥ ಕೊಂಚ ಬೇರೆ ಅಷ್ಟೇ……
ಹನುಮ ಊರಿಗೆ ಹೊರಟಾಗ ದೊಡ್ಡ ಪ್ಯಾಕೆಟ್ಟು ಹಪ್ಪಳ ಸಂಡಿಗೆ ಉಪ್ಪಿನ ಕಾಯಿ ಚಟ್ನಿಪುಡಿ, ಗೋರಿ ಕಾಯಿ, ಮೆಣ ಸಿನಕಾಯಿ ,ಕುಂಬಳ ಕಾಯಿ ಸಿಪ್ಪೆ ಬಾಳಕದ್ದು. ಸುಮಾರು ದೊಡ್ಡ ಹೊರೇನೆ. ಒಂದು ದೊಡ್ಡ ಕಾರಿನ ಹಿಂಭಾಗ ಪೂರ್ತಿ ಅದೇ ತುಂಬಿತ್ತು.
ಎಲ್ಲಾ ನಂಟರ ದೊಡ್ಡ ಮಕ್ಕಳೂ ಅದರ ಅಪ್ಪಂದಿರು ಮತ್ತು ಅಮ್ಮಂದಿರು.. ಹೀಗೆ ದೊಡ್ಡ ದಿಬ್ಬಣ ಅವನನ್ನು ಹಿಂಬಾಲಿಸಿದ್ದು. ಎಲ್ಲಾದರೂ ರಸ್ತೆ ಮಧ್ಯೆ ಎಸೆದು ಹೋದಾನು ಅಂತ ಅವನು ಸಂಸಾರ ಸಮೇತ ಏರೋ ಪ್ಲೇನ್ ಹತ್ತೋವರೆಗೆ ಅವನ ಜತೆಗೆ ಇಲ್ಲಿನ ನಂಟರು ಅವರ ಮಕ್ಕಳು…
ಆತ ಸಂಸಾರ ಸಮೇತ ಹತ್ತಿದ ಏರೋ ಪ್ಲೇನು ಹೊರಟು ಒಂದು ಒಂದೂವರೆ ಗಂಟೆ ನಂತರ ಅವನು ಇನ್ನ ಯಾವ ಕಾರಣಕ್ಕೂ ವಾಪಸ್ ಬರುಲ್ಲ ಅಂತ ಕನ್ಫರ್ಮ್ ಆದ ನಂತರವೇ ಅಲ್ಲಿಂದ ನಂಟರು ವಾಪಸ್ ಹೊರಟಿದ್ದು..
ಎಕ್ಸ್ಟ್ರಾ ಲಗೆಜಿಗೆ ಪಾಪ ಸಖತ್ತಾಗಿ ಡಾಲರ್ ಕೊಟ್ಟ ಅಂತ ಸುದ್ದಿ ನಂತರದ ದಿವಸಗಳಲ್ಲಿ ಫ್ಯಾಮಿಲಿ ಸರ್ಕಲ್ ನಲ್ಲಿ ಓಡಾಡಿತ್ತು.. ಮುಂದಿನ ಸಲ ಅವನು ಬಂದಾಗ ಅದೇನೇನು ಹೊಸದು ಮಾಡಬೇಕು ಅಂತ ಆಗಲೇ ಪ್ಲಾನ್ ಶುರುವಾಗಿದೆ.
ಇದು ನಮ್ಮ ಫ್ಯಾಮಿಲಿ ಸರ್ಕಲ್ಲು ಅನುಭವಿಸಿದ ಚಳಿಗಾಲ ಆದರೆ ಹನುಮ ಅನುಭವಿಸಿದ ನಮ್ಮೂರಿನ ಚಳಿಗಾಲ ಅವನಿಗೆ ಅಯ್ಯೋ ಪಾಪ ಅನಿಸಿತೋ ಅಥವಾ ಇಷ್ಟವಾಯಿತೋ ಇನ್ನೂ ಅದು ಸಸ್ಪೆನ್ಸ್.
ಮುಂದಿನ ಬಾರಿ ಅದೇನು ಹೊಸಾದು ಅಲ್ಲಿಂದ ಆಮದು ಮಾಡ್ತಾನೇ ಅಂತ ಕಾತುರದಿಂದ ಇಲ್ಲಿ ಎಲ್ಲಾ ಫ್ಯಾಮಿಲಿ ಗಳೂ ನಿರೀಕ್ಷೆ ಮಾಡ್ತಾ ಇದಾರೆ.






0 Comments