
ಟಿ ಎಸ್ ಶ್ರವಣ ಕುಮಾರಿ
ಚಲುವಯ್ಯ ನಮ್ಮ ಬ್ಯಾಂಕಿನ ಕೆಲಸಕ್ಕೆ ಸೇರಿದ್ದು ಒಂದು ಆಕಸ್ಮಿಕವೇ ಅನ್ನಿ. ಅವನ ತಂದೆ ದೊಡ್ಡಚೆಲುವ ಬ್ಯಾಂಕಲ್ಲಿ ಮೆಸೆಂಜರ್ ಆಗಿದ್ದವನು. ಮಧ್ಯವಯಸ್ಸಿನಲ್ಲಿ, ಮನದನ್ನೆಯನ್ನು ಕಳೆದುಕೊಂಡು ಮದಿರೆಯ ದಾಸನಾಗಿ ತನ್ನ ಮೂವರು ಗಂಡುಮಕ್ಕಳ ಯೋಗಕ್ಷೇಮವನ್ನೂ ನಿರ್ಲಕ್ಷಿಸಿದವನು.
ದೊಡ್ಡ ಮಗನಾದ ನಮ್ಮ ಈ ಕಥಾನಾಯಕ ಚಲುವಯ್ಯನಿಗೆ ತಾಯಿಯನ್ನು ಕಳೆದುಕೊಂಡಾಗ ಕೇವಲ ಹದಿನೈದು ವರ್ಷ, ಇನ್ನಿಬ್ಬರು ತಮ್ಮಂದಿರಿಗೆ ಹನ್ನೆರಡು, ಹತ್ತು ವರ್ಷವಿರಬೇಕು. ಅಪ್ಪನ ಬೇಜವಾಬ್ದಾರಿಯಿಂದ ಬೀದಿಗೆ ಬಿದ್ದಿದ್ದ ಮಕ್ಕಳ ಸ್ಥಿತಿಯನ್ನು ಕಂಡ ಅಮ್ಮನ ಅಮ್ಮ ಸಂಕಜ್ಜಿ ಮಗಳನ್ನು ಕಳೆದುಕೊಂಡ ದುಃಖವನ್ನು ಹೊಟ್ಟೆಯಲ್ಲಿ ಹಾಕಿಕೊಂಡು ಮೂವರು ಮೊಮ್ಮಕ್ಕಳನ್ನೂ ತನ್ನೊಂದಿಗೆ ಹಳ್ಳಿಗೆ ಕರೆದುಕೊಂಡು ಹೋಗಿ ತನ್ನ ಕೈಲಾದಷ್ಟು ಹೊಟ್ಟೆ, ನೆತ್ತಿಯನ್ನು ನೋಡಿದಳು.
ಮೇಲ್ಕೋಟೆ ಚಲುವನಾರಾಯಣನ ಒಕ್ಕಲಾದ್ದರಿಂದ ಇವನಪ್ಪನ ಹೆಸರು ದೊಡ್ಡ ಚಲುವಯ್ಯನಾದರೆ, ದೊಡ್ಡ ಮಗ ನಮ್ಮ ಚಲುವಯ್ಯ, ಇವನ ತಮ್ಮ ಪುಟ್ಟಚೆಲುವ, ಅವನಿಗೂ ಚಿಕ್ಕವನು ಚಿಕ್ಕಚೆಲುವ. ಮುಖ ನೋಡಿದರೇ ಇವರೆಲ್ಲಾ ಚೆಲುವ ನಾರಾಯಣನ ಒಕ್ಕಲೇ ಎಂದು ಸಾರಿ ಸಾರಿ ಹೇಳುವಂತೆ ಅಜ್ಜಿ ಕರಿಕಲ್ಲಿನ ವಿಗ್ರಹದ ಹಾಗೇ ಇದ್ದ ಮೂವರ ಹಣೆಯ ಮೇಲೂ ಸದಾ ಕಾಲವೂ ಎದ್ದು ಕಾಣುವಂತೆ ಢಾಳಾಗಿ ಮೂರು ನಾಮವನ್ನು ಬರೆದು ತನ್ನ ಭಕ್ತಿಯ ಪರಾಕಾಷ್ಟೆಯನ್ನು ಮೆರೆಯುತ್ತಿದ್ದಳು. ಮರೆಯದೆ ಸಂಬಳದ ದಿನ ಹೋಗಿ ಅಳಿಯನನ್ನು ದಬಾಯಿಸಿ ಒಂದಿಷ್ಟು ದುಡ್ಡನ್ನು ವಸೂಲಿ ಮಾಡಿಕೊಂಡುಬಂದು ಎರಡು ಹೊತ್ತಿನ ಹಿಟ್ಟಿಗಷ್ಟು ದಾರಿಮಾಡಿ ಹೇಗೂ ಸಂಸಾರ ನೀಗಿಸುತ್ತಿದ್ದಳು.
ಚೆಲುವಯ್ಯ ಜಾಣನೇ ಇದ್ದಿರಬೇಕು, ಇಲ್ಲವಾದಲ್ಲಿ, ‘ಸ್ಕೂಲಿಗೆ ಹೋದೆಯಾ?’ ಎಂದು ಕೂಡಾ ಕೇಳುವವರಿಲ್ಲದಿದ್ದರೂ ಕನ್ನಡ ಮೀಡಿಯಂನಲ್ಲಿ ಓದುತ್ತಾ ಎಸ್.ಎಸ್.ಎಲ್.ಸಿ.ಯಲ್ಲಿ ಕನಿಷ್ಠ ಅಂಕ ತೆಗೆದುಕೊಂಡಾದರೂ ಒಂದೇ ಸಲಕ್ಕೆ ಪಾಸಾಗಿದ್ದ. ಗಣಿತದಲ್ಲಿ ಜಾಣನಿದ್ದರೂ ಸರಿಯಾದ ಮಾರ್ಗದರ್ಶನವಿಲ್ಲದ್ದರಿಂದ ಸರ್ಕಾರಿ ಕಾಲೇಜಿನಲ್ಲಿ ಸುಲಭವೆಂದು ಆರ್ಟ್ಸ್ ತೆಗೆದುಕೊಂಡು ಪಿ.ಯು.ಸಿ ಗೆ ಸೇರಿದ್ದ.

ಇನ್ನೂ ಎರಡನೆಯ ವರ್ಷದಲ್ಲಿರುವಾಗಲೇ ಅವನಪ್ಪ ದೊಡ್ಡಚೆಲುವ ಸೀಕು ಉಲ್ಬಣಿಸಿ ತೀರಿಕೊಳ್ಳಬೇಕೇ?. ತಿಂಗಳಿಗೊಮ್ಮೆಯಾದರೂ, ಒಂದಿಷ್ಟಾದರೂ ಬರುತ್ತಿದ್ದ ಶಾಖಾಯ ಲವಣಾಯವೂ ತಪ್ಪಿಹೋಯಿತು. ಆದರೆ ಚೆಲುವಯ್ಯನ ಸೋದರಮಾವ ಸ್ವಲ್ಪ ಲೋಕ ತಿಳಿದವನು. ಕೆಲಸವಾಗುವವರೆಗೂ ಬಿಡದೆ ಮೂವರು ಮಕ್ಕಳನ್ನೂ ಕಟ್ಟಿಕೊಂಡು ಹೆಡ್ ಆಫೀಸಿಗೆ, ಯೂನಿಯನ್ ಆಫೀಸಿಗೆ ಸುತ್ತಿ ಸುತ್ತಿ ಅಂತೂ ಇಂತೂ ಹದಿನೆಂಟು ವಯಸ್ಸಿನ ಚೆಲುವಯ್ಯ ಅನುಕಂಪದ ಆಧಾರದ ಮೇಲೆ ಕೆಲಸ ಗಿಟ್ಟಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದ. ಪಿ.ಎಫ್ಫು., ಗ್ರಾಚಿಟಿ ಎಂದು ಬಂದ ಸಣ್ಣ ಮೊತ್ತವನ್ನು ಮಿಕ್ಕಿಬ್ಬರು ಮಕ್ಕಳ ಹೆಸರಲ್ಲಿರಿಸಿ ಭದ್ರಮಾಡಿದ.
ದೊಡ್ಡಚೆಲುವ ಮೆಸೆಂಜರ್ ಆಗಿದ್ದರೂ, ಚೆಲುವಯ್ಯ ಎಸ್.ಎಸ್.ಎಲ್.ಸಿ. ಪಾಸಾಗಿದ್ದರಿಂದ ಸೀದಾ ನಗದು ಗುಮಾಸ್ತೆಯಾಗಿ ಮಂಡ್ಯದ ಹತ್ತಿರದ ಕೊಡಿಯಾಲ ಶಾಖೆಯಲ್ಲಿ ನೇಮಕವಾದ. ಸಣ್ಣ ಊರಾದ್ದರಿಂದ ಹಣೆಯ ಮೇಲಿನ ನಾಮವನ್ನು ಹಾಗೇ ಕಾಪಾಡಿಕೊಂಡು, ಕನ್ನಡದಲ್ಲೇ ಮಾತಾಡಿಕೊಂಡು, ಬ್ಯಾಂಕಿನ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾ ಹಾಯಾಗಿದ್ದ.
ಹೇಗೋ ಅಂತೂ ಅರ್ಧಕ್ಕೆ ಬಿಟ್ಟಿದ್ದ ಪಿ.ಯು.ಸಿ.ಯನ್ನೂ ಮುಗಿಸಿಕೊಂಡ. ಐದು ವರ್ಷ ಅಲ್ಲೇ ಆರಾಮಾಗಿ ಕಳೆದ ಮೇಲೆ ಮಂಡ್ಯಕ್ಕೆ ವರ್ಗವಾಯಿತು. ಕೈಲಿ ಉದ್ಯೋಗವಿತ್ತು. ಕಪ್ಪಾಗಿದ್ದರೂ, ಮೇಲ್ಕೋಟೆ ಚಲುವನಾರಾಯಣನಂತೆ ಲಕ್ಷಣವಾಗಿದ್ದ. ಅತ್ತಿತ್ತ ಕಣ್ಣು ಹಾಯಿಸುವ ವಯಸ್ಸು. ಸಹೋದ್ಯೋಗಿಯೊಬ್ಬಳನ್ನು ಕಣ್ಣ ಬಲೆಯಲ್ಲಿ ಬೀಳಿಸಿಕೊಂಡು ಕಾಳು ಹಾಕತೊಡಗಿದ. ಅವಳೂ ಕಾಳನ್ನೆಲ್ಲಾ ಚೆನ್ನಾಗಿ ಮೇಯುತ್ತಾ ಖುಷಿಯಿಂದಲೇ ಇದ್ದಳು. ಅಂತೂ ಒಂದು ದಿನ ಧೈರ್ಯ ಮಾಡಿ ಅವಳ ಮುಂದೆ ಪ್ರೇಮನಿವೇದನೆ ಮಾಡಿದಾಗ, ‘ನೋಡು, ದೇವ್ರು ದಿಂಡ್ರಿಗೂ, ನಂಗೂ ಸ್ವಲ್ಪ ದೂರವೇ. ನೀನೋ, ನೋಡಕ್ಕೆ ಗರ್ಭಗುಡಿಯಿಂದ ಸೀದಾ ಎದ್ದು ಬಂದವ್ನ ಹಾಗಿರ‍್ತೀಯ. ದೇವ್ರನ್ನ ಕಂಡ್ರೆ ಭಕ್ತಿ ಬರತ್ತಷ್ಟೆ, ಲವ್ ಬರಲ್ಲ’ ಎಂದುಬಿಟ್ಟಳು.
ತಾನು ಈ ಭೂಮಿಯ ಮೇಲೆ ಕಣ್ಬಿಟ್ಟಾಗಿನಿಂದ ತನಗಂಟಿಕೊಂಡೇ ಬಂದಿರುವ ಮನೆದೇವರ ಮೊಹರನ್ನು ಒಂದು ಹೆಣ್ಣಿನ ಪ್ರೀತಿಯ ಸಲುವಾಗಿ ತ್ಯಾಗ ಮಾಡಲು ಸಾಧ್ಯವೇ? ಇವತ್ತು ದೇವರನ್ನು ಬಿಡು ಎಂದವಳು ನಾಳೆ ಇನ್ನೇನೇನನ್ನು ಕೇಳ್ತಾಳೋ, ಇವ್ಳ ಸಾವಾಸವೇ ಬೇಡ ಎಂದು ಕೈಬಿಟ್ಟ. ಆದರೂ ಹೃದಯಕ್ಕಂಟಿದ ಪ್ರೀತಿ ಅಷ್ಟು ಸುಲಭವಾಗಿ ಕಳಚಿಕೊಳ್ಳುತ್ತದೆಯೇ. ಕುಡಿಯದಿದ್ದರೂ ದೇವದಾಸನಂತಾಗಿಬಿಟ್ಟ.
ದೂರ ಹೋಗಿ ಮರೆಯೋಣವೆಂದರೆ ಈಗಿನ್ನೂ ಬಂದಿರುವ ಶಾಖೆಯಿಂದ ವರ್ಗಾವಣೆ ತೆಗೆದುಕೊಳ್ಳಲು ಈ ಕಾರಣ ಕೊಡುವುದು ಹೇಗೆ?? ಅವನ ಪುಣ್ಯಕ್ಕೋ ಎಂಬಂತೆ ಅಧಿಕಾರಿಗಳ ಬಡ್ತಿಯ ಪರೀಕ್ಷೆ ಆ ಸಮಯದಲ್ಲೇ ಬಂದು, ಬರೆದು ಪಾಸಾಗಿ, ಬಡ್ತಿಯನ್ನು ಪಡೆದುಕೊಂಡ; ಬೆಂಗಳೂರನ್ನು ಸೇರಿಕೊಂಡ. ಹೊಸ ಊರು, ಹೊಸ ಪರಿಸರ ನಿಧಾನವಾಗಿ ಚೇತರಿಸಕೊಳ್ಳತೊಡಗಿದ.

ಚಲುವಯ್ಯನ ಅದೃಷ್ಟವೇ ಅಂಥದೇನೋ..! ಒಂದು ದಿನ ಇನ್ನೇನು ಹತ್ತು ಗಂಟೆಗೆ ಎರಡು ನಿಮಿಷವಿರುವಾಗ ಕಚೇರಿಯ ನಾಲ್ಕನೆಯ ಮಹಡಿಯಲ್ಲಿರುವ ತನ್ನ ವಿಭಾಗಕ್ಕೆ ಹೋಗಲು ಲಿಫ್ಟಿನೊಳಹೊಕ್ಕು ಗುಂಡಿ ಅದುಮುತ್ತಿರುವಾಗಲೇ ಹತ್ತಡಿ ದೂರದಲ್ಲಿ ʻಬಾರೇ ಬಾರೇ ಚಂದದ ಚೆಲುವಿನ ತಾರೆʼ ಹಾಡಿನಲ್ಲಿ ಅಲಮೇಲು ಹಾರುತ್ತಾ ಬಂದಂತೆ ಪಕ್ಕದ ವಿಭಾಗದ ಶ್ರೀದೇವಿ ಓಡಿ ಬರಬೇಕೆ… ರಾಮಾಚಾರಿಯೇ ಮೈಯೊಳ ಹೊಕ್ಕಂತಾಗಿ ಇನ್ನೇನು ಹೊರಡುವುದರಲ್ಲಿದ್ದ ಲಿಫ್ಟನ್ನು ತಡೆದು ನಿಲ್ಲಿಸಿ ಅವಳು ಒಳ ಬರಲು ಅನುವು ಮಾಡಿಕೊಟ್ಟ.
ತಕ್ಕ ಮಟ್ಟಿಗೆ ಚೆಲುವಾಗೇ ಇದ್ದವಳು ‘ಥ್ಯಾಂಕ್ಯೂ ಸೋ ಮಚ್, ಯು ಸೇವ್ಡ್ ಮಿ ಫ್ರಂ ಸ್ಕೋಲ್ಡಿಂಗ್ ಟುಡೇ’ ಎಂದು ಇವನೆಡೆಗೊಂಡು ಸುಂದರ ನಗು ಬೀರಿದಳು. ಅಷ್ಟರಲ್ಲಿ ನಾಲ್ಕನೇ ಮಹಡಿ ಬಂತು. ಇವನಿಗೋ ಎರಡೆರಡು ಲಾಡು ಒಟ್ಟಿಗೇ ಬಾಯಲ್ಲಿ ಬಿದ್ದಂತಾಗಿ, ಮನದಲ್ಲೇ ಮಂಡಿಗೆ ತಿಂದು ಅಂದಿನಿಂದ ಆಗೀಗ ಪ್ರಸಂಗಗಳನ್ನು ಸೃಷ್ಟಿಸಿಕೊಂಡು ಅವಳನ್ನು ಮಾತಾಡಿಸತೊಡಗಿದ.
ಅವಳೂ ಖುಷಿಯಾಗಿ ಮಾತಾಡುತ್ತಿದ್ದಳು. ಫೇಸ್ಬುಕ್‌ನಲ್ಲಿ ಅವಳನ್ನು ಹುಡುಕಿ ಸ್ನೇಹ ಮಾಡಿಕೊಂಡ. ʻಇವತ್ತು ಸಂಜೆ ಮೆಸೆಂಜರ್‌ನಲ್ಲಿ ಮಾತಾಡೋಣ್ವಾʼ ಅಂತ ಹೇಗೆ ಕೇಳೋದು ಅಂತ ಪಕ್ಕದಲ್ಲಿದ್ದ ಸ್ನೇಹಿತನ್ನ ಕೇಳಿದ. ಅವನು, ಇವನ ಸ್ನೇಹಿತ, ತನಗೆ ತಿಳಿದಂತೆ ಹೇಳಿಕೊಟ್ಟ. ‘ಕಮ್ ಚಾಂಟಿಗ್ ಟುಡೇ ಈವ್ನಿಂಗ್?’ ಎಂದಿವನೂ ಕೇಳೇಬಿಟ್ಟ. ಅವಳಿಗೆ ತಲೆ ಬುಡ ಅರ್ಥವಾಗಲಿಲ್ಲ. ‘ವಾಟ್ ಡು ಯು ಮೀನ್?’ ಎಂದಳವಳು. ‘ಲೈಕ್ ಯು, ವಾಂಟ್ ಚಾಂಟ್ ಯು’ ಅಂದ. ಇವನ ಇಂಗ್ಲಿಷಿನ ಲೆವೆಲ್ ಅರ್ಥವಾದ ಅವಳು ಉತ್ತರಿಸದೇ ಗಪ್ಪುಚಿಪ್ಪಾದಳು. ಚಾಟಿಂಗಿಗೆ ಕರೆಯುವವಳನ್ನು ಭಜನೆಗೆ ಕರೆದರೆ ಮತ್ತೇನು ಮಾಡಾಳು! ಮತ್ತೆ ಮತ್ತೆ ಕೇಳಿದ. ಉತ್ತರವೇ ಇಲ್ಲ…
ಒಂದು ದಿನ ಎದುರು ಸಿಕ್ಕವಳನ್ನು ಹಿಡಿದು ನಿಲ್ಲಿಸಿಕೊಂಡು ‘ನಂಗೆ ನಿನ್ಕಂಡ್ರೆ ಲವ್ವಾಗಿದೆ. ಮದಿವ್ಯಾಗೋಣ್ವಾ’ ಎಂದು ಕೇಳೇ ಬಿಟ್ಟ. ಅವಳು ‘ನೀನು ಮೊದ್ಲು ಇಂಗ್ಲೀಷ್‌ನಲ್ಲಿ ನಂಗೊಂದು ಲವ್‌ಲೆಟರ್ ಬರ‍್ಕೊಡು. ಆಮೇಲ್ನೋಡೋಣ’ ಎಂದಳು. ಅವಮಾನದಿಂದ ಕುದ್ದು ಹೋದ ಚಲುವಯ್ಯ ‘ಇಂಗ್ಲೀಷ್ನಲ್ಲಿ ಬ್ಯಾರೆ ಪ್ರೀತಿ, ಕನ್ನಡ್ದಲ್ಲಿ ಬ್ಯಾರೆ ಪ್ರೀತಿ ಇರ‍್ತದೇನು? ಎಲ್ಲಾ ಒಂದೇ ಅಲ್ಲೇನು?’ ಅಂತ ದಬಾಯಿಸಿದ. ‘ನಂಗದೆಲ್ಲಾ ಗೊತ್ತಿಲ್ಲ; ಡಿಗ್ರೀನೂ ಮಾಡ್ದಿರೋ, ಇಂಗ್ಲಿಷೂ ಬರ‍್ದಿರೋ ಗಂಡುನ್ನ ಮದ್ವೆಯಾಗಲ್ಲ’ ಎಂದು ಕೈಕೊಡವಿಬಿಟ್ಟಳು.
ಮುಂದೆ ಒಂದೇ ತಿಂಗಳಲ್ಲಿ ಇಂಗ್ಲೀಷ್‌ನಲ್ಲಿ ಟಸ್‌ಪುಸ್ ಎಂದು ಮಾತಾಡುತ್ತಿದ್ದ ಇನ್ನೊಬ್ಬ ಸಹೋದ್ಯೋಗಿಯನ್ನು ಮದುವೆಯಾಗುವ ನಿರ್ಧಾರವನ್ನು ಮಾಡಿ ಲಗ್ನಪತ್ರಿಕೆ ಇವನ ಕೈಯಲ್ಲಿಟ್ಟು ‘ಮದುವೆಗೆ ಖಂಡಿತಾ ಬನ್ನಿ’ ಎಂದು ನುಲಿದು ಹೊರಟಳು.
ಇದರಿಂದ ತುಂಬಾ ಬೇಸರವಾಗಿ ಅವಳೆದುರೇ ಹೇಗಾದರೂ ಮಾಡಿ ಇಂಗ್ಲೀಷ್‌ನಲ್ಲಿ ಮಾತಾಡುವಷ್ಟನ್ನು ಕಲಿಯಲೇಬೇಕು ಎನ್ನುವ ಹಟ ತೊಟ್ಟು ಇಂಗ್ಲೀಷ್ ತರಗತಿಗೆ ಸೇರಿಕೊಂಡ. ಅಂಚೆ ತೆರಪಿನಲ್ಲಿ ಬಿ.ಎ.ಗೂ ಕಟ್ಟಿದ. ಅಂತೂ ಹಟ ತೊಟ್ಟು ಪದವಿಯನ್ನೂ ಮಾಡಿಕೊಂಡು, ತಕ್ಕಮಟ್ಟಿಗೆ ಇಂಗ್ಲೀಷನ್ನೂ ಕಲಿತ. ಇನ್ನೊಂದು ಬಡ್ತಿಯೂ ಸಿಕ್ಕಿತು.

ಹಳೆಯ ಪ್ರೇಮ ಪ್ರಕರಣಗಳೆಲ್ಲವೂ ಮರೆವಿಗೆ ಸಂದುಹೋಗಿ ‘ತನಗೆ ಹಣೆಯ ಬರಹದಲ್ಲಿ ಮದುವೆಯೆನ್ನುವುದೇ ಬರೆದಿಲ್ಲವೇನೋ’ ಎಂದು ಗೆಳೆಯನೊಡನೆ ಗೋಳನ್ನು ತೋಡಿಕೊಂಡರೆ ಅವನು ಸುಮ್ಮನಿರದೆ ‘ಹಣೇ ಮೇಲೆ ಮೂರ‍್ನಾಮ ಬರ‍್ಕೊಂಡಿದೀಯಲ್ಲ, ಇನ್ಹೆಂಗೆ ಹುಡುಗಿ ಸಿಕ್ಕಾಳ್ನಿಂಗೆ! ಪುಣ್ಯಕ್ಕೆ ಜುಟ್ಟೊಂದು ಬಿಟ್ಟಿಲ್ಲ. ಈಗೆಲ್ಲಾ ಹುಡ್ಗೀರು ಟಾಕೂಟೀಕಾಗಿರೋ ಹುಡುಗ್ರನ್ ಕೇಳೋದು. ನೀನ್ಹಿಂಗೆ ಮೇಲ್ಕೋಟೆ ದೇವ್ರತರ ನಿಂತ್ಕೊಂಡ್ರೆ ಯಾರೊಪ್ಕೋತಾರೆ? ಆಫೀಸರ್ ಅಗಿದೀ, ನಾಳೆ ಯಾವ್ದಾರೂ ದೊಡ್ಡ ಬ್ರಾಂಚಿಗೆ ಮ್ಯಾನೇಜರ್ ಆಗಿಹೋಗ್ತಿ. ಹಿಂಗ್ ದೇವ್ರೇ ಸಾಕ್ಷಾತ್ ಇಳ್ದಂಗೆ ಹೋದ್ರೆ ಸ್ಟಾಫೆಲ್ಲಾ ಕಿಸಿಕಿಸಿ ಅಂತ ನಗಲ್ವೇನು?’ ಎಂದು ಲೋಕಾರೂಢಿಯ ಮಾತನ್ನು ಹೇಳಿದ. ಚಲುವಯ್ಯನಿಗೂ ‘ಇದ್ರೂ ಇರ‍್ಬೋದೇನೋ’ ಅನ್ನಿಸಿ ‘ಈಸಲ ಮನೆದೇವರಿಗೆ ಹೋದಾಗ ಹುಂಡಿಗೆ ತಪ್ಪು ಕಾಣಿಕೆ ಹಾಕಿ ನಾಮ ಅಳಿಸಿಬಿಡಬೇಕು’ ಎಂದು ತೀರ್ಮಾನ ಮಾಡಿಕೊಂಡ.
ಇಷ್ಟು ಹೊತ್ತಿಗೆ ಇನ್ನಿಬ್ಬರು ತಮ್ಮಂದಿರೂ ತಕ್ಕಮಟ್ಟಿಗೆ ತಮ್ಮ ಕಾಲ ಮೇಲೆ ತಾವು ನಿಂತಿದ್ದರಿಂದ, ಚಲುವಯ್ಯನ ಅಜ್ಜಿ ಈ ಸಲದ ಮೇಲ್ಕೋಟೆ ಜಾತ್ರೆಯಲ್ಲಿ ಬರುವ ನೆಂಟರಿಷ್ಟರ ಪೈಕಿ ತನ್ನ ಮುದ್ದಿನ ಮೊಮ್ಮಗ ಚಲುವಯ್ಯನಿಗೊಂದು ಹೆಣ್ಣನ್ನು ಹುಡುಕಿ ಮದುವೆ ಮಾಡಲೇಬೇಕೆಂದು ತೀರ‍್ಮಾನಿಸಿದ್ದಳು. ಬಂಧು ಬಳಗಗಳಲ್ಲಿ ಹುಡುಗಿಯರ ತಲಾಶ್ ನಡೆಸಿ, ಮೂರ‍್ನಾಲ್ಕು ಹುಡುಗಿಯರನ್ನು ನಿಗಾದಲ್ಲಿಟ್ಟುಕೊಂಡಳು. ಜಾತ್ರೆಗೆ ಬಂದಿದ್ದ ಮೊಮ್ಮಗನಿಗೆ ಗುಡಿಯ ಮುಂದೊಬ್ಬಳನ್ನು, ತೇರಿನ ಮುಂದೆ ಇನ್ನೊಬ್ಬಳನ್ನು, ಕೊಳದ ದಂಡೆಯಲ್ಲಿ ಮತ್ತೊಬ್ಬಳನ್ನು, ಮೇಲಿನ ಗುಡಿಯ ಮೆಟ್ಟಿಲೇರುವಾಗ ಮಗದೊಬ್ಬಳನ್ನು ತೋರಿಸಿ ಯಾರಾಗಬಹುದೆಂದು ಕೇಳಿದಾಗ ಒಟ್ಟೊಟ್ಟಿಗೆ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರನ್ನು ಕಂಡಂತೆ ಕಕಮಕವಾಯಿತು.
ಇದುವರೆಗೂ ತನ್ನ ಆಯ್ಕೆಯಾವುದೂ ಪಾಸಾಗಲಿಲ್ಲ; ಹಾಗಾಗಿ ಈ ಸಲಕ್ಕೆ ಅಜ್ಜಿಯ ಆಯ್ಕೆಯ ಅದೃಷ್ಟ ನೋಡೋಣವೆಂದು ‘ನೀನು ಯಾರ‍್ನ ಆರಿಸ್ತೀಯೋ ಅವ್ಳ್ನೇ ಮದಿವ್ಯಾಗ್ತೀನಜ್ಜಿ’ ಎಂದಾಗ ಅಜ್ಜಿಗೆ ‘ಇಂಥಾ ಒಳ್ಳಿ ಮೊಮ್ಮೊಗ ಈ ಭೂಮ್ಯಾಗೇ ಇನ್ನಿಲ್ಲ’ ಎಂದು ಭೋಖುಸಿಯಾಗಿ ‘ಅಯ್ಯೋ ನನ್ರಾಜ. ನಿನ್ರೂಪಿಗೆ, ಇದ್ದೆಗೆ ತಕ್ಕ ಚೆಲುವಮ್ಮನ್ನೇ ತರ‍್ತೀನಿ’ ಎಂದು ನೆಟಿಕೆ ತೆಗೆದು ಮೊಮ್ಮಗನ ಮದುವೆ ನಿಶ್ಚಯ ಮಾಡಿದಳು. ಚೆಲುವಯ್ಯನಿಗೂ ʻಸಧ್ಯ ತನ್ನ ನಾಮವನ್ನು ಅಳಿಸಬೇಕಿಲ್ಲ ಎಂದು ಸಮಾಧಾನವಾಯಿತುʼ ಎನ್ನುವಲ್ಲಿಗೆ ನಮ್ಮ ಚೆಲುವಯ್ಯನ ಪ್ರೇಮಾಯಣ ಸಂಪನ್ನವಾಯಿತು. ಇದೆಲ್ಲಾ ಆ ಮೇಲ್ಕೋಟೆ ಚಲುವನಾರಾಯಣನ ಕೃಪೆಯಲ್ಲದೆ ಮತ್ತೇನು?!






Humorous !