‘ಜುಗಾರಿ ಕ್ರಾಸ್’ ಹೇಳಿ ಕೇಳಿ ಚರ್ಚೆ, ಸಂವಾದಕ್ಕೆ ಇರುವ ವೇದಿಕೆ. ಈ ಅಂಕಣದಲ್ಲಿ ‘ದೇಶ ಕಾಲ’ದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಈ ಎಲ್ಲಾ ಚರ್ಚೆಯ ಹಿನ್ನೆಲೆಯಲ್ಲಿ ನಮ್ಮ ನಡುವಿನ ಮಹತ್ವದ ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಜಾತಿ ಎಂಬ ಭೂತವನ್ನು ಬಿಡಿಸಿಟ್ಟಿದ್ದಾರೆ, ಚರ್ಚೆಗೆ ಸ್ವಾಗತ
ಮೇಲ್ಜಾತಿ(?)ಯ ಮಂದಿ ತಮ್ಮ ತಮ್ಮ ಜಾತಿಯ ಬಗ್ಗೆ ಹೆಮ್ಮೆಪಡುವ ಕಾಲ ಒಂದಿತ್ತು. ತಾನು ಜೈನ ಧರ್ಮೀಯ ಎಂಬ ಬಗ್ಗೆ ಪಂಪನಿಗೆ ಅಂಥ ಹೆಮ್ಮೆ ಇದೆ. ಅವನ ತಂದೆ ಹೊಸದಾಗಿ ಜೈನ ಧರ್ಮಕ್ಕೆ ಮಾತಾಂತರಗೊಂಡವರು. ಪಂಪನಿಗೆ ತನ್ನ ತಾತನ ವೈದಿಕ ಧರ್ಮದ ಬಗ್ಗೆ ಕೂಡ ಅಭಿಮಾನ! ಆದರೆ ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಜಾತಿಯು ಮೇಲುಕೀಳನ್ನು ಸೃಷ್ಟಿಸುವ ಬಗ್ಗೆ ಸ್ಪಷ್ಟ ವಿರೋಧವಿದೆ.ಇದು ಒಂದು ಅಂತರ್ವಿರೋಧವೇ? ಎರಡೂ ನಿಲುವಿನಲ್ಲೂ ಪಂಪನ ಭಾಷೆಯಲ್ಲಿ ವ್ಯಕ್ತವಾಗುವ ಪ್ರಾಮಾಣಿಕತೆಯ ದನಿ ನೋಡಿದರೆ ಇದು ಅಂತರ್ವಿರೋಧವಿರಲಾರದು.
ಪ್ರತಿಯೊಬ್ಬರೂ ತಮ್ಮ ತಮ್ಮ ಜಾತಿ(ಧರ್ಮ)ಪದ್ಧತಿಗಳನ್ನು ಆಚರಿಸಿಕೊಂಡು ಹೋದಲ್ಲಿ ತಪ್ಪಿಲ್ಲ. ಆದರೆ ತಮ್ಮ ಜಾತಿ ಮೇಲು ಇನ್ನೊಬ್ಬರದು ಕೀಳು ಎಂದು ನಂಬಿ ತನ್ನದಲ್ಲದ ಜಾತಿಯವರನ್ನು ಕೀಳಾಗಿ ಕಾಣುವುದಾಗಲೀ, ಅವಮಾನಿಸುವುದಾಗಲೀ ಪಂಪನಿಗೆ ಸಹ್ಯವಾಗುವುದಿಲ್ಲ. ಹೀಗೆ ವಿಚಾರ ಮಾಡುವ ಮಂದಿ ಈವತ್ತೂ ಬೇಕಾದಷ್ಟು ಸಂಖ್ಯೆಯಲ್ಲಿ ಇದ್ದಾರೆ. ಲೇಖಕರಲ್ಲೂ ಕೂಡ.

ಮಾಸ್ತಿ, ಪುತಿನ ಅವರಂಥ ಹಿರಿಯ ಲೇಖಕರನ್ನು ಗಮನಿಸಿ. ಅವರೆಲ್ಲಾ ಜಾತಿಯ ಕಟ್ಟುಪಾಡಲ್ಲಿ ಬದುಕಿದವರೇ. ಜಾತಿಯು ವಿಧಿಸುವ ಆಚರಣೆಗಳನ್ನು ಯಾವತ್ತೂ ಬಿಟ್ಟವರಲ್ಲ. ಜಾತಿ ವಿಧಿಸುವ ಲಾಂಚನಗಳನ್ನು ತಪ್ಪದೆ , ಮತ್ತು ನಿಸ್ಸಂಕೋಚದಿಂದ ಧರಿಸಿದವರು. ಆದರೆ ಅವರನ್ನು ಜಾತಿವಾದಿಗಳೆಂದು ಪೊರಕೆ ಹೇಳಿಕೆ ಮಾಡುವುದು ಕಷ್ಟ. ಅನ್ಯಧರ್ಮೀಯರನ್ನೂ(ಜಾತಿಬಾಂಧವರನ್ನು) ಹೇಗೆ ಅವರು ತಮ್ಮ ಒಳಬಾಳಿಗೆ ತೆಗೆದುಕೊಂಡಿದ್ದರು ಎಂಬುದನ್ನು ಬಲ್ಲವರೇ ಬಲ್ಲರು. ಅವರ ಬರವಣಿಗೆಯಲ್ಲಿ ಕೂಡ ಜಾತಿಯ ಅಹಂಕಾರ ಟೀಕೆಗೆ ಗುರಿಯಾಗಿದೆ. ಜಾತಿಯ ಅಹಮ್ಮಿನ ಬಗ್ಗೆ ನಾಚಿಕೆಯ ಭಾವ ಕೂಡ ಇದೆ. ಶೂದ್ರತಪಸ್ವಿಯ ಚರ್ಚೆಯ ಸಂದರ್ಭದಲ್ಲಿ ಮತ್ತೆ ಜಾತಿಯ ಭೂತಕ್ಕೆ ಧೂಪ ಹಾಕುವುದು ಬೇಡ ಎಂಬುದೇ ಮಾಸ್ತಿಯವರ ನಿಲುವು. ಮಾಸ್ತಿಗೆ ಅದು ಯುಕ್ತವಾದ ನಿಲುವೇ.
ಜಾತೀಯ ಭಾವನೆಗಳಿಂದ ಅವಮಾನಿತರೂ ನೊಂದವರೂ ಆದ ಕುವೆಂಪು ಕಹಿನೆನಪುಗಳನ್ನು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಮರೆತಂತೆ ತೇಲಿಸಿ ಬರೆದರೆ ಅದು ಕೇವಲ ಮುಖವಾಡದ ಮಾತಾದೀತು. ಮರೆಯಲಾರೆವು, ಮರೆಯಿರಿ ಎಂಬೆರಡು ನಿಲುವುಗಳ ನಡುವಿನ ಘರ್ಷಣೆಯಂತಿದೆ ಶೂದ್ರತಪಸ್ವಿಯ ಸಂದರ್ಭ. ವರ್ಣಾಶ್ರಮಗಳನ್ನು ಹೊಡೆಯಲಿಕ್ಕೆ ಹೊರಟ ವೀರಶೈವವೂ ಭವಿಗಳ ಬಗ್ಗೆ ತಾಳುವ ಧೋರಣೆ ಜಾತೀಯತೆಯನ್ನೇ ಚೋದಿಸುವಂಥದಾಗಿದೆ.
ಬೇರೆ ಯಾವ ಧರ್ಮವೂ ಅದಕ್ಕೆ ಅಪವಾದವೇನಲ್ಲ. ವೈದಿಕ ಧರ್ಮದ ಚೌಕಟ್ಟಲ್ಲೇ ಬರುವ ಉಪಜಾತಿಗಳ ನಡುವಿನ ಅಸಹಿಷ್ಣು ಭಾವ ಅಸಹ್ಯ ಹುಟ್ಟಿಸುವಂತಿದೆ. ಸಿಡಿಲು ಹೊಡೆದರೂ ಶಿವಾಲಯಕ್ಕೆ ಹೋಗಬಾರದೆನ್ನುವ ವೈಷ್ಣವರ ನಿಲುವನ್ನು ಇಲ್ಲಿ ನೆನೆಯಬಹುದು. ಇದೇನು ಹಳೆಯ ಕಥೆಯಲ್ಲ. ಈಗಲೂ ಕೂಡ ಬದರಿಗೆ ತೀರ್ಥಯಾತ್ರೆಗೆ ಹೋದ ಸಂಪ್ರದಾಯವಂತ ವೈಷ್ಣವರು ಕೇದಾರಕ್ಕೆ ಹೋಗುವುದಿಲ್ಲ. ಕೇದಾರಕ್ಕೆ ಹೋಗಿ ಶಿವ ದರ್ಶನ ಮಾಡಿದ್ದೇ ಆದರೆ ಬದರೀ ಯಾತ್ರೆಯ ಪುಣ್ಯ ನಾಶವಾಗುವುದು ಎಂಬುದು ಅವರಲ್ಲಿ ಬೇರೂರಿರುವ ನಂಬಿಕೆ.
ನಾವು ತ್ಯಾಗರಾಜನಗರದಲ್ಲಿ ವಾಸವಾಗಿದ್ದಾಗ ನನ್ನ ಪತ್ನಿಗೆ ಬಹಳ ಆತ್ಮೀಯರಾದ ಗೆಳತಿಯೊಬ್ಬರಿದ್ದರು. ಆ ಗೆಳೆತನ ಅವರ ಬಾಲ್ಯಕಾಲದಿಂದ ಬಂದದ್ದು. ಶೈವರಾದ ನಮ್ಮ ಮತ್ತು ವೈಷ್ಣವರಾದ ಅವರ ಮನೆಯ ನಡುವೆ ತುಂಬಾ ಅನ್ಯೋನ್ಯವಾದ ಭಾವವಿತ್ತು. ಪರಸ್ಪರ ಕಷ್ಟ ಸುಖದಲ್ಲಿ ಒಬ್ಬರೊಗೊಬ್ಬರು ಆಸರೆಯಾಗುವುದು ನಡೆದುಕೊಂಡು ಬರುತ್ತಾ ಇತ್ತು. ಆಗೆಲ್ಲಾ ಮಾಧ್ವ -ಸ್ಮಾರ್ತ ಭಾವನೆ ನಮ್ಮನ್ನು ಎಂದೂ ಕಾಡಿದ್ದಿಲ್ಲ. ಒಂದು ರಾತ್ರಿ ನಮ್ಮ ಮನೆಯವರ ಗೆಳತಿ ನಮ್ಮ ಮನೆಗೆ ಬಂದಾಗ ನಮಗೆ ಯಾರೋ ಶಂಕರಾಚಾರ್ಯರ ಫೋಟೋ ಕೊಟ್ಟಿದ್ದಾರೆ ಕಣ್ರೀ…ನೀವು ಬೇಕಾದರೆ ತೆಗೆದುಕೊಂಡು ಹೋಗಿ ಅಂದರು. ಸರಿ…ನಾನು ಆ ಫೋಟೊ ತೆಗೆದುಕೊಳ್ಳುತ್ತೇನೆ ಎಂದರು ನನ್ನ ಪತ್ನಿ. ಮಾರನೆ ಬೆಳಿಗ್ಗೆ ವೈಷ್ಣವ ದಂಪತಿಗಳ ಮನೆಗೆ ನನ್ನ ಪತ್ನಿ ಹೋಗಿ ಫೋಟೋ ಕೊಡಿ ಎಂದರೆ ಫೋಟೋನ ಗೇಟಿನ ಹೊರಗೇ ಆ ವೈಷ್ಣವಿ ಇಟ್ಟಿದ್ದರಂತೆ. ಶಂಕರಾಚಾರ್ಯರ ಫೋಟೋ ಮನೆಯ ಒಳಗೆ ಒಯ್ಯುವುದೂ ಆಕೆಗೆ ಸಾಧ್ಯವಾಗಿರಲಿಲ್ಲ!
ತಾನು ಆಕಸ್ಮಿಕವಾಗಿ ಹುಟ್ಟಿದ ಜಾತಿಯ ಬಗ್ಗೆ ತೀವ್ರ ವಿರೋಧೀಭಾವ ವ್ಯಕ್ತಪಡಿಸಿದ ವ್ಯಕ್ತಿ ಬಸವೇಶ್ವರ. ತಾನು ಉಚ್ಚವರ್ಣದವನು ಎಂದು ಯಾರಾದರೂ ಅಂದರೆ ಆತನಿಗೆ ತೀವ್ರವಾದ ಗಿಲ್ಟ್ ಕಾಡತೊಡಗುತ್ತದೆ. ಇದು ನಿಜವಾದ ಆಧುನಿಕ ಮನಸ್ಸು. ತನ್ನನ್ನು ಯಾರಾದರೂ ಬ್ರಾಹ್ಮಣ ಎಂದು ಗುರುತಿಸುವುದನ್ನು ಬಸವಣ್ಣ ಸಹಿಸುವುದಿಲ್ಲ. ಸಮಾಜದ ಅತ್ಯಂತ ಕೆಳಸ್ತರದ ವರ್ಣಗಳೊಂದಿಗೆ ತನ್ನನ್ನು ಸಂಬಂಧಿಸಿಕೊಳ್ಳಲು ಬಸವಣ್ಣ ಬಯಸುತ್ತಾನೆ. ಪಂಪನಿಂದ ಬಸವಣ್ಣನ ಬಳಿಗೆ ಬರುವಷ್ಟರಲ್ಲಿ ಆದ ಪಲ್ಲಟವಿದು. ಶ್ಲಾಘ್ಯವಾದ ಪಲ್ಲಟ. ಇಷ್ಟಾಗಿಯೂ ನಮ್ಮ ಸಾವಿರ ವರ್ಷದ ಸಾಹಿತ್ಯ ಜಾತಿ ಮತ್ತು ಧರ್ಮದಿಂದ ಅಬಾಧಿತವಾದುದು ಎನ್ನುವಂತೆ ಇಲ್ಲ. ಅಲ್ಲಿ ಸ್ವಧರ್ಮ ಶ್ರದ್ಧೆ ಮಾತ್ರವಲ್ಲ, ಪರಮತ ಅಸಹಿಷ್ಣು ಭಾವ ಢಾಳಾಗಿ ಕಾಣುತ್ತದೆ. ಅದರ ಪ್ರತೀಕಾತ್ಮಕ ಅಭಿವ್ಯಕ್ತಿಯೆಂದರೆ ಜೈನರೂ, ವೀರಶೈವರೂ, ಶೈವರೂ, ವೈಷ್ಣವರೂ ತಮ್ಮ ತಮ್ಮ ದೈವಗಳ ನಡುವೆ ಏರ್ಪಡಿಸುವ ಜಿದ್ದಾಜಿದ್ದಿ.
ಒಬ್ಬರು ಮತ್ತೊಬ್ಬರನ್ನು ಮಣ್ಣುಮುಕ್ಕಿಸುವಂತೆ ಮಾಡುವ ಕಥಾಪ್ರಸಂಗಗಳ ಸೃಷ್ಟಿ. ಇದು ಕೆಲವು ಬಾರಿ ನಾಚಿಕೆ ಮತ್ತು ಹೇಸಿಗೆ ತರಿಸುವ ಸಂಗತಿಯಾಗುತ್ತದೆ. ಇಪ್ಪತ್ತನೇ ಶತಮಾನದಲ್ಲಿ ಒಂದು ತಂಗಾಳಿ ಬೀಸಿದಂತೆ ಜಾತಿನಿರಪೇಕ್ಷಭಾವ ಪ್ರಸರಿಸಿತೆನ್ನಬೇಕು. ನವೋದಯದ ಕಾಲದಲ್ಲಿ ಜಾತಿಯ ಒಳಸುಳಿಗಳು ತೀರ ಮಾಯವಾಗಿದ್ದವು ಎನ್ನುವಂತಿಲ್ಲವಾದರೂ, ಜಾತಿಯ ಹೆಸರೆತ್ತಿ ಮಾತಾಡುವುದು ಮುಜುಗರದ ಸಂಗತಿಯಾಗಿ ಪರಿಣಮಿಸಿದ್ದಂತೂ ಸುಳ್ಳಲ್ಲ.
ಇಪ್ಪತ್ತನೇ ಶತಮಾನದಲ್ಲಿ ಜಾತಿಯ ಹೆಸರು ಹೇಳಿ ಸಾಹಿತ್ಯವನ್ನು ಗುರುತಿಸಲಿಕ್ಕೆ ಬರುವುದಿಲ್ಲ ಅನ್ನುವುದು ಸಮಾಧಾನ ತರುವ ಸಂಗತಿ. ಅಲ್ಲಿ ಕುವೆಂಪು, ಬೇಂದ್ರೆ, ಮಧುರಚೆನ್ನ, ಮಾಸ್ತಿ, ಕಾರಂತ, ಎಲ್ಲರೂ ಕನ್ನಡ ಕಟ್ಟುವ ಕೆಲಸದಲ್ಲಿ ಹೆಗಲಿಗೆ ಹೆಗಲು ಹಾಕಿ ದುಡಿದಿದ್ದಾರೆ. ಬ್ರಾಹ್ಮಣ, ಲಿಂಗಾಯತ, ಶೂದ್ರ, ಮುಸ್ಲಿಮ್, ಕಿರಿಸ್ತಾನ ಧರ್ಮದ ಲೇಖಕರೆಲ್ಲಾ ಒಂದೇ ಕಾಲದಲ್ಲಿ ಕನ್ನಡದ ನವೋದಯದ ಕನಸು ಕಾಣುತ್ತಾ, ನವಕರ್ನಾಟಕಕ್ಕೆ ಕನವರಿಸುತ್ತಾ ದುಡಿದ ಚೇತೋಹಾರಿ ದೃಶ್ಯ ನಮಗೆ ಕಾಣುತ್ತದೆ. ನವೋದಯ ಸಂದರ್ಭದಲ್ಲಿ ಜಾತಿಯ ಪ್ರಕಟ ಒಳ ಭೇದಗಳಿಲ್ಲ. ಸಾರ್ವಜನಿಕವಾಗಿ ನಾವು ಜಾತಿಯ ಹೆಸರು ಹೇಳಿಕೊಂಡು ರಾಜಕೀಯ ಮಾಡುವುದಿಲ್ಲ ಎನ್ನುವುದೂ ಕೂಡ ತಕ್ಕಮಟ್ಟಿಗಿನ ಶ್ಲಾಘ್ಯವಾದ ನಿಲುವೇ.
ಪ್ರಗತಿಶೀಲ ಚಲುವಳಿಯ ಸಂದರ್ಭದಲ್ಲೂ ನಾವು ಜಾತಿಗಳಿಂದ ಸಿಡಿದು ದೂರ ನಿಲ್ಲುವ ಲೇಖಕ ಸಮುದಾಯವನ್ನು ನೋಡುವುದಿಲ್ಲ. ಅನಕೃ, ಕಟ್ಟೀಮನಿ, ಚದುರಂಗ, ನಿರಂಜನಬೇರೆ ಬೇರೆ ಜಾತಿಪಂಥದವರಾಗಿದ್ದೂ ಅವರೆಲ್ಲಾ ಜಾತಿಕಟ್ಟಿಗೆ ಮೀರಿದ ಯಾವುದೋ ಆದರ್ಶಕ್ಕಾಗಿ ಒಟ್ಟಾಗಿ ದುಡಿದವರಂತೆ ಕಾಣುತ್ತಾರೆ. ಕೊನೆಕೊನೆಯಲ್ಲಿ ನಿರಂಜನ ಮತ್ತು ಅನಕೃ ನಡುವೆ ಉಂಟಾದ ಘರ್ಷಣೆ ಜಾತಿ ಮೂಕ್ಕಿಂತ ಹೆಚ್ಚಾಗಿ ಅಹಂಪ್ರಜ್ಞೆಯ ಜಗಳವೆನ್ನುವಂತೆಯೇ ನನಗೆ ತೋರುತ್ತದೆ.
ನವ್ಯ ಸಂದರ್ಭ ಕುರಿತಂತೆಯೂ ಇದು ಸತ್ಯ. ಅಡಿಗರೊಂದಿಗೆ ಕೈ ಜೋಡಿಸಿದವರಲ್ಲಿ ರಾಮಚಂದ್ರಶರ್ಮ, ಅನಂತಮೂರ್ತಿ, ಸುಮತೀಂದ್ರ ನಾಡಿಗ ಮೊದಲಾದ ಬ್ರಾಹ್ಮಣರಿರುವಂತೆಯೇ, ತೇಜಸ್ವಿ, ಲಂಕೇಶ್, ದೇಸಾಯಿ, ಚನ್ನಯ್ಯ ಮೊದಲಾದ ಅ ಬ್ರಾಹ್ಮಣರೂ ಇದ್ದಾರೆ. ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಎಂದು ಲಂಕೇಶ್ ಮೊದಲು ಹೇಳಿದಾಗ ಇದ್ದ ಅರ್ಥ ಅದೇ ವಾಕ್ಯವನ್ನು ಎರಡನೇ ಬಾರಿ ಅವರು ವ್ಯಂಗ್ಯದ ಲೇಪನ ಹಚ್ಚಿ ಬಳಸಿದಾಗ ಆ ನಡುವಿನ ಕಾಲದ ಪಲ್ಲಟದ ಸೂಚನೆಯನ್ನು ನೀಡಬಹುದು.
ಆಮೇಲೆ ಬ್ರಾಹ್ಮಣ ವಿರೋಧೀ ಚಲುವಳಿಯೊಂದು ಪ್ರಾರಂಭವಾದುದು ಈಗ ಇತಿಹಾಸದ ಸಂಗತಿ. ರುಜುವಾತಿನ ಮೊದಲ ಸಂಗ್ರಹ ಬಂದಾಗ ಲಂಕೇಶ್ ತಮ್ಮ ಪತ್ರಿಕೆಯ ಸಂಪಾದಕೀಯದಲ್ಲಿ ರುಜುವಾತಲ್ಲಿ ಎಷ್ಟು ಜನ ಬ್ರಾಹ್ಮಣ ಲೇಖಕರಿದ್ದಾರೆ ಎಂದು ತಲೆ ಎಣಿಸಿದ್ದು ನೆನಪಾಗುತ್ತಿದೆ. ಮುಂದೆ ದಲಿತ ಬಂಡಾಯ ಚಲುವಳಿಗಳು ಜಾತಿ ಧರ್ಮಗಳ ಬಗ್ಗೆ ಅವುಗಳ ರಾಜಕೀಯ ಹುನ್ನಾರಗಳ ಬಗ್ಗೆ ನಿಸ್ಸಂಕೋಚದಿಂದ ಮಾತಾಡ ತೊಡಗಿದ್ದನ್ನು ನಾವು ನೋಡುತ್ತೇವೆ. ವಿಮರ್ಶೆಯಲ್ಲಿ ಮಾತ್ರವಲ್ಲ, ಸೃಜನಶೀಲ ಕೃತಿಗಳಲ್ಲೂ ಜಾತಿಯ ಧ್ವನಿ ಸ್ಪಷ್ಟವಾಗಿ ಕೇಳ ತೊಡಗಿದ್ದನ್ನು ಯಾರೂ ಗಮನಿಸಬಹುದು.
ಅನೇಕ ವರ್ಷಗಳ ಒಳಗುದಿ, ಅಮಾನುಷವಾದ ಶೋಷಣೆಯ ಫಲ ಇದೆನ್ನಬೇಕು. ದಲಿತ ಕವಿ ಸಿದ್ಧಲಿಂಗಯ್ಯನವರ ಕೋಪ ಸಕಾರಣವಾದುದೂ ಸಹಜವಾದುದೂ ಆಗಿತ್ತು. ಕನ್ನಡ ಸಾಹಿತ್ಯ ಪ್ರಪಂಚವನ್ನು ಒಮ್ಮೆ ಅದು ಹಿಡಿದು ಅಲ್ಲಾಡಿಸಿದ್ದೂ ಕೂಡ ಈಗ ಐತಿಹಾಸಿಕ ಸತ್ಯ. ಪಾಪಪ್ರಜ್ಞೆ ಮತ್ತು ಶೋಧಕ ನೆಲೆಯಲ್ಲಿ ಮೇಲ್ಜಾತಿಯ ಜನ ಬರೆಯುವುದು ಅನಿವಾರ್ಯವಾದ ಸಂದರ್ಭವಿದು. ಈಗ ನಮಗೆ ಆದರ್ಶ ಪಂಪನಲ್ಲ; ಬಸವಣ್ಣ.
ಜಾತಿಯ ಕಿಡಿಗೇಡಿತನಗಳನ್ನು ಟಿಕಿಸುವ ಲೇವಡಿಮಾಡುವ ಪ್ರವೃತ್ತಿ ಕಾರ್ಯಕಾರಣ ಫಲವೆಂದೇ ನಾನು ಭಾವಿಸುತ್ತೇನೆ. ಆದರೆ ಈ ವರೆಗೂ ಹಾಗೆ ಟೀಕಿಸುವ ಲೇಖಕರು ಬ್ರಾಹ್ಮಣರು ಬರೆದ ಗುಣಮಟ್ಟದ ಸಾಹಿತ್ಯ ಅಸಾಹಿತ್ಯ ಎಂದು ನೇತೀವಾದಕ್ಕೆ ಇಳಿದದ್ದು ನಾನು ನೋಡಿರಲಿಲ್ಲ. ಈಗ ಸಾರಾಸಗಟಾಗಿ ಇವನು ಈ ಜಾತಿಯವನೋ? ಹಾಗಾದರೆ ಅವನ ಮೇಲೆ ನಿರ್ಯೋಚನೆಯಿಂದ ಮಣ್ಣು ಎಳಿ ಎನ್ನುವ ಧೋರಣೆ ನಮ್ಮ ಆಕ್ರೋಷಿತ ಯುವಜನಾಂಗದಲ್ಲಿ ಕಂಡು ಬರುತ್ತಾ ಇದೆ.
ಜಾತಿಯ ಕಾರಣ ಹಿಡಿದು ಯಾರಾದರೂ ಕುಮಾರವ್ಯಾಸ, ಪುರಂದರ, ಕಾರಂತ, ಬೇಂದ್ರೆ, ಪುತಿನ, ಕೆ ಎಸ್ ನ , ಅಡಿಗರನ್ನು ದೂರ ಇಡುವುದಾದರೆ , ಒಂದು ವರ್ಗ ನಿರ್ಮಿಸುವ ಒಟ್ಟು ಸಾಹಿತ್ಯದ ಬಗ್ಗೆಯೇ ಅರುಚಿಯನ್ನು ಬೆಳೆಸಲು ಇನ್ನೊಂದು ವರ್ಗ ಫಣ ತೊಡುವುದಾದರೇ ಅದು ನಿಜಕ್ಕೂ ಬಹಳ ದೊಡ್ಡ ಸಾಹಿತ್ಯಕ ದುರಂತ ಎಂದೇ ನಾನು ಭಾವಿಸುತ್ತೇನೆ.
ಪುತಿನ ಯಾವಾಗಲೂ ಹೇಳುತ್ತಿದ್ದರು,ಲೇಖಕರಲ್ಲಿ ಗುಂಪುಗಳಿರಲಿ, ಆ ಗುಂಪುಗಾರಿಕೆ ಸಾಹಿತ್ಯದ ವೈವಿಧ್ಯವನ್ನು ಬೆಳೆಸುತ್ತದೆ. ಆದರೆ ಓದುಗರಲ್ಲಿ ಗುಂಪುಗುಳಿತನ ಇರಕೂಡದು. ಆ ಗುಂಪುಗಾರಿಗೆ ಒಂದು ಸಂಸ್ಕೃತಿಯನ್ನೇ ಹಾಳುಗೆಡಹುತ್ತದೆ. ನಾವು ಈಗ ಹಿಡಿದಿರುವುದು ಓದುಗರನ್ನು ವರ್ಗೀಕರಿಸುವ ಅಪಾಯಕಾರಿ ದಾರಿಯನ್ನು. ಬೇಂದ್ರೆ, ಕುವೆಂಪು ಇವರನ್ನು ಕನ್ನಡ ಸಂಸ್ಕೃತಿ ನಿರ್ಮಿಸಿದ ಘನವಾದ ಎರಡು ಸಾಹಿತ್ಯಕ ಪ್ರತಿಮೆಗಳೆಂದು ನಾವು ಗ್ರಹಿಸುವುದಾದಲ್ಲಿ, ಈ ಎರಡು ಪ್ರತಿಮೆಗಳನ್ನು ಆರಾಧಿಸದ ಸಾಹಿತ್ಯ ಪ್ರಜ್ಞೆ ಕೊನೆಗೂ ಅಪೂರ್ಣವಾಗಿಯೇ ಉಳಿಯುತ್ತದೆ. ವಿವೇಕಶಾನಭಾಗರ ’ದೇಶಕಾಲ’ ವಿಶೇಶ ಸಂಚಿಕೆಯನ್ನು ಕುರಿತು ನಡೆಯುತ್ತಿರುವ ಚರ್ಚೆ ಈ ನೆಲೆಯಲ್ಲಿ ನಡೆಯಬೇಕಾಗಿದೆ
.





ಪುತಿನ ಯಾವಾಗಲೂ ಹೇಳುತ್ತಿದ್ದರು,ಲೇಖಕರಲ್ಲಿ ಗುಂಪುಗಳಿರಲಿ, ಆ ಗುಂಪುಗಾರಿಕೆ ಸಾಹಿತ್ಯದ ವೈವಿಧ್ಯವನ್ನು ಬೆಳೆಸುತ್ತದೆ. ಆದರೆ ಓದುಗರಲ್ಲಿ ಗುಂಪುಗುಳಿತನ ಇರಕೂಡದು. ಆ ಗುಂಪುಗಾರಿಗೆ ಒಂದು ಸಂಸ್ಕೃತಿಯನ್ನೇ ಹಾಳುಗೆಡಹುತ್ತದೆ. ನಾವು ಈಗ ಹಿಡಿದಿರುವುದು ಓದುಗರನ್ನು ವರ್ಗೀಕರಿಸುವ ಅಪಾಯಕಾರಿ ದಾರಿಯನ್ನು
really a point to ponder,
thanks, hsv sir,
hechchu savi sir, your views are thought provoking… the experience I have while reading a “malegalalli madumagalu” or a “karvalo” will remain the same even if the books are published without the author’s name…. forget about his cast… that ‘divine experience’ is mine and only mine… no one can take it away from a reader.
deshakalada hinnele: jatiyemba bhootada hinde lekhana adbhutavagide
>>ಸಿಡಿಲು ಹೊಡೆದರೂ ಶಿವಾಲಯಕ್ಕೆ ಹೋಗಬಾರದೆನ್ನುವ ವೈಷ್ಣವರ ನಿಲುವನ್ನು ಇಲ್ಲಿ ನೆನೆಯಬಹುದು<<
ಶಿವರಾತ್ರಿಯ ದಿನ ವೈಷ್ಣವರೂ ಶಿವಾಲಯಕ್ಕೆ ಹೋಗುತ್ತಾರೆ ಎಂದು ಕೇಳಿದ್ದೆ..ಹೋಗಲ್ಲವೇ?
ಸರ್,
ದೇಶ ಕಾಲದ ಸ೦ಗತಿಯನ್ನು ಭಿನ್ನ ರೀತಿಯಲ್ಲಿ ಯೋಚಿಸುವ೦ತೆ ಪ್ರೇರೇಪಿಸಲು ತಾವು ನೀಡಿರುವ ಸೈದ್ದಾ೦ತಿಕ ನೆಲೆಗಟ್ಟಿಗೆ ಧನ್ಯವಾದಗಳು.
ಭಾರತೀಯ ಜಾತಿ ಪದ್ದತಿ ವರ್ಣವ್ಯವಸ್ಥೆಯ ಅವಿಭಾಜ್ಯ ಅ೦ಗ ಎನ್ನುವುದನ್ನು ಪ್ರಜಾತ೦ತ್ರವಾದಿಗಳೂ ಮತ್ತು ಮಾನವತೆಯ ಆಶಯವನ್ನು ಹೊ೦ದಿರುವ ಎಲ್ಲರೂ ಒಪ್ಪಿಕೊ೦ಡಿರುವ ವಾಸ್ತವ ಸತ್ಯ. ಈ ಹೊತ್ತು ಜಾತೀಯತೆಯ ಕರಾಳ ಛಾಯೆ ಏಕಕಾಲದಲ್ಲಿ ಸೃಷ್ಯ ಮತ್ತು ಅಸೃಷ್ಟ್ಯರ ನಡುವಿನ ಗೊ೦ದಲಗಳನ್ನು ದ್ವೇಶ ಅಸೂಯೆ ಅ೦ಶವನ್ನು ಹೆಚ್ಚು ಮಾಡುವಲ್ಲಿ ನಮ್ಮ ಸಾ೦ಸ್ಕೃತಿಕ ಮತ್ತು ಸಾಮಾಜಿಕ ವಾಸ್ತವಗಳನ್ನು ಅವಲೋಕಿಸಿದರೆ ಅರ್ಥವಾದೀತು. ಪ೦ಪನ ಕಾಲದಿ೦ದ ಆಧುನಿಕ ಮತ್ತು ಅಧುನೀಕೋತ್ತರ ಕನ್ನಡ ಸಾಹಿತ್ಯ ಪ್ರಪ೦ಚ ಇ೦ಥ ಅಮಾನವೀಯ ಸ೦ಗತಿಗಳನ್ನು ಸೂಕ್ಶ್ಮ ನೆಲೆಯಲ್ಲಿ ತನ್ನದೇ ಬದ್ದ ವೈಚಾರಿಕ ಪರಿಧಿಯೊಳಗೆ ಹರಿದುಬರುವ೦ತೆ ಮುಕ್ತ ಅವಕಾಶ ಮಾಡಿಕೊಟ್ಟಿರುವುದು ಈ ನೆಲದ ಭಿನ್ನ ಸಾಧ್ಯತೆಗಳಿಗಿರುವ ಪರ್ಯಾಯದ ಬಾಗಿಲು ಎ೦ದೇ ನಾನು ಭಾವಿಸುತ್ತೇನೆ. ಹೀಗಿರುವಾಗಲೂ..ಶ್ರೇಷ್ಟ ಮತ್ತು ಕನಿಷ್ಟ ಎ೦ಬ ತಿಳಿವು ಹಾಗೂ ನ೦ಬಿಕೆ:ಆಚರಣೆಗಳು ಪ್ರತಿಯೊ೦ದು ಸಮುದಾಯದ ಹಾಗೂ ಕುಲಗಳ ನಡುವೆ ..ಇನ್ನೂ ಗಟ್ಟಿಗೊಳ್ಳುತ್ತಿರುವುದು ಯಾವುದರ ಸ೦ಕೇತ. ದುಡಿಮೆ ಮತ್ತು ಅವಕಾಶಗಳೆರಡನ್ನೂ ನಿರಾಕರಿಸಿ…ಜಾತಿಶ್ರೇಷ್ಟ ಎ೦ಬ ಮೌಲ್ಯ ಮತ್ತು ಭಾವನೆಯನ್ನು ನಯವಾಗಿ ಪ್ರತಿಪಾದಿಸುತ್ತಿರುವ ಕೆಲವರ ಬಗ್ಗೆ ಅತೀವ ದು:ಖ ಮತ್ತು ಬೇಸರವಾಗುತ್ತದೆ. ಹಾಗಾಗಿ, ದೇಶ ಕಾಲದ ಕುರಿತು ಪ್ರತಿಕ್ರಿಯೆ ಬರೆಯುವ ಮುನ್ನ ನನಗೆ ಮುಖ್ಯವೆನ್ನಿಸಿದ್ದು..ಇತ್ತೀಚೆಗೆ ಹಾವೇರಿ ಸವಣೂರಿನ ಭ೦ಗಿ ಜನರ ಮೇಲಿನ ದೌರ್ಜನ್ಯ , ರಾಮನಗರದ ಅ೦ಕನಹಳ್ಳಿಯ ಸವರ್ಣಿಯರಿ೦ದ ದಲಿತ ಸಮುದಾಯಗಳ ಬಹಿಷ್ಕಾರ- ಈ ಕುರಿತು ಸಾಹಿತ್ಯ ಪ್ರಪ೦ಚ ಮತ್ತು ಮಾಧ್ಯಮ ಪ್ರಪ೦ಚ ಸ್ಪ೦ದನೆ ನೀಡಿದ ರೀತಿ….ಅಥವಾ ಬಹಿರ೦ಗವಾಗಿ ಈ ಕುರಿತು ಚರ್ಚೆ ನಡೆಯದಿರುವುದಕ್ಕೆ ಕಾರಣಗಳೇನಿರಬಹುದು ಎ೦ದು ಎಲ್ಲ ಪ್ರ್ಜಜ್ನ್ಯಾವ೦ತರೂ ಯೋಚಿಸಬೇಕಿದೆ. ಆಯಾ ಕಾಲಘಟ್ಟದ ವರ್ತಮಾನದ ಸ೦ಗತಿಗಳೇ ಸಾಹಿತ್ಯದ ಪರಿಕರಗಳೂ ಆಗಬೇಕಿದ್ದು..ಅದು ಕೇವಲ ಕೆಲವರಿಗಷ್ಟೇ ಸೀಮಿತವಾಗಿಬಿಡುವ ಬಗ್ಗೆ ಆತ೦ಕ ಹೆಚ್ಚಾಗುತ್ತಿದೆ. ಇದನ್ನು ನವೋದಯ..ಪ್ರಗತಿಶೀಲ ಅಥವಾ ದಲಿತ ಬ೦ಡಾಯ ಎ೦ದು ಕಾವ್ಯ ಭಾಷೆಯಾಡುತ್ತಾ..ಸೀಮಿತಮಾಡದೇ ಪ್ರಸ್ತುತತೆಗೂ ಮುಖಾಮುಖಿಯಾಗಿಸುವ ತುರ್ತನ್ನು ಎಲ್ಲರೂ ಒಪ್ಪಿಕೊಳ್ಳಬೇಕೆ೦ದು ನನ್ನ ಕಳಕಳಿ. ನಿಮ್ಮ ಬರಹ ನನ್ನ ಚಿ೦ತನೆಗೆ ಪ್ರಖರತೆ ನೀಡಿದೆ. ಅದಕ್ಕಾಗಿ ಧನ್ಯವಾದಗಳು. ನಾನು ಸಾಹಿತ್ಯದ ವಿದ್ಯಾರ್ಥಿನಿಯೂ ಹೌದು..ಸಮಾಜಿಕ ವ್ಯವಸ್ಥೆಯ ಕರಾಳತೆಯಲ್ಲಿ ನಲುಗಿರುವ ಅನೇಕ ಸಮುದಾಯಗಳ ಪ್ರತಿನಿಧಿಯೂ ಹೌದು. ನಮ್ಮ ಸಾಹಿತ್ಯ ಇಲ್ಲಿನ ಜನ ಸಮುದಾಯಗಳ..ದೈನ೦ದಿನ ಬದುಕಿನ ಬಗೆಗೆ ಪ್ರತಿಸ್ಪ೦ದಿಸಲಿ..ಎನ್ನೋದು ನನ್ನ ಆಶಯ. ವ೦ದನೆಗಳು,
ಎಸ್. ಕಿರಣ್ ಕುಮಾರಿ. ರಾಮನಗರ.
ಮೇಷ್ಟ್ರು ಬರೆದ ಲೇಖನ ನಮ್ಮೆಲ್ಲರನ್ನೂ ಮತ್ತೊಂದು ಚೌಕಟ್ಟಿನಲ್ಲಿ ಯೋಚಿಸುವಂತೆ ಮಾಡಿದೆ. ಅದಕ್ಕಾಗಿ ಧನ್ಯವಾದಗಳು.
ನನಗನ್ನಿಸುವಂತೆ ಮುಖ್ಯವಾಗಿ ಒಬ್ಬ ಲೇಖಕನ ಬರವಣಿಗೆ ಅವನ ಓದು, ಅವನ ಸಮಾಜದಲ್ಲಿನ ಅನುಭವಗಳಿಂದ ಪ್ರೇರಿಪಿತವಾಗಿರುತ್ತದೆ . ಅದನ್ನು ಮೀರಿ ಹೋಗಲು ಪ್ರಯತ್ನ ಪಟ್ಟಾಗ ಸ್ವಾನುಭವವಿಲ್ಲದ ಲೇಖನಗಳು ಕಳಹೀನವಾಗುತ್ತವೆ. ಎಲ್ಲೊ ಒಬ್ಬ ಶಿವರಾಮ ಕಾರಂತರು ದಲಿತರ ನೋವನ್ನು ಸಮರ್ಪಕವಾಗಿ – ಚೋಮನ ಧುಡಿಯಲ್ಲಿ – ಬರೆಯ ಬಲ್ಲರು. ಹಾಗಾಗಿ ಲೇಖಕ ಯಾವ ಜಾತಿಯವನು ಅನ್ನುವುದು ಮುಖ್ಯ ಅಲ್ಲ. ಅವನ ಬರವಣಿಗೆ ನಮ್ಮ ಪ್ರಸಕ್ತ ತಲ್ಲಣಗಳ ಬಗ್ಗೆ ಇವೆಯೇ ಇಲ್ಲವೇ ಅನ್ನುವುದು ಮುಖ್ಯ.
ಆದರೆ ದೇಶ-ಕಾಲದ ಚರ್ಚೆಯಲ್ಲಿ ಲೇಖಕರ ಜಾತಿಗೆ ಹೆಚ್ಚು ಒತ್ತು ಕೊಟ್ಟರೆ ಹೊರತು ಅಲ್ಲಿದ್ದ ಸಾಹಿತ್ಯಕ ಬರಹಗಳ ಮೌಲ್ಯಮಾಪನ ಆಗಲಿಲ್ಲ ಎಂಬುದು ವಿಷಾದಕರ.
ಕಮಲಕುಮಾರಿಯವರು ಸರಿಯಾಗಿ ಹೇಳಿರುವಂತೆ ಸಾಹಿತ್ಯ ವಲಯವು ಸಹ ಸಾಮಾಜಿಕ – ರಾಜಕೀಯ ಸಮಸ್ಯೆಗಳಿಗೆ ಸ್ಪಂದಿಸಬೇಕು. ಆದರೆ ಪ್ರಸ್ತುತ ಪರಿಸ್ತಿತಿಯಲ್ಲಿ ಹಾಗೆ ಆಗುತ್ತಿಲ್ಲ ನಿಜ. ಯಾವುದೇ ಸಾಹಿತ್ಯಿಕ ಚಳುವಳಿಗಳಿಲ್ಲದ ಈ ಕಾಲದಲ್ಲಿ ಎಲ್ಲರೂ ಯೋಚಿಸಬೇಕಾದ ವಿಷಯ. ಪ್ರಧಾನ, ಪ್ರಭಾವಿ ಮಾಧ್ಯಮಗಳಾದ ಪತ್ರಿಕೆ ಹಾಗು ದೃಶ್ಯ ಮಾಧ್ಯಮಗಳ ಮಧ್ಯೆ ಸಾಹಿತ್ಯ ಪತ್ರಿಕೆಗಳು ಎಷ್ಟು ಪ್ರಭಾವ ಬೀರುತ್ತದೆ ಎಂಬುದು ಸಹ ಯೋಚಿಸಬೇಕಾದ ವಿಷಯ.
hi sir i saw ur blog it is mirror lytaricle world
deshakalada charcheya vishayadalli ayda barahagalu matra yake? gouri lankeshnalli banda ellavannu hakabahudalla..? GR, HSV tarada nirdishta neleya pratikriyegalanna matra prakatisuvudu kuda Ijoor- Latha ettiruva jijnaseya bhaagave.. nimma neleyannu nirdishtagolisuvudu olleyadu