ಇಂದು ಮತ್ತು ನಾಳೆ ‘ಆಚಾರ್ಯ ಪ್ರಹಸನ’

ಚರಕ ಅಭಿನಯಿಸುವ ನಾಟಕ

ಆಚಾರ್ಯ ಪ್ರಹಸನ

ರಚನೆ, ನಿರ್ದೇಶನ : ಪ್ರಸನ್ನ

17, ಮೇ 2011, ಮಂಗಳವಾರ ಸಂಜೆ 6-30ಕ್ಕೆ

ಸ್ಥಳ ಸೇವಾಸದನ, ಮಲ್ಲೇಶ್ವರಂ, 14ನೇ ಕ್ರಾಸ್, ಬೆಂಗಳೂರು

18, ಮೇ 2011, ಬುಧವಾರ ಸಂಜೆ 4-30ಕ್ಕೆ

ಪ್ರಸನ್ನ ಅವರ ಜೊತೆ ಒಂದು ರಂಗ ಸಂವಾದ

6-30ಕ್ಕೆ ನಾಟಕ ಪ್ರದರ್ಶನ

ಸ್ಥಳ ಎ.ಡಿ.ಎ. ರಂಗಮಂದಿರ, ಜೆ.ಸಿ. ರಸ್ತೆ, ಬೆಂಗಳೂರು

19, ಮೇ 2011, ಗುರುವಾರ ಸಂಜೆ 6-30ಕ್ಕೆ

ಸ್ಥಳ ವನರಂಗ ರಂಗಮಂದಿರ, ರಂಗಾಯಣ, ಮೈಸೂರು

ಚರಕವನ್ನು ಕುರಿತು

ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಹೆಗ್ಗೋಡು ಗ್ರಾಮಕ್ಕೆ ವಿಶಿಷ್ಟ ಸ್ಥಾನವಿದೆ. ಹೆಗ್ಗೋಡು ಬಳಿಯ ಬೀಮನಕೋಣೆಯಲ್ಲಿ ನಮ್ಮ ರಾಜ್ಯಕ್ಕೆ ಮಾದರಿಯಾದ ‘ಚರಕ’ ಪ್ರಯೋಗ ಎಲ್ಲರ ಗಮನ ಸೆಳೆದಿದೆ. ಗ್ರಾಮೀಣ ಮಹಿಳೆಯರಲ್ಲಿ ಸ್ವಾವಲಂಬನೆ, ತನ್ಮೂಲಕ ಸ್ವಾಭಿಮಾನಿ ಬದುಕನ್ನು ಕಟ್ಟಿಕೊಟ್ಟಿರುವ ‘ಚರಕ’ ಕೈಮಗ್ಗ ಬಟ್ಟೆಯ ಉತ್ಪನ್ನದಲ್ಲಿ ಒಂದು ಯಶಸ್ವಿ ಸಂಸ್ಥೆಯಾಗಿ ಮೂಡಿಬಂದಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಕೆಲವೇ ಮಹಿಳೆಯರಿಂದ ಪ್ರಾರಂಭಗೊಂಡ ಈ ‘ಚರಕ’ದ ರೂವಾರಿ ಪ್ರಸನ್ನ-ಖ್ಯಾತ ರಂಗ ನಿರ್ದೇಶಕರು.

ಈ ಚರಕ ಚಳವಳಿಯ ಹುಟ್ಟು, ಬೆಳವಣಿಗೆ ಒಂದು ವಿಸ್ಮಯವೆನಿಸಿದರೂ, ಅದರ ಬೆಳವಣಿಗೆಯ ಹಿಂದಿನ ಶ್ರಮ, ಪ್ರಾಮಾಣಿಕತೆ, ದೂರದರ್ಶಿತ್ವ, ಹಾಗು ಕ್ರಿಯಾಶೀಲತೆಗಳು ಒಂದು ಮೊತ್ತವಾಗಿ, ಕನ್ನಡ ಸಾಂಸ್ಕೃತಿಕ-ಸಾಮಾಜಿಕ ಜಗತ್ತಿನ ಹೊಸ ಆಶಾಕಿರಣವಾಗಿದೆ. ಇಂದು ಇದು ನೂರಾರು ಗ್ರಾಮೀಣ ಮಹಿಳೆಯರ ಸ್ವಾವಲಂಬೀ ಬದುಕಿಗೆ ಮತ್ತು ಸಹಕಾರೀ ತತ್ವಕ್ಕೆ ತಾಜಾ ಉದಾಹರಣೆಯಾಗಿ ನಿಂತು ಇಡೀ ದೇಶದಲ್ಲೇ ಒಂದು ವಿಭಿನ್ನ ಪ್ರಯತ್ನ ಎನಿಸಿದೆ.

’ಚರಕ’ದ ಕಾರ್ಯಕರ್ತರು ತಮ್ಮ ವಿರಾಮದ ಸಮಯದಲ್ಲಿ ಅಭ್ಯಾಸ ಮಾಡಿದ ನಾಟಕ ‘ಆಚಾರ್ಯನ ಪ್ರಹಸನ’ ಅವರ ಸಾಮಾಜಿಕ ಬದುಕಿನ ವಿಸ್ತರಣೆಯಾಗಿ ನಿಮ್ಮ ಮುಂದಿದೆ.

ನಾಟಕವನ್ನು ಕುರಿತು

ನಾಟಕದ ಹೆಸರೇ ಸೂಚಿಸುವಂತೆ, ಆಚಾರ್ಯ ಪ್ರಹಸನವು ಧಾರ್ಮಿಕ ಆಷಾಡಭೂತಿತನವನ್ನು ವಿಡಂಬನೆ ಮಾಡುವ ಒಂದು ನಾಟಕ. ಕಳೆದ ಶತಮಾನದಲ್ಲಿ ಎ.ಎನ್. ಮೂರ್ತಿರಾಯರು ಇದೇ ವಸ್ತುವನ್ನಿಟ್ಟುಕೊಂಡು ಆಷಾಡಭೂತಿ ಎಂಬ ನಾಟಕವೊಂದನ್ನು ಬರೆದಿದ್ದರು. ಅದಕ್ಕೂ ಮೊದಲು ಹದಿನೇಳನೆಯ ಶತಮಾನದಲ್ಲಿ ಫ್ರೆಂಚ್ ಭಾಷೆಯಲ್ಲಿ ಮೋಲಿಯರ್ ಮಹಾಕವಿ ‘ತಾರ್ತೂಫ್’ ಎಂಬ ಹೆಸರಿನಿಂದ, ಈ ವಸ್ತುವನ್ನಾಧರಿಸಿದ ಮೊದಲ ಪ್ರಹಸನವನ್ನು ರಚಿಸಿದ. ಕನ್ನಡದ ಎರಡೂ ನಾಟಕಗಳಿಗೆ ಮೋಲಿಯರನ ಮಹಾಕೃತಿಯು ಪ್ರೇರಣೆ ನೀಡಿದೆ. ಆದರೆ ಈಗೇಕೆ ಆಚಾರ್ಯ ಪ್ರಹಸನ?

ಇದು ಇಪ್ಪತ್ತೊಂದನೆಯ ಶತಮಾನ, ಪ್ರಗತಿಪರ ವಿಚಾರಧಾರೆಗಳು, ಆಧುನಿಕ ಜೀವನ ಶೈಲಿಗಳು ಇಲ್ಲಿ ಮನೆ ಮಾಡಿವೆ, ರಾತ್ರಿಗಳನ್ನೆ ಬೆಳಗಿಸಬಲ್ಲ ಪ್ರಜ್ವಲತೆಯು ಈ ಯುಗಕ್ಕೆ ದಕ್ಕಿದೆ. ಆದರೂ ಆಧುನಿಕ ಮನುಷ್ಯನನ್ನು ಹಿಂದೆಂದಿಗಿಂತಲೂ ಮಿಗಿಲಾದ ಭಯ ಹಾಗೂ ಆತಂಕಗಳು ಆವರಿಸಿಕೊಂಡಿವೆ. ನಾವು ಧರ್ಮವನ್ನು ಅಪ್ಪಿಕೊಂಡಿರುವುದು ಆತ್ಮಸ್ಥೈರ್ಯದಿಂದಲ್ಲ, ಅಪಾರ ಹೆದರಿಕೆಯಿಂದ. ನೈತಿಕ ಅಧೈರ್ಯವೆಂಬುದು ಆಷಾಡಭೂತಿಗಳನ್ನು ಹುಟ್ಟಿಸಲಿಕ್ಕೆ ಹೇಳಿಮಾಡಿಸಿದ ವಾತಾವರಣ. ಹಾಗೆಂದು ನಾಟಕ!

ಕರ್ನಾಟಕದ ಮುಖ್ಯಮಂತ್ರಿಗಳು ಇತ್ತೀಚೆಗೆ ಒಂದು ಹೇಳಿಕೆ ನೀಡಿದ್ದರು: ‘ನಾನು (ನನ್ನ ಜಾತಿಯ) ಮಠಾಧೀಶರ ಕಾಲ ಬಳಿ ಕುಳಿತು, ಅವರ ಸಲಹೆ ಸೂಚನೆಯಂತೆ ರಾಜ್ಯಭಾರ ಮಾಡುತ್ತೇನೆ’ ಎಂದರವರು. ಎಲ್ಲ ಜಾತಿಗಳಿಗೆ ಸೇರಿದ ಮಠಾಧೀಶರೂ ಭವದ ಕುತ್ತಿಗೆಗೆ ಭದ್ರವಾದ ಕಣ್ಣಿ ಬಿಗಿದು ತಮ್ಮನ್ನೂ ಅದಕ್ಕೆ ಬಿಗಿದುಕೊಂಡಿದ್ದಾರೆ. ಯಾರು ಯಾರನ್ನು ನಿಯಂತ್ರಿಸುತ್ತಿದ್ದಾರೆ, ದೇವರೇ ಬಲ್ಲ!

ಈ ಜಗತ್ತಿನಲ್ಲಿ ಒಳ್ಳೆಯ ಸನ್ಯಾಸಿಗಳಿಲ್ಲವೆ? ಇದ್ದಾರೆ. ಎಲ್ಲ ಸನ್ಯಾಸಿಗಳೂ ಒಳ್ಳೆಯವರೇ ಹೌದು. ಸಮಸ್ಯೆ ಒಳಿತು ಕೆಡುಕಿನದಲ್ಲ, ಅರ್ಥಪಲ್ಲಟದ್ದು. ಇಂದಿನ ಸನ್ಯಾಸವು ಪರಿತ್ಯಾಗವನ್ನು ಪರಿತ್ಯಾಗ ಮಾಡಿದೆ. ಜಂಗಮ ತಾಣಗಳಾಗಬೇಕಿದ್ದ ಮಠಗಳಿಂದು ಶ್ರೀಮಂತ ಸ್ಥಾವರಗಳಾಗಿವೆ. ಇತ್ತೀಚೆಗೆ ನಿಧನ ಹೊಂದಿದ ಒಳ್ಳೆಯಸನ್ಯಾಸಿಯೊಬ್ಬರ ಆಸ್ತಿಯು, ಆತ ನಿಧನಹೊಂದಿದಾಗ, ಒಂದು ಲಕ್ಷದ ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳಾಗಿತ್ತು ಎಂದು ಪತ್ರಿಕೆಗಳು ವರದಿ ಮಾಡಿದವು. ಭಾರತ ಸರಕಾರದ ವಾರ್ಷಿಕ ಆಯವ್ಯಯಕ್ಕೆ ಸರಿಸಮಾನವಾಗಿದೆ ಈ ಮೊತ್ತ ಎಂದೂ ಸಹ ಪತ್ರಿಕೆಗಳು ಬರೆದವು. ಸಾವಿರಾರು ಧರ್ಮಗುರುಗಳು ಈ ದೇಶದಲ್ಲಿ ಇಷ್ಟೇ ಏಕೆ ದೊಡ್ಡ ಮೊತ್ತದ ಧಾರ್ಮಿಕ ವಹಿವಾಟು ನಡೆಸುತ್ತಿದ್ದಾರೆ!

ಸನ್ಯಾಸದ ಮೂಲ ಅರ್ಥವೇನು? ಸರ್ವಸಂಗ ಪರಿತ್ಯಾಗಕ್ಕೊಂದು ಮಾದರಿಯಿದೆಯೆ? ಹಳೆಯ ಉದಾಹರಣೆಗಳನ್ನು ಗಮನಿಸೋಣ. ಸೂರದಾಸರು ಲೋಕಕ್ಕೇ ಕುರುಡಾಗಿ ಕುಳಿತು ದೇವರನ್ನು ಧ್ಯಾನಿಸಿದರು. ರವಿದಾಸರು, ಚಪ್ಪಲಿ ಹೊಲಿಯುವ ತನ್ನ ಕಾಯಕವನ್ನು ಮುಂದುವರೆಸುತ್ತಲೇ ಭಗವನ್ನಾಮಸ್ಮರಣೆ ಮಾಡಿದರು. ಹಾಗಿದ್ದರೆ ಸೂರದಾಸರು ಹಾಗೂ ರವಿದಾಸರಂತಹ ಸನ್ಯಾಸಿಗಳು ಈಗ ಕಣ್ಮರೆಯಾಗಿದ್ದಾರೆಯೆ? ಹಾಗೇನಿಲ್ಲ. ಅವರಿದ್ದಾರೆ, ಅವರನ್ನು ಗುರುತಿಸಬಲ್ಲ ಸಾಮರ್ಥ್ಯ ಕಳೆದುಕೊಂಡಿದ್ದೇವೆ ನಾವು.

 

ಎಲ್ಲಕ್ಕಿಂತ ಮಿಗಿಲಾಗಿ ಬಡತನವನ್ನು ತಿರಸ್ಕರಿಸಿದ್ದೇವೆ ನಾವು. ಗಲೀಜು ಬಟ್ಟೆ ತೊಟ್ಟು ಹಾದಿಬದಿಯ ಕಸದಲ್ಲಿ ಕುಳಿತು ಧ್ಯಾನಸ್ಥರಾದ ನೂರಾರು ಭಿಕ್ಷುಕರು ರೋಗಿಗಳು ಅಂಗವಿಕಲರುಗಳ ನಡುವಿನಿಂದ ನಿಜವಾದ ಸಂತನನ್ನು ಹೆಕ್ಕಿ ತೆಗೆಯಬಲ್ಲೆವೆ ನಾವು? ಕಾರು ದರಬಾರು ಜರತಾರಿಗಳಿಲ್ಲದ ಯಾವ ಸನ್ಯಾಸಿತಾನೆ ಸಂತನ ಯೋಗ್ಯತೆ ಪಡೆದಾನು ಇಂದು?

ಇಷ್ಟಕ್ಕೂ ಸೂರದಾಸರಾಗಲೀ ರವಿದಾಸರಾಗಲೀ ಟೀವಿಯ ಮುಂದೆ ಕುಣಿಯಲಾರರು, ಕೋಟ್ಯಾಂತರ ರೂಪಾಯಿಗಳ ಚಂದಾ ವಸೂಲಿ ಮಾಡಿ, ಚಾರ್ಟರ್ಡ್ ವಿಮಾನಗಳಲ್ಲಿ ಪಯಣಿಸಿ, ಧ್ಯಾನ ಶಿಬಿರ, ಯೋಗ ಶಿಬಿರ, ಜೀವಿಸುವ ಶಿಬಿರ, ಮೃತ್ಯಿಸುವ ಶಿಬಿರ, ಪ್ರೀತಿಸುವ ಶಿಬಿರ… ಇತ್ಯಾದಿಗಳನ್ನು ನಡೆಸಲಾರರು. ಅಷ್ಟೇ ಏಕೆ ಜಾಣ ಪ್ರವಚನಗಳನ್ನೂ ಸಹ ನೀಡಲಾರರು. ಇಂದಿನ ಸಂತರು ಅದೆಲ್ಲವನ್ನೂ ಮಾಡಲೇಬೇಕು.

ನಮ್ಮ ಪ್ರಹಸನದ ಆಚಾರ್ಯ ಇವೆಲ್ಲವನ್ನೂ ಮಾಡಬಲ್ಲ. ಆತ ಜಾಣಮಾತುಗಾರ, ಜಾಣ ಸಂಘಟಕ, ಮಹತ್ವಾಕಾಂಕ್ಷಿ ಹಾಗೂ ಗೆಲ್ಲುವ ಛಲವಿರುವ ವ್ಯಕ್ತಿ. ಇವೆಲ್ಲವೂ ಇಂದಿನ ಒಪ್ಪಿತ ಮೌಲ್ಯಗಳು. ಹಾಗಾಗಿ ಆಚಾರ್ಯನಿಗೆ ತಾನು ಒಳ್ಳೆಯ ಸನ್ಯಾಸಿ ಎಂಬ ಗಟ್ಟಿ ನಂಬಿಕೆಯಿದೆ. ಯಾಕಿರಬಾರದು? ಒಳ್ಳೆಯ ಸನ್ಯಾಸಿಗಳು ಒಳ್ಳೆಯ ಕೆಲಸ ಮಾಡಿದರೆ ಸಾಕು ತಾನೆ? ಒಳ್ಳೆಯ ಕಾಲೇಜು, ಒಳ್ಳೆಯ ಆಸ್ಪತ್ರೆ, ಒಳ್ಳೆಯ ಆಶ್ರಮಗಳನ್ನು ನಿರ್ಮಿಸಿ, ನಿರ್ವಹಿಸಿ, ಸೇವೆ ಮಾಡಿದರೆ ಸಾಕು ತಾನೆ? ಇಂದಿನ ಸನ್ಯಾಸಿಗಳು ಅದೆಷ್ಟು ದಕ್ಷರೆಂದರೆ ಎಲ್ಲ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟುಗಳೂ ಇವರಿಂದ ಭವದ ನಿರ್ವಹಣೆಯ ತಂತ್ರಗಳನ್ನು ಕಲಿಯತೊಡಗಿದ್ದಾರೆ.

ಉತ್ತಮ ವಾಙ್ಮಯ, ಒಳ್ಳೆಯ ವಿಚಾರಗಳು, ಕಾರ್ಯಕ್ಷಮತೆ, ಸಾಮಾಜಿಕ ಪ್ರಭಾವ, ಹಣದ ಬಲ ಹಾಗೂ ಸೂಜಿಗಲ್ಲಿನಂತಹ ವ್ಯಕ್ತಿತ್ವಗಳೇ ಸನ್ಯಾಸದ ಲಕ್ಷಣಗಳು ಎನ್ನುವುದಾದರೆ ನೀವು ಆಚಾರ್ಯ ಪ್ರಹಸನವನ್ನು ನೋಡಬೇಕಾದ ಅಗತ್ಯವೇ ಇಲ್ಲ. ಅಥವಾ ಈ ನಾಟಕದಲ್ಲಿ ಆಗುವಂತೆ, ಆಗೊಮ್ಮೆ ಈಗೊಮ್ಮೆ ಸನ್ಯಾಸಿಯೊಬ್ಬ ಹಾದರ ಕೊಲೆ ಸುಲಿಗೆ ಇತ್ಯಾದಿಗಳನ್ನು ಪ್ರಯತ್ನಿಸಿ ಪೊಲೀಸರ ಬಲೆಗೆ ಬಿದ್ದಾಗ, ನೀವು ಹುಬ್ಬೇರಿಸಬೇಕಾದ ಅಗತ್ಯವೂ ಇಲ್ಲ. ಉಪಯೋಗವಿದ್ದಲ್ಲಿ ದುರುಪಯೋಗ ಇದ್ದೇ ಇರುತ್ತದೆ ತಾನೆ?

ಧರ್ಮವನ್ನು ಉಪಯುಕ್ತವಾಗಿಸುವ ಆಧುನಿಕ ತಹತಹವನ್ನೇ ತಿರಸ್ಕರಿಸುತ್ತದೆ ಆಚಾರ್ಯ ಪ್ರಹಸನ

-ಪ್ರಸನ್ನ

 

ಕಲಾವಿದರು

ಆಚಾರ್ಯ : ಎಂ. ಗಣೇಶ್ , ದೊಡ್ಡತಾಯಮ್ಮ : ಭಾಗೀರಥಿ ಕೆ.ಬಿ., ಸುಬ್ಬಣ್ಣ : ರುದ್ರಪ್ಪ ಡಿ.ಬಿ., ವೆಂಕಟಗಿರಿಪ್ಪ : ಪ್ರಶಾಂತ್ ಸಿದ್ಧಿ, ವಿಶಾಲಾಕ್ಷಿ : ವಿಜಯಲಕ್ಷ್ಮಿ ಸುಂದರ್, ಮಮತ : ಪದ್ಮಶ್ರೀ ಸುಭಾಷ್

ನಾಣಿ : ಸತೀಶ್ ಎ., ಅಕ್ಕಮ್ಮ : ಶೈಲಜಾ ಪ್ರಕಾಶ್, ವಿಶಾಲ್ಪಾಟೀಲ್ : ಸುಂದರ್ ಬಿ.ಎಸ್., ಅಮೀನ್ ಆದಿಮೂರ್ತಿ: ಪ್ರಭಾಕರ ಸಾಂಶಿ, ಲಚ್ಚ/ಮರಿಸ್ವಾಮಿ : ಕುಮಾರ್, ಇನ್ಸ್ಪೆಕ್ಟರ್ : ಕುಲಕರ್ಣಿ ಎನ್.ಎಂ.

 

ಹಾಡುಗಾರರು : ಮಧುರ, ಸುಜಾತ, ಸುನೀತಾ,

 

ತಾಂತ್ರಿಕ ವರ್ಗ

ವಸ್ತ್ರವಿನ್ಯಾಸ ಮತ್ತು ರಂಗಪರಿಕರ : ಸಂದೇಶ್, ಸಂಗೀತ : ಎಂ.ಪಿ. ಹೆಗಡೆ ಮೂರೂರು,

ತಬಲಾ : ನಿಖಿಲ್, ಪ್ರಸಾದನ ಮತ್ತು ಬೆಳಕು : ಗುರುರಾಜ್ ತಲಕಾಡು

 

‍ಲೇಖಕರು G

May 17, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಪವನಜ

    ಯಾರೆಲ್ಲ ನಾಟಕ ನೋಡಿದ್ರಿ? ಬೇಗ ಬೇಗ ವಿಮರ್ಶೆ ಪೋಸ್ಟ್ ಮಾಡಿ. ನಾನು ನಾಳೆ ಅದನ್ನು ಮೈಸೂರಿನಲ್ಲಿ ನೋಡೋಣಾಂತಂದುಕೊಂಡಿದ್ದೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: