ಕಾಣದ ಕಡಲಿಗೆ ಹಂಬಲಿಸಿದೆ ಮನ…
ಹೆಜ್ಜೆ 09
ಸಂಘದ ಒಡನಾಟ

ಗ್ರಾಪಂ ಕಚೇರಿಯ ಆವರಣದಲ್ಲಿ ಬೆಳೆಗಿನ ಜಾವ 05:30ಕ್ಕೆ ಸಂಘದ ಸದಸ್ಯರು ಯೋಗ, ವ್ಯಾಯಾಮ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ, ಅವರ ಸದ್ದು ಕೇಳಿ ಎಚ್ಚರವಾಯಿತು. ಎದ್ದು ಶಿವಣ್ಣ ನನಗೆ ಕರುಣಿಸಿದ್ದ ಶೌಚಾಲಯವನ್ನರಸಿ ಹೋದರೆ, ಗ್ರಾ.ಪಂನ ಸುತ್ತ ಗಬ್ಬುನಾರುವಂತಹ ವಾತಾವರಣ.
ಸಂಘದವರು ವ್ಯಾಯಾಮ ಮುಗಿಸಿ, ನನಗೆ ಬೆಳಗಿನ ಉಪಹಾರದ ವ್ಯವಸ್ಥೆಮಾಡಲು ಹೊರಟರು. ಕಚೇರಿಯ ಆವರಣದಲ್ಲೇ ಇದ್ದ ಸಾರ್ವಜನಿಕ ನಲ್ಲಿಯ ತಣ್ಣೀರಿನಲ್ಲೇ ನನ್ನ ಸ್ನಾನ ಮುಗಿಸಿ, ಒದ್ದೆ ಬಟ್ಟೆಗಳನ್ನು ತಂದು ಕುರ್ಚಿಯ ಮೇಲೆ ಬಿಸಿಲಿನಲ್ಲಿ ಒಣಗಾಕಿದೆ. ಹೀರಣ್ಣ ಬಂದು ನನ್ನನ್ನು ತಮ್ಮ ಮನೆಗೆ ಬೆಳಗಿನ ಉಪಹಾರಕ್ಕೆ ಕರೆದುಕೊಂಡು ಹೋದ. ಪುಟ್ಟ ಹೆಂಚಿನ ಮನೆ. ತಂದೆಗೆ ಧಾರವಾಡ ಕಾರ್ಪೊರೇಷನ್ನಲ್ಲಿ ಸಹಾಯಕನ ವೃತ್ತಿ. ಹೀರಣ್ಣನಿಗೆ ರೈಲ್ವೆ ಇಲಾಖೆಯಲ್ಲಿ ಕಾಯಕ. ಉಪಹಾರಕ್ಕೆ ಅವಲಕ್ಕಿ, ಚಹಾ ಪ್ರಾಪ್ತಿಯಾಯಿತು.
ಉಪಹಾರ ಮುಗಿಸಿ ಕಚೇರಿಗೆ ಬಂದು ಶಾಲೆಗೆ ಹೊರಡಲು ಸಿದ್ಧನಾಗಿದ್ದೆ. ಅಷ್ಟರಲ್ಲಿ ಸಂಘದ ಮತ್ತೊಬ್ಬ ಸದಸ್ಯ ಗುರು ಬಂದು ತಮ್ಮ ಮನೆಯಲ್ಲಿಯೂ ಉಪಹಾರ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿ, ತಮ್ಮ ಮನೆಯ ಆತಿಥ್ಯವನ್ನೂ ಕೂಡ ಸ್ವೀಕರಿಸಬೇಕೆಂದು ಬಹಳ ಒತ್ತಾಯಿಸಿದ. ಅವರ ಹೊಲದಲ್ಲಿದ್ದ ಮನೆಯಲ್ಲಿ ಉಪ್ಪಿಟ್ಟು
ಮತ್ತು ಹಾಲಿನ ಸ್ವೀಕಾರವಾಯಿತು. ಅವನ ಕೋಣೆಯಲ್ಲಿದ್ದ ಇಬ್ಬರ ಚಿತ್ರವನ್ನು ಗೋಡೆಯ ಮೇಲೆ ನೋಡಿ, ಅವರ ಬಗ್ಗೆ ವಿಚಾರಿಸಿದೆ. ಒಬ್ಬರು ಗುರೂಜಿ. ಸಂಘದ ಸಂಸ್ಥಾಪಕರಲ್ಲಿ ಒಬ್ಬರು. ಇನ್ನೊಬ್ಬರು ಡಾ||ಹೆಡ್ಗೆವಾರ್. ಸಂಘ ಸ್ಥಾಪನೆಯಾದ ಮೇಲೆ ದೊಡ್ಡದಾಗಿ ಬೆಳೆಸಿದ ಕೀರ್ತಿ ಅವರದು ಎಂಬ ವಿಚಾರ ತಿಳಿಯಿತು. ಅವರಿಬ್ಬರ ಚಿತ್ರ ಹೀರಣ್ಣನ ಮನೆಯಲ್ಲೂ ಇದ್ದುದನ್ನು ಗಮನಿಸಿದ್ದೆ. ವಿವೇಕಾನಂದರೂ ಸೇರಿದಂತೆ ಕೆಲವು ಮಹಾನಾಯಕರ ಚಿತ್ರಗಳೂ ಇದ್ದವು. ಉಪಹಾರ ಮುಗಿಸಿದ ನಂತರ, ಗುರು ತನ್ನ ಬೈಕಿನಲ್ಲಿ ಶಾಲೆಗೆ ಬಿಟ್ಟು ಬಂದ.
ಶಾಲೆಯ ಶಿಕ್ಷಕರನ್ನು ಸಂಪರ್ಕಿಸಿ ನನ್ನ ವಿಷಯವನ್ನು ತಿಳಿಸಿ ಮನಗುಂಡಿ ಶಾಲೆಯಿಂದ ಪಡೆದಿದ್ದ ಪತ್ರವನ್ನು ತೋರಿಸಿದೆ. ಖುಷಿಗೊಂಡು ಬೆಳಗಿನ ಧ್ಯಾನವನ್ನು ಮೊಟಕುಗೊಳಿಸಿ, ರಾಷ್ಟ್ರಗೀತೆಯನ್ನು ಮಾತ್ರ ಹಾಡಿಸಿ ನನ್ನ ಉಪನ್ಯಾಸಕ್ಕೆ ಸಮಯ ಮಾಡಿಕೊಟ್ಟರು. ರಾಷ್ಟ್ರಗೀತೆ ಹಾಡುವ ಸಮಯದಲ್ಲಿ, ನಮ್ಮಲ್ಲಿ ಮೂಡುವ ಭಾವನೆಗಳನ್ನು ವರ್ಣಿಸಲು ನನಗೆ ಪದಗಳೇ ಇಲ್ಲ. ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಯ ವಿದ್ಯಾರ್ಥಿಗಳಿಗೆ ನನ್ನ ಪರಿಚಯ ಮಾಡಿಕೊಟ್ಟರು. ನಾನು ಅವರಿಗೆ ಮತ್ತು ಶಾಲೆಯ ಇತರ ಶಿಕ್ಷಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ನನ್ನ ಮಾತು ಮುಂದುವರಿಸಿದೆ.
“ಎಲ್ಲರಿಗೂ ನನ್ನ ನಮನಗಳು” ಎಂದೆ.
ವಿದ್ಯಾರ್ಥಿಗಳೆಲ್ಲರೂ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
“ಚಪ್ಪಾಳೆ ತಟ್ಟೋದಲ್ಲಾ. ಯಾರಾದರು ಅತಿಥಿಗಳು ನಿಮ್ಮ ಶಾಲೆಗೆ ಬಂದು ನಮಸ್ಕರಿಸಿದರೆ ನೀವು ಮರು ನಮಸ್ಕರಿಸಬೇಕಲ್ಲವೇ?” ಎಂದು ಕೇಳಿದೆ.
ಎಲ್ಲರೂ ಜೋರಾಗಿ ನಮಸ್ಕಾರ ಎಂದು ಉದ್ಗರಿಸಿದರು.
“ನೀವೆಲ್ಲಾ ಶಾಲೆಯ ಆವರಣದಲ್ಲಿ ಬಿಸಿಲಿನಲ್ಲಿ ಕುಳಿತಿದ್ದೀರ. ನನ್ನ ಉಪನ್ಯಾಸ ಇನ್ನೂ ಒಂದು ಗಂಟೆಯ ಕಾಲ ನಡೆಯುತ್ತದೆ. ಹಾಗಾಗಿ ನಾನೂ ಕೂಡ ಬಿಸಿಲಿನಲ್ಲೇ ನಿಂತು ಉಪನ್ಯಾಸ ಕೊಡುತ್ತೇನೆ” ಎಂದು ಹೇಳಿ ಅವರ ನಡುವೆ ಹೋಗಿ ಬಿಸಿಲಿನಲ್ಲಿ ನಿಂತೆ. ಜೋರಾಗಿ ಚಪ್ಪಾಳೆ ತಟ್ಟಿದರು. ಗ್ರಾ.ಪಂನ ಚುನಾವಣೆ ಆಗ ತಾನೆ ಮುಗಿದಿದ್ದರಿಂದ ರಾಜಕಾರಣಿಗಳ ಭಾಷಣಕ್ಕೆ ಚಪ್ಪಾಳೆ ತಟ್ಟಿ ಅಭ್ಯಾಸವಾಗಿರಬಹುದೆಂದು ನೆನೆಸಿದೆ. ಶಿಕ್ಷಕರೆಲ್ಲಾ ಹಜಾರದ ನೆರಳಿನಲ್ಲಿ ಆಸೀನರಾಗಿದ್ದರು. ಮನಗುಂಡಿ ಪ್ರೌಢಶಾಲೆಯಲ್ಲಿ ಕೊಟ್ಟ ಉಪನ್ಯಾಸ ಅಚ್ಚುಕಟ್ಟಾಗಿ ಮೂಡಿ ಬಂದಿತ್ತು. ಹಾಗಾಗಿ ಅದನ್ನೇ ಮುಂದಿನ ಶಾಲೆಗಳಲ್ಲಿಯೂ ಅನುಸರಿಸಬೇಕೆಂದು ಬರೆದಿಟ್ಟುಕೊಂಡಿದ್ದೆ.
ಪ್ರತೀ ಶಾಲೆಯ ವಾತಾವರಣಕ್ಕೆ ತಕ್ಕಂತೆ ಸ್ವಲ್ಪ ಬದಲಾಯಿಸಿಕೊಂಡು ಮತ್ತು ಆಯಾ ಶಾಲೆಯ ವಿದ್ಯಾರ್ಥಿಗಳ ಆಟಪಾಠಗಳನ್ನು ಗಮನಿಸಿ ಕೆಲವು ಕುಚೇಷ್ಟೆಯ ಮಾತುಗಳನ್ನಾಡಿ ತಮಾಷೆ ಮಾಡಿದರಾಯಿತು ಎಂದುಕೊಂಡೆ. ಹಾಗಾಗಿ ನನ್ನ ಮಾತುಗಳನ್ನು ಅದರಂತೆಯೇ ಮುಂದುವರಿಸಿದೆ. ಉಪನ್ಯಾಸ ಕೊಟ್ಟು ಮಕ್ಕಳಿಂದ ಪರಿಸರ ಉಳಿವಿನ ಪ್ರತಿಜ್ಞೆ ಪಡೆಯುವಷ್ಟರಲ್ಲಿ ವಿದ್ಯಾರ್ಥಿಗಳು ಬಿಸಿಲಿನ ತಾಪಕ್ಕೆ ಬೆವೆತು ಸುಸ್ತಾಗಿಬಿಟ್ಟಿದ್ದರು. ನನ್ನ ಕೊನೆಯ ಮಾತುಗಳನ್ನು ಕೇಳುವ ಉತ್ಸಾಹವಿರಲಿಲ್ಲ. ಶಿಕ್ಷಕರೂ ಕೂಡ ನನ್ನ ಮಾತುಗಳನ್ನು ಮೊಟಕುಗೊಳಿಸುವಂತೆ ಕೋರಿದರು. ನನಗೆ ಇಷ್ಟವಿಲ್ಲದಿದದ್ದರೂ ನನ್ನ ಮಾತುಗಳನ್ನು ಸಂಕ್ಷಿಪ್ತವಾಗಿ ಮುಗಿಸಬೇಕಾಯಿತು.
ನಂತರ ಶಾಲೆಯ ಮುಖ್ಯೋಪಾಧ್ಯಾಯರು ನನಗೆ ಚಹಾ ಬಿಸ್ಕತ್ ಕೊಟ್ಟು ಸತ್ಕರಿಸಿದರು. ಕೆಲವು ಶಿಕ್ಷಕರು ನನ್ನನ್ನು ಭೇಟಿಯಾಗಿ ಅಭಿನಂದಿಸಿದರು. ಹಲವು ವಿದ್ಯಾರ್ಥಿಗಳು ಖುದ್ದಾಗಿ ಬಂದು ಮರಗಿಡ ಬೆಳೆಸುವುದಾಗಿ ನನಗೆ ಭರವಸೆಕೊಟ್ಟರು. ನಂತರ ಶಾಲೆಯ ಹಿಂಭಾಗದಲ್ಲಿರುವ ಖಾಲಿಜಾಗದಲ್ಲಿ ನೂರಾರು ಸಸಿಗಳನ್ನು ನೆಡಸಿರುವುದನ್ನು ತೋರಿಸಿದರು. ಇನ್ನೂ ನೂರು ಗಿಡಗಳನ್ನು ಅರಣ್ಯ ಇಲಾಖೆಯಿಂದ ಪಡೆದು ನೆಡಸುವುದಾಗಿ ಭರವಸೆ ಕೊಟ್ಟರು. ನಾನು ಅವರಿಗೆಲ್ಲಾ ವಂದನೆಗಳನ್ನು ಸಲ್ಲಿಸಿ ಶಾಲೆಯಿಂದ ನಿರ್ಗಮಿಸಿದೆ.
ಊರಿಗೆ ಬಂದು ಶಿವಣ್ಣ, ಗುರು ಮತ್ತು ಇತರರನ್ನು ಭೇಟಿಯಾದೆ. ನನಗೆ ಅನುಕೂಲ ಆಗಲೆಂದು ಅವರು ಮುಂದಿನ ಊರಿನ ಕೆಲವು ಸಂಘದವರ ದೂರವಾಣಿ ಸಂಖ್ಯೆಗಳನ್ನು ಕೊಟ್ಟು, ಸಂಪರ್ಕ ಕಲ್ಪಿಸಿದರು. ಆಯಾ ಊರುಗಳಲ್ಲಿ ನನ್ನ ವಾಸ್ತವ್ಯದ ಮತ್ತು ಊಟದ ವ್ಯವಸ್ಥೆಯನ್ನು ಅವರ ಸ್ನೇಹಿತರು ನೋಡಿಕೊಳ್ಳುವುದಾಗಿ ಹೇಳಿ ನಾನು ಬೇಡವೆಂದರೂ, ರಾಷ್ಟ್ರೀಯ ಹೆದ್ದಾರಿ-04ರ ಟೋಲ್ ಗೇಟ್ ಹತ್ತಿರ ತಂದು ಬಿಟ್ಟು, ನನ್ನನ್ನು ಆತ್ಮೀಯವಾಗಿ ಬೀಳ್ಕೊಟ್ಟರು.
ಅಲ್ಲಿಂದ ಸುಮಾರು ಏಳೆಂಟು ಮೈಲುಗಳ ಪ್ರಯಾಣ. ಅದೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗಾಗಿ ಬಹಳ ಎಚ್ಚರಿಕೆಯಿಂದ ರಸ್ತೆಯ ಬಲತುದಿಯ ಹುಲ್ಲಿನ ಹಾಸಿನ ಮೇಲೆ ನಡೆಯಲು ಶುರುಮಾಡಿದೆ. ಜಗಮಗಿಸುವ ಬಿಸಿಲಿಗೆ ಸುಡುತ್ತಿದ್ದ ಡಾಂಬರು ರಸ್ತೆ. ಗಂಟೆಗೆ 80 ರಿಂದ 120 ಮೈಲುಗಳ ವೇಗದಲ್ಲಿ ಹೋಗುವ ವಾಹನಗಳು. ವಾಹನಗಳಿಂದ ಹೊರ ಸೂಸುವ ವಿಷಯುಕ್ತ ಗಾಳಿ. ಇವೆಲ್ಲದರಿಂದ ಮೈಯಿ ಬೇಯುತ್ತಿತ್ತು. ಹೆದ್ದಾರಿ ನಿರ್ಮಿಸಿದ ಆ ಪುಣ್ಯಾತ್ಮ ರಸ್ತೆಯ ಬದಿಯಲ್ಲಿ ಗಿಡಮರ ಬೆಳೆಸುವುದಕ್ಕೆ ಆಗುವುದಿಲ್ಲವೇ. ಏಳೆಂಟು ಮೈಲುಗಳ ದಾರಿಯನ್ನು ಎರಡು ವಿರಾಮ, ಒಂದು ಲೀಟರ್ ನೀರು, ಎರಡು ಎಳೆನೀರು ಕುಡಿದು ಪೂರೈಸಿ ರಾಯನಾಳ ಸರಕಾರಿ ಪ್ರೌಢಶಾಲೆಯನ್ನು ತಲುಪಿದೆ.
ಅಲ್ಲಿನ ಶಿಕ್ಷಕರು ಸಹಕರಿಸಿ ನನಗೆ ಬೇಗ ಉಪನ್ಯಾಸ ಕೊಡುವಂತೆ ಅನುವು ಮಾಡಿಕೊಟ್ಟರು. ಬೆಳಗಿನ ಉಪನ್ಯಾಸ ಬಿಸಿಲ ಬೇಗೆಗೆ ತುತ್ತಾಗಿದ್ದರಿಂದ ಎಚ್ಚೆತ್ತ ನಾನು, ರಾಯನಾಳ ಶಾಲೆಯಲ್ಲಿ ಮಕ್ಕಳು ಮರದ ನೆರಳಿನಲ್ಲಿ ಕೂರುವಂತೆ ನೋಡಿಕೊಂಡೆ. ಮಕ್ಕಳ ಜೊತೆ ಶಿಕ್ಷಕರೂ ಕೂಡ ಪ್ರತಿಜ್ಞೆ ಪಡೆದಿದ್ದು ಅಲ್ಲಿನ ವಿಶೇಷ. ನೆಟ್ಟಿದ್ದ ಸಸಿಗಳನ್ನು ನಮ್ಮ ಶಾಲೆಯ ಹುಡುಗರೇ ಹಾಳು ಮಾಡುತ್ತಾರೆ ಎಂದು ಉಪನ್ಯಾಸದ ಮೊದಲು ಶಿಕ್ಷಕರು ತಮ್ಮ ನೋವು ತೋಡಿಕೊಂಡಿದ್ದರು. ಹಾಗಾಗಿ ಮಕ್ಕಳಿಗೆ ಸಸಿ ನೆಟ್ಟು ಮರವಾಗಿ ಬೆಳಸದಿದ್ದರೂ ಪರವಾಗಿಲ್ಲ, ಆದರೆ ಈಗಾಗಲೇ ನೆಟ್ಟು, ಪೋಷಣೆ ಮಾಡುತ್ತಿದ್ದ ಗಿಡಗಳನ್ನು ಹಾಳು ಮಾಡುವುದು ಮಹಾ ಪಾಪವೆಂದು ತಿಳಿಸಿ,
ಹಾಗೆ ಇನ್ನು ಮುಂದೆ ಹಾಳು ಮಾಡುವುದಿಲ್ಲವೆಂದು ಪ್ರತಿಜ್ಞೆ ಪಡೆದೆ. ಯುವ ಶಿಕ್ಷಕರು ನನ್ನ ಉಪನ್ಯಾಸದಿಂದ ಸ್ಪೂರ್ತಿಗೊಂಡಿದ್ದಾಗಿ ತಿಳಿಸಿ, ತಾವುಗಳೂ ತಮ್ಮ ಕೈಲಾದಷ್ಟು ಗಿಡ ಮರಗಳನ್ನು ಬೆಳೆಸುವುದಾಗಿ ತಮ್ಮ ವಾಗ್ದಾನವಿಟ್ಟರು.
ಶಾಲೆಯ ಮುಖ್ಯೋಪಾಧ್ಯಾಯರ ಸಹಾಯಕಿಯೊಬ್ಬರು ನನ್ನ ಬಳಿ ಬಂದು ಕುಳಿತು
“ಏನ್ ಮಗಾ ನಿನ್ ಹೆಸರು?” ಎಂದು ಕೇಳಿದರು.
“ನಾನ್ ರಾಹುಲ್ ರೀ ಮೈಸೂರಿಂದ ಬಂದೀನಿ” ಎಂದೆ.
“ಇಲ್ಲಿಂದ ಮೈಸೂರ್ ತನಕ ನಡೆಕೊಂಡು ಹೊರಟೇನು?” ಎಂಬ ಕೌತುಕ ಅವರದು.
“ಹೂಂ ರೀ, ಇಂಗೆ ನಡಕೊಂಟ್ತಾ, ಪಾಠ ಹೇಳ್ಕೊಂಡ್ ಹೊರಟೆ” ಎಂದೆ.
“ಅಂಗೆಲ್ಲ ಅಡ್ಢಾಡ್ ಬೇಡ ತಗಾ. ಅದು ಒಳ್ಳೇದಲ್ಲಾ, ಕೈ ಕಾಲೆಲ್ಲ ಬಿದ್ದು ಹೋಕ್ಕಾವು. ಈ ದುಡ್ಡು ಹಿಡ್ಕಾ. ಬಸ್ಸಿನಲ್ಲಿ ಹೋಗು” ಎಂದು ಹೇಳಿ ಇಪ್ಪತ್ತು ರೂಪಾಯಿ ಕೊಟ್ಟರು.
ನನಗೆ ನಗು ಬಂದಿತು. ಆಯಮ್ಮನಿಗೆ ನಾ ಬಂದ ಉದ್ದೇಶ ಅರ್ಥವಾಗಿರಲಿಲ್ಲ. ಆದರು ಅವರು ತೋರಿಸಿದ ಕಾಳಜಿಗೆ ನಾನು ಮನಸೋತಿದ್ದೆ. ಅವರನ್ನು ನೋಡಿ ಮುಖ್ಯೋಪಾಧ್ಯಾಯರು ನಾನು ಬೇಡವೆಂದರೂ ಐವತ್ತು ರೂಪಾಯಿಯನ್ನು ಕೊಟ್ಟು ತಮ್ಮ ಔದಾರ್ಯತೆ ಮೆರೆದರು. ಶಾಲೆಯ ಆವರಣಕ್ಕೆ ಬಂದರೆ, ಕೆಲವು ಮಕ್ಕಳು ನನ್ನನ್ನು ಮಾತನಾಡಿಸಲು ಕಾಯುತ್ತಿದ್ದರು. ಹಲವು ಪ್ರಶ್ನೆಗಳನ್ನು ಕೇಳಿ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಸ್ವಲ್ಪ ಸಮಯದಲ್ಲೆ ಎಲ್ಲಿಂದಲೋ ಎರಡು ಸಸಿ ತಂದು ನೆಟ್ಟು ನನ್ನಿಂದ ನೀರುಣಿಸಿದರು. ಎಲ್ಲರಿಗೂ ನಮಸ್ಕರಿಸಿ, ನನ್ನ ಮುಂದಿನ ಪಯಣ ಅಂಚಿಟಗೇರಿಯ ಕಡೆಗೆ ಶುರುಮಾಡಿದೆ.
ಮೂರು ಮೈಲುಗಳ ಪಯಣ. ಸುತ್ತಮುತ್ತ ತೆಂಗು, ತೇಗು, ಸೋಯಾಬೀನ್, ಸಪೋಟ ಮರಗಳ ತೋಟ ಮತ್ತು ಹೊಲಗಳು. ಮಾರ್ಗ ಮಧ್ಯೆ ಸಿಕ್ಕ ಎರಡು ಹಳ್ಳಿಗಳ ಹೊರಗೆ ಎಲ್ಲೆಂದರಲ್ಲಿ ಎಸೆದಿದ್ದ ಕಸದ ರಾಶಿ. ಗಿಡ ಮರಗಳ ಮೇಲೆ ಎಸೆದ ಬಟ್ಟೆಗಳು ನೇತಾಡುತ್ತಿದ್ದವು. ಪ್ಲಾಸ್ಟಿಕ್ ತ್ಯಾಜ್ಯವನ್ನು ಊರ ಹೊರಗೆ ಎಸೆದಿದ್ದರು. ಆಯಾ ಊರಿನ ವಿದ್ಯಾವಂತರು ಇದರ ಬಗ್ಗೆ ಗಮನಹರಿಸಿ, ತಮ್ಮ ಸಮಾಜದಲ್ಲಿ ಸ್ವಚ್ಛತೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಬೇಕು. ಇನ್ನು ಉತ್ತರ ಕರ್ನಾಟಕ ಜನಕ್ಕೆ ಅಂಟಿದ ಬಹುದೊಡ್ಡ ಕಳಂಕ ಎಂದರೆ ಎಲೆ, ಅಡಿಕೆ ಮತ್ತು ತಂಬಾಕು. ಈ ಬಗ್ಗೆ ಅವರಲ್ಲಿ ಮಾತನಾಡಿದರೆ, ಅವುಗಳನ್ನು ಸೇವಿಸುವುದೇ ಅವರ ಜನ್ಮ ಸಿದ್ಧ ಹಕ್ಕು ಎನ್ನುವಂತೆ ಆಡುತ್ತಾರೆ. ಅವುಗಳನ್ನು ಸೇವಿಸುವುದರಲ್ಲಿ ನನಗೆ ಯಾವ ಅಭ್ಯಂತರವೂ ಇಲ್ಲ. ಆದರೆ ಸಿಕ್ಕ ಸಿಕ್ಕಲ್ಲಿ ಉಗಿಯುವ ಸಮಸ್ಯೆಗೆ ಶಾಶ್ವತ ಪರಿಹಾರವೊಂದನ್ನು ಕಂಡುಹಿಡಿಯಲೇಬೇಕು.
ಅಂಚಿಟಗೇರಿ ತಲುಪಿ, ರಸ್ತೆಬದಿಯ ಬೇಕರಿಯಲ್ಲಿ ನಿಂತಿದ್ದ ಯುವಕನಿಗೆ ಗ್ರಾ.ಪಂ ಕಚೇರಿಯ ವಿಳಾಸ ಕೇಳಿದೆ. ಅವನು ಹೇಳದೆ ಯಾಕೆ? ಏನು? ಪ್ರಶ್ನೆ ಕೇಳಿದ. ಸ್ವಲ್ಪ ವಿಷಯ ತಿಳಿಸಿ ಆ ಊರಿನಲ್ಲಿ ನನಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಡಬೇಕೆಂದು ತಿಳಿಸಿದೆ. ನನಗೆ ಬೇಕರಿಯಲ್ಲಿ ತಿಂಡಿ ತಿನ್ನುವಂತೆ ಒತ್ತಾಯಿಸಿದ. ನಾನು ಬೇಡವೆಂದಾಗ ಐವತ್ತು ರೂಪಾಯಿ ಕೊಟ್ಟ. ನನಗೆ ಆಶ್ಚರ್ಯವಾಗಿ ಬೇಡವೆಂದೆ. ಯಾಕೆ ಜನರು ನನಗೆ ಹಣಕೊಡಲು ಬರುತ್ತಿದ್ದಾರೆ ಎಂಬುದು ನನಗೆ ತಿಳಿಯದ ಯಕ್ಷ ಪ್ರಶ್ನೆಯಾಗಿತ್ತು. ಅವರು ದುಡ್ಡು ಕೊಡುವುದರಿಂದ ನನಗೆ ಯಾವ ಹಾನಿಯೂ ಇಲ್ಲವಿದ್ದರಿಂದ, ಕೊಟ್ಟರೆ ಸ್ವೀಕರಿಸಿ ವಂದಿಸಿದರೆ ಆಯ್ತು ಎಂದು ಸುಮ್ಮನಾದೆ.
ಒಬ್ಬ ರಿಯಲ್ ಎಸ್ಟೇಟ್ ದಂಧೆಯ ವ್ಯಕ್ತಿಗೆ ನನ್ನ ವಿಷಯ ತಿಳಿಸಿದರು. ಅವನ ಮುಖ ನೋಡಿದರೆ ಅವನಿಂದ ಯಾವ ಪ್ರಯೋಜನವೂ ಆಗುವಂತೆ ಕಾಣಲಿಲ್ಲ. ನನ್ನ ಬಗ್ಗೆ ಕೂಲಂಕುಷವಾಗಿ ವಿಚಾರಿಸಿ ಮತ್ತು ಪರಿಶೀಲಿಸಿ ಏನಾದರು ವ್ಯವಸ್ಥೆ ಮಾಡುವೆನೆಂದು ಹೇಳಿ ತನ್ನ ಅಂಗಡಿಯ ಒಳಗೆ ಹೋದ. ಅವನು ಭಾರೀ ಧುರೀಣವಿರಬಹುದು ಎಂದು ತಿಳಿದು, ನನಗೆ ಅವನು ವ್ಯವಸ್ಥೆ ಮಾಡೇಕೊಡುತ್ತಾನೆಂದು ನಂಬಿದೆ. ಸ್ವಲ್ಪ ಹೊತ್ತು ಬಿಟ್ಟು ನೋಡಿದರೆ ಆಸಾಮಿ ಇಲ್ಲವೇ ಇಲ್ಲ. ತನ್ನ ಅಂಗಡಿಗೆ ಬೀಗ ಜಡಿದು ಹೊರಟೇ ಬಿಟ್ಟಿದ್ದಾನೆ.
ಸರಿ ಅದೇ ಬೇಕರಿಯ ಹುಡುಗನ ಮೊಬೈಲ್ನಿಂದ ಯೆರಿಕೊಪ್ಪಾದ ಆರ್.ಎಸ್.ಎಸ್ ಹುಡುಗ ಗುರುಗೆ ಕರೆ ಮಾಡಿ ತನಗೆ ಅಂಚಿಟಗೇರಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುವಂತೆ ವಿನಂತಿಸಿದೆ. ಸಮಯ ಕಳೆಯಲು ಚಹಾ ಕುಡಿದು ಮುಗಿಸುವಷ್ಟರಲ್ಲಿ, ಗುರು ತನ್ನ ಸ್ನೇಹಿತನಾದ ರಾಯ್ನಾಳದ ರೇವಣ್ಣಸಿದ್ಧರಿಂದ ದೂರವಾಣಿ ಕರೆ ಮಾಡಿಸಿದ. ಸಂಘದ ಈ ಒಂದು ಸಂಪರ್ಕಶಕ್ತಿಯನ್ನು ಕಂಡು ನನಗೆ ಬಹಳ ಆಶ್ಚರ್ಯವೂ ಮತ್ತು ಖುಷಿಯೂ ಆಯಿತು. ಇಷ್ಟು ದೊಡ್ಡ ಸಂಪರ್ಕ ವ್ಯವಸ್ಥೆ, ಇಷ್ಟು ದೊಡ್ಡ ಯುವಕರ ಸಮೂಹ, ಇಷ್ಟೊಂದು ಕಾಳಜಿ ಮತ್ತು ಶಿಸ್ತು. ಅಬ್ಬಬ್ಬಾ, ಈ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಕ್ರೋಢಿಕರಿಸಿ ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡರೆ ದೇಶದ ಯಾವುದೇ ಸಮಸ್ಯೆಯನ್ನು ಚಿಟುಕೆ ಹೊಡೆಯುವಷ್ಟರಲ್ಲಿ ಬಗೆಹರಿಸಿಬಿಡಬಹುದು.
ರೇವಣ್ಣಸಿದ್ಧನವರ ಮುಖ ಪರಿಚಯವಿಲ್ಲ ಆದರೂ ನನಗೆ ರಾಯ್ನಾಳ ಮತ್ತು ಅಂಚಿಟಗೇರಿ ಈ ಎರಡೂ ಕಡೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಡುವುದಾಗಿ, ನನ್ನ ಅನುಕೂಲಕ್ಕೆ ತಕ್ಕಂತೆ ನಾನು ಎಲ್ಲಿ ಬೇಕಾದರೂ ಉಳಿಯಬಹುದು ಎಂದು ಹೇಳಿದ್ದುದು ನನ್ನನ್ನು ಸ್ವಲ್ಪ ಪೇಚಿಗೆ ಸಿಲುಕಿಸಿತು. ಮತ್ತೊಬ್ಬ ಸಂಘದ ಹುಡುಗ ಈಶ್ವರ್ನ ಪರಿಚಯ ಮಾಡಿಸಿದರು. ಅವನು ಅಳೆದು ತೂಗಿ, ಬಹಳ ವಿಚಾರ ಮಾಡಿ ತಮ್ಮ ಅಂಗಡಿಯಲ್ಲಿಯೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ. ನಾನು ನಿರಾಳನಾಗಿ ಸುಮಾರು ಎರಡು ಚದುರ ಅಡಿ ಅಳತೆಯ ಅವನ ಹಾರ್ಡ್ವೇರ್ ಅಂಗಡಿಯಲ್ಲೇ ಕುಳಿತೆ. ಅವರ ಮನೆಯಿಂದ ಊಟಕ್ಕೆ ಕರೆ ಬಂತು. ಹಳೇ ನಾಡಂಚಿನ ಮನೆಯಲ್ಲಿ ಬಾಳುತ್ತಿದ್ದ ಅವಿಭಕ್ತ ಕುಟುಂಬ. ಒಳಗೆ ಹೊಕ್ಕರೆ ನನಗೆ ಸ್ವಾಗತಿಸಿದ್ದು ಐದಾರು ಆಕಳು, ಮೂರ್ನಾಲ್ಕು ಕುರಿಗಳಿದ್ದ ಕೊಟ್ಟಿಗೆ. ಅವುಗಳನ್ನು ಕಾಯಲು ಒಂದು ನಾಯಿ. ಕೊಟ್ಟಿಗೆಯನ್ನು ದಾಟಿದರೆ ಹಜಾರದ ಓಣಿ. ಹಿಂದಿನ ಹಿತ್ತಲಿನಲ್ಲಿ ಕೈಕಾಲು ಮುಖ ತೊಳೆದು ಅಡುಗೆ ಮನೆಯ ಹೊರಗೆ ಬಂದು ಕುಳಿತೆವು.
ಊಟಕ್ಕೆ ಚಪಾತಿ, ಜೋಳದ ರೊಟ್ಟಿಯ ಜೊತೆ ಎರಡು ತರಹದ ಪಲ್ಯ, ಚಟ್ನಿ ಪುಡಿ, ಮೊಸರು. ರಾತ್ರಿಯ ಊಟ ಮಾತ್ರ ಬೊಂಬಾಟ್. ಚಾಪೆ ಹೊದಿಕೆಯನ್ನು ತೆಗೆದುಕೊಂಡು ಅಂಗಡಿಗೆ ಹೋಗಿ ಮಲಗಿದೆವು. ಸೊಳ್ಳೆಗಳ ರಂಪಾಟ ಜೋರಿದ್ದರಿಂದ ಸೊಳ್ಳೆ ಬತ್ತಿ ಹಚ್ಚಬೇಕಾಯಿತು. ಗಾಳಿಯಾಡಲೆಂದು ಅಂಗಡಿಯ ಬಾಗಿಲನ್ನು ಅರ್ಧ ತೆಗೆದಿಟ್ಟೆವು. ತಲೆಗೆ ದಿಂಬಿರಲಿಲ್ಲ. ಬಟ್ಟೆಗಳನ್ನೇ ದಿಂಬಾಗಿ ಮಾಡಿ ತಲೆಯನ್ನು ಅದರ ಮೇಲೆ ಇಟ್ಟರೆ, ನನ್ನನ್ನು ಮಿಂಚಿನ ವೇಗದಲ್ಲಿ ನಿದ್ರೆಗೆ ಎಳೆದುಕೊಂಡು ಹೋಯಿತು.
ದೇಶದ ಉಳಿವಿಗೆ ಹಳ್ಳಿಗಳ ಪಾತ್ರ ಬಹುದೊಡ್ಡದು. ನಮ್ಮ ದೇಶದ ಬಹುತೇಕ ಜನ ಹಳ್ಳಿಗಳಲ್ಲೇ ಬದುಕುತ್ತಿದ್ದಾರೆ. ನಮ್ಮ ದೇಶದಲ್ಲಿ ಇನ್ನೂ ಸಾಮಾಜಿಕ ಮೌಲ್ಯಗಳೇನಾದರು ಜೀವಂತವಾಗಿದ್ದರೆ, ಅದು ಹಳ್ಳಿಗಳಲ್ಲಿ ಮಾತ್ರ ಎಂಬ ಸತ್ಯ ಅರ್ಥವಾಯಿತು. ಅದೇ ಹಳ್ಳಿ ಜನರು ನಗರಗಳಿಗೆ ಬಂದು ನೆಲಸಿದರೆ, ಅವರ ಮೌಲ್ಯ, ಸತ್ಯ, ಪ್ರೀತಿ, ನಂಬಿಕೆಗಳು ಕ್ರಮೇಣ ಅಸುನೀಗುತ್ತವೆ. ಹಳ್ಳಿಗಳು ನಶಿಸಿಹೋದರೆ ಮೌಲ್ಯಗಳು ನಶಿಸಿಹೋಗುತ್ತವೆ. ಮೌಲ್ಯಗಳಿಲ್ಲದ ದೇಶ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲ ಎಂಬುದು ನನ್ನ ಅನಿಸಿಕೆ. ಹತ್ತಿ ಉರಿದು ಬೆಂದು ಹೋಗುತ್ತದೆ.
ಹಳ್ಳಿಯೇ ಒಂದು ಸೊಬಗು, ಸತ್ಯವೇ ಅಲ್ಲಿ ಮೆರಗು.
ಮಮತೆಯಾ ಒಂದು ಶಿಖರ, ಪ್ರೀತಿಯೇ ಬೆಳ್ಳಿ ಬಂಗಾರ.
ಕಂಡವಳೇ ನಿನ್ನ ಅಮ್ಮನು, ನೀ ಅವಳ ಕಂದಮ್ಮನು.
ಪುಟ್ಟ ಪುಟ್ಟ ಹಟ್ಟಿಯೂ, ಹೊಟ್ಟೆ ತುಂಬ ರೊಟ್ಟಿಯು.
ಅರಿವೇ ಅಲ್ಲಿ ಹಣತೆಯೂ, ಭಕ್ತಿಗಿಲ್ಲ ಕೊರತೆಯು.
ಒಬ್ಬನೇ ಯಜಮಾನನೂ, ಅವ ಬಿಟ್ಟರಿಲ್ಲ ರಾಜನು.
ಮಾತು ತಪ್ಪದ ನಾಲಿಗೆ, ಅದುವೆ ಆಸ್ತಿ ಅವರ ಪಾಲಿಗೆ.
ಮನವೇ ಅಲ್ಲಿ ದೇವಾಲಯ, ಬಯಲೇ ಅವರ ಶೌಚಾಲಯ.
ಬೆವರು ಸುರಿಸುವ ಕಾಯಕ, ಆಸೆಯೊಲ್ಲದ ಅಮಾಯಕ.
ಸುತ್ತ ಹೊಲ ಗದ್ದೆಯು, ರಾತ್ರಿ ತುಂಬ ನಿದ್ದೆಯು.
ಕೂಡಿ ಬಾಳುವ ಜೀವನ, ಬದುಕೆ ಒಂದು ಪಾವನ.
ಹಟ್ಟಿಯ ತುಂಬಾ ಮಕ್ಕಳು, ಕೊಟ್ಟಿಗೆ ತುಂಬಾ ಆಕಳು.
ಕೈ ಕಾಲಿನ ತುಂಬಾ ಕೆಸರು, ಬಾಯಿ ತುಂಬಾ ಹಾಲು ಮೊಸರು.
ನಾ ಕಂಡೆ ಅಲ್ಲಿಯ ಸ್ವರ್ಗವಾ, ಹಿಡಿರೋ ಹಳ್ಳಿಯ ಮಾರ್ಗವ.
ಮುಗ್ಧ ಮನಸ ಕೆಡಿಸಬೇಡಿರೋ, ಹಳ್ಳಿ ಉಳಿಸಿ ದೇಶ ಬೆಳೆಸಿರೋ.
[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 47 ಮೈಲುಗಳು]





North Karnatakada janara hrudaya tumba olledu… Sadya adre avrige Hele adikena agidu nungo abhayasa madsi banni Rahul sir… Hugidu hugidu darwad hubli google earth allu kempuge kanang madidare… 🙂
ಅದ್ಭುತವಾದಂತಹ ಹಾಸ್ಯ ಪ್ರಜ್ಞೆ ನಿಮಗೆ ಪ್ರದೀಪ್. ಹೌದು, ಗೂಗಲ್ ಅರ್ತ್ಯಿಂದ ಉತ್ತರ ಕರ್ನಾಟಕ ಕೆಂಪಾಗೇ ಕಾಣುವುದು. 😀
ನುಂಗುವ ಅಭ್ಯಾಸ ಮಾಡಿಸಿದರೆ ಬೆಳಗ್ಗೆ ***ದಲ್ಲಿ ಕೆಂಪಗೆ ಬಂದರೆ ಏನು ಗತಿ? ಅದು ಇನ್ನೂ ಅಸಹ್ಯ. ರಸ್ತೆಗಳಲ್ಲದೇ, ಬಯಲೆಲ್ಲಾ ಕೆಂಪಾಗಿ ಹೋಗುತ್ತದೆ.
ನಿಮ್ಮ ಅಪ್ಪಣೆ ಪಡೆದು, ನಿಮ್ಮ ಹಾಸ್ಯವನ್ನು ನನ್ನ ಪುಸ್ತಕದಲ್ಲಿ ಸೇರಿಸುತ್ತೇನೆ.
Yinnodu athi gambheeravada vishayavendare ‘bhayalu shoucha’. Edu yindigu kelavu kade roodiyallide. Yidarindaguva anavuthagalu haagu edannu hatthikkalu namma dhesha/rajya sarkaragalu kaigondiruva aneka yojanegala bagge arivu moodisuva karyagalu gramanthara pradheshagalli hecchu parinamakariyagi haguva aghathya thumba ede.
ತುಂಬಾನೇ ಅಗತ್ಯವಿದೇ ಪ್ರದೀಪ್. ಅಗತ್ಯವಿರುವ ಕಡೆ, ಬರೀ ಮಾತು, ಚರ್ಚೆಗಳಿಗಿಂತ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಮುಖ್ಯ. ಭಾರತವನ್ನು ಬಯಲು ಶೌಚ ಮುಕ್ತ ದೇಶವನ್ನಾಗಿ ಮಾಡಲು ಈಗಿನ ಸರ್ಕಾರಗಳು ಕೈಗೊಂಡಿರುವ ಕೆಲಸಗಳ ಜೊತೆ ನಾವೆಲ್ಲರೂ ಕೈ ಜೋಡಿಸೋಣ. ಎಲ್ಲೆಲ್ಲಿ ಸಾಧ್ಯವೋ, ಅಲ್ಲೆಲ್ಲಾ ಪರಿಣಾಮಕಾರಿಯಾಗಿ ಅರಿವು ಮೂಡಿಸೋಣ.