ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಶೇಖರ ಆಲೂರು ಕಾಲಂ: ಹದಿಮೂರು ಪ್ರಯಾಣಿಕರು ಮತ್ತು..

ಅದೇಕೋ ಇರ್ವಿಂಗ್ ವ್ಯಾಲೇಸ್ ನ ‘ಸಂಡೆ ಜಂಟಲ್ ಮೆನ್’ ಕೃತಿಯನ್ನ ಮತ್ತೊಮ್ಮೆ ತಿರುವಿ ಹಾಕುತ್ತಿದ್ದಾಗ ಈ ‘ಓರಿಯಂಟ್ ಎಕ್ಸ್ ಪ್ರೆಸ್’ ನನ್ನನ್ನ ಹಿಡಿದು ನಿಲ್ಲಿಸಿತು. ಇದೇನಪ್ಪ ಮತ್ತೆ ರೈಲ್ವೆ ಸ್ಟೇಷನ್ ಅಂದುಕೊಳ್ಳಬೇಡಿ. ಒಂದು ಶತಮಾನ ಕಾಲ ಯೂರಪ್ ಖಂಡದ ಪ್ರಯಾಣಿಕರನ್ನ, ವಿವಿಧ ರಾಷ್ಟ್ರಗಳ ಪ್ರವಾಸಿಗರನ್ನ ಪ್ಯಾರಿಸ್ ನಿಂದ ಇಸ್ತಾನ್ ಬುಲ್ ಗೆ ಮತ್ತು ಮರಳಿ ಪ್ಯಾರಿಸ್ ಗೆ ಸುತ್ತಾಡಿಸಿದ ಟ್ರೈ ನು ಇದು. ಅಷ್ಟೇ ಅಲ್ಲ, ಯೂರಪ್ ನ ಹತ್ತಾರು ದೇಶಗಳ ನಡುವೆ ಸಂಚರಿಸುತ್ತಾ ಆ ಖಂಡವನ್ನ ಬೆಸೆದ ರೈಲು. ಲೇಖಕರಿಗೆ ನಾಸ್ಟಾಲ್ಜಿಯಾ ಎಂದರೆ ಬಹಳ ಇಷ್ಟ! ಖ್ಯಾತ ಪತ್ರಕರ್ತ – ಕಾದಂಬರಿಕಾರ ಇರ್ವಿಂಗ್ ವ್ಯಾಲೆಸ್ ಈ ಎಕ್ಸ್ ಪ್ರೆಸ್ ಗಾಡಿಯ ಬಗ್ಗೆ ತೀವ್ರ ಅನುರಕ್ತಿಯಿಂದ ಬರೆದಿದ್ದಾನೆ.

೧೯೩೦ ರ ಚಳಿಗಾಲದ ದಿನಗಳು. ಪ್ಯಾರಿಸ್ ನಿಂದ ಟರ್ಕಿಯ ಇಸ್ತಾನ್ ಬುಲ್ ಗೆ ಪಯಣಿಸುತ್ತಿದ್ದ ಓರಿಯಂಟ್ ಎಕ್ಸ್ ಪ್ರೆಸ್ ತನ್ನ ಪ್ರಯಾಣದ ಕಡೆಯ ಹಂತದಲ್ಲಿತ್ತು. ಅಷ್ಟರಲ್ಲಿ ಭೀಕರವಾದ ಹಿಮಗಾಳಿ ಬೀಸಲಾರಂಭಿಸಿ ಹಿಮ ಮಳೆಗೆರೆಯಲಾರಂಭಿಸಿತು. ರೈಲು ಕಂಬಿಗಳು ಸಂಪೂರ್ಣವಾಗಿ ಹಿಮದಲ್ಲಿ ಹೂತು ಹೋಗಿದ್ದರಿಂದ ಟ್ರೈನು ನಿಲ್ಲಲೆಬೇಕಾಯ್ತು. ಚಲನೆಯೇ ಉಸಿರಾದ ಟ್ರೈ ನು ಸ್ತಾವರವಾಗಿ ಬಿಟ್ಟಿತು. ಕೆಲವೇ ಗಂಟೆಗಳಲ್ಲಿ ನಿಂತ ಟ್ರ್ಯಿನಿನ ಸುತ್ತ ಹಿಮ ಕವಿಯಲಾರಂಭಿಸಿತು. ಮುಂಜಾನೆಯ ವೇಳೆಗೆ ಹಿಮದ ರಾಶಿ ಕಿಟಕಿಯನ್ನ ತಲುಪಲಾರಂಭಿಸಿತ್ತು.

ಬಹುತೇಕ ಪ್ರಯಾಣಿಕರು ಮಿಲಾನ್, ಬೆಲ್ ಗ್ರೇಡ್ ಮುಂತಾದ ಹಿಂದಿನ ನಿಲ್ದಾಣಗಳಲ್ಲಿ ಇಳಿದುಕೊಂಡದ್ದರಿಂದ ಕೇವಲ ಹದಿಮೂರು ಪ್ರಯಾಣಿಕರು ಟ್ರೈನಿನಲ್ಲಿದ್ದರು, ಹಿಮದ ಕೋಟೆಯಲ್ಲಿ ಬಂಧಿಯಾಗುತ್ತಾ. ಅಂದು ಓರಿಯಂಟ್ ಎಕ್ಸ್ ಪ್ರೆಸ್ ನಲ್ಲಿದ್ದ ಸಿಬ್ಬಂದಿ ವರ್ಗದವರು ನೀಡಿರುವ ದಾಖಲೆಯಂತೆ ಈ ಹದಿಮೂರು ಪ್ರಯಾಣಿಕರು ವಿಭಿನ್ನ ರಾಷ್ಟ್ರಗಳಿಗೆ ಸೇರಿದವರಾಗಿದ್ದರು.

ಓರಿಯಂಟ್ ಎಕ್ಸ್ಪ್ರೆಸ್ ನ ಸಿಬ್ಬಂದಿ ಕೂಡಲೇ ಒಂದು ಸಭೆ ನಡೆಸಿದರು. ಇಂಥ ಹಿಮಪಾತದ ಅನುಭವ ಈ ಹಿಂದೆಯೂ ಆಗಿತ್ತು. ನಾಲ್ಕು ದಿನಗಳ ದೀರ್ಘಕಾಲ ಹೀಗೆ ಯಾವುದೋ ನಿಗೂಢ ಸ್ಥಳದಲ್ಲಿ ಹಿಮಗಾಳಿಯ ನಡುವೆ ಇದೆ ರೀತಿ ಸಿಲುಕಿದ ಅನುಭವವಿತ್ತು. ಅಂದಿನ ವಾತಾವರಣ ಕಂಡರೆ ಈ ಹಿಮಗಾಳಿ ಇನ್ನೂ ಹೆಚ್ಚು ಕಾಲ ತೆಗೆದುಕೊಳ್ಳುವಂತೆ ಕಾಣುತ್ತಿತ್ತು. ಹೀಗಾಗಿ ಆ ಐಷಾರಾಮಿ ಟ್ರೈನಿನಲ್ಲಿ ಉಳಿದಿದ್ದ ಪ್ರಯಾಣಿಕರ ರಕ್ಷಣೆಯೇ ಅವರ ಮುಖ್ಯ ಗುರಿಯಾಗಿತ್ತು. ಹೀಗೆ ದಿನಗಟ್ಟಲೆ ಹಿಮಾವೃತ ಟ್ರೈ ನಿನಲ್ಲಿರುವ ಪ್ರಯಾಣಿಕರು ಪರಸ್ಪರ ಜಗಳವಾಡುವ ಅಥವಾ ಡಿಪ್ರೆಷನ್ ಗೆ ಹೋಗುವ ಅಥವಾ ಸಿಬ್ಬಂದಿ ಮೇಲೆ ಆಕ್ರೋಶಗೊಳ್ಳುವ ಸಾಧ್ಯತೆಗಳಿದ್ದವು. ಹೀಗಾಗಿ ಅಲ್ಲಿ ಒಂದು ಅಲಿಖಿತ ನಿಯಮವನ್ನ ಜಾರಿ ತರಲಾಯ್ತು. ಪ್ರಯಾಣಿಕರು ಯಾವ ಕಾರಣಕ್ಕೂ ರಾಜಕೀಯದ ಬಗ್ಗೆ ಮಾತಾಡಬಾರದು. ಅದೊಂದನ್ನ ಹೊರತು ಪಡಿಸಿ ಸಿನೆಮಾ, ಸೆಕ್ಸ್, ಸಾಹಿತ್ಯ ಮುಂತಾಗಿ ಏನಾದರೂ ಮಾತಾಡಿಕೊಳ್ಳಿ ಎಂದು ಪ್ರಯಾಣಿಕರಿಗೆ ಸೂಚಿಸಲಾಯ್ತು. ಏಳು ವಿವಿಧ ರಾಷ್ಟ್ರಗಳಿಗೆ ಸೇರಿದವರಾಗಿದ್ದ ಓರಿಯಂಟ್ ಎಕ್ಸ್ ಪ್ರೆಸ್ ನ ಸಿಬ್ಬಂದಿ ವರ್ಗದಲ್ಲಿ ಈ ನಿಯಮ ಮೊದಲಿನಿಂದಲೂ ರೂಢಿಯಲ್ಲಿತ್ತು. ಅರ್ಧ ಶತಮಾನದಿಂದ ಪ್ಯಾರಿಸ್ ಮತ್ತು ಇಸ್ತಾನ್ ಬುಲ್ ನಡುವೆ ವಾರಕ್ಕೆ ಮೂರು ದಿನ ಓದುತ್ತಿದ್ದ ಓರಿಯಂಟ್ ಎಕ್ಸ್ ಪ್ರೆಸ್ಸ್ನಲ್ಲಿ ಇದನ್ನು ವ್ರತದಂತೆ ಪಾಲಿಸಲಾಗುತ್ತಿತ್ತು. ಇದಕ್ಕೆ ಮುಖ್ಯ ಕಾರಣ ಯುರೋಪ್ ನ ಹಲವಾರು ರಾಷ್ಟ್ರಗಳ ನಡುವೆ ಹಾದು ಹೋಗುತ್ತಿದ್ದ ಒರಿಯನ್ಟ್ಗೆ ಇದು ಅನಿವಾರ್ಯ ಕೂಡ ಆಗಿತ್ತು.

ಪ್ರಯಾಣಿಕರ ನಡುವೆ ತೀರಾ ಆಪ್ತತೆ ಮೂಡದಿದ್ದರೂ ಸಂಘರ್ಷದ ಮನೋಭಾವವಂತೂ ಬರಲಿಲ್ಲ. ಒಂದು, ಎರಡು, ಮೂರು ದಿನ ಕಳೆದರೂ ಎಲ್ಲೋ ಅಪರೂಪಕೂಮ್ಮೆ ಸ್ವಲ್ಪ ಬೆಳಕು ಕಾಣುತ್ತಿದ್ದುದನ್ನ ಬಿಟ್ಟರೆ ಹಿಮಗಾಳಿಯ ತೀವ್ರತೆ ಹೆಚ್ಚುತ್ತಲೇ ಇತ್ತು. ಟ್ರೈನು ತನ್ನ ಪ್ರಯಾಣದ ಅಂತಿಮ ಘಟ್ಟದಲ್ಲಿದ್ದರಿಂದ ಶೇಖರಿಸಿದ್ದ ಉತ ಎಂದು ತೀರ್ಮಾನಿಸಿದ್ದರು.

ಆರನೆಯ ದಿನ. ಆಹಾರದ ಸರಬರಾಜು ಮುಗಿಯುತ್ತಾ ಬಂದಿತ್ತು. ಥೇಟ್ ಕತೆಗಳಲ್ಲಿ ಆಗುವಂತೆ ತೋಳಗಳು ಟ್ರೈನಿನ ಸುತ್ತ ಠಳಾಯಿಸಲು ಶುರು ಮಾಡಿದ್ದವು. ಇಬ್ಬರು ನಿರ್ವಾಹಕರು ಬಂದೂಕು ಹಿಡಿದು ಪ್ರಯಾಣಿಕರ ಬೆಂಗಾವಲಿಗೆ ನಿಂತರು. ಏಳನೆಯ ದಿನ ಸ್ವಲ್ಪ ಬೆಳಕು ಕಂಡು ಹಿಮ ಕರಗಲಾರಂಭಿಸಿತು. ತೋಳಗಳು ಊಳಿಡುತ್ತಲೇ ಕೊಂಚ ದೂರ ಸರಿದಿದ್ದವು. ಆದರೆ ಕಲ್ಲಿದ್ದಲು ಮುಗಿಯುತ್ತಾ ಬಂದು ಇಡೀ ಟ್ರೈ ನು ಹಿಮಗಟ್ಟಲಾರಂಬಿಸಿತ್ತು. ಅದೇ ವೇಳೆಗೆ ಕುಡಿಯುವ ನೀರೂ ಮುಗಿಯಿತು. ಆದರೆ ಅಡುಗೆಯವನು ಕೈಗೆ ಸಿಗುತ್ತಿದ್ದ ಹಿಮವನ್ನೇ ಚೆನ್ನಾಗಿ ಕುಡಿಸಿ ನೀರಿನ ವ್ಯವಸ್ಥೆ ಮಾಡಿದ. ಪ್ರಯಾಣಿಕರು ಬದುಕಿನ ಆಸೆಯನ್ನ ಕಳೆದುಕೊಂಡವರಂತೆ, ಹಸಿವಿನಿಂದ ಕಂಗೆಟ್ಟು ಪೂರಾ ಸಪ್ಪಗಾಗಿಬಿಟ್ಟರು.

ಹತ್ತನೆಯ ದಿನ ರೈಲು ಸಿಬ್ಬಂದಿ ನಿರಂತರ ಪ್ರಯತ್ನದಿಂದ ಟ್ರೈ ನಿನಿಂದ ಹೊರಬರುವ ಹಾದಿಯಲ್ಲೂ ಮಾಡಿಕೊಂಡರು. ಟ್ರೈ ನು ನಿಂತ ಜಾಗದಿಂದ ಸ್ವಲ್ಪ ದೂರದಲ್ಲೆಲ್ಲೋ ಒಂದು ಹಳ್ಳಿಯಿರುವುದು ಅವರಿಗೆ ತಿಳಿದಿತ್ತು. ಇಬ್ಬರು ಬಂದೂಕುಗಳನ್ನ ಹಿಡಿದು ಹೊರಗೆ ಹೊರಟರು. ಕಾಲುಗಳು ಧಸಕ್ಕನೆ ಕುಸಿದು ಎದೆಮಟ್ಟ ಹಿಮದಲ್ಲಿ ಹೂತು ಹೋಗುತ್ತಾ, ಏಳುತ್ತಾ ಸ್ವಲ್ಪ ದೂರ ಸಾಗಿದ ಮೇಲೆ ಗಟ್ಟಿ ನೆಲ ಸಿಕ್ಕಂತಾಗಿ ಧೈರ್ಯವಾಗಿ ಮುನ್ನಡೆದರು. ಇತ್ತ ಪ್ರಯಾಣಿಕರು ಆಗಸದೆಡೆ ಮುಖ ಮಾಡಿ ದೇವರಲ್ಲಿ ಪ್ರಾರ್ಥಿಸುತ್ತಾ ಮತ್ತೊಂದು ದಿನ ಕಳೆದರು.

ಆ ಇಬ್ಬರು ಧೀರರು ಹಳ್ಳಿಯನ್ನು ತಲುಪಿ ಅಲ್ಲಿಂದ ಕೇಂದ್ರ ಕಚೇರಿಗೆ ಫೋನ್ ಮಾಡಿದರು. ಹಲವು ದಿಕ್ಕುಗಳಿಂದ ಟ್ರೈ ನು ಇರುವ ಜಾಗಕ್ಕೇ ಬರಲು ಈಗಾಗಲೇ ಕಾರ್ಯಾಚರಣೆ ಶುರುವಾಗಿದೆ ಎಂಬ ಉತ್ತರ ಬಂತು. ಈ ಇಬ್ಬರೂ ಹಳ್ಳಿಗರ ಬಳಿ ಚೌಕಾಸಿ ಮಾಡಿ ಒಂದಷ್ಟು ಕುರಿ ಮಾಂಸ ಮತ್ತು ಕಲ್ಲಿದ್ದಲನ್ನು ಕೊಂಡು ಸ್ಥಳೀಯನೊಬ್ಬನ ನೆರವಿನಿಂದ ಹಳೆಯ ಜಾರುಗಾಡಿಯನ್ನ ಪತ್ತೆ ಮಾಡಿ ಅದರಲಲ್ಲಿ ತುಂಬಿಕೊಂಡು ಬಂದರು. ಅಂದು ರಾತ್ರಿ ಟ್ರೈ ನಿನಲ್ಲಿ ಇದ್ದವರಿಗೆಲ್ಲ ಬಿಸಿಬಿಸಿಯಾದ ಮಾಂಸಾಹಾರ ಸಿಕ್ಕಿತು.

ಹದಿನೈದನೆಯ ದಿನ ಕುದುರೆಗಳು ಎಳೆಯುತ್ತಿದ್ದ ಜಾರುಬಂಡಿಯಲ್ಲಿ ತುರ್ಕಿಯ ಸೈನಿಕರು ಆಹಾರ, ಬಟ್ಟೆ, ಪ್ರಥಮ ಚಿಕಿತ್ಸೆಯ ಸಲಕರಣೆಗಳೊಂದಿಗೆ ಬಂದಿಳಿದರು. ಮರು ದಿನ ಸ್ವಿಜ್ಹರ್ ಲ್ಯಾಂಡ್ ನಿಂದ snow sweeper ಬಂದಿತು. ಕಡೆಗೂ ಎರಡೂವರೆ ವಾರಗಳ ಹಿಮಬಂದನದಿಂದ ಮುಕ್ತವಾಗಿ ಓರಿಯಂಟ್ ಎಕ್ಸ್ ಪ್ರೆಸ್ ಇಸ್ತಾನ್ ಬುಲ್ ನತ್ತ ಪ್ರಯಾಣ ಆರಂಭಿಸಿತು.

ಈ ಘಟನೆ ಮತ್ತು ಇಂಥ ಹಲವು ಘಟನೆಗಳು ಅಗಾಥಾ ಕ್ರಿಸ್ತಿಯ ಹಲವಾರು ಕಾದಂಬರಿಗಳಿಗೆ ಸ್ಫೂರ್ತಿ ನೀಡಿವೆ: “ಯುಗೋಸ್ಲಾವಿಯಾದ ಎತ್ತರದ ಹಿಮಾಚ್ಚಾದಿತ ಪರ್ವತ ಶ್ರೇಣಿಯ ನಡುವೆ ಪಯಣಿಸುತ್ತಿದ್ದ ಓರಿಯಂಟ್ ಎಕ್ಸ್ ಪ್ರೆಸ್ ಧಡಕ್ಕನೆ ನಿಂತಿತು. ಇದ್ದಕ್ಕಿದ್ದಂತೆ ಹಿಮಗಾಳಿ ಮತ್ತು ಭೀಕರ ಹಿಮಪಾತ. ಈ ಟ್ರೈ ನಿನ ಒಂದು ಬೋಗಿಯಲ್ಲಿ ಜಗದ್ವಿಖ್ಯಾತ ಪತ್ತೆದಾರ ಹಕ್ಯೂರ್ಲ್ ಪೈರಟ್ ಕುಳಿತಿದ್ದಾರೆ ಮತ್ತೂಂದು ಬೋಗಿಯಲ್ಲಿ ಕೊಲೆಯಾದ ಮನುಷ್ಯನೊಬ್ಬನ ಹೆಣ ಬಿದ್ದಿತ್ತು…” ಇದು ಆಗಾಥಳ ಕಾದಂಬರಿಯೊಂದರ ಬ್ಲರ್ಬ್. ಓರಿಯಂಟ್ ಎಕ್ಸ್ ಪ್ರೆಸ್, ದಿ ಲೇಡಿ ವ್ಯಾನಿಷಸ್, ಇಸ್ತಾನ್ ಬುಲ್ ಟ್ರೈ ನ್ ಮುಂತಾದ ಕಾದಂಬರಿಗಳ ಸೃಷ್ಟಿಗೆ ಈ ಟ್ರೈನು ಕಾರಣವಾಗಿದೆ! ಹಲವಾರು ಹಾಲಿವುಡ್ ಸಿನೆಮಾಗಳಿಗೂ ಸ್ಫೂರ್ತಿ ನೀಡಿದೆ. ಹಲವು ದೇಶಗಳ ರಾಜ ಮಹಾರಾಜರು, ಸೇನಾ ಕರ್ನಲ್ ಗಳು, ಸೆಲೆಬ್ರಿಟಿಗಳು, ಸಾಮಾನ್ಯ ಪ್ರವಾಸಿಗರು ಈ ಐಷಾರಾಮಿ ಟ್ರಿನಿನ ಪ್ರಯಾಣವನ್ನ ವಿವಿಧ ಬಗೆಯಲ್ಲಿ ದಾಖಲಿಸಿದ್ದಾರೆ. ಬಹುಪಾಲು ಪ್ರಯಾಣಿಕರಿಗೆ ಇದೊಂದು ರೊಮ್ಯಾಂಟಿಕ್ ಪಯಣ.

ಎರಡು ಮಹಾಯುದ್ದಗಳ ನಡುವೆಯೂ ನಿರಾತಂಕವಾಗಿ ಚಲಿಸಿದ ಓರಿಯಂಟ್ ಎಕ್ಸ್ ಪ್ರೆಸ್ ೧೯೬೧ ಮೇ ತಿಂಗಳ ಒಂದು ಸಂಜೆ ಪ್ಯಾರಿಸ್ ನಿಂದ ಬುಡಾಪೆಸ್ಟ್ ಗೆ ತೊಂಬತ್ತು ಪ್ರಯಾಣಿಕರನ್ನು ಕರೆ ತಂದು ತನ್ನ ಕಡೆಯ ಪಯಣವನ್ನು ಮುಗಿಸಿತು. ಇದಕ್ಕೆ ಹಲವು ಕಾರಣಗಳಿದ್ದವು. ವಿಮಾನ ಪ್ರಯಾಣಕ್ಕೆ ಒಗ್ಗಿದ ಪ್ರವಾಸಿಗಳು; ಯೂರಪ್ ನಲ್ಲಿ ಅಲ್ಲಲ್ಲಿ ಸ್ಥಾಪಿತವಾದ ಕಮ್ಯುನಿಸ್ಟ್ ಸರ್ಕಾರಗಳು… ಹೀಗೆ.

ಈಗಂತೂ ರೈಲ್ವೆ ಜಾಲ ಇಡೀ ಯೂರಪ್ ನ್ನು ಹೆಣೆದು ಬಿಟ್ಟಿದೆ. ಆದರೆ ಒಂದೂವರೆ ಶತಮಾನದ ಹಿಂದೆ ಓರಿಯಂಟ್ ಎಕ್ಸ್ ಪ್ರೆಸ್ ಸೃಷ್ಟಿಸಿದ ಮಾಯಾಜಾಲ ಇಂದಿಗೂ ಅಮರವಾಗಿದೆ.

 

‍ಲೇಖಕರು G

16 May, 2011

1 Comment

  1. Arvind Subbanna

    Nostalgia, of course. But remembering past always opens-up something for which we did not have time then.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading