ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಶೇಖರ ಆಲೂರು ಕಾಲಂ: ಪುಟ್ಟ ಹುಡುಗಿ, ಪುಟ್ಟ ಹೆಂಗಸು

 

‘ಇದು ಮೋಸ, ಆಲ್ಕೆಮಿಸ್ಟ್, ವೆರೋನಿಕಾ, ಡಾವಿಂಚಿ ಕೋಡ್, ಟು ಸರ್ ವಿತ್ ಲವ್ ಮುಂತಾದ ಕೃತಿಗಳ ಸಾರ ಸಂಗ್ರಹವನ್ನು ಕನ್ನಡದಲ್ಲಿ ಹೇಳಿದ ನೀವು ರೈಲ್ವೆ ಚಿಲ್ಡ್ರೆನ್ ಕಥೆ ಹೇಳದಿರುವುದು ತಪ್ಪಲ್ಲವೇ. ನೀವು ಕನ್ನಡದಲ್ಲಿ ಕಥೆ ಹೇಳದಿದ್ದರೆ ನನ್ನಂತ ಸಾಮಾನ್ಯ ಓದುಗರಿಗೆ ಈ ಕೃತಿಗಳ ಹೂರಣ ಖಂಡಿತಾ ತಿಳಿಯುತ್ತಿರಲಿಲ್ಲ. ಅಪ್ಪನಿಗಾಗಿ ಕಾಯುತ್ತಾ ಕುಳಿತ ಮಕ್ಕಳ ಕಥೆಯನ್ನ ಒಂದೇ ಉಸಿರಿನಲ್ಲಿ ಹೇಳಿಬಿಡಿ, ಪ್ಲೀಸ್”

ಮೊನ್ನೆ ಶನಿವಾರ ಬಂದ ಈ ಸಂದೇಶ ನೋಡಿ ನಗು ಬಂತು. ರೈಲ್ವೆ ಚಿಲ್ಡ್ರೆನ್ ನಿಜಕ್ಕೂ ಒಂದು ಅತ್ಯುತ್ತಮ ಮಕ್ಕಳ ಕ್ಲಾಸಿಕ್. ಆದರೆ ನನ್ನ ಸಮಸ್ಯೆ ಏನೆಂದರೆ ಹೀಗೆ ಯಾವುದಾದರೂ ಕೃತಿಯ ಭಾವಾನುವಾದಕ್ಕೆ ಹೊರಟರೆ ಎಂಟು-ಹತ್ತು ವಾರ ಅದರಲ್ಲಿಯೇ ಮುಳುಗಿರುತ್ತೇನೆ. ಬೇರೇನೂ ಓದುವುವುದೂ ಇಲ್ಲ, ಬರೆಯುವುದೂ ಇಲ್ಲ. ಈ ಕಾರಣದಿಂದ ಈ ರೈಲ್ವೆ ಮಕ್ಕಳ ಸಹವಾಸ ಬೇಡ ಎಂದುಕೊಂಡೆ. ಈಗ ಈ ಓದುಗರ ಕೋರಿಕೆಯ ಮೇರೆಗೆ ಒಂದೇ ಉಸಿರಿನಲ್ಲಿ ಕಥೆ ಹೇಳಿ ಬಿಡುತ್ತೇನೆ. ನೀವೂ ಕೇಳಿಸಿಕೊಳ್ಳಿ.

 

ಲಂಡನ್ ನಗರದಿಂದ ಬಂದು ಹಳ್ಳಿಗಾಡಿನ ಒಂದು ರೈಲ್ವೆ ಸ್ಟೇಷನ್ ಗೆ ಸಮೀಪದ ಏಕೈಕ ಮನೆ Three Chimneys ಸೇರಿದ ಮೇಲೆ ಮಕ್ಕಳು ಅಮ್ಮನ ಬಳಿ ಅಪ್ಪನ ಬಗ್ಗೆ ನೂರಾರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಅಪ್ಪ ಎಲ್ಲಿ ಹೋಗಿದ್ದಾರೆ? ಏನು ಮಾಡುತ್ತಿದ್ದಾರೆ? ಹೇಗಿದ್ದಾರೆ? ಯಾಕೆ ಒಂದು ದಿನವೂ ಬರಲಿಲ್ಲ? ಪತ್ರವನ್ನೂ ಬರೆಯಲಿಲ್ಲ… ಹೀಗೆ. ಮಕ್ಕಳ ಪ್ರಶ್ನೆಗಳಿಗೆ ಅಮ್ಮ ತಾಳ್ಮೆಯಿಂದ ಉತ್ತರಿಸುತ್ತಿದ್ದಳು, ತನ್ನ ಶಕ್ತ್ಯಾನುಸಾರ. ಆದರೆ ದಿನಗಳೆದಂತೆ ಮಕ್ಕಳು ಅಮ್ಮನ ಬಳಿ ಅಪ್ಪನ ವಿಚಾರ ಮಾತಾಡುವುದನ್ನ ನಿಲ್ಲಿಸಿಯೇ ಬಿಟ್ಟರು. ಇಂಥ ಪ್ರಶ್ನೆಗಳಿಂದ ಅಮ್ಮನ ಮನಸ್ಸಿಗೆ ನೋವಾಗುತ್ತದೆ ಮತ್ತು ಆಕೆ ಏಕೋ ದುಃಖಿತಳಾಗುತ್ತಿದ್ದಾಳೆ ಎಂಬುದನ್ನ ಬಾಬ್ಬಿ ಮೊದಲ ದಿನವೇ ಅರಿತುಕೊಂಡಳು. ಕ್ರಮೇಣ ಉಳಿದಿಬ್ಬರಲ್ಲೂ ಇದೆ ಭಾವ ಮೂಡಿತು.

 

ಒಂದು ದಿನ ಅಮ್ಮ ಇಳಿ ಸಂಜೆಯಾದರೂ ಟೀ ಕುಡಿಯಲು ಕೆಳಗೆ ಬರಲೇ ಇಲ್ಲ. ಮಕ್ಕಳು ‘ಅಮ್ಮನ ವರ್ಕ್ ಶಾಪ್’ ಎಂದು ಕರೆಯುವ ವಿಶಾಲ ಕೊಠಡಿಯಲ್ಲಿ ಏನೋ ಬರೆಯುತ್ತಾ ಕುಳಿತಿದ್ದಳು. ಬಾಬ್ಬಿಯೇ ಅಮ್ಮನಿಗೆ ಟೀ ತಂದು ಅವಳೆದುರು ಇಟ್ಟು, ತಣ್ಣಗಾಗಿ ಬಿಡುತ್ತೆ ಬಿಸಿ ಇದ್ದಾಗಲೇ ಕುಡಿಯಮ್ಮ ಎಂದಳು. (ಅಮ್ಮನ ಬರವಣಿಗೆಯಿಂದಲೇ ಬದುಕು ಸಾಗುತ್ತಿತ್ತು. ಪತ್ರಿಕೆಗಳಿಂದ ಹಣ ಬಂದ ದಿನ ಮಕ್ಕಳಿಗೆ ಸಂಜೆ ಟೀ ಜೊತೆಗೆ ಬನ್ನು ಕೂಡ ಸಿಗುತ್ತಿತ್ತು. ಬ್ರೆಡ್ ಜತೆ ಬೆಣ್ಣೆ ಅಥವಾ ಜಾಮ್ ಎರಡರಲ್ಲಿ ಒಂದನ್ನ ಉಪಯೋಗಿಸಿ, ಈಗ ನಾವು ಅಷ್ಟು ಸ್ಥಿತಿವಂತರಲ್ಲ ಎಂದು ಅಮ್ಮ ಹೇಳುತ್ತಿದ್ದಳು)

ಅಮ್ಮ ಪೆನ್ನನ್ನ ಕೆಳಗಿಟ್ಟು ಮೇಜಿನ ಮೇಲೆ ಹರಡಿದ್ದ ಹಾಳೆಗಳನ್ನ ಜೋಡಿಸಿ ಬಾಬ್ಬಿಯನ್ನ ಅಕ್ಕರೆಯಿಂದ ನೋಡಿದಳು. ಬಾಬ್ಬಿ ಅಮ್ಮನ ಹಿಂದೆ ನಿಂತು ಆಕೆಯ ತಲೆಯನ್ನ ನೇವರಿಸುತ್ತಾ “ತಲೆ ನೋಯ್ತಾ ಇದೆಯಾ ಅಮ್ಮ” ಎಂದಳು.

“ಇಲ್ಲ… ಇಲ್ಲ. ಹುಂ ಸ್ವಲ್ಪ … ಬಾಬ್ಬಿ ಪೀಟರ್ ಮತ್ತು ಫಿಲಿಸ್ ಅಪ್ಪನನ್ನ ಮರೆತು ಬಿಟ್ಟಿದ್ದಾರೆ ಅನ್ಸುತ್ತಾ”

“ಇಲ್ಲಪ್ಪಾ, ಯಾಕೆ”

“ನೀವ್ಯಾರೂ ಈಚೆಗೆ ಅಪ್ಪನ ಬಗ್ಗೆ ಏನನ್ನೂ ಕೇಳುತ್ತಲೇ ಇಲ್ಲ.”

“ನಾವು ನಾವೇ ಇದ್ದಾಗ ಅಪ್ಪನ ಬಗ್ಗೆ ಮಾತಾಡಿಕೊಳ್ಳುತ್ತೇವೆ.”

“ಆದರೆ ನನ್ನ ಬಳಿ ಏನೂ ಮಾತಾಡೆ ಇಲ್ಲ. ಯಾಕೆ ಬಾಬ್ಬಿ”

“ನೀನು…”

“ನಾವು ಅಪ್ಪನ ಬಗ್ಗೆ ಮಾತಾಡಿದರೆ ನಿನ್ನ ಮನಸ್ಸಿಗೆ ನೋವಾಗುತ್ತೆ ಅನ್ನಿಸಿತು, ಅದರಿಂದ ನಾನು ಮಾತಾಡಲಿಲ್ಲ”

“ಉಳಿದವರಿಗೆ?”

“ಅವರಿಗೂ ಹಾಗೆ ಅನ್ನಿಸಿರಬೇಕು”

“ನೀವು ಪದೆಪದೆ ಕೇಳಿದಾಗ ಮನಸ್ಸಿಗೆ ನೋವಾಗುತ್ತಿತ್ತು ನಿಜ. ಆದರೆ ನೀವೆಲ್ಲಾ ಅಪ್ಪನ ಬಗ್ಗೆ ಮಾತಾಡದಿದ್ದರೆ ಇನ್ನೂ ದುಃ ಖವಾಗುತ್ತೆ ಬಾಬ್ಬಿ”

***

“ನಾವು ಜಗಳ ಆಡೋದು ಬೇಡ, ಅಮ್ಮನಿಗೆ ಬೇಜಾರಾಗುತ್ತೆ” – ಎಂದು ಮಕ್ಕಳು ತಮ್ಮಲ್ಲಿಯೇ ಪರಸ್ಪರ ನೂರೊಂದನೆ ಬಾರಿ ಹೇಳಿಕೊಂಡರೂ ಯಾವುದೋ ಕ್ಷುಲ್ಲಕ ಕಾರಣಕ್ಕೆ ಅವರ ನಡುವೆ ಜಗಳವಾಗುತ್ತಲೇ ಇತ್ತು. ಹೀಗೆ ಜಗಳ ತಾರಕಕ್ಕೆ ಹೋದಾಗಲೆಲ್ಲ ಪೀಟರ್ “ಆ ದೇವರು ಈ ಇಬ್ಬರು ತರಲೆ ಸೋದರಿಯರನ್ನ ಕೊಡುವ ಬದಲು ಒಬ್ಬನೇ ಒಬ್ಬ ಸೋದರನನ್ನ ಕೊಟ್ಟರೆ ಸಾಕಿತ್ತು” ಎಂದರೆ ರೊಬರ್ಟಾ “ಆ ಭಗವಂತ ಈ ಸಣ್ಣ ಹುಡುಗರನ್ನ ಯಾಕೆ ಸೃಷ್ಟಿಸಿದನೋ”ಎಂದು ಹಂಗಿಸುತ್ತಿದ್ದಳು. ಒಮ್ಮೆ ಯಾವುದೋ ಕಾರಣಕ್ಕೆ ಬಾಬ್ಬಿ ಮತ್ತು ಪೀಟರ್ ನಡುವೆ ಜಗಳವಾಗಿ ನೂಕಾಟದಲ್ಲಿ ಪೀಟರ್ ಕೆಳಗೆ ಬಿದ್ದು ಆತನಿಗೆ ಕಾಲಿಗೆ ಜೋರಾಗಿ ಪೆಟ್ಟಾಗುತ್ತದೆ. ಡಾಕ್ಟರ್ ಬಂದು ನೋಡಿ ಬ್ಯಾಂಡೇಜ್ ಹಾಕಿ ಒಂದು ವಾರ ಆತ ಅಲುಗಾಡಬಾರದು ಎನ್ನುತ್ತಾರೆ.

ಮಕ್ಕಳು ಲಂಡನ್ ನಿಂದ ಬಂದ ಈ ಹಳ್ಳಿಗಾಡಿನ ಮನೆ ಸೇರಿದ ಮೇಲೆ ವಿದ್ಯಾಭ್ಯಾಸ ಅಷ್ಟಕ್ಕೇ ನಿಂತಿತ್ತು. ಹತ್ತಿರದಲ್ಲಿ ಯಾವುದೇ ಶಾಲೆ ಇರದಿರುವುದು ಇದಕ್ಕೆ ಕಾರಣವಾಗಿತ್ತು. ಅಮ್ಮನ ಕಥೆಯೋ, ಕವಿತೆಯೋ ಪ್ರಕಟವಾದ ಮ್ಯಾಗಜ್ಹಿನ್ ನ ‘ಗೌರವ ಪ್ರತಿ’ ಮನೆಗೆ ಬರುತ್ತಿದ್ದುದನ್ನ ಹೊರತುಪಡಿಸಿದರೆ ಯಾವುದೇ ಪತ್ರಿಕೆ, ಮ್ಯಾಗಜ್ಹಿನ್ ಗಳು ಮನೆಗೆ ಬರುತ್ತಿರಲಿಲ್ಲ. ತರಿಸುವಷ್ಟು ಶಕ್ಕಿ ಅಮ್ಮನಿಗೆ ಇರಲಿಲ್ಲ. ಹೀಗಾಗಿ ಟೀ ಸಮಯದಲ್ಲಿ ಅಮ್ಮ ಹೇಳುತ್ತಿದ್ದ ಕಥೆಗಳ ಹೊರತಾಗಿ ಮಕ್ಕಳಿಗೆ ಬೇರಾವುದೇ ‘ಮನರಂಜನೆ’ ಇರಲಿಲ್ಲ. ಬಹುಪಾಲು ಹಗಲನ್ನ ಹೊರಗೆ ಕಳೆಯುತ್ತಿದ್ದುದರಿಂದ ಅವರಿಗೆ ಅದರ ಅವಶ್ಯಕತೆಯೂ ಕಂಡಿರಲಿಲ್ಲ!

ಈಗ ತಮ್ಮ ಹಾಸಿಗೆ ಹಿಡಿದಿದ್ದರಿಂದ ಅವನಿಗೆ ಓದಲು ಏನಾದರೂ ಹುಡುಕುವಾ ಎಂದುಕೊಂಡು ಬಾಬ್ಬಿ ಪೋರ್ಟರ್ ಪರ್ಕ್ಸ್ ಬಳಿ ಹೋಗುತ್ತಾಳೆ. ಆತ ಪ್ರಯಾಣಿಕರು ಬಿಟ್ಟ ಹೋದ ಕೆಲವು ಮ್ಯಾಗಜ್ಹಿನ್ ಗಳನ್ನೂ ಒಂದು ಪತ್ರಿಕೆಯಲ್ಲಿ ಪಾರ್ಸೆಲ್ ಕಟ್ಟಿ ಬಾಬ್ಬಿಗೆ ಕೊಡುತ್ತಾನೆ. ಅದನ್ನು ತರುತ್ತಿರುವ ಸಮಯಕ್ಕೆ ಗೂಡ್ಸ್ ಗಾಡಿಯೊಂದು ಬಂದದ್ದರಿಂದ ಬಾಬ್ಬಿ ಆ ಪಾರ್ಸೆಲ್ ನ್ನ ಗೇಟ್ ನ ಮೇಲಿಟ್ಟು ಕಾಯುತ್ತಾ ನಿಲ್ಲುತ್ತಾಳೆ. ಹೀಗೆ ನಿಂತಾಗ ಪಾರ್ಸೆಲ್ ಗೆ ಬಳಸಿದ್ದ ಪತ್ರಿಕೆಯ ಒಂದು ಪುಟ್ಟ ವರದಿಯ ಮೇಲೆ ಕಣ್ಣು ಬೀಳುತ್ತದೆ. ಅದರ ಮೇಲೆ ಕಣ್ಣು ಹಾಯಿಸುತ್ತಿದ್ದಂತೆ ಅವಳ ಜೀವಚೈತನ್ಯವೆಲ್ಲ ಉಡುಗಿ ಹೋದಂತಾಗುತ್ತದೆ. ಹೇಗೋ ಸಾವರಿಸಿಕೊಂಡು ಮನೆ ತಲುಪಿ ತನ್ನ ರೂಮು ಸೇರಿಕೊಂಡು ಬಾಗಿಲು ಹಾಕಿಕೊಳ್ಳುತ್ತಾಳೆ. ಪಾರ್ಸೆಲ್ ಗೆ ಹೊದಿಸಿದ್ದ ಪತ್ರಿಕೆಯನ್ನ ತೆಗೆದು ಆ ವರದಿಯನ್ನ ಮತ್ತೊಮ್ಮೆ ನೋಡುತ್ತಾಳೆ: ವಿಚಾರಣೆ ಮುಕ್ತಾಯ: ತೀರ್ಪು : ಸೆರೆವಾಸ- ಇದು ಆ ವರದಿಯ ಶೀರ್ಷಿಕೆ. ವಿಚಾರಣೆಗೆ ಗುರಿಯಾಗಿದ್ದ ವ್ಯಕ್ತಿ ಬೇರಾರೂ ಅಲ್ಲ, ಬಾಬ್ಬಿಯ ತಂದೆ. ಆತನಿಗೆ ನೀಡಿದ್ದ ಶಿಕ್ಷೆ- ಐದು ವರ್ಷಗಳ ಸೆರೆವಾಸ. ‘My dear Daddy, ಇದು ಸಾಧ್ಯವೇ ಇಲ್ಲ, ಸುಳ್ಳು, ಸುಳ್ಳು,’ ಎಂದು ಬಾಬ್ಬಿ ಬಿಕ್ಕಿದಳು.

ಅಮ್ಮ ಮಕ್ಕಳಿಂದ ಬಚ್ಚಿಟ್ಟಿದ್ದ ರಹಸ್ಯ ಬಾಬ್ಬಿಗೆ ತಿಳಿಯಿತು. ಆ ಸುದ್ದಿ ಅವಳ ಎದೆಯೊಳಗೆ ಇಳಿಯುವಷ್ಟರಲ್ಲಿ ಫಿಲಿಸ್ ಬಂದು ಬಾಗಿಲು ತಟ್ಟಿ ಟೀ ಬರಲು ತಿಳಿಸಿದಳು. ಡೈನಿಂಗ್ ಹಾಲ್ ನಲ್ಲಿ ಕುಳಿತಿದ್ದವರೆಲ್ಲ ಬಾಬ್ಬಿಯ ಬಿಳಿಚಿಕೊಂಡ ಮುಖವನ್ನೂ, ಕೆಂಪಾಗಿದ್ದ ಕಣ್ಣುಗಳನ್ನೂ ನೋಡಿ ಏನೋ ಆಗಿದೆ ಎಂದುಕೊಂಡರು. ಅಮ್ಮ ಅವಳ ಬಳಿ ಬಂದು ಏನಾಯ್ತು ಬಾಬಿ ಎಂದಾಗ ‘ತುಂಬಾ ತಲೆ ನೋಯ್ತಾ ಇದೆ’ ಎಂದು ಬಾಬ್ಬಿ ಹೇಳಿದ್ದು ಸತ್ಯ ಕೂಡ ಆಗಿತ್ತು.

ಯೂಕೋ ಕುಳಿತಿದ್ದವರಿಗೆಲ್ಲಾ ಬ್ರೆಡ್ ಮತ್ತು ಚಹಾ ಮುಗಿಯುತ್ತಲೇ ಇಲ್ಲ ಅನ್ನಿಸಿತು. ಕಡೆಗೂ ಮುಗಿದಾಗ ಅಮ್ಮ ಟ್ರೇ ತೆಗೆದುಕೊಂಡು ಅಡುಗೆ ಮನೆಗೆ ಹೊರಟಳು. ಬಾಬ್ಬಿ ಅವಳ ಹಿಂದೆಯೇ. “ತಪ್ಪು ಒಪ್ಪಿಕೊಳ್ಳಲು ಅಮ್ಮನ ಹಿಂದೆ ಹೋಗುತ್ತಿದ್ದಾಳೆ. ಏನು ಮಾಡಿರಬಹುದು” ಫಿಲಿಸ್ ಅಣ್ಣನ ಬಳಿ ಪಿಸುಗುಟ್ಟಿದಳು. “ಏನೋ ಒಡೆದು ಹಾಕಿರಬೇಕು. ಆದರೆ ಅದಕ್ಕೆ ಯಾಕಿಷ್ಟು ಭಯಪಡಬೇಕು? ಅಮ್ಮ ಅಂತಹದ್ದಕ್ಕೆಲ್ಲ ರೇಗುವುದಿಲ್ಲ.. ನೋಡಲ್ಲಿ ಅಮ್ಮನನ್ನ ಮೇಲೆ ಕರೆದುಕೊಂಡು ಹೋಗುತ್ತಿದ್ದಾಳೆ. ಬಹುಷಃ ಆ ನೀರಿನ ಹೂಜಿಯನ್ನ ಹೊಡೆದು ಹಾಕಿರಬೇಕು ಅದನ್ನು ಅಮ್ಮನಿಗೆ ತೋರಿಸಲು ಕರೆದುಕೊಂಡು ಹೋಗುತ್ತಿದ್ದಾಳೆ..”

ಅಮ್ಮನ ಹಿಂದೆ ಅಡುಗೆ ಮನೆಗೆ ಹೋದ ಬಾಬಿ ಟ್ರೇನಲ್ಲಿದ್ದುದನ್ನೆಲ್ಲ ಸಿಂಕ್ ನಲ್ಲಿಡಲು ಅಮ್ಮನಿಗೆ ಸಹಕರಿಸಿ ನಂತರ ಅಮ್ಮನ ಕೈ ಹಿಡಿದುಕೊಂಡಳು. ಅಮ್ಮ ಏನು ಎಂಬಂತೆ ಮಾಡಿದಾಗ “ಮೇಲೆ ಬಾ, ನಮ್ಮ ಮಾತನ್ನ ಯಾರೂ ಕೇಳಿಸಿಕೊಳ್ಳಬಾರದು; ಎನ್ನುತ್ತಾ ಮುಂದೆ ಹೊರಟಳು. ಅಮ್ಮ ರೂಮಿಗೆ ಬರುತ್ತಿದ್ದಂತೆಯೇ ಬಾಗಿಲನ್ನ ಭದ್ರಪದಿಸಿದಳು. ‘ನನಗೆ ಎಲ್ಲ ಗೊತ್ತಾಗಿ ಹೋಯ್ತು ‘, ‘ಆ ಭಯಾನಕ ರಹಸ್ಯ ನನಗೂ ತಿಳೀತು’, ‘ಎಲ್ಲಾ ನಂಗೆ ಗೊತ್ತು’… ಮುಂತಾಗಿ ಅಮ್ಮನ ಬಳಿ ಏನೇನೋ ಹೇಳಬೇಕೆಂದುಕೊಂಡವಳಿಗೆ ಬಾಯಿಂದ ಮಾತುಗಳೇ ಹೊರಡಲಿಲ್ಲ. ಬದಲಿಗೆ ಅಮ್ಮನನ್ನ ತಬ್ಬಿಕೊಂಡು ಓಹ್ ಮಮ್ಮಿ, ಓಹ್ ಮಮ್ಮಿ ಎಂದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಸಮಾಧಾನವಾಗುವವರೆಗೂ ಅತ್ತು ಬಿಡಲಿ ಎಂಬಂತೆ ಅಮ್ಮ ಅವಳ ತಲೆ ನೇವರಿಸುತ್ತಾ ಏನೊಂದೂ ಮಾತಾಡದೆ ಸುಮ್ಮನೆ ನಿಂತಿದ್ದಳು. ನಂತರ ಬಾಬ್ಬಿ ಇದ್ದಕ್ಕಿದ್ದಂತೆ ಅಮ್ಮನಿಂದ ಹೊರ ಚಿಮ್ಮಿ ಓಡಿಹೋಗಿ ತನ್ನ ಹಾಸಿಗೆಯ ಅಡಿಯಲ್ಲಿದ್ದ ಪತ್ರಿಕೆಯನ್ನು ತಂದು ಅಮ್ಮನಿಗೆ ನೀಡಿದಳು.

ಅದನ್ನು ನೋಡುತ್ತಿದ್ದಂತೆಯೇ ಅಮ್ಮನಿಗೆ ವಿಷಯ ಏನೆಂದು ಅರಿವಾಯ್ತು. “ಓಹ್ ಬಾಬ್ಬಿ, ನೀನು ಇದನ್ನ ನಂಬಲ್ಲ ಅಲ್ವಾ, ನೀನು ಇದನ್ನ ನಂಬಲ್ಲ ಅಲ್ವಾ…” ಎಂದು ಅಳಲಾರಂಭಿಸಿದಳು. “ಇಲ್ಲಾಮ್ಮ ನಾನು ಇದನ್ನ ನಂಬಲ್ಲ”

“ಅದೆಲ್ಲಾ ನಿಜ ಅಲ್ಲ ಕಂದ . ಅವರದಲ್ಲದ ತಪ್ಪಿಗೆ ಅವರನ್ನ ಜೈಲಿಗೆ ಹಾಕಿದ್ದಾರೆ. ಅವರು ಎಷ್ಟು ಒಳ್ಳೆಯವರು, ದಯಾಮಯಿ, ಗೌರವಯುತ ಮನುಷ್ಯ. ಅವರು ನಮ್ಮೆಲ್ಲರಿಗೂ ಸೇರಿದವರು. ಅವರ ಬಗ್ಗೆ ನಾವು ಹೆಮ್ಮೆ ಪಡಬೇಕು…”

ಬಾಬ್ಬಿ ಮತ್ತೆ ಅಮ್ಮನನ್ನ ತಬ್ಬಿಕೊಂಡು ಡ್ಯಾಡಿ, ಡ್ಯಾಡಿ ಎಂದು ಆಳಲಾರಂಭಿಸಿದಳು.

“ಅಮ್ಮಾ ನೀನ್ಯಾಕಮ್ಮ ನನಗೆ ಈ ವಿಷಯ ತಿಳಿಸಲಿಲ್ಲ”

“ನೀನು ಬೇರೆಯವರಿಗೆ ಈ ವಿಷಯ ತಿಳಿಸುತ್ತೀಯ”

“ಇಲ್ಲ”

“ಯಾಕೆ”

“ಯಾಕೆ… ಅಂದರೆ…”

“ಹಾಂ ಯಾಕೆ ನಿನಗೆ ತಿಳಿಸಲಿಲ್ಲ ಎಂಬುದು ಅರ್ಥವಾಯಿತಲ್ಲವೇ? ನಾವಿಬ್ಬರೂ ಈಗ ಧೈರ್ಯ ತಾಳಿ ಕೊಳ್ಳಬೇಕಲ್ಲವೇ”

“ಹುಂ . ಅಮ್ಮಾ ನಿನಗೆ ಆ ಬಗ್ಗೆ ಮತ್ತೆ ಮಾತಾಡಿದರೆ ಬೇಜಾರಾಗುತ್ತಾ? ನಾನು ಎಲ್ಲಾ ತಿಳಿದುಕೊಳ್ಳಬೇಕು…

ಅಮ್ಮ ಎಲ್ಲ ವಿಷಯವನ್ನೂ ಮಗಳಿಗೆ ತಿಳಿಸಿದಳು. ಅಂದು ರಾತ್ರಿ ಅಪ್ಪನನ್ನ ವಿಚಾರಿಸಿಕೊಂಡು ಮನೆಗೆ ಬಂದಿದ್ದವರು ಪೊಲೀಸರು. ರಾಷ್ಟ್ರದ ರಹಸ್ಯಗಳನ್ನ ರಷ್ಯನ್ನರಿಗೆ ನೀಡುತ್ತಿದ್ದಾನೆ ಎಂಬ ದೇಶ ದ್ರೋಹದ ಆರೋಪ ಹೊರಿಸಿ ಅಪ್ಪನನ್ನ್ನ ಬಂಧಿಸಿದ್ದರು. ಅಪ್ಪನ ಕಚೇರಿಯ ಮೇಜಿನ ಡ್ರಾನಲ್ಲಿ ಕೆಲವು ಕಾಗದಗಳು ಸಿಕ್ಕ ಆಧಾರದ ಮೇಲೆ ಈ ಆರೋಪ. ಅಪ್ಪನಿಗೆ ಆಗದ ನೌಕರನೊಬ್ಬ ಈ ಕೆಲಸ ಮಾಡಿದ್ದ. ಆದರೆ ನ್ಯಾಯಾಲಯ ಇದಕ್ಕೆ ಸಾಕ್ಷಿ ಕೇಳಿತು. ಸಿಕ್ಕ ಸಾಕ್ಷಿಯ ಆಧಾರದ ಮೇಲೆ ಅಪ್ಪನನ್ನ ಅಪರಾಧಿ ಎಂದು ನಿರ್ಧರಿಸಿತ್ತು.

“ಅಮ್ಮಾ ಇದನ್ನೆಲ್ಲಾ, ಅಂದರೆ ಸತ್ಯ ಏನೆಂಬುದನ್ನ ಬೇರೆ ಯಾರಿಗಾದರೂ ತಿಳಿಸಲು ಸಾಧ್ಯವಿಲ್ಲವೇ…”

“ಯಾರೂ ನಮ್ಮ ಮಾತನ್ನ ಕೇಳುವುದಿಲ್ಲ. ನಾನೇನು ಪ್ರಯತ್ನಪಟ್ಟಿಲ್ಲ ಅಂದುಕೊಂಡಿದ್ದೀಯಾ? ಅಪ್ಪ, ನಾನು, ನೀನು ಎಲ್ಲಾ ಧೈರ್ಯವಾಗಿರಬೇಕು, ತಾಳ್ಮೆಯಿಂದ ಇರಬೇಕು. ದೇವರಲ್ಲಿ ಪ್ರಾರ್ಧಿಸು ಬಾಬ್ಬಿ”

“ಅಮ್ಮಾ ನೀನು ತುಂಬಾ ಬಡವಾಗಿದ್ದೀಯ”

“ಏನಿಲ್ಲ, ಸ್ವಲ್ಪ.”

“ಅಮ್ಮಾ ನೀನು ಬರೀ ಒಳ್ಳೆಯವಳಷ್ಟೇ ಅಲ್ಲ ಧೈರ್ಯವಂತೆ, Bravest and nicest”

ಈ ಬಗ್ಗೆ ಇನ್ನೇನು ಮಾತಾಡುವುದು ಬೇಡ ಬಾಬ್ಬಿ. ನಾವು ಇದನ್ನೆಲ್ಲಾ ಎದುರಿಸಬೇಕಷ್ಟೆ. ನೀನಿನ್ನೂ ಪುಟ್ಟ ಹುಡುಗಿ. ನೀನು ಖುಷಿಯಾಗಿ ಓಡಾಡಿಕೊಂಡಿದ್ದರೆ ನನಗೆ ಸಂತೋಷವಾಗುತ್ತೆ. ಈಗ ನಡಿ ನಾವಿಬ್ಬರೂ ಕೆಲ ಕಾಲ ತೋಟದಲ್ಲಿ ಓಡಾಡೋಣ”.

ಬಾಬ್ಬಿ ಮರಳಿ ತಮ್ಮ ಬಳಿ ಬಂದಾಗ ಪೀಟರ್ ಮತ್ತು ಫಿಲಿಪ್ ಆಕೆಯನ್ನ ಏನನ್ನೂ ಕೇಳಲಿಲ್ಲ. ಕೇಳಿದರೆ ಅವಳಿಗೆ ನೋವಾಗಬಹುದು ಏನೂ ಕೇಳಬೇಡ ಎಂದು ಪೀಟರ್ ತಂಗಿಗೆ ತಾಕೀತು ಮಾಡಿದ್ದ.

ಈಗ ಬಾಬ್ಬಿ ಎರಡನೆಯ ಬಾರಿ ‘Old Gentleman’ ಗೆ ಪತ್ರ ಬರೆದಳು !

ನನ್ನ ಪ್ರಿಯ ಮಿತ್ರ, ಈ ಪತ್ರಿಕೆಯಲ್ಲಿರುವುದು ನಿಜವಲ್ಲ. ಅಪ್ಪ ಎಂದೂ ಇಂಥ ಕೆಲಸ ಮಾಡಿದವರಲ್ಲ. ತಂದೆಯವರು ಆರೋಪಕ್ಕೆ ಗುರಿಯಾದ ನಂತರ ಅವರ ಸ್ಥಾನಕ್ಕೆ ಬಂದ ವ್ಯಕ್ತಿಯೊಬ್ಬ ದ್ವೇಷ ಮತ್ತು ಅಸೂಯೆಯಿಂದ ಹೀಗೆ ಮಾಡಿದ್ದಾನೆ ಎಂದು ಅಮ್ಮ ಹೇಳುತ್ತಾರೆ. ತಂದೆಗೆ ಬಹುಕಾಲದಿಂದಲೂ ಆತನ ಮೇಲೆ ಅನುಮಾನ ಇತ್ತಂತೆ. ಆದರೆ ಇದನ್ನು ಯೂರೂ ನಂಬುವುದಿಲ್ಲ. ನೀವು ಅತ್ಯಂತ ಚಾಣಾಕ್ಷರು ಮತ್ತು ದಯಾಮಯಿ. ಬೇರೆ ಯಾರಿಂದಲೂ ಸಾಧ್ಯವಾಗದಿದ್ದರೂ ಅರೆ ಪ್ರಜ್ಞಾವಸ್ಥೆಯಲ್ಲಿ ನಮ್ಮ ಮನೆ ಸೇರಿದ ಆ ರಷ್ಯನ್ ಲೇಖಕನನ್ನ ಆತನ ಪತ್ನಿ ಮಕ್ಕಳೊಂದಿಗೆ ಸೇರಿಸಿದಿರಿ. ಇಂಥ ದೇಶ ದ್ರೋಹದ ಕೆಲಸ ಯಾರು ಮಾಡಿದರು ಎಂಬುದನ್ನು ನೀವು ಪತ್ತೆ ಹಚ್ಚಬಲ್ಲಿರಿ.

ನಮ್ಮ ತಂದೆ ಅತ್ಯಂತ ಘನತವೆತ್ತ ವ್ಯಕ್ತಿ, ದೇಶ ಪ್ರೇಮಿ. ನಮ್ಮ ಅಮ್ಮ ಇದೆ ಚಿಂತೆಯಲ್ಲಿ ದಿನೇ ದಿನೇ ಬಡವಾಗುತ್ತಿದ್ದಾರೆ. ಈ ವಿಷಯ ನಮ್ಮಿಬ್ಬರ ಹೊರತು ಬೇರಾರಿಗೂ ತಿಳಿದಿಲ್ಲ. ನೀವು ನಮ್ಮ ತಂದೆಯನ್ನು ದೋಷ ಮುಕ್ತರನ್ನಾಗಿಸಲು ಯತ್ನಿಸಿದರೆ ನಾನು ಬದುಕಿರುವವರೆಗೂ ನಿಮ್ಮ ಒಳಿತಿಗಾಗಿ ದಿನಕ್ಕೆರಡು ಸಲ ದೇವರಲ್ಲಿ ಪ್ರಾರ್ಥಿಸುತ್ತೇನೆ. (ಅಮ್ಮನಿಗೆ ನಾನು ಬರೆಯುತ್ತಿರುವ ಪತ್ರದ ವಿಚಾರ ತಿಳಿದಿದ್ದರೆ ಆಕೆ ನಿಮಗೆ ವಂದನೆಗಳನ್ನು ತಿಳಿಸುತ್ತಿದ್ದಳು.)

ಪ್ರೀತಿಯಿಂದ

ಸದಾಕಾಲ ನಿಮ್ಮ ಅಕ್ಕರೆಯ ಪುಟ್ಟ ಗೆಳತಿ

ರೋಬರ್ಟಾ

ಪೀಟರ್ ಮತ್ತು ಫಿಲಿಪ್ ರ ಕಣ್ಣು ತಪ್ಪಿಸಿ ಅದು ಹೇಗೋ ಈ ಪತ್ರವನ್ನ ಸ್ಟೇಷನ್ ಮಾಸ್ತರ್ ಗೆ ತಲುಪಿಸಿದಳು.

ಇದಾದ ನಂತರ ಕಥೆ ಮಕ್ಕಳಿಗೆ ಪ್ರಿಯವಾಗಬಲ್ಲ ನಾಟಕೀಯ ತಿರುವನ್ನ ಪಡೆಯುತ್ತದೆ. ಸ್ಟೇಷನ್ ನಿಂದ ಸ್ವಲ್ಪ ಮುಂದಿದ್ದ ಟನಲ್ ನಲ್ಲಿ ಈ ಮಕ್ಕಳು ಆಡಲು ಹೋದಾಗ ಅಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಹುಡುಗನೊಬ್ಬ ಸಿಕ್ಕುತ್ತಾನೆ. ಪೋರ್ಟರ್ ಸಹಾಯದಿಂದ ಮಕ್ಕಳು ಆ ಹುಡುಗನನ್ನ ಮನೆಗೆ ಕರೆಯುತ್ತಾರೆ. ವೈದ್ಯನನ್ನ ಕರೆ ತಂದು ಶುಶ್ರೂಷೆ ನೀಡುತ್ತಾರೆ. ಆ ಹುಡುಗ ಕೊಂಚ ಚೇತರಿಸಿಕೊಂಡ ಮೇಲೆ ಆತ Old gentleman ನ ಮೊಮ್ಮಗ ಎಂದು ತಿಳಿಯುತ್ತದೆ. ಮಕ್ಕಳು ಆ ಬಾಲಕನನ್ನ ಕೆಲವು ಕಾಲ ತಮ್ಮ ಮನೆಯಲ್ಲಿಯೇ ಬಿಡುವಂತೆ ಆಗ್ರಹಿಸುತ್ತಾರೆ.

ಏತನ್ಮಧ್ಯೆ ರೋಬರ್ಟಾಳ ಪತ್ರದ ವಿಷಯವನ್ನ ಗಂಭೀರವಾಗಿ ತೆಗೆದುಕೊಂಡ Old Gentleman ಈ ಮಕ್ಕಳ ತಂದೆ ದೋಷ ಮುಕ್ತನಾಗಿ ಮನೆಗೆ ಬರಲು ನೆರವಾಗುತ್ತಾನೆ. ಈ ವಿಚಾರ ತಿಳಿಯದ ಬಾಬ್ಬಿ ರೈಲ್ವೆ ನಿಲ್ದಾಣದಲ್ಲಿ ಅಪ್ಪನನ್ನ ಕಂಡಾಗ ಕುಣಿದಾದುತ್ತಾಳೆ ಮತ್ತು ಅತ್ಯಂತ ಪ್ರೀತಿಯಿಂದ ಅಪ್ಪನನ್ನ ಮನೆಗೆ ಕರೆದುಕೊಂಡು ಹೋಗುತ್ತಾಳೆ…

( ‘ಪುಟ್ಟ ಹುಡುಗಿ, ಪುಟ್ಟ ಹೆಂಗಸು’- ಇದನ್ನು ಮಾಸ್ತಿಯವರು ಬಳಸಿದ ನೆನಪು )

 

‍ಲೇಖಕರು G

10 May, 2011

6 Comments

  1. ಜೋಗಿ

    ಕತೆಗಾರ ಆನಂದರು ಸರಸಿಯ ಗೊಂಬೆ ಕತೆಯ ಆರಂಭದಲ್ಲಿ A small boy is a small boy, but a small girl is a small women ಎಂಬ ಸಾಲು ಬಳಸಿದ್ದರು. ಮಾಸ್ತಿಯವರು ಬಳಸಿದ್ದನ್ನು ಓದಿದ ನೆನಪಾಗುತ್ತಿಲ್ಲ.

    • chandrualur

      you are right.thanks,jogi.

  2. Vivek Nagaraj

    as usual Nice pick from western

  3. C P Nagaraja

    ಇಂಗ್ಲಿಶ್ ನುಡಿಯಲ್ಲಿ ರಚನೆಗೊಂಡಿರುವ ಒಳ್ಳೊಳ್ಳೆಯ ಹೊತ್ತಿಗೆಗಳನ್ನು ಓದಿ , ಅವುಗಳ ಸಾರವನ್ನು ಕಲಾತ್ಮಕವಾಗಿ ಜತೆಗೂಡಿಸಿ ಕನ್ನಡಕ್ಕೆ ಕೊಡುತ್ತಿರುವ ಆಲೂರು ಅವರಿಗೆ ಅಭಿನಂದನೆಗಳು . ಏಕೆಂದರೆ ಇಂಗ್ಲಿಶ್ ನುಡಿಯಲ್ಲಿರುವ ಕತೆ-ಕಾದಂಬರಿಗಳನ್ನು ಓದುವ ಆಶೆಯಿದ್ದರೂ , ಸರಾಗವಾಗಿ ಮತ್ತು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದ ಸಂಕಟದಿಂದ ನನ್ನಂತಹ ಸಾವಿರಾರು ಮಂದಿ ಓದುಗರು ಇಂಗ್ಲಿಶಿನಿಂದ ದೂರವಾಗಿದ್ದೇವೆ. ಆಲೂರು ಅವರ ಅನುವಾದಿತ ಬರಹಗಳಲ್ಲಿನ ವಿಚಾರಗಳು ನಮ್ಮ ಅರಿವನ್ನು ಹೆಚ್ಚಿಸುವುದರ ಜತೆಗೆ , ಸಹ ಮಾನವರ ಬಗ್ಗೆ ಮನ ಮಿಡಿಯುವಂತೆ ಮಾಡುತ್ತವೆ . ಸಿ.ಪಿ.ನಾಗರಾಜ , ಬೆಂಗಳೂರು .

    • chandrualur

      dhanyavadagalu,cpn sir

  4. Nagaraj SG

    Alur sir,
    Your e-mail Id please…
    My e-mail Id:kc_ckm@yahoo.co.in

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading