“ಅಯ್ಯೋ ಅದೊಂದು ಗೂಬೆ!” – ಪರಮ ಸೋಮಾರಿಗಳಿಗೆ, ನಿಷ್ಪ್ರಯೋಜಕರಿಗೆ, ನಿರುಪಯೋಗಿಗಳಿಗೆ; ಮುಖ್ಯವಾಗಿ ಚಲನಶೀಲರಲ್ಲದವರಿಗೆ ಸಾಮಾನ್ಯವಾಗಿ ಬಳಸುತ್ತಿದ್ದ ನುಡಿಗಟ್ಟು ಇದು. ಜೊತೆಗೆ `ಗೂಬೆ ಮುಂಡೇದೆ’ ಎಂಬ ಬೈಗುಳ ಬೇರೆ. `ಸದಾ ಗೂಬೆ ಥರ ಝೂಗಡಿಸಿಕೊಂಡು ಕೂತಿರ್ತಾವೆ’ ಎಂಬ ವ್ಯಂಗ್ಯ ಸಹ. ಗೂಬೆಗಳನ್ನ ಅಪಮಾನಿ ಸಲೋ ಎಂಬಂತೆ ಹಿರಿಯ ರಾಜಕಾರಣಿಗಳನ್ನು `ಮುದಿ ಗೂಬೆಗಳು’ ಎಂದು ಹೀಯಾಳಿಸುವುದು… ಆದರೆ ನಾವೆಲ್ಲಾ
`ಗೂಬೆ’ಯನ್ನ ಎಷ್ಟು ದುರುಪಯೋಗ ಪಡಿಸಿಕೊಂಡಿದ್ದೇವೆ. ಇಂಥ ಗೂಬೆ ಎಷ್ಟೊಂದು attacking ಆಗಿರಬಲ್ಲುದು ಎಂಬುದನ್ನ ತಿಳಿದಾಗ ಸಖತ್ ಆಶ್ಚರ್ಯವಾಯ್ತು. ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಎಂ.ವೈ.ಘೋರ್ಪಡೆಯವರು ತಮ್ಮ `ರೆಕ್ಕೆಯ ಮಿತ್ರರು’ (winged friends) ಎಂಬ ಕೃತಿಯಲ್ಲಿ ಇಂಥ ಗೂಬೆಯ ಬಗ್ಗೆ ತಿಳಿಸುತ್ತಾರೆ:
ಗೂಬೆ ರಾತ್ರಿ ಸಂಚರಿಸುವ ಹಕ್ಕಿ. ಅದರ ಚಿತ್ರ ವನ್ನು ಕತ್ತಲಿನಲ್ಲಿ ತೆಗೆಯಬೇಕು. ಪ್ರಖ್ಯಾತ ಪಕ್ಷಿ ಚಿತ್ರ ಗ್ರಾಹಕನಾದ ಎರಿಕ್ ಹ್ಯಾನೆಂಗ್ ತನ್ನ ಒಂದು ಕಣ್ಣನ್ನ ಹೇಗೆ ಕಳೆದುಕೊಂಡಿದ್ದ ಎಂಬುದು ನನಗೆ ತಿಳಿದಿತ್ತು. ಕತ್ತಲಲ್ಲಿ ಅವನು ಗೂಬೆಯ ಗೂಡನ್ನು ಸಮೀಪಿಸು ತ್ತಿದ್ದ. ಕೋಪಗೊಂಡ ಗೂಬೆ ಉಗ್ರವಾಗಿ ಆಕ್ರಮಣ ಮಾಡಿ ಅವನ ಒಂದು ಕಣ್ಣನ್ನ ನಾಶ ಮಾಡಿಬಿಟ್ಟಿತು. ಗೂಬೆ ಅತ್ಯಕ ರೌದ್ರತೆಯಿಂದ ಮನುಷ್ಯನ ಮೇಲೆ ದಾಳಿ ಮಾಡುವುದು ಎಲ್ಲರಿಗೂ ಗೊತ್ತು. ಅದು ತನ್ನ ಮೊನಚಾದ
ಪಂಜಗಳನ್ನು ಮಾರಣಾಂತಿಕವಾದ ಖಾಚಿತ್ಯದೊಂದಿಗೆ ಬಳಸುತ್ತದೆ. ಆದ್ದರಿಂದಲೇ ಸಮಂಜಸವಾದ ರಕ್ಷಣೆಯೊಂದಿಗೆ ಗೂಬೆಯ ಗೂಡನ್ನು ಸಮೀಪಿಸ ಬಯಸುವ ಚಿತ್ರಗ್ರಾಹಕನು, ವೇಗದ ಬೌಲಿಂಗನ್ನು ಎದುರಿ ಸುವ ಬ್ಯಾಟ್ಸ್ಮನ್ ಶಿರಸ್ತ್ರಾಣ ಧರಿಸುವಂತೆ ತಾನೂ ಧರಿಸಿಕೊಳ್ಳಬೇಕಾದ್ದು ಔಚಿತ್ಯಪೂರ್ಣ. ನನ್ನ ಬಳಿ ಅಂತಹ ಶಿರಸ್ತ್ರಾಣವಿರಲಿಲ್ಲ. ಅಥವಾ ನನಗೆ ನನ್ನೊಂದು ಕಣ್ಣನ್ನು ಕಳೆದುಕೊಳ್ಳುವ ಇರಾದೆಯೂ ಇರಲಿಲ್ಲ. ಅದೂ ಕರ್ನಾಟಕ ವಿಧಾನಸಭೆಯಲ್ಲಿ ಬಜೆಟ್ ಮಂಡನೆಯಮುನ್ನಾ ದಿನ! ಇಂತಹ ಕರಾಳ ಯೋಚನೆಗಳು ನನ್ನ ಮನಸ್ಸಿನಲ್ಲಿ ಹಾಯುತ್ತಿರುವಾಗ ನನ್ನ ಕಿವಿಗೆ ಗೂಬೆ ರೊಯ್ಯನೆ ಹಾರಿ ಬರುತ್ತಿರುವ ಶಬ್ದ ಕೇಳಿಸಿತು. ಮರುಕ್ಷಣದಲ್ಲಿ ಆ ತಾಯಿ ಗೂಬೆ ಅದರ ರೀತಿ ನೀತಿಗಳನ್ನ ಸ್ವಲ್ಪವೂ ತಿಳಿಯದ ನನ್ನ ಸ್ನೇಹಿತರನ್ನು ಭಯಂಕರವಾಗಿ ಹೆದರಿಸುತ್ತಾ ಕೆಳಕ್ಕೆ ಹಾರಿ ಬಂತು…
ಅದು 1975. ಆಗ ಘೋರ್ಪಡೆ ಕರ್ನಾಟಕ ರಾಜ್ಯದ ಹಣಕಾಸು ಸಚಿವರಾಗಿದ್ದರು. ಸಂಡೂರು, ಬೆಂಗಳೂರು, ಕೇಂಬ್ರಿಜ್ಗಳಲ್ಲಿ ವಿದ್ಯಾಭ್ಯಾಸ ಮಾಡಿ ಅರ್ಥಶಾಸ್ತ್ರವನ್ನ ಕಲಿತಿದ್ದ ಘೋರ್ಪಡೆ ದೇವರಾಜ ಅರಸರ ಕಾಲದಲ್ಲಿ ಹಣಕಾಸು ಸಚಿವರಾಗಿ ನಂತರ ತೊಂಬತ್ತರ ದಶಕದಲ್ಲಿ ಎಂಟು ವರ್ಷ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದವರು. ಒಂದು ಅವಧಿಗೆ ಲೋಕ ಸಭಾ ಸದಸ್ಯರೂ ಕೂಡ ಆಗಿದ್ದರು. ಇದು ಲೌಕಿಕದ ವಿಚಾರ ವಾದರೆ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾ ಗ್ರಾಹಕರಾಗಿರುವುದು ಅವರ ಆತ್ಮದ, ಚೈತನ್ಯದ, ಕ್ರಿಯಾ ಶೀಲತೆಯ ಅಭಿವ್ಯಕ್ತಿಗೆ ಸಂಬಂಧಪಟ್ಟದ್ದು.
ಘೋರ್ಪಡೆಯವರು, ಮೇಲೆ ಸೂಚಿಸಿದ ಗೂಬೆಯ (Indian Great Horned Owl) ಚಿತ್ರವನ್ನು ತೆಗೆದದ್ದು ಬನ್ನೇರುಘಟ್ಟ ಅಭಯಾರಣ್ಯದಲ್ಲಿಯಾದರೂ ಅವರ `ರೆಕ್ಕೆಯ ಮಿತ್ರರು’ ಕೃತಿಯಲ್ಲಿರುವ ಬಹುಪಾಲು ಹಕ್ಕಿ ಗಳು ಅವರು ಬಾಲ್ಯ ಕಾಲದಲ್ಲಿ ಒಡನಾಡಿದ ಸಂಡೂರು ಪ್ರದೇಶಕ್ಕೆ ಸೇರಿದವು. ಅವರೇ ಹೇಳಿಕೊಂಡಿರುವಂತೆ ಅವರು ಈ ಕೃತಿ ಬರೆದದ್ದು ಕೂಡಾ ಸಂಡೂರಿನ ಶಾಲಾ ಮಕ್ಕಳಿಗಾಗಿ. ಘೋರ್ಪಡೆ ತಮ್ಮ ಹಿರಿಬಾಲ್ಯದ ಬಗ್ಗೆ ಹೀಗೆ ಹೇಳುತ್ತಾರೆ:
`ನಿಮ್ಮ ಬಾಲ್ಯದ ಅತ್ಯುತ್ತಮ ಘಟನೆಯೆಂದು ಯಾವುದನ್ನು ನೆನಪಿಸಿಕೊ ಳ್ಳುತ್ತೀರಿ?’ ಎಂದು ಯಾರಾದರೂ ಕೇಳಿದರೆ `ನಾನು ಸಂಡೂರಿನಲ್ಲಿ ಕಳೆದ ದಿನಗಳು’ ಎಂದು ನಿಸ್ಸಂದೇಹವಾಗಿ ಹೇಳುತ್ತೇನೆ ಅದು ಯುದ್ಧದ ಕಾಲ. ನಮ್ಮ ತಂದೆ ತಾಯಿಯರು ನಾನು ಬೆಂಗಳೂರಿನಲ್ಲಿರುವುದು ಸುರಕ್ಷಿತವಲ್ಲವೆಂದು ನನಗೆ ಸಂಡೂರಿನಲ್ಲಿಯೇ ಶಾಲೆಗೆ ಸೇರಿಸಿದರು. ಹೀಗಾಗಿ ಪ್ರಕೃತಿ ಯೊಡನೆ ನನ್ನ ಬಾಲ್ಯಬೆರೆತುಹೋಯ್ತು. ಶಾಲೆಯಲ್ಲೂ ಅಷ್ಟೇ. ಕೃಷ್ಣನ್ ಎಂಬ ಅಧ್ಯಾಪಕರು ಜೀವಶಾಸ್ತ್ರ ಕಲಿಸು ತ್ತಿದ್ದರು. ಅವರು ಕೇವಲ ಶಾಲೆಯ ಒಳಗಡೆ ಮಾತ್ರ ಕಲಿ ಸುತ್ತಿರಲಿಲ್ಲ. ನಾರಿಹಳ್ಳ, ಗಿಂಡಿ ನರಸಿಂಹಸ್ವಾಮಿ ದೇವ ಸ್ಥಾನದ ಹತ್ತಿರದ ಕಾಡುಗಳಿಗೆ ಕರೆದುಕೊಂಡು ಹೋಗಿ ಗಿಡ ಮರ ಬಳ್ಳಿ ಪಶು ಪಕ್ಷಿಗಳನ್ನ ಗಮನಿಸುವುದನ್ನ, ಗುರುತಿಸುವುದನ್ನ ಆ ಮೂಲಕ ಪ್ರಕೃತಿಯ ಜೊತೆಗೆ ತಾದ್ಯಾತ್ಮ ಹೊಂದುವುದನ್ನ ಕಲಿಸಿದರು. ಇದು ನನ್ನ ಇಡೀ ಬದುಕನ್ನ ರೂಪಿಸಿತು. ಮುಂದೆ ಪ್ರಕೃತಿ-ಪ್ರಾಣಿ ಛಾಯಾಗ್ರಾಹಕನಾ ಗಿದ್ದು ಇದೇ ಹಿನ್ನೆಲೆಯಿಂದ.
ವಿಮರ್ಶೆಗೆ ಹೋಗದೆ ಪುಸ್ತಕದ ವಿವರಗಳನ್ನ ಸಂಕ್ಷಿಪ್ತ ವಾಗಿ ಹೇಳುತ್ತೇನೆ. ಈ ಕೃತಿಯಲ್ಲಿ ಎಂಟು ಅಧ್ಯಾಯಗಳಿವೆ. ಪಾರಿವಾಳ ಮತ್ತು ಕಪೋತ; ಗುಬ್ಬಚ್ಚಿ, ಕಾಗೆ ಮತ್ತು ಕೋಗಿಲೆ; ಹರಟೆ ಹಕ್ಕಿ, ಪಿಕರಾಳ ಮತ್ತು ಗೊರವಂಕ; ನವಿಲು, ಸಾರಸ ಮತ್ತು ಎರಲಡ್ಡು ಹಾಗೂ ಸಾಮಾನ್ಯ ಹಕ್ಕಿಗಳ ಬಗ್ಗೆ ಎರಡು ಮತ್ತು ನೀರು ಹಕ್ಕಿಗಳ ಬಗ್ಗೆ ಒಂದು, ಹಕ್ಕಿಗಳ ಛಾಯಾಗ್ರಹಣದ ಬಗ್ಗೆ ಒಂದು -ಹೀಗೆ.
ಪಾರಿವಾಳ, ಸಾಕು ಪಾರಿ ವಾಳ, ಕಾಡು ಪಾರಿವಾಳ, ನೀಲಿ ಚೌಕಳಿ ಪಾರಿವಾಳ, ಬಿಳಿ ಪಾರಿವಾಳ, ನೀಲಗಿರಿ ಪಾರಿವಾಳ ಹೀಗೆ ಪಾರಿವಾಳದ ವಿವಿಧ ಪ್ರಬೇಧಗಳನ್ನ ಹೇಳುತ್ತಾ ಸಂಡೂರಿನ ಸುತ್ತ ಮುತ್ತ ಸಿಗುವ ಮೂರ್ನಾಲ್ಕು ಜಾತಿಯ ಕಪೋತಗಳ ಬಗ್ಗೆ ಹೇಳುತ್ತಾರೆ. ಚೋರೆ ಹಕ್ಕಿ ಅಥವಾ ಚುಕ್ಕೆ ಕಪೋತ, ಕಂದು ಬೆಳವ, ಕೆಂಗಂದು ಬೆಳವ, ಬೂದು ಬೆಳವ, ಉಂಗುರ ಕಪೋತ… ಮತ್ತು ಈ ಎಲ್ಲ ಪಾರಿವಾಳ- ಕಪೋತಗಳ ಚಿತ್ರಗಳೂ ಇವೆ.
ರೆಕ್ಕೆಯ ಮಿತ್ರರು ಕೃತಿಯಲ್ಲಿ ನನಗೆ ಬಹು ಪ್ರಿಯವಾದುದು ಸಾಮಾನ್ಯ ಹಕ್ಕಿಗಳ ಬಗೆಗೆ ಇರುವ ಎರಡು ಅಧ್ಯಾಯಗಳು. ಇದಕ್ಕೆ ಮುಖ್ಯ ಕಾರಣ ಇವುಗಳಲ್ಲಿ ಬಹುಪಾಲು ಹಕ್ಕಿಗಳು ನಾನು ಬಾಲ್ಯಕಾಲದಲ್ಲಿ ಕಂಡವೇ ಆಗಿವೆ. ರಾಜಹಕ್ಕಿ, ಸಾಂಬಾರ್ ಕಾಗೆ, ಮಿಂಚುಳ್ಳಿ, ಕೆಂಬೂತ, ನೀಲಕಂಠ, ಗದ್ದೆ ಮಿಂಚುಳ್ಳಿ, ಗೀಜಗನ ಹಕ್ಕಿ, ಕಿರು ಗುಲಗಂಜಿ ಹಕ್ಕಿ, ಶುನ್ವಿ ಹಕ್ಕಿ, ಮಡಿ ವಾಳ ಹಕ್ಕಿ, ಗಿಳಿ, ಹಸಿರು ಬಣ್ಣದ ಸಣ್ಣ ಕಳ್ಳಪೀರ, ಮರ ಕುಟಿಗ, ಹಸಿರು ಕುಟ್ರ ಹಕ್ಕಿ, ಬೂದು ಕೌಜುಗ… ಹೀಗೇ ಹಲವಾರು ಹಕ್ಕಿಗಳ ಬಗ್ಗೆ ಮೋಹಕ ಚಿತ್ರಗಳು, ಚಿತ್ರವತ್ತಾದ ವಿವರಗಳೂ ಇವೆ.
ಈ ಕೃತಿಯ ವಿಶೇಷವೆಂದರೆ ಮಕ್ಕಳಿಗೆ ವಿವರಿಸುವಂತೆ ಪ್ರತಿಯೊಂದು ಹಕ್ಕಿಯ ಬಗೆಗೂ ವಿವರವಾಗಿ, ವಿಷದವಾಗಿ, ಸರಳವಾಗಿ ಹೇಳಿರುವುದು. ಮೂಲತಃ ಇಂಗ್ಲಿಷ್ನಲ್ಲಿರುವ ಕೃತಿಯನ್ನ ಶ್ರೀಮತಿ ಶಾಂತಾ ನಾಗರಾಜ್ ಮತ್ತೆ ಡಾ.ಪಿ.ಎಸ್.ಗೀತಾ ಕನ್ನಡಕ್ಕೆ ತಂದಿ ದ್ದಾರೆ. ಇದು ಅನುವಾದವಲ್ಲ. ಪ್ರತಿ ಸೃಷ್ಟಿ ಎಂದು ಘೋರ್ಪಡೆಯವರೇ ಅನುವಾದಕರನ್ನ ಮೆಚ್ಚಿಕೊಂಡಿ ದ್ದಾರೆ. ನೂರಾರು ಸುರಸುಂದರ ಚಿತ್ರಗಳಿರುವ ಈ ಕೃತಿಯ ಬೆಲೆ ಕೂಡಾ ಕಮ್ಮಿ. ಅಭಿನವ ಪ್ರಕಾಶನ ಹೊರ ತಂದಿರುವ ಈ `ರೆಕ್ಕೆಯ ಮಿತ್ರರು’ ನೀವು ನೋಡ ಬೇಕಾದ, ಓದಬೇಕಾದ ಕೃತಿ.








Supar