ಬಾಲ್ಯ ಕಾಲದಲ್ಲಿ ತೀವ್ರವಾಗಿ ಮನ ಕಲಕಿದ ಕಥೆಗಳಲ್ಲಿ ಮುಖ್ಯವಾದುದು ಟಾಲ್ ಸ್ಟಾಯ್ ನ “God sees the Truth but waits “. ಈಗಲೂ ಅದನ್ನ ನೆನೆದಾಗ ನಾನು ತುಂಬಾ distrub ಆಗಿ ಬಿಡುತ್ತೇನೆ. ಹಾಗೆಯೇ ಮನರಂಜಿಸಿದ ಕಥೆ ಕೋಳಿಮೊಟ್ಟೆ ಗಾತ್ರದ ಕಾಳು.
ನಮ್ಮ ಹಿರಿಯರ, ಅವರ ತಲೆಮಾರಿನ ದೈಹಿಕ ಪರಿಶ್ರಮ ಹಾಗೂ ತಾಳುವಿಕೆಯ ಶಕ್ತಿ; ನಮ್ಮ ಪೀಳಿಗೆಯದ್ದು ಹಾಗೂ ನಮ್ಮ ಮಕ್ಕಳ ಪೀಳಿಗೆಯ ದೈಹಿಕ ಸಾಮರ್ಥ್ಯ; ನಾವು ತಿನ್ನುತ್ತಿರುವ ಧಾನ್ಯ, ಹಣ್ಣುಹಂಪಲು, ತರಕಾರಿ ಇವುಗಳೆಲ್ಲದರ ಹಿನ್ನೆಲೆಯಲ್ಲಿ ನೋಡಿದಾಗ ಕೋಳಿಮೊಟ್ಟೆ ಗಾತ್ರದ ಕಾಳು ಹೆಚ್ಚು ಅರ್ಥಪೂರ್ಣ ಎನಿಸುತ್ತದೆ.
ಬಯಲಲ್ಲಿ ಆಡುತ್ತಿದ್ದ ಮಕ್ಕಳಿಗೆ ಈ ಮೊಟ್ಟೆ ಗಾತ್ರದ ಕಾಳು ಸಿಕ್ಕಿತು. ಆ ಮಕ್ಕಳು ಇದೇನೆಂದು ಆಶ್ಚರ್ಯದಿಂದ ಮುಟ್ಟಿ ಮುಟ್ಟಿ ನೋಡುತ್ತಾ ಅದರೊಂದಿಗೆ ಆಡುತ್ತಿರಬೇಕಾದರೆ ಅದನ್ನು ದಾರಿಹೋಕನೊಬ್ಬ ಕಂಡ. ಅವನು ಆ ಮಕ್ಕಳಿಗೆ ನಾಲ್ಕು ಕಾಸು ನೀಡಿ ಅದನ್ನು ಕೊಂಡು ಕೊಂಡ. ಇದೊಂದು ಅತ್ಯಾಶ್ಚರ್ಯಕರವಾದ ವಸ್ತುವೆಂದು ತಿಳಿಸಿ ಅದನ್ನು ರಾಜಧಾನಿಯಲ್ಲಿ ರಾಜನಿಗೆ ಒಪ್ಪಿಸಿದ.
ಮಹಾರಾಜ ತನ್ನ ಆಸ್ಥಾನದ ಪಂಡಿತರನ್ನೆಲ್ಲ ಕರೆಸಿ ಅದೇನೆಂದು ಪತ್ತೆ ಮಾಡಲು ತಿಳಿಸಿದ. ಆ ಮಹಾನ್ ಪಂಡಿತ ಶಿಖಾಮಣಿಗಳು ಅದನ್ನು ನಾನಾ ಬಗೆಯಲ್ಲಿ, ಕೋನಗಳಲ್ಲಿ ನೋಡಿ; ಅಳೆದು, ತೂಗಿ ಏನೆಂದು ತಿಳಿಯದೆ ಕಿಟಕಿಯ ಗೂಡಿನಲ್ಲಿ ಇತ್ತರು. ಒಂದು ದಿನ ಹಕ್ಕಿಯೊಂದು ಬಂದು ಅದನ್ನು ಕುಕ್ಕಿದಾಗಲೇ ಅವರಿಗೆ ಅದೊಂದು ಧಾನ್ಯವೆಂದು ತಿಳಿದದ್ದು. ಕೂಡಲೇ ರಾಜನಿಗೆ ಹೋಗಿ ತಿಳಿಸಿದರು: ಮಹಾಸ್ವಾಮಿ, ಇದೊಂದು ಆಹಾರಧಾನ್ಯ.
ಆಶ್ಚರ್ಯಗೊಂಡ ರಾಜ ಕೂಡಲೇ ತನ್ನ ಪಂಡಿತರಿಗೆ ಆಜ್ಞಾಪಿಸಿದ: ಎಲ್ಲಿ ಮತ್ತು ಯಾವ ಕಾಲದಲ್ಲಿ ಇಂಥ ಧಾನ್ಯವನ್ನು ಬೆಳೆಯುತ್ತಿದ್ದರು, ಕೂಡಲೇ ಪತ್ತೆ ಮಾಡಿ. ಆ ಬುದ್ದಿವಂತರು ಅರಮನೆಯ ಗ್ರಂಥ ಭಂಡಾರದಲ್ಲಿದ್ದ ಪುಸ್ತಕಗಳನ್ನೆಲ್ಲ ತಡಕಿದರು. ಎಲ್ಲಿಯೂ ಆ ಧಾನ್ಯದ ಬಗ್ಗೆ ಮಾಹಿತಿ ದೊರೆಯಲಿಲ್ಲ. ಅಳುಕುತ್ತಲೇ ರಾಜನ ಬಳಿ ಬಂದು ಹೇಳಿದರು: ಮಹಾಸ್ವಾಮಿ, ಯಾವ ಗ್ರಂಥಗಳಲ್ಲಿಯೂ ಇದರ ಉಲ್ಲೇಖವಿಲ್ಲ, ಬಹುಶಃ ಯಾರಾದರೂ ರೈತರನ್ನು ವಿಚಾರಿಸಿದರೆ ಈ ಬಗ್ಗೆ ತಿಳಿಯಬಹುದು. ಅವರು ಕಂಡಿರದಿದ್ದರೂ ಇಂಥ ಧಾನ್ಯದ ಬಗ್ಗೆ ಅವರು ತಮ್ಮ ತಾತ ಮುತ್ತಾತರಿಂದ ಕೇಳಿ ತಿಳಿದಿರುವ ಸಾಧ್ಯತೆ ಇರುತ್ತದೆ.
ಕೂಡಲೇ ರಾಜ ಆಜ್ಞೆ ಮಾಡಿದ: ಎಲ್ಲ ಕಡೆ ಹುಡುಕಿ ಯಾರಾದರೂ ಹಿರಿಯನಾದ ರೈತನನ್ನು ಕರೆದುಕೊಂಡು ಬನ್ನಿ, ರಾಜಾಜ್ಞೆ. ಸೇವಕರು ಎಲ್ಲ ಕಡೆ ಹುಡುಕಿ ಒಬ್ಬ ವಯಸ್ಸಾದವನನ್ನು ರಾಜಾಸ್ಥಾನಕ್ಕೆ ಕರೆತಂದರು. ವಯಸ್ಸಾದ ಮನುಷ್ಯ. ನಡು ಬಾಗಿತ್ತು. ಹಲ್ಲುಗಳು ಉದುರಿಹೋಗಿದ್ದವು. ಮುಖ ಬಿಳಿಚಿಕೊಂಡಿತ್ತು. ಊರುಗೊಲಿನ ಸಹಾಯದಿಂದ ನಿಧಾನವಾಗಿ ನಡೆಯುತ್ತಾ ಆ ವೃದ್ಧ ರಾಜನ ಬಳಿ ಬಂದ.
ರಾಜ ಆ ಧಾನ್ಯವನ್ನು ರೈತನಿಗೆ ತೋರಿಸಿದ. ಆತನ ಕಣ್ಣುಗಳಿಗೆ ಅದು ಸರಿಯಾಗಿ ಕಾಣಲಿಲ್ಲ. ಅದನ್ನು ರಾಜನಿಂದ ಪಡೆದು ಕೈಯಲ್ಲಿ ಮುಟ್ಟಿ, ಸವರಿ ನೋಡಿದ. ” ಮುದುಕಪ್ಪಾ, ಇಂಥ ಧ್ಯಾನ್ಯವನ್ನು ಎಲ್ಲಿ ಬೆಳೆಯುತ್ತಿದ್ದರು ಎಂದು ನಿನಗೇನಾದರೂ ತಿಳಿದಿದೆಯೇ? ಎಂದಾದರೂ ನೀನು ನಿನ್ನ ಹೊಲದಲ್ಲಿ ಬೆಳೆದಿದ್ದೀಯ? ಅಥವಾ ಕಂಡಿದ್ದೀಯ?” – ರಾಜ ಕೇಳಿದ. ರಾಜನ ಮಾತುಗಳು ಆ ವೃದ್ಧನಿಗೆ ಸರಿಯಾಗಿ ಕೇಳಿಸಲೇ ಇಲ್ಲ. ಇದನ್ನು ಅರಿತ ಮಂತ್ರಿಯೊಬ್ಬ ರೈತನ ಕಿವಿಯಲ್ಲಿ ಮತ್ತೆ ರಾಜನ ಪ್ರಶ್ನೆಯನ್ನ ಉಸುರಿದ.
ಕಡೆಗೆ ರೈತ ಹೇಳಿದ: ನಾನೆಂದೂ ಇಂಥ ಧಾನ್ಯವನ್ನ ಬಿತ್ತಿಲ್ಲ, ಬೆಳೆದಿಲ್ಲ. ಬೆಳೆದವರನ್ನು ಕಂಡೂ ಇಲ್ಲ. ಈಗ ಎಲ್ಲರೂ ಕಾಣುವಂಥ ಧಾನ್ಯಗಳನ್ನೇ ನಾವು ಬೆಳೆಯುತ್ತಿದ್ದುದು. ನೀವು ನಮ್ಮ ಅಪ್ಪನಿಗೆ ಕೇಳಿದರೆ ನಿಮಗೆ ಏನಾದರೂ ತಿಳಿಯಬಹುದು. ಬಹುಶಃ ಇಂಥ ಧಾನ್ಯದ ಬಗ್ಗೆ ಅವನು ಕೇಳಿರಬಹುದು.
‘ಈ ಮುದುಕನ ಅಪ್ಪನನ್ನು ಕರೆ ತನ್ನಿ’ – ರಾಜ ಆಜ್ಞೆ ಮಾಡಿದ. ಕೂಡಲೇ ಕಾರ್ಯಪ್ರವೃತ್ತರಾದ ರಾಜ ಸೇವಕರು ಆ ಮುದುಕನ ತಂದೆಯನ್ನು ಪತ್ತೆ ಮಾಡಿ ಕರೆತಂದರು. ಮುದುಕ ಎರಡೂ ಕಂಕುಳಲ್ಲಿ ಕೋಲನ್ನು ಆಸರೆಯಾಗಿಟ್ಟುಕೊಂಡು ಬಂದಿದ್ದಾರೆ ಅವನ ಅಪ್ಪ ಬರೀ ಒಂದು ಕೋಲಿನ ಆಸರೆಯಲ್ಲಿ ನಡೆದು ಬಂದ. ರಾಜ ಆತನಿಗೆ ಯಥಾ ಪ್ರಕಾರ ಧಾನ್ಯವನ್ನ ತೋರಿಸಿದ. ಈತನ ದೃಷ್ಟಿ ಮಗನ ದೃಷ್ಟಿಗಿಂತ ಚೆನ್ನಾಗಿತ್ತು. ಆ ಧಾನ್ಯವನ್ನು ತಿರುಗಿಸಿ ಮುರುಗಿಸಿ ನೋಡಿದ.
“ಏನಪ್ಪಾ, ನೀನು ಎಂದಾದರೂ ಇಂಥ ಧಾನ್ಯವನ್ನು ಬಿತ್ತಿ ಬೆಳೆದಿದ್ದೀಯ ? ಬೆಳೆಯದಿದ್ದರೆ ಹೋಗಲಿ ಎಲ್ಲಾದರೂ ಕಂಡಿದ್ದೀಯ ? ಕಾಣದಿದ್ದರೆ ಹೋಗಲಿ ಇದರ ಬಗ್ಗೆ ಎಂದಾದರೂ ಕೇಳಿದ್ದೀಯ?” – ರಾಜ ಆ ಮುದುಕನಿಗೆ ಕೇಳಿದ ಪ್ರಶ್ನೆಯನ್ನೇ ಅವರ ಅಪ್ಪನಿಗೂ ಕೇಳಿದ. ” ಇಲ್ಲ ಮಹಾಸ್ವಾಮಿ. ನಾನೆಂದೂ ಇಂಥ ಧಾನ್ಯವನ್ನ ಬೆಳೆದಿಲ್ಲ. ಕೊಂಡುಕೊಳ್ಳುವ ಮಾತಂತೂ ಇಲ್ಲವೇ ಇಲ್ಲ. ನಮ್ಮ ಕಾಲದಲ್ಲಿ ಎಲ್ಲರೂ ಅವರಿಗೆ ಬೇಕಾದ್ದನ್ನು ಅವರೇ ಬೆಳೆದುಕೊಳ್ಳುತ್ತಿದ್ದರು. ಹಣವೆಂಬುದು ಚಲಾವಣೆಯಲ್ಲೇ ಇರಲಿಲ್ಲ. ಆದರೆ ನಾವು ಬೆಳೆಯುತ್ತಿದ್ದ ಧಾನ್ಯಗಳು ಈಗ ಬೆಳೆಯುತ್ತಿರುವುದಕ್ಕಿಂತ ಗಾತ್ರದಲ್ಲಿ ದೊಡ್ಡದಾಗಿದ್ದವು, ಹೆಚ್ಚು ಹಿಟ್ಟನ್ನು ಕೊಡುತ್ತಿದ್ದವು. ನಮ್ಮ ಅಪ್ಪ ಇಂಥ ಧಾನ್ಯದ ಬಗ್ಗೆ ತಿಳಿಯಬಹುದು.”
ಸರಿ, ರಾಜ ಈತನಾಪ್ಪನನ್ನೂ ತಲಾಷ್ ಮಾಡಿ ಕರೆ ತರಲು ತಿಳಿಸಿದ. ರಾಜಭಟರು ಅವನನ್ನೂ ಪತ್ತೆ ಮಾಡಿ ಕರೆತಂದರು. ಆತ ಯಾವುದೇ ಉರುಗೊಲಿನ ಸಹಾಯವಿಲ್ಲದೆ ಸಲೀಸಾಗಿ ನಡೆದು ಬಂದ. ಆತನ ದೃಷ್ಟಿ ತೀಕ್ಷನವಾಗಿತ್ತು. ಕಿವಿ ಚುರುಕಾಗಿತ್ತು. ಆತನ ಮಾತುಗಳು ಸ್ಫುಟವಾಗಿ ಕೇಳುತ್ತಿದ್ದವು. ಮಹಾರಾಜ ಆ ಧಾನ್ಯವನ್ನು ಅವನ ಕೈಯಲ್ಲಿಟ್ಟ. ಆತ ಅದನ್ನು ಮುಟ್ಟಿ ಮುಟ್ಟಿ ನೋಡಿ, ” ನಾನು ಇಂಥ ಕಾಲನ್ನು ಕಂಡು ಬಹು ಕಾಲವಾಯ್ತು” ಎನ್ನುತ್ತಾ ಕೊಂಚ ಮುರಿದು ಬಾಯಿಗೆ ಹಾಕಿಕೊಂಡು ನುಡಿದ:
“ಆಹಾ ಅದೇ ರುಚಿ”
“ಹೇಳು ತಾತ, ನೀನಾದರೂ ಹೇಳು. ನೀನು ಎಂದಾದರೂ ಇಂಥ ಧಾನ್ಯವನ್ನು ಬಿತ್ತಿ ಬೆಳೆದಿದ್ದೀಯ? ಅಥವಾ ಈ ಬಗ್ಗೆ ಕೇಳಿದ್ದೀಯ?”
“ನನ್ನ ಕಾಲದಲ್ಲಿ ಇಂಥ ಧಾನ್ಯವನ್ನ ಎಲ್ಲ ಕಡೆ ಬೆಳೆಯುತ್ತಿದ್ದರು. ನಾನು ಇಂಥ ಕಾಳುಗಳನ್ನೇ ತಿಂದು ಬೆಳೆದವನು”
“ಹಾಗಿದ್ದರೆ ಹೇಳು ನಿನ್ನ ಹೊಲ ಎಲ್ಲಿತ್ತು. ಯಾವ ಜಮೀನಿನಲ್ಲಿ ಇಂಥ ಧಾನ್ಯವನ್ನ ಬೆಳೆಯುತ್ತಿದ್ದೆ ತೋರಿಸು’
“ನನ್ನ ಹೊಲವೇ? ಅಯ್ಯೋ ನಮ್ಮ ಕಾಲದಲ್ಲಿ ನನ್ನದು, ತನ್ನದು ಎಂಬುದು ಏನೂ ಇರಲಿಲ್ಲ. ಎಲ್ಲ ನೆಲವೂ ಆ ಭಗವಂತನದ್ದೆ. ಯಾರು ಎಲ್ಲಿ ಬೇಕಾದರೂ ಉತ್ತಿ ಬಿತ್ತಿ ಬೆಳೆ ತೆಗೆಯಬಹುದಿತ್ತು. ಯಾರಿಗೂ ಸ್ವಂತ ಜಮೀನು ಎಂಬುದೇ ಇರಲಿಲ್ಲ.”
ತಾತ, ನನ್ನದು ಇನ್ನೆರಡು ಪ್ರಶ್ನೆ ಮಾತ್ರ. ದಯವಿಟ್ಟು ಉತ್ತರಿಸು. ಮೊದಲನೆಯದು: ಭೂ ತಾಯಿ ಆಗ ಅಂಥ ಧಾನ್ಯವನ್ನ ನೀಡುತ್ತಿದ್ದವಳು ನಂತರ ಯಾಕೆ ನಿಲ್ಲಿಸಿಬಿಟ್ಟಳು. ಎರಡನೆಯ ಪ್ರಶ್ನೆ: ನಿನ್ನ ಮೊಮ್ಮಗ ಎರಡೂ ಕಂಕುಳಲ್ಲಿ ಕೊಲೂರಿಕೊಂಡು ನಡೆದು ಬಂದ. ಕಣ್ಣು ಕಿವಿ ಎರಡೂ ಸರಿಯಾಗಿ ಕಾಣುತ್ತಿರಲಿಲ್ಲ, ಕೇಳುತ್ತಿರಲಿಲ್ಲ. ನಿನ್ನ ಮಗ ಒಂದೇ ಕೋಲಿನ ಸಹಾಯದಿಂದ ಬಂದ. ಆದರೆ ನಿನಗೆ ಊರುಗೋಲಿನ ನೆರವೇ ಬೇಕಿಲ್ಲ. ಕಣ್ಣು ಕಿವಿ ಎಷ್ಟು ಚೆನ್ನಾಗಿದೆ. ಮಾತು ಸ್ಪಷ್ಟವಾಗಿದೆ, ಇಂಪಾಗಿದೆ ಯಾಕೆ ಹೀಗೆ?
ವೃದ್ಧ ಪಿತಾಮಹ ಉತ್ತರಿಸಿದ:
ಈಗ ಜನ ಸ್ವಂತ ಪರಿಶ್ರಮವನ್ನ ಅವಲಂಬಿಸಿ ಬದುಕುವುದನ್ನ ಮರೆತಿದ್ದಾರೆ. ಇತರರ ಶ್ರಮದ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ನಮ್ಮ ಕಾಲದಲ್ಲಿ ಹಾಗಿರಲಿಲ್ಲ. ಆಗ ಇದ್ದುದು ಆ ಜಗನ್ನಿಯಾಮಕನ ನಿಯಮ. ಎಲ್ಲರೂ ಅವರ ಅನ್ನವನ್ನ ಅವರೇ ದುಡಿದು ತಿನ್ನುತ್ತಿದ್ದರು, ಬೇರೆಯವರು ದುಡಿದದ್ದಕ್ಕೆ ಆಸೆ ಪಡುತ್ತಿರಲಿಲ್ಲ.








ಪ್ರೌಢಶಾಲಾ ತರಗತಿಯ ಇಂಗ್ಲೀಷ್ ಪಠ್ಯ ಪುಸ್ತಕದಲ್ಲಿ ನಮಗೆ ಈ ಕಥೆಯಿತ್ತು. ಅದರ ಶೀರ್ಷಿಕೆ A grain as a big as a hens egg. ಬಹುಶಃ ಈಗ 75-80ರ ವಯಸ್ಸಿನಲ್ಲಿರುವ ಶ್ರೀ ಫಕೀರರೆಡ್ಡಿ ನಂದವಾಡ್ಗಿ ಮಾಸ್ತರರು ಈ ಕಥೆಯನ್ನು ವಾಚಿಸುತ್ತಿದ್ದ, ವಿಶ್ಲೇಷಿಸುತ್ತಿದ್ದ, ನಮಗೆ ಸಂಪೂರ್ಣ ಮನವರಿಕೆಯಾಗುವಂತೆ ಬೋಧಿಸುತ್ತಿದ್ದ ರೀತಿ ಈಗಲೂ ಕಣ್ಣಮುಂದೆ ಕಟ್ಟಿದಂತಿದೆ. ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಪಠ್ಯ ಪುಸ್ತಕಗಳಲ್ಲಿ ಇಂತಹ ಲೋಕೋತ್ತರ ಅತ್ಯುತ್ತಮ ನೀತಿ ಪ್ರಧಾನ, ಉದ್ಬೋಧಕ ಕಥೆ-ಕವನ-ಲೇಖನಗಳು ಇರುತ್ತಿದ್ದವು. ವರ್ಡ್ಸ್ ವರ್ತ್ ಕವಿಯ “ಸಾಲಿಟರೀ ರೀಪರ್” ಕವನವನ್ನು ಅವರು ಹೇಳುತ್ತಿದ್ದ ವೈಖರಿಯಂತೂ ಅನನ್ಯ-ಅನುಪಮ. ರಾಜನೀತಿ ಶಾಸ್ತ್ರ ಮತ್ತು ಇತಿಹಾಸ ಬೋಧಿಸುತ್ತಿದ್ದ ಇತ್ತೀಚೆಗೆ ಧಾರವಾಡದಲ್ಲಿ ನಿಧನರಾದ ಶ್ರೀ ಎಸ್.ದತ್ತುರಾವ್ ಮಾಸ್ತರರು ಯಾವುದೇ ವಿಷಯದ ಮಾಸ್ತರರು ರಜೆಯಲ್ಲಿದ್ದಾಗ ವಿವಿಧ ವಿಷಯಗಳ ಬಗ್ಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಅವರು ಸಾಲಿಟರೀ ರೀಪರ್ ಕವನದ ಕುವೆಂಪುರವರ ಅನುವಾದ “ಹೊಲದೊಳಗೊಬ್ಬಳೆ ಹಳದಿಯ ಪಯಿರನು ಕೊಯ್ಯುವ ಬಾಲೆ ನೋಡಲ್ಲಿ..” ಹೇಳುತ್ತಿದ್ದುದು ಎಂದೂ ಮರೆಯಲಾಗದ ದಿವ್ಯ ಅನುಭವ. ಕುವೆಂಪು, ಬೇಂದ್ರೆ, ಕರ್ಕಿ, ಕಣವಿ, ಮಾಸ್ತಿಯವರನ್ನು ನಮಗೆ ಪರಿಚಯಿಸಿದವರೂ ಅವರೇ. ಅದರಲ್ಲೂ ಕರ್ಕಿಯವರ “ಹರಿಣ” ನೀಳ್ಗವನವನ್ನು ಓದಿ ಹೇಳಿದ್ದು ನನ್ನ ಜೀವನದ ಮರೆಯಲಾಗದ ಅಧ್ಯಾಯ.
“ಹೆಸರು ನನಗೆ ನೆನಪಿಲ್ಲ ಬಲ್ಲೆನವನೊಬ್ಬ ಬಿಲ್ಲುಗಾರ/
ಅವನ ನೀರೆ ನಿಲಿಸಿಹಳು ನಾದ ನಭದಲ್ಲಿ ಜೀವ ಮೂರ//
ಎಂದೊ ಕೇಳಿದಾ ಕಥೆಯನಿಂದು ಹೇಳುತಿಹೆ ಅದರ ಸಾರ/
ಹೇಳಿದಲ್ಲದೆಯೆ ಜೀವ ನಿಲ್ಲದಿದು ಕೇಳು ಪುಟ್ಟ ಪೂರ//1//
ಒಂದು ವನದ ಕೇಂದ್ರದಲಿ ಸೊಬಗ ಬೀರಿತ್ತು ಪರ್ಣ ಶಾಲೆ/
ಅದನು ಬಳಸಿ ಬರೆದಿಹಳು ಪ್ರಕೃತಿ ಸೌಂದರದ ವರ್ಣ ಮಾಲೆ………..
……..”
ಕನ್ನಡ ಛಂದೋ ಲೋಕದಲ್ಲಿ ಅನುಪಮ ಸ್ಥಾನ ಪಡೆದಿರುವ ಮೇಘ ರಗಳೆ ಛಂದಸ್ಸಿನ ಈ ನೀಳ್ಗವನ ನನ್ನ ಮೇಲೆ ಬೀರಿದ ಪ್ರಭಾವ ಅಷ್ಟಿಷ್ಟಲ್ಲ. 9ನೇ ತರಗತಿ ವಿದ್ಯಾರ್ಥಿಯಾಗಿದ್ದಾಗಲೇ ನನಗೆ ಕವನ ರಚನೆಯ ಪ್ರೇರಣೆ ನೀಡಿದ್ದು ಈ ನೀಳ್ಗವನ. ಹಾಗೆ ನಾನು ಬರೆದ ಮೊಟ್ಟಮೊದಲನೇ ಕವನವೇ ಕರ್ಮವೀರ ಸಾಪ್ತಾಹಿಕದಲ್ಲಿ ಪ್ರಕಟವಾಯಿತು. ಹಾಸ್ಯ ಸಾಮ್ರಾಟ ಬೀChiರವರಿಗೆ ಈ ಕವಿತೆಯ ಪ್ರತಿ ಕಳಿಸಿದಾಗ ನನ್ನಂತಹ ಒಬ್ಬ ಹಳ್ಳಿಗಾಡಿನ ವಿದ್ಯಾರ್ಥಿಯನ್ನು ಅವರು ಕಡೆಗಣಿಸದೇ
“ಪತ್ರಿಕೆಯಲ್ಲಿ ಪ್ರಕಟವಾಯ್ತೆಂದು ಆಕಾಶಕ್ಕೆ ಜಿಗಿಯಬೇಡ/
ಆಕಾಶವಾಣಿಯಲ್ಲಿ ತಿರಸ್ಕೃತವಾದಾಗ ಪಾತಾಳಕ್ಕಿಳಿಯಬೇಡ//”-ಎಂದು ಬರೆದು ಆಶೀರ್ವದಿಸಿದ್ದರು.
ಕ್ಷಮಿಸಿ, ಉಲ್ಲೇಖಿಸಲು ಮರೆತಿದ್ದೆ. ಇದು 1967-68ನೇ ಸಾಲಿನ ಮಾತು.
Thanks sir. nanu adeshto sari maretuhogidda i katenna nenapisikoltidde . adre matte I Kate dakkidakke tumble dhanyavadagalu.