ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಶೇಖರ ಆಲೂರು ಕಾಲಂ: ಕಪ್ಪು ಕಣ್ಣಿನ ಹುಡುಗಿ

ರಸ್ಕಿನ್ ಬಾಂಡ್ : ಭಾರತೀಯ ಇಂಗ್ಲಿಷ್ ಗದ್ಯ ಸಾಹಿತ್ಯದ ವೃದ್ಧ ಪಿತಾಮಹ. ಎಳೆಯ ಚಿಣ್ಣರಿಂದ ಹಿರಿಯರವರೆಗೆ ಎಲ್ಲ ವಯೋಮಾನದ ಓದುಗರನ್ನೂ ರಂಜಿಸಿದವನು ಬಾಂಡ್. ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ೧೯೩೪ರಲ್ಲಿ ಜನಿಸಿದ ರಸ್ಕಿನ್ ಬಾಂಡ್ ನೂರಾರು ಕಥೆಗಳು, ಪ್ರಬಂಧಗಳು; ಹತ್ತಾರು ಕಾದಂಬರಿಗಳು ಹಾಗೂ ಪ್ರವಾಸ ಕಥನಗಳನ್ನು ಬರೆದಿದ್ದಾನೆ. ಬಾಂಡ್ ನಮ್ಮ ನಡುವಿನ ಬಹುದೊಡ್ಡ ಲೇಖಕ ಅಲ್ಲದಿದ್ದರು ನಿಸ್ಸಂಶಯವಾಗಿ ಮುಖ್ಯ ಲೇಖಕ. ಈತ ನಮ್ಮನ್ನು ಆಕರ್ಷಿಸುವುದು ಆತನ ಗದ್ಯದ ಸರಳತೆಯಿಂದಾಗಿ. ಹಲವಾರು ವರ್ಷಗಳ ಹಿಂದೆ ಈತನ ಕೃತಿಯೊಂದನ್ನು ವಿಮರ್ಶಿಸುತ್ತಾ ‘ ಇಂಡಿಯಾ ಟುಡೆ’ Bond’s sentences are moist with dew and the mountain air, with charm, nostalgia and underplayed humour. He is our resident Wordsworth in our prose ಎಂದು ಬಣ್ಣಿಸಿತ್ತು.

ರಸ್ಕಿನ್ ಬಾಂಡ್ ನ ಬರವಣಿಗೆಯ ಆಕರ್ಷಣೆಯೇ ಅದು. ಅದರಲ್ಲಿ ಪರ್ವತಾಗ್ರದಿಂದ ಸುರಿವ ಜ್ಹರಿಯ ಶಬ್ದ, ದಟ್ಟ  ಕಾನನದ ಮೌನ; ಗಂಗೆ, ಮಂದಾಕಿನಿಯರ ಮರ್ಮರ, ಸುರಿವ ಹಿಮ; ವನಸುಮಗಳ ಗಂಧ…ಎಲ್ಲವೂ ಬೆರೆತಿದೆ. ಆತನ ಕೃತಿಗಳಲ್ಲಿ ಪ್ರಕಟವಾಗುವ ಜಗತ್ತು ವೇಗದ ಲೋಕವಲ್ಲ. ಅದು ಕಾಲದ ಹಂಗಿಲ್ಲದೆ ನಿಧಾನವಾಗಿ ಸಾಗುವ ಬದುಕು. ಆಟ ಪ್ರಯಾಣಿಸುವ ರೈಲುಗಳು ಗುಡ್ಡಗಾಡು, ಕಣಿವೆ, ದಟ್ಟ ಕಾಡಿನ ನಡುವೆ ಮಂದಗತಿಯಲ್ಲಿ ಸಾಗುತ್ತವೆ. ಆತನ ಒಂದು ಕಿರುಕಾದಂಬರಿಯ ಹೆಸರು Time stops at Shamli. ಈ ಕಾದಂಬರಿಯ ನಿರೂಪಕನಿಗೆ ಎಂದೂ ಯಾರೂ ಇಳಿಯದ, ಹತ್ತದ; ಆದರೂ ರೈಲು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ನಿಲ್ಲುವ ಶಾಮ್ಲಿ ಎಂಬ ರೈಲು ನಿಲ್ದಾಣದ ಬಗ್ಗೆ ಕುತೂಹಲ ಮೂಡಿ ಅಲ್ಲಿಯೇ ಇಳಿದು ಬಿಡುತ್ತಾನೆ. ಮುಂದೆ ಕಾಡಿನ ನಡುವೆ ಬಹುದೂರ ಸ್ಟೇಷನ್ ಗಳು ಸಿಕ್ಕುತ್ತಿರಲಿಲ್ಲವಾದ ಕಾರಣ ಶಾಮ್ಲಿಯಲ್ಲಿ ಟ್ರೈನು ಪ್ರಯಾಣಿಕರು ಕಾಫಿ, ಟೀ ಕುಡಿಯಲೋಸುಗ ನಿಲ್ಲುತ್ತಿರುತ್ತದೆ. ಶಾಮ್ಲಿಯಲ್ಲಿ ಇಳಿದಾತನಿಗೆ ಗೇಟ್ ನಲ್ಲಿ ಟಿಕೆಟ್ ಕೇಳುವವರು ಯಾರೂ ಇರುವುದಿಲ್ಲ. ಬಹುದೂರ ಇರುವ ಶಾಮ್ಲಿ ಎಂಬ ಪುಟ್ಟಪಟ್ಟಣಕ್ಕೂ, ರೈಲ್ವೆ ಸ್ಟೇಷನ್ ಗೂ ಕೊಂಡಿ ಎಂಬಂತೆ ಅಲ್ಲೊಂದು ಜಟಕಾ ಇರುತ್ತದೆ. ವಿವರಗಳಿಗೆ ಹೋಗುವುದಿಲ್ಲ. ಬಾಂಡ್ ನ  ಬರವಣಿಗೆಯ ವಸ್ತು ಮತ್ತು ಶೈಲಿಯನ್ನು ಸೂಚಿಸುವುದಕ್ಕೆ ಇದರ ಉದಾಹರಣೆ ನೀಡಿದೆ.

ಆತನ ಪ್ರಬಂಧಗಳ ಹೆಸರನ್ನು ಗಮನಿಸಿ: Life at my own place; The old gramaphone; Upon an old wall dreaming… ಹೀಗೆ ಅವನ ಇಡೀ ಬರವಣಿಗೆಯಲ್ಲಿ ಒಂದು ಬಗೆಯ ದಟ್ಟ ನಾಸ್ಟಾಲ್ಜಿಯಾ ಆವರಿಸುತ್ತದೆ. ನಿಜವಾದ ಗಂಗೆ ಯಾವುದು, ಅಲಕನಂದೆಯೋ, ಭಾಗೀರಥಿಯೋ ಎಂಬ ಪ್ರಶ್ನೆಯೊಂದಿಗೆ ಆತನ ಪ್ರಯಾಣ ಕಥನವೊಂದು ಆರಂಭವಾಗುತ್ತದೆ. ಅದಕ್ಕೆ ಆತನ ಮಿತ್ರ ಹೇಳಿದ ಉತ್ತರವನ್ನೇ ಈತನೂ ನೀಡುತ್ತಾನೆ: ಅಲಕನಂದೆ ನಿಜವಾದ ಗಂಗೆ; ಆದರೆ ಭಾಗೀರಥಿ ಗಂಗಾಜಿ. ರುದ್ರ ಪ್ರಯಾಗದಲ್ಲಿ ಅಲಕನಂದೆಯನ್ನು ಸೇರುವ ಮಂದಾಕಿನಿಯನ್ನು ಬಣ್ಣಿಸುವಾಗ; ತುಂಗಾನಾಥದ ಪ್ರಕೃತಿ ವೈಭವವನ್ನು ತೆರೆದಿಡುವಾಗ ಬಾಂಡ್ ನ ಬರವಣಿಗೆ ಕಾವ್ಯಮಯವಾಗುತ್ತದೆ. ಹಿಮಾಲಯದ ಕಣಿವೆ ಪ್ರದೇಶದ ಸೊಬಗನ್ನು, ಜನಜೀವನವನ್ನು ಅಲ್ಲಿಯೇ ಇದ್ದುಕೊಂಡು ತನ್ನದೇ ಶೈಲಿಯಲ್ಲಿ, ಭಾಷೆಯಲ್ಲಿ ನವಿರಾಗಿ ಗದ್ಯ್ದದಲ್ಲಿ ತೆರೆದಿಡುತ್ತಿರುವ ಲಿಖಕ ರಸ್ಕಿನ್ ಬಾಂಡ್.

ನೀವೆಲ್ಲರೂ ನಿಮ್ಮ ಶಾಲಾದಿನಗಳಲ್ಲಿ, ಇಂಗ್ಲಿಷ್ ಪುಸ್ತಕದಲ್ಲಿ ಓದಿರಬಹುದಾದ ಆತನ ಬಹು ಜನಪ್ರಿಯ ಕಥೆ ‘The eyes have it’ ನ ಭಾವಸಂಗ್ರಹ ನಿಮಗಾಗಿ:

ಬಹುದೂರ ಇಡೀ ಕಂಪಾರ್ಟ್ ಮೆಂಟ್ ನಲ್ಲಿ ನಾನೊಬ್ಬನೇ ಇದ್ದೆ. ರೋಹಾನ್ ಸ್ಟೇಶನ್ ನಲ್ಲಿ ಒಂದು ಹುಡುಗಿ ನಮ್ಮ ಕಂಪಾರ್ಟ್ ಮೆಂಟ್ ಹತ್ತಿದಳು. ಆಕೆಯನ್ನು ಬೀಳ್ಕೊಡಲು  ಬಂದಿದ್ದವರು ಆಕೆಯ ತಂದೆತಾಯಿಯರೇ ಇರಬೇಕು. ಅವರು ಮತ್ತೆ ಮತ್ತೆ ಹೇಳುತ್ತಿದ್ದರು : ಮಗು ಜೋಪಾನ. ಎಲ್ಲ ಸಾಮಾನುಗಳನ್ನೂ ಒಂದೇ ಕಡೆ ಇಟ್ಟುಕೋ. ಇಳಿಯಬೇಕಾದರೆ ಜಾಗ್ರತೆ. ಯಾರೂ ಅಪರಿಚಿತರನ್ನು ಮಾತಾಡಿಸಬೇಡ. ಹುಷಾರು. ಆಕೆಯ ತಾಯಿ ಕಿಟಕಿಯಲ್ಲಿ ಬಾಗಿ ಇನ್ನೂ ಏನೇನು ಹೇಳುತ್ತಿದ್ದರೋ. ಅಷ್ಟರಲ್ಲಿ ಟ್ರೈನು ಹೊರಟೇಬಿಟ್ಟಿತು. ನಿಧಾನವಾಗಿ ವೇಗ ಪಡೆದುಕೊಳುತ್ತಾ ಪ್ಲಾಟ್ ಪ್ಹಾರ್ಮನ್ನೇ ದಾಟಿತು.

ನನಗೆ ದೃಷ್ಟಿಮಾಂಧ್ಯವಿರುವುದರಿಂದ, ಆ ಹುಡುಗಿ ಹೇಗಿದ್ದಾಳೆ ಎಂಬುದನ್ನು ಆ ಕ್ಷಣದಲ್ಲಿ ಅರಿಯಲು ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯ ಕಳೆದರೆ ಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ ಆಕೆಯ ರೂಪವನ್ನ ನಾನು ಗ್ರಹಿಸಬಲ್ಲೆ. ಕರಾರುವಾಕ್ಕಾಗಿ ಆಕೆ ಹೇಗಿದ್ದಾಳೆ ಎಂಬುದನಂತೂ ತಿಳಿಯುವುದು ಸಾಧ್ಯವೇ ಇಲ್ಲ. ಆಕೆಯ ದನಿ ತುಂಬಾ ಇಂಪಾಗಿತ್ತು. ಅದರಲ್ಲಿ ಏನೋ ಒಂದು ವಿಚಿತ್ರ ಆಕರ್ಷಣೆ ಇತ್ತು. ಆಕೆಯ ದನಿಯಂತೆ ಗೆಜ್ಜೆಯ ನಿನಾದ ಕೂಡ ಅವಳು ನನ್ನ ಮುಂದಿನ ಸೈಟಿನಲ್ಲಿ ಬಂದು ಕುಳಿತ ನಂತರವೂ ನಿನದಿಸುತ್ತಿತ್ತು. ದೀರ್ಘ ಸಮಯ ಒಬ್ಬನೇ ಪಯಣಿಸಿದ್ದ ನನಗೆ, ಆ ಹುಡುಗಿಯೊಂದಿಗೆ ಮಾತಾಡ ಬೇಕೆನ್ನಿಸಿತು.

“ನೀವು ಡೆಹ್ರಾಗೆ ಹೋಗುತ್ತಿದ್ದೀರಾ?”- ನನ್ನ ದನಿ ಕಂಪಿಸಿತು.

ನಾನು ಆಕೆಯಿಂದ ದೂರದಲ್ಲಿ ಕುಳಿತಿದ್ದೆನೆಂದು ಕಾಣುತ್ತದೆ. ನನ್ನ ಮಾತು ಕೇಳಿ ಆಕೆ ಬೆಚ್ಚಿದವಳಂತೆ ಕಂಡಳು.

“ಅರೆ, ಈ ಕಂಪಾರ್ಟ್ ಮೆಂಟಿನಲ್ಲಿ ಬೇರಾರೂ ಇಲ್ಲ ಅಂದುಕೊಂಡಿದ್ದೆ” – ಆಕೆಯ ದನಿಯಲ್ಲಿ ಆಶ್ಚರ್ಯ ತುಂಬಿತ್ತು.

ಕೆಲವೂಮ್ಮೆ ಹೀಗಾಗುತ್ತದೆ. ದೃಷ್ಟಿ ಭಾಗ್ಯ ಇರುವವರಿಗೆ ಅವರ ಎದುರು ಏನಿದೆ ಎಂಬುದು ಕಾಣುವುದೇ ಇಲ್ಲ. ಅವರ ದೃಷ್ಟಿಗೆ ಇಡಿ ವಿಶ್ವವೇ ಲಭ್ಯ. ಹೀಗಾಗಿ ಅವರಿಗೆ ಕಣ್ಣ ಮುಂದೇ ಇರುವುದು ಕಾಣುವುದೇ ಇಲ್ಲ. ನನ್ನಂಥ ಅಂಧರ ನೋಟ ಅಷ್ಟು ವಿಶಾಲವಾಗಿರುವುದಿಲ್ಲ. ನಮ್ಮ ಕಣ್ಣುಗಳ ಲೋಕ ಬಹು ಪುಟ್ಟದು, ಸೀಮಿತ ವ್ಯಾಪ್ತಿ. ನಮಗೆ ಎಷ್ಟು ಬೇಕೋ ಅಷ್ಟನ್ನ ಅಂದಾಜಿನಿಂದ ಅಭ್ಯಾಸದಿಂದ, ಅಂತರ್ ದೃಷ್ಟಿಯ ನೆರವಿನಿಂದ ಹಿಡಿದಿಟ್ಟುಕೊಳ್ಳುತ್ತೇವೆ.

“ನಾನೂ ನಿಮ್ಮನ್ನ ನೋಡಲಿಲ್ಲ, ನೀವು ಬಂದದ್ದನ್ನ ಕೇಳಿಸಿಕೊಂಡೆ.”

ನನ್ನ ಅಂಧತ್ವ ಅಕೆಗೆ ತಿಳಿಯದಂತೆ ವರ್ತಿಸಲು ಸಾಧ್ಯವೇ. ಬಹುಶಃ ಕುಳಿತ ಜಾಗದಿಂದ ಕದಲದಿದ್ದರೆ ನನ್ನ ದೃಷ್ಟಿ ಮಾಂದ್ಯತೆ ಅವಳಿಗೆ ಗೊತ್ತಾಗುವುದೇ ಇಲ್ಲ. ನನ್ನ ಮೊದಲ ಪ್ರಶ್ನೆಗೆ ಆಕೆ ಈಗ ಉತ್ತರಿಸಿದಳು : “ಇಲ್ಲ ನಾನು ಡೆಹ್ರಾಗೆ ಹೋಗುತ್ತಿಲ್ಲ. ಇಲ್ಲೇ ಸಹರಾನ್ ಪುರದಲ್ಲಿ ಇಲಿದುಕೂಳ್ಳ ತ್ತಿದ್ದೇನೆ. ಅಲ್ಲಿ ನಮ್ಮ ಚಿಕ್ಕಮ್ಮನ ಮನೆಗೆ ಹೋಗುತ್ತಿದ್ದೇನೆ. ನೀವು ಎಲ್ಲಿಗೆ ಹೋಗುತ್ತಿದ್ದೀರಿ?”

“ನಾನು ಡೆಹ್ರಾಗೆ ಅಲ್ಲಿಂದ ಮುಸ್ಸೋರಿಗೆ”

“ಓಹ್! ನೀವು ಎಂಥ ಅದೃಷ್ಟವಂತರು. ನಾನೂ ಮುಸ್ಸೋರಿಗೆ ಹೋಗುವಂತಿದ್ದರೆ ಎಷ್ಟು ಚೆನ್ನಿರುತ್ತಿತ್ತು. ಮಸ್ಸೋರಿಯ ಬೆಟ್ಟ ಗುಡ್ಡಗಳೆಂದರೆ ನನಗೆ ಪಂಚಪ್ರಾಣ. ಅದೂ ಅಕ್ಟೋಬರ್ ನಲ್ಲಿ ಅವು ಎಂಥ ಚಂದ, ಅಲ್ಲವೇ.”

” ಹೌದು, ಇದೇ ಸರಿಯಾದ ಸಮಯ. ಇಡೀ ಬೆಟ್ಟ ಗುಡ್ಡಗಳು ಡೇಲಿಯಾ ಹೂಗಳಿಂದ ಆವೃತ್ತವಾಗಿರುತ್ತವೆ. ಸೂರ್ಯನು ಈಗ ಎಷ್ಟು ಸಿಹಿಸಿಹಿಯಾಗಿರುತ್ತಾನೆ, ಗೊತೇ. ಮತ್ತೆ ರಾತ್ರಿ ಹೊತ್ತಿನಲ್ಲಿ ಉರಿವ ಬೆಂಕಿಯ ಮುಂದೇ ಬೆಂಕಿ ಕಾಯಿಸಿಕೊಳ್ಳುತ್ತಾ ಕುಳಿತರೆ ಎಷ್ಟು ಹಿತವಾಗಿರುತ್ತೆ, ಬಲ್ಲಿರಾ. ಈಗ  almostಎಲ್ಲ ಪ್ರವಾಸಿಗರೂ ಖಾಲಿ ಆಗಿರುತ್ತಾರೆ. ಇಡೀ ಗುಡ್ಡಗಾಡು- ಕಣಿವೆಯಲ್ಲಿ ಆಹ್ಲಾದಕರ ಮೌನ ನೆಲೆಸಿರುತ್ತದೆ.” ಆಕೆಯಿಂದ ಏನು ಪ್ರತಿಕ್ರಿಯೆಯೇ ಬರಲಿಲ್ಲ. ನನ್ನನ್ನೇನು ಬಿಗ್ ಬೋರ್ ಅಂದುಕೊಂಡಳೋ ಅಥವಾ ರೋಮ್ಯಾಂಟಿಕ್ ಫೂಲ್ ಎಂದು ತಿಳಿದಳೋ… ಅಥವಾ… ನಾನು ದೃಷ್ಟಿಹೀನ ಎಂಬುದು ಅಕೆಗೆ ಈಗಾಗಲೇ ತಿಳಿದಿರಬೇಕು. ನಾನು ಈ ಗೊಂದಲದಲ್ಲಿದ್ದಾಗಲೇ ಆಕೆಯ ಮುಂದಿನ ಮಾತು ನನ್ನ ಅನುಮಾನಗಳನ್ನೆಲ್ಲ ಪರಿಹರಿಸಿತು.

“ನೀವೇಕೆ ಕಿಟಕಿಯ ಹೊರಗೆ ನೋಡುತ್ತಿಲ್ಲ?”

ನಾನು ಕಿಟಕಿಯಿಂದ ಕೊಂಚ ದೂರದಲ್ಲಿ ಕುಳಿತಿದ್ದೆ ಅನ್ನಿಸಿತು. ಹಾಗೆ ಸೀಟಿನ ಮೇಲೆ ಜರುಗಿಕೊಂಡೇ ಕಿಟಕಿಯ ಬಳಿ ಕುಳಿತು ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವವನಂತೆ ನಟಿಸಿದೆ. ಎಂಜಿನ್ನಿನ ಕೂಗು, ಚಕ್ರಗಳ ಸದ್ದು ಬಿರುಸಾಗಿ ಕೇಳುತ್ತಿತ್ತು. ಅ ಸದ್ದಿನಲ್ಲಿ ಒಂದು ಲಯವಿತ್ತು. ಇದರ ನಡುವೆ ದೊಡ್ದಮರಗಳು, ಟೆಲಿಗ್ರಾಫ್ ಕಂಬಗಳ ಆಕೃತಿಗಳು ಮಿಂಚಿ ಮಾಯವಾಗುವುದು ಗೋಚರವಾಗುತ್ತಿತ್ತು.

” ನೀವು ಗಮಸಿದ್ದೀರಾ, ನಾವು ಇದ್ದಲ್ಲೇ ಇದ್ದೇವೆ. ಮರಗಳು ಮಾತ್ರ ಚಲಿಸುವಂತೆ ಭಾಸವಾಗುತ್ತದೆ ಅಲ್ಲವೇ?”

“ಅದು ನಿಜ. ಹೌದು, ನೀವು ಡೆಹ್ರಾದಲ್ಲಿ ಯಾವುದಾದರೂ ಪ್ರಾಣಿಗಳನ್ನು ಕಂಡಿದ್ದೀರಾ? ಡೆಹ್ರಾದ ಕಾಡುಗಳಲ್ಲಿ ಈಗ ಯಾವ ಪ್ರಾಣಿಗಳೂ ಇದ್ದಂತಿಲ್ಲ.”

ಈಗ ನಾನು ಕಿಟಕಿಯ ಹೊರಗೆ ನೆಟ್ಟಿದ್ದ ದೃಷ್ಟಿಯನ್ನು ತೆಗೆದು ಆಕೆಯನ್ನೇ ದಿಟ್ಟಿಸಿದೆ. ಆಕೆಯ ಮುಖದ ಮೇಲೆ ನನ್ನ ನೋಟವನ್ನ ಕೇಂದ್ರೀಕರಿಸಿದೆ. ನನಗೇ ಅರಿವಿಲ್ಲದೆ ನಾನು ಹೇಳಿದೆ:

“you have an interesting face” -ನಾನು ನನ್ನ ಅಳತೆ ಮೀರಿ ಮಾತಾಡಿದೆನೇ? ಇಲ್ಲ, ಇರಲಾರದು. ನನ್ನ ಮಾತು ಸಭ್ಯತೆಯ ಗೆರೆಯನ್ನ ದಾಟಿಲ್ಲ ಎಂದು ನನ್ನನ್ನು ಸಮಾಧಾನಿಸಿಕೊಂಡೆ.

ನನ್ನ ಮಾತು ಕೇಳಿ ಆಕೆ ದೊಡ್ಡದಾಗಿ ನಕ್ಕಳು. ಆ ನಿಷ್ಕಳಂಕ ನಗುವಿನ ಅಲೆ ಇಡೀ ಕಂಪಾರ್ಟ್ ಮಂಟನ್ನೇ ವ್ಯಾಪಿಸಿತು. ನಂತರ ಆಕೆ ನಿಧಾನವಾಗಿ ನುಡಿದಳು: ಥ್ಯಾಂಕ್ ಯು. ಇದುವರೆಗೆ ನನ್ನ ಮುಖ ನೋಡಿದವರೆಲ್ಲಾ ನಿನ್ನ ಮುಖ ಎಷ್ಟು ಸುಂದರವಾಗಿದೆ ಎಂದೇ ಹೇಳುತ್ತಿದ್ದರು. ಅದನ್ನೇ ಕೇಳಿ ಕೇಳಿ ನನಗೆ ಬೋರ್ ಹೊಡೆದು ಹೋಗಿತ್ತು.”

ಓಹ್, ಹಾಗಾದರೆ ನೀನು ಅಪೂರ್ವ ಚೆಲುವೆ ಎಂದು ಮನಸ್ಸಿನಲ್ಲೇ ಅಂದುಕೊಂಡು ಆಕೆಗೆ, ” interesting face ಖಂಡಿತ ಸುಂದರವಾಗಿ ಕೂಡ ಇರಬಲ್ಲುದು” ಎಂದೇ.

ಆಕೆ ಮಾರ್ನುಡಿದಳು: “ನೀವೊಬ್ಬ ಹೃದಯವಂತ ಯುವಕ. ಆದರೆ ನೀವೇಕೆ ಅಷ್ಟು serious ಆಗಿದ್ದೀರಿ?” ಆಕೆಯೊಂದಿಗೆ ಮನಬಿಚ್ಚಿ ನಗುನಗುತ್ತಾ ಮಾತಾಡಬೇಕೆನ್ನಿಸಿತು. ಆದರೆ ಈ ಕ್ಷಣಿಕ ಒಡನಾಟ ನನ್ನನ್ನ ಮತ್ತಷ್ಟು ವಿಷಾದ ಏಕಾಕಿತನಕ್ಕೆ ದೂಡುತ್ತದೆ ಅಂದುಕೊಂಡು, ” ಇನ್ನೇನು ನೀವು ಇಳಿಯುವ ಸ್ಟೇಷನ್ ಬಂದೇ ಬಿಡುತ್ತದೆ” ಎಂದು ಒಂದು ಬಗೆಯ ನೋವಿನ ದನಿಯಲ್ಲಿಯೇ ಹೇಳಿದೆ. ಅದಕ್ಕೆ ಆಕೆ:

“Thank god. ಇದೊಂದು ಪುಟ್ಟ ಪ್ರಯಾಣ. ನನಗಂತೂ ಟ್ರೈನಿನಲ್ಲಿ ಎರಡು- ಮೂರು ಗಂಟೆಗೂ ಹೆಚ್ಚು ಕಾಲ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ.

ಆದರೆ ನಾನು ತಯಾರಿದ್ದೆ. ಆಕೆಯೊಂದಿಗೆ ಎಷ್ಟು ಕಾಲ ಬೇಕಾದರೂ ಪಯಣಿಸಲು, ಕೇವಲ ಆಕೆಯ ನುಡಿಗಳನ್ನು ದನಿಯನ್ನ ಆಲಿಸಲು. ಆಕೆಯ ದನಿಯಲ್ಲಿ ಪರ್ವತಾಗ್ರದಿಂದ ಹರಿವ ಜ್ಹರಿಯ ಜೀವಂತಿಕೆ ಇತ್ತು. ಟ್ರೈನಿನಿಂದ ಇಳಿಯುತ್ತಿದ್ದಂತೆಯೇ ಆಕೆ ಈ ಕಿರುಪಯಣದ ಹಾದಿಯನ್ನ ಮರೆಯುತ್ತಾಳೆ. ಆದರೆ ಆಕೆಯೊಂದಿಗೆ ಕಳೆದ ಈ ಕಾಲ ನನ್ನನ್ನ ಈ ಪ್ರಯಾಣದುದ್ದಕ್ಕೂ ಕಾಡುತ್ತದೆ, ನಂತರ ಕೂಡ.

ಎಂಜಿನ್ನು ಜೋರಾಗಿ ಸಿಳ್ಳೆ ಹಾಕಿತು. ಕಂಪಾರ್ಟ್ ಮೆಂಟಿನ ಚಕ್ರಗಳು ಕಂಬಿಯನ್ನು ಬದಲಿಸಿ ವೇಗ ತಗ್ಗುತ್ತಿರುವುದು ಕೇಳಿಸಿತು. ಆಕೆ ಎದ್ದುನಿಂತು ತನ್ನ ಸಾಮಾನುಗಳನ್ನೆಲ್ಲ ಜೋಡಿಸಿಕೊಂಡಳು. ಆಗ ಆಕೆಯ ಕೂದಲ ಸೆಳೆಯೊಂದು ನನ್ನ ಗಲ್ಲಕ್ಕೆ ಸೋಕಿ ಇಡೀ ದೇಹ ಜ್ಹಲ್ಲೆಂದಿತು. ಆಕೆ ತನ್ನ ಕೇಶರಾಶಿಯನ್ನ ಇಳಿಬಿಟ್ಟಿದ್ದಳೋ, ಜಡೆ ಹಾಕಿಕೊಂಡಿದ್ದಳೋ ತಿಳಿಯಲಿಲ್ಲ.

ಆಕೆ ಇಳಿಯಬೇಕಾದ ಸ್ಟೇಷನ್ ಬಂದೇಬಿಟ್ಟಿತು. ಹೊರಗೆ ಕಾಫಿ, ಟೀ ಮಾರುವವರು, ಪೋರ್ಟರುಗಳ ಗದ್ದಲ ಕೇಳುತ್ತಿತ್ತು. ಕಿಟಕಿಯಿಂದ ಹೆಂಗಸೊಬ್ಬಳ ದ್ವನಿ ಕೇಳಿಸಿತು. ಬಹುಶಃ ಅದು ಆಕೆಯ ಚಿಕ್ಕಮ್ಮ ಇರಬೇಕು. ನನ್ನ ಪಯಣದ ಸಂಗಾತಿ ನನಗೆ ‘ಗುಡ್ ಬೈ’ ಹೇಳಿದಳು. ಆಗ ಆಕೆ ನನಗೆ ತೀರಾ ಸನಿಹದಲ್ಲಿದ್ದಳು. ಆಕೆಯ ಕೂದಲಿನ ಗಂಧ ನನ್ನನ್ನು ಇಡಿಯಾಗಿ ವ್ಯಾಪಿಸಿಬಿಟ್ಟಿತು. ಒಮ್ಮೆ ನನ್ನ ಬೆರಳುಗಳಿಂದ ಆಕೆಯ ಕೂದಲನ್ನ ಸ್ಪರ್ಶಿಸಬೇಕೆನ್ನಿಸಿತು. ಆದರೆ ಅಪೂರ್ವ ಸುಗಂಧವನ್ನು ನನ್ನ ವಾತಾವರಣದಲ್ಲಿ ಉಳಿಸಿ ಆಕೆ ಹೊರಟೇ ಬಿಟ್ಟಳು.

ಬಾಗಿಲಲ್ಲಿ ಏನೋ ಗೊಂದಲವಾದಂತೆನ್ನಿಸಿತು. ಒಳಗೆ ಹತ್ತಿದವರು ಆಕೆಯ ಬಳಿ ‘ಸಾರಿ’ ಕೇಳಿದಂತಿತ್ತು. ಒಂದೆರಡು ಕ್ಷಣಗಳ ನಂತರ ಬಾಗಿಲು ದಡ್ಹಾರ್ ಎಂದು ಮುಚ್ಚಿಕೊಂಡ ಶಬ್ದ ಕೇಳಿಸಿತು. ಅದರೊಂದಿಗೆ ನನ್ನ ಪಾಲಿನ ಇಡೀ ಜಗತ್ತು ಮುಚ್ಚಿಕೊಂಡಿತು. ಗಾರ್ಡ್ ಸೀಟಿ ಊದುತ್ತಿದಂತೆಯೇ ಟ್ರೈನು ನಿರ್ಲಿಪ್ತತೆಯಿಂದ ತನ್ನ ಕಾಯಕ ಆರಂಭಿಸಿತು. ಹೊಸ ಪ್ರಯಾಣಿಕರೊಬ್ಬರು ನನ್ನ ಎದುರು ಕುಳಿತಿದ್ದರು. ಆಗ ಕೇಳಿದ ದನಿಯ ಪ್ರಕಾರ ಆತ ಮಧ್ಯವಯಸ್ಕನಂತಿದ್ದರು. ನಮ್ಮ ಟ್ರೈನು ಸ್ಟೇಷನ್ ಬಿಟ್ಟು ಸ್ವಲ್ಪ ದೂರ ಸಾಗಿದ ನಂತರ ಆತ, ” Sorry, young man ಈಗ ಇಳಿದು ಹೋದ ಚಲುವೆಯಂಥ ಆಕರ್ಷಕ ಸಹಯಾತ್ರಿಯಲ್ಲ, ನಾನು” ಎಂದರು.

ನಾನು ನಗುತ್ತಾ “She was an interesting girl” ಎಂದು ಅವರ ಅಂತಃಕರಣದ ಮಾತುಗಳಿಂದ ಸ್ಫೂರ್ತಿ ಪಡೆದವನಂತೆ ಸಲುಗೆ ತೆಗೆದುಕೊಂಡು “ಆಕೆ ಜಡೆ ಹಾಕಿದ್ದಳೋ ಅಥವಾ ತನ್ನ ಕೊದಲರಾಶಿಯನ್ನ ಇಳಿಬಿಟ್ಟಿದ್ದಳೋ” ಎಂದು ಕೇಳಿದೆ. ಅದಕ್ಕೆ ಪ್ರತಿಯಾಗಿ ಆತ ಹೇಳಿದರು: “ಅದು ನನಗೆ ನೆನಪಿಲ್ಲ. ಆದರೆ ನಾನು ಆಕೆಯ ಕಣ್ಣುಗಳನ್ನ ಗಮನಿಸಿದೆ. ಓಹ್ ! ಅಂಥ ಅಪೂರ್ವವಾದ, ಆಕರ್ಷಕವಾದ ನೇತ್ರಗಳನ್ನ ನಾನು ನನ್ನ ಜೀವನದಲ್ಲಿ ಎಂದೂ ಕಂಡಿರಲಿಲ್ಲ. ಅಂಥ ಸುಂದರವಾದ ಕಣ್ಣುಗಳು ಅವು. ಆದರೆ…. ಆ ಕಣ್ಣುಗಳಿಂದ ಅಕೆಗೆ ಯಾವ ಪ್ರಯೋಜನವೂ ಇಲ್ಲ. ಆಕೆ ಸಂಪೂರ್ಣ ಕುರುಡಿ, ನೀವು ಗಮನಿಸಲಿಲ್ಲವೇ….?

‍ಲೇಖಕರು G

8 April, 2011

2 Comments

  1. Vijay Kumar

    ಚಂದ್ರು ಸರ್, ನಾನು ಹೈಸ್ಕೂಲಿನಲ್ಲಿ ಓದುವಾಗ ಈ ಕಥೆ ನನ್ನ ಇಂಗ್ಲೀಷ್ ಪುಸ್ತಕದಲ್ಲಿತ್ತು. ಅದರ ಹೆಸರು “Eyes are not here” ಎಂದು ನನ್ನ ಅನಿಸಿಕೆ. ಬಹಳ ಸರಳವಾಗಿ, ಸುಂದರವಾಗಿ ಅನುವಾದಿಸಿದ್ದೀರಿ. ಧನ್ಯವಾದಗಳು.

  2. Tiru Sridhara

    ತುಂಬಾ ಚೆನ್ನಾಗಿ ಬರೆದಿದ್ದೀರಿ. ನಿಮಗೆ ತುಂಬು ಹೃದಯದ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading