ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಶೇಖರ ಆಲೂರು ಕಾಲಂ: ಆ ಚೆಲುವೆ ಅಲ್ಲೇಕೆ ಬಂದಳು?

 

ಆ ದೃಶ್ಯ ನೋಡಿ ಸ್ತಂಭೀಭೂತನಾಗಿ ನಿಂತು ಬಿಟ್ಟೆ. ನಂತರವೂ ಕೂಡ ಆ ದೃಶ್ಯ ನನ್ನ ಮನಸ್ಸಿನಲ್ಲಿ ಆಳವಾದ ಗಾಯವನ್ನು ಮಾಡಿ ಅದು ನೆನಪಾದಾಗಲೆಲ್ಲ ನಾನು ಖಿನ್ನನಾಗಿ ಬಿಡುತ್ತಿದ್ದೆ. ಎಂದಿನಂತೆ ಶಾಲೆಗೆ ಹೋಗುವ ಮುನ್ನ ಹಾದಿಯಲ್ಲಿಯೇ ಇದ್ದ ಚಾಮುಂಡಿಯ ಹೊಟೇಲ್ ಎಂಬ ಎತ್ತರದ ಗುಡಿಸಿಲ ಮುಂದೆ ಅರೆಕ್ಷಣ ನಿಂತು ಗಲ್ಲಾ ಬಳಿ ಕುಳಿತಿರುತ್ತಿದ್ದ ಅಥವಾ ಬಿಸಿ ಬಿಸಿ ಖಾಲಿ ದೋಸೆ ಸಪ್ಲೈ ಮಾಡುತ್ತಿದ್ದ ಚಾಮುಂಡಿಯನ್ನು “ಬರ‍್ತಿಯೇನೋ” ಎಂದು ಕೂಗುತ್ತಿದ್ದೆ. ಆತ “ಒಂದು ನಿಮಿಷ ಬಂದೆ ಕಣೋ” ಎಂದು ಅಲ್ಲೇ ಇದ್ದ ಬ್ಯಾಗು ನೇತು ಹಾಕಿಕೊಂಡು ಓಡಿ ಬರುತ್ತಿದ್ದ ಅಥವಾ “ಇವತ್ತು ಸ್ವಲ್ಪ ಲೇಟು ಕಣೋ, ಬಂದರೆ ಬಂದೆ ಇಲ್ದಿದ್ರೆ ಇಲ್ಲ, ನಮ್ಮಮ್ಮ ಸಾಮಾನು ತರೋಕ್ಕೆ ಎಡತೊರೆಗೆ ಹೋಗಿದಾರೆ” ಅಂತಿದ್ದ. ಅವರ ಅಮ್ಮ ಎಡತೊರೆಗೆ ಹೋಗಿದ್ದರೆ ಚಾಮುಂಡಿಯೇ ಓನರ್, ಕ್ಲೀನರ್, ಸಪ್ಲೈಯರ್… ಎಲ್ಲಾ ಆಗಿರುತ್ತಿದ್ದ. ಅದು ಆ ಊರಿನ ಎರಡನೇ ಬಸ್‌ಸ್ಟಾಪ್ ಆದ್ದರಿಂದ, ಎರಡು ಗಂಟೆಗೋ ಮೂರು ಗಂಟೆಗೋ ಒಂದು ಬಸ್ಸು ಬರುತ್ತಿದ್ದರಿಂದ, ಬಸ್ಸಿಗಾಗಿ ಕಾಯುವ ಪ್ರಯಾಣಿಕರು ನಮ್ಮ ಚಾಮುಂಡಿಯ ಹೊಟೇಲಿನಲ್ಲಿ ಅನಿವಾರ್ಯವಾಗಿ ಟೀ ಕುಡಿಯುತ್ತಿದ್ದರು. ಹೀಗಾಗಿ ಚಾಮುಂಡಿಯ ಹೊಟೇಲ್ ಗಿರಾಕಿಗಳಿಗೆ ಕೊರತೆ ಏನಿರಲಿಲ್ಲ. ಅಂದರೆ ತಕ್ಕಮಟ್ಟಿನ ವ್ಯಾಪಾರ ನಡೆಯುತ್ತಿತ್ತು. ಟೀ ಗಿರಾಕಿಗಳೇ ಜಾಸ್ತಿ ಇದ್ದುದರಿಂದ, ಚಾಮುಂಡಿ ಮತ್ತು ಅವರ ಅಮ್ಮ ಇಬ್ಬರೇ ಹೊಟೇಲ್ ನೋಡಿಕೊಳ್ಳುತ್ತಿದ್ದರಿಂದ ಅವರ ಜೀವನಕ್ಕೇನೂ ತಾಪತ್ರಯ ಇರಲಿಲ್ಲವೆಂದು ಕಾಣುತ್ತದೆ.

ಅಕಸ್ಮಾತ್ ಕಷ್ಟ ಕಾರ್ಪಣ್ಯ ಇದ್ದಿದ್ದರೆ ನಮ್ಮ ಚಾಮುಂಡಿ ಅಷ್ಟು ಜರ್ಬಾಗಿ ಓಡಾಡಲು ಹೇಗೆ ಸಾಧ್ಯವಾಗುತ್ತಿತ್ತು.

ಹೌದು, ಅವನ ಹೆಸರು ಚಾಮುಂಡಿ. ಅವರ ಅಮ್ಮ ಅವನಿಗೆ ಅದೇಕೆ ಆ ಹೆಸರು ಇಟ್ಟಿದ್ದರೋ ಗೊತ್ತಿಲ್ಲ. ಅವನ ಅಪ್ಪ-ಅಮ್ಮ ಎಂದು ಯಾಕೆ ಹೇಳಲಿಲ್ಲ ಎಂದರೆ ಚಾಮುಂಡಿ ಎಂದೂ ಆತನ ತಂದೆಯ ಇರುವಿಕೆಯ ಬಗ್ಗೆಯಾಗಲೀ, ಇಲ್ಲದಿರುವಿಕೆಯ ಬಗ್ಗೆಯಾಗಲೀ ನಮ್ಮ ಬಳಿ ಮಾತಾಡಿರಲಿಲ್ಲ. ಚಾಮುಂಡಿ ನನ್ನ ಸಹಪಾಠಿ. ಸಹಪಾಠಿಯಾದರೂ ಒಂದೆರಡು ವರ್ಷ ದೊಡ್ಡವನಿರಬೇಕು. ಆತ ಎಂದೂ ಶಾಲೆಗೆ ನಿಯಮಿತವಾಗಿ ಬರದಿದ್ದರೂ ನಮ್ಮ ತರಗತಿಯ ಹುಡುಗರಿಗೆಲ್ಲ ತುಂಬಾ ಆಪ್ತನಾಗಿದ್ದ. ನನಗಂತೂ ಬೆಸ್ಟ್‌ಫ್ರೆಂಡ್. ನನ್ನ ಜಾಯಮಾನಕ್ಕೆ ಅಷ್ಟಾಗಿ ಒಗ್ಗದ ಆತ ಯಾಕೆ ನನಗೆ ಅಷ್ಟು ಹತ್ತಿರವಾಗಿದ್ದ ಎಂಬುದು ನನಗೆ ಈಗಲೂ ತಿಳಿಯದು. ಹಂಪಾಪುರದ ಮುಖ್ಯ ರಸ್ತೆಯಲ್ಲಿಯೇ ಇದ್ದ ಅವರ ಹೊಟೇಲಿಗೆ ಪ್ರೊಪ್ರೈಟರ್. ಆ ಪದವನ್ನ ಚಾಮುಂಡಿಯೇ ಬಳಸುತ್ತಿದ್ದ. ‘ರೈಟರ್’ ಎಂಬ ಪದವನ್ನ ನಾನು ಮೊದಲು ಕೇಳಿದ್ದೂ ಚಾಮುಂಡಿಯ ಬಾಯಿಂದಲೇ. ನಮ್ಮ ತರಗತಿಗೆ ಛಾಯಾ ಎಂಬ ಹುಡುಗಿ ಬರುತ್ತಿದ್ದಳು. ಅವರ ಅಪ್ಪ ರೈಸ್‌ಮಿಲ್‌ನಲ್ಲಿ ರೈಟರ್ ಆಗಿದ್ದಾರೆ ಎಂದೂ ಚಾಮುಂಡಿ ಹೇಳಿದ್ದ. (ನ್ಯೂಯಾರ್ಕ್‌ನಿಂದ ಖಿWಂ ವಿಮಾನದಲ್ಲಿ ಸ್ಯಾನ್ ಫ್ರಾನ್ಸಿಸ್ಕೊಗೆ ಹೋಗುವಾಗ “ಅಪ್ಪಾ ನೀನು ರೈಟರ್ರಾ, ಅದೇನೋ ನನ್ನ ಫ್ರೆಂಡ್ ಹೇಳ್ತಿದ್ದಳಪ್ಪಾ, ಅವಳಿಗೆ ಅವರ ಅಮ್ಮ ಹೇಳಿದರಂತೆ” ಎಂದು ಕೇಳಿದ ಪುಟ್ಟಿಗೆ “ಇಲ್ಲ ಪುಟ್ಟಿ, ರೈಟರ್‌ಗಳು ರೈಸ್‌ಮಿಲ್, ಪೊಲೀಸ್ ಸ್ಟೇಷನ್, ಕಾಫಿ ಎಸ್ಟೇಟ್‌ಗಳಲ್ಲಿ ಇರುತ್ತಾರೆ…” ಎಂದು ತಮಾಷೆ ಮಾಡಿದಾಗ ಹಂಪಾಪುರದ ಚಾಮುಂಡಿ, ಛಾಯಾರ ಮುಖ ನನ್ನ ಕಣ್ಣೆದುರು ಬಂದಿತ್ತು!) ಅಷ್ಟೇ ಅಲ್ಲ ಹೊಟೇಲಿನಲ್ಲಿ ಸಪ್ಲೈ ಮಾಡುವ ಹುಡುಗರನ್ನ ‘ಬಾಯ್’ ಎಂದು ಕರೆಯುತ್ತಾರೆ. ಮೈಸೂರಿನಲ್ಲಿ ಚಳವಳಿ ಮಾಡುವವರು ‘ಹಿಂದಿ ಹಿಂದಿ ಡೌನ್ ಡೌನ್’ ಎಂದು ಕೂಗುತ್ತಾರೆ… ಹೀಗೆ ಚಾಮುಂಡಿ ನಮಗೆ ಹಲವಾರು ಹೊಸ ಪದ ಸಮುಚ್ಛಯಗಳನ್ನು ಪರಿಚಯಿಸಿದ್ದ. ಮುಂದೆ ಹೈಸ್ಕೂಲು ಹುಡುಗರ ನೇತೃತ್ವದಲ್ಲಿ ನಾವೂ ಹಿಂದಿ ವಿರೋಧಿ ಚಳವಳಿ ನಡೆಸಿ ಬಸ್ಸುಗಳನ್ನ ನಿಲ್ಲಿಸಿ ಹಿಂದಿ ಹಿಂದಿ ಡೌನ್ ಡೌನ್ ಕೂಗಿದ್ದೆವು.

ಹಳ್ಳಿಯೊಂದರಲ್ಲಿ ಆರನೆಯ ತರಗತಿ ಓದುತ್ತಿರುವ ಮಕ್ಕಳಿಗೆ ಚಾಮುಂಡಿ ನೀಡುವ ವಿವರಗಳನ್ನು ಕೇಳಿದಾಗ ನಿಜಕ್ಕೂ ರೋಮಾಂಚನವಾಗುತ್ತಿತ್ತು. ಹಣ ಅಥವಾ ದುಡಿದು ಸಂಪಾದಿಸಿದ ಹಣ ಮನುಷ್ಯನಿಗೆ ಎಂಥ ಸ್ವಾತಂತ್ರವನ್ನು ಕೊಡುತ್ತದೆ ಎಂಬುದು ನನ್ನ ಅರಿವಿಗೆ ಬಂದುದು ಆಗಲೇ. ಆಗಾಗ್ಗೆ ಅದ್ಯಾರೋ ನೆಂಟರ ಮನೆಗೆಂದು ಮೈಸೂರಿಗೆ ಹೋಗುತ್ತಿದ್ದ ಚಾಮುಂಡಿ ತಾನು ಹೋದ ಹೊಟೇಲುಗಳು, ತಾನು ನೋಡಿದ ಸಿನೆಮಾಗಳನ್ನು ಬಗೆಬಗೆಯಾಗಿ ವರ್ಣಿಸುತ್ತಿದ್ದ. ನಮ್ಮ ತರಗತಿಯಲ್ಲಿದ್ದವರು ಯಾರೂ ಒಬ್ಬಂಟಿಯಾಗಿ ಎಡತೊರೆಗೆ ಕೂಡಾ ಹೋದವರಲ್ಲ. ಹೀಗಾಗಿ ಚಾಮುಂಡಿ ನಮ್ಮ ಪಾಲಿಗೆ ದೊಡ್ಡ ಹೀರೋ ಆಗಿದ್ದ. ಆತ ಇಂದ್ರಭವನ ಹೊಟೇಲಿನಲ್ಲಿ ಒಬ್ಬನೇ ಕುಳಿತು ಸಪ್ಲೈಯರ್‌ಗೆ ‘ಬಾಯ್’ ಎಂದು ಕರೆದು ಜಾಮುನು, ಮಸಾಲೆ ದೋಸೆಗೆ ಆರ್ಡರ್ ಮಾಡಿದ್ದು, ತಾನೇ ಬಿಲ್ ಕೊಟ್ಟು ಅಲ್ಲಿಂದ ಹೊರ ಬಂದು ಜಟಕಾ ಹಿಡಿದು ಗಣೇಶ ಥಿಯೇಟರಿಗೆ ಹೋಗಿ ಇಂಗ್ಲಿಷ್ ಸಿನೆಮಾ ನೋಡಿದ್ದು, ಇಂಟರ್‌ವಲ್‌ನಲ್ಲಿ ನಾಲ್ಕು ಪ್ಯಾರಿಸ್ ಚಾಕೊಲೆಟ್ ತೆಗೆದುಕೊಂಡು ತಿಂದದ್ದು… ಇದೆಲ್ಲ ನಮ್ಮ ಪಾಲಿಗೆ ಅದ್ಭುತವೇ. ೧೦-೧೧ರ ಒಬ್ಬ ಹುಡುಗ ಇಷ್ಟೆಲ್ಲ ಮಾಡಿದ್ದಾನೆ ಎಂದರೆ ಅದೇನು ಸಾಧಾರಣ ಸಂಗತಿಯೇ! ನಮ್ಮ ತರಗತಿಯಲ್ಲಿ ಒಂದೇ ಏಟಿಗೆ ನಾಲ್ಕಾಣೆ ಖರ್ಚು ಮಾಡಿದವರೂ ಒಬ್ಬರೂ ಇರಲಿಲ್ಲ. ಅಂಥದ್ದರಲ್ಲಿ ನಮ್ಮ ಚಾಮುಂಡಿ…

ಇಷ್ಟಾದರೂ ಚಾಮುಂಡಿಗೆ ಸ್ವಲ್ಪವೂ ಅಹಂಕಾರ ಇರಲಿಲ್ಲ. ನನ್ನ ಬಳಿ ನೋಟ್ಸ್‌ಗಳನ್ನ ಕೇಳಿ ಪಡೆಯುತ್ತಿದ್ದ. ತನಗೆ ಅರ್ಥವಾಗದ ಲೆಕ್ಕಗಳನ್ನು ಸಂಕೋಚವಿಲ್ಲದೆ ಕೇಳಿ ಅರ್ಥಮಾಡಿಕೊಳ್ಳಲು ಯತ್ನಿಸುತ್ತಿದ್ದ. ರಜಾದಿನಗಳಂದು ಅವನ ಹೊಟೇಲಿನ ಬೆಂಚಿನ ಮೇಲೆ ಕುಳಿತು ನಾನು ಎಷ್ಟೋ ಸಲ ಪಾಠ ಹೇಳಿಕೊಡುತ್ತಿದ್ದೆ. ಅವರ ಅಮ್ಮ ನನಗೆ ಬಿಸಿಬಿಸಿ ಮೈಸೂರು ಪಾಕು ತಂದು ಕೊಡುತ್ತಿದ್ದರು. ಒಂಚೂರು ಮುಕ್ಕಾಗದ ಹಾಗೆ ಅದು ಹೇಗೆ ಮಾಡುತ್ತಾರೆ ಎಂದು ಆಶ್ಚರ್ಯವಾಗುತ್ತಿತ್ತು. ಅದೇ ಒಂದು ಅದ್ಭುತ ಕಲೆ ಅನ್ನಿಸುತ್ತಿತ್ತು. “ಅಮ್ಮಾ ನೀವು ಅದ್ಹೇಗೆ ಚಾಮುಂಡಿಯನ್ನು ಒಬ್ಬನೇ ಮೈಸೂರಿಗೆ ಕಳಿಸುತ್ತೀರಲ್ಲ” ಎಂದು ಕೇಳುತ್ತಿದ್ದೆ. ಅದಕ್ಕೆ ಅವರು “ನಾವು ಇರೋರು ಇಬ್ಬರೇ ಅಲ್ಲೇನಪ್ಪ. ಅವನಿಗೂ ಜವಾಬ್ದಾರಿ ಬರಲಿ, ವ್ಯವಹಾರ ಜ್ಞಾನ ತಿಳಿಯಲಿ. ಅಂತ ಕಳಿಸ್ತೀನಿ…” ಮುಂತಾಗಿ ಏನೇನೋ ಹೇಳುತ್ತಿದ್ದರು. ನಮ್ಮ ಮನೇಲಿ ಯಾಕೆ ಇಂಥ ಸ್ವಾತಂತ್ರ್ಯ ಕೊಡೋಲ್ಲ ಎಂದು ನಿಜಕ್ಕೂ ಬೇಸರವಾಗುತ್ತಿತ್ತು. ಚಾಮುಂಡಿಯ ಬಗ್ಗೆ ಒಂಥರಾ ಅಸೂಯೆಯಾಗುತ್ತಿತ್ತು.

@

…ಹೀಗೆ ಎಂದಿನಂತೆ ಒಂದು ದಿನ ಚಾಮುಂಡಿಯ ಹೊಟೇಲ್ ಮುಂದೆ ನಿಂತು ಆತನಿಗಾಗಿ ಕಾಯುತ್ತಿದ್ದಾಗಲೇ ಆ ದೃಶ್ಯ ಕಣ್ಣಿಗೆ ಬಿದ್ದದ್ದು. ಅತ್ಯಂತ ಸ್ಫುರದ್ರೂಪಿಯಾದ ಹೆಣ್ಣೊಬ್ಬಳು ಬೆಂಚಿನ ಮೇಲೆ ಕುಳಿತು ಟೀ ಕುಡಿಯುತ್ತಿದ್ದಾಳೆ. ಕಾಡಿಗೆ ಹಚ್ಚಿದ ಕಣ್ಣು, ಸರಿಯಾಗಿ ಅಳಿಸದ ಮೇಕಪ್ಪು, ನೀಳವಾದ ಕೇಶರಾಶಿ ನಿಜಕ್ಕೂ ಸಿನೆಮಾ ಹೀರೋಯಿನ್ ಥರಾ ಕಾಣುತ್ತಿದ್ದಳು. ಈಕೆಯನ್ನು ಎಲ್ಲೋ ನೋಡಿದ್ದೇನಲ್ಲ ಅನ್ನಿಸಿತು… ಛೆ ಇರಲಾರದು… ಅವಳು ಏಕೋ ದುಃಖಿತಳಾಗಿರುವಂತೆ (ಮ್ಲಾನವದನೆ!) ಕಂಡಳು. ಮುಖ ಬಾಡಿದಂತೆ ಕಂಡಿತು. ಅವಳ ಸುತ್ತ ಮೂರ‍್ನಾಲ್ಕು ಗಂಡಸರು. ಎಲ್ಲರೂ ಮೀಸೆ ಬೋಳಿಸಿದ್ದಾರೆ. ಆ ಕ್ಷಣದಲ್ಲಿ ಆ ಚೆಲುವೆ ಕೌರವರ ನಡುವೆ ಅಸಹಾಯಕಳಂತೆ ನಿಂತಿರುವ ದ್ರೌಪದಿಯಂತೆ ಕಂಡಳು. ಪಾಪ! ಇವಳೇನೋ ಕಷ್ಟದಲ್ಲಿ ಇರಬಹುದು ಅನ್ನಿಸಿತು. ಒಂದೆರಡು ಸೆಕೆಂಡಿನಲ್ಲಿ ನನ್ನ ಮನದಲ್ಲಿ ಇಷ್ಟೆಲ್ಲ ಹೊಯ್ದಾಟ ನಡೆದುಹೋಯ್ತು. ದುಃಖಿತಳಾಗಿದ್ದಾಳೆ, ಏನೋ ನೋವಿನಲ್ಲಿದ್ದಾಳೆ ಎಂದು ನಾನು ಯಾರ ಬಗ್ಗೆ ಖಿನ್ನನಾಗಿ ಯೋಚಿಸುತ್ತಿದ್ದೆನೋ, ಆಕೆ ಆ ಮೀಸೆ ಇಲ್ಲದ ಗಂಡಸರೊಂದಿಗೆ ಕಿಸಿಕಿಸಿ ಎಂದು ನಗಲು ಆರಂಭಿಸಿದಳು. ಅವಳ ಪಕ್ಕದಲ್ಲಿ ಕುಳಿತಿದ್ದ ದೈತ್ಯ ಗಾತ್ರದ ಗಂಡಸು ಗಟ್ಟಿಯಾಗಿ ಕಂದ ಪದ್ಯವೊಂದನ್ನು ಹಾಡಿ ಆಕೆಯ ಭುಜದ ಮೇಲೆ ತಟ್ಟಿ ಅಸಹ್ಯವಾಗಿ ನಕ್ಕ.

ಆ ದೃಶ್ಯ ನನ್ನ ಮನದಲ್ಲಿ ಮಿಂಚಿನ ಸಂಚಾರವನ್ನು ಮೂಡಿಸಿತು. ಕ್ಷಣಾರ್ಧದಲ್ಲಿ ಎಲ್ಲ ಅರ್ಥವಾಗಿ ಹೋಯ್ತು. ಮೀಸೆ ಬೋಳಿಸಿದ ಗಂಡಸರು ಯಾವುದೋ ಪಕ್ಕದ ಊರಿನವರಿರಬೇಕು, ಹಿಂದಿನ ರಾತ್ರಿ ಕುರುಕ್ಷೇತ್ರವನ್ನೋ, ಸಂಪೂರ್ಣ ರಾಮಾಯಣ ನಾಟಕವನ್ನೋ ಆಡಿದ್ದಾರೆ. ಇವರೆಲ್ಲಾ ಆ ನಾಟಕದ ಪಾತ್ರಧಾರಿಗಳು. ಈಕೆ ದ್ರೌಪದಿಯೋ, ಸೀತೆಯೋ ಇರಬೇಕು. ಆಕೆಯನ್ನು ನೋಡಿದ್ದು ಎಲ್ಲಿ ಎಂಬುದು ಕೂಡಾ ಹೊಳೆಯಿತು. ಹಿಂದಿನ ಬೇಸಿಗೆ ರಜೆಯಲ್ಲಿ ಕಬಿನಿಗೆ ಸರೋಜಕ್ಕನ ಮನೆಗೆ ಹೋಗಿದ್ದಾಗ, ಅಲ್ಲಿನ ಕಾಲೋನಿಯವರು ಆಡಿದ ನಾಟಕಕ್ಕೆ ಈಕೆ ಬಂದಿದ್ದಳು. ಹೌದು ಈಕೆ ‘ಸಂಸಾರ ನೌಕ’ದ ನಾಯಕಿ.

ಆಗಿನ್ನೂ ಕಬಿನಿ ಅಣೆಕಟ್ಟೆಯ ಕೆಲಸ ನಡೆಯುತ್ತಿತ್ತು. ಇದಕ್ಕಾಗಿ ನೂರಾರು ಟಿಪ್ಪರುಗಳು, ಲಾರಿಗಳು, ಡ್ರೈವರ್‌ಗಳು ಏಕಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದುದನ್ನು ನೋಡುವುದೇ ಒಂದು ಅದ್ಭುತ ದೃಶ್ಯ. ಈ ಕಟ್ಟೆಯ ನಿರ್ಮಾಣ ಕಾರ್ಯದಲ್ಲಿ ದುಡಿಯುವ ಇಂಜಿನಿಯರುಗಳು ಮತ್ತಿತರರಿಗಾಗಿ ಪಿ.ಡಬ್ಲು.ಡಿ ಒಂದು ತಾತ್ಕಾಲಿಕ ಕಾಲನಿಯನ್ನೆ ನಿರ್ಮಿಸಿತ್ತು. ಅದೊಂದು ದೊಡ್ಡಹಳ್ಳಿ ಅಥವಾ ಪುಟ್ಟನಗರದಂತೆ. ಅಲ್ಲಿಗೆ ನಾವು ಹೋಗುತ್ತಿದ್ದ ಬೇಸಗೆ ರಜೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಏರ್ಪಡಿಸುತ್ತಿದ್ದರು. ಅಲ್ಲಿ ನಾನು ಕನ್ನಡದ ಸಿರಿಕಂಠ ಕಾಳಿಂಗರಾಯರು ಮೋಹನಕುಮಾರಿ ಮತ್ತು ಸೋಹನಕುಮಾರಿಯರೊಂದಿಗೆ ಹಾಡಿದ್ದನ್ನ ಕೇಳಿದ್ದೆ, ನೋಡಿದ್ದೆ. ಈ ಹಿಂದೆ ರೇಲ್ವೆ ಸ್ಟೇಷನ್ನಿನ ಆಸುಪಾಸಿನ ಹಳ್ಳಿಗಳಲ್ಲಿ ನಡೆಯುವ ಹಲವು ಪೌರಾಣಿಕ ನಾಟಕಗಳನ್ನ ನೋಡಿದ್ದೆನಾದರೂ (ಅವರ‍್ಯಾರೂ ‘ಲೇಡಿಸ್’ ಕರೆಸಿರಲಿಲ್ಲ!) ಸಾಮಾಜಿಕ ನಾಟಕವನ್ನ ನೋಡಿರಲಿಲ್ಲ. ನಾನು ನೋಡಿದ ಮೊದಲ ಸಾಮಾಜಿಕ ನಾಟಕ ಸಂಸಾರ ನೌಕ.

ನಮ್ಮ ಭಾವನವರ ಸಹೋದ್ಯೋಗಿಯೊಂದಿಗೆ ಈಕೆ ಅನ್ಯೋನ್ಯವಾಗಿ ನಟಿಸಿದ್ದ ದೃಶ್ಯಗಳು ನೆನಪಿಗೆ ಬಂದವು. ಪ್ರಾಕ್ಟೀಸ್‌ಗಾಗಿ ಈಕೆ ಒಂದು ದಿನ ಮೊದಲೇ ಕಬಿನಿಗೆ ಬಂದಿದ್ದಳು. ಸಂಸಾರ ನೌಕದ ಪಾತ್ರಧಾರಿಗಳೆಲ್ಲ ನನಗೆ ಚಿರಪರಿಚಿತರಾಗಿದ್ದರಿಂದ ನಾನು ಪ್ರತಿನಿತ್ಯ ಪ್ರಾಕ್ಟೀಸ್ ನಡೆವಲ್ಲಿಗೆ ಹೋಗುತ್ತಿದ್ದೆ. ರಂಗ ತಾಲೀಮು ಮತ್ತು ನಾಟಕ ಎರಡನ್ನೂ ನೋಡಿದ ನನಗೆ ನಾಯಕ ನಾಯಕಿಯರ ಜೋಡಿ ರಾಜ್-ಭಾರತಿ ಜೋಡಿಯಂತೆ ಕಂಡಿತ್ತು. ಆಕೆಯನ್ನು ಈ ಹಳ್ಳಿಯ ಗುಡಿಸಲು ಹೋಟೇಲಿನಲ್ಲಿ, ಪಂಚೆ, ಪಟಾಪಟಿ ಷರಟಿನಲ್ಲಿರುವ ಒರಟು ಗಂಡಸರ ನಡುವೆ ನೋಡಿ ನಾನು ನಿಜಕ್ಕೂ ಗರಬಡಿದವನಂತಾಗಿದ್ದೆ. ಆಕೆ ವಿನಾಕಾರಣ ಹಲ್ಲು ಕಿಸಿಯುತ್ತಾ ಅವರೊಂದಿಗೆ ಹರಟುತ್ತಿದ್ದಾಳೆ. ಸ್ವಲ್ಪವೂ ನಯ ನಾಜೂಕು, ಮರ್ಯಾದೆ ಇಲ್ಲ ಅನ್ನಿಸಿಬಿಟ್ಟಿತು.

ಅವರನ್ನೇ ನೋಡುತ್ತಾ ನಿಂತಿದ್ದ ನನ್ನನ್ನು ಚಾಮುಂಡಿ ಎಳೆದುಕೊಂಡು ಹೊರಟ. “ಮಂಚನಹಳ್ಳೀಲಿ ಯಾವುದೋ ನಾಟಕ ಇತ್ತಂತೆ. ಆ ‘ಲೇಡಿಸ್’ ಮೈಸೂರಿನವರು, ನಮ್ಮ ಅಮ್ಮಂಗೂ ಪರಿಚಯ”- ಚಾಮುಂಡಿಯ ಮಾತುಗಳು ನನ್ನ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ನಾಲ್ಕಾರು ದಿನದ ನಂತರ ನನ್ನ ದುಗುಡವನ್ನು ಹೊರ ಹಾಕಿಕೊಳ್ಳಲು ಎಂಬಂತೆ ಆ ನಟಿಯನ್ನು ಕಬಿನಿಯಲ್ಲಿ ನೋಡಿದ್ದನ್ನು ಹೇಳಿದೆ. ಹಾಗೆಯೇ ಇಲ್ಲಿ ನೋಡಿದ ಆಕೆಯ ವರ್ತನೆ ನನಗೆ ಅಷ್ಟು ಸರಿಬರಲಿಲ್ಲ ಎಂದೂ ಸೇರಿಸಿದೆ. ಅದು ಹೇಗೆ ಎಲ್ಲ ಗಂಡಸರ ಜೊತೆ ಅವಮ್ಮ ಹಾಗೆ ಹಲ್ಲುಬಿಟ್ಟುಕೊಂಡು ಮಾತಾಡ್ತಾಳೆ? ಎಂದು ಆಕೆಯ ಬಗೆಗಿನ ಅಸಹನೆಯನ್ನು ವ್ಯಕ್ತಪಡಿಸಿದೆ.

ಎಷ್ಟೆಂದರೂ ಚಾಮುಂಡಿ ಲೋಕಜ್ಞಾನ ಅರಿತಿದ್ದವನು. ಎಲ್ಲ ಬಗೆಯ ಜನರನ್ನು ಕಂಡಿದ್ದವನು. “ಅವರು ಚಿಛಿಣಡಿess ಅಲ್ಲವೇನೋ ನಟಿಸೋದೇ ಅವರ ಕೆಲಸ. ಅವರ ಹೊಟ್ಟೆ ಪಾಡು. ಇವತ್ತು ಈ ಊರು, ನಾಳೆ ಮುಂದಿನ ಊರು. ಯಾರು ಕರೆದರೂ ಹೋಗಿ ನಾಟಕ ಆಡ್ತಾರೆ. ಈಗ ಸಿನೆಮಾದವರೂ ಬೇರೆ ಬೇರೆ ಹೀರೋ, ಹಿರೋಯಿನ್‌ಗಳ ಜತೆ ಮಾಡಲ್ವಾ” ಎಂದು ನನಗೆ ತಿಳುವಳಿಕೆ ಹೇಳಲು ಯತ್ನಿಸಿದ.

ಆದರೂ ಚಾಮುಂಡಿಯ ಮಾತು ನನಗೆ ರುಚಿಸಲಿಲ್ಲ. ಯಾವುದಾದರೂ ಸಿನೆಮಾ ಬಗ್ಗೆ ಮಾತಾಡುವಾಗ ನಾವು ಅಂಥ ರಾಜಕುಮಾರ್‌ಗೇ ಬಹುವಚನ ಬಳಸುತ್ತಿರಲಿಲ್ಲ. ಅಂತಹುದರಲ್ಲಿ ಚಾಮುಂಡಿ ಈ ನಾಟಕದವರ ಬಗ್ಗೆ ಬಹುವಚನದಲ್ಲಿ ಮಾತಾಡುತ್ತಿದ್ದಾನಲ್ಲ ಎಂದು ಅಸಹನೆಯೂ ಆಯ್ತು. ಕಬಿನಿಯಲ್ಲಿ ಕಂಡ ಹೆಣ್ಣು ಇಲ್ಲಿ ಯಾಕೋ ವಿಚಾತ್ರವಾಗಿ ಕಂಡಿದ್ದಳು! ಕೆಲವು ತಾರಾ ಜೋಡಿಗಳು ಯಾಕೆ ಅಷ್ಟೊಂದು ಯಶಸ್ಸು ಪಡೆಯುತ್ತವೆ. ‘ದೂರದ ಬೆಟ್ಟ’ದ ನಂತರ ರಾಜ್-ಭಾರತಿ ಅಭಿನಯ ಜೀವನದಲ್ಲಿ ಪರಸ್ಪರ ವಿದಾಯ ಹೇಳಿದ್ದನ್ನು ಪ್ರೇಕ್ಷಕರು ಅದರಲ್ಲೂ ಎಳೆಯ ವಯಸ್ಸಿನ ಪ್ರೇಕ್ಷಕರು ಯಾಕೆ ಸಲೀಸಾಗಿ ಸ್ವೀಕರಿಸಲಿಲ್ಲ ಎಂಬುದು ಸಂಸಾರ ನೌಕದ ಜೋಡಿಯ ಹಿನ್ನೆಲೆಯಲ್ಲಿ ನೋಡಿದಾಗ ಅರ್ಥವಾಗುತ್ತಿದೆ. ಏಳೆಂಟು ವರ್ಷದ ನನಗೆ ರಂಗಭೂಮಿಯ ಮೇಲೆ ಕಂಡವರು ನಟ ನಟಿಯರು ಅನ್ನಿಸಿರಲಿಲ್ಲ. ಅದೇ ಆಕೆಯನ್ನು ಹಂಪಾಪುರದಲ್ಲಿ ಕಂಡಾಗ ಖಿನ್ನನಾಗಲು ಕಾರಣ.

ಹಂಪಾಪುರದಲ್ಲಿ ಗುಡಿಸಲು ಹೊಟೇಲ್‌ನಲ್ಲಿ ಅಪೂರ್ವವಾದ ಚೆಲುವೆಯೊಬ್ಬಳು ಮೀಸೆ ಇಲ್ಲದ, ಬಣ್ಣ ಅಳಿಸಿಕೊಂಡು ಬಂದ ಗಂಡಸರೊಂದಿಗೆ ನಗು ನಗುತ್ತಾ ಮಾತಾಡುತ್ತಿದ್ದ ದೃಶ್ಯ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅಂದಿನ ನನ್ನ ನೈತಿಕ ತೀರ್ಮಾನವನ್ನು ನೆನಪಿಸಿಕೊಂಡರೆ ಈಗ ನಗು ಬರುತ್ತದೆ. ಆಗ ನನ್ನಿಂದ ಗೆಳೆಯ ಚಾಮುಂಡಿಗೇನಾದರೂ ನೋವಾಯ್ತೇನೂ ಎಂಬ ಆತಂಕ ಈಗಲೂ ಕಾಡುತ್ತಿದೆ. ಕೆಲವು ದಿನ ಚಾಮುಂಡಿಯ ಬಳಿ ನಾನು ಪದೇ ಪದೇ ಈ ವಿಷಯ ಪ್ರಸ್ತಾಪಿಸುತ್ತಿದ್ದೆ. ಆಗೆಲ್ಲ ಆತ ಸ್ವಲ್ಪ iಡಿಡಿiಣಚಿಣe ಆದಂತೆ ಕಾಣುತ್ತಿದ್ದ. ಆತ ನಿಜಕ್ಕೂ ನಗುಮೊಗದ ಹುಡುಗ. ಎಂದೂ ಯಾರೊಂದಿಗೂ ಜಗಳವಾಡಿದವನಲ್ಲ. ಅಕಸ್ಮಾತ್ ಜಗಳವಾಡಿದರೂ ನಮ್ಮಂತೆ ಮಾತು ಬಿಡುತ್ತಿರಲಿಲ್ಲ. ಆ ವಯಸ್ಸಿಗೆ ಅವನಿಗೆ ಅಷ್ಟೊಂದು ಸಹನೆ ಹೇಗಿತ್ತು ಎಂಬುದು ಈಗಲೂ ನನಗೊಂದು ಯಕ್ಷ ಪ್ರಶ್ನೆ! ಅಂಥ ಚಾಮುಂಡಿ ನನ್ನ ಮಾತುಗಳಿಂದ iಡಿಡಿiಣಚಿಣe ಆಗುವುದೆಂದರೆ…

ನಂತರ ಅವನೇ ಒಂದು ದಿನ ಹೇಳಿದ “ನಮ್ಮ ಅಮ್ಮ ಕೂಡ ನಾಟಕದಲ್ಲಿ ಪಾರ್ಟು ಮಾಡುತ್ತಿದ್ದರಂತೆ. ನಾನು ಹುಟ್ಟಿದ ಮೇಲೆ ಪಾರ್ಟು ಹಾಕುವುದನ್ನು ಬಿಟ್ಟುಬಿಟ್ಟರಂತೆ. ನಮ್ಮ ಅಪ್ಪ ಹಾರ್ಮೋನಿಯಂ ಮಾಸ್ತರಾಗಿದ್ದರಂತೆ… ನಾವು ಈ ಊರಿನವರಲ್ಲ… ನಾನು ಹುಟ್ಟಿದ ನಂತರ ನಮ್ಮ ಅಮ್ಮ ಈ ಊರಿಗೆ ಬಂದು ಈಗ ನಮ್ಮ ಹೊಟೇಲಿದೆಯಲ್ಲ, ಇದೇ ಜಾಗದಲ್ಲಿ ಒಂದು ಪೆಟ್ಟಿಗೆ ಅಂಗಡಿ ಇಟ್ಟರಂತೆ. ಒಂದೆರಡು ವರ್ಷ ಆದ ಮೇಲೆ ಈ ಹೊಟೇಲು ಶುರು ಮಾಡಿದರು…”

ಅವರ ತಾಯಿಯದು ಲಕ್ಷಣವಾದ ದುಂಡು ಮುಖ. ಕಾಸಗಲ ಕುಂಕುಮ ಇಡುತ್ತಿದ್ದರು. ಆಗಿನ ನನ್ನ ಕಣ್ಣುಗಳಿಗೆ ಹೇಮರೆಡ್ಡಿ ಮಲ್ಲಮ್ಮನಂತೆ, ಥೇಟ್ ಸಿನೆಮಾದ ಪಂಡರೀಬಾಯಿ ಥರ ಕಾಣುತ್ತಿದ್ದರು.

‍ಲೇಖಕರು G

3 July, 2011

4 Comments

  1. vivek

    Nice

  2. Dr.M.Venkataswamy

    Now how is chamundi? where is chamundi

  3. D.RAVIVARMA

    lekana chennagide. ee jagavondu rangashale navu neevella patradarigalu namma patragalannu noduva prekshaka matra nammannu arthisikondiryttane alva sir, ravi varma.d

  4. suvarna

    hale lekanane bandide tumba busyna sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading