ಯಥಾಪ್ರಕಾರ ಬಸ್ಸಲ್ಲಿ ವೈಶಾಖದ ಅಂದರೆ ಮದುವೆ ಸೀಸನ್ನಿನ ಗೌಜು ಗದ್ದಲ. ಅಲ್ಲಲ್ಲಿ ಮನೆಯ ಕಟ್ಟುಪಾಡುಗಳಿಂದ ಹೊರ ಬಂದ ಹೊಸ ಮದುಮಕ್ಕಳು. ಇಬ್ಬರ ಕಡೆಯಿಂದಲೂ ಯಾವ ಬಾಲಂಗೋಚಿಗಳಿಲ್ಲದೆ ಮೊದಲ ಬಾರಿಗೆ ಸ್ವಚ್ಛಂದ ಗಾಳಿ ಬೆಳಕನ್ನು ಅನುಭವಿಸುತ್ತಿರುವ ಜೋಡಿಗಳು. ಹೊರಗೆ ಹನಿಯುತ್ತಿರುವ ಮಳೆ. ಇಷ್ಟು ರಷ್ ಇದ್ದರೂ ಮುಂದೆಲ್ಲಾದರೂ ಸೀಟ್ ಇದ್ದರೂ ಇರಬಹುದೇನೋ ಎಂದು ಕಣ್ಣುಗಳು ಚುರುಕಾಗಿ ಅಡ್ಡಾಡುತ್ತಿದ್ದಾಗ ಹಠಾತ್ತಾಗಿ ದೃಷ್ಟಿಗೆ ಬಿದ್ದವಳು ಅವಳು. ಎಂಥ ಅಪೂರ್ವ ಚೆಲುವೆ! ಆದರೆ ಅದೇಕೆ ಹಾಗೆ ಹುಬ್ಬುಗಂಟಿಕ್ಕಿಕೊಂಡು ಕುಳಿತಿದ್ದಾಳೆ? ಹೊರಗೆ ಸುರಿಯುತ್ತಿರುವ ಮಳೆಯನ್ನೂ ಕಂಡಾಗಲೂ ಹುಬ್ಬು ಸಡಿಲಿಸಬಾರದೆ? ಆದರೂ ಅದೇನೋ ಅಕೆಯನ್ನ ನೋಡುತ್ತಿರುವಾಗ ಗಂಟಿಕ್ಕಿದ ಹುಬ್ಬಿನಿಂದಾಗಿಯೇ ಅವಳ ಮುಖಕ್ಕೆ ವಿಚಿತ್ರ ಕಾಂತಿ ಬಂದಿದೆ ಅನ್ನಿಸಿತು. ಮತ್ತೆ ಮತ್ತೆ ನೋಡಿದೆ. ಹುಬ್ಬು ಗಂಟಿಕ್ಕಿದ್ದರೂ ಅವಳ ಮುಖದಲ್ಲಿ ಕೋಪತಾಪಗಳಾಗಲೀ, ಅಸಹನೆಯ ಕುದಿಯಾಗಲೀ, ವಿಷಾದದ ಛಾಯೆಯಾಗಲೀ ಇರಲಿಲ್ಲ. ಗಂಟಿಕ್ಕಿದ ಹುಬ್ಬುಗಳೇ ಆಕೆಯ ಮುಖಕ್ಕೆ, ಇಡಿಯಾಗಿ ಆಕೆಯ ವ್ಯಕ್ತಿತ್ವಕ್ಕೆ ವಿಶಿಷ್ಟ ಶೋಭೆ ನೀಡಿತ್ತು.
ಅವಳ ಹುಬ್ಬುಗಳ ಗಂಟಲ್ಲಿ ನೋಟ ನೆಟ್ಟಿದ್ದಾಗಲೇ ಏನೋ ನೆನಪು ಬಂದು ನಗು ಬಂತು. ಈ ಕವಿಗಳು ಹೆಣ್ಣಿನ ಅಗಲವಾದ ಆಳವಾದ ಕಣ್ಣುಗಳನ್ನ, ಜೇನುಗೆನ್ನೆಗಳನ್ನ, ನೀಳ ನಾಸಿಕವನ್ನ, ರಸದ ಊಟೆಗಳಂಥ ತುಟಿಗಳನ್ನ, ರಂಗಿನ ಕದಪುಗಳನ್ನ, ದಾಳಿಂಬೆಯಂಥ ದಂತ ಪಂಕ್ತಿಗಳನ್ನ ವರ್ಣಿಸಿದ್ದಾರೆ. ಆಕೆಯ ನಗು- ಮೊಗವನ್ನು ಹಾಡಿ ಹಾಡಿ ಹೊಗಳಿದ್ದಾರೆ. ಆದರೆ ಇಂಥ ಹುಬ್ಬುಗಂಟಿನ ಚೆಲುವಾದ ಮುಖವನ್ನು ಯಾರೂ ಬಣ್ಣಿಸಿಲ್ಲವಲ್ಲ? ಇವಳ ಹುಬ್ಬುಗಂಟಿನ ಚೆಲುವಿನ ಮುಂದೆ ನೂರು ನಗೆ ಮೊಗಗಳನ್ನು ನಿವಾಳಿಸಿ ಎಸೆಯಬೇಕು. ಈ ಕವಿಗಳಿಗೆ ಅಥವಾ ಅವರ ಕಲ್ಪನೆಗೆ ಸದಾ ನಗು ಮೊಗದ ಸುಂದರಿಯರೇ ಕಾಣುತ್ತಾರೆಯೇ? ಅಥವಾ ಇಂಥ ಹುಬ್ಬುಗಂಟಿಕ್ಕಿದ ಲಾವಣ್ಯವತಿಯರನ್ನು ವರ್ಣಿಸುವ ರಸಿಕತೆ ಅವರಲ್ಲಿ ಇಲ್ಲವೋ? ಅಕಸ್ಮಾತ್ ಯಾರಾದರೂ ಇಂಥ ಮೊಗವನ್ನು ಬಣ್ಣಿಸಿರಬಹುದೆ?
ಇರಲಾರದು. ಹೆಚ್ಚೆಂದರೆ ವಿಷಾದ ಮಡುಗಟ್ಟಿದ ಕಣ್ಣುಗಳನ್ನು, ಆಷಾಡದ ಆಗಸದಲ್ಲಿ ಅದ್ದಿದಂಥ ಪ್ರಕ್ಷುಬ್ದ ಮುಖವನ್ನ ತಮ್ಮ ಕವನಗಳಲ್ಲಿ ಹಿಡಿದಿಟ್ಟಿರಬಹುದು. ಆದರೆ ಗಂಟಿಕ್ಕಿದ ಹುಬ್ಬುಗಳನ್ನು? ಹಾಗೆ ಯೋಚಿಸುತ್ತಿದ್ದಾಗ ಹೊರಗೆ ಮಿಂಚೊಂದು ಹಾವಿನಂತೆ ಸುಳಿದು ಹೋಯ್ತು. ಎಲ್ಲೋ ಓದಿದ ನೆನಪು. ಇವಳ ಹುಬ್ಬಿನ ಗಂಟೇ ಚೆಂದ… ಮುಂತಾಗಿ. ಹೌದು ನೆನಪಿಗೆ ಬಂತು:
ಅವಳ ಹುಬ್ಬಿನ ಗಂಟೆ ಚೆಂದವೋ!
ಏತಕುಳಿದರ ನಗೆಗಳು?
ಕರೆಕ್ಟ್ ಬಿ. ಎಂ. ಶ್ರೀಯವರ ಇಂಗ್ಲಿಷ್ ಗೀತಗಳಲ್ಲಿ ಓದಿದ ಕವನದ ಸಾಲುಗಳು. ಆ ಪುಸ್ತಕವನ್ನು ಓದಿ ಯಾವ ಯುಗವಾಯ್ತು? ಕಾಲೇಜಿನಲ್ಲಿ ಹುಡುಗಿಯರ ಆಟೋಗ್ರಾಫ್ ಗಳಲ್ಲಿ “ಬತ್ತುವುವು ಮುಂದಾಗಿ ಕಡಲುಗಳು ಎಲೆ ಚೆಲುವೆ, ಬತ್ತಲಾರದು ತೊಟ್ಟು ಪ್ರೇಮದೊಳಗೆ” ಎಂದು ಬರೆಯುತ್ತಿದ್ದ ಸಾಲುಗಳು ನೆನಪಾದವು. ಯಾವ ಕವನದ ಸಾಲು ಅವು? ಬರ್ನ್ಸ್ ಕವಿಯ O my love is like a red red rose: ನನ್ನ ಪ್ರೇಮದ ಹುಡುಗಿ ತಾವರೆಯ ಹೊಸ ಕೆಂಪು. ಅದರ ಹಿಂದೆಯೇ ‘ಕಾರಿಹೆಗ್ಗಡೆಯ ಮಗಳು’ ಹೇಳುವ “ಮುಳಿದ ಮುಗಿಲ ತಡೆಯಬಲ್ಲೆ, ಮುಳಿದ ತಂದೆಯ ತಡೆಯೆನು”…
ಮನೆ ತಲುಪಿದ ತಕ್ಷಣ ‘ಇಂಗ್ಲಿಷ್ ಗೀತಗಳು’ ಪುಸ್ತಕವನ್ನು ಹುಡುಕಿ ಇಡಿಯಾಗಿ ಓದಬೇಕು. ಆದರೆ ಮನೆಯಲ್ಲಿ ಆ ಪುಸ್ತಕ ಇದೆಯೆ? ಐವತ್ತರ ದಶಕದಲ್ಲಿ ಮುದ್ರಣ ಕಂಡ, ಹಲವು ಕೈಗಳನ್ನು ದಾಟಿ ಬಂದ ಹಳೆಯ ಪ್ರತಿಯೊಂದು ಇದ್ದ ನೆನಪು. ಮನೆಗಳನ್ನು ಬದಲಿಸುವಾಗ ಅದು ಉಳಿಯಿತೋ ಏನಾಯಿತೋ? ಇನ್ನೊಂದು ಕವನ ಯಾವುದದು? ಬಾಲ್ಯದ ಕನವರಿಕೆಯ ಕವನ: ಕಂದ ಬಿದ್ದೆಯ ಎಂದು ಮುದ್ದಿಸಿ ನನಗೆ ಮರುಗುವವರಿದ್ದರು, ಅಂದಿನೋದಿನ ಸುಖದ ದಿನದಲಿ ಜೊತೆಗೆ ಕುಣಿಯುವವರಿದ್ದರು, ಎಲ್ಲಾ ಎಲ್ಲಾ ಮಾಯವಾದವು ಹಳೆಯ ಪಳಕೆಯ ಮುಖಗಳು.
ಹುಬ್ಬು ಗಂಟಿನ ಚೆಲುವೆಯ ಮೊಗ ಹಿಂದಕ್ಕೆ ಸರಿದು ಇಂಗ್ಲಿಷ್ ಗೀತಗಳು, ಅದರ ಹಿನ್ನೆಲೆಯಲ್ಲಿದ್ದ ಚೇತೋಹಾರಿ ಮುಖಗಳು ಮನಸ್ಸನ್ನ ಇಡಿಯಾಗಿ ಆವರಿಸಿ ಬಿಟ್ಟವು. ಆ ಗುಂಗಿನಲ್ಲೇ ಬೆಂಗಳೂರು ತಲುಪಿದ್ದು ತಿಳಿಯಲೇ ಇಲ್ಲ. ಬಸ್ಸು ಇಳಿವ ಮುನ್ನ ಮತ್ತೊಮ್ಮೆ ಆ ಹುಬ್ಬುಗಂಟಿಯನ್ನ ನೋಡಿ ಮನೆ ಸೇರಿದಾಕ್ಷಣ ಇಂಗ್ಲಿಷ್ ಗೀತಗಳಿಗಾಗಿ ಹುಡುಕಿದೆ. ಕಡೆಗೂ ಸಿಕ್ಕಿತು. ೧೯೫೯ರಲ್ಲಿ ಮುದ್ರಿತವಾದ ಮೂರನೆಯ ಮುದ್ರಣದ ಪ್ರತಿ. ಮೊದಲ ಪುಟದಲ್ಲೇ ದೊಡ್ಡದಾಗಿ ಗೆಳೆಯ ಜನ್ನಿ-ಕಟಾವೀರನಹಳ್ಳಿ ಜನ್ನಪ್ಪ ಎಂದು ಸಹಿ ಹಾಕಿದ್ದ. ಅದರ ಮುಂದಿನ ಪುಟದಲ್ಲಿ ಎಚ್. ಹೊನ್ನೇಗೌಡ ೧೯-೧೦-೧೯೫೯ ಎಂಬ ಇಂಕ್ ಪೆನ್ನಿನ ಬರಹ. ಅವರಿಂದ ಜನ್ನಿಗೆ, ಜನ್ನಿಯಿಂದ ನನಗೆ.
ಮೊದಲಿಗೆ ಜ್ವರ ಬಂದವನಂತೆ ನನಗೆ ಪ್ರಿಯವಾದ ಪದ್ಯಗಳಿಗೆ ಅಮರಿಕೊಂಡೆ. ಕಾರಿ ಹೆಗ್ಗಡೆಯ ಮಗಳು, ನಿನ್ನೊಳೆನಗೊಲವಿಲ್ಲ, ವಸಂತ, ಪ್ರಾರ್ಥನೆ, ಒಂದು ಮುತ್ತು, ಬೇಡ ಬಿಡು ನಾವಲೆವುದಿನ್ನು… ಹಳೆಯ ಪಳಕೆಯ ಮುಖಗಳು…
ಈಗ ಇದನ್ನು ಓದುವ ಕೆಲವು ಪರಿಣಿತರಿಗೆ ಇದರಲ್ಲಿರುವುದು ಬಹುಪಾಲು ಸರಳವಾದ ಕವನಗಳು. ಅನುವಾದ ಕೂಡ ತೆಳುವಾಯ್ತು ಅನ್ನಿಸಬಹುದು. ಆದರೆ ಇಲ್ಲಿರುವ ಕವನಗಳು ಇಪ್ಪತ್ತನೆ ಶತಮಾನದ ಅದಿ ಭಾಗದಲ್ಲಿ, ಕನ್ನಡ ಸಾಹಿತ್ಯ ಇನ್ನೂ ವ್ರತ್ತ, ಕಂದ, ಷಟ್ಪದಿಗಳಲ್ಲಿ ಗಿರಾಕಿ ಹೊಡೆಯುತ್ತಿದ್ದಾಗ ಬಂದವು ಎಂಬುದನ್ನು ಮರೆಯಬಾರದು. ಆಗಿನ ಸ್ಥಿತಿ ಹೇಗಿತ್ತು ಎಂಬುದನ್ನು ಈ ಕೃತಿಯ ಎರಡನೇ ಆವೃತ್ತಿಗೆ ಮುನ್ನುಡಿ ಬರೆದ ತೀನಂಶ್ರೀಯವರು ಹೇಳಿದ್ದಾರೆ : ‘ಇಂಗ್ಲಿಷ್ ಗೀತಗಳು’ ತಲೆದೋರುವುದಕ್ಕೆ ಹಿಂದೆ ಕನ್ನಡ ಕವಿತೆಯ ಸ್ತಿತಿ ಹೇಗಿತ್ತೆಂದು ಸ್ವಲ್ಪ ಮಟ್ಟಿಗೆ ನೆನೆದರೆ ಅದರ ಪ್ರಭಾವ ಚೆನ್ನಾಗಿ ಮನದಟ್ಟಾಗುತ್ತದೆ. ಕನ್ನಡದಲ್ಲಿ ಪ್ರೌಢ ಕಾವ್ಯ ರಚನೆ ಸುಮಾರು ಒಂದು ಸಾವಿರದ ಏಳುನೂರರ ವೇಳೆಗೆ, ಚಿಕ್ಕದೇವರಾಜ ಒಡೆಯರ ಆಳ್ವಿಕೆಯ ಕೊನೆಯ ಹೊತ್ತಿಗೆ ನಿಂತು ಹೋಗಿತ್ತು. ಅಲ್ಲಿಂದ ಮುಂದೆ ದೌರ್ಬಲ್ಯ, ಅಸಾರತೆ, ಅನ್ಯಾಕ್ರಮಣ ಮೊದಲಾದವು ರಾಜಕೀಯ ಪ್ರಪಂಚದಲ್ಲಿ ಕಾಣಿಸಿಕೊಂಡಂತೆಯೇ ಸಾಹಿತ್ಯ ಪ್ರಪಂಚದಲ್ಲಿಯೂ ಕಾಣಿಸಿಕೊಂಡವು. ಹತ್ತೊಂಬತ್ತನೆಯ ಶತಮಾನದ ಮೊದಲನೆಯ ಭಾಗದಲ್ಲಿ ಗದ್ಯವೂ ಕೊನೆಯ ಭಾಗದಲ್ಲಿ ನಾಟಕವೂ ಸ್ವಲ್ಪ ಮಟ್ಟಿಗೆ ಉಲ್ಲಾಸಗೊಂಡು ಅರಳಿದವು. ಶ್ರೀ ಬಸವಪ್ಪ ಶಾಸ್ತ್ರಿಗಳಂಥ ಸರಸ ಕವಿಗಳು ಕೂಡ ನಾಟಕ ರಚನೆಯ ವ್ಯವಸಾಯದಲ್ಲೇ ಹೆಚ್ಚು ಪ್ರಸಿದ್ಧಿಗೆ ಬಂದರೆನ್ಬುದನ್ನು ಜ್ಞಾಪಿಸಿಕೊಳ್ಳಬಹುದು. ಅತ್ತ ಮುದ್ದಣ ಕವಿ ‘ಪದ್ಯಂ ವಧ್ಯಂ, ಗದ್ಯಂ ಹೃದ್ಯಂ’ ಎಂದು ನಿರ್ಧರಿಸಿ, ಹಳಗನ್ನಡ ಗದ್ಯದಲ್ಲಿ ತನ್ನ ಪ್ರತಿಭಾವಿಲಾಸವನ್ನು ತೋರ್ಪಡಿಸಿದನು. ಪದ್ಯದ ಕಾಲ ಹಿಂದಕ್ಕಾಯಿತು, ಇನ್ನೆಲ್ಲ ಗದ್ಯ ಕಥೆ, ನಾಟಕಗಳ ಏಳಿಗೆ ಎಂದು ಆಗಿನ ಸಾಹಿತ್ಯ ವ್ಯವಸಾಯಿಗಳು ಭಾವಿಸಿದ್ದಂತೆ ತೋರುತ್ತದೆ. ಪದ್ಯವನ್ನು ಬರೆಯುವವರು ಬಲು ಕಡಿಮೆ, ಓದಿ ಆದರಿಸುವವರು ಇನ್ನೂ ಕಡಿಮೆ-ಹೀಗಿತ್ತು.
ಇಂಥ ಸಮಯದಲ್ಲಿ ಇಂಗ್ಲಿಷ್ ಅಭ್ಯಾಸದಿಂದ ಸ್ಫೂರ್ತಿ ಪಡೆದಿದ್ದ ಬಿ.ಎಂ. ಶ್ರೀಕಂಠಯ್ಯನವರು ಸರಳವಾದ ಕನ್ನಡದಲ್ಲಿ, ಹೊಸ ಕಾಲಕ್ಕೆ ಅವಶ್ಯವಾದ ಹೊಸ ನುಡಿಗಟ್ಟುಗಳಲ್ಲಿ, ಹೊಸ ಛಂದಸ್ಸಿನಲ್ಲಿ ಕಾವ್ಯ ನಿರ್ಮಾಣವಾಗಬೇಕಿದೆ ಎಂಬುದನ್ನು ಅರಿತರು. ಅವರ ಪಾಲಿಗೆ, ಮೊದಲು ತಾಯಿ ಹಾಲು ಕುಡಿದು, ಲಲ್ಲೆಯಿಂದ ತೊದಲಿ ನುಡಿದ ಮಾತು; ನಲ್ಲೆಯೊಲವ ತೊರೆದು ತಂದ ಮಾತು-ಕನ್ನಡ, ನಿಜ.
ಆದರೆ ಇಷ್ಟೇ ತೀವ್ರವಾಗಿ ಪಡುವಣ ಕಡಲ ಹೊನ್ನ ಹೆಣ್ಣು ಕಾಡುತ್ತಿದ್ದಾಳೆ. ಅದಕ್ಕೆಂದೇ ಅವರು ಹೇಳುತ್ತಾರೆ: ಒಮ್ಮೆ ಇವಳು, ಒಮ್ಮೆ ಅವಳು ಕುಣಿಯುತಿರುವಳು. ಆದ್ದರಿಂದಲೇ ಅವರು ಇನಿಯರಿಬ್ಬರನ್ನೂ ಕೂಗಿ ಇವಳ ಸೊಬಗನವಳು ತೊಟ್ಟು ನೋಡ ಬಯಸಿದೆ; ಅವಳ ತೊಡುಗೆ ಇವಳಿಗಿಟ್ಟು ಹಾಡ ಬಯಸಿದೆ ಎನ್ನುತ್ತಾರೆ. ಈ ತೀವ್ರ ಹಂಬಲದ ಫಲವೇ “ಇಂಗ್ಲಿಷ್ ಗೀತಗಳು”.
ಇಂಗ್ಲಿಷ್ ಗೀತಗಳಲ್ಲಿ ವರ್ಡ್ಸ್ ವರ್ತ್ , ಬೈರನ್, ಶೆಲ್ಲಿ, ಕೋಲ್ ರಿಜ್ , ಬ್ರೌನಿಂಗ್ ಬನ್ಸ್, ಟೆನಿಸನ್ ಮುಂತಾದ ಎಲ್ಲ ಮಹತ್ವದ ರೊಮ್ಯಾಂಟಿಕ್ ಕವಿಗಳ ಅಥವಾ ಎಲ್ಲ ಮುಖ್ಯ ಕವಿಗಳ ಕವನಗಳಿವೆ. ಶ್ರೀಯವರು ಇಲ್ಲಿಯ ಹಲವಾರು ಕವನಗಳನ್ನು ಅತ್ಯುತ್ತಮ ರೀತಿಯಲ್ಲಿ ಕನ್ನಡಕ್ಕೆ ತಂದಿದ್ದಾರೆ. ತೀ ನಂ ಶ್ರೀ ಹೇಳುತ್ತಾರೆ: ಹೊಸಗನ್ನಡ ಕವಿತೆಗೆ ಬಿ ಎಂ ಶ್ರೀಯವರು ತಮ್ಮ ಇಂಗ್ಲಿಷ್ ಗೀತಗಳಿಂದ ಎಂಥ ಮಹದುಪಕಾರ ಮಾಡಿದರೆಂಬುದು ಸ್ಪಷ್ಟವಾಗುತ್ತದೆ. ಸಾಂಪ್ರದಾಯಿಕ ದೃಷ್ಟಿಯಿಂದ ನೋಡಿದರೆ ಇಂಗ್ಲಿಷ್ ಗೀತಗಳಲ್ಲಿ ಎಲ್ಲವೂ ಹೊಸದು; ಉದ್ದೇಶ ಪೂರ್ವಕವಾಗಿ ಆಮೂಲಾಗ್ರವಾಗಿ ಹೊಸದು : ಭಾಷೆ ಹೊಸದು, ರೀತಿ ಹೊಸದು, ಛಂದಸ್ಸು ಹೊಸದು.
ಎಲ್ಲವೂ ಹೊಸತಾದರೂ ಇಡೀ ಇಂಗ್ಲಿಷ್ ಗೀತೆಗಳಲ್ಲಿ ಕನ್ನಡದ ವಾತಾವರಣ ಎದ್ದು ಕಾಣುತ್ತದೆ. ಅದು ವಸಂತದ ವರ್ಣನೆಯಿರಬಹುದು, ಕಾರಿ ಹೆಗ್ಗಡೆಯ ಮಗಳ ವರ್ಣನೆಯಿರಬಹುದು, ಮಾದ, ಮಾದಿಯರ ಬೇಟವಿರಬಹುದು, ಮುದಿಯ ರಾಮಗೌಡನಿರಬಹುದು ಎಲ್ಲವೂ ಕನ್ನಡದ ಕಂಪಿನಿಂದ ಕೂಡಿದೆ. ಇಂಗ್ಲಿಷ್ ಗೀತಗಳಲ್ಲಿ ಸಹಜವಾಗಿಯೇ ಹಲವಾರು ಒಲವಿನ ಕವನಗಳಿವೆ. ಕಾರಿ ಹೆಗ್ಗಡೆಯ ಮಗಳುವಿನಂಥ ಕಥನಗೀತ ಹೇಳುವುದೂ ಒಲವಿನ ಕತೆಯನ್ನೇ. ಪ್ರೇಮಿಯೊಬ್ಬ ನಕಾರಾತ್ಮಕ ಧಾಟಿಯಲ್ಲೇ ತನ್ನ ಪ್ರೇಮದ ತೀವ್ರತೆಯನ್ನು ವ್ಯಕ್ತ ಪಡಿಸುವ ಧಾಟಿ ನೋಡಿ: ನಿನ್ನಲ್ಲಿ ನನಗೆ ಪ್ರೀತಿ ಇಲ್ಲ, ಖಂಡಿತಾ ಇಲ್ಲ ಎಂದು ಹೇಳುತ್ತಲೇ,
ಬಾನ ತಂಬೆಳಕೆಲ್ಲ ಕನ್ದಣಿಯ ನಿನ್ನನ್ನು ನೋಡಿ ನಲಿವುದೇ ಎಂದು ಕರುಬುವೆನದೇನು! ಎಂಬ ಪೊಸೆಸಿವ್ ನೆಸ್ ನ್ನು ತೋರುತ್ತಾನೆ. ಅಷ್ಟೇ ಅಲ್ಲ ಚಿತ್ರವತ್ತಾದ ಈ ಸಾಲುಗಳನ್ನು ಗಮನಿಸಿ:
ನಿನ್ನೊಳೆನಗೊಲವಿಲ್ಲ -ಆದರೂ, ಕಪ್ಪಾಗಿ
ಆಳದಲ್ಲಿ ಹೊಳಪಿಡುವ ನಿನ್ನ ನುಡಿಗಣ್ಣು
ನಾ ಕಂಡ ಮಿಕ್ಕಾವ ಕಣ್ಣನೂ ಮರೆ ಮಾಡಿ
ಮುಂದೆ ನಿಲುವುವು ಬಂದು ನಡುವಿರುಳ ಹೊತ್ತು.
ಇನ್ನೊಬ್ಬ ಪ್ರೇಮಿ: ಒಲಿದುದಾಯಿತು, ನಲಿದುದಾಯಿತು; ನೊಂದುದಾಯಿತು, ಬೆಂದುದಾಯಿತು; ಇಲ್ಲೇ ನರಕವ ಕಂಡುದಾಯಿತು ಎನ್ನುತ್ತಾಳೆ ಹಿಂದು ಮುಂದಿನ ಬೇಗೆಯೆಲ್ಲಾ ನಂದೇ, ಒಂದೇ ಮುತ್ತು ನಲ್ಲೆ ಎಂದು ಬೇಡಿಕೊಳ್ಳುತ್ತಾನೆ.
ಷೆಲ್ಲಿಯ I fear thy kisses, gentle maiden ನನ್ನು ‘ಹೆದರುವೆನು ನಾ ನಿನ್ನ ಬಿನ್ನಾಣಕೆಲೆ ಹೆಣ್ಣೆ’ ಎಂದು ಕನ್ನಡಿಸಿದ್ದಾರೆ. ಬರ್ನ್ಸ್ನ ನನ್ನ ‘ಪ್ರೇಮದ ಹುಡುಗಿ’ ಯಲ್ಲಿ ಬರುವ ಬಳೆ ಬೆಳೆಯುತೆಷ್ಟೆಷ್ಟು ಬಿನ್ನಾಣ ಎಲೆ ಚೆಲುವೆ, ಮುಳುಗಿದೆನು ಅಷ್ಟಷ್ಟು ಪ್ರೇಮದೊಳಗೆ ಎಂಬ ಸಾಲುಗಳಾಗಲೀ, ಕೋಟಿ ಯೋಜನವಿರಲಿ, ದಾಟಿ ಬರುವೆನು ಹೆಣ್ಣೆ ಎಂಬುದಾಗಲೀ ಎಷ್ಟೊಂದು ಅಕ್ಕರೆಯಿಂದ ಕೂಡಿದೆ, ಶಕ್ತಿಯುತವಾಗಿದೆ ಎಂಬುದನ್ನು ಗಮನಿಸಿ. ಬಹುಶಃ ಪ್ರೇಮಭಂಗದ ಅಲ್ಲ, ಪ್ರೇಮ ವಿಷಾದದ, ತಾನಿರುವ ಒರೆಯನ್ನೇ ಸವೆಸುವ ಖಡ್ಗದಂಥ ಪ್ರೇಮದ ಬೈರನ್ನನ ಈ ಕವಿತೆಯ ಸಾಲುಗಳನ್ನು ನೋಡಿ:
ತನ್ನೊರೆಯ ಸಮೆಯುವುದು ಖಡ್ಗ,
ತನ್ನೆದೆಯ ತೇಯುವುದು ಜೀವ-
ಹೃದಯ ಬಲು ದಣಿದಿಹುದು, ಉಸಿರಾಡಬೇಕು
ಒಲುಮೆಗೂ ಬಿಡುವು ಬೇಕು.
ಕೇವಲ ಪ್ರೇಮಗೀತೆಗಳಷ್ಟೇ ಅಲ್ಲ, ಮುದುಕ ರಾಮೇಗೌಡ, ದುಃಖಸೇತು ಮುಂತಾದ ಕವನಗಳನ್ನು ಶ್ರೀಯವರು ಮಾನವ ಸ್ವಭಾವಕ್ಕೆ ಭೌಗೋಳಿಕ ಗಡಿಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸುವಂತೆ ಕನ್ನಡಕ್ಕೆ ತಂದಿದ್ದಾರೆ. ಎಷ್ಟು ಸರಳ ಆದರೆ ಅಷ್ಟೇ ತೀವ್ರ. ವರ್ಡ್ಸ್ ವರ್ತ್ ನ ಪರಮ ಅಭಿಮಾನಿಯಾಗಿದ್ದ ಶ್ರೀಯವರು ಕವಿತೆಯ ಭಾಷೆಗೂ ಜನತೆಯ ಮಾತಿಗೂ ಹೆಚ್ಚಿನ ಅಂತರವಿರಬಾರದು ಎಂಬ ಆತನ ಮಾತನ್ನು ಅಕ್ಷರಶಃ ಪಾಲಿಸಿದ್ದಾರೆ. “ಕರುಣಾಳು, ಬಾ ಬೆಳಕೇ ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು. ಇರುಳು ಕತ್ತಲೆಯ ಗವಿ; ಮನೆದೂರ; ಕನಿಕರಿಸಿ, ಕೈ ಹಿಡಿದು ನಡೆಸೆನ್ನನು” ಎಷ್ಟೊಂದು ಸರಳವಾದ ಕನ್ನಡ ಪದಗಳು. ಆದರೆ ಈ ನಿರಾಡಂಬರ ಶಬ್ದಗಳು ಹೊಳೆಯಿಸುವ ಅರ್ಥವಂತಿಕೆ ಎಷ್ಟು ಘನವಾದದ್ದು.
ಶ್ರೀಯವರ ‘ಇಂಗ್ಲಿಷ್ ಗೀತಗಳು ಕನ್ನಡದ ಪಾಲಿಗೆ ಕೇವಲ ಒಂದು ಅನುವಾದಿತ ಕವನಗಳ ಸಂಕಲನವಲ್ಲ.
ಶ್ರೀಯವರು ಇದರ ಮೂಲಕ ಕನ್ನಡ ನವೋದಯ ಕಾವ್ಯದ ಹೆಬ್ಬಾಗಿಲನ್ನು ತೆರೆದರು.’ ಎಲ್ಲಕ್ಕೂ ಮಿಗಿಲಾಗಿ ಶ್ರೀಯವರಿಂದ ಕನ್ನಡಕ್ಕೆ ಆದ ಪರಮ ಉಪಕಾರವೆಂದರೆ ಇಂಗ್ಲಿಷ್ ಗೀತಗಳಲ್ಲಿ ಛಂದಸ್ಸಿನ ಹೊಸದೊಂದು ಹೆದ್ದಾರಿಯನ್ನೇ ತೆರೆದದ್ದು. ಅದಕ್ಕೆಂದೇ ಮಾಸ್ತಿಯವರು ಹೇಳಿದರು: ಕನ್ನಡದೊಳಿಂದಾವಾವ ಕಲಕಂಠ ಕೇಳುತಿದೆ, ಅದರ ಗಾನದೊಳೆಲ್ಲ ತೋರುತಿದೆ ನೀವು ತೆರೆದಾ ನವ್ಯ ಮಾರ್ಗ.’ ಶ್ರಿಯವರನ್ನು ನವಯುಗದ ಪ್ರವರ್ತಕರು ಎಂದು ಕರೆದ ಕುವೆಂಪು, ಅವರ ಪ್ರಭಾವವು ಗುಪ್ತಗಾಮಿನಿಯಾದ ವಾಹಿನಿಯಂತೆ ಅನೇಕ ವೃಕ್ಷಗಳಿಗೆ ನೀರೆರೆದಿದೆ ಎಂದಿದ್ದಾರೆ.
ಶ್ರೀಯವರ ‘ಪ್ರಾರ್ಥನೆ’ ಇಂದಿನ ನಮ್ಮ ಭಾರತೀಯ ಸಂದರ್ಭದಲ್ಲಿ ನಮ್ಮೆಲ್ಲರ ಪ್ರಾರ್ಥನೆಯಂತೆ ಇಲ್ಲವೇ :
ಕರುಣಾಳು, ಬಾ ಬೆಳಕೇ, ಮುಸುಕಿದೀ ಮಬ್ಬಿನಲ್ಲಿ
ಕೈ ಹಿಡಿದು ನಡೆಸೆನ್ನನು
***
ಅರೆ! ಈ ಇಂಗ್ಲಿಷ್ ಗೀತಗಳ ನೆನಪನ್ನು ಉಕ್ಕಿಸಿದ, ಇದನ್ನು ಮತ್ತೆ ಓದಿಸಿ ಆನಂದವನ್ನು ನೀಡಿದ ಆ ಹುಬ್ಬುಗಂಟಿಕ್ಕಿದ ಹುಡುಗಿಯ ಮೊಗವನ್ನು ಮರೆಯ ಬಾರದಲ್ಲವೇ: ‘ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ’ ಎಂಬಂತೆ!







ಲಾಗಾಯ್ತಿನಿಂದ ಆಲೂರು ಅವರ ಬರಹಗಳಲ್ಲಿ ಉದ್ವೇಗ ಅಥವಾ ಉಪದೇಶಗಳು ಇಲ್ಲ. ‘ನಾನು ನನ್ನ ಅನುಭವ’ ಎಂಬ ಬರಹಗಳೇ ಹೆಚ್ಚಾಗಿರುವ ಈ ದಿವಸಗಳಲ್ಲಿ ‘ದೂರ ನಿಂತು ನೋಡುವ’ ಬರಹಗಳು ಕಡಿಮೆ ಆಗಿವೆ. ಈ ಕೊರತೆಯನ್ನು ಆಲೂರು ತುಂಬುತ್ತಲೇ ಇರಲಿ