ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಶೇಖರ ಆಲೂರು ಅಂಕಣ: ಅಮ್ಮಾ ಹೋಗ್ಬಿಟ್ಟು ಬರ್ತೀನಿ

ಅದೇಕೋ ಸಮಾಧಾನವಾಗಲಿಲ್ಲ!

ಅವಳು ಹೋಗುತ್ತಿದ್ದುದು ಕೇವಲ ಎರಡು ವಾರದ ಮಟ್ಟಿಗಾದರೂ ಮನಸ್ಸು ಕೇಳಲಿಲ್ಲ. ರಸ್ತೆ ಬದಿಯಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಕಾರಿನ ಡ್ರೈವರ್ ಸೀಟ್‌ನಲ್ಲಿ ಪುಟ್ಟಿಯನ್ನು ಕೂರಿಸಿ ಓಡುತ್ತಾ ಹೋದೆ. ವಿಶಾಲವಾದ ಗಾಜಿನ ಮೂಲಕ ಆಕೆಯನ್ನು ಅರಸಿದೆ. ಲಗೇಜ್ ಚೆಕ್ ಇನ್ ಮಾಡಿಸುತ್ತಿದ್ದಳು. ಮೊಬೈಲ್‌ನಿಂದ ರಿಂಗ್ ನೀಡಿದೆ. ಆಕೆ ಗಾಬರಿಯಿಂದ ‘ಪುಟ್ಟಿ ಬರಲಿಲ್ಲವಾ ಎಂದಳು. ‘ಬಂದಿದ್ದಾಳೆ. ಎಲ್ಲಿ ನೀನು ಸ್ವಲ್ಪ ಈ ಕಡೆ ನೋಡು. ಹಾಂ. ರೈಟ್ ಸರಿ. ಬರ್ತೀಯಾ. ಜೋಪಾನ ಹುಷಾರಾಗಿ ಹೋಗ್ಬಿಟ್ಟು ಬಾ ಎಂದು ಬಾಯ್ ಹೇಳಿದೆ. ಆಕೆ ನಕ್ಕಳು. ನಾನೂ ನಿರಾಳವಾಗಿ ನಗುತ್ತಾ ಮೊಬೈಲ್ ಆಫ್ ಮಾಡಿ ಕಾರಿನ ಕಡೆ ಬಂದೆ.

ಒಂಥರಾ ಸಮಾಧಾನ ಆಯ್ತು!

ಇದರರ್ಥ ನಾನು ಮಹಾನ್ ರೊಮ್ಯಾಂಟಿಕ್ ಎಂದಲ್ಲ. ನನಗೆ ಚಿಕ್ಕಂದಿನಿಂದಲೂ ಅಂಟಿಕೊಂಡು ಬಂದ ರೂಢಿ ಇದು. ಅದೇನೆಂದು ಹೇಳುವ ಮುನ್ನ:

ಕಳೆದ ವಾರ ಇವಳು ಕೆಲಸದ ಮೇಲೆ ಯು.ಕೆ.ಗೆ ಹೋದಳು. ಒಂದು, ಎರಡು ವಾರದ ಮಟ್ಟಿಗೆ ಹೋದರೂ; ಬರುವುದು ಬೇಡ, ಬೇಡ ಎಂದರೂ ಸಾಮಾನ್ಯವಾಗಿ ಪುಟ್ಟಿಯೊಂದಿಗೆ ಏರ್‌ಪೋರ್ಟಿಗೆ ಹೋಗಿ ಬಿಟ್ಟು ಬರುವುದು ಒಂದು ಅಭ್ಯಾಸವಾಗಿ ಬಿಟ್ಟಿದೆ. ಮೊನ್ನೆ ಏರ್‌ಪೋರ್ಟ್‌ಗೆ ಹೋದಾಗ ಅದೊಂದು ದೊಡ್ಡ ಸಂತೆಮಾಳದಂತೆ ಇತ್ತು. ಕಷ್ಟಪಟ್ಟು ಡಿಪಾರ್ಚರ್ ಮುಂದೆ ಕಾರು ತೆಗೆದುಕೊಂಡು ಹೋಗಿ ಅಮ್ಮ-ಮಗಳನ್ನು ಇಳಿಸಿ ಕಾರು ಪಾರ್ಕ್ ಮಾಡಲು ಹೋದರೆ ನಿಲ್ದಾಣ ತುಂಬಿಹೋಗಿತ್ತು. ಅನಧಿಕೃತ ನಿಲುಗಡೆಯ ತಾಣಗಳೂ ತುಂಬಿಹೋಗಿದ್ದವು. ಅರೆ ಇದೊಳ್ಳೆ ಫಜೀತಿ ಆಯ್ತಲ್ಲ ಎಂದುಕೊಂಡು ಮತ್ತೆ ಒಂದು ಸುತ್ತು ಹೋಗಿ ನಿಲ್ದಾಣದ ಪಕ್ಕ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡೆ. ಮೊಬೈಲ್‌ನಿಂದ ಫೋನ್ ಮಾಡಿ ಹೀಗಾಗಿದೆ ಪುಟ್ಟಿಯನ್ನು ಕಳಿಸಿಬಿಡು ಎಂದು ಹೇಳಿ ಅಲ್ಲಿಂದಲೇ ‘ಬೈ ಹೇಳಿದೆ. ಸಮಾಧಾನವಾಗಲಿಲ್ಲ. ಇಷ್ಟು ದೂರ ಬಂದು ಆಕೆ ಹೊರಡುವಾಗ ಸರಿಯಾಗಿ ಮುಖ ನೋಡಿ ಬೀಳ್ಕೊಡಲಿಲ್ಲವಲ್ಲ ಎಂದು ಬೇಸರವಾಯ್ತು. ಕಡೆಗೆ ಅಮ್ಮನನ್ನ ಬಿಟ್ಟು ಬಂದ ಪುಟ್ಟಿಯನ್ನು ಕಾರಲ್ಲಿ ಕೂರಿಸಿ ಓಡಿದ್ದು ಇದೇ ಕಾರಣಕ್ಕೆ.

ಬಾಲ್ಯದಲ್ಲಿ ನಾನು ಮನೆಯಿಂದ ಹೊರಟಾಗಲೆಲ್ಲ ‘ಅಮ್ಮ ಹೋಗ್ತೀನಿ ಎನ್ನುತ್ತಿದ್ದೆ. ಅಮ್ಮ ‘ಹಾಗನ್ನಬಾರದು ಕಣಪ್ಪ. ಹೋಗ್ಬಿಟ್ಟು ಬರ್ತೀನಿ ಅಂಥ ಹೇಳಪ್ಪ ಎಂದು ಮತ್ತೆ ಹೇಳಿಸುತ್ತಿದ್ದರು. ನಂತರ ಅದು ಹೋಗಿ ಬರ್ತೀನಿ ಆಗಿ ಕಡೆಗೆ ಅಮ್ಮ ಬರ್ತೀನಿ ಎಂದಾಯ್ತು. ಬಹುಶಃ ನಿಮ್ಮೆಲ್ಲರಲ್ಲಿ ಆಗಿರುವಂತೆ ‘ಹೋಗಿ ಬರ್ತೀನಿ ಅಥವಾ ‘ಬರ್ತೀನಿ ಎಂಬುದು ನನ್ನ ಬದುಕಿನ ಅವಿಭಾಜ್ಯ ಅಂಗವಾಯ್ತು. ಹೊರಗೆ ಹೋದವರು ಜೋಪಾನವಾಗಿ ಮರಳಿ ಮನೆಗೆ ಬರಬೇಕು ಎಂಬುದು ಈ ಮಾತಿನ ಅರ್ಥ. ಆದರೆ ಈ ಮಾತುಗಳು ಇದಕ್ಕೂ ಮೀರಿದ ಅರ್ಥವನ್ನು ನನಗೆ ಹೊಳೆಯಿಸುತ್ತಾ ಬಂದಿವೆ.

ಈಗಲೂ ಪುಟ್ಟಿಯೋ, ಅವರ ಅಮ್ಮನೋ ಮುಖ ಗಂಟಕ್ಕಿಕೊಂಡು, ಸರಿಯಾಗಿ ಬೈ ಹೇಳದೆ ಮನೆಯಿಂದ ಹೊರಟರೆ ಇಡೀ ದಿನ ನನಗೆ ತಳಮಳ, ಸಂಕಟವಾಗುತ್ತದೆ. ಏನೇ ಮನಸ್ತಾಪ, ಜಗಳ ಇದ್ದರೂ ಮನೆಯಿಂದ ಹೊರ ಹೋಗುವಾಗ, ಮುಖ ನೋಡಿ ನಗುನಗುತ್ತಾ ಹೋಗಿ ಬರ್ತೀನಿ ಅಥವಾ ಬರ್ತೀನಿ ಎಂದು ಹೇಳಿ ಹೋಗಬೇಕೆಂಬುದು ನನ್ನ ಆಸೆ, ನಿರೀಕ್ಷೆ. ಅಥವಾ ಬೈ ಎಂಬುದನ್ನಾದರೂ ನಗುತ್ತಾ ಹೇಳಬೇಕು. ಈಗಲೂ ಊರಿಗೆ ಹೋದಾಗ, ಸ್ವಲ್ಪ ದೂರ ಬಂದ ಮೇಲೆ ದಾರಿ ಹೊರಳುವಾಗ, ಮತ್ತೆ ತಿರುಗಿ ಜಗುಲಿ ಕಲ್ಲಿನ ಮೇಲೆ ನಿಂತಿರುವ ಅಮ್ಮನಿಗೆ ಕೈ ಬೀಸಿ, ಬರ್ತೀನಿ ಎಂಬುದನ್ನು ಮನಸ್ಸಿನಲ್ಲಿಯೇ ಹೇಳಿಕೊಳ್ಳಬೇಕು. ಅಕಸ್ಮಾತ್ ಇವಳು ಮನೆಯಲ್ಲಿದ್ದರೆ, ಕಳುಹಿಸಲು ಹೊರ ಬಂದರೆ, ರಸ್ತೆಯಂಚಿನಲ್ಲಿ ತಿರುಗುವಾಗ, ಮತ್ತೊಮ್ಮೆ ಹಿಂದೆ ನೋಡುವುದು ವಾಡಿಕೆ. ಸ್ನೇಹಿತರ ಮನೆಗೆ, ಅಕ್ಕತಂಗಿಯರ ಮನೆಗೆ ಹೋದರೂ ಅಷ್ಟೆ. ಬಾಗಿಲಲ್ಲಿ ಹತ್ತು ನಿಮಿಷ ಹರಟಿ ಬೈ ಹೇಳಿದ್ದರೂ ರಸ್ತೆಯಂಚಿನಲ್ಲಿ ಹೊರಳುವಾಗ ಆದರೆ ಮತ್ತೊಮ್ಮೆ ಅವರ ಮುಖ ನೋಡಬೇಕು.

ಅಂದರೆ ಇದು ನನ್ನ ರೀತಿ.

ನಾನು ಮನೆ ಬಿಟ್ಟು ಹೊರಡುವಾಗ, ಅಥವಾ ಯಾರೇ ಮನೆಯಿಂದ ಹೊರಟಾಗ ನಗುನಗುತ್ತಾ ಹೊರಡಬೇಕು. ಅದು ಅರ್ಧ ಗಂಟೆಯ ಮಟ್ಟಿನ ತಿರುಗಾಟವಾದರೂ ಮನೆಯಲ್ಲಿರುವವರು ನಗುನಗುತ್ತಾ ಬೀಳ್ಕೊಡಬೇಕು. ನಾನು ಇದನ್ನು ಸಂಪ್ರದಾಯದಂತೆ ಪಾಲಿಸುತ್ತೇನೆ. ‘ಅಮ್ಮಾ ಹೋಗಿ ಬರ್ತೀನಿ ಅನ್ನೋ ಥರ! ಬಾಲ್ಯಕಾಲದಿಂದಲೂ ನನ್ನ ಮನಸ್ಸಿನಲ್ಲಿ ಅದು ಹೇಗೋ ಈ ಭಾವನೆ ಬೇರೂರಿಬಿಟ್ಟಿದೆ. ಅದು ತೀರಾ ಅಲ್ಪಕಾಲದ ಅಗಲುವಿಕೆಯಾದರೂ ಪರಸ್ಪರ ಬೀಳ್ಕೊಳ್ಳುವಾಗ ನಗುನಗುತ್ತಾ ವಿದಾಯ ಹೇಳಬೇಕು. ಇದೊಂದು ಕಾರಣಕ್ಕೆ ಎಷ್ಟೋ ಸಲ, ಗೆಳೆಯ ಗೆಳತಿಯರೊಂದಿಗೆ ಮುನಿಸಿಕೊಂಡಿದ್ದರೆ, ಸಣ್ಣ ಪುಟ್ಟ ಜಗಳ ಆಡಿದ್ದರೆ ‘ಬೈ ಹೇಳುವ ಸರದಿ ಬಂದಾಗ ನಾನು ಸೋಲುತ್ತೇನೆ (ಗೆದ್ದ ಕಿರೀಟ ಅವರಿಗೇ ಇರಲಿ ಎಂದು!). ಇದು ಶುಭಶಕುನ, ಅಪಶಕುನದ ಮಾತಲ್ಲ.

ನನ್ನ ಮುಖವನ್ನು ನೋಡಿದವರಿಗೆ ಅಕಸ್ಮಾತ್ ಅದು ಅಲಭ್ಯವಾದರೆ ಅವರ ಕಣ್ಣ ಮುಂದೆ ನನ್ನ ಸಿಟ್ಟು ಸೆಡವಿನ ಮುಖದ ಬದಲು ನಗು ಮುಖ ಅಥವಾ ಪ್ರಸನ್ನವಾದ ಮುಖ ಕಾಣಲಿ ಎಂಬುದು ನನ್ನ ಆಸೆ!

ಪ್ರಸಿದ್ಧ ಜನಪದ ತ್ರಿಪದಿ ‘ತವರೂರ ತಿಟ್ಹತ್ತಿ ತಿರುಗಿ ನೋಡ್ಯಾಳೋ ಎಂಬ ಸಾಲು ಕೇವಲ ತವರನ್ನು ಬಿಟ್ಟು ಹೋಗುವ ಅವಳ ಸಂಕಟವನ್ನಷ್ಟೆ ಹೇಳದೆ ಇಡೀ ತವರೂರನ್ನ, ತವರನ್ನ, ತವರಿನ ಜನರನ್ನ, ಸಸ್ಯ ಪ್ರಾಣಿ ಸಂಕುಲವನ್ನು ಅದೇ ಕಡೆಯ ಸಲವೇನೋ ಎಂಬಂತೆ ತನ್ನ ಕಣ್ಣಲ್ಲಿ ತುಂಬಿಕೊಳ್ಳುವುದನ್ನು ಹೇಳುತ್ತದೆ. ಆಕೆ ಅಲ್ಲಿಗೆ ಬರುವುದು ಇನ್ನೆಂದೋ; ಅಥವಾ ಬರುತ್ತಾಳೋ ಇಲ್ಲವೋ. ಈ ಕಾರಣಕ್ಕೆ ಆಕೆ ತವರೂರನ್ನು ಇಡಿಯಾಗಿ ತನ್ನೆರಡು ಪುಟ್ಟ ಕಣ್ಣುಗಳಲ್ಲಿ ತುಂಬಿಕೊಳ್ಳಲು ಯತ್ನಿಸುತ್ತಾಳೆ.

ನನ್ನ ಆಸೆಯೂ ಅದೇ. ಪರಸ್ಪರ ವಿದಾಯ ಹೇಳುವಾಗ ನಾನು ಅವರ ಕಣ್ಣುಗಳಲ್ಲಿ, ಅವರು ನನ್ನ ಕಣ್ಣುಗಳಲ್ಲಿ ಒಡಮೂಡಬೇಕು. ಇದೆಲ್ಲಾ ಸ್ವಲ್ಪ ಅತಿಯಾಯ್ತು ಅನ್ನಿಸಿದರೆ ಕ್ಷಮೆ ಇರಲಿ!

‍ಲೇಖಕರು G

8 June, 2011

4 Comments

  1. veda

    Oh Chandrashekarravare, nammellara abyasagalu saha idene. Naneshto bari ammanige hogtini antha Heli nanthara avlinda baiskondu hogbarthini Amma anthandu,hodadduntu.Bahalashtu janara vicharavu neevu tilisiruva reetiyadde agiruttadeyendu nanna anisike. Nandantu ditto xerox copyne.Tumba apthavada baraha.

  2. Guru

    ನಿಜ… ಬರೀ ಹೊರಟುನಿಂತಾಗ ಮಾತ್ರ ಅಲ್ಲ… ನಮ್ಮವರ ಜೊತೆ ಮಾತನಾಡಿ ಫೋನಿಡುವಾಗಲೂ..

  3. Anasuya M.R.

    Sir, nimma lekhanadalli ati anisuvanthaddenu illa. sahaja saralateyinda koodi manassige hattiravayitu.

  4. sulochana jagadeesh

    manasanu thatttidanthaha baraha, yaru innoo abhyasa madikondillavo avaru bega rudhisikollali emba shubhakansheyondige

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading