ಲಲಿತ ಪ್ರಬಂಧಗಳ ಪ್ರಕಾರದಲ್ಲಿ ಚಂದ್ರಶೇಖರ ಆಲೂರರದು ದೊಡ್ಡ ಹೆಸರು. ಅವರ ಪ್ರಬಂಧಗಳಲ್ಲಿ ಒಂದು ಲಾಲಿತ್ಯ ಮತ್ತು ಸಂವೇದನೆ ಸದಾ ಜೀವಂತವಾಗಿರುತ್ತದೆ. ಅವರ ಎಷ್ಟೋ ಪ್ರಬಂಧಗಳಲ್ಲಿ ಸಣ್ಣಕಥೆಯ ಗುಣ ಸಹ ಇದೆ. ಅವರ ನಾಲ್ಕು ಪುಸ್ತಕಗಳು ಈ ಭಾನುವಾರ ಬಿಡುಗಡೆ ಆಗುತ್ತಿವೆ. ಅವರ ಬರಹಗಳನ್ನು ಕಾದು ಓದುತ್ತಿದ್ದ ಓದುಗರಿಗೆ ಒಟ್ಟಿಗೆ ನಾಲ್ಕು ಪುಸ್ತಕಗಳ ಕೊಡುಗೆ!
ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ, ಪುಸ್ತಕದ ಮುಖ ಪುಟಗಳು ಮತ್ತು ಅವರ ಬರಹಗಳಲ್ಲಿ ಒಂದು ಕಾಡುವ ಬರಹ ನಿಮ್ಮ ಓದಿಗಾಗಿ :
ಅವಳ ಎದೆಯ ಮೇಲೆ ಹತ್ತು ಉಗುರ ಗುರುತು
ಚಂದ್ರಶೇಖರ ಆಲೂರು
ಅದೇ ಮೊದಲು, ಅದೇ ಕೊನೆ. ನಮ್ಮ ತಂದೆಯವರ ಸರ್ವೀಸ್ನಲ್ಲಿ ರೈಲ್ವೆ ಸ್ಟೇಷನ್ ಆವರಣದಲ್ಲಿಯೇ ಇರುವ ರೈಲ್ವೆ ಕ್ವಾರ್ಟಸ್ಗಳನ್ನು ಬಿಟ್ಟು ಊರಿನೊಳಗೆ ಹೋಗಿ ಬಾಡಿಗೆ ಮನೆ ಹಿಡಿದದ್ದು. ಆ ಊರು ಹಂಪಾಪುರ. ಎಡತೊರೆ ಅಂದರೆ ಕೃಷ್ಣ ರಾಜನಗರದ ಮುಂದಿನ ಸ್ಟೇಷನ್. ಅದೊಂದು ಶ್ರೀಮಂತ ಗ್ರಾಮ. ಊರೊಳಗೇ ಮುಖ್ಯ ರಸ್ತೆ ಹೋಗುತ್ತಿದ್ದರಿಂದ ಅದು ಆ ಕಾಲಕ್ಕೆ ಅಂದರೆ ಸುಮಾರು ಮೂರೂವರೆ ದಶಕಗಳ ಹಿಂದೆ, ಒಂದು ಪುಟ್ಟ ಪಟ್ಟಣವೇ ಆಗಿತ್ತು. ಊರ ಬದಿಯಲ್ಲಿ ಸ್ವಲ್ಪ ಮುಂದೆ ಕಾವೇರಿ ನದಿ ಹರಿಯುತ್ತಿತ್ತು. ಊರ ಸುತ್ತಮುತ್ತ ಹಸಿರುಟ್ಟ ಗದ್ದೆಗಳು. ಆಗ ಭತ್ತದ ಗದ್ದೆಗಳು ಎದೆಯೆತ್ತರ ಬೆಳೆಯುತ್ತಿದ್ದವು. ಹೆಚ್ಚು ಫಸಲು ನೀಡುವ ಗಿಡ್ಡ ತಳಿಗಳು ಬಂದಿದ್ದರೂ, ಇಳುವರಿ ಕಮ್ಮಿ ಆದರೂ ಪರವಾಗಿಲ್ಲ. ದನಕರುಗಳಿಗೆ ಮೇವಾಗಲಿ ಎಂದು ರೈತರು ರಾಜಭೋಗ, 701 ಮುಂತಾದ ಉದ್ದ ತಳಿಯ ಭತ್ತಗಳನ್ನೇ ಬೆಳೆಯುತ್ತಿದ್ದರು. ಆಗಿನ್ನೂ ಕಾಲ ತೀರಾ ಮನುಷ್ಯ ಕೇಂದ್ರಿತವಾಗಿರಲಿಲ್ಲ!
ಹಂಪಾಪುರ ನೂರಾರು ಎಕರೆ ಭತ್ತದ ಗದ್ದೆಗಳಿಂದ ಆವೃತ್ತವಾಗಿದ್ದ ಕಾರಣದಿಂದಲೇ ಇರಬೇಕು ಆ ಊರಲ್ಲಿ ಒಂದೆರಡು ರೈಸ್ಮಿಲ್ಗಳು, ಮುಖ್ಯ ರಸ್ತೆ ಬದಿಯಲ್ಲಿ ಹಾಗೂ ಊರೊಳಗೆ ಒಂದೆರಡು ಸಣ್ಣ ಪುಟ್ಟ ಹೊಟೆಲ್ಗಳು, ನಾಲ್ಕಾರು ಅಂಗಡಿ, ಟೇಲರ್ ಶಾಪ್… ಇತ್ಯಾದಿ. ಹಳ್ಳಿಗಳು ನನಗೆ ಹೊಸತಲ್ಲವಾದರೂ ನಾನು ಆವರೆಗೆ ಅಷ್ಟು ದೊಡ್ಡ ಊರನ್ನು ನೋಡಿಯೇ ಇರಲಿಲ್ಲ. ರೈಲ್ವೆ ಸ್ಟೇಷನ್ನ ಕ್ವಾರ್ಟಸರ್್ಗಳಲ್ಲಿ ಇದ್ದಾಗ ಅದೊಂದು ಪುಟ್ಟ ಲೋಕ. ನಾಲ್ಕಾರು ಮನೆಗಳ ಜಗತ್ತು. ಅಂದರೆ ನಾಲ್ಕಾರು ಮನೆಗಳೇ. ಆ ಸ್ಟೇಷನ್ನಲ್ಲಿ ನಿಲ್ಲುವ ರೈಲು ಬರುವುದಕ್ಕೆ ಮುನ್ನಿನ ಹಾಗೂ ಹೋದ ನಂತರದ ಹತ್ತು ನಿಮಿಷಗಳು ಮಾತ್ರ ಅಲ್ಲಿ ಗಜಿಬಿಜಿ. ನಂತರ ನೀರವ ಮೌನ. ಆದರೆ ನಾಲ್ಕಾರು ಮನೆಗಳ ಪುಟ್ಟ ಲೋಕ ಎಂದು ನನಗೆ ಬೇಸರವಾಗುತ್ತಿರಲಿಲ್ಲ. ಶಾಲೆಯಿಂದ ಬಂದ ತಕ್ಷಣ ಮಾಡಲು ಕೈತುಂಬ ಕೆಲಸ ಇರುತ್ತಿತ್ತು. ಇರುವುದು ಒಂದೆರಡು ವರ್ಷ, ಇದು ನಮ್ಮ ಮನೆಯಲ್ಲ, `ಅಲ್ಲಿ ಇಹುದು ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ’… ಎಂಬ ಭಾವ ನಮ್ಮನ್ನು ಎಂದೂ ಕಾಡುತ್ತಿರಲಿಲ್ಲ. ಅದೇ ನಮ್ಮ ಹುಟ್ಟೂರು, ಅದೇ ನಮ್ಮ ಸ್ವಂತ ಮನೆ ಎಂಬಂತೆ ವಿಶಾಲವಾದ ಕೈತೋಟಗಳನ್ನು ನಿರ್ಮಿಸುತ್ತಿದ್ದೆವು. ಅಲ್ಲಿ ತರಕಾರಿ, ಹೂವು, ಹಣ್ಣು… ಎಲ್ಲ ಬೆಳೆಯುತ್ತಿದ್ದೆವು. ಯಾವುದೇ ಸ್ಟೇಷನ್ ಆದರೂ ಆಡಲು ನಾಲ್ಕಾರು ಜನರ ಕ್ರಿಕೆಟ್ ತಂಡವಂತೂ ಸೃಷ್ಟಿ ಆಗುತ್ತಿತ್ತು. ನೆಂಟರಿಷ್ಟರು ಊರಿಂದೂರಿಗೆ ಹೋಗುವ ಹಕ್ಕಿಪಿಕ್ಕಿಗಳಂತೆ ಎಂದು ನಮ್ಮನ್ನು ಹಂಗಿಸುತ್ತಿದ್ದರೂ ನಮ್ಮ ಮನೆಯಲ್ಲಿ ಸದಾ ಒಂದೆರಡು ಹಸು ಅಥವಾ ಎಮ್ಮೆ ಇದ್ದೇ ಇರುತ್ತಿದ್ದವು. ಸಂಜೆ ಶಾಲೆಯಿಂದ ಬಂದ ನಂತರ ಹಾಗೂ ರಜಾ ದಿನಗಳಲ್ಲಿ ಎಮ್ಮೆ ಅಥವಾ ಹಸು ಮೇಯಿಸುವುದು ನನಗೆ ಅತ್ಯಂತ ಪ್ರಿಯವಾದ ಕೆಲಸವಾಗಿತ್ತು. ಔಟರ್ ಸಿಗ್ನಲ್ವರೆಗೆ ಅಥವಾ ಇನ್ನೂ ಮುಂದೆ ರೈಲು ಹಳಿಗಳ ಗುಂಟ ಎಮ್ಮೆ ಮೇಯಿಸಿಕೊಂಡು ಹೋಗುತ್ತಿದ್ದೆ. ನನ್ನಲ್ಲಿ ಪ್ರಕೃತಿ ಪ್ರೇಮ ಮೂಡಿದ್ದು ಅಂದರೆ ಸುತ್ತಮುತ್ತಣ ಹಸಿರು, ಗಿಡಮರಗಳು, ಹಕ್ಕಿಪಕ್ಷಿಗಳು… ಇವನ್ನೆಲ್ಲ ದಿಟ್ಟಿಸಿ ನೋಡುವ ಗುಣ ಬೆಳೆದದ್ದು ಹೀಗೆ ಎಮ್ಮೆ ಮೇಯಿಸಲು ಹೋಗುತ್ತಿದ್ದರಿಂದಲೇ.
ಪ್ರತಿಸಲ ವರ್ಗ ಆದಾಗಲೂ ಈ ಎಮ್ಮೆ ಹಸುಗಳು ನಮ್ಮೊಂದಿಗೇ ಬರುತ್ತಿದ್ದವು. ಗೂಡ್ಸ್ ವ್ಯಾಗನ್ನಲ್ಲಿ ಪೂಜಾರಪ್ಪ ಉರುಫ್ ಕರಿಯಣ್ಣ ಎಂಬ ನಮ್ಮ ಚಿಕ್ಕಪ್ಪ ಅವನ್ನು ತಂದು ಬಿಟ್ಟು ಹೋಗುತ್ತಿದ್ದರು. ಆದರೆ ಹಂಪಾಪುರಕ್ಕೆ ಬಂದಾಗ ಹಸು-ಎಮ್ಮೆಗಳು ನಮ್ಮೊಂದಿಗೆ ಬರಲಿಲ್ಲ. ನಮ್ಮ ತಂದೆಯವರು ಈ ಊರಿಗೆ ರಿಲೀವಿಂಗ್ ಸ್ಟೇಷನ್ ಮಾಸ್ಟರ್ ಆಗಿ ಬಂದದ್ದರಿಂದ, ಕ್ವಾರ್ಟಸ್ ಸಿಗುವುದಿಲ್ಲ, ಊರೊಳಗೆ ಬಾಡಿಗೆ ಮನೆಯಲ್ಲಿ ಇರಬೇಕಾಗುತ್ತದೆ ಎಂದು ತಿಳಿದಿದ್ದರಿಂದ, ಹಸು-ಕರುಗಳನ್ನು ಮಾರಲು ಇಚ್ಛಿಸದೆ ನಮ್ಮ ಊರಿಗೆ ಹೊಡೆದು ಕಳಿಸಿದ್ದರು.
ಬಾಡಿಗೆ ಮನೆಗೆ ಬಂದ ಮೊದಲ ದಿನ ನಿಜಕ್ಕೂ ಬೇಸರವಾಗಿತ್ತು. ರೈಲ್ವೆ ಕ್ವಾರ್ಟಸ್ಗಗಳಲ್ಲಿ ಇರುವಂತೆ ಮನೆಯ ಮುಂದೆ ಅಂಗಳವಾಗಲೀ, ಮನೆಯ ಹಿಂದೆ ಹಿತ್ತಿಲಾಗಲೀ ಇರಲಿಲ್ಲ. ಆದರೆ ಎದುರಿಗಿದ್ದ ಚೋಣಿಯಂಥ ಜಾಗದಲ್ಲಿ ನಮ್ಮ ಮನೆ ಮಾಲೀಕ ಎರಡು ಜತೆ ಎತ್ತುಗಳನ್ನು ಕಟ್ಟಿದ್ದನ್ನ ನೋಡಿ ಖುಷಿಯಾಯ್ತು. ಅಲ್ಲಿಗೆ ಹೋದ ದಿನವೇ ಮನೆಯೊಳಗಿನ ಕಿಟಕಿಯಿಂದ ನಾನು ಗಮನಿಸಿದೆ: ಮಧ್ಯ ವಯಸ್ಕನಾದ ಆತ ಎತ್ತುಗಳ ಕೊಂಬುಗಳನ್ನು ನಯವಾಗಿ, ಚಾಕಚಕ್ಯತೆಯಿಂದ ಹೆರೆದು ಕೊಬ್ಬರಿ ಎಣ್ಣೆ ಸವರಿ ಅವು ಮಿಂಚುವಂತೆ ಮಾಡಿದ. ನಂತರ ಅವಕ್ಕೆ ಮೇವು ಹಾಕಿ ಬಕೆಟ್ನಲ್ಲಿ ಬಿಸಿ ನೀರು ಇಟ್ಟುಕೊಂಡು ಒಂದು ಟವೆಲ್ ನೆನೆಸಿ ತೆಗೆದು ಅವುಗಳ ಕಾಲು, ಮೈಯನ್ನೆಲ್ಲ ಚೆನ್ನಾಗಿ ತಿಕ್ಕಿದ. ಮೊದಲೇ ದೈತ್ಯಾಕಾರದ ಎತ್ತುಗಳು. ಈತ ಮಾಲಿಶ್ ಮಾಡಿ ರೆಡಿ ಮಾಡಿದ ಮೇಲೆ ಇಂದ್ರನ ರಥಕ್ಕೆ ಕಟ್ಟಿದ ಹಿಮದಷ್ಟು ಬೆಳ್ಳಗಿನ ಕುದುರೆಗಳಂತೆ ಫಳಫಳನೆ ಹೊಳೆಯುತ್ತಿದ್ದವು. ಒಂದು ಜೋಡಿಯನ್ನು ತಯಾರು ಮಾಡಿ ಮತ್ತೊಂದು ಜೋಡಿಯನ್ನು ರೆಡಿ ಮಾಡಲು ತೊಡಗಿದ. (ಈಗ ಆ ದೃಶ್ಯ ಕಣ್ಣ ಮುಂದೆ ಬಂದರೆ ಆತನ ಕ್ರಿಯೆಯಲ್ಲಿ ಪ್ರೀತಿಯಾಗಲಿ ಅಥವಾ ಕಿರಿಕಿರಿ ಮಾಡುವ ಎತ್ತಿನ ಬಗ್ಗೆ ಸಿಟ್ಟಾಗಲೀ ಇರಲಿಲ್ಲ. ಆತ ಒಬ್ಬ ಪಕ್ಕಾ professionalನಂತೆ ಈ ಕೆಲಸ ಮಾಡುತ್ತಿದ್ದ ಅನ್ನಿಸುತ್ತದೆ!)
ಇದ್ದಕ್ಕಿದ್ದಂತೆ ನನಗೆ ಆತನಲ್ಲಿ ಅಪಾರ ಗೌರವ ಮೂಡಿತು. ಇಂಥ ರೈತನನ್ನು ನಾನು ನೋಡಿಯೇ ಇರಲಿಲ್ಲ. ನಮ್ಮ ರೈತರೆಲ್ಲ ತಮ್ಮ ದನಕರುಗಳನ್ನು ಎಷ್ಟು ಪ್ರೀತಿಸಿದರೂ ಹೀಗೆ ಅಲಂಕರಿಸುವುದು ಸಂಕ್ರಾಂತಿಯ ದಿನ ಮಾತ್ರ. ಆದರೆ ಈತ ಸಂಕ್ರಾಂತಿ ಕಳೆದು ತಿಂಗಳಾಗಿದ್ದರೂ ಎಷ್ಟು ಅಕ್ಕರೆಯಿಂದ ತನ್ನ ಎತ್ತುಗಳಿಗೆ ಶೃಂಗಾರ ಮಾಡುತ್ತಿದ್ದಾನೆ ಅನ್ನಿಸಿತು. ಅಲ್ಲದೆ ನಾನು ಎತ್ತಿನ ಕೊಂಬುಗಳಿಗೆ ಬಣ್ಣ ಬಳಿಯುವುದನ್ನ, ಬಣ್ಣದ ಕಾಗದಗಳಿಂದ ಅಲಂಕರಿಸುವುದನ್ನು ನೋಡಿದ್ದೆನೇ ಹೊರತು ಹೀಗೆ ಅವುಗಳ ಕೊಂಬುಗಳನ್ನು ಹೆರೆಯುವುದನ್ನು, ಅವನ್ನು ದಂತದ ಮಟ್ಟಕ್ಕೆ ತರುವ ಕಲಾತ್ಮಕತೆಯನ್ನು ಎಂದೂ ಕಂಡಿರಲಿಲ್ಲ. ಇಷ್ಟೆಲ್ಲ ಅಲಂಕಾರ ಮಾಡಿ ಗದ್ದೆಗೆ ಇಳಿಸಿದರೆ ಮತ್ತೆ ಅದೇ ಗತಿ ಅಲ್ಲವೆ, ಇಷ್ಟೆಲ್ಲ ಅಲಂಕಾರ ಯಾಕೆ ಎಂದೂ ಅನ್ನಿಸಿತು. ಆದರೂ ಆಗಿನ್ನೂ ಸುಗ್ಗಿ ಕಾಲವಾದ್ದರಿಂದ ಇನ್ನು 2-3 ತಿಂಗಳು ಎತ್ತುಗಳು ಬಿಡುವಾಗಿರುವುದರಿಂದ ಹಾಗೆ ಶೃಂಗರಿಸಿ ಅವನ್ನ ನೋಡಿ ಸಂತೋಷಪಡಬಹುದು ಎಂದುಕೊಂಡೆ.
ಅಂದು ಶಾಲೆಗೆ ಹೋದಾಗಲೂ ನನ್ನ ಮನದ ತುಂಬಾ ಈ ಹೊಸ ರೈತನ ಕಾಳಜಿ, ಕಳಕಳಿಗಳು ಮುತ್ತಿದ್ದವು. ಸಂಜೆ ಶಾಲೆ ಮುಗಿಸಿ ಮನೆಗೆ ಹೋದಾಗ ಅಲ್ಲೊಂದು ಪುಟ್ಟ ಜನಸಂದಣಿಯೇ ಇತ್ತು. ನಾನು ಮನೆಯೊಳಗೆ ಹೋಗದೆ ಅವರನ್ನೇ ನೋಡುತ್ತಾ ನಿಂತೆ. ಕ್ಷಣಾರ್ಧದಲ್ಲಿ ಅರ್ಥವಾಯ್ತು. ಅಲ್ಲಿ ಎತ್ತುಗಳ ವ್ಯಾಪಾರ ನಡೆಯುತ್ತಿತ್ತು. ಇಷ್ಟು ಸುಂದರವಾದ ಎತ್ತುಗಳನ್ನು ಮಾರಲು ಈತನಿಗೆ ಹೇಗೆ ಮನಸ್ಸು ಬರುತ್ತಿದೆ ಎಂದು ಬೇಸರವಾಯ್ತು. ನಾವು ಈ ಊರಿಗೆ ಬರುವಾಗ ಹಸು-ಎಮ್ಮೆಯನ್ನು ಊರಿಗೆ ಹೊಡೆದು ಕಳಿಸುವುದನ್ನು ನೋಡಿಯೇ ನಮ್ಮ ಮನೆಯಲ್ಲಿ ಎಲ್ಲರ ಕಣ್ಣಲ್ಲಿ ನೀರು ಬಂದಿತ್ತು. ಅಷ್ಟರ ಮಟ್ಟಿಗೆ ಅವು ನಮ್ಮ ಬದುಕಿನ ಭಾಗವಾಗಿಬಿಟ್ಟಿದ್ದವು. ಹೀಗಿರುವಾಗ ಎಲ್ಲೂ ವರ್ಗ ಆಗದ ಈತ ಯಾಕೆ ಹೀಗೆ ತಾನು ಸಾಕಿದ ಎತ್ತುಗಳನ್ನು ಮಾರುತ್ತಿದ್ದಾನೆ ಎಂಬ ಚಿಂತೆ ಮನಸ್ಸನ್ನು ಕಾಡಲಾರಂಭಿಸಿತು.
ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಮನೆಯ ಮುಂದೆ ಕೊಂಚ ಬಡಕಲಾದ ಎರಡು ಜೊತೆ ಎತ್ತುಗಳು ನಿಂತಿದ್ದವು. ಮಾಲಿಕ ಅವನ್ನು ತೊಳೆಯಲು ಆರಂಭಿಸಿದ್ದ. ಅಂದು ಸಂಜೆ ಅಮ್ಮ ಹೇಳಿದರು: `ಆತ ಎತ್ತುಗಳ ದಲ್ಲಾಳಿ. ಎತ್ತುಗಳನ್ನು ತಂದು ಮಾರುವುದೇ ಆತನ ಉದ್ಯೋಗ’. ಜಗತ್ತಿನಲ್ಲಿ ಇಂಥದೊಂದು `ಉದ್ಯೋಗ’ ಇದೆ ಎಂಬುದನ್ನು ನಾನು ಕೇಳಿಯೇ ಇರಲಿಲ್ಲ. ಎತ್ತುಗಳು, ದನಕರುಗಳನ್ನು ಮಾರುವುದನ್ನು ನಾನು ನೋಡಿಯೇ ಇರಲಿಲ್ಲ ಎಂದೇನಲ್ಲ. ನಮ್ಮ ಹಳ್ಳಿಯ ಸುತ್ತಮುತ್ತ ಕೆಂಗಲ್ ಸೇರಿದಂತೆ ಹಲವೆಡೆ ಈ ಕೆಲಸಕ್ಕಾಗಿ ಎಂದೇ ದನಕರುಗಳ ಜಾತ್ರೆಯೇ ನಡೆಯುತ್ತಿತ್ತು. ನಾನೂ ಅಂಥ ಜಾತ್ರೆಗಳನ್ನು ನೋಡಿದ್ದೆ. ಆದರೆ ಅವೆಲ್ಲ ನನ್ನ ಕಣ್ಣಿಗೆ ವಿನಿಮಯದ ತಾಣಗಳಂತೆ ಕಂಡಿದ್ದವು. ಎತ್ತುಗಳನ್ನು, ದನಕರುಗಳನ್ನು ಮಾರಿ ಶ್ರೀಮಂತರಾದವರನ್ನು ಅಥವಾ ಮಾರುವ ಕಾರ್ಯಕ್ಕಾಗಿಯೇ ಕೊಂಡುಕೊಳ್ಳುವವರನ್ನು ನಾನು ಕಂಡೇ ಇರಲಿಲ್ಲ!
ಈ ಕಾರಣದಿಂದಲೇ ಇರಬೇಕು 10-11ರ ಬಾಲ್ಯದ ನನ್ನ ಮನಸ್ಸಿಗೆ ಆ ವ್ಯಾಪಾರದ ದೃಶ್ಯ ಘಾಸಿಯನ್ನುಂಟು ಮಾಡಿತ್ತು. ಅಂದಿನಿಂದ ಆ ಊರು ಬಿಡುವವರೆಗೂ ನಾನು ಆ ವ್ಯಕ್ತಿ ಎಷ್ಟೇ ಮಾತಾಡಿಸಲು ಪ್ರಯತ್ನ ಪಟ್ಟರೂ ಮಾತಾಡುತ್ತಿರಲಿಲ್ಲ. ಅದೇಕೋ ದನ ಕರುಗಳನ್ನು ಮಾರುವ ಉದ್ದೇಶದಿಂದ, ಲಾಭ ಮಾಡಿಕೊಳ್ಳುವ ದೃಷ್ಟಿಯಿಂದ ಬೆಳೆಸುವುದು ತಪ್ಪು ಅನ್ನಿಸಿಬಿಟ್ಟಿತ್ತು. ಆದರೆ ವಾರಕ್ಕೊಮ್ಮೆ ಆತ ಬಡಕಲು ಎತ್ತುಗಳನ್ನು ಕೊಂಡುತಂದು ಅವನ್ನು ಶೃಂಗರಿಸುವ ಬಗೆಯನ್ನು ಮಾತ್ರ ತಪ್ಪದೇ ನೋಡುತ್ತಿದ್ದೆ. ಅದೆಲ್ಲ ಈಗ ನೆನಪಿಸಿಕೊಂಡಾಗ ಪಾಪ! ಅದೇ ಅವನ ಕಸುಬಾಗಿತ್ತು. ಆತನದೇನು ತಪ್ಪು ಅನ್ನಿಸುತ್ತದೆ. ಆದರೂ ಮಾರಲೆಂದೇ…!
ನಮ್ಮ ಮನೆ ಮಾಲಿಕರು ಜೈನರು. ಅವರ ಪತ್ನಿ ಅತ್ಯಂತ ನೇಮಿಷ್ಠರಾಗಿದ್ದರು. ಸಂಜೆ ಸೂರ್ಯಾಸ್ತಕ್ಕೆ ಮುನ್ನವೇ ಊಟ ಮುಗಿಸುತ್ತಿದ್ದರು. ನಮ್ಮ ತಂದೆಯವರು ಮನೆಗೆ ಬರುವುದು ತಡವಾಗುತ್ತಿದ್ದರಿಂದ ಸಾಮಾನ್ಯವಾಗಿ ಪ್ರತಿದಿನ ಸಂಜೆ ಅವರು ಊಟ ಮುಗಿಸಿ ನಮ್ಮ ಮನೆಗೆ ಬರುತ್ತಿದ್ದರು. ಅದೂ ಇದೂ ಮಾತಾಡಿದ ನಂತರ ಅವರು ಒಂದು ಕಥೆ ಹೇಳುತ್ತಿದ್ದರು. ಅವು ಜೈನ ಪುರಾಣಗಳಿಂದ ತಾವು ಓದಿದ ಕಥೆಗಳೆಂದೋ ಅಥವಾ ಕೇಳಿದ ಕಥೆಗಳೆಂದೋ ಹೇಳಿದ ನೆನಪು. ಅವರು ಹೇಳುತ್ತಿದ್ದ ಕಥೆಗಳ ಸಾರಾಂಶ ಅಥವಾ ನೀತಿ ಒಂದೇ. ಮನುಷ್ಯ ತನ್ನ ಬಾಳ್ವೆಯಿಂದ ಬೇಸತ್ತು ಸನ್ಯಾಸ ಸ್ವೀಕರಿಸುವುದು ಅಥವಾ ಈ ಜೀವನ ನಶ್ವರ ಎಂದು ಭಾವಿಸುವುದು. ಎಲ್ಲ ಜೈನ ಕಥೆಗಳಲ್ಲಿ ಬರುವಂತೆ ಯಾವುದೋ ಒಂದು ತಿರುವಿನಲ್ಲಿ ಅಥವಾ ಸಾಮಾನ್ಯರಿಗೆ ಕ್ಷುಲ್ಲಕ ಎಂಬಂತೆ ತೋರುವ ಘಟನೆ ಜರುಗಿದಾಗ ಕಥಾ ನಾಯಕ ಬದುಕಿನಿಂದ ವಿಮುಖನಾಗುತ್ತಾನೆ.
ಆಕೆ ಕಥೆಯನ್ನ ಅತ್ಯಂತ ವಿವರವಾಗಿ, ಪಾತ್ರಗಳನ್ನ ಎಳೆ ಎಳೆಯಾಗಿ ಬಿಡಿಸಿ ತೋರುತ್ತಾ ಹೇಳುತ್ತಿದ್ದರು. ಇವು ಧಾರ್ಮಿಕ ಕಥೆಗಳಾದರೂ ಅಲ್ಲಲ್ಲಿ ಬಾಲಕನೊಬ್ಬನ ಕಿವಿಗೆ ಬೀಳಬಾರದಂಥ ವರ್ಣನೆಗಳು ಇರುತ್ತಿದ್ದವು. ಇಂಥ ಸಮಯದಲ್ಲಿ ಆಕೆ ಕಥೆ ನಿಲ್ಲಿಸಿ ಒಮ್ಮೆ ನನ್ನ ಮುಖವನ್ನು ನಂತರ ನನ್ನ ಅಮ್ಮನ ಮುಖವನ್ನು ನೋಡುತ್ತಿದ್ದರು. ಇಂಥ ಸಂದರ್ಭದಲ್ಲಿ ಅಮ್ಮ ನನಗೆ ಹೊರಗೆ ಹೋಗಲು ಕಣ್ಣಿನಲ್ಲಿಯೇ ಸೂಚಿಸುತ್ತಿದ್ದರು. ಕ್ರಮೇಣ ಏನಾಯ್ತೆಂದರೆ ನಾನು ಇದೇ ಒಂದು ಸದವಕಾಶ ಎಂದುಕೊಂಡು ಗಂಟೆಗಟ್ಟಲೆ ಊರು ಸುತ್ತಲು ಹೋಗುತ್ತಿದ್ದೆ. ಇದರಿಂದ ಬೇಸತ್ತ ಅಮ್ಮ ಕಡೆಗೆ `ಅಂಥ’ ಪ್ರಸಂಗ ಬಂದು ಅವರು ನನ್ನ ಮುಖ ನೋಡಿದರೂ `ಪರವಾಗಿಲ್ಲ ಹೇಳಿ ಅವನಿಗೇನೂ ಗೊತ್ತಾಗಲ್ಲ’ ಎನ್ನುತ್ತಿದ್ದರು. ಅದೊಂದು ದಿನ ಅವರು ನನ್ನ ಮುಖ ನೋಡಿ ನಂತರ ಅಮ್ಮನ ಮುಖ ನೋಡಿ ಹೇಳಿದ ಕಥೆ ಹೀಗಿತ್ತು :
ಒಬ್ಬಳು ಹೆಂಡತಿ ಗಂಡನಿಗೆ ವಂಚನೆ ಮಾಡಿ ಪರಪುರುಷನ ಸಂಗ ಮಾಡುತ್ತಾಳೆ. ಪ್ರಿಯಕರ ಆಕೆಯ ಎದೆಯ ಮೇಲೆ ಹತ್ತು ಉಗುರುಗಳನ್ನು ಗುರುತು ಮೂಡಿಸುತ್ತಾನೆ. ನಂತರ ಪತ್ನಿಯ ಎದೆಯ ಮೇಲೆ ಉಗುರ ಗುರುತುಗಳನ್ನು ಕಂಡ ಪತಿ ಜೀವನದ ಬಗ್ಗೆ ಜಿಗುಪ್ಸೆ ತಾಳಿ ಸನ್ಯಾಸ ಸ್ವೀಕರಿಸುತ್ತಾನೆ.
ನಿಜ ಹೇಳಬೇಕೆಂದರೆ ಅಂದು ನನಗೆ ಏನೂ ಅನ್ನಿಸಿರಲಿಲ್ಲ (ಅಮ್ಮನ ಊಹೆ ಸತ್ಯವಾಗಿತ್ತು!) ದೇಹದ ಇತರ ಭಾಗದ ಮೇಲೆ ಉಗುರಿನಿಂದ ಗಾಯ ಮಾಡಿದಂತೆ ಎದೆಯ ಮೇಲೂ ಮಾಡಿದ್ದಾನೆ. ಆದರೆ ಆತ ನಿಜಕ್ಕೂ ಆಕೆಯ ಪ್ರಿಯಕರನಾಗಿದ್ದರೆ ಯಾಕೆ ಹಾಗೆ ಗಾಯ ಮಾಡಿದ ಎಂಬುದು ಮಾತ್ರ ಪ್ರಶ್ನೆಯಾಗಿ ಕಾಡುತ್ತಿತ್ತು. ಆತ ಪ್ರಿಯಕರನಲ್ಲ ಕ್ರೂರಿ ಅನ್ನಿಸುತ್ತಿತ್ತು. ಇದೆಲ್ಲಕ್ಕೂ ಮಿಗಿಲಾಗಿ ಅಂದಿನಿಂದ ನನ್ನಲ್ಲಿ ಮತ್ತೊಂದು ವಿಚಿತ್ರ ಭಾವನೆ ನೆಲೆಯೂರಿ ನಿಂತಿತು. ಕೊಂಚವೂ ಪ್ರೀತಿ ಇಲ್ಲದೆ ಎತ್ತುಗಳನ್ನು, ದನಕರುಗಳನ್ನು ಮಾರುವ ಆಕೆಯ ಪತಿಯನ್ನು ನೋಡಿದಾಗಲೆಲ್ಲ ನನಗೆ ಆತನ ಮುಖದಲ್ಲಿ ಕಥೆಯ ಪ್ರಿಯತಮನ ಕ್ರೌರ್ಯ ಕಣ್ಣೆದುರು ಬರುತ್ತಿತ್ತು. ಏಕೆಂದು ತಿಳಿಯದು. ಈಗ ಇದೊಂದು ವಿರೋಧಾಭಾಸದ ಪ್ರತಿಮೆ ಅನ್ನಿಸುತ್ತದೆ. ಆದರೆ ಬಾಲ್ಯದ ಕಲ್ಪನೆಗಳು, ಊಹೆಗಳು, ನೈತಿಕ ತೀರ್ಮಾನಗಳು ಎಷ್ಟು ವಿಚಿತ್ರ ಅಲ್ಲವೇ!
***
ಈ ಪುಸ್ತಕದ ಜೊತೆ ಜೊತೆಯಲ್ಲಿಯೇ ಮತ್ತೂ ಮೂರು ಪುಸ್ತಕಗಳು ಬಿಡುಗಡೆ ಆಗುತ್ತಿವೆ :










shubhaashayagalu ; kaaryakrama yashasveeyaagi neraverali .
Narayana Raichur – Adhyaksha , Reserve Bank Kannada Sangha, B’lore
thanks,raichur.karyakramakke banni
¸ಬಹಳ ದಿನಗಳ ಮೇಲೆ ನಿಮ್ಮ ಲೇಖನ ಓದಿ ಖುಷಿಯಾಯಿತು ಮೊದಲೇ ಓದಿದ್ದರೂ, ನಾಲ್ಕು ಪುಸ್ತಕಗಳು ಬಿಡುಗಡೆಯಾಗುತ್ತಿರುವುದು ಸಂತೋಷದ ಸಂಗತಿ
neevy odade iruvudu bekadashtide.karyakramakke banni madam
karyakramakke baruve sir
missed you and srujan and ofcourse bhoomi