ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಪ್ರಭ ಕಠಾರಿ ಕಥೆ- ಕಾಡುವ ಅಪ್ಪ

ಚಂದ್ರಪ್ರಭ ಕಠಾರಿ

ಹೆಡ್ ಮೇಡಮ್ ರೇಣುಕಾಂಬ ಆರನೇ ತರಗತೀಲಿ ಸಮಾಜ ವಿಜ್ಞಾನ ಪಾಠ ಮಾಡುತ್ತ, ಬೋರ್ಡ್ ಮೇಲೆ ಪ್ರಶ್ನೆಗಳಿಗೆ ಉತ್ತರವನ್ನು ಬರೀತಿದ್ದರು. ಕೇಳಿದ ಪ್ರಶ್ನೆಗೆ ಉತ್ತರ ಕೊಡದೇ ‘ಬ್ಬೆ..ಬ್ಬೆ..ಬೇ’ ಅಂದದ್ದರಿಂದ ವಸಂತನನ್ನು ಬೆಂಚ್ ಮೇಲೆ ನಿಲ್ಲಿಸಿದ್ದರು. ನಿಂತುಕೊಂಡೇ ನೋಟ್ ಬುಕ್ಕನ್ನು ಎಡಗೈಲಿ ಹಿಡಿದು, ಉತ್ತರವನ್ನು ಬಲಗೈಲಿ ಬರೆದುಕೊಳ್ಳಲು ಸರ್ಕಸ್ ಮಾಡುತ್ತಿದ್ದನು. ಕಿಟಕಿ ಪಕ್ಕ ಕೂತಿದ್ದ ನನಗೆ ಹೊರಗೆ ಕಾರಿಡಾರಲ್ಲಿ ಶುಭ್ರವಾದ ಬಿಳಿಜುಬ್ಬಾ, ಕಚ್ಚೆಪಂಚೆ ತೊಟ್ಟು ಕೈಯಲ್ಲಿ ಕೊಡೆ ಹಿಡಿದುಕೊಂಡು ಅಪ್ಪ ಬಂದದ್ದು ಕಾಣಿಸ್ತು. ಇದ್ಯಾಕೆ? ನನ್ನನ್ನ ಹುಡುಕ್ಕೊಂಡು ಸ್ಕೂಲಿಗೆ ಬಂದರು ಅಂದುಕೊಳ್ಳುವಷ್ಟರಲ್ಲಿ, ಮೇಡಮ್ ಅಪ್ಪನನ್ನು ಕಂಡದ್ದೇ ಬರೆಯೋದನ್ನ ನಿಲ್ಲಿಸಿ ಹೊರಗೆ ಹೋದ್ರು. 

ಏನೋ ಪಿಸುಪಿಸು ಮಾತಾಡೋದು ಕಾಣಿಸುತ್ತಿತ್ತು. ‘ನಿಮ್ ಮಗ ಚಂದ್ರ ಇಲ್ಲೇ ಇದಾನೆ. ಅಷ್ಟು ಗೊತ್ತಾಗಲ್ವ ನಿಮ್ಗೆ. ಈಗ ಹೋಗಿ. ಸಂಜೆಗೆ ಮನೆಗೆ ಬನ್ನಿ’ ಅನ್ನೋದು ಕಿಟಕಿಗೆ ಕಿವಿ ಕೊಟ್ಟು ಕೇಳಿದರೆ ಮಾತುಗಳು ಅಸ್ಪಷ್ಟವಾಗಿ ಕೇಳಿಬರುತ್ತಿತ್ತು. ಅಪ್ಪ ಏನೋ ತಪ್ಪಾದಂತೆ ಹಣೆ ಚಚ್ಚಿಕೊಂಡು, ಆಯಿತು ಎನ್ನುವಂತೆ ತಲೆಯಾಡಿಸುತ್ತ ಅಲ್ಲಿಂದ ಹೊರಟ. ಅಪ್ಪ ಹಿಂತಿರುಗಿ ಕಾರಿಡಾರಲ್ಲಿ ಹೋಗೋದನ್ನು ಕಿಟಕಿ ಸರಳುಗಳ ಮಧ್ಯೆ ಮುಖವಿಟ್ಟು ವಾರೆಗಣ್ಣಿಂದ ನೋಡುತ್ತಿದ್ದೆ. ಅಷ್ಟರಲ್ಲಿ ‘ಚಂದ್ರ…ಚಂದ್ರ…ಕಾಫಿ ಇಟ್ಟು ಎಷ್ಟು ಹೊತ್ತಾಯಿತು. ಬೇಗ ಕುಡ್ದು ಮುಗಿಸು. ತಣ್ಣಗಾಗುತ್ತೆ!’ ಎಂಬ ಅಮ್ಮನ ಕೂಗಿಗೆ ಎಚ್ಚೆತ್ತು, ಮನೋವೇಗದಲ್ಲಿ ಯಲೇಕಾತ್ಯನಹಳ್ಳಿ ಪ್ರಾಥಮಿಕ ನಮ್ಮೂರ ಶಾಲೆಯಿಂದ ಬಂದಿಳಿದರೆ, ಟೇಬಲ್ಲಿನ ಮೇಲೆ ಪಾಶ್ಚಿಮಾತ್ಯ ಇತಿಹಾಸದ ಟೆಕ್ಸ್ಟ್ ಬುಕ್ಕಲ್ಲಿ ಅಕ್ಷರಗಳನ್ನು ಓದದೆ ಬರೀ ನೋಡುತ್ತಿದ್ದೇನೆ ಅನಿಸಿತು. 

ಅಪ್ಪನ ಹಿಂದೆ ನಾನು ಬಿದ್ದಿದ್ದೇನೊ ಅಥವಾ ಬಿಟ್ಟೆನೆಂದರೂ ಬಿಡದೆ ಅಪ್ಪನೇ ನನ್ನ ಬೆನ್ನಿಗೆ ಬಿದ್ದು ಕಾಡುತ್ತಿದ್ದನೋ… ತಿಳಿಯುತ್ತಿಲ್ಲ! 

ಸಮಾಜಸೇವೆ, ರಾಜಕೀಯ ಮಣ್ಣುಮಸೀಂತ ಜನಗಳ ಮಧ್ಯೆ ಓಡಾಡಿಕೊಂಡಿದ್ದ ಅಪ್ಪನಿಗೆ ಮದುವೆಯಾಗೋಕೆ ಇಷ್ಟವಿರಲಿಲ್ಲ ಅನ್ನೋದಕ್ಕಿಂತ ವ್ಯವಧಾನವಿರಲಿಲ್ಲ. ಆಮೇಲೆ, ಅಜ್ಜಿ – ಅಮ್ಮನ ಅಮ್ಮ – ಅಪ್ಪನ ತಂದೆಯ ತಂಗಿ ಒತ್ತಾಯಕ್ಕೆ ಮಣಿದು ಅಮ್ಮನಿಗೆ ದೇವಸ್ಥಾನದಲ್ಲಿ ಮಧ್ಯಾಹ್ನ ತಾಳಿ ಕಟ್ಟಿದೋನು, ಸಂಜೇ ಹೊತ್ತಿಗೆ ಊರಲ್ಲಿ ಎರಡು ಕುಟುಂಬಗಳ ನಡುವೆ ಆಸ್ತಿ ವಿಚಾರವಾಗಿ ವ್ಯಾಜ್ಯ ನಡೆದು, ಕೈಕೈ ಮಿಲಾಯಿಸಿ ಒಬ್ಬನ ತಲೆಬುರುಡೆ ಹೋಳಾಗುವಂತೆ ಹೊಡೆತ ಬಿತ್ತೆಂಬ ಸುದ್ಧಿ ಬಂದೊಡನೇ ದಡಗುಟ್ಟಿಕೊಂಡು ಹೋದೋನು ಮೂರ್ನಾಲ್ಕು ದಿನ ಮನೆಗೇ ಬಂದಿರಲಿಲ್ವಂತೆ! ಹಾಗೆ, ನಾನು ಹುಟ್ದಾಗ್ಲು ಅಮ್ಮನ ಜೊತೆ ಇರಲಿಲ್ವಂತೆ! ಆಗಲೂ ಸುಮಾರು ಒಂದು ವಾರ ಬಿಟ್ಟು ನನ್ನ, ಅಮ್ಮನ್ನ ನೋಡೋಕೆ ಬಂದಿದ್ದನಂತೆ! ಇದನ್ನ ಅಜ್ಜಿ, ಅಮ್ಮ – ಒಮ್ಮೆ ದೋಸೆಹಿಟ್ಟು ರುಬ್ಬುತ್ತ ಮಾತಾಡ್ತಿದ್ದನ್ನ ಕೇಳಿದ್ದೇನೆ. ಮೊದಲಿಗೆ ಅದನ್ನ ಕೇಳಿ ನಂಗೇ ನಂಬಿಕೇನೆ ಬರ್ಲಿಲ್ಲ. 

ಆಕಾಶದಲ್ಲಿ ಸೂರ್ಯ ಇರೋವರ್ಗೂ ಜನರ ತರಲೆ, ತಾಪತ್ರಯಾಂತ ಅನಕ್ಷರಸ್ಥ ಹಳ್ಳಿಮಂದಿಗೆ ತಮ್ಮ ಜಮೀನುಹೊಲದ ದಾಖಲೆ, ಪಹಣಿಪತ್ರಾಂತ ಸರ್ಕಾರಿ ಕಛೇರಿಯಲ್ಲಿ ಮಾಡಿಸಿಕೊಡೋದು, ವ್ಯವಸಾಯ-ಮದುವೆ ಖರ್ಚಿಗೆಂದು ಸಹಕಾರಿ ಬ್ಯಾಂಕಲ್ಲಿ ಸಾಲ ಕೊಡಿಸೋದು, ಹಳ್ಳಿಗರ ವ್ಯಾಜ್ಯ ಬಿಡಿಸೋದು, ಹಳ್ಳಿಗೆ ಹೈಸ್ಕೂಲು ಇಲ್ಲಾಂತ ಎಮ್ ಎಲ್ಲೆ ಮನೆ, ವಿಧಾನಸೌಧಾಗೆ ಎಡತಾಕೋದು ಇತ್ಯಾದಿ ಕೆಲಸದಲ್ಲಿ ದಿನದೂಡುವವನು, ನಾನು ಹುಟ್ದಾಗಿನಿಂದ ತಡರಾತ್ರಿ ಎಷ್ಟೇ ಹೊತ್ತಾದರೂ ಮನೆಗೆ ಬಂದ್ಬಿಡೋನು. 

ಇಂಥ ಅಪ್ಪನಿಗೆ ಮದುವೆಯಾಗಿ ಹತ್ತು ವರ್ಷಗಳಾದ್ರು ಮಕ್ಕಳಾಗ್ಲಿಲ್ವಂತೆ! ಅಮ್ಮ– ಧರ್ಮಸ್ಥಳದ ಮಂಜುನಾಥ, ಹೊಂಬುಜದ ಪದ್ಮಾವತಮ್ಮ ಅಂತೆಲ್ಲ ಕಂಡುಕಾಣದ ಅಷ್ಟೂ ದೇವರಿಗೂ ಕೈಮುಗಿದು, ಹರಕೆ ಹೊತ್ತ ಮೇಲೆ ನಾನು ಹುಟ್ಟಿದ್ದಂತೆ. ಅಂದ್ರೆ ಅಪ್ಪನಿಗೆ ಆವಾಗ ನಲವತ್ತೈದು ವರುಷ. ಪ್ರೈಮರಿ, ಹೈಸ್ಕೂಲು ಓದೋವರ್ಗೂ ಕೆಲವು ವಿಷಯಗಳು ನನ್ನ ಗಮನ ಬಂದಿರಲಿಲ್ಲ. ಆದರೆ, ಕಾಲೇಜಿಗೆ ಸೇರಿದಾಗ ಸಹಪಾಠಿಗಳು ‘ಏನೋ ಕಾಲೇಜ್ಗೆ ಬಂದ್ಮೇಲೂ ತಾತನ ಬಾಲ ಬಿಡೋದಿಲ್ವ!’ ಅಂತ ಕೀಟಲೆ ಮಾಡಿದಾಗ, ಅಪ್ಪನ್ನ ತಾತಾಂತ ಕರೆದ್ರೂಂತ ಅವರನ್ನ ಚಚ್ಚಿ ಕೆಡವೊವಷ್ಟು ಸಿಟ್ಟು ಬರುತ್ತಿತ್ತು. ಆದರೆ, ಊರೂರು ಅಲೆದು ದಣೀತಿದ್ದ ಅಪ್ಪನ ಮುಖದಲ್ಲಿ ನೆರಿಗೆಗಳು ವಯಸ್ಸಿಗಿಂತ ಹೆಚ್ಚಿಗಿದ್ದದ್ದು ಆಗಲೇ ಗಮನಕ್ಕೆ ಬಂದಿದ್ದು.  

ಇತ್ತೀಚಿಗೆ ಅದ್ಯಾಕೋ ಅಪ್ಪ ಬಿಟ್ಟುಬಿಡದೆ ಕಾಡುತ್ತಿದ್ದಾನೆ! ನೆನಪಿನಾಳದ ಮೂಲೆಮೂಲೆಗಳಲ್ಲಿ ತಣ್ಣಗೆ ಮಲಗಿದ್ದ ಅದೆಷ್ಟೊ ಅಪ್ಪನ  ಚಿತ್ರಗಳು, ಬಾಲ್ಯದಲಿ ಅವನೊಂದಿಗೆ ಬಿರುಬೇಸಿಗೆಯಲ್ಲಿ ತಂಪೆರೆದ ತುಂತುರು ಮಳೆಯ ಕ್ಷಣಗಳ ನೆನಪಲ್ಲಿ ತೊಯ್ಯುತ್ತಿದ್ದೇನೆ. ಹಾಗೆಯೇ ಅಪ್ಪನಲ್ಲಿ ಕಾಣದ ಮತ್ತೊಂದು ಅಪ್ಪನ ಮುಖದ ಹುಡುಕಾಟ ಸಾಗಿ ಅಂತ ಕುರುಹು ಸಿಕ್ಕೇ ಬಿಡುತ್ತದೋ? ಎಂದು ಆತಂಕಕ್ಕೊಳಗಾಗುತ್ತೇನೆ. ಮೊದಲ ವರ್ಷದ ಎಂಎ ಪರೀಕ್ಷೆಗಳು ಹತ್ತಿರವಿರುವಲ್ಲಿ ಏಕಾಗ್ರತೆಗೆ ಎಲ್ಲಿ ಭಂಗ ಬರುವುದೋ ಎಂದು ದಿಗಿಲುಗೊಳ್ಳುತ್ತೇನೆ. 

ಅಪ್ಪನ ಸವಿನೆನಪುಗಳೇ ಸ್ಮೃತಿಯಲ್ಲಿ ತುಂಬಿರುವಾಗ ಅದರಲ್ಲಿ ಹುಳುಕು ಹುಡುಕುವ ಸಂಶಯ ಪ್ರವೃತ್ತಿ ಕಳೆದ ಕೆಲವು ವಾರಗಳ ಹಿಂದಿನಿಂದ ಶುರುವಾದದ್ದು! ಇನ್ನೂ ನಿಖರವಾಗಿ ಹೇಳಬೇಕಾದರೆ ಗೆಳೆಯ ವಸಂತನ ಜೊತೆ ಕಲಾಕ್ಷೇತ್ರದಲ್ಲಿ ನಾಟಕ ನೋಡಿ, ಬಹಳ ದಿನವಾಯ್ತೆಂದು ಅವರ ಮನೆಗೆ ಹೋಗಿ ಬಂದಾಗಿನಿಂದ. ‘ನೀನೇನಪ್ಪ, ಡಿಗ್ರಿ ಸಿಕ್ಕಿದ ಕೂಡ್ಲೇ, ಓದುಬರಹಕ್ಕೆ ನಮಸ್ಕಾರ ಹೊಡೆದು ನಿಮ್ಮಪ್ಪನ ದಿನಸಿ ಅಂಗಡೀಲಿ ಪೊಟ್ಣ ಕಟ್ಟೋಕೆ ಹೋಗ್ಬಿಟ್ಟೆ. ಆದ್ರೆ ನನಗಿನ್ನೂ ಯೂನಿವರ್ಸಿಟಿಗೆ ಮಣ್ಣು ಹೊರೋದು ಬಾಕಿ ಇದೆ!’ ಎಂದು, ಮರುದಿನ ಕ್ಲಾಸಿಗೆ ತಡವಾಗುತ್ತೆಂದರೂ ಬಿಡದೆ ಅವರಮ್ಮ ಬಹಳ ದಿನದಿಂದ ಕೇಳ್ತಿದ್ದಾರೆಂದು ವಸಂತ ಕರೆದೊಯ್ದ. 

ಕ್ಷೇಮ ಸಮಾಚಾರ ಎಲ್ಲಾ ಮಾತಾಡಿ, ತಿಂಡಿ ತಿಂದು ಹೊರಡಬೇಕೆನ್ನುವಾಗ, ಅದಾಗಲೇ ಅವರಪ್ಪನ ಜೊತೆ ಹಾಲಲ್ಲಿ ತಲೆಗೆ ಕಪ್ಪುಟೋಪಿ ಹಾಕ್ಕೊಂಡು ಹರಟೆ ಕೊಚ್ಚುತ್ತ ಕೂತಿದ್ದ ಡೊಳ್ಳುಹೊಟ್ಟೆ ಆಸಾಮಿ – ಅವರ ಸಂಬಂಧಿಕ ಇರಬೇಕು. ಅವರಪ್ಪನಲ್ಲಿ ‘ಈ ಹುಡ್ಗ ಯಾರು? ನಮ್ಮವನೇ!’ ಅಂದ. ಅವರಪ್ಪ ‘ಇಲ್ಲ.. ನಮ್ ವಸಂತನ ಬೆಸ್ಟ್ ಫ್ರೆಂಡ್ ಚಂದ್ರಕಾಂತ. ಚಿಕ್ಕಂದಿನಿಂದ ಒಟ್ಗೇ ಓದ್ದೋರು. ಸೈಲೆಂಟ್ ಹುಡುಗ. ಅವರಪ್ಪ ನಿಮ್ಗೆ ಗೊತ್ತಿರಬೇಕು. ನಿಮ್ಮೂರು ದಾಬಸಪೇಟೆ ಕಡೇನೆ. ತಮ್ಮಯ್ಯ ಅಂತ. ನೆಲಮಂಗಲ ತಾಲ್ಲೂಕ್ ಬೋರ್ಡ್ ಗೆ ಎರಡು ಬಾರಿ ಚೇರ್ಮೆನ್ ಆಗಿದ್ರು’ ಅಂದದ್ದೇ, ಆತ ಇದ್ದಕ್ಕಿದಂತೆ ಜೋರಾಗಿ ನಗುತ್ತ ‘ಓಹ್…ಗೊತ್ತು ಬಿಡಿ. ಭಾಳ ಪರಿಚಯ ನಂಗೆ. ಯಲೇಕ್ಯಾತನಹಳ್ಳಿಯೋರು. ಅವ್ರು ಬೆಂಗಳೂರಿಗೆ ಬಂದ್ಮೇಲೂ ಅವ್ರ ಜಮೀನು, ಮನೆಯೆಲ್ಲ ಅಲ್ಲೇ ಇತ್ತು. ಒಂದ್ ತಮಾಷಿ ಹೇಳ್ತೀನಿ. ಸರ್ಕಾರಿ ಪ್ರೈಮರಿಮಿಡ್ಲು ಸ್ಕೂಲಲ್ಲಿ ಅಂಚೀಕಡ್ಡಿ ತರ ಒಬ್ಳು ಹೆಡ್ ಮೇಡಮ್ ಇದ್ದಳು. ರೇಣುಕಾಂತ. ಯಾವಾಗ್ಲೂ ಆಯಪ್ಪನ ಹಿಂದೆ ತಿರುಗ್ತಿರೋಳು…’ ಎಂದು ತೊಡೆ ತಟ್ಟಿಕೊಂಡು ಮತ್ತೂ ಗಹಗಹಿಸಿ ನಗತೊಡಗಿದ. ವಸಂತನ ಅಮ್ಮ ‘ಅಯ್ಯೋ…ಏನೂಂತ ಮಾತಾಡ್ತೀರಾ…ಸುಮ್ನಿರಿ…ಅವ್ನು ಅವರ ಮಗ…’ ಅಂತಂದು ಬಾಯಿ ಮುಚ್ಚಲು ಸೂಕ್ಷ್ಮವಾಗಿ ತಿಳಿಸಿದರೂ ಆ ಡೊಳ್ಳುಹೊಟ್ಟೆಯ ನಗೆಯಾಟ ನಿಂತಿರಲಿಲ್ಲ. ಅದು ಇನ್ನೂ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ.  

ಅವನ್ಯಾಕೆ ಹಾಗೆ ಅಪ್ಪನ ಬಗ್ಗೆ ಉಡಾಫೆ ಮಾತಾಡಿ ದೇಶಾವರಿನಗೆ ನಕ್ಕ? ಅವನ ಮಾತಿನ ಅರ್ಥ ಅಪ್ಪನಿಗೂ ಆ ಹೆಡ್ ಮೇಡಮ್ಮಿಗೂ ಸಂಬಂಧವಿತ್ತೆಂದೇ? ಬುದ್ಧಿ ಬಂದಾಗಿಂದ ಅಪ್ಪ ತನ್ನೂರಿನ ಬಡಜನರಿಗೆ ತೋರುತ್ತಿದ್ದ ಕಾಳಜಿಯೇ ಎದ್ದು ಕಾಣುವಾಗ, ಆ ಬಗ್ಗೆ ಆ ಮನುಷ್ಯ ಒಂದೇ ಒಂದು ಒಳ್ಳೆಯ ಮಾತಾಡಲಿಲ್ಲವಲ್ಲ! ಅವನಿಗೂ ಅಪ್ಪನಿಗೂ ಆಗಿ ಬರುತ್ತಿರಲಿಲ್ಲವೇ? ಇತ್ಯಾದಿ ಪ್ರಶ್ನೆಗಳು ಧುತ್ತೆಂದು ಉದ್ಭವಿಸಿ ಮನ ಸುತ್ತಿ ಸುಳಿಯುತ್ತಲಿತ್ತು. 

ಅನಿರೀಕ್ಷಿತವಾಗಿ ಹಠಾತ್ತನೇ ಎರಗಿದ ಮಾತಿನಿಂದ ಹೇಗೆ ಪ್ರತಿಕ್ರಯಿಸಬೇಕೆಂದು ತಿಳಿಯದೇ ಪೆಚ್ಚಾಗಿದ್ದಾಗ, ಮನೆಯಾಚೆ ಬಂದಾಗ ವಸಂತ ‘ಆವಯ್ಯ ಹಂಗೆ. ಎಲ್ಲವನ್ನೂ, ಎಲ್ಲರನ್ನೂ ಅಪಹಾಸ್ಯ ಮಾಡೋ ಕೆಟ್ಟಾಭ್ಯಾಸ. ನೀನೇನು ಬೇಸರ ಮಾಡ್ಕೋಬೇಡ. ಅಷ್ಟಕ್ಕೂ ಅದ್ಯಾರೊ ನಿಮ್ಮಪ್ಪನ ಹಿಂದೆ ಬಿದ್ದಿದ್ದಾರೆಂದು ತಾನೇ ಅವರು ಹೇಳ್ತಿರೋದು?’ ಎಂದು, ನಿಮ್ಮಪ್ಪನೇನು ಅವಳ ಹಿಂದೆ ಹೋಗಿದ್ದೆಂದು ಹೇಳಿದ್ದಲ್ಲವೆಂದು ಸಮಜಾಯಿಷಿ ಕೊಟ್ಟರೂ ಕಸಿವಿಸಿಯಾಗಿ, ಅಪಮಾನವಾದಂಥ ಭಾವ ಆವರಿಸಿತು.   

ಬಾಲಮಂದಿರದ ಸ್ಕೂಲಲ್ಲಿ ಓದುತ್ತಿದ್ದಾಗ ನಡೆದ ಘಟನೆ ಇನ್ನೂ ಮನಸ್ಸಲ್ಲಿ ಅಚ್ಚೊತ್ತಿದೆ.  ಆವತ್ತು ಕಪ್ಪು ಸುರಿದಿದ್ದ ಕಡುರಾತ್ರಿ. ತನ್ನ ದಿನಚರಿಯ ಬಿಡುವಿಲ್ಲದ ಕೆಲಸದಲ್ಲಿ, ನನ್ನಿಷ್ಟದ ಹಲಸಿನಹಣ್ಣನ್ನು ಮರೆಯದೆ ಇವತ್ತು ತರುತ್ತೇನೆ, ನಾಳೆ ತರುತ್ತೇನೆಂದು ಸಬೂಬು ಹೇಳುತ್ತ ದಿನಾಲೂ ಬರೀಗೈಲಿ ಬಂದು ನಿರಾಸೆ ಮೂಡಿಸುತ್ತಿದ್ದ ಅಪ್ಪ ಆದಿನ, ನಿಡವಂದ ರೈಲ್ವೇ ಸ್ಟೇಷನಲ್ಲಿ ರೈಲು ಬಹಳ ಹೊತ್ತು ಮುಂದೊಗದೇ ನಿಂತು ಬೆಂಗಳೂರಿಗೆ ಬಂದಾಗ ನಡುರಾತ್ರಿಯಾಗಿ, ಧೋ ಎಂದು ಎಡೆಬಿಡದೆ ಸುರಿಯುವ ಮಳೆಯಲ್ಲಿ, ಆಟೋಗಳು ಸಿಗದೆ, ನನ್ನಷ್ಟು ಉದ್ದದ ಹಣ್ಣನ್ನು ಮಳೆಯಲ್ಲೇ ನೆಂದು ತೊಪ್ಪೆಯಾಗಿ ತಾನೇ ಹೆಗಲ ಮೇಲೆ ಹೊತ್ತು ತಂದಿದ್ದ.

ಕಾದು ಕಾದು ಸಾಕಾಗಿ ಗಡದ್ದಾಗಿ ನಿದ್ದೆ ಹೋದವನಿಗೆ ‘ಪುಟ್ಟ..ಪುಟ್ಟ’ ಎಂಬ ಕೂಗು ಕನಸಲ್ಲೊ ಎಂಬಂತೆ ಕೇಳಿ ಕಣ್ಣು ಬಿಟ್ಟರೆ, ಅಪ್ಪ ಹಲಸಿನತೊಳೆಯನ್ನು ಮುಖಕ್ಕಿಡಿದು ‘ತಗೋ…ತಿನ್ನು’ ಎನ್ನುತ್ತ ಕುಕ್ಕುರುಗಾಲಲ್ಲಿ ಕೂತಿದ್ದ. ಅವನ ಮುಂದೆ ಆಗ ತಾನೇ ಕೊಯ್ಯಿಸಿಕೊಂಡ ಹಲಸು ಬಟ್ಟಲಲ್ಲಿ, ಸಿಪ್ಪೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಮ್ಮ ‘ ಹೇಗೂ ಮಲಗಿದ್ದಾನೆ. ಮಧ್ಯರಾತ್ರಿ ಆಗಿದೆ. ಬೆಳಿಗ್ಗೆ ತಿನ್ನಿಸೋರಂತೆ!’ ಎಂದರೂ ಕೇಳದೆ ‘ಬೆಳಗ್ಗೆ ನಾನು ಬೇಗ ಹೊರಡಬೇಕು’ ಎಂದು, ಒದ್ದೆಬಟ್ಟೆ ಬಿಚ್ಚಿ ಬಂದೋನು ಹಲಸಿನಹಣ್ಣನ್ನು ಬಿಚ್ಚಿಟ್ಟಿದ್ದ. 

ಇಂಥ ಅಖಂಡ ಪ್ರೀತಿಯ ಅಪ್ಪನ ಮೇಲೆ ಆರೋಪವೇ? ವಸಂತ ಹೇಳಿದಂತೆ ಅವನ್ಯಾರೋ ತಲೆಮಾಸಿದವನಿರಬೇಕು ಎಂದು ನಿರ್ಧರಿಸಿ ಓದಿನ ಕಡೆ ಗಮನ ಕೊಡಬೇಕೆಂದು ಕೊಂಡರೂ ಮತ್ತೊಂದು ನೆನಪು ದಾಳಿಯಿಟ್ಟು ಮತ್ತೆ ಸಂಶಯದ ಸುಳಿಗೆ ತಳ್ಳಿತು.

ಹಾಸಿಗೆ ಹಿಡಿದಿದ್ದ ಅಜ್ಜಿ(ಅಪ್ಪನ ಅಮ್ಮ)ಯ ಆರೈಕೆ, ಮನೆಗೆಲಸದಲ್ಲೇ ಇರುವೆಯಂತೆ ಓಡಾಡುತ್ತ ದುಡಿಯುವ ಅಮ್ಮ ಯಾವತ್ತು ಗೊಣಗಿದವಳಲ್ಲ, ಹಳ್ಳಿಗರು ಉಪಕಾರ ಸ್ಮರಣೆಯಿಂದ ಕೊಡುತ್ತಿದ್ದ ತರಕಾರಿ, ತೆಂಗಿನಕಾಯಿಯನ್ನು ಅಪ್ಪ ಯಥೇಚ್ಚ ತರುತ್ತಿದ್ದರಿಂದ ಅದಕ್ಕೇನು ಕೊರತೆಯಿರಲಿಲ್ಲ. ಆದರೆ, ದುಡ್ಡಿನ ಕೊರತೆಯಿಂದ ಒಮ್ಮೆಗೇ ಮನೆಗೆ ದಿನಸಿ ತಾರದೆ, ಆಗಾಗ್ಗೆ ಬೇಳೆಕಾಳು ಡಬ್ಬಗಳು ಖಾಲಿಯಾಗಿ  ಶೆಟ್ಟರ ಅಂಗಡೀಲಿ ಸಾಲ ಕೇಳಬೇಕಾಗಿ ಬರುತ್ತಿದ್ದದ್ದು ಅಮ್ಮನಿಗೆ ಸಹನೆಗೆಡಿಸುತ್ತಿತ್ತು. ಯಾಕೆಂದರೆ ಚಿಕ್ಕಪೇಟೆಯಂಥ ಜಾಗದಲ್ಲಿ ಹೊಸೈರಿ ಅಂಗಡಿಯಿದ್ದು, ವ್ಯಾಪಾರ ಸುಸೂತ್ರವಾಗಿ ನಡೆದಿರುವಾಗ ಮನೆಖರ್ಚಿನ ದುಡ್ಡಿಗೂ ತತ್ವಾರ ಅಂದ್ರೆ ಏನರ್ಥ? ಇದು ಅಮ್ಮನ ಚಿಂತೆಗೆ ಮತ್ತೊಂದು ಕಾರಣ. 

ಅಪ್ಪ ಅಂಗಡಿಯ ಕಡೆ ಹೆಚ್ಚು ಮುತುವರ್ಜಿವಹಿಸದೆ, ವಾರಕ್ಕೆ ಮೂರ್ನಾಲ್ಕು ಬಾರಿ ಹೋಗಿ ಗಲ್ಲಾಪೆಟ್ಟಿಗೆಯಲ್ಲಿ ನಫೆ ಎಣಿಸಿ, ಒಂದಷ್ಟು ಮನೆ ಖರ್ಚಿಗೆಂದು ಕೊಟ್ಟು, ಉಳಿದದ್ದನ್ನು ತನ್ನೂರ ಬಡವರ ಉದ್ಧಾರಕ್ಕೆ ಒಯ್ಯುತ್ತಿದ್ದದ್ದು ಹಾಗೂ ಹಿಡಿತದಲ್ಲಿರಬೇಕಾದ ವ್ಯಾಪಾರ,ವ್ಯವಹಾರವನ್ನು ನೇಮಿಸಿದ್ದ ನಂಬಿದ ಕೆಲಸಗಾರರ ಮರ್ಜಿಗೆ ಬಿಡುತ್ತಿದ್ದದ್ದು, ಗಂಡನ ಯಾವ ನಡೆಯನ್ನು ಪ್ರಶ್ನಿಸಲು ಹೋಗದ ಶಾಂತ ಸ್ವಭಾವದ ಅಮ್ಮನನ್ನು  ವ್ಯಾಕುಲತೆಗೆ ತಳ್ಳುತ್ತಿತ್ತು. ಕೆಲ ನಿಷ್ಟಾವಂತ ಸೇಲ್ಸ್ ಹುಡುಗರು ‘ಯಾಜಮಾನ್ರು ಎಲ್ಲರನ್ನೂ ಭಾಳ ನಂಬ್ತಾರೆ. ಆದರೆ, ಅಂಗಡಿಯಲ್ಲಿ ಎಲ್ಲವೂ ಸರಿಯಿಲ್ಲ. ಬಹಳ ವರ್ಷದಿಂದ ಕೆಲಸಕ್ಕಿರೋ ಕೆಲವರು ವಸ್ತುಗಳನ್ನು ಹೆಚ್ಚು ಬೆಲೆಗೆ ಮಾರಿ, ಲೆಕ್ಕ ಕಡಿಮೆ ಬರೆದು ದುಡ್ಡನ್ನು ಎಗರಿಸುತ್ತಿದ್ದಾರೆ’ ಎಂದು ಕಿವಿಗೆ ಹಾಕಿದ್ದನ್ನು ಒಂದಷ್ಟು ಹೊತ್ತಿಗಾದರೂ ಮಾತಿಗೆ ಸಿಗದ ಗಂಡನಲ್ಲಿ ಹೇಳಲಾಗದೆ ತೊಳಲಾಡುತ್ತಿದ್ದಳು.  

ಆವತ್ತು ಹಾಲಲ್ಲಿ ಹೋಮ್ ವರ್ಕ್ ಮಾಡುತ್ತ ಕೂತಿದ್ದಾಗ, ರೂಮಲ್ಲಿ ಅಮ್ಮ ತುಸು ಧ್ವನಿ ಎತ್ತರಿಸಿ ಮಾತಾಡುವುದು ಅಸ್ಪಷ್ಟವಾಗಿ ಕೇಳುತ್ತಿತ್ತು. ‘ಹಾಗೆಲ್ಲ ಏನು ಆಗೊಲ್ಲ. ಒಂದು ತಿಂಗಳಿನ ಮಟ್ಟಿಗಷ್ಟೇ, ಆಮೇಲೆ ಬಿಡಿಸಿಕೊಂಡು ತಂದು ಬಿಡೋಣ’ ಎಂದು ಅಪ್ಪ ಹೇಳುತ್ತಿದ್ದ. ಅಮ್ಮ ಈಗ ಮುಸಿಮುಸಿ ಅಳುತ್ತಿದ್ದಳು. ‘ನಮ್ಮಮ್ಮ ಇದ್ದ ಹೊಲ ಮಾರಿ ಮದುವೆಗೆಂದು ಮಾಡಿಸಿಕೊಟ್ಟ ಮೂರೆಳೆ ಚೈನು. ಬಡ್ಡಿ ಕಟ್ಟದೆ ಮಾರ್ಮಾಡಿನೇ ನುಂಗ್ಕೊಂಡ್ರೆ ಏನ್ ಮಾಡೋದು? ಯಾವಳೋ ಮನೆ ಉದ್ಧಾರ ಮಾಡೋಕೆ ಹೆಂಡ್ತಿ ಮಾಂಗಲ್ಯಸರಾನ ಕೇಳೋ ಗಂಡಂದ್ರು ಜಗತ್ತಲ್ಲಿ ಎಲ್ಲಾದ್ರು ಇರ್ತಾರ?’ ಎಂದು ಅಮ್ಮ ಸೆರಗಿನಿಂದ ಕಣ್ಣೊರೆಸಿಕೊಂಡು ಹೊರ ಬಂದಾಗ ಅಮ್ಮನ ಕೊರಳಲ್ಲಿ ತಾಳಿಸರ ಇರಲಿಲ್ಲ.

ಅಮ್ಮ ಗೋಳಾಡುವುದು ನೋಡಿ ಗಂಟಲು ಕಟ್ಟಿ, ನನಗೂ ಅಳು ಬಂದ ಹಾಗೆ ಆಯಿತೇ ವಿನಹ ಮತ್ತೆ ಯಾವ ವಿಚಾರವೂ ಅರ್ಥವಾಗಿರಲಿಲ್ಲ. ಅಮ್ಮ ಹೇಳುತ್ತಿದ್ದ ‘ಯಾವಳೋ!’ ಅಂದ್ರೆ ಯಾರಿದ್ದಿರಬಹುದು? ಅಮ್ಮನ ಮಾಂಗಲ್ಯಸರ ಅಡವಿಟ್ಟು ಆ ಹೆಂಗಸಿಗೆ ಸಹಾಯ ಮಾಡೋ ಜರೂರತ್ತಾದರೂ ಅಪ್ಪನಿಗೆ ಏಕಿತ್ತು? ಮನೆಯ ತಾಪತ್ರಯಗಳಿಗಷ್ಟೇ ಸೀಮಿತವಾಗಿದ್ದ ಅಮ್ಮನ ಗೋಳುಗಳು, ಅಪ್ಪನ ಹೊರಗಿನ ವ್ಯವಹಾರವನ್ನು ಯಾವತ್ತೂ ಸಂಶಯಿಸಿದ್ದಿಲ್ಲ! ಪ್ರಶ್ನಿಸಿದ್ದಿಲ್ಲ! ಕಾಲಗರ್ಭದಲ್ಲಿ ಹೂತು ಹೋದ ಹಳೇ ನೆನಪಲ್ಲಿ ಉಳಿದಿರಬಹುದಾದ ಪ್ರಶ್ನೆಗಳಿಗೆ ವರ್ತಮಾನದಲ್ಲಿ ಉತ್ತರ ಹುಡುಕುವುದು ಸಾಧ್ಯವೇ? ಹಾಗಿಲ್ಲದಿದ್ದರೆ ತಲೆಯಲ್ಲಿ ಹೊಕ್ಕಿರುವ ಈ ಹುಳುವನ್ನು ಹೆಕ್ಕಿ, ಒಂದು ತಾರ್ಕಿಕ ಅಂತ್ಯ ಕಾಣಿಸಿ ಹೊರಹಾಕುವುದಾದರೂ ಹೇಗೆ? 

ದೇವರಮನೆಯ ಟೀಕ್ ಡೊರಿನ ಮೇಲೆ ಅಪ್ಪನ ಫೋಟೊ ಇದ್ದು, ಎಂದಿನಂತೆ ಸ್ನಾನ ಮಾಡಿ ಮಡಿಯಲ್ಲಿ ಬಂದ ಅಮ್ಮ, ಅಪ್ಪನ ಫೋಟೊದಲ್ಲಿದ್ದ ಹಿಂದಿನ ದಿನದ ಒಣಗಿದ ಹೂಗಳ ತೆಗೆದು, ಹೊಸ ಹೂಗಳನ್ನು ಇಟ್ಟು, ಅಪ್ಪನ ಹಣೆಗೆ ಕುಂಕುಮವಿಟ್ಟು, ನಮಸ್ಕರಿಸಿ, ದೇವರಮನೆಯಲ್ಲಿ ಪೂಜೆಗೆ ತೊಡಗಿದ್ದಳು. ದೇವರಮನೆಯ ಮೇಲೆ ತೂಗು ಹಾಕಿದ್ದ ಅಪ್ಪನ ಫೋಟೊ ನೋಡಿ, ಮನೆಗೆ ಬಂದಿದ್ದ ಕೆಲ ಸಂಬಂಧಿಕರು ಹಾಗಿರಕೂಡದು! ದೇವರಮನೆ ಮೇಲೆ ಮನುಷ್ಯರ ಫೋಟೊವೇ! ಎಂದರೆ, ಅಮ್ಮ ನಿರುಮ್ಮಳವಾಗಿ ‘ಅವರೇ ನಮಗೆ ದೇವರು!’ ಅನ್ನುತ್ತಿದ್ದಳು.

ಜಪ ಮುಗಿಸಿ ಬಂದವಳಿಗೆ ಫೋಟೊವೊಂದನ್ನು ಮುಂದೊಡ್ಡಿದೆ. ಫೋಟೊವನ್ನು ನೋಡಿ ‘ಇದೇನೊ!’ ಅಂದಳು. ಅಟ್ಟದ ಮೇಲಿದ್ದ ಅಪ್ಪನ ಟ್ರಂಕನ್ನಿಳಿಸಿ ತಡಕಾಡಿದಾಗ, ಯಾರಿಗೂ ತಿಳಿಯದ ಮೋಡಿ ಅಕ್ಷರದ ದಾಖಲೆ ಪತ್ರಗಳ ನಡುವೆ ಹಲವಾರು ಕಪ್ಪುಬಿಳುಪಿನ ಫೋಟೊಗಳು ಕಂಡವು. ಬಹಳಷ್ಟು ಫೋಟೊಗಳು ಅಪ್ಪ ಕುರ್ಚಿಯಲ್ಲಿ ಕುಳಿತೋ, ನಿಂತೋ ಸೆಟೆದುಕೊಂಡ ಭಂಗಿಯಲ್ಲಿ ತೆಗೆದವು. ಅವುಗಳಲ್ಲಿ ಒಂದು ಫೋಟೊದಲ್ಲಿ ಅಪ್ಪ ಮತ್ತು ಪಕ್ಕದಲ್ಲಿ ಹೆಂಗಸೊಂದು (ಅಮ್ಮನಿಗಿಂತ ತುಸು ಲಕ್ಷಣವಾಗಿದ್ದಳು) ಮನವಿ ಪತ್ರವನ್ನು ಕೈಲಿ ಹಿಡಿದು ಗಾಂಧೀಟೋಪಿ ಹಾಕಿ, ನೆಹರೂ ಕೋಟ್ ನಲ್ಲಿದ್ದ ಮಹನೀಯನಿಗೆ ಬಾಗಿ ಕೊಡುತ್ತಿರುವ ಆಗಿತ್ತು.

‘ಅಮ್ಮ, ಈ ಹೆಂಗಸು ಯಾರು?’ ಅಂದೆ. ‘ಇದೆಲ್ಲಿ ಸಿಕ್ಕಿತೊ? ಇವ್ರು ಆಲೂರು ಹನುಮಂತಪ್ಪಾವ್ರು…ಎಮ್ಮೆಲ್ಲೆ ಆಗಿದ್ರು…ಇವ್ರು ನಿಮ್ಮಪ್ಪ…ಇವ್ರು ಮೇಡಮ್… ಸರ್ಕಾರಿ ಸ್ಕೂಲಿನ ಹೆಡ್ ಮೇಡಮ್….’ ನೆನಪಿಸಿಕೊಳ್ಳುವಂತೆ ಹಣೆಗೆ ಬೆರಳಚ್ಚಿ ‘ಹ್ಞು…ಹೆಸರು ನೆನಪಿಗೆ ಬರುತ್ತಿಲ್ಲಾ’ ಅಂದಳು. ‘ರೇಣುಕಾನ….’ ಅಂದರೆ, ಇರಬಹುದು ನೆನಪಿಗೆ ಬರುತ್ತಿಲ್ಲ ಎಂದವಳು, ಹಾಗೆ ಹೇಳುವಾಗ ಫೋಟೊ ಹಿಡಿದ ಅವಳ ಕೈ ಸಣ್ಣಗೆ ನಡುಗುತ್ತಿದ್ದದ್ದು, ಹಣೆಯ ಮೇಲೆ ಬೆವರು ಹನಿಗಟ್ಟಿದ್ದು ಯಾಕೆಂದು ತಿಳಿಯಲಿಲ್ಲ. ‘ಅಪ್ಪನಿಗೂ ಆ ಹೆಂಗಸಿಗೂ ಸಂಬಂಧವಿತ್ತಾ?’ ಎಂಬ ಪ್ರಶ್ನೆ ನಾಲಿಗೆ ತುದಿಯವರೆಗೂ ಬಂದು ಹಾಗೆ ಹಿಂತಿರುಗಿ ಒಡಲ ಸೇರಿತು. 

ಕಾಲೇಜಿನ ಅಂತಿಮ ವರ್ಷದಲ್ಲಿದ್ದಾಗ, ತೀವ್ರ ಹೃದಯಾಘಾತವಾಗಿ ಮಲಗಿದ್ದಲ್ಲೇ ಅಪ್ಪ ತೀರಿಕೊಂಡು, ಅವನ ನೆನಪಲ್ಲೇ  ಈಗಲೂ ದಿನ ಕಳೆಯುವ ಅಮ್ಮನನ್ನು ನೇರವಾಗಿ ಪ್ರಶ್ನೆ ಕೇಳಿ, ಅದು ಅವಳನ್ನು ಘಾಸಿಗೊಳಿಸಿ ಮತ್ತಷ್ಟು ನೊಂದಾಳೆಂಬ ಅಳುಕು ಬಾಯಿ ಕಟ್ಟಿ ಹಾಕಿತ್ತು. ಅಪ್ಪನಿಲ್ಲ ಎನ್ನುವ ಕೊರತೆ ಬಿಟ್ಟರೆ ಅಂಗಡಿಯನ್ನು ಮಾರಿದ್ದರಿಂದ ಓದಿಗೆ, ಹೊಟ್ಟೆಬಟ್ಟೆಗೇನು ಕೊರತೆಯಿರಲಿಲ್ಲ. ‘ನಿನ್ನಪ್ಪನ ಟ್ರಂಕನ್ನು ಯಾಕೆ ತೆಗೆದೆ? ಹಳ್ಳಿಯವರದ್ದು ಯಾವ, ಯಾವುದೋ ಕಾಗದಪತ್ರಗಳಿವೆ. ನಿಮ್ಮಪ್ಪ ಅದನ್ನ ಬಹಳ ಜೋಪಾನವಾಗಿಟ್ಟಿದ್ದಾರೆ. ವಾಪಸ್ಸು ಹೇಗಿತ್ತೊ ಹಾಗೆ ಇಟ್ಟು, ಹಳೇದನ್ನೆಲ್ಲ ಕೆದಕೋದು ಬಿಟ್ಟು ಸ್ವಲ್ಪ ಓದಿನ ಕಡೆ ಗಮನ ಕೊಡು’ ಎಂದು ಅರೆಮುನಿಸಿನಲ್ಲಿಯೇ ಹೇಳಿದ ಅಮ್ಮನ ಮಾರ್ಮಿಕ ಮಾತುಗಳು ಮತ್ತಷ್ಟು ಕುತೂಹಲ ಹೆಚ್ಚು ಮಾಡಿ, ಪ್ರಶ್ನೆಗೆ ಉತ್ತರವನ್ನು ಹೊರಗಡೆಯೇ ಹುಡುಕಬೇಕೆಂದು ಅನಿಸಿತು. 

‘ನಿನ್ನದು ಅತಿಯಾಯಿತು. ಇಲ್ಲದ್ದನ್ನೇ ಧ್ಯಾನ ಮಾಡ್ತ ನಿನಗೆಲ್ಲೊ ಮತಿಭ್ರಮಣೆಯಾಗಿದೆ. ಅಲ್ಲ ಚಂದ್ರ, ನಿನ್ನಪ್ಪ ಈಗಿಲ್ಲ. ಅವರಿಗೆ ಯಾವುದೋ ಹೆಣ್ಣಿನ ಸಂಬಂಧವಿದ್ದದ್ದಕ್ಕೆ ಪುರಾವೆಯಿಲ್ಲ. ಹಾಗಿದ್ದಲ್ಲಿ ನೀನಗೇನು ಬೇಕು? ನೀನು ಹುಟ್ಟೇ ಇಲ್ಲದ ಕಾಲದಲ್ಲಿ ನಡೆದದ್ದನ್ನು ತಿಳಿದುಕೊಂಡು ನೀನು ಸಾಧಿಸೋದಾದರೂ ಏನು?’. ಒಮ್ಮೆ ಡೊಳ್ಳುಹೊಟ್ಟೆ ಸಂಬಂಧಿಕನ ಮನೆಗೆ ಹೋಗಿ ಅಪ್ಪ ಮತ್ತು ಅವನು ಹೇಳಿದ ರೇಣುಕಾ ಎಂಬ ಹೆಂಗಸಿನ ಬಗ್ಗೆ ಅವನಿಗೇನು ಗೊತ್ತಿದೆ ತಿಳಿದು ಬರೋಣ ಅಂದದ್ದಕ್ಕೆ ವಸಂತ ಏಕಾಏಕಿ ಕೋಪದಿಂದ ರೇಗಿದ. ನಾನು ಸಿಟ್ಟಾಗಿ, ಪಟ್ಟು ಬಿಡದೆ ‘ನನ್ನಪ್ಪ ಏನು ಕಚ್ಚೆಹರುಕನಾ? ಅವರ ವ್ಯಕ್ತಿತ್ವಕ್ಕೆ ಮಸಿ ಬಳಿದ ಹಾಗೆ ಅಲ್ಲವೇ? ಇದು ಸನ್ನಡತೆಯ ಪ್ರಶ್ನೆ. ಏನೂ ತಿಳಿಯದ ಅಮ್ಮನಿಗೆ ಅಪ್ಪ ಹಾಗೆ ಮೋಸ ಮಾಡಿರೋಕೆ ಸಾಧ್ಯವಿಲ್ಲ. ಅದ್ಯಾಕೆ ಹಾಗೆ ಅವನು ಕುಚೋದ್ಯ ಮಾತಾಡಿದ. ಸುಖಾಸುಮ್ಮನೆ ಹೇಳಿದ್ದರೆ ಆತ ಕ್ಷಮೆ ಕೇಳಲಿ’ ಎಂದೆ. 

ತಲೆಮಾರುಗಟ್ಟಲೆ ಕೂತು ತಿನ್ನೋ ಆಸ್ತಿ ಇದ್ದು, ಮಾಡಲು ಕೆಲಸವಿಲ್ಲದೆ, ವೃಥಾ ಪೆಟ್ರೋಲ್ ಖರ್ಚು ಮಾಡುತ್ತ ಕಾರಲ್ಲಿ ಮನಬಂದಂತೆ ಸುತ್ತಾಡುವ ಆಸಾಮಿಯಿಂದ ಹೇಳಿಕೊಳ್ಳುವಂಥ ಸುಳಿವು ಸಿಗಲಿಲ್ಲ. ವಸಂತ ಆತನ ಮೊಬೈಲಿಗೆ ಕರೆ ಮಾಡಿ ವಿಷಯ ತಿಳಿಸಿದ್ದಕ್ಕೆ ‘ಅಯ್ಯೋ!….ಇದೊಳ್ಳೆ ಕತೆಯಾಯ್ತಲ್ಲ. ಊರಲ್ಲಿ ಎಲ್ರೂ ಗುಸುಗುಸು ಅನ್ನೋದನ್ನೇ ನಾನು ಹೇಳಿದ್ದು. ಬೇಕಾದ್ರೆ ಮರಳುಕುಂಟೆಲೀ ಶೀನಪ್ಪ ಅಂತ ಕಂಟ್ರಾಕ್ಟರ್ ಇದ್ದಾನೆ. ಅವನಿನ್ನೂ ಬದುಕಿದ್ದರೆ… ಹ್ಹ!….ಹ್ಹ!…ಹೋಗಿ ಕೇಳಿ. ನಾನೇ ಕಂಡೋರ ತಲೆ ತಿನ್ನೋ ಗಿರಾಕಿ. ಅಂಥದ್ದರಲ್ಲಿ ನನ್ನ ತಲೆ ತಿನ್ಬೇಡಿ!’ ಎಂದು ಗಹಗಹಸಿ ನಗುತ್ತಿದ್ದವನು ‘ಗಾಡೀನಾ ಮುಂದೆ ಬಲಕ್ಕೆ ತಿರುಗಿಸು…ವೆಂಕಟಪ್ಪನ ಮನೆಗೆ ಹೋಗೋಣ. ನೋಡಿ ತುಂಬಾ ದಿನಾ ಆಯ್ತು’ ಅಂತ ಡ್ರೈವರ್ ಗೆ ಹೇಳುತ್ತಿದ್ದದ್ದು, ಸ್ಪೀಕರ್ ಆನ್ ಮಾಡಿದ ಮೊಬೈಲಿನಿಂದ ಕೇಳುತ್ತಲಿತ್ತು. ವಸಂತ, ಮುಖದ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿ ಮುಂದೇನು ಅನ್ನುವಂತೆ ನನ್ನನ್ನೇ ನೋಡುತ್ತಿದ್ದ.

ಚರಿತ್ರೆ ನನಗೆ ಪ್ರಿಯವಾದ ವಿಷಯವೇ. ಬಿಎ ಓದುವಾಗ ಅದ್ಭುತವಾಗಿ ಪಾಠ ಮಾಡುತ್ತಿದ್ದ ಹಿಸ್ಟರಿ ಲೆಕ್ಚರರ್ ಕೂಡ ಸ್ನಾತಕೋತ್ತರ ಪದವಿಗೆ ಚರಿತ್ರೆಯನ್ನೇ ಆಯ್ದು ಕೊಳ್ಳಲು ಹೇಳಿದ್ದರು. ಅದ್ಯಾಕೊ ಇತ್ತೀಚಿಗೆ, ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಪಾಠಗಳಲ್ಲಿ ಆಸಕ್ತಿ ಹುಟ್ಟುತ್ತಿಲ್ಲ. ಚರಿತ್ರೆ ಲೇಖನ ಪರಂಪರೆ, ಪಾಶ್ಚಿಮಾತ್ಯ ನಾಗರೀಕತೆ, ಭಾರತೀಯ ಚರಿತ್ರೆ… ಎಲ್ಲ ಪಠ್ಯಗಳು ಬೋರ್ ಹೊಡೆಸುತ್ತಿವೆ. ಏಕಾಗ್ರನಾಗಲಾಗುತ್ತಿಲ್ಲ. ಅಮ್ಮ ಬೇರೆ ಇತ್ತೀಚಿಗೆ ನನ್ನ ಮೇಲೆ ಕಣ್ಣಿಟ್ಟಿದ್ದಾಳೆ ಅನಿಸುತ್ತೆ. ಪದೇಪದೇ ರೂಮಿಗೆ ‘ಕಾಫಿ ಬೇಕಾ?…ತಿನ್ನೋಕೆ ಏನಾದ್ರು ಕೊಡ್ಲಾ?’ ಅಂತ ಕುಂಟುನೆಪ ಇಟ್ಟುಕೊಂಡು, ಬಾಗಿಲ ಸಂದಿಯಲ್ಲಿ ಇಣುಕಿ ನಾನೇನು ಮಾಡುತ್ತಿದ್ದೇನೆಂದು ಗಮನಿಸುತ್ತಿದ್ದಾಳೆ. 

‘ಅಮ್ಮ…..ಆಯ್ತು. ಕಾಫಿ ಕೊಡು. ನಿನಗೆ ಶೀನಪ್ಪಾಂತ ಮರಳುಕುಂಟೆಯಲ್ಲಿದ್ದಾರಂತಲ್ಲ…ಗೊತ್ತಾ?’

‘ಯಾಕಪ್ಪ? ಅವ್ರ ಬಗ್ಗೆ ನಿಮ್ಗೆ ಪಾಠ ಇದ್ಯಾ? ನೀನೇನು ಪರೀಕ್ಷೆ ಬರೀ ಬೇಕೂಂತ ಇದ್ದೀಯ, ಇಲ್ಲಾ ನಿಮ್ಮಪ್ಪನ ಜೀವನ ಚರಿತ್ರೆ ಬರೀಬೇಕೂಂತ ಇದ್ದೀಯ?’

‘ನೀನೊಳ್ಳೆ ಅಮ್ಮ….ಏನ್ ಕೇಳುದ್ರೂ ಸಿಟ್ಟಾಗ್ತೀಯ! ಯಾವುದೋ ಹಳೇ ಪಾಂಪ್ಲೆಟಲ್ಲಿ, ಅಪ್ಪನ ಜೊತೆಗೆ ಅವ್ರ ಹೆಸರು ಇತ್ತು. ಹಂಗೆ ಕೇಳ್ದೆ ಅಷ್ಟೆ’

ಅಮ್ಮ ಏನು ಹೇಳದೆ ಮುಖ ಸಣ್ಣದಾಗಿಸಿಕೊಂಡು ಹೊರಟದ್ದು ನೋಡಿದರೆ ನನ್ನ ಪತ್ತೇದಾರಿ ಕೆಲಸದ ಬಗ್ಗೆ ಗುಮಾನಿ ಬಂದಿರಬೇಕು. ಅಮ್ಮನನ್ನು ಕೇಳಿ ತಪ್ಪು ಮಾಡಿದೆ ಅನಿಸಿತು. ನನ್ನ ಅನುಮಾನಗಳೆಲ್ಲ ಒಮ್ಮೆ ಬರೀ ಊಹೆಯಾಗಿ, ಎಲ್ಲೋ ಕುಳಿತ ಅಪ್ಪ ನನ್ನ ಮನಸ್ಥಿತಿಯ ಬಗ್ಗೆ ಅನುಕಂಪದಿಂದ ನೋಡುತ್ತಿರಬಹುದು. ಕೆಲವೇ ದಿನಗಳಲ್ಲಿ ನನ್ನನ್ನು ಆವರಿಸಿಕೊಂಡ ಈ ಎಲ್ಲಾ ಸಿಕ್ಕುಗಳಿಂದ ಬಿಡಿಸಿಕೊಂಡು ನಿರುಮ್ಮಳನಾಗಬೇಕೆಂದು ಕೊಳ್ಳುತ್ತೇನೆ. ಆದರೆ, ಇದ್ದಕ್ಕಿದಂತೆ ಅಶರೀರವಾಣಿಯಾಗಿ ಕಿವಿಗಪ್ಪಳಿಸುವ ಗಹಗಹಿಯ ಕುಹಕ ನಗೆಯ ಕೂಗು ನನ್ನನ್ನು ಕುಗ್ಗಿ ಹೋಗುವಂತೆ ಮಾಡುತ್ತದೆ. 

ಪುಸ್ತಕದಲ್ಲಿ ಮುಖ ಹುದುಗಿಸಿ ಏಕಾಗ್ರನಾಗಲು ಪ್ರಯತ್ನಿಸುತ್ತಿರುವಾಗ, ಅಮ್ಮನ ಸೆರಗು ಮೊಣಕೈ ತಾಗಿತು. ಪ್ಲೇಟಿನಲ್ಲಿ ಒಂದಷ್ಟು ಬಿಸ್ಕತ್, ಚಿಪ್ಸ್ ಹಾಕಿ ಗಮಗುಡುವ ಬಿಸಿಬಿಸಿ ಕಾಫಿಯನ್ನು ತಂದು ಟೇಬಲ್ಲಿನ ಮೇಲಿಟ್ಟಳು.

‘ಏನೊಪ್ಪ ಇತ್ತೀಚಿಗೆ ನೀನು ವಿಚಿತ್ರವಾಗಿ ಆಡ್ತಿದ್ದೀಯ! ಶೀನಪ್ಪನ ಬಗ್ಗೆ ಕೇಳ್ದಿ. ಅವರ ಬಗ್ಗೆ ನಿಮ್ಮಪ್ಪನಿಗೇನು ಒಳ್ಳೇ ಅಭಿಪ್ರಾಯವಿರಲಿಲ್ಲ. ಸಿವಿಲ್ ಕಂಟ್ರಾಕ್ಟರ್ ಆಗಿದ್ದವನು ರಸ್ತೆ, ಬಿಲ್ಡಿಂಗ್ ಅಂತ ಗೌರ್ಮೆಂಟ್ ಕೆಲ್ಸ ಹಿಡೀತಿದ್ದನಂತೆ. ಸಿಮೆಂಟ್, ಕಬ್ಬಿಣ ಉಳಿಸಿ ಕಳಪೆ ಕಾಮಗಾರಿ ಮಾಡಿಸ್ತಿದ್ನಂತೆ. ಕಳಪೆ ಕೆಲ್ಸ ಸರಿಮಾಡಿಸೋವರೆಗೂ ನಿಮ್ಮಪ್ಪ ಬಿಲ್ ಪಾವತಿ ಮಾಡ್ತಿರ್ಲಿಲ್ವಂತೆ. ಅದೇ ವಿಷಯಕ್ಕೆ ಅವನಿಗೂ, ನಿಮ್ಮಪ್ಪನಿಗೂ ಹಲವು ಬಾರಿ ಜಟಾಪಟಿ ಆಗ್ತಿತಂತೆ. ನಿಮ್ಮಪ್ಪನೇ ಎಷ್ಟೊ ಸರ್ತಿ ಆ ಬಗ್ಗೆ ನಂಗೆ ಹೇಳ್ತಿದ್ದರು. ಆದ್ರೂ ಶೀನಪ್ಪನಿಂದ ನಮ್ಗೆ ಒಂದು ಉಪಕಾರವಾಯಿತು….’ ಎಂದಾಗ, ಬೆರಗಾಗಿ ನನ್ನ ಕಿವಿ ನೆಟ್ಟಗಾಯಿತು.

‘ಪಂಚಾಯಿತಿ ಎಲೆಕ್ಷನ್ ಬಂದಿತ್ತು. ನಿಮ್ಮಪ್ಪ ಇಂದಿರಾಗಾಂಧಿ ಕಾಂಗ್ರೆಸ್ ಬಿಟ್ಟು ಸಂಸ್ಥಾ ಕಾಂಗ್ರೆಸ್ಗೆ ಸೇರಿದ್ರು. ನಿಮ್ಮಪ್ಪನ ವಿರುದ್ಧ ಶೀನಪ್ಪ ಕಾಂಗ್ರೆಸ್ ಟಿಕೇಟಲ್ಲಿ ನಿಂತಿದ್ದ. ಪಾರ್ಟಿ ಬದಲಿಸಿದ್ದಕ್ಕೋ? ಶೀನಪ್ಪ ಸೀರೆ, ಹೆಂಡ ಹಂಚಿದ್ದಕ್ಕೋ ಏನೋ? ಅಥ್ವಾ… ನಿಮ್ಮಪ್ಪನ ಮೇಲೆ ಇಲ್ಲಸಲ್ಲದ ಗಾಳಿಸುದ್ಧಿ ಹಬ್ಬಿಸಿದ್ದರಿಂದ ಕೇವಲ ಒಂದೇ ಒಂದು ಓಟಿನಲ್ಲಿ ನಿಮ್ಮಪ್ಪ ಸೋತೋದ್ರು! ಮುಖಭಂಗವಾಗಿ ಆಗೆಲ್ಲಾ ನಿಮ್ಮಪ್ಪ ಭಾರಿ ನೊಂದಿದ್ರು. ಮನೆಮಠ ಬಿಟ್ಟು, ನನ್ನೂರು ನನ್ನ ಜನ ಅಂತ ಒದ್ದಾಡಿದ್ದಕ್ಕೆ ಒಳ್ಳೇ ಗತಿ ಕಾಣ್ಸಿದ್ರು ಅನ್ನೋರು! ಹಳ್ಳಿಗಳಿಗೆ ಹೋಗೋದ್ ನಿಲ್ಲಿಸ್ಬಿಟ್ರು. ಯಲೇಕ್ಯಾತನಹಳ್ಳಿಗೆ ಹೈಸ್ಕೂಲ್ ಕೆಲ್ಸ ಬಾಕಿ ಇದ್ದದ್ದರಿಂದ ಮಾತ್ರ ಕೆಲವೊಮ್ಮೆ ಹೋಗೋರು.

ರಾತ್ರಿಯೆಲ್ಲ ನಿದ್ದೆ ಮಾಡ್ತೀರ್ಲಿಲ್ಲ. ಸಿಗರೇಟು ಸೇದ್ತಾ ಎದ್ದು ಕೂತಿರೋರು ಇಲ್ಲಾ ಮೂವೀಲ್ಯಾಂಡ್ ಥೇಟರಲ್ಲಿ ಸೆಕೆಂಡ್ ಶೋಗೆ ದಿನಾಲೂ ಇರೋ ಶ್ರೀಕೃಷ್ಣ ಸತ್ಯ ಅಂತ ಅದದೇ ಸಿನಿಮಾಕ್ಕೆ ಹೋಗಿ ಕೂತು ಕಾಲಹರಣ ಮಾಡಿ ಬರೋರು. ನನಗಂತೂ ಅವರಿಗೆ ಹೇಗೆ ಸಮಾಧಾನ ಮಾಡ್ಬೇಕೂಂತ ತೋಚ್ತಿರ್ಲಿಲ್ಲ. ಅಂಗಡಿಗಾದ್ರು ಹೋಗಿ ಬೇಸರನಾದ್ರು ಕಳೀಯುತ್ತೆ ಅಂದೆ. ಅದೇನು ಅನಿಸ್ತೋ, ಅಂಗಡಿಗೆ ಬೆಳಗ್ಗೆದ್ದು ತಾವೇ ಹೋಗಿ ಬಾಗಿಲು ತೆಗೆಯೋದಕ್ಕೆ ಶುರುಮಾಡಿದ್ರು. ಲುಕ್ಸಾನಂತ ಮುಚ್ಚೋ ಸ್ಥಿತಿಗೆ ಬಂದಿದ್ದ ಅಂಗಡಿ ಉಳ್ಕೋತು’ ಅಂದು ಕಣ್ಣಂಚಲಿ ಜಿನುಗಿದ ನೀರನ್ನು ಸೆರಗಿನ ತುದಿಯಿಂದ ಒರೆಸಿಕೊಂಡಳು. 

ನನ್ನ ಕಣ್ಣಲ್ಲೂ ನೀರಾಡಿತು. ಅಪ್ಪನ ಸಾರ್ವಜನಿಕ ಜೀವನದಲ್ಲಿ ಹಬ್ಬಿಸಿದ ಗಾಸಿಪ್ ಗಳು ವಿರೋಧಿಗಳು ರಾಜಕೀಯ ಮೇಲುಗೈ ಸಾಧಿಸಲು ಸೃಷ್ಟಿಸಿದ ಹಸಿಸುಳ್ಳುಗಳೆಂದು ಅನಿಸಿ ಸಮಾಧಾನವಾಯಿತು. ಹಾಗೆ, ಅಪ್ಪನ ನಡತೆಯಲ್ಲಿ, ಮೊಸರಲ್ಲಿ ಕಲ್ಲು ಹುಡುಕೋ ಯೋಚನೆ ಮಾಡಿದ್ದಕ್ಕೆ ನನ್ನ ಬಗ್ಗೆಯೇ ಜಿಗುಪ್ಸೆಯಾಯಿತು. ಎಂಥಾ ಸಾತ್ವಿಕ ಜೀವವದು! ತಾನು ಹುಟ್ಟಿದ ಹಳ್ಳಿ, ಅಲ್ಲಿನ ಜನರ ಬಗ್ಗೆ ಅವನಿಗೆಷ್ಟು ಪ್ರೀತಿ, ಮಮಕಾರ. ಅಪ್ಪ ಇದ್ದಾಗಲೂ, ಹೋದ ಮೇಲೂ ಮನಸ್ಸಿನ ಮೂಲೆಯಲ್ಲಿ ಹುಟ್ಟಿ ಬೆಳೆದ, ಅಪ್ಪನನ್ನು ನಮ್ಮೊಟ್ಟಿಗೆ ಇರಲು ಬಿಡದ ಹಳ್ಳಿಜನರ ಬಗ್ಗೆ ಇದ್ದ ತಾತ್ಸಾರವೂ ತಟ್ಟನೆ ಮಾಯವಾಯಿತು. 

ಬೇಕಿರದ ಅಪ್ಪನ ಇತಿಹಾಸವನ್ನು ಕೆದಕುವುದನ್ನು ಬಿಟ್ಟು ಸಧ್ಯಕ್ಕೆ ಪರೀಕ್ಷೆಗಾಗಿ ಚರಿತ್ರೆ ಅಭ್ಯಾಸ ಮಾಡಬೇಕಿದೆ. ಪುಸ್ತಕದ ಹಾಳೆಗಳ ಮಧ್ಯೆ ತೆಗೆದಿರಿಸಿದ್ದ ಹಳೇಫೋಟೊಗಳನ್ನು ಕೂಡಿಸಿ, ಅಟ್ಟದಿಂದ ಟ್ರಂಕನ್ನಿಳಿಸಿ, ಅದರಲ್ಲಿ ಮೊದಲು ಹೇಗಿತ್ತೊ ಹಾಗೆ ಕವರಿನಲ್ಲಿ ಹಾಕಿ ಫೋಟೊಗಳನ್ನು ಇಟ್ಟೆ. ಹಾಗೆ ಇಡುವಾಗ ಪೋಸ್ಟ್ ಕವರೊಂದು ಕಂಡಿತು. ಕವರಿನ ಹಿಂದೆ – 

ಇಂದ;-ರೇಣುಕಾಂಬ, 

ಹೆಡ್ ಮಿಸ್ಟ್ರೆಸ್ (ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ – ಯಲೇಕಾತ್ಯನಹಳ್ಳಿ), 

ಗೋಕುಲ ಬಡಾವಣೆ ಕ್ಯಾತ್ಸಂದ್ರ ಪೋಸ್ಟ್, ತುಮಕೂರು. 

ಎಂದು ಬರೆದ ಅಪ್ಪನಿಗೆ ಬಂದ ಟಪಾಲು ಅದಾಗಿತ್ತು. ಕವರನ್ನು ತೆಗೆದರೆ ಮುದ್ದಾದ ಬರವಣಿಗೆಯ ಪತ್ರವಿತ್ತು.              

ಮಾನ್ಯ ನೆಲಮಂಗಲ ತಾಲ್ಲೂಕ್ ಬೋರ್ಡ್ ಅಧ್ಯಕ್ಷರಾದ ಶ್ರೀ. ತಮ್ಮಯ್ಯ ಅವರಿಗೆ ಸಪ್ರೇಮ ವಂದನೆಗಳು. ತಾವು ಮತ್ತು ತಮ್ಮ ಕುಟುಂಬದವರು ಆರೋಗ್ಯದಿಂದಿರುವಿರೆಂದು ಭಾವಿಸುತ್ತೇನೆ. ಈ ಪತ್ರವನ್ನು ಹೇಗೆ ಪ್ರಾರಂಭಿಸಬೇಕೆಂದು ತೋಚುತ್ತಿಲ್ಲ. ತೀರಾ ಗೊಂದಲದಲ್ಲಿದ್ದೇನೆ. ಈ ಪತ್ರವನ್ನು ಓದಿದ ಮೇಲೆ ತಾವು ತೆಗೆದುಕೊಳ್ಳುವ ನಿರ್ಧಾರಗಳು ನನ್ನ ಬಯಕೆಗೆ ವ್ಯತಿರಿಕ್ತವಾಗಿ ಹೋದರೆ? ಎಂಬ ಆತಂಕ ಕಾಡುತ್ತಿದೆ. ಇನ್ನು, ಹೆರಿಗೆ ಸುಸೂತ್ರವಾಗಿ ಆಗಿ ಪುಟ್ಟ ಗಂಡುಮಗು ನನ್ನ ತೋಳು ಸೇರಿದೆ. ಕಳೆದ ಮೂರು ತಿಂಗಳಲ್ಲಿ ಎಳೆಕಂದಮ್ಮನಿಗೆ ಹಾಲುಣಿಸುವ ಆನಂದದಲ್ಲಿರುವಾಗ, ತಟ್ಟನೆ ಮಗು ಅನಾಥವಾಗುವ ಭಾವ ಕಾಡಿ ಎದೆ ಹಿಂಡಿ ಬರುತ್ತದೆ. 

ಅಪ್ಪ ಎನಿಸಿಕೊಂಡವನ ಸುಳಿವಿಲ್ಲ. ಬರೆದ ಪತ್ರಗಳಿಗೆ ಲೆಕ್ಕವಿಲ್ಲ. ಉತ್ತರಕ್ಕಾಗಿ ಕಾಯುತ್ತ ಕಾಲದೂಡುತ್ತಿದ್ದೇನೆ. ನನ್ನನ್ನು, ಮಗುವನ್ನು ನೋಡಲು ಶ್ರೀಧರ ಬರುತ್ತಾನ್ನೆನುವ ಆಸೆ ದಿನಕಳೆದಂತೆ ಮರೆಯಾಗುತ್ತಿದೆ. ಕಾಲೇಜು ದಿನಗಳಿಂದ ನೀನೇ ನನ್ನ ಸರ್ವಸ್ವವೆಂದು ಪ್ರೀತಿಸುತ್ತಿದ್ದವನು, ಗರ್ಭಿಣಿ ಎಂದ ಕೂಡಲೇ ನನ್ನಿಂದ ದೂರಾಗಲು ಆರಂಭಿಸಿದ್ದು ನನಗೀಗಲೂ ನಂಬಲು ಸಾಧ್ಯವಾಗುತ್ತಿಲ್ಲ. ನೆಲಮಂಗಲ ಸರ್ಕಾರಿ ಕಾಲೇಜಿನಲ್ಲಿ ಲೆಕ್ಚರಾಗಿದ್ದವನನ್ನು ತಾವುಗಳು ಕರೆಸಿ, ಪ್ರೀತಿಸಿದವಳನ್ನು ನಡುನೀರಲ್ಲಿ ಕೈ ಬಿಡಬಾರದೆಂದು ಬುದ್ಧಿ ಹೇಳಿದ್ದು ಪ್ರಯೋಜನಕ್ಕೆ ಬರಲಿಲ್ಲ. ನಾನು ಬಸುರಿ ಎಂದು ತಿಳಿದ ಕೂಡಲೇ ಶೀಲಗೆಟ್ಟವಳೆಂದು ಅಪ್ಪ ಮನೆಯಿಂದ ಹೊರಹಾಕಿದ. ಈಗ ಯಾರಿಗಾಗಿ ಬದುಕಬೇಕು ಅನಿಸುತ್ತಿದೆ?

ದಯವಿಟ್ಟು ನೀವು ದೇವರಂತೆ ನನ್ನ ಮಾತೊಂದನ್ನು ನಡೆಸಿಕೊಡಬೇಕು. ಶ್ರೀಧರನನ್ನು ನೀವು ಕರೆಸಿ ಬುದ್ಧಿ ಹೇಳುವಾಗ- ಜಗತ್ತನ್ನು ನೋಡಿ, ನಲಿಯಬೇಕಾದ ಕಂದಮ್ಮನನ್ನು ಹೊಟ್ಟೆಯಲ್ಲಿಯೇ ಅಬರ್ಷನ್ ಮಾಡಿಸಿ ಕೊಲ್ಲಬೇಡಿ ಎಂದದ್ದು, ಅದಕ್ಕೆ ಶ್ರೀಧರ ತಲೆಯಾಡಿಸಿ ತನ್ನಪ್ಪ ಅಮ್ಮನಿಗೆ ತಿಳಿಸಿ ಆದಷ್ಟು ಬೇಗ ಮದುವೆಯಾಗುತ್ತೇನೆಂದು ಆಣೆ ಮಾಡಿದ್ದು ನಿಮಗೆ ನೆನಪಿರಬೇಕು. ನಾನು ಅವನನ್ನು ಮತ್ತೊಮ್ಮೆ ನಂಬಿದೆ. ಇರಲಿ…ಆಗ ನೀವು ಮಗು ಬೇಡವೆಂದರೆ ನನಗೆ ಕೊಡಿ. ಮಕ್ಕಳಿಲ್ಲದ ನಾವೇ ಸಾಕಿಕೊಳ್ಳುತ್ತೇವೆಂದು ತಮಾಷೆಯಾಗಿ ಹೇಳಿದ್ದೀರಿ. ಈಗ ದಯಮಾಡಿ ನನ್ನ ಮಗುವನ್ನು ದತ್ತು ತೆಗೆದುಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ. ನನ್ನದು ಕುಂತಿಯ ಪಾಡಾಗಿದೆ. ಶ್ರೀಧರನ ನಾಪತ್ತೆಯಲ್ಲಿ, ಈ ಸಮಾಜದಲ್ಲಿ ಅಪ್ಪನಿಲ್ಲದ ಮಗುವನ್ನು ಸಾಕಲಾರೆ. ತಾಯಿ ಹೃದಯದ ನೀವು ಮಗುವನ್ನು ನಿರಾಕರಿಸಲಾರಿರೀ ಎಂದು ನಂಬುತ್ತೇನೆ. 

ಆಸ್ಪತ್ರೆಯಲ್ಲಿ ಡಿಸ್ಚಾರ್ಜ್ ಮಾಡಲು ಡಾಕ್ಟರ್ ಸಿದ್ಧವಿದ್ದರೂ ಮುಂದೇನು ಮಾಡಬೇಕೆಂದು ತೋಚದೆ ಇಲ್ಲೇ ಉಳಿದಿದ್ದೇನೆ. ಕೊನೆಗೆ, ಬಹಳ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಮುಂದಿನ ಮೂರುದಿನಗಳಲ್ಲಿ ತಾವುಗಳು ಬಂದು ಮಗುವನ್ನು ಕರೆದುಕೊಂಡು ಹೋಗುವುದು. ನಿಮ್ಮ ಋಣವನ್ನು ಮುಂದಿನ ಜನ್ಮವೆನ್ನುವುದು ಇದ್ದರೆ ಖಂಡಿತ ತೀರಿಸುತ್ತೇನೆ. 

ನಿಮ್ಮ ನಿರೀಕ್ಷೆಯಲ್ಲಿ, 

ಇಂತಿ ನಿಮ್ಮ ಪ್ರೀತಿಯ ತಂಗಿ  

ರೇಣುಕಾಂಬ

ಪತ್ರವನ್ನು ಓದುತ್ತಲೇ ನಿಂತ ನೆಲವೇ ಕುಸಿದಂತಾಯಿತು. ಹಾಗಾದರೆ ನಾನು ರೇಣುಕಾಂಬರ ಮಗನೇ? ಅಪ್ಪನ ಶೀಲವನ್ನು ಸಂಶಯಿಸಿ ಸತ್ಯಶೋಧನೆಗೆ ಹೊರಟವನಿಗೆ, ಕಲ್ಪನೆಗೂ ಸಿಗದ ನನ್ನ ಅಸ್ತಿತ್ವದ ಪ್ರಶ್ನೆಯೇ ಧುತ್ತೆಂದು ನಿಂತು ನಡುಗಿ ಹೋದೆ. ಅಮ್ಮನನ್ನು ಕೇಳುವುದೇ? ಇಲ್ಲಾ ಪತ್ರವನ್ನು ಹರಿದು ಬಿಸಾಡಿದರೆ? ಹಾಗೆ ಮಾಡಿದರೆ ಸತ್ಯ ತಿಳಿದಂತಾಗುವುದೇ? ಒಂದು ಸಮಸ್ಯೆಯನ್ನು ಬಿಡಿಸಲು ಹೋಗಿ ಮತ್ತೊಂದು ಸುಳಿಯಲ್ಲಿ ಸಿಕ್ಕಂತಾಯಿತು.

ಯಲೇಕಾತ್ಯನಹಳ್ಳಿಗೆ ಬಂದು ಸರ್ಕಾರಿ ಪ್ರೌಢಶಾಲೆಯ ಮುಂದೆ ಅಮ್ಮನ ಜೊತೆ ನಿಂತಿದ್ದೆ. 

‘ಅಮ್ಮ…ಅಪ್ಪ ಅಷ್ಟು ಕಷ್ಟಪಟ್ಟಿದ್ದಕ್ಕೆ ಊರಲ್ಲಿ ಹೈಸ್ಕೂಲ್ ಬಂತಾ?’ ಎಂದು ಕೇಳಿದಾಗ, ‘ಹುನಪ್ಪ ಬಂತು. ನಿಮ್ಮ ತಾತನ ಹೆಸರಲ್ಲಿದ್ದ ಜಾಗವನ್ನೇ ನಿಮ್ಮಪ್ಪ ಸ್ಕೂಲ್ಗೆಂತ ಕೊಟ್ಟಿದ್ರು. ಆದ್ರೆ ಬಿಲ್ಡಿಂಗ್ ಕೆಲಸ ಮುಗೀತು ಅನ್ನೋವಾಗ್ಗೆ ತೀರ್ಕೊಂಡ್ರು. ಅವ್ರು ಕಟ್ಟಿಸಿದ ಶಾಲೇನಾ ಅವ್ರೇ ನೋಡ್ಲಿಲ್ಲ’ ಅಂದಿದ್ದಳು.

ಶಾಲೆಯ ಮುಖ್ಯದ್ವಾರದಲ್ಲಿ ಒಂದಷ್ಟು ಫೋಟೊ ಫ್ರೇಮ್ ಗಳನ್ನು ತೂಗಿ ಹಾಕಿದ್ದರು. ಅದರಲ್ಲಿ ಕರಿಕೋಟು ತೊಟ್ಟು ಕುಳಿತ ಭಂಗಿಯಲ್ಲಿದ್ದ ತಾತನ ಫೋಟೊ ಇತ್ತು. ಅದರ ಪಕ್ಕದಲ್ಲಿ ಅಪ್ಪನ ಟ್ರಂಕಲ್ಲಿ ಕಂಡ ಅಪ್ಪ, ರೇಣುಕಾಂಬರು ಮನವಿ ಪತ್ರ ಅರ್ಪಿಸುವ ಫೋಟೊವನ್ನು ದೊಡ್ಡದು ಮಾಡಿ ಹಾಕಿದ್ದರು. ಅದನ್ನು ನೋಡುತ್ತ ನನ್ನ ಕಣ್ಣಾಲಿಗಳು ತುಂಬಿಕೊಂಡವು. ಅಮ್ಮ ನನ್ನ ಬೆನ್ನನ್ನು ಸವರುತ್ತಿದ್ದಳು. 

‍ಲೇಖಕರು Admin

2 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading