-ಗೊರೂರು ಶಿವೇಶ್
ಗ್ರಾಮ ಭಾರತದ ಅಧಃ ಪತನದ ಕಥೆಯ ‘ದೊಡ್ಡ ಹಟ್ಟಿ ಬೋರೇಗೌಡ’ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ
2021 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ರಘು ಕೆ ಎಂ ನಿರ್ದೇಶನದ ದೊಡ್ಡ ಹಟ್ಟಿ ಬೋರೇಗೌಡ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಜೊತೆಗೆ ಅತ್ಯುತ್ತಮ ಚಿತ್ರಕಥೆ ಮತ್ತು ನಿರ್ದೇಶನದ ಪ್ರಶಸ್ತಿ ಕೂಡ ದೊರೆತಿದೆ. ಚಾರ್ಲಿ 777 ದ್ವಿತೀಯ ಅತ್ಯುತ್ತಮ ಚಿತ್ರದ ಜೊತೆ ಚಿತ್ರದ ನಾಯಕ ರಕ್ಷಿತ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಂದಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಗಡಿ ಪ್ರದೇಶವಾದ ಕೇರಳಾಪುರ ಕಾಳೇನಹಳ್ಳಿ ಸುತ್ತಮುತ್ತ ಚಿತ್ರಣವಾದ ದೊಡ್ಡಟ್ಟಿ ಬೋರೇಗೌಡ ಚಿತ್ರ, ನನ್ನ ಗಮನ ಸೆಳೆಯಲು ಕಾರಣ ನನ್ನ ತಾಯಿಯ ಬಂಧುಗಳೆಲ್ಲ ಆ ಪ್ರದೇಶದಲ್ಲಿ ವಾಸವಿದ್ದಾರೆ. ಅಲ್ಲಿನ ಪ್ರದೇಶ, ಪ್ರಾದೇಶಿಕ ಭಾಷೆಯನ್ನು ನಿರ್ದೇಶಕರು ಚೆನ್ನಾಗಿ ಬಳಸಿಕೊಂಡಿದ್ದಾರೆ. ನಮ್ಮ ಊರಿಗಿಂತ ಕೇವಲ 30 ಕಿಲೋಮೀಟರ್ ದೂರದಲ್ಲಿರುವ ಈ ಪ್ರದೇಶದ ಭಾಷಾ ವಿಭಿನ್ನತೆ ಅಚ್ಚರಿ ಮೂಡಿಸಿದೆ. ರಾಮನಾಥಪುರ ಹೋಬಳಿ ಮತ್ತು ಕೆ ಆರ್ ನಗರ ತಾಲೂಕಿನಲ್ಲಿ ಈ ರೀತಿಯ ಭಾಷೆಯನ್ನು ಕೇಳಬಹುದು.
ಚಿತ್ರದ ಕಥೆ ತುಂಬಾ ಸರಳ. ಆಶ್ರಯ ಮನೆ ಒಂದನ್ನು ಪಡೆಯಲು ಒಂದು ಕಾಲದಲ್ಲಿ ಚೆನ್ನಾಗಿ ಬದುಕಿ ಬಾಳಿದ ದೊಡ್ಡ ಹಟ್ಟಿ ಬೋರೇಗೌಡ ಪಡುವ ಪಡಿಪಾಟಲು ಚಿತ್ರದ ಕಥೆ. ಬೇರು ಮಟ್ಟದಲ್ಲಿ ಬೇರೂರಿರುವ ಭ್ರಷ್ಟಾಚಾರ ಹಾಗೂ ಆಧುನಿಕ ಗ್ರಾಮೀಣ ಕೌಟುಂಬಿಕ ವ್ಯವಸ್ಥೆ ಸಹಜವಾಗಿ ಚಿತ್ರದಲ್ಲಿ ಮೂಡಿ ಬಂದಿದೆ. ಅದಕ್ಕಿಂತ ಮುಖ್ಯವಾಗಿ ಇಂದು ಗ್ರಾಮ ಜೀವನದ ಭಾಗವೇ ಆಗಿ ಹೋಗಿರುವ ಮತ್ತು ಅಧಃಪತನಕ್ಕೆ ಕಾರಣವಾಗಿರುವ ಮದ್ಯಪಾನ ಮತ್ತು ಜೂಜು ಕಥಾಹಂದರದಲ್ಲಿ ಸೇರಿ ಹೋಗಿದೆ.

ಸಿನಿಮಾದ ಕಥಾ ನಿರೂಪಣೆ ತಿಥಿ ಚಿತ್ರದ ಮಾದರಿಯಲ್ಲಿದೆ. ಆದರೆ ತಿಥಿ ಚಿತ್ರಕ್ಕೂ ಈ ಚಿತ್ರಕ್ಕೂ ಒಂದು ವ್ಯತ್ಯಾಸ ಎಂದರೆ ತಿಥಿ ಚಿತ್ರ ಊರಿನ ಪಕ್ಕ ಹರಿಯುವ ನದಿಯ ಹಾಗೆ ಸಹಜವಾಗಿ ಹರಿದರೆ ಅಣೆಕಟ್ಟು ಕಟ್ಟಿ ಆ ನೀರನ್ನು ತಮ್ಮ ಇಷ್ಟಕ್ಕನುಸಾರವಾಗಿ ಬೇರೆಡೆಗೆ ಹರಿಸುವಂತೆ ಈ ಚಿತ್ರದ ಅಂತ್ಯದಲ್ಲಿ ನಿರ್ದೇಶಕರು ಪ್ರವೇಶಿಸಿ ಅಸಹಜ ಕ್ಲೈಮಾಕ್ಸ್ ತಂದಿದ್ದಾರೆ ಎನಿಸದಿರದು. ಉಳಿದಂತೆ ನಿರ್ದೇಶಕ ಕೆ ಎಂ ರಘು ಪ್ರಯತ್ನ ಶ್ಲಾಘನೀಯ. ಇದೇ ನಿರ್ದೇಶಕರು ಪರಸಂಗ, ಗಡ್ಡಪ್ಪನ ಸರ್ಕಲ್ ನಿರ್ದೇಶಿಸಿದ್ದಾರೆ. ಕಡಿಮೆ ಬಜೆಟ್ ನ ಇಂಥ ಚಿತ್ರಗಳು ಇತ್ತೀಚೆಗೆ ಹೆಚ್ಚು ಗಮನ ಸೆಳೆಯುತ್ತಿವೆ. ಬಹುತೇಕ ಇಂತಹ ಚಿತ್ರಗಳ ನಿರ್ದೇಶಕರು ನಿರೂಪಣಾ ತಂತ್ರವಾಗಿ ತಿಥಿ ಚಿತ್ರವನ್ನು ಮಾದರಿಯಾಗಿ ಬಳಸಿದರೂ ಕಥೆ ಎಷ್ಟು ಮುಖ್ಯ ಎಂಬುದಕ್ಕೆ ಕೂಡ ತಿಥಿ ಚಿತ್ರ ಮಾದರಿಯಾಗಿದೆ.
ಚಿತ್ರ ವೀಕ್ಷಣೆಗಾಗಿ ಯೂಟ್ಯೂಬ್ ನಲ್ಲಿ ಲಭ್ಯವಿದೆ.






ಕಾ.ಮಹಾಂತೇಶ ರ ರಾಜುತಾಳಿಕೋಟೆ ಅವರ ಬಗೆಗಿನ ನುಡಿ ನಮನ ಮನಮಿಡಿತ್ತದೆ.