ರಾಜೇಂದ್ರ ಪ್ರಸಾದ್
ಕೆಲದಿನಗಳ ಹಿಂದೆ ಬರೆದಿದ್ದ ಈ ಕವಿತೆ ನನ್ನ ಉಯಿಲು ಕೂಡ…
‘ಗೌರಿ ಲಂಕೇಶ್’ ಅವರ ಹತ್ಯೆ ಈ ಕವಿತೆಯನ್ನು ನೆನೆಪಿಸಿತು.
ಎದೆಯೊಳಗೆ ಮಡುಗಟ್ಟಿದ ದುಃಖ ದುಗುಡ ಇನ್ನು ಮಂಜಿನಾಗೆ ಇವೆ.
ದುರಿತಕಾಲದ ಕವಿಯೊಬ್ಬನ ಉಯಿಲು
ನನ್ನ ಹತ್ಯೆಯಾದ ದಿನ
ಒಂದಷ್ಟು ಜನ ಭೋಳೆ ದೇಶಭಕ್ತರನ್ನು
ಹುಡುಕಿ, ಬಿಡಬೇಡಿ ಹುಡುಕಿ
ಒಂದಷ್ಟು ಗುಲಾಬಿ ಹೂಗಳ ದಂಡೆಯನ್ನು
ಕೈಗಿತ್ತು , ನಿಟ್ಟುಸಿರಿನೊಂದಿಗೆ ವಾಪಸಾಗಿ
ಯಾಕಂದರೆ ಮತ್ತಾರು ನನ್ನ ಕೊಲ್ಲಲಾರರು.
ಮಹಾದೇವಿಯಕ್ಕನ ಪ್ರೇಮಿಯಾದ ನನಗೆ
ಚೆನ್ನಮಲ್ಲನೇನು ಬಂದು ಬಾಣ ಬಿಡಲಾರ!
ಅಂಗುಲದಷ್ಟು ಜಾಗ ಆಣೆಯಷ್ಟು ಹಣವಿಲ್ಲದವನಿಗೆ
ಕಿರುಬೆರಳಿನ ಉಗುರಿನಷ್ಟೂ ದಾಯಾದಿ ಕಲಹವಿಲ್ಲ
ಕಪಟವಿಲ್ಲ, ಸಂನ್ಯಾಸವಿಲ್ಲ ,
ಸಾವಿರ ಸಂಖ್ಯೆಯ ಪುಸ್ತಕಗಳ ರಾಶಿ ಬಿಟ್ಟು
ನಗನಾಣ್ಯ ವಜ್ರವೈಢೂರ್ಯಗಳಿಲ್ಲ
ಅಷ್ಟೇಕೇ
ಊಟ ಬಲ್ಲವನಾಗಿ ರೋಗವೂವಿಲ್ಲ
ಮಾತು ಬಲ್ಲವನಾಗಿ ಜಗಳವೂವಿಲ್ಲ.
ಹೀಗದ್ದ ಮೇಲೂ ಹತ್ಯೆಯಾಗುವುದಾದರೆ
ಹಳದಿ ಮೆದುಳ ಹೇಡಿಗಳಿಂದಲೇ ಆಗಬೇಕು.
ಅದು ಅವರೇ ಆಗಿರಬೇಕು, ನಿಶ್ಚಯವಾಗಿ!
ನನ್ನಂತವರ ಸಾವಿರ ಸಾವಾಗಲಿ
ಅಂಜಿಕೆಗೆ ಆಸ್ಪದವೇ ಬೇಡ
ಒಂದೊಂದು ಹೂವೂ ಒಂದೊಂದು ನಿಟ್ಟುಸಿರೂ
ಅವರ ಮನೆಯ ತುಂಬಲಿ
ಅವರ ಮಕ್ಕಳ ಕನಸುಗಳೊಳಗೆ ಹೆಪ್ಪುಗಟ್ಟಲಿ
ಭಕ್ತಿಯೊಳಗೆ ಪ್ರೇಮವ ಚಿಗುರಿಸಲಿ.
ನನ್ನ ಹತ್ಯೆಯಾದ ದಿನ
ಎಲ್ಲ ಭೋಳೆ ದೇಶಭಕ್ತರ ಮನೆಯ ಮುಂದೆ
ದೀಪನವನಿಟ್ಟು ಬನ್ನಿ
ಸಾವಿನಲೂ ಒಂದಷ್ಟು ಬೆಳಕಾಗಿ
ಪ್ರೀತಿಯ ಪಾಠ ಹೇಳಿ ಬರುತ್ತೇನೆ. ~
'ಗೌರಿ ಲಂಕೇಶ್' ಅವರ ಹತ್ಯೆ ಈ ಕವಿತೆಯನ್ನು ನೆನೆಪಿಸಿತು
ನಿಮಗೆ ಇವೂ ಇಷ್ಟವಾಗಬಹುದು…





0 Comments