ಗೌರಿ: ಪ್ರೇಮ-ಪ್ರಣಯ-ಪರಿಣಯ

ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್ ಅವರ ಜೀವನ ಕಥೆ, “” 

ಬಿ ಎಂ ಬಶೀರ್ ಮೂಲಕ 

ಪಿ.ಯು.ಸಿ.ಯಲ್ಲಿ ಓದುತ್ತಿದ್ದ ನಮ್ಮ ಮಗಳು ಗೌರಿ ಯಾರೋ ಹುಡುಗನೊಂದಿಗೆ ಓಡಾಡುತ್ತಿದ್ದಾಳೆ ಅಂತ ನನ್ನ ಸ್ನೇಹಿತೆ ರಾಣಿ ನನಗೆ ಹೇಳಿದಳು. ಕಾಲೇಜಿನಲ್ಲಿ ಗೌರಿಗಿಂತ ಎರಡು ವರ್ಷ ಸೀನಿಯರ್ ಆಗಿದ್ದ ಅವನ ಹೆಸರು ಚಿದಾನಂದ ರಾಜಘಟ್ಟ. ಒಮ್ಮೆ ಆತ ಗಾಂಧಿಬಜಾರ್ ನಲ್ಲಿರುವ ಗಣೇಶ ಬೇಕರಿಗೆ ಬಂದಿದ್ದಾಗ ಗೌರಿ ಆತನನ್ನು ಪರಿಚಯಿಸಿದ್ದಳು. ಆತ ಕಪ್ಪಗೆ, ಸಣ್ಣಗೆ, ಎತ್ತರಕ್ಕೆ ಇದ್ದ. ನವಿಲಿನಂತಿದ್ದ ನನ್ನ ಮಗಳು ಕೆಂಬೂತದಂತಿರುವ ಈತನನ್ನು ಹೇಗೆ ಇಷ್ಟಪಟ್ಟಳು ಎಂದು ನನಗೆ ಅಚ್ಚರಿ ಆಯಿತು.

ಅದೂ ಅಲ್ಲದೆ ಆಗ ಅವರಿಬ್ಬರೂ ಇನ್ನೂ ಚಿಕ್ಕ ವಯಸ್ಸಿನವರು. ನೆಟ್ಟಗೆ ಓದಬೇಕಾದ ವಯಸ್ಸು. ಇದರ ಬಗ್ಗೆ ಲಂಕೇಶರಿಗೆ ಹೇಳಿದೆ. ಅವರು “ಆ ಹುಡುಗನನ್ನು ಕರೆಸು, ನಾನು ಅವನೊಂದಿಗೆ ಮಾತನಾಡುತ್ತೇನೆ” ಅಂದರು. ಆತ ಮನೆಗೆ ಬಂದಾಗ ಅವನಿಗೆ ಬುದ್ಧಿಹೇಳಿದರು. ವಿದ್ಯಾಭ್ಯಾಸ ಮುಖ್ಯ ಎಂದೆಲ್ಲ ವಿವರಿಸಿದರು. ಅವನು ಸುಮ್ಮನೆ ಕೇಳಿಸಿಕೊಂಡು ಕೂತಿದ್ದು ಹೋದ. ಗೌರಿ ಕೂಡ ಇನ್ನು ಮುಂದೆ ಅವನನ್ನು ಮೀಟ್ ಮಾಡುವುದಿಲ್ಲ, ಓದಿನ ಕಡೆ ಗಮನ ಕೊಡುತ್ತೇನೆ ಅಂದಳು. ಆಗ ನಾನು ಸುಮ್ಮನಾದೆ. ಒಂದು ವರ್ಷದ ನಂತರ ಗೌರಿ ಕಾಲೇಜಿಗೆ ಚಕ್ಕರ್ ಹೊಡೆದು ಚಿದಾನಂದನೊಂದಿಗೆ ಯಾವುದೋ ಸಿನಿಮಾಕ್ಕೆ ಹೋಗಿದ್ದಾಗ ಮತ್ತೆ ಅದೇ ರಾಣಿ ಕೈಯಲ್ಲಿ ಸಿಕ್ಕಿಹಾಕಿಕೊಂಡಳು.

ಈ ಮಧ್ಯೆ ಗೌರಿಗೆ ಇಬ್ಬರು ಡಾಕ್ಟರ್ ವರಗಳಿಂದ ಪ್ರಪೋಸಲ್ ಬಂದವು. ಇಬ್ಬರೂ ನಮ್ಮ ಪರಿಚಿತರೇ. ಒಬ್ಬ ಇದ್ದಕ್ಕಿದ್ದಂತೆ ಹೇಳದೆ ಕೇಳದೆ ನಮ್ಮ ಮನೆಗೆ ಬಂದೇಬಿಟ್ಟ. ಗೌರಿ ತನ್ನ ರೂಮಿನ ಬಾಗಿಲು ಹಾಕಿಕೊಂಡು ಕೂತವಳು ಆತನನ್ನು ನೋಡಲು ಹೊರಗೆ ಬರಲೇ ಇಲ್ಲ. ಅದಾದ ಕೆಲವು ದಿನಗಳ ನಂತರ ಅವಳು ಯಾರಿಗೂ ಹೇಳದೇ ಕೇಳದೇ ಬ್ಯೂಟಿ ಪಾರ್ಲರ್ ಗೆ ಹೋಗಿ ಸೊಂಟದ ತನಕ ಇದ್ದ ತನ್ನ ತಲೆಕೂದಲನ್ನು ಕತ್ತರಿಸಿ ಬಾಬ್ ಕಟ್ ಮಾಡಿಸಿಕೊಂಡು ಬಂದಳು. ಅವಳ ಪ್ರಕಾರ ಆ ಹುಡುಗನ ಮನೆಯವರು ಸಂಪ್ರದಾಯಸ್ಥರಾಗಿದ್ದರಿಂದ ಬಾಬ್ ಕಟ್ ಹುಡುಗಿಯನ್ನು ಒಪ್ಪುವುದಿಲ್ಲ ಎಂದಾಗಿತ್ತು. ಅದ ಸರಿಯೂ ಆಯಿತು. ಆಕೆಯ ಹೊಸ ಅವತಾರವನ್ನು ನೋಡಿದ ನನ್ನ ತಮ್ಮ ಶಿವು ಗೌರಿಗೆ ಎರಡು ಬಿಗಿದ. ಆಕೆ ಸುಮ್ಮನೇ ಕೂತಿದ್ದಳು.

ಇನ್ನೊಬ್ಬ ಡಾಕ್ಟರ್ ಗೋಲ್ಡ್ ಮೆಡಲ್ ತೆಗೆದುಕೊಂಡಿದ್ದ. ಅವನೂ ಒಂದು ದಿನ ತನ್ನ ತಂದೆಯೊಂದಿಗೆ ನಮ್ಮ ಮನೆಗೆ ಬಂದ. ಗೌರಿಗೆ ಅದೆಷ್ಟು ಕೋಪ ಬಂದಿತ್ತೆಂದರೆ ಆಕೆ ಮನೆಯಲ್ಲಿ ತೊಟ್ಟಿದ್ದ ಬಟ್ಟೆಯಲ್ಲೇ ಅವರ ಮುಂದೆ ಕೂತಳು. ಹುಡುಗ ಸ್ವಲ್ಪ ಕುಳ್ಳ. ಹೊಟ್ಟೆ ಕೂಡ ಇತ್ತು. ಆತ ಹೋದ ನಂತರ “ಹುಡುಗಿ ಏನಂದಳು” ಎಂದು ಎರಡು ಪತ್ರ ಬರೆದ. ಗೌರಿ ಸುತಾರಾಂ ಒಪ್ಪಲಿಲ್ಲ.
“ನನಗೆ ಈಗಲೇ ಮದುವೆ ಬೇಡ. ನಾನು ಓದುತ್ತೇನೆ” ಎಂದು ಗೌರಿ ಹಟಹಿಡಿದಳು. ಆಗ ಲಂಕೇಶರು ತಮ್ಮ ‘ಎಲ್ಲಿಂದಲೋ ಬಂದವರು’ ಚಿತ್ರದಲ್ಲಿ ತೊಡಗಿದ್ದರಿಂದ ಇದೆಲ್ಲದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ “ಅಮ್ಮನಿಗೆ ಬೇಜಾರಾಗದಂತೆ ನಡೆದುಕೋ” ಎಂದಷ್ಟೇ ತಮ್ಮ ಮಗಳಿಗೆ ಹೇಳಿ ಶೂಟಿಂಗ್ ಜಾಗದಿಂದಲೇ ಪತ್ರ ಬರೆದಿದ್ದರು.

ನನಗೂ ನನ್ನ ಮಕ್ಕಳು ಚೆನ್ನಾಗಿ ಓದಬೇಕು, ಅವರೆಲ್ಲ ಡಾಕ್ಟ್ರರ್, ಇಂಜಿನಿಯರ್ ಆಗಬೇಕಂತ ಆಸೆ. ನಮ್ಮ ಮಕ್ಕಳು ಯಾರೂ ರಾಂಕ್ ಸ್ಟುಡೆಂಟ್ಸ್ ಅಲ್ಲ. ಆದರೆ ಬುದ್ಧಿವಂತರು. ಯಾರೂ ಹಗಲು ರಾತ್ರಿ ಓದುತ್ತಿರಲಿಲ್ಲ. ಆದರೂ ಒಳ್ಳೆಯ ಮಾರ್ಕ್ಸ್ ಅನ್ನು ಪಡೆಯುತ್ತಿದ್ದರು. ಅಜಿತ್ (ಇಂದಿನ ಇಂದ್ರಜಿತ್ ಲಂಕೇಶ್) ಅಂತೂ ಬರೀ ಕ್ರಿಕೆಟ್ ನಲ್ಲೇ ಕಾಲ ಕಳೆಯುತ್ತಿದ್ದ. ಆದರೂ ಎಸ್.ಎಸ್.ಎಲ್.ಸಿನಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸಾದ.
ನಾವಿನ್ನೂ ಗಾಂಧಿಬಜಾರಿನ ಮನೆಯಲ್ಲಿ ಇದ್ದಾಗಲೇ ನಮ್ಮ ದೊಡ್ಡ ಮಗಳು ಗೌರಿ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬೆಂಗಳೂರು ವಿಶ್ವವಿದ್ಯಾಲಯ ಆಗತಾನೆ ಪ್ರಾರಂಭಿಸಿದ್ದ ಬಿಎ ಪತ್ರಿಕೋದ್ಯಮ ಕೋರ್ಸ್ ಸೇರಿದಳು. ಅದೇ ಹೊತ್ತಿಗೆ ಚಿದಾನಂದ ರಾಜಘಟ್ಟ ಕೂಡ ಡಿಗ್ರಿ ಮುಗಿಸಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಗೆ ಸೇರಿದ್ದ. ಅವರಿಬ್ಬರ ಸ್ನೇಹ ಮುಂದುವರೆದಿತ್ತು. ಗೌರಿ ಮತ್ತು ಚಿದು ಒಬ್ಬರನ್ನೊಬ್ಬರು ಬಿಟ್ಟು ಇರುವುದಿಲ್ಲ ಎಂದು ನನಗೆ ಖಾತರಿ ಆಗಿ ಅದರ ಬಗ್ಗೆ ಚಕಾರವೆತ್ತದೆ ಸುಮ್ಮನಾದೆ.ಚಿದು ನಮ್ಮ ಮನೆಯವರಿಗೆ ಹತ್ತಿರವಾದ. ಟೆನ್ನಿಸ್ ಅಥವಾ ಕ್ರಿಕೆಟ್ ಟೆಸ್ಟ್ ಮ್ಯಾಚ್ಗಳಿದ್ದರಂತೂ ಲಂಕೇಶರು, ಅಜಿತು ಮತ್ತು ಚಿದು ದಿನಗಟ್ಟಲೆ ಆಗಿನ ಬ್ಲಾಕ್ ಆಂಡ್ ವೈಟ್ ಟಿವಿ ಮುಂದೆ ಕೂತು ಆಟವನ್ನು ನೋಡುತ್ತಿದ್ದರು.

ಡಿಗ್ರಿ ಮುಗಿಸಿದ ನಂತರ ಗೌರಿ ದೆಹಲಿಯಲ್ಲಿರುವ ಐಐಎಂಸಿ ಎಂಬ ಸಂಸ್ಥೆಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಓದಲು ಒಬ್ಬಳೇ ಹೋದಳು. ನಮ್ಮ ಮಗುವೊಂದು ಪ್ರಥಮ ಬಾರಿಗೆ ಮನೆ ಬಿಟ್ಟು ಅಷ್ಟು ದೂರ, ಅಷ್ಟು ದಿನ ಒಬ್ಬಳೇ ಹೋದದ್ದು ಅದೇ ಮೊದಲು. ಆಕೆಯನ್ನು ಬೆಂಗಳೂರಿನ ನಿಲ್ದಾಣದಲ್ಲಿ ಟ್ರೈನ್ ಹತ್ತಿಸಿದಾಗ ನನ್ನ ಕಣ್ಣಲ್ಲಿ ಸಹಜವಾಗಿಯೇ ಕಣ್ಣೀರು.

ಲಂಕೇಶರಿಗೂ ಒಂದು ತರಹದ ಆತಂಕ. ಗೌರಿ ಮನೆಯಲ್ಲಿದ್ದಾಗ ಆಕೆಯ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳದಿದ್ದ ಅವರು ಆಕೆ ದೆಹಲಿಯಲ್ಲಿದ್ದಾಗ ಪ್ರತಿದಿನ ಟಿವಿಯಲ್ಲಿ ನ್ಯೂಸ್ ನೋಡುವಾಗ ದೆಹಲಿಯ ಹವಾಮಾನ ಹೇಗಿದೆ ಎಂದು ವಿಶೇಷವಾಗಿ ಗಮನವಿಟ್ಟು ನೋಡುತ್ತಿದ್ದರು; ತಮ್ಮ ಮಗಳು ದೆಹಲಿಯ ಶೆಖೆಯಿಂದಲೋ, ಚಳಿಯಿಂದಲೋ ಕಷ್ಟ ಅನುಭವಿಸುವುದು ಬೇಡ ಎಂಬ ಕಾಳಜಿಯಿಂದ. ಆಕೆ ದೆಹಲಿಯಲ್ಲಿದ್ದಾಗ ಚಿದಾನಂದ ಬೆಂಗಳೂರಿನಲ್ಲಿ ದಿ ಟೆಲಿಗ್ರಾಫ್ ಪತ್ರಿಕೆಯ ವರದಿಗಾರನಾಗಿದ್ದ.ನಾನು ಬಯಸಿದಂತೆ ನನ್ನ ಮೊದಲ ಮಗಳು ಡಾಕ್ಟರೂ ಆಗಲಿಲ್ಲ, ಇಂಜನಿಯರ್ ಕೂಡ ಆಗಲಿಲ್ಲ. ಬದಲಾಗಿ ಆಕೆ ಇಂಗ್ಲಿಷ್ ಪತ್ರಿಕೋದ್ಯಮ ಸೇರುವುದು ಗ್ಯಾರಂಟಿ ಆಗಿತ್ತು.
ದೆಹಲಿಯಲ್ಲಿ ಕೋರ್ಸ್ ಮುಗಿಸಿಕೊಂಡು ಒಂದು ವರ್ಷದ ನಂತರ ಬೆಂಗಳೂರಿಗೆ ವಾಪಸ್ ಬಂದ ಗೌರಿ ಆಗತಾನೆ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಗಾರ್ತಿಯಾಗಿ ಸೇರಿಕೊಂಡಳು. ಚಿದಾನಂದ ಕೂಡ ಪತ್ರಿಕೋಧ್ಯಮದಲ್ಲಿ ಹೆಸರು ಗಳಿಸಲಾರಂಭಿಸಿದ್ದ. “ಇನ್ನು ನೀವಿಬ್ಬರೂ ಹೀಗೆ ಓಡಾಡಿದ್ದು ಸಾಕು. ಮದುವೆ ಮಾಡಿಕೊಳ್ಳಿ. ಇಲ್ಲವೆಂದರೆ ಒಟ್ಟಿಗೆ ಓಡಾಡುವುದನ್ನು ನಿಲ್ಲಿಸಿ” ಎಂದು ನಾನು ಹಟ ಮಾಡಿದೆ. ಹೇಗಿದ್ದರೂ ನನ್ನ ಮಗಳು ಓದಿದ್ದಾಳೆ, ಈಗ ಕೆಲಸ ಪಡೆದು ತನ್ನ ಕಾಲ ಮೇಲೆ ನಿಂತಿದ್ದಾಳೆ ಎಂಬ ವಿಶ್ವಾಸ ನನಗೆ ಬಂದಿತ್ತು.

ಒಂದು ದಿನ ಲಂಕೇಶರು ನಮ್ಮನ್ನೆಲ್ಲ ಎಂಜಿ ರಸ್ತೆಯಲ್ಲಿರುವ ಹೋಟೆಲ್ಲಿಗೆ ಊಟಕ್ಕೆಂದು ಕರೆದುಕೊಂಡು ಹೋಗಿದ್ದಾಗ ಗೌರಿ “ನಾನು ಮತ್ತು ಚಿದು ಮುಂದಿನ ತಿಂಗಳು ಮದುವೆ ಆಗುತ್ತೇವೆ. ನಮ್ಮಿಬ್ಬರ ಹೆಸರುಗಳನ್ನು ರಿಜಿಸ್ಟ್ರಾರ್ ಆಫೀಸಿನಲ್ಲಿ ನಮೂದಿಸಿ ಬಂದಿದ್ದೇವೆ” ಎಂದಳು. ಅದನ್ನು ಕೇಳಿ “ಇದೆಂತಹ ಮದುವೆ?” ಎಂದೆ ನಾನು. ಆದರೆ ಅದನ್ನು ಕೇಳಿ ಲಂಕೇಶರಿಗೆ ತುಂಬಾ ಸಂತೋಷವಾಯಿತು. ಯಾಕೆಂದರೆ ಗೌರಿ ಯಾವ ಸಂಪ್ರದಾಯ ಇತ್ಯಾದಿಗಳಿಲ್ಲದೆ ಸರಳವಾಗಿ ರಿಜಿಸ್ಟರ್ ಮದುವೆಯಾಗಲು ನಿಶ್ಚಯಿಸಿದ್ದಳು. ಆಕೆ “ನನ್ನ ಮದುವೆಗೆ ಖರ್ಚಾಗುವುದು ಕೇವಲ. ಹದಿನೈದು ರೂಪಾಯಿ ಐವತ್ತು ಪೈಸೆ” ಎಂದಾಗ ಲಂಕೇಶರು ಹೆಮ್ಮೆಯಿಂದ ನಕ್ಕಿದ್ದರು. ಯಾಕೆಂದರೆ ಅವರೂ ಇಂತಹ ಸರಳ ಮದುವೆಗಳಲ್ಲಿ ನಂಬಿಕೆ ಇಟ್ಟಿದ್ದವರು ಮತ್ತು ಪ್ರೋತ್ಸಾಹಿಸುತ್ತಿದ್ದವರು.ಒಂದು ದಿನ ಆಫೀಸಿನಿಂದ ಮನೆಗೆ ಬಂದ ಗೌರಿ “ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ರಿಜಿಸ್ಟ್ರಾರ್ ಆಫೀಸಿನಲ್ಲಿ ಮದುವೆ ಆಗುತ್ತಿದ್ದೇನೆ” ಎಂದಳು. ಆಕೆಯ ಅಪ್ಪ ಇನ್ನೂ ಆಫೀಸಿನಿಂದ ಬಂದಿರಲಿಲ್ಲವಾದ್ದರಿಂದ ಅವರ ಆಫೀಸಿಗೆ ಫೋನ್ ಮಾಡಿ ತನ್ನ ಅಪ್ಪನಿಗೆ ಹೇಳಿದಳು.

ಮಾರನೆಯ ದಿನ ಅಂಗಡಿಯನ್ನು ತೆರೆದ ನಂತರ, ಅದರ ಜವಾಬ್ದಾರಿಯನ್ನು ಶಾಂತಾಳಿಗೆ ವಹಿಸಿ ಲಂಕೇಶರೊಂದಿಗೆ ನಾನು ರಿಜಿಸ್ಟ್ರಾರ್ ಆಫೀಸಿಗೆ ಹೋದೆ. ಅಲ್ಲಿಗೆ ಗೌರಿ ಮತ್ತು ಚಿದು ಬಂದಿದ್ದರು. ಸ್ವಲ್ಪ ಹೊತ್ತಿನ ನಂತರ ಚಿದು ತಂದೆ ಡಾ. ರಾಜಣ್ಣ ಮತ್ತು ತಾಯಿ ಉಮಾ ಕೂಡ ಬಂದರು. ಅವರಿಬ್ಬರಿಗೆ ಈ ಕಾನೂನು ಮದುವೆ ಒಂದಿಷ್ಟೂ ಇಷ್ಟವಿರಲಿಲ್ಲ. ಅಷ್ಟೇ ಅಲ್ಲ, ನಮ್ಮ ಮಗಳಂತೆ ಚಿದು ತನ್ನ ಹೆತ್ತವರಿಗೆ ಮದುವೆ ಆಗುತ್ತಿರುವ ಬಗ್ಗೆ ಮುಂಚಿತವಾಗಿ ಹೇಳದೇ ಅದೇ ದಿನ ಬೆಳಗ್ಗೆ ಹೇಳಿ ರಿಜಿಸ್ಟರ್ ಕಚೇರಿಗೆ ಆತ ಬಂದಿದ್ದರಿಮದ ಸಹಜವಾಗಿಯೇ ಅವರು ತಳಮಳಗೊಂಡಿದ್ದರು.

ರಿಜಿಸ್ಟರ್ ಆಫೀಸಿನಲ್ಲಿ ಮದುವೆ ಮುಗಿದು ಎಲ್ಲರೂ ಹೊರಬಂದ ನಂತರ ಉಮಾ ಅವರು “ಇದೆಂತಹ ಮದುವೆ, ಸಂಪ್ರದಾಯವಾಗಿ ಮದುವೆ ಆಗಬೇಕು. ನಾವು ನಮ್ಮ ಸಂಬಂಧಿಕರನ್ನು, ಹತ್ತಿರದವರನ್ನು ಕರೆಯಬೇಕು” ಎಂದು ಹಟಹಿಡಿದರು. ಗೌರಿ ಅದಕ್ಕೆ ಒಪ್ಪಲಿಲ್ಲ. “ಸಂಪ್ರದಾಯದ ಹೆಸರಲ್ಲಿ ಹುಡುಗಿ ಮನೆಯವರಿಂದ ಗಂಡಿನ ಕಡೆಯವರು ಅನಗತ್ಯವಾಗಿ ಹಣ ವೆಚ್ಚ ಮಾಡಿಸುತ್ತಾರೆ. ನನಗೆ ಅದು ಬೇಕಿಲ್ಲ. ನನ್ನ ಅಪ್ಪ ಅಮ್ಮ ನನಗೆ ವಿದ್ಯೆ ಕೊಡಿಸಿದ್ದಾರೆ. ಅಷ್ಟೇ ಸಾಕು” ಎಂದಳು. ಲಂಕೇಶರು ಏನೂ ಹೇಳದೆ ಸಿಗರೇಟು ಸೇದುತ್ತಾ ನಿಂತಿದ್ದರು.

ಕೊನೆಗೆ ಗೌರಿಗೆ ಹಟ ಮಾಡಬೇಡ ಎಂದು ಹೇಳಿದ ನಾನು “ನಮ್ಮ ಮನೆಯಲ್ಲೇ ಸರಳವಾದ ಮದುವೆ ಕಾರ್ಯಕ್ರಮವನ್ನು ಇಟ್ಟುಕೊಳ್ಳೋಣ ಎರಡೂ ಕಡೆಯವರಿಂದ ಇಪ್ಪತ್ತು ಇಪ್ಪತ್ತೈದು ಜನರನ್ನು ಕರೆಯೋಣ” ಅಂದೆ. ಅದೂ ಲಂಕೇಶರು ಪ್ರತಿಪಾದಿಸುತ್ತಿದ್ದ ಸರಳ ಮದುವೆಯಂತಿದ್ದರಿಂದ ಅವರೂ ಒಪ್ಪಿದರು. ಅವಳ ಅಪ್ಪ ಒಪ್ಪಿದ ಮೇಲೆ ವಿಧಿ ಇಲ್ಲದೆ ಗೌರಿ ಸುಮ್ಮನಾದಳು.

ಇದಾದ ಐದಾರು ದಿನಗಳ ನಂತರ ಒಂದು ಭಾನುವಾರ ನಮ್ಮ ಮನೆಯಲ್ಲೇ ಒಂದು ಚಿಕ್ಕ ಕಾರ್ಯಕ್ರಮ ಇಟ್ಟುಕೊಂಡೆವು. ತುರಾತುರಿಯಲ್ಲಿ ನಾನು ಎಲ್ಲ ವ್ಯವಸ್ಥೆಯನ್ನು ಮಾಡಿ ಮುಗಿಸಿದೆ. ಅಪ್ಪಯ್ಯ, ಶಿವು, ವಿಮಲಾ ಶಿವಮೊಗ್ಗೆಯಿಂದ ಬಂದರು. ಲಂಕೇಶರ ಅಣ್ಣ ಶಿವರುದ್ರಪ್ಪ ಮತ್ತು ಅವರ ಮಕ್ಕಳು ಬಂದರು. ಚಿದು ಮನೆಕಡೆಯಿಂದ ಸುಮಾರು ಐವತ್ತು ಜನ ಬಂದರು. ಆದರೆ ಈ ಕಾರ್ಯಕ್ರಮಕ್ಕೆ ಗೌರಿಯಾಗಲಿ, ಚಿದು ಆಗಲಿ ತಮ್ಮ ಯಾವ ಸ್ನೇಹಿತರನ್ನೂ ಕರೆಯದೆ ಇಂತಹ ಸಂಪ್ರದಾಯ ಮದುವೆಯ ವಿರುದ್ಧ ತಮ್ಮ ಬಂಡಾಯವನ್ನು ಮುಂದುವರೆಸಿದರು. ನನ್ನ ತಮ್ಮ ಶಿವು ಗೌರಿಯನ್ನು ಧಾರೆ ಎರೆದು ಕೊಟ್ಟ.

ನಮ್ಮ ಮನೆಯ ಡೈನಿಂಗ್ ರೂಮಿನಲ್ಲಿ ಮದುವೆಯ ಶಾಸ್ತ್ರಗಳು ನಡೆಯುತ್ತಿದ್ದರೆ ಲಂಕೇಶರು ಎಂದಿನಂತೆ ಎಲ್ಲವನ್ನೂ ತಮ್ಮ ಸ್ಟಡಿ ರೂಮಿನಲ್ಲಿ ಕೂತು ನೋಡುತ್ತಿದ್ದರು. ಕೊನೆಗೆ “ಗಂಡು ಹೆಣ್ಣಿನ ಮೇಲೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿ ಬನ್ನಿ” ಎಂದು ಯಾರೋ ಲಂಕೇಶರನ್ನು ಕರೆದಾಗ ಅವರು “ಅದೆಲ್ಲ ಬೇಡ. ನನ್ನ ಆಶೀರ್ವಾದ ಸದಾ ನನ್ನ ಮಗಳಿಗೆ ಇದ್ದೇ ಇರುತ್ತದೆ” ಎಂದರು. ಆದರೆ ಇತರರೂ ಒತ್ತಾಯ ಮಾಡಿದಾಗ ಲಂಕೇಶರು ಕೆಳಗೆ ಬಂದು ಮಗಳು ಮತ್ತು ಅಳಿಯನ ಮೇಲೆ ಅಕ್ಷತೆ ಹಾಕಿ ಇಬ್ಬರನ್ನೂ ಹಾರೈಸಿದರು.
ಮದುವೆಯಾದ ನಂತರ ಗೌರಿ ಮತ್ತು ಚಿದು ನಮ್ಮ ಮನೆಯ ಹತ್ತಿರವೇ ಬಾಡಿಗೆಮನೆ ಹಿಡಿದಿದ್ದರು. ಇದರ ಬಗ್ಗೆ ಚಿದುನ ಅಪ್ಪ ಮತ್ತು ಅಮ್ಮನಿಗೆ ಬೇಸರವಾಗಿದ್ದರೂ ತಾನು ತನ್ನ ಅಪ್ಪ-ಅಮ್ಮ-ತಂಗಿ-ತಮ್ಮನ ಹತ್ತಿರ ಇದ್ದಿದ್ದರಿಂದ ಗೌರಿಗೆ ನೆಮ್ಮದಿ ಇತ್ತು. ಲಂಕೇಶರು ಬೆಳಗ್ಗೆ ವಾಕಿಂಗ್ ಹೋದಾಗ ಕೆಲವೊಮ್ಮೆ ಮಗಳು ಮತ್ತು ಅಳಿಯನ ಮನೆಗೆ ಭೇಟಿ ನೀಡುತ್ತಿದ್ದರು. ಆಗ ಅವರಿಬ್ಬರದ್ದು ಹೊಸ ಸಂಸಾರವಾದ್ದರಿಂದ ಮನೆಯಲ್ಲಿ ಅಗತ್ಯವಾದ ಎಲ್ಲ ಸಾಮಾನುಗಳು ಇರಲಿಲ್ಲ. ಇಬ್ಬರೂ ನೆಲದಮೇಲೆ ಹಾಸಿಗೆ ಹಾಸಿಕೊಂಡು ಮಲಗುತ್ತಿದ್ದರು.

ಒಮ್ಮೆ ಲಂಕೇಶರು “ಆಫೀಸಿಗೆ ಹೋಗುವಾಗ ನಿನ್ನ ಮನೆಯ ಬೀಗದ ಕೀಅನ್ನು ನನ್ನ ಆಫೀಸಿನಲ್ಲಿ ಬಿಟ್ಟುಹೋಗು” ಎಂದು ಗೌರಿಗೆ ಹೇಳಿದರು. “ಯಾಕೆ?” ಎಂದು ಆಕೆ ಕೇಳಿದಾಗ “ಸುಮ್ಮನೆ ಕೊಟ್ಟುಹೋಗು” ಅಂದರು ಆಕೆಯ ಅಪ್ಪ. ಗೌರಿ ಮತ್ತು ಚಿದು ಕೆಲಸ ಮುಗಿಸಿ ರಾತ್ರಿ ಮನೆಗೆ ಬರುವ ಮುನ್ನ ಲಂಕೇಶರ ಆಫೀಸಿಗೆ ಹೋಗಿ ತಮ್ಮ ಮನೆಯ ಕೀಅನ್ನು ಪಡೆದು ಬಂದು ನೋಡಿದರೆ, ಮನೆಯ ಹಾಲ್ ನಲ್ಲಿ ಎರಡು ಹೊಸ ಮಂಚಗಳು ಇದ್ದವು. ಏನಾಗಿತ್ತೆಂದರೆ ಲಂಕೇಶರು ತಮ್ಮ ಸಹಾಯಕರಿಗೆ ದುಡ್ಡುಕೊಟ್ಟು, ಮಂಚಗಳನ್ನು ಖರೀದಿಸಿ, ಗೌರಿಯ ಮನೆಯಲ್ಲಿ ಅದನ್ನು ಇಟ್ಟುಬರಲು ಹೇಳಿದ್ದರು. ಅವರು ಹಾಗೆಯೇ ಮಾಡಿದ್ದರು. ಮರುದಿನ ಮಗಳ ಮನೆಗೆ ಹೋದ ಲಂಕೇಶರು ಸುಮ್ಮನೇ “ಮೀಯಾಂವ್” (ಬಹಳ ಸಂತೋಷವಾದಾಗ ಲಂಕೇಶ್ ಅವರ ಬಾಯಿಂದ ಹೊರಡುತ್ತಿದ್ದ ಶಬ್ದವಿದು) ಎಂದು ವಾಪಸ್ ಬಂದಿದ್ದರು.

ಲಂಕೇಶರಿಗೆ ಸ್ಟ್ರೋಕ್ ಆದಾಗ ನಮ್ಮ ಹಿರಿ ಮಗಳು ಗೌರಿ ಫ್ರಾನ್ಸ್ ದೇಶದಿಂದ ಪತ್ರಿಕೋದ್ಯಮದ ಸ್ಕಾಲರ್ ಶಿಪ್ ಪಡೆದು ಆ ದೇಶದ ರಾಜಧಾನಿ ಪ್ಯಾರಿಸ್ ನಲ್ಲಿ ವಾಸಿಸುತ್ತಿದ್ದಳು. ಆಗ ನಮ್ಮ ಮೂವರು ಮಕ್ಕಳಲ್ಲಿ ತಮ್ಮ ಅಪ್ಪನೊಂದಿಗೆ ತುಂಬಾ ಭಾವುಕವಾದ ಸಂಬಂಧ ಹೊಂದಿದ್ದವಳು ಆಕೆಯೇ. ಲಂಕೇಶರಿಗೆ ಸ್ಟ್ರೋಕ್ ಆಗಿರುವ ಬಗ್ಗೆ ಗೌರಿಗೆ ಗೊತ್ತಾದರೆ ಆಕೆ ಪ್ಯಾರಿಸ್ಅನ್ನು ತೊರೆದು ನಿಂತ ಕಾಲಲ್ಲೇ ಬೆಂಗಳೂರಿಗೆ ಬರುತ್ತಾಳೆಂದು ನಮಗೆ ಗೊತ್ತಿತ್ತು. ಆ ಕಾರಣಕ್ಕೆ ಲಂಕೇಶರ ಆರೋಗ್ಯ ಕೆಟ್ಟದ್ದರ ಬಗ್ಗೆ ಆಕೆಗೆ ಹೇಳುವುದೇ ಬೇಡವೆಂದು ನಿರ್ಧರಿಸಿದೆವು.

ಗೌರಿ ಸಾಮಾನ್ಯವಾಗಿ ವಾರಕ್ಕೊಮ್ಮೆ ಮನೆಗೆ ಫೋನ್ ಮಾಡಿ ನನ್ನ, ಬೇಬಿ ಹಾಗು ಅಜಿತು ಜೊತೆ ಮಾತನಾಡುತ್ತಿದ್ದಳು. ಲಂಕೇಶರಿಗೆ ಫೋನ್ ಎಂದರೇ ಒಂದು ರೀತಿಯ ಅಲರ್ಜಿ ಇದ್ದಿದ್ದರಿಂದ ಅವರೊಂದಿಗೆ ಪತ್ರಗಳ ಮೂಲಕ ಸಂಪರ್ಕ ಇಟ್ಟುಕೊಂಡಿದ್ದ ಗೌರಿ ಆಗೊಮ್ಮೆ, ಈಗೊಮ್ಮೆ ಮಾತ್ರ ಅಪ್ಪನನ್ನು ಫೋನ್ ನಲ್ಲಿ ಮಾತನಾಡಿಸುತ್ತಿದ್ದಳು.
ಆದರೆ ಇದಾದ ನಾಲ್ಕೈದು ವಾರಗಳಲ್ಲಿ ಮಾರ್ಚ್ 8 ರಂದು ಲಂಕೇಶರ ಹುಟ್ಟುಹಬ್ಬ ಬಂದೇಬಿಟ್ಟಿತು. ಅವತ್ತು ಗೌರಿ ತನ್ನ ಅಪ್ಪನ ಆಫೀಸಿಗೆ ಫೋನ್ ಮಾಡಿ “ಹ್ಯಾಪಿ ಬರ್ತಡೇ ಅಪ್ಪಾ, ಹೇಗಿದ್ದೀಯಾ?” ಎಂದು ಕೇಳಿದ್ದಾಳೆ. ಆಗ ಲಂಕೇಶರು “ಐ ಯಾಮ್ ಫೈನ್. ಸ್ಟ್ರೋಕ್ ನಿಂದ ಸಂಪೂರ್ಣವಾಗಿ ರಿಕವರ್ ಆಗಿದ್ದೇನೆ” ಎಂದಿದ್ದಾರೆ. ಅದನ್ನು ಕೇಳಿ ಗೌರಿಗೆ ಶಾಕ್ ಆಗಿದೆ. “ಏನು ಸ್ಟ್ರೋಕ್” ಎಂದು ಆಕೆ ಕೇಳಿದ್ದಾಳೆ. ಆಗ ಆಕೆಗೆ ಏನೆಂದು ಉತ್ತರ ಕೊಡುವುದೆಂದು ಲಂಕೇಶರಿಗೆ ಗೊತ್ತಾಗದೆ ಅವರು ಇದ್ದಕ್ಕಿದ್ದಂತೆ ಫೋನ್ ಕಟ್ ಮಾಡಿದ್ದಾರೆ. ಇದರಿಂದ ಇನ್ನಷ್ಟು ಕಂಗಾಲಾದ ಗೌರಿ ನನ್ನ ಅಂಗಡಿಗೆ ಪೋನ್ ಮಾಡಿ “ಅಪ್ಪನಿಗೆ ಯಾವಾಗ ಸ್ಟ್ರೋಕ್ ಆಯಿತು. ನನಗ್ಯಾಕೆ ಅದರ ಬಗ್ಗೆ ಹೇಳಲಿಲ್ಲ” ಎಂದೆಲ್ಲ ಕಿರುಚಾಡಿದಳು. …..ನಾನು ಅಪ್ಪನಿಗೆ ಸಣ್ಣದಾದ ಸ್ಟ್ರೋಕ್ ಆಗಿತ್ತು. ಈಗ ಅಪ್ಪ ಚೆನ್ನಾಗಿದೆ. ನೀನು ಯೋಚನೆ ಮಾಡಬೇಡ” ಎಂದೆಲ್ಲ ಹೇಳಿದೆ. ಆದರೂ ಆಕೆ “ನನ್ನಿಂದ ಇದನ್ನು ಯಾಕೆ ಮುಚ್ಚಿಟ್ಟೆ. ನಾನು ನಿನ್ನನ್ನು ನಂಬೋದಿಲ್ಲ ನಾನು ಈಗಲೇ ಬೆಂಗಳೂರಿಗೆ ವಾಪಸ್ ಬರ್ತೀನಿ” ಎಂದು ಹಟ ಹಿಡಿದಳು.

ನಮ್ಮ ಹಿರಿ ಮಗಳು ಗೌರಿ ಪತ್ರಕರ್ತೆಯಾಗಿ ನೆಲೆಕಂಡುಕೊಂಡಿದ್ದಳು. ಹಾಗೆಯೇ ಕಿರಿ ಮಗಳು ಕವಿತಾ ಜಾಹೀರಾತು ಏಜನ್ಸಿ ತೆರೆದು ಕೈತುಂಬ ದುಡಿಯುತ್ತಿದ್ದಳು ಜೊತೆಗೆ ಕೆಲವು ಕಾರ್ಪೋರೇಟ್ ಸಿನಿಮಾಗಳನ್ನು ಆನಂತರ ಹಲವಾರು ಸಾಕ್ಷ್ಯಚಿತ್ರಗಳನ್ನೂ ಮಾಡಿದ ಕವಿತಾ ಎಲ್ಲರಿಂದಲೂ ಸೈ ಎನಿಸಿಕೊಂಡಳು.
…ನಮ್ಮ ಮೂವರು ಮಕ್ಕಳು ಲಂಕೇಶರ ಆರೋಗ್ಯದ ವಿವಿಧ ಆಯಾಮಗಳ ಜವಾಬ್ದಾರಿಯನ್ನು ನಿರ್ವಹಿಸಲಾರಂಭಿಸಿದರು. ಗೌರಿ ಅಪ್ಪನ ಡಯಾಬಿಟಿಸ್ ಮೇಲೆ ನಿಗಾ ಇಟ್ಟಿದ್ದರೆ, ಬೇಬಿ ಅವರ ಲಿವರ್ ಕುರಿತ ಎಲ್ಲ ಬದಲಾವಣೆಗಳನ್ನು ಗಮನಿಸುತ್ತಿದ್ದಳು. ಅಜಿತು ಪ್ರತಿದಿನ ಬ್ಲಡ್ ಪ್ರೆಶರ್ ಅನ್ನು ಚೆಕ್ ಮಾಡುತ್ತಿದ್ದ.
ದೆಹಲಿಯಲ್ಲಿ ಈಟಿವಿ ಚಾನೆಲ್ನಲ್ಲಿ ಕೆಲಸ ಮಾಡುತ್ತಿದ್ದ ಗೌರಿ ವಿವಿಧ ಕಡೆ ಸುತ್ತಾಡುತ್ತಿದ್ದಳು. ಆದರೆ ಆಕೆ ದೆಹಲಿಯಿಂದ ಎಲ್ಲಿಗೇ ಹೋದರೂ ಮುಂಚಿತವಾಗಿಯೇ ಹೇಳುತ್ತಿದ್ದಳಲ್ಲದೇ ಆಕೆ ಬೇರೆ ಊರನ್ನು ತಲುಪಿದ ಕೂಡಲೇ ಅಲ್ಲಿನ ಫೋನ್ ನಂಬರ್ ಅನ್ನು ಕೊಡುತ್ತಿದ್ದಳು. ಎರಡು ಮೂರು ದಿನಕ್ಕೊಮ್ಮೆ ಫೋನ್ ಮಾಡಿ ಅಪ್ಪನ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಳು. ತಿಂಗಳಿಗೊಮ್ಮೆ ಬೆಂಗಳೂರಿಗೆ ಬರುತ್ತಿದ್ದಳು.

‍ಲೇಖಕರು avadhi

September 5, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ kiranakumari.S.Cancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: