ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಪಾಲ ವಾಜಪೇಯಿ ಕಾಲ೦ : ವಾದ್ಯ ನಾದದ ಮಳೆ!

ಸುಮ್ಮನೇ ನೆನಪುಗಳು – 6

– ಗೋಪಾಲ ವಾಜಪೇಯಿ

ಸರಿ. ದೊರೆಯ ಅಪ್ಪಣೆಯೆಂದರೆ ದೂಸರಾ ಮಾತೇ ಇಲ್ಲ. ಒಪ್ಪಲೇಬೇಕು. ‘ಆಗಲ್ರೀ ದೊರೀ…’ ಎಂದುಬಿಟ್ಟ ನಾಗಪ್ಪ. ಅವನಿಗೆ ಒಳಗೊಳಗೇ ಖುಷಿ. ಇನ್ನು ಹಬ್ಬ ಮುಗಿಯುವ ತನಕ ನಿತ್ಯ ಸಂಜೆ ಕಿಲ್ಲೆಗೆ ಬರಬೇಕು. ದೊರೆಯೆದುರು ನಿಂತು ಅವರು ಹೇಳಿದ ವಾದ್ಯವನ್ನು ನುಡಿಸಬೇಕು… ಇಂಥ ಗೌರವ, ಇಂಥ ಅವಕಾಶ ಇನ್ನಾರಿಗೆ ದೊರೆಯುತ್ತದೆ…? ”ಬಾಳಾ ಸಾಹೇಬರು ಸಂಗೀತ ಗೊತ್ತಿದ್ದವರಪಾs ನಾಗಪ್ಪಾ… ಭಾಳಾ ಎಚ್ಚರಿಕಿಯಿಂದ ಬಾರಸಬೇಕs ಮತ್ತ…” ಅಂತ ಹಿತೈಷಿಗಳು ಬೆನ್ನು ತಟ್ಟಿದರು. ನಾಗಪ್ಪ ಹಾಗೆಲ್ಲ ಬೇಕಾಬಿಟ್ಟಿ ನುಡಿಸುವವ ಅಲ್ಲ ಎಂಬುದು ಅವರಿಗೂ ಗೊತ್ತು. ಆದರೂ ನಮ್ಮವನೆಂಬ ಕಾಳಜಿಯಿಂದ ಈ ಮಾತಾಡಿದ್ದರು. ಸರಿ. ಶುರುವಾಯಿತು ದೊರೆಮನೆಯ ಅಂಗಳದಲ್ಲಿ ಸಂಜೆಯ ಸಂಭ್ರಮ. ಅವೆಲ್ಲಾ ಜಾನಪದ ಚರ್ಮ ವಾದ್ಯಗಳು. ದಮಡಿ, ತಪ್ಪಡಿ, ಹಲಿಗಿ, ಕಣಿ, ಡಪ್ಪು, ಕರಡಿ ಮಜಲು, ಸಂಬಾಳ, ಡೋಲಕ್ಕು, ಡೊಳ್ಳು, ಜಗ್ಗಲಗಿ… ಅವುಗಳ ತಾಳ ಬೇರೆ. ಅವುಗಳನ್ನು ನುಡಿಸುವ ವಿಧಾನ ಬೇರೆ. ಕೆಲವದರ ನಾದ ಮೈಮರೆಸುವಷ್ಟು ಇಂಪು. ಕೆಲವದರ ನಾದ ಕುಂತಲ್ಲೇ ಕುಣಿಯುವಂತೆ ಮಾಡುವಂಥದು. ಇನ್ನು ಕೆಲವದರ ನಾದ ರೋಮಾಂಚನ ಉಂಟುಮಾಡಿದರೆ, ಮತ್ತೆ ಕೆಲವದರ ನಾದ ರುದ್ರ, ಗಂಭೀರ… ಕೆಲವನ್ನು ನುಡಿಸಿದಾಗ ಕೆಲವರಿಗೆ ವೀರಾವೇಶ ಉಂಟಾಗುವುದೂ ನಿಜ. ಪ್ರತಿಯೊಂದನ್ನೂ ಪ್ರತ್ಯೇಕವಾಗಿ ನುಡಿಸುತ್ತಿದ್ದ ನಾಗಪ್ಪ. ಆ ‘ನುಡಿಸುವಿಕೆ’ಯಲ್ಲಿ ಆತ ತೋರುತ್ತಿದ್ದ ಗತ್ತೇ ಒಂದು ಗಮ್ಮತ್ತು. ನುಡಿಸುತ್ತಲೇ ಆತ ಗತಿ ಬದಲಾವಣೆ ಮಾಡುತ್ತಿದ್ದ ರೀತಿಯಂತೂ ಅಪ್ರತಿಮವೆನಿಸುತ್ತಿತ್ತು. ನಾಗಪ್ಪ ಬಿಟ್ಟೂ ಬಿಡದೆ ಎರಡು ಗಂಟೆಗಳಷ್ಟು ಕಾಲ ‘ವಾದ್ಯ ನಾದದ ಮಳೆ’ ಸುರಿಸುತ್ತಿದ್ದ. ಕಿಲ್ಲೆಯ ತುಂಬೆಲ್ಲ ಆ ನಾದ ಹರಡಿಕೊಳ್ಳುತ್ತಿತ್ತು. ಕಿಲ್ಲೆಯ ಹೊರಗೂ ಪ್ರತಿಧ್ವನಿಸುತ್ತಿತ್ತು. ಬಾಳಾ ಸಾಹೇಬರು ನಿಜಕ್ಕೂ ಪುಂಗಿಯ ಎದುರಿನ ಹಾವಿನಂತಾಗಿಬಿಡುತ್ತಿದ್ದರು. ಅವರಿಗೋ ಆ ಬಗ್ಗೆ ಕೇಳಿ ತಿಳಿದುಕೊಳ್ಳಬೇಕೆಂಬ ಹಂಬಲ. ಆದರೆ ನಾಗಪ್ಪನಿಗೆ ನುಡಿಸುವುದು ಗೊತ್ತಿತ್ತೆ ವಿನಾ, ಅದರ ಬಗ್ಗೆ ವಿವರಿಸಿ ಹೇಳುವುದು ಗೊತ್ತಿರಲಿಲ್ಲ. ಪಾಪ, ಹಳ್ಳಿಯ ಅಮಾಯಕ ರೈತ ಆತ. ಸಮಯ ಕಳೆಯಲೆಂದು ಈ ವಾದ್ಯಗಳ ನುಡಿಸುವಿಕೆಯನ್ನು ರೂಢಿಸಿಕೊಂಡಿದ್ದ. ಹೀಗೆಯೇ ನುಡಿಸುತ್ತ ನುಡಿಸುತ್ತ ಕೈ ಕೂತಿತ್ತು. ತನಗೆ ತಿಳಿದಂತೆ ನುಡಿಸುತ್ತಲೇ ಹತ್ತೂ ವಾದ್ಯಗಳನ್ನು ಒಲಿಸಿಕೊಂಡಿದ್ದ. ಕೊನೆಯ ದಿನವಂತೂ ಒಂದು ಚಮತ್ಕಾರವನ್ನೇ ಮಾಡಿಬಿಟ್ಟ ನಾಗಪ್ಪ. ಈ ತನಕ ದಿನವೂ ಒಂದೊಂದೇ ವಾದ್ಯ ನುಡಿಸಿದ್ದನಲ್ಲ, ಕಡೆಯ ದಿನ ಎಲ್ಲಾ ಹತ್ತೂ ವಾದ್ಯಗಳನ್ನು ಇಟ್ಟುಕೊಂಡು ನುಡಿಸಿಬಿಟ್ಟ. ನವರಸಗಳೂ ನಾದದ ರೂಪ ತೊಟ್ಟು ಸತತ ಎರಡು ಗಂಟೆ ದೊರೆಮನೆಯ ಅಂಗಳದಲ್ಲಿ ನರ್ತಿಸಿದಂತಿತ್ತು ಆ ನುಡಿಸುವಿಕೆಯ ಮೋದ…! ಆತ ನುಡಿಸಿ ಮುಗಿಸಿದಾಗ, ಅಲ್ಲಿ ಸೇರಿದ್ದ ನೂರಾರು ಜನ ಅಕ್ಷರಶಃ ಅವಾಕ್ಕಾಗಿ ಕೂತಿದ್ದರಂತೆ. ಬಾಳಾ ಸಾಹೇಬರು ಮಾತೆ ಹೊರಡದ ಮೂಕರಾಗಿ, ನಾಗಪ್ಪನನ್ನೇ ನೋಡುತ್ತಿದ್ದರಂತೆ. ಇದಾವುದರೆಡೆಯೂ ಗಮನವಿರದ ನಾಗಪ್ಪ ತನ್ನ ಪಾಡಿಗೆ ತಾನು ದೊರೆಗೆ ಕೈ ಮುಗಿದು, ಆ ವಾದ್ಯಗಳನ್ನೆಲ್ಲ ಒಂದೆಡೆ ಇರಿಸುವ ಕೆಲಸಕ್ಕೆ ನಿಂತನಂತೆ. ಬಾಳಾ ಸಾಹೇಬರು ಆ ಗುಂಗಿನಿಂದ ಹೊರಬರಲು ಐದು ನಿಮಿಷಗಳೇ ಬೇಕಾದವು. ಅವರು ಕೂತಲ್ಲಿಂದ ಎದ್ದು, ಪಕ್ಕದಲ್ಲಿದ್ದವನಿಗೆ ನಾಗಪ್ಪನನ್ನು ಕರೆಯಲು ಹೇಳುವಷ್ಟರಲ್ಲಿಯೇ, ಮೊದಲ ದಿನ ದೊರೆಗಳಿಂದ ಬೈಸಿಕೊಂಡಿದ್ದನಲ್ಲ ಆ ಅಧಿಕಪ್ರಸಂಗಿ, ಆತ ನಿಂತಲ್ಲಿಂದಲೇ – ”ಏಯ್… ದೊರಿಗಳು ಕರಿಯಾಕತ್ಯಾರ, ಗಡಾನ ಬಾ…” ಎಂದು ಮತ್ತೆ ಬಾಲ ಬಿಚ್ಚಿದನಂತೆ. ಮೈಯೆಲ್ಲಾ ಉರಿಯಿತಾದರೂ, ಆ ಸಂದರ್ಭದಲ್ಲಿ ಕೋಪ ತರವಲ್ಲ ಎಂದುಕೊಂಡ ಬಾಳಾ ಸಾಹೇಬರು ತಮ್ಮೆದುರು ಬಂದು ಕೈಕಟ್ಟಿ ನಿಂತ ನಾಗಪ್ಪನನ್ನು ಹತ್ತಿರಕ್ಕೆ ಕರೆದು, ಬೆನ್ನು ಚಪ್ಪರಿಸಿ, ”ಭಪ್ಪರೆ ಹುಡಗಾ… ಇಂಥಾ ಚತುರ ವಾದ್ಯ ವಾದಕ ನಮ್ಮ ಸಂಸ್ಥಾನದೊಳಗ ಇರೋದು ಖರೇನs ನನಗ ಒಂದು ಹೆಮ್ಮೆಯ ಸಂಗತೀನs… ನಾಗಪ್ಪಾ, ನೀನು ನಮ್ಮ ಮನಸು ಗೆದ್ದಿ…” ಎಂದವರೇ ಕಾರಭಾರಿಯನ್ನು ಕರೆದು, ಏನೇನೋ ಸೂಚನೆಗಳನ್ನು ನೀಡಿದರು. ಮತ್ತು ನಾಗಪ್ಪನನ್ನು ಉಚಿತವಾಗಿ ಸನ್ಮಾನಿಸಿ ಬೀಳ್ಕೊಟ್ಟರು.]]>

‍ಲೇಖಕರು G

22 July, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading