ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಪಾಲ ಕೃಷ್ಣ ನಾಯರಿ ಇನ್ನಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ!

ಸಿ ಬಸವಲಿಂಗಯ್ಯ

ನಾಯರಿ ನನಗೆ ಮೊದಲು ರಘುನಂದನ್ ಮೂಲಕ ಪರಿಚಯವಾದರು. ನಂತರ ನಾನು ದೆಹಲಿ NSD ಗೆ ೧೯೮೧ ರಲ್ಲಿ ಸೇರಿದ ನಂತರ ಹೆಚ್ಚು ಆತ್ಮೀಯರಾದರು. ಎಂಬತ್ತರ ದಶಕದಲ್ಲಿ ಕನ್ನಡ ನಾಡಿನಿಂದ ರಂಗಭೂಮಿ ಅಧ್ಯಯನಕ್ಕಾಗಿ NSD ಗೆ ಬಹಳಷ್ಟು ಜನ ಹೋಗಲು ನಮ್ಮವರೇ ಆದ ಬಿ. ವಿ.ಕಾರಂತರು ಆಗ nsd ಯ ನಿರ್ದೆಶಕರಾಗಿದ್ದದ್ದು ಮುಖ್ಯ ಕಾರಣ ಎನ್ನಬಹುದು. ಕೇವಲ ಹಿಂದಿ ಭಾಷಿಕರ ಒಡ್ಡೋಲಗವಾಗಿದ್ದ ಸಂಸ್ಥೆ ವಿಕೇಂದ್ರೀಕರಣಗೊಂಡು ದೇಶದ ಎಲ್ಲ ರಾಜ್ಯಗಳ ವಿಧ್ಯಾರ್ಥಿಗಳು ದೆಹಲಿಗೆ ಹೋಗಿ ಕಲಿಯುವಂತ ವ್ಯವಸ್ತೆಯನ್ನು ಕಾರಂತರು ಕಲ್ಪಿಸಿದರು.

೧೯೮೧ ರಲ್ಲಿ ನಾನು, ಕೆ. ಜಿ.ಕೃಷ್ಣಮೂರ್ತಿ ಮತ್ತು ಪದ್ಮಶ್ರೀ ಕರ್ಣಾಟಕದಿಂದ ಮೊದಲ ವರ್ಷದ ವಿದ್ಯಾರ್ಥಿಗಳಾಗಿ ಸೇರಿಕೊಂಡಾಗ ನಮ್ಮ ಸೀನಿಯರ್ ಗಳು ಸುಮಾರು ಹತ್ತುಜನ ಅಲ್ಲೇ ಇದ್ದರು. ನಾಲ್ಕನೇ ವರ್ಷದ ಫೆಲೋಗಳಾಗಿ ರಘುನಂದನ್, ಸುರೇಶ್ ಶೆಟ್ಟಿ, ವಾಲ್ಟರ್, ಬಿ. ಎಸ್.ಪಾಟೀಲ್, ಜಯತೀರ್ಥ ಜೋಶಿ, ಆಧ್ಯಯನಕ್ಕೆ ತೊಡಗಿದ್ದರು. ಇವರಿಗಿಂತ ಒಂದು ವರ್ಷ ಮೊದಲೇ ಕೋರ್ಸ್ ಮುಗಿಸಿದ್ದ ಅಶೋಕ್ ಬಾದರದಿನ್ನಿ, ಸುರೇಂದ್ರನಾಥ್, ಶ್ರೀನಿವಾಸ್ ಪ್ರಭು, ಕೆ. ಎನ್. ಭಾರತಿ, ಭಾವಲ್ ಪುರ್ ಹೌಸ್, ಮಂಡಿ ಹೌಸ್ ಹತ್ತಿರವೇ ಸಿಗುತ್ತಿದ್ದದ್ದು ಒಂದೆಡೆಯಾದರೆ, ಮೂರನೆ ವರ್ಶದ ವಿಧ್ಯಾರ್ಥಿಗಳಾಗಿ ಎ.ಜಿ.ಚಿದಂಬರರಾವ್ ಜಂಬೆ, ಗೋಪಾಲ್ ಕೃಷ್ಣ ನಾಯರಿ, ಜಿ. ಎಸ್. ಸುಂದರ್ಶ್ರೀ, ಎರಡನೇ ವರ್ಷದ ವಿದ್ಯಾರ್ಥಿಗಳಾಗಿ, ಕೆ. ವಿ. ಅಕ್ಷರ, ಜಯರಾಂ ತಾತಾಚಾರ್, ಎಸ್. ಮಾಲತಿ ಯವರು ಇದ್ದರು.

ಸಮುದಾಯದ ಮೂಲಕ ಪರಿಚಯವಿದ್ದ ಹಲವು ಹಿರಿಯ ಮಿತ್ರರ ಜೊತೆಗೆ ಹೊಸ ಮಿತ್ರರ ಒಡನಾಟವೂ ನನಗೆ ಸಿಕ್ಕಿತು. ಅದರಲ್ಲಿ ಗೋಪಾಲ ಕೃಷ್ಣ ನಾಯರಿಯವರದ್ದು ಅಪರೂಪದ್ದು. ದೆಹಲಿಯಂತಹ ಮಹಾ ನಗರ ಕಂಡು ತಬ್ಬಿಬ್ಬಾಗಿದ್ದ ನಾನು ಮುಜುಗರದಿಂದಲೇ ಇದ್ದೇ. ನಾನು ತರಗತಿ ಸೇರಿದ ಮೊದಲ ದಿನದ ಹಳೆಯ ಹೊಸ ವಿಧ್ಯಾರ್ಥಿ ಗಳ ಮಿಲನ ಕೂಟಕ್ಕೆ ನಾನು ಸೇರಿಕೊಳ್ಳದೆ ಹೊರಗೆ ಒಬ್ಬನೇ ಕುಳಿತಿದ್ದೆ. ಕಾರಂತರು ಇದನ್ನು ಗಮನಿಸಿದರು ಅಂತಾ ಕಾಣುತ್ತದೆ ನನ್ನ ಬಳಿ ಬಂದು ‘ಕ್ಯೂ ಇದರ್ ಬೈಟೆ ಹೊ’ ಎಂದು ಹಿಂದಿಯಲ್ಲಿ ಕೇಳಿದಾಗ ನಾನು ಕಾರಂತರ ಹತ್ತಿರ ಮೊದಲು ಮಾತನಾಡಿದ್ದು ” ಸಾರ್ ನಾನು ಬೆಂಗಳೂರಿನವ.. ಎಂದು ಏನೋ ಹೇಳಲು ಬಾಯಿತೆರೆದೆ..” ಹಿಂದಿ ಮೇ ಬೋಲೋ” ಎಂದವರೇ ನಾಯರಿಯವರನ್ನು ಕರೆದು” ಇಸ್ಕೋ ಸಬ್ ಕುಚ್ ಸಂಜಾವೋ” ಅಂದರ್ ಲೋಗೊಂಕೆ ಬೀಚ್ ಜುಡ್ ಜಾವೋ” ಎಂದವರೇ ಹೋದರು.

ನಾಯರಿ ‘ಬಸವ ಇದು ಮೊದಲ ದಿನದ ಪಾರ್ಟಿ ಹೊಸಬರನ್ನು ಸ್ವಾಗತಿಸಲು.. ನೀವು ನಮ್ಮೋವರೋಟ್ಟಿಗೆ ಹೆಚ್ಚು ಸೇರಬೇಡಿ ಹಿಂದಿ ಕಲಿಯುವುದು ಕಷ್ಟ ಆಗುತ್ತೆ.. ಗೊತ್ತಾಯಿತಾ.. ಬನ್ನಿ ಇವತ್ತು ಬಡಾ ಖಾನ ‘ಎಂದವರೇ ಒಳಗೆ ಕರೆದೊಯ್ದರು. ದೆಹಲಿಯನ್ನು ನಾಯರಿಯವರು ತಿಳಿಸಿದ ಮೆಥಡ್ ನಿಂದಾ ಪರಿಚಯ ಮಾಡಿಕೊಂಡೆ ಎನ್ನಬಹುದು. ದೆಹಲಿ ನಗರ ಸಾರಿಗೆ ಬಸ್ ಹಿಡಿದು ಅದು ತಲುಪುವ ಕೊನೆಯ ನಿಲ್ದಾಣ ದವರೇವಿಗೂ ಹೋಗುವುದು.. ಆಲ್ಲಿ ಸುತ್ತಮುತ್ತಲಿನ ಸ್ಥಳಗಳ ನೋಡುವುದು.. ಮತ್ತೆ ಅದೇ ನಂಬರಿನ ಬಸ್ ಹಿಡಿದು ಮಂಡಿ ಹೌಸ್ ಗೆ ಬರುವುದು. ನಾಯರಿ ಹೀಗೆ ದೆಹಲಿಯನ್ನು ಅದರ ವಿವಿಧ ಸ್ಥಳಗಳನ್ನು ನೋಡಿದಂತೆ! ಈ ಉಪಾಯ ನನಗೂ ಉಚಿತ ವೆನಿಸಿ ನಾನು ದೆಹಲಿ ಪರಿಚಯಿಸಿ ಕೊಂಡಿದ್ದು ನಾಯರಿ ಮಾದರಿಯಲ್ಲೇ .. ಭಾನುವಾರಗಳು ಹೆಚ್ಚು JNU ಕಡೆ ಹೋಗುತ್ತಿದ್ದೆ. ಮೊತ್ತಬ್ಬ ಕರ್ನಾಟಕದ ಹಿರಿಯ ಮಿತ್ರ ಅಶೋಕ್ ಶೆಟ್ಟರ್ JNU ನಲ್ಲಿ dept of history ಯಲ್ಲಿ ಅಧ್ಯಯನಕ್ಕೆ ಬಂದಿದ್ದರು. ಅವರ ಗೆಳೆತನವೂ ಅಲ್ಲೇ ನನಗಾಯಿತು.

ನಾಯರಿ ಎಂಥ ಒಳ್ಳೆಯ ನಟ ಎಂಬುದಕ್ಕೆ ನನ್ನ ಕಣ್ಣಿಗೆ ಇನ್ನೂ ಅವರು ನಿರ್ವಹಿಸಿದ “ಮಹಾ ಭೋಜ್” ನಾಟಕದ ಮುಖ್ಯಮಂತ್ರಿ ಪಾತ್ರ. ಮತ್ತು ನಾನು ದೆಹಲಿಯಲ್ಲಿ ನೋಡಿದ nsd ರೆಪರ್ಟರಿ ಯಲ್ಲಿ ನಟರಾಗಿ ಸೇರಿದ್ದಾಗ, ನಾಟಕ”ಚೆರ್ರಿ ಆರ್ಚರ್ಡ್” ನಲ್ಲಿ ಅಭಿನಯಿಸಿದ ಮುದುಕನ ಪಾತ್ರ. ಅಮೆರಿಕದ ರಿಚರ್ಡ್ ಶೇಕ್ನರ್ ನಾಟಕ ನಿರ್ದೇಶಿಸಲು ಬಂದಿದ್ದಾಗ ಅವರ ಹೊಸ ನಾಟಕದ ಸಿದ್ದಾಂತ ” Environmental Theatre .. ಪರಿಸರ ರಂಗಭೂಮಿ ಬಗ್ಗೆ ಚರ್ಚೆ ಆರಂಭವಾಗಿತ್ತು. ಅವರು ನಮ್ಮ ಕಾಶಿಯ ಸಮೀಪದ ರಾಮ್ ಗಡ್ ನಲ್ಲಿ ನಡೆಯುವ ಒಂದು ತಿಂಗಳ ತುಳಸಿ ರಾಮಾಯಣ ritual Theatre ನ ಅಧ್ಯಯನ ಮಾಡಿ ತಮ್ಮ ಸಿದ್ದಾಂತವನ್ನು ಮಂಡಿಸಿದ್ದರು. ಆ ತತ್ವ.. ದಡಿಯಲ್ಲೇ ಚೆರ್ರಿ ತೋಟ ನಾಟಕ ಕಟ್ಟಿದ್ದರು.

ಕಾಶ್ಮೀರರದ ಮೇಲ್ ಮಾಧ್ಯಮ ವರ್ಗದ ಕುಟುಂಬ ವಾಸಿಸುವ ಮನೆಯನ್ನೇ ಯಥಾವತ್ತಾಗಿ ರಂಗ ವಿನ್ಯಾಸದ ಪರಿಕಲ್ಪನೆಯಾಗಿ ನಿರ್ಮಿಸಿ. ಪಾತ್ರಗಳೆಲ್ಲ ಮನೆಯ ಒಳಗೇ ಅಭಿನಯಿಸಿ.. ಮನೆಯ ಹೊರಗೂ ದೃಶ್ಯಗಳು ಬರುವಂತೆ ಸಂಯೋಜನೆ ಗೊಂಡಿದ್ದವು. ಪ್ರೇಕ್ಷಕರು ಆ ಮನೆಯ ಕಿಟಕಿ ಬಾಗಿಲುಗಳ ಮೂಲಕವೆ ನಾಟಕವನ್ನು ನೋಡುವಂಥ ವಿನ್ಯಾಸ. ಮನೆಯ ಒಳಗಡೆ ಪಾತ್ರಗಳು ನೈಜವಾಗಿ ಬದುಕುತ್ತಿವೆ ಎಂಬ ನಂಬಿಕೆ ಪ್ರೇಕ್ಷಕರಿಗೂ ದಾಟಿಸುವುದಾದ ಪ್ರಯೋಗ. ಆದರೇ ನಾಟಕದ ಕೊನೆಯ ದೃಶ್ಯ ದಲ್ಲಿ ಎಲ್ಲರೂ ಮಾಸ್ಕೋ ಮಹಾ ನಗರಕ್ಕೆ ಪ್ರಯಾಣ ಬೆಳೆಸಲು ಸಡಗರ ಸಂಭ್ರಮದಿಂದ ಇದ್ದಾರೆ, ಟಾಂಗಾ ಬಂದು ಮನೆಯ ಮುಂದೆ ನಿಲ್ಲುತ್ತದೆ. ಮನೆಗೆ ಬೀಗ ಹಾಕಿ ಹೊಸ ಮಾಲೀಕನಿಗೆ ಕೀಲಿ ಕೈ ಕೊಡುವಾಗ ಪ್ರೇಕ್ಷಕರು ಅದಕ್ಕೆ ಸಾಕ್ಷಿಯಾಗುತ್ತಾರೆ.

ದೂರದಲ್ಲಿ ಚೆರ್ರಿ ಹಣ್ಣಿನ ತೋಟ ದ ಮರಗಳನ್ನು ಕತ್ತರಿಸುವ ಶಬ್ದ ಕೇಳಿಬರುತ್ತದೆ ಮನೆಯ ಒಳಗಡೆಯೇ ನಾಟಕದ ಉದ್ದಕ್ಕೂ ಇದ್ದ ವಯಸ್ಸಾದ ಸೇವಕನ ಪಾತ್ರಧಾರಿ ನಮ್ಮ ನಾಯರಿ ಕಿಟಕಿ ಬಳಿ ಮನೆಯ ಒಳಗಿನಿಂದಲೇ ಬಂದು ನಿಂತು ಎಲ್ಲರೂ ಹೋಗೆ ಬಿಟ್ಟರಾ.. ಎಂಬ ಒಂದೇ ಒಂದು ದ್ವನಿ ಕೇಳಿಬರುತ್ತದೆ.. ಪ್ರೇಕ್ಷಕರಾಗಿದ್ದ ನಾವು ಮನೆಯ ಒಳಗೇ ಬಂದಿಯಾದ ವೃದ್ಧನನ್ನು ನೋಡುವುದೂ.. ಹೊರಗಡೆ ಮಾಸ್ಕೋ ನಗರಕ್ಕೆ ಹೊರಟು ನಿಂತವರಿಗೆ ಹಳೆಯದು, ವಯಸ್ಸಾದವರು ಗಮನಕ್ಕೆ ಬಾರದೆ ಹೋಗುವ ಆ ಪ್ರಸಂಗ. ಇನ್ನೂ ಕಣ್ಣು ಮುಂದಿದೆ. ಚೇಖಾವ್ ಎಂಥಾ ಮಾಹಾನ್ ನಾಟಕಕಾರ ಒಂದು ಸಣ್ಣ ಪಾತ್ರವಾದರು ಬದಲಾವಣೆ ನವ ಸಮಯ ಹಳೆಯದನ್ನು ವಿಸ್ಮೃತಿಗೆ ಸೇರಿಹೋಗುವ ಆ ದೃಶ್ಯ ನಾಯರಿ ಅಭಿನಯದ ಮೂಲಕ ನನ್ನ ನೆನಪಿನಾಳದಲ್ಲಿ ಸ್ಥಾಯಿಯಾಗಿ ಇನ್ನುಉಳಿದಿದೆ. ಹಲವಾರು ಪ್ರಯೋಗಳನ್ನು ನಾನು ನೋಡಿದ್ದೇನೆ .. ಆದರೇ ಆ ಪಾತ್ರ ನಾಪತ್ತೆ ಯಾಗಿರುತ್ತದೆ.. ನಿರ್ದೆಶಕ ನ ಕಲ್ಪನೆಯೋ ಇಲ್ಲ ನಮ್ಮ ನಾಯರಿಯವರ ಹಿಂದಿ ಸಂಭಾಷಣೆ ಕಾರಣಕ್ಕೋ ಯಾವ ಮುಖ್ಯ ಪಾತ್ರವೂ ಹಿದಿಯೇತರ ಭಾಷಿಕರಿಗೆ ರೆಪರ್ಟರಿ ಯಲ್ಲಿ ಸಿಗುವುದೂ ಇಲ್ಲ. ಅದು ಬೇರೆ ಸಂಗತಿ. ಆದರೆ ವಿದೇಶಿಗನಾದ ರಿಚರ್ಡ್ ಶೇಖ್ ನರ್ ಪಾತ್ರವನ್ನ ನಾಯರಿಯವಾರಿಗೆ ಕೊಟ್ಟದ್ದು, ಆ ಪಾತ್ರ ವನ್ನು ನಾಯಾರಿ ವಿಶಿಷ್ಟ ವಾಗಿ ಕಟ್ಟಿ ಕೊಟ್ಟದ್ದು ಅಲ್ಲದೇ ನಾಟಕದ ಉದ್ದಕ್ಕೂ ಮೂಕ ಶಾಕ್ಷಿಯಾಗಿ ಅಭಿನಯದ ಮೂಲಕ ರಂಗದಲ್ಲಿ ಜೀವಂತ ಪಾತ್ರವಾಗಿ ಬದುಕುವುದು ಇನ್ನು ನನ್ನ ಕಣ್ಣಮುಂದೆ ನಾಯರೀ ಮೂಲಕ ಆ ಪಾತ್ರವೇ ನಿಂತಿದೆ.

ಗೋಪಾಲ್ ಕೃಷ್ಣ ನಾಯರಿ ರಂಗಭೂಮಿಯ ಪ್ರಮುಖ ನಿರ್ದೇಶಕರಲ್ಲಿ ಅವರೂ ಒಬ್ಬರು ಅನ್ನುವುದನ್ನು ಮರೆಯಲಾಗದು. ಅವರ ಬಾಸನ “ಕರ್ಣಬಾರ” ನಾಟಕವನ್ನು ಹಲವು ಪ್ರಾಕಾರ, ವಿನ್ಯಾಸಗಲ್ಲಿ ಮತ್ತೇ ಮತ್ತೇ ನಿರ್ದೇಶಿಸಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ವಿಧ್ಯಾರ್ಥಿಗಳಿಗೆ ನಾನು ನಿರ್ದೆಶಕ ನಾಗಿದ್ದಾಗ ನಾಟಕ ಮಾಡಿಸಲು ಕೇಳಿಕೊಂಡಾಗ “ಬಸು ನನ್ನ ಪ್ರಯೋಗ ಗೊತ್ತಲ್ಲ ನಿಮಗೆ ಆ ಸ್ವಾತಂತ್ರ್ಯ ವಿದ್ದರೆ ಬರುತ್ತೇನೆ” ಎಂದು ದೊಂಬಿದಾಸರು ಆಡುವ ಗಂಗೆ- ಗೌರಿ ಕಥಾನಕವನ್ನು “ಸಮಾಳ” ವಾದ್ಯ ಒಂದನ್ನೇ ಬಳಸಿ ವೀರಗಾಸೆ ಪ್ರಕಾರವನ್ನು ಆಧುನಿಕ ನಾಟಕ ಪ್ರಯೋಗಕ್ಕೆ ಅಳವಡಿಸಿ ” ವೀರಗಾಸೆ ನೀರ ಒಡಪು” ಎಂಬ ಶೀರ್ಷಿಕೆಯಡಿ ನಿರ್ದೇಶಿಸಿದರು. ಆ ಪ್ರಯೋಗ ಭೂಮಿ ಮೇಲಿನ ಗಂಗೆ ಹೆಚ್ಚೋ ಜಾತಿಯಲ್ಲಿ ಶ್ರೇಷ್ಟ ವೆಂದು ಬೀಗುವ ಪಾರ್ವತಿ ಹೆಚ್ಚೋ ಎಂಬಾ ತೀರ್ಮಾನ ಇಬ್ಬರ ಪತಿ ಶಿವನೇ ಮಕ್ಕಳಾದ ಗಣಪತಿ ಮತ್ತು ಸುಬ್ರಹ್ಮಣ್ಯನ ಮುಂದೆ ಕೊಡಬೇಕಾದ ತಾತ್ವಿಕ, ತರ್ಕಬದ್ಧವಾದ ವ್ಯಾಖ್ಯಾನದ ಮೂಲಕ ಕಟ್ಟಿಕೊಟ್ಟಿದ್ದರು.

ಅಲ್ಲದೇ ಅಸಂಖ್ಯ ಶಿಷ್ಯರನ್ನು ನಾಯರಿ ಹೊಂದಿದ್ದರು. ಅವರೇ ಕ್ರಿಯಾಶೀಲ ಗೊಳಿಸಿದ MES ಕಿಶೋರ ಕೇಂದ್ರ. ಸಮಸ್ತರು ರಂಗ ತಂಡಗಳು, ಕುಂದಾಪುರದ ನಾಟಕ ಶಾಲೆಗೆ ವಸಂತ ಬನ್ನಾಡಿ ಯವರು ಸದಾ ಕರೆದು ನಾಟಕ ನಿರ್ದೇಶನ ಮಾಡಿಸುತ್ತಿದ್ದದ್ದು, ಆ ಪ್ರಯೋಗಗಳು ಕನ್ನಡ ರಂಗ ಭೂಮಿಯ ಮಹತ್ವದ ಪ್ರಯೋಗಗಳಾಗಿ ದಾಖಲಾಗೆ ಉಳಿದಿವೆ …

ಇಷ್ಟು ಬೇಗ ಹೋಗುವ ಅವಸರ ವಿರಲಿಲ್ಲ.. ಆದರೂ ಹೊರಟು ನಿಂತಿರಿ .
ನಿಮ್ಮ ಗೆಳೆತನಕ್ಕೆ ಈ ನುಡಿ ನಮನ ನಿಮಗೆ. ಹೋಗಿ ಬನ್ನಿ

‍ಲೇಖಕರು Admin

6 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading