ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಡೆ ಕೆಡವಲಾಗದವರು.. 

ರಾತ್ರಿ ಹನ್ನೊಂದು ಗಂಟೆಯ ಹೊತ್ತಿಗೆ ಆ ಬೀದಿಯ ಕೊನೆಯಲ್ಲಿರುವ ಮನೆಯ ಬಾಗಿಲು ಬಡಿದ ಸದ್ದಾಯಿತು. ಅದರಲ್ಲಿ ವಾಸವಿದ್ದ ‘ಅವಳು’ ಯೋಚನೆಗೆ ಜಾರಿದಳು. ಈ ಹೊತ್ತಿನಲ್ಲಿ ತನ್ನ ಮನೆಯ ಬಾಗಿಲು ಬಡಿದವರ್ಯಾರಿಬಹುದೆಂಬ ದಿಗಿಲು ಅವಳಿಗೆ.

ಮನೆಯೊಳಗಿನ ಲೈಟ್ ಆನ್ ಮಾಡದೇ ಬಾಗಿಲಿಗೆ  ಅಂಟಿಕೊಂಡಂತಿದ್ದ ಕಿಟಕಿಯಲ್ಲಿ ಇಣುಕಿ ನೋಡಿದಳು. ಆಶ್ಚರ್ಯ!. ಪಕ್ಕದ ಮನೆಯಲ್ಲಿ ತನ್ನಂತೆಯೇ ಏಕಾಂಗಿಯಾಗಿ ವಾಸವಾಗಿದ್ದ ಆ ‘ಅವನು’ ಬಾಗಿಲ ಹೊರಗೆ ನಿಂತಿದ್ದಾನೆ. ಇವಳಿಗೋ ಭಯ ಶುರುವಾಯಿತು.

ಇವನೇಕೆ ಪಕ್ಕದಲ್ಲಿರುವ ತನ್ನ ಮನೆಗೆ ಹೋಗುವುದು ಬಿಟ್ಟು ನನ್ನ‌ ಮನೆ ಬಾಗಿಲು ತಟ್ಟುತ್ತಿದ್ದಾನೆ ಎಂದು. ಈ ಅಪರಾತ್ರಿಯಲ್ಲಿ ಹೀಗೆ ಹೆಂಗಸೊಬ್ಬಳೇ ವಾಸಿಸುವ ಮನೆಯ ಬಾಗಿಲು ತಟ್ಟುತ್ತಿರುವ ಅವನ ಬಗ್ಗೆ ಅವಳಲ್ಲಿ ಆ ಕ್ಷಣಕ್ಕೆ ಅಸಹ್ಯ ಮೂಡಿತು. ಕುಡಿದು ಬಂದಿದ್ದಾನಾ ಎಂದು ಅಂದಾಜಿಸಿದಳು. ತುಂಬಾ ನಿಖರತೆಯಿಂತ ನಿಂತಿದ್ದ ಅವನು ಕುಡಿದವನಂತೆ ಕಾಣಲಿಲ್ಲ. ಅವಳು ಬಾಗಿಲ ಬಳಿಯಲ್ಲೇ ಯೋಚಿಸುತ್ತಾ ನಿಂತಳು…

ಬಾಗಿಲು ತೆಗೆದು ಅವನನ್ನು ಒಳಗೆ ಕರೆದಳು. ಅವನು ಬಂದು ಕೂತವನು ‘ ಊಟ ಇದೆಯಾ?’ ಎಂದು ಕೇಳಿದನು. ಪಟಪಟನೆ ಅಡುಗೆ ಮನೆಗೆ ಹೋಗಿ ತಾನು ಉಂಡು ಉಳಿದಿದ್ದ ಅಡುಗೆಯನ್ನು ತಂದು ಬಡಿಸಿದಳು. ಅವನು ಏನೊಂದೂ ಮಾತಾಡದೆ ಊಟ ಮಾಡಿ ಮುಗಿದ ನಂತರ ಅವಳನ್ನು ಕುರಿತು ಹೀಗೆ ಹೇಳಿದನು.

ತುಂಬಾ ಧನ್ಯವಾದಗಳು, ಇವತ್ತು ಕೆಲಸದ ಒತ್ತಡದಲ್ಲಿ ಊಟಕ್ಕೆ ಹೋಟೆಲ್ ಗೆ ಹೋಗುವುದು ಸಾಧ್ಯವಾಗಲಿಲ್ಲ. ಹಾಗಾಗಿ ಇಷ್ಟು ಹೊತ್ತಿನಲ್ಲಿ ಬಂದು ನಿಮಗೆ ತೊಂದರೆ ಕೊಡಬೇಕಾಯಿತು. ನೀವು ತಪ್ಪು ತಿಳಿಯಬಾರದು.

‘ಅಯ್ಯೋ ಇಲ್ಲ.‌ ನನಗ ಮೊದಲು ಭಯ ಆಯ್ತು ಇಷ್ಟೊತ್ತಲ್ಲಿ ಯಾರು ಅಂತ. ಆದರೆ ನೀವು ಸಂಕೋಚವಿಲ್ಲದೆ ಊಟ ಕೇಳಿ ಪಡೆದದ್ದು ನನಗೆ ಖುಷಿಯೇ ಆಯಿತು’ ಎಂದು ವಿನಯದಿಂದ ಅವಳು ಹೇಳಿದಳು.

‘ನಿಮ್ಮದು ಒಳ್ಳೆಯ ಮನಸ್ಸು. ದೇವರು ಒಳ್ಳೆಯದನ್ನೇ ಮಾಡುತ್ತಾನೆ’ ಎಂದು ಹರಸಿ ದಾಸೋಹಕ್ಕೆ ಬಂದ ಶರಣನೆಂಬಂತೆ ಅವನು ತನ್ನ ಮನೆಗೆ ಹೋದ. ಆಮೇಲೆ ಅವಳು, ‘ಛೇ, ಅವನ ಬಗ್ಗೆ ತಾನು ತಪ್ಪು ತಿಳಿಯಬಾರದಿತ್ತು. ಊಟ ಕೇಳಿ ಬಂದವನನ್ನು ಅನುಮಾನಿಸಬಾರದಿತ್ತು’ ಎಂದು ತನ್ನನ್ನೇ ಹಳಿದುಕೊಂಡಳು.

ಆದರೆ ಅವಳು ಅಂತ ಅಭಿಪ್ರಾಯಕ್ಕೆ ಬಂದಿದ್ದು ತುಂಬಾ ಅವಸರದಲ್ಲಿಯೇನೋ ಎಂಬುದಕ್ಕೆ ಪುಷ್ಟಿ ಕೊಡುವಂಥ ಘಟನೆ ಮರುದಿನ ನಡೆಯಿತು. ಸರಿಯಾಗಿ ಹನ್ನೊಂದು ಗಂಟೆ ರಾತ್ರಿಗೆ ಅವನು ಮರುದಿನವೂ ಬಾಗಿಲು ಬಡಿದ. ಈ ಬಾರಿ ಅವಳಿಗೆ ಭಯವಾಗಲೀ, ಆತಂಕವಾಗಲೀ ಇರಲಿಲ್ಲ. ಅವಳ ಊಹೆ ತಪ್ಪಾಗಿರಲಿಲ್ಲ. ಅದು ಅವನೇ. ಮತ್ತೆ ಅದೇ ಕಾರಣ ಕೊಟ್ಟ ‘ ಇವತ್ತೂ …..’

ಆಕೆ ಅವನ ಮಾತುಗಳು ಪೂರ್ಣಗೊಳ್ಳುವ ಮೊದಲೇ ಊಟ ತಂದಿಟ್ಟಿದ್ದಳು. ಅವನು ಊಟ ಮಾಡುತ್ತಿರುವಾಗ  ಆಕೆ ಕೇಳಿದಳು ‘ ಇವತ್ತು ನಿಜವಾಗಲೂ ಕೆಲಸ ಜಾಸ್ತಿ ಇತ್ತೊ ಅಥವಾ ಇಲ್ಲಿಗೆ ಊಟಕ್ಕೆ ಬರಬೇಕೆಂದು…’
ಅವಳ ಮಾತನ್ನು ತುಂಡರಿಸಿ ಅವನು ಹೇಳಿದ, ‘ ಸತ್ಯವಾಗಲೂ ಕೆಲಸ ಜಾಸ್ತಿ ಇತ್ತು. ನೀವು ಹೀಗೆ ಅನುಮಾನಿಸುವುದಾದರೆ ನನಗೆ ಊಟ ಬೇಡ’ ಎಂದ.

‘ಅಯ್ಯೋ ಅನುಮಾನವಿಲ್ಲ. ಆದರೆ ನಿಮ್ಮ ಬ್ಯಾಗ್ ನಲ್ಲಿ ಊಟದ ಪಾರ್ಸೆಲ್ ಕವರ್ ಇರೋದನ್ನ ನೋಡಿದೆ. ಹಾಗಾಗಿ ಕೇಳಿದೆ ಅಷ್ಟೇ’ ಎಂದಳವಳು.

ಅವನು ಇದನ್ನು ನಿರೀಕ್ಷಿಸಿರಲಿಲಲ್ಲ. ಅವಮಾನವಾದಂತಾಯಿತು. ಅವನ ಮನಸ್ಥಿತಿಯನ್ನು ಅರಿತ ಅವಳೇ ಮುಂದುವರಿಸಿ ಹೇಳಿದಳು. ‘ಪರವಾಗಿಲ್ಲ, ನಾಳೆ ಪಾರ್ಸೆಲ್ ತರಲು ಹೋಗಬೇಡಿ. ಇಲ್ಲಿಗೇ ಬನ್ನಿ. ಊಟ ನಿಮಗೂ‌ ಸೇರಿಸಿ ಮಾಡಿರುತ್ತೇನೆ.’

ಅವನಿಗೆ ಅವಮಾನದಿಂದ ತಪ್ಪಿಸಿಕೊಂಡ ಖುಷಿಯ ಜೊತೆ ಪ್ರತಿದಿನ ರಾತ್ರಿ ಊಟದ ಭರವಸೆ ಸಿಕ್ಕಿತು. ಅವನು ಊಟ ಮುಗಿಸಿ ಮನೆಗೆ ಹೊರಟ. ಥ್ಯಾಂಕ್ಸ್ ಹೇಳಬೇಕು ಎಂದು ಅವನಿಗೂ ಅನ್ನಿಸಿರಲಿಲ್ಲ. ಮರುದಿನ ಬೆಳಗ್ಗೆ ಗಾಡಿಗೆ ಕಸ ಹಾಕಲು  ಇಬ್ಬರೂ ಒಂದೇ ಸಮಯಕ್ಕೆ ಡಸ್ಟ್ ಬಿನ್ ಹಿಡಿದು ಬಂದಾಗ ‘ ಇವತ್ತು ಮುದ್ದೆ ಉಪ್ ಸಾರು ಮಾಡಿ ‘ ಎಂದು ಮೆಲ್ಲಗೆ ಅವಳ ಕಿವಿಯಲ್ಲಿ ಹೇಳಿದಂತೆ ಹೇಳಿ ಪರಾರಿಯಾಗಿಬಿಟ್ಟಿದ್ದ. ತಕ್ಷಣಕ್ಕೆ ಇವನದು ಅತಿಯಾಯಿತು ಎಂದು ಅವಳಿಗೆ ಅನ್ನಿಸಿದರೂ ಅವನ ಬಗ್ಗೆ ಕೋಪವೇನೂ ಮೂಡಲಿಲ್ಲ.

ಆ ರಾತ್ರಿ ಅವನು ಹೇಳಿದಂತೆಯೇ ಮುದ್ದೆ ಉಪ್ ಸಾರು ಮಾಡಿಕೊಂಡು ಆಕೆ ಕಾಯುತ್ತಿದ್ದಳು. ಅವನು ಬಂದ. ಆಕೆ ಊಟ ಬಡಿಸಿದಳು. ಅದೇಕೋ ಅವಳಿಗೆ ಸ್ವಲ್ಪ ತುಂಟತನ ಮಾಡಬೇಕು ಅನ್ನಿಸಿತು.

‘ಊಟ ಮಾಡೋಕ್ ಮಾತ್ರ ನನ್ ಮನೇನಾ ? ಮಲಗೋಕ್ ಮಾತ್ರ ನಿಮ್ ಮನೆಗೇ ಹೋಗ್ಬೇಕಾ ‘ ಎಂದು ತುಟಿಯಂಚಲ್ಲಿ ತುಂಟತನ ತುಂಬಿಕೊಂಡು ಹೇಳಿದಳು.

ಅವನಿಗೆ ಅದು ಹಿಡಿಸಲಿಲ್ಲ. ಏನೂ ಮಾತಾಡದೆ ಎದ್ದು ಹೋದ. ಅವಳಿಗೆ ನೋವಾಯಿತು. ತಾನು ಹಾಗೆ ಕೇಳಬಾರದಿತ್ತೆ. ಅಷ್ಟಕ್ಕೂ ತಾನು ಹಾಗೆ ಕೇಳಿದ್ದರ ಹಿಂದಿನ ಉದ್ದೇಶವಾದರೂ ಏನು ಎಂದು ಆ ರಾತ್ರಿಯಿಡೀ ಯೋಚಿಸತೊಡಗಿದಳು. ಮರುದಿನ ಅವನು ಬರವುದಿಲ್ಲವೇನೋ ಎಂದುಕೊಂಡಳು‌. ಆದರೆ ಹಾಗಾಗಲಿಲ್ಲ. ಅವನು ಎಂದಿನಂತೆ ಸರಿಯಾದ ಸಮಯಕ್ಕೆ ಬಂದ. ಯಾವುದೋ ಹುಮ್ಮಸ್ಸಿನಲ್ಲಿದ್ದಂತೆ ಕಂಡುಬಂದ. ಊಟಕ್ಕೆ ಕೂತವನು ‘ನನ್ನ ಬ್ಯಾಗ್ ನಲ್ಲಿ ಏನಿದೆ ತೆಗೆದು ನೋಡಿ’ ಎಂದ . ಆಕೆ ತೆಗೆದು ನೋಡಿದಳು.‌ ಅಲ್ಲಿ ಮಲ್ಲಿಗೆ ಹೂವಿನ ಪೊಟ್ಟಣವೊಂದಿತ್ತು. ಅವಳಿಗೆ ಗೊಂದಲವಾಯಿತು.

‘ಏನು ಇದರ ಅರ್ಥ ?’ ಎಂದಳು.

‘ನಿನ್ನೆ ನೀವೇ ಕೇಳಿದಿರಲ್ಲವಾ ? ನಿಮ್ಮ ಮನೆಯಲ್ಲಿ ಮಲಗೋಕೆ. ಅದಕ್ಕಾಗಿ ಮಲ್ಲಿಗೆ ಹೂವು ತಂದೆ. ಸುಮವಿಲ್ಲದ ಶೃಂಗಾರ ಸಪ್ಪೆಯಲ್ಲವೆ ?’ ಎಂದು ತನ್ನ ವಾಕ್ ಚಾತುರ್ಯ  ಮೆರೆದ.

‘ನನ್ನ ಮನೆಯಲ್ಲಿ ಮಲಗಿ ಅಂದದ್ದು ನನ್ನ ಮೈಯೊಳಗೆ ಹೊಗಲಿಕ್ಕೆ ಪರ್ಮಿಷನ್ ಕೊಟ್ಟ ಹಾಗೆಯೇ ? ಮಲಗು ಎಂಬುದನ್ನು ನೀವು ಹೀಗೆ ಮಾತ್ರ ಅರ್ಥೈಸಿಕೊಳ್ತೀರಿ ಅಂತ ನನಗೆ ನಿಜಕ್ಕೂ ಅನ್ನಿಸಿರಲಿಲ್ಲ.’ ಎಂದು ಬೇಸರದ ಧ್ವನಿಯಲ್ಲಿ ಆಕೆ ಹೇಳಿದಾಗ ಅವನಿಗೆ ನಾಚಿಕೆಯಾಯಿತು. 

‘ಕ್ಷಮಿಸಿ, ನಾನು ದುಡುಕಿದೆ. ಮತ್ತೆಂದೂ ಊಟಕ್ಕೆ ಬರುವುದಿಲ್ಲ’ ಎಂದು ಹೇಳಿ ಅವನು ಹೊರಟು ನಿಂತ.
‘ಶೃಂಗಾರಕ್ಕೆ ತಂದ ಸುಮವನ್ನು ವ್ಯರ್ಥ ಮಾಡುವುದು ತಪ್ಪಲ್ಲವೇ ?’ ಎನ್ನುತ್ತಾ ನುಲಿದಳಾಕೆ.

ಅವನಿಗೆ ಅರ್ಥವಾಯಿತು. ಒಬ್ಬರಿಗೊಬ್ಬರು ಶೃಂಗಾರ ಪಾಠ ಮಾಡುತ್ತ ಆ ರಾತ್ರಿ ಕಳೆದಿತ್ತು. ಕತ್ತಲು ಕೊಡುವ ಅಜ್ಞಾತವನ್ನು ಬೆಳಕು ಕೊಡಲಾರದು. ಬೆಳಗ್ಗೆ ಎದ್ದು ಅವನು ಕೆಲಸಕ್ಕೆ ಹೊರಡಬೇಕು‌ ಆದರೆ ಅವಳ ಮನೆಯಿಂದ ಹೊರ ಹೋಗುವುದನ್ನು ಯಾರಾದರೂ ನೋಡಿದರೆ ಏನು ಗತಿ ಎಂದು ಇಬ್ಬರೂ ಚಿಂತಿತರಾದರು. ಅಕ್ಕಪಕ್ಕದಲ್ಲೇ ಇದ್ದ ಮನೆಯ ಇಬ್ಬರು ಸೇರುವುದು ಎಷ್ಟು ಕಠಿಣವಲ್ಲವೇ ? ಎಂದುಕೊಂಡವರು ಒಂದು ತೀರ್ಮಾನಕ್ಕೆ ಬಂದರು. ಆ ಎರಡೂ ಮನೆಗಳಿಗೆ ಹೊಂದಿಕೊಂಡಿದ್ದ ಮಧ್ಯದ ಗೋಡೆಯನ್ನು ಒಡೆಯುವುದು. ಆಗ ಹೊರಗಡೆಯಿಂದ ಎರಡು ಬೇರೆ ಬೇರೆ ಮನೆಗಳಂತೆ ಕಾಣುತ್ತವೆ ಮತ್ತು ಒಳಗೆ ಇವರಿಬ್ಬರೂ‌ ಪರಸ್ಪರ ಸಂಧಿಸಲು ಯಾವ ಅಡೆತಡೆಯೂ ಇರುವುದಿಲ್ಲ ಎಂಬುದು ಅವರ ಯೋಜನೆಯಾಗಿತ್ತು.

ಹಾಗೆ ಗೋಡೆ ಕೆಡವಿದ ದಿನದಿಂದ ಅವನು ಅವಳ ಮನೆ ಬಾಗಿಲಿನಿಂದ ಊಟಕ್ಕೆ ಬರುವುದನ್ನು ನಿಲ್ಲಿಸಿದ. ನೇರವಾಗಿ ತನ್ನ ಮನೆಗೆ ಹೋಗಿ ಅಲ್ಲಿಂದ ಅವಳನ್ನು ತಲುಪತೊಡಗಿದ. ಹಾಗೆ ತಲುಪಿದವ ಮಲ್ಲಿಗೆ ತಂದ ಅನೇಕ ರಾತ್ರಿಗಳಲ್ಲಿ ಹಿಂತಿರುಗುತ್ತಲೇ ಇರಲಿಲ್ಲ. ಹೇಗೂ ಬೆಳಕಲ್ಲಿ ಕಣ್ತಪ್ಪಿಸುವ ಅವಕಾಶ ಆಗಿತ್ತಲ್ಲ ! ತಮ್ಮ ನಡುವಿನ ಈ ಸಂಪರ್ಕಕ್ಕೆ,  ಸಂಬಂಧಕ್ಕೆ ಇಷ್ಟು ದಿನಗಳ ಕಾಲ ಅಡ್ಡಿಯಾಗಿದ್ದ ಆ ಗೋಡೆ ಕೆಡವಿದೆವು ಎಂದು ಅವರಂದುಕೊಂಡರು. ವಾಸ್ತವದಲ್ಲಿ ಅವರು ಆ ಗೋಡೆ ಕೆಡವಿದ್ದು ಒಂದು ದೊಡ್ಡ ಗೋಡೆಯನ್ನು ಕಟ್ಟಿಕೊಳ್ಳಲಿಕ್ಕೆ ಎಂಬುದು ಅವರ ಅರಿವಿಗೆ ಬರಲೇ ಇಲ್ಲ

ಕಿಟಕಿಯಿಂದ ಹೊರಗೆ ನೋಡುತ್ತಾ ನಿಂತಿದ್ದ ಅವಳು ಒಂದು ವೇಳೆ ತಾನೀಗ ಅವನಿಗೆ ಬಾಗಿಲು ತೆಗೆದರೆ ಏನು ನಡೆಯಬಹುದೆಂದು ಮೇಲಿನಂತೆಲ್ಲಾ ಕಲ್ಪಿಸಿಕೊಂಡು, ಅನಿರೀಕ್ಷಿತವಾದುದು ಅಪೂರ್ವವಾಗಿಯೂ ಇರುತ್ತದೆ ಎಂದೆನಿಸಿ ಬಾಗಿಲು ತೆಗೆದೇ ಬಿಡೋಣ‌ ಎಂದು ನಿರ್ಧರಿಸಿ ಬಾಗಿಲು ತೆಗೆದರೆ ‘ಅವನು’ ಅಲ್ಲಿರಲಿಲ್ಲ. ಪಕ್ಕದ ಮನೆಯಲ್ಲಿ ಆಗತಾನೆ ಲೈಟ್ ಆನ್ ಆಯಿತು. ಅವನು ಪಾರ್ಸೆಲ್ ತಂದ ಊಟವನ್ನು ತಟ್ಟೆಗೆ ಹಾಕಿಕೊಂಡ ಸದ್ದೂ ಕೂಡ ಆ ರಾತ್ರಿಯ ನೀರವತೆಯಲ್ಲಿ‌ ಅವಳಿಗೆ ಕೇಳಿಸಿತು…

ಅಂದಿನಿಂದ ಪ್ರತಿ ರಾತ್ರಿ ಹನ್ನೊಂದು ಗಂಟೆಗೆ ಆಕೆ ಕಿಟಕಿಯ ಬಳಿ ಬಂದು ನಿಲ್ಲುತ್ತಾಳೆ … ಅವನು ಅದೇ ಸಮಯಕ್ಕೆ ಬರುತ್ತಾನೆ . ಆದರೆ ಅವಳ ಮನೆಯ ಬಾಗಿಲು ಅವನೆಂದೂ ಮತ್ತೆ ಬಡಿಯಲೇ ಇಲ್ಲ.

ಇತ್ತ ಇವಳು ಮಾತ್ರ ಕಿಟಕಿಯ ಬಳಿ ನಿಂತು ಬಾಗಿಲು ಬಡಿವ ಸದ್ದಿಗಾಗಿ ಕಾಯುತ್ತಲೇ ಇದ್ದಾಳೆಯೇ ಹೊರತು ಗೋಡೆ ಕೆಡವಿ ಅವನನ್ನು ತಲುಪುವುದು ಸಾಧ್ಯವಾಗಿಲ್ಲ …

‍ಲೇಖಕರು Avadhi Admin

2 April, 2019

ನಿಮಗೆ ಇವೂ ಇಷ್ಟವಾಗಬಹುದು…

6 Comments

  1. prabhakar joshi

    super drafting

    • Shivakumar mavali R M

      Thank you

  2. ರೇಣುಕಾ ರಮಾನಂದ

    ಎಂದಿನಂತೆ ಹೊಸಬಗೆ,ನಿರೂಪಣೆ ಚಂದ.ಯಾಕೋ ವಿಷಾದ

  3. Shivakumar mavali R M

    ನನಗೆ ವಿಷಾದ ಏಕೋ ರೂಢಿಯಾಗಿಬಿಟ್ಟಿದೆ

  4. Vinod Kumar

    ಚಂದ ಬರಹ ಸರ್

  5. Sangeeta Kalmane

    ನಂಗಿಷ್ಟವಾಯಿತು ಬರಹ. ಗೋಡೆ ಮಾತಾಡುವಂತಿದ್ದರೆ…..ಅನಿಸಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading