ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೆಜ್ಜುಣಸೆ ಹಣ್ಣೂ ಬರ್ಲು ಕಡ್ಡೀನೂ…

ರಾಜೇಶ್ವರಿ ಹುಲ್ಲೇನಹಳ್ಳಿ

ತಂಗಿ ಊರಿನಿಂದ ಒಂದಷ್ಟು ಹುಣಿಸೆ ಹಣ್ಣು ತಂದು ನೀವೇ ಬಿಡಿಸಿಕೊಳ್ಳಬೇಕು ನನಗೆ ಊರಲ್ಲಿ ಯಾರೂ ಹಣ್ಣು ಸಿಪ್ಪೆ ತೆಗೆದು ಬಿಡಿಸಿಕೊಳ್ಳಲು ಜನ ಸಿಗಲಿಲ್ಲ ಎನ್ನುತ್ತಾ ಹುಣಿಸೆ ಹಣ್ಣಿನ ಬ್ಯಾಗನ್ನುಮನೆಯೊಳಗೆ ತಂದಾಗ. ಅಯ್ಯೋ ಬಿಡಿಸೋರು ಯಾರಪ್ಪಾ ಹೇಗಪ್ಪಾ? ಎಂದುಕೊಳ್ಳುತ್ತಾ ಬ್ಯಾಗ್ ಬಿಚ್ಚಿ ನೋಡಿದಾಗ ಸಿಪ್ಪೆಯಿಂದ ಬಿರುಕು ಬಿಟ್ಟ ಕೆಂಪು ಹುಣಿಸೆ ಹಣ್ಣನ್ನು ನೋಡಿದೊಡನೆಯೇ ಬಾಯಲ್ಲಿ ನೀರೂರುವ ಬದಲು ಹಲ್ಲು ಜುಂ ಎಂದಿತು, ಮನಸು ಬಾಲ್ಯಕ್ಕೆ ಜಾರಿತು. ಬಾಯಲ್ಲಿ ನೀರೂರುವ ಬದಲು ಹಲ್ಲು ಜುಂ ಎನ್ನಲು ಕಾರಣ ನಿಮಗೆ ಬಿಡಿಸಿ ಹೆರಳಬೇಕೆಂದಿಲ್ಲವಲ್ಲ! ಒಂದೋ ವಯಸ್ಸಾಗಿರೋದು, ಇಲ್ಲವೆ ಹಲ್ಲು ತನ್ನ ಗಟ್ಟಿತನ ಕಳೆದುಕೊಂಡು ತುಂಬಾ ಸೆನ್ಸಿಟಿವ್ ಆಗಿರೋದು !ಎರಡರಲ್ಲಿ ಒಂದು ಹೌದಲ್ಲಾ

ಹೌದು ಹುಣಿಸೆ ಹಣ್ಣು, ಗಿಣಿ ಮಾವಿನ ಕಾಯಿ ನೋಡಿದೊಡನೆ ಸಾಮಾನ್ಯವಾಗಿ ಎಲ್ಲರ ಅದರಲ್ಲೂ ಹೆಣ್ಣು ಮಕ್ಕಳ ಬಾಯಲ್ಲಿ ನೀರೂರುತ್ತಿದ್ದ ಬಾಲ್ಯದ ನೆನಪಾಯ್ತು. ಈ ಹುಣಿಸೆ ಹಣ್ಣಾಗುವುದು  ಮಾವು ಚಿಗುರಿ ಕಾಯಿ ಬಿಡುವುದು ಈ ಬೇಸಿಗೆಯಲ್ಲೇ ತಾನೇ ಅದರಲ್ಲೂ ಈ ಬೇದಿಗೆ ರಜೆಯಲ್ಲೇ ತಾನೇ?.ಷಷ್ಟಿ ಹಬ್ಬದಲ್ಲಿ ಹುಣಿಸೆ ಕಾಯನ್ನು ಉಪಯೋಗಿಸುತ್ತಿದ್ದರು. ಷಷ್ಟಿ ಹಬ್ಬದಲ್ಲಿಮಾಡುವ ಎಲ್ಲ ತರಕಾರಿಗಳ ಮಿಶ್ರ ಸಾರಿಗೆ ಹೊಸ ಹುಣಿಸೆ ಕಾಯಿಯನ್ನು ಬೇಯುವ ತರಕಾರಿಯೊಂದಿಗೆ ತುಸು ಬೇಯಿಸಿ ತೆಗೆದು ಅದರ ರಸವನ್ನು ಹಿಂಡಿ ಅಗತ್ಯವಿದ್ದಷ್ಟನ್ನು ಸಾರಿಗೆ ಸೇರಿಸುವುದು ವಿಶೇಷ. ಆಗ ಹುಣಿಸೆ ಇನ್ನೂ ಹಣ್ಣಾಗಿರುತ್ತಿರಲಿಲ್ಲ ಹುಣಸೆ ಕಸಯನ್ನು ಹುಡುಕಿ ತರುತ್ತಿದ್ದರು. ಆದರೆ ಹಳೆಯ ಹುಣಿಸೆ ಹಣ್ಣು ಇದ್ದರೂ ಅಂದು ಅದನ್ನು ಉಪಯೋಗಿಸುತ್ತಿರಲಿಲ್ಲ ಕೂಡ. ಹೊಸ ಅಕ್ಕಯಿಂದ ಉಗ್ಗಿ ಮಾಎಉವಂತೆ ಹೊಸ ಹುಣಸೆ ಕಾಯಿಯ ರಸವನ್ನು ತರಕಾರಿ ಹಾಕುತ್ತಿದ್ದುದು ಕೂಡ  ರೂಢಿ!

ಈ ಬೇಸಿಗೆ ಎಂದರೆ  ಹಾಗೇ  ಶಾಲೆಯ ಪರೀಕ್ಷೆಗಳು ಕಳೆದು ಮಕ್ಕಳಿಗೆ ರಜೆ ಸಿಗುವುದಕ್ಕೂ ಅದೇ ಸಮಯದಲ್ಲಿ  ಮಾವಿನಕಾಯಿ ಅದರಲ್ಲೂ ಗಿಣಿ ಮೂತಿ ಮಾವಿನ ಕಾಯಿ,  ಹುಣಸೆ ಹಣ್ಣು ಬಿಡುವುದಕ್ಕೂ ಒಂದೇ ಸಮಯ!  ಒಮ್ಮೆ ಈ ಮಕ್ಕಳ ರಜೆಗೂ ಮಾವು, ಹುಣಿಸೆ, ಬೆಳೆಗೂ ಅವಿನಾಭಾವ ಸಂಬಂಧವೆಂದೆನಿಸಿದರೆ, ಮಾಮರವೆಲ್ಲೋ ಕೋಗಿಲೆ ಎಲ್ಲೋ ಏನೀ ಸ್ನೇಹಾ ಸಂಬಂಧ ಎನುವಂತೆ ಮಾವಿನ ಕಾಯಿಗೂ ಈ ಬೇಸಿಗೆ ರಜೆಯ ಮಕ್ಕಳಿಗೂ ಅದೇನು ಸಂಬಂಧವೋ ಎನಿಸುತ್ತದೆ ಮಗದೊಮ್ಮೆ. ನಮ್ಮ ಬಾಲ್ಯದಲ್ಲಿ ಪರೀಕ್ಷೆ ಮುಗಿದು ಯುಗಾದಿ ಕಳೆದು ಮಕ್ಕಳ ಶಾಲೆಗೆ ರಜೆ ಬಂತೆಂದರೆ ಸಾಕು ಮಕ್ಕಳಿಗೆ ಹಲವಾರು ಆಟ ಚೇಷ್ಟೆಗಳು.  

ನಮ್ಮಹಳ್ಳಿಯಿಂದ ನಮ್ಮದೇ ಹುಣಸೆ ಮರದ ಹಣ್ಣನ್ನು ತಂದಾಗ ಅಕ್ಕ ಪಕ್ಕದ ಮನೆಯ ಹಿರಿಯರೆಲ್ಲ ಕುಳಿತು ಮಾತನಾಡುತ್ತಾ ಹಣ್ಣನ್ನು ಸಿಪ್ಪೆಯಿಂದ ಬೇರ್ಪಡಿಸಿ ನಂತರ ಬೀಜವನ್ನು ಬೇರ್ಪಡಿಸಿ ಹಣ್ಣನ್ನು ಉಲ್ಟಾ ಮಡಿಚಿ ಒಪ್ಪವಾಗಿ ಸುತ್ತಿ ಮಣ್ಣಿನ ದೊಡ್ಡ ಮಡಕೆಗಳಲ್ಲಿ ತುಂಬಿಸಿ ಗಾಳಿಯಾಡದಂತೆ ಬಟ್ಟೆಯಿಂದ ಮಡಕೆಯ ಬಾಯಿ ಕಟ್ಟಿ (ಏರ್ ಟೈಟ್ ಮಾಡಿ) ಅಟ್ಟದ ಮೇಲಿಡುವುದು ರೂಢಿಯಲ್ಲಿತ್ತು. ಇನ್ನು ನಿತ್ಯ ಬಳಸಲು  ಪಿಂಗಾಣಿಯ ಜಾಡಿಗಳಲ್ಲಿ ಡಬ್ಬಿಗಳಲ್ಲಿ ತುಂಬಿಸಿಡುತ್ತಿದ್ದರು. ಹುಣಿಸೆ ಸಿಪ್ಪೆ ಬಿಡಿಸುವ ಕೆಲಸಕ್ಕೆ ಗೆಜ್ಜುಣಿಸೆ ಹಣ್ಣು ಮಾಡಿ ತಿನ್ನುವ ಸಲುವಾಗಿ ಮಕ್ಕಳು ನಾವು ಕೂಡ ಹುಣಿಸೆ ಹಣ್ಣು ಬಿಡಿಸಲು ನಾ ಮುಂದು ತಾ ಮುಂದು ಎಂದು ಕೈ ಜೋಡಿದುತ್ತಿದ್ದೆವು. ಹೀಗೆ ಸಹಾಯ ಮಾಡಿದ ನಮಗೆ ಹುಣಸೆ ಹಣ್ಣು ಮತ್ತು ಹುಣಸೆ ಬೀಜದ ಮೇಲೆ ಕಣ್ಣಿರುತ್ತಿತ್ತು. ಅಂತೆಯೇ ನಮಗೆ ಹುಣಸೆ ಹಣ್ಣನ್ನು ಹುಣಸೆ ಬೀಜವನ್ನು ಕೊಟ್ಟಾಗ ನಮ್ಮ ಕೆಲಸ ಕೂಡಲೇ ಶುರುವಾಗುತ್ತಿತ್ತು.             

ಹಿರಿಯರು ಕೊಟ್ಟ ಹುಣಿಸೆ ಹಣ್ಣನ್ನು ತೆಗೆದುಕೊಂಡು ಹೋಗಿ ಬೀದಿಯಲ್ಲಿದ್ದ ಓರಗೆಯ ಗಂಡು ಹೆಣ್ಣು ಮಕ್ಕಳನ್ನೆಲ್ಲ ಒಟ್ಟುಗೂಡಿಸಿ ಒಬ್ಬರ ಮನೆಯಿಂದ ಒಣ ಮೆಣಸಿನಕಾಯಿ, ಮತ್ತೊಬ್ಬರ ಮನೆಯಿಂದ ಜೀರಿಗೆ ಉಪ್ಪುಇನ್ನೊಬ್ಬರ ಮನೆಯಿಂದ  ಬೆಲ್ಲ, ಹಾಗೇ ತೆಂಗಿನ ಗರಿ ಪೊರಕೆಯ (ಬರ್ಲು) ಹಂಚಿ ಕಡ್ಡಿ ಎಲ್ಲವನ್ನೂ ತರಿಸಿ ಬೀದಿಯ ಜಗುಲಿಯ ಮೇಲಿನ ಹಾಸುಗಲ್ಲನ್ನು, ನಾವು  ತೊಟ್ಟಿದ್ದ ಲಂಗ ಅಥವಾ ಫ್ರಾಕಿನಿಂದ ಒರೆಸಿ  ಮನೆಯಲ್ಲಿ ಉಪಯೋಗಿಸುತ್ತಿದ್ದ ಮರಳಿನಲ್ಲಿ ಸಿಗುತ್ತಿದ್ದ ದಪ್ಪನೆಯ ನೈಸ್ ಕಲ್ಲನ್ನು ತಂದು ಮೊದಲು ಮೆಣಸಿನ ಕಾಯಿ, ಜೀರಿಗೆಯನ್ನು ದಪ್ಪ ದಪ್ಪಗೆ ಜಜ್ಜಿ ನಂತರ ಸರಿಯಾಗಿ ಕುಟ್ಟಿ ಅದು ಹದವಾಗಿ ಪುಡಿಯಾದ ಮೇಲೆ ಬಿಡಿಸಿದ ಹುಣಿಸೆ ಹಣ್ಣನ್ನುಹಾಕಿ ಚನ್ನಾಗಿ ಜಜ್ಜಿ ಮಿಶ್ರ ಮಾಡಿ ನಂತರ ಅದಕ್ಕೆ ರುಚಿಗೆ ಬೇಕಾದಷ್ಡು ಉಪ್ಪು ಸೇರಿಸಿ, ತುಸು ಬೆಲ್ಲ ಹಾಕಿ ಎಲ್ಲ ಹದ ಮಾಡುವಷ್ಟರಲ್ಲಿ ಅಕ್ಕ ಪಕ್ಕ ಸುತ್ತ ಮುತ್ತ ಕುಳಿತ ಎಲ್ಲರ ಬಾಯಲ್ಲಿ ನೀರು ಸುರಿಸಿಕೊಂಡು ಹಾಗೇ ನುಂಗಿ ಕೊಳ್ಳುತ್ತಿದ್ದುದೂ ಉಂಟು.! 

ಕುಟ್ಟುವಾಗ ಒಬ್ನೊಬ್ಬರದು ಒಂದೊಂದು ಸಲಹೆ ಬೇರೆ.!ಏಯ್ ಇನ್ನೂ  ಸಣ್ಣಗೆ ಪುಡಿ ಮಾಡು ಅಂತ ಒಬ್ಬರಂದರೆ ಏಯ್ ಸಾಕು ಕಣೆ ಅಷ್ಟೇ  ಸರಿಯಾಗಿದೆ ಎನ್ನುವವರು ಮತ್ತೊಬ್ಬರು. ಉಪ್ಪು ಇಷ್ಟು ಹಾಕು ಮೆಣಸಿನಕಾಯಿ ಜಾಸ್ತಿ ಆಯ್ತು, ಜೀರಿಗೆ ನುಣ್ಣಗಾಗಿಲ್ಲ ನಾನೇ ಕುಟ್ತಿನಿ ಕೊಡೇ ಅಂತ  ಮತ್ತಲವರು. ಇನ್ನು ಗಂಡು ಮಕ್ಕಳೋ ಹೆಣ್ಣು ಮಕ್ಕಳ ಈ ಒಂದೊಂದು ಸಲಹೆಗಳನ್ನು ಕೇಳುತ್ತ ಯಾವಾಗ ಇವರು ಕುಟ್ಡಿ ರೆಡಿ ಮಾಡ್ತಾರೋ ಅಂತ ಸಹನೆಗೆಟ್ಟು, ಬೇಗ ಬೇಗ ಮಾಡ್ರೆ ಇಲ್ಲಾಂದ್ರೆ ನಾವೇ ಮಾಡ್ತಿವಿ ಬಿಡ್ರೆ ಎಂದು ಹೇಳುವಾಗ, ಇಲ್ಲ ಬಿಡ್ರೋ ಆಯ್ತು  ಅಂತ ಎಲ್ಲವನ್ನೂ ಹದವಾಗಿ ಸೇರಿಸಿ ಎಲ್ಲರಿಗೂ ಸಮನಾದ ಉಂಡೆಗಳನ್ನು ಮಾಡುವಷ್ಟರಲ್ಲಿ ಅದಾಗಲೇ ಕೆಲವರು ತೆಂಗಿನ ಗರಿಯ ಕಸ ಗುಡಿಸುವ ಪೊರಕೆಯ ಬುಡದಿಂದ ಕಡ್ಡಿಯನ್ನು ಸಮನಾಗಿ ಬೆರಳಿಗಿಂತ ತುಸು ಉದ್ದ ಇಲ್ಲವೆ ಮೂರ್ನಾಲ್ಕಿಂಚಿನ ಅಂದಾಜಿಗೆ ಮುರಿದ ಕಡ್ಡಿಯನ್ನು ತಂದು ಎಲ್ರಿಗೂ ಹಂಚುತ್ತಿದ್ದರು.

ಆ ಕಡ್ಡಿಯ ತುದಿಗೆ ಕಟ್ಟಿಟ್ಟ ಗೆಜ್ಜುಣಿಸೆ ಉಂಡೆಗಳನ್ನು ಸಿಕ್ಕಿಸಿ ಹಂಚುವಷ್ಟರಲ್ಲಿ ಕೆಲವರು ನನಗೆ ಇನ್ನೊಂದು, ನನಗೆ ಇನ್ನು ಸ್ವಲ್ಪ ಕೊಡೆ  ಅನ್ನುವಷ್ಟರಲ್ಲಿ ಕಲ್ಲಿನಲ್ಲಿ ಅಂಟಿದ್ದ ಗೆಜ್ಜುಣಿಸೆಯನ್ನು ಕೆಲವರು ಉಗುರಿನಿಂದ ಕೆರೆದು ನಾಲಿಗೆಯಲ್ಲಿ ಚೀಪುವುದೇ ಒಂದು !ಆ ಎಂಜಲ ಕೈಯ್ಯನ್ನು ತೊಳೆಯುವ ಗೋಜಿಲ್ಲದೆ ಉಟ್ಟ ಬಟ್ಟೆಗೇ ಒರೆಸಿಕೊಳ್ಳುವ ಆಟ. ಆಗ ನಮಗೆ ಇಂದಿನ ಹೈಜಿನ್ ಬಗ್ಗೆ ತಿಳಿದಿರಲಿಲ್ಲ. ಕೈಯಲ್ಲಿ ಅಂಟಿದ ಜರ್ಮ್ಸ ನ್ನು ತೊಳೆಯಲು ನಮ್ಮ  ಹಿರಿಯರು ಯಾವುದೇ ಸೋಪು, ಹ್ಯಾಂಡ್ ವಾಷ್ ನಲ್ಲಿ ಕೈ ತೊಳೆದುಕೊಳ್ಳಲು ಹೇಳುತ್ತಿರಲಿಲ್ಲ. ಹೇಗೋ ಸಿಕ್ಕ ನೀರಿನಲ್ಲಿ ಕೈ ತೊಳೆದು  ಕೊಳ್ಳುವುದೇ ಪುಣ್ಯ ಬಿಡಿ. 

ಇನ್ನು ಹಂಚಿದ ಉಂಡೆಗಳನ್ನು ಹಿಡಿದು ಚೀಪುತ್ತಾ ಚೀಪುತ್ತಾ  ಆ ಸ್ವಾದವನ್ನು ಅನುಭವಿಸುತ್ತಿದ್ದರೆ ಈಗ ಟಿ.ವಿ.ಯಲ್ಲಿ ಕೆಲವೊಂದನ್ನು ಅಡ್ವಟೈಸ್ಮೆಂಟಿನಲ್ಲಿ ಸ್ವಲ್ಪ ಹುಳಿ, ಸ್ವಲ್ಪಖಾರ, ಸ್ವಲ್ಪ ಸಿಹಿ ಎನ್ನುವಂತೆ ಹುಳಿ, ಉಪ್ಪು, ಖಾರ, ಸಿಹಿ ಎಲ್ಲವೂ ಬೆರೆತ ಈ ಸ್ವಾದಿಷ್ಟ ತಿನಿಸನ್ನು ಸ್ವಾಧಭರಿತ ವಾಗಿ ಚೀಪಿ ಚೀಪಿ ನಾಲಗೆಯ ಬಣ್ಣ ಬೆಳ್ಳಗಾದರೆ  ಬಾಯಿಯ ಅಂಗಳ ಉರಿಯಲು ಆರಂಭಿಸುವವರೆಗೂ ಚೀಪಿ ಒಂದಷ್ಟು ನೀರು ಕುಡಿದರೆ ಕೆಲವರಿಗೆ ಎರಡು ಮೂರುದಿನ ಊಟದ ರುಚಿ ಸಿಗದಂತಾದರೆ, ಕೆಲವರಿಗೆ ಹಲ್ಲು ಜುಂ ಎಂದರೆ ಮತ್ತಲವರಿಗೆ ಹೊಟ್ಟೆಯ ಆರೋಗ್ಯ ಕೆಡುತ್ತಿದ್ದುದೂ ಉಂಟು. ಬೇರೆ ಯಾವ ಕಾಲದಲ್ಲೂ ಈಗೆಜ್ಜುಣಸೆ ಹಣ್ಣನ್ನು ತಿನ್ನಬೇಕೆನಿಸುತ್ತಿರಲಿಲ್ಲ. ಆದರೆ ಬೇಸಿಗೆಯಲ್ಲಿ ಹೊಸದಾಗಿ ಬಂದ ಹುಣಸೆ ಹಣ್ಣಿನಿಂದ ಮಾಡಿ ತಿನ್ನುವ ರುಚಿ ಹಾಗೂ ಮಜವೇ ಬೇರೆ ಇದೊಂಥರಾ ಬೇಸಿಗೆಯ ವಿಶೇಷ ಸೀಸನಲ್ ತಿನಿಸೆಂದರೆ ತಪ್ಪಲ್ಲ ನೋಡಿ.

ಇನ್ನು ಬಿಡಿಸಿದ ಬೀಜವನ್ನು ಲಂಗದಲ್ಲಿ ತುಂಬಿಕೊಂಡು ಅದರಲ್ಲಿ ಹೆಚ್ಚು ಅಗಲವಾದ ಬೀಜಗಳನ್ನು ಆರಿಸಿಕೊಂಡು ಒಂದು ಮಗ್ಗಲನ್ನು  ಕಲ್ಲಿನ ಮೇಲೆ ಉಜ್ಜಿ  ಉಜ್ಜಿ ಚಪ್ಪಟೆ ಮಾಡಿ ಚೌಕಾಬಾರಾ ಆಡಲು ಇಟ್ಟುಕೊಳ್ಳುತ್ತಿದ್ದೆವು. ಹಾಗೇ ಒಂದೊಂದು ಬದಿಯಲ್ಲಿ ಏಳು ಮನೆಗಳಿರುವ ಮರದಲ್ಲಿ ಕೆತ್ತಿದ ಅಳುಗುಳಿ ಮನೆಯಾಟ ಆಡಲು ಪ್ರತಿ ಮನೆಗೆ ಐದರಂತೆ ‌ಎಪ್ಪತ್ತು ಹುಣಿಸೆ ಬೀಜ ಇನ್ನು ಸ್ವಲ್ಪ ಎಕ್ಸಟ್ರಾ ಇಟ್ಟು ಕೊಂಡು ಬಳಸುತ್ತಿದ್ದೆವು.   ಇನ್ನು ಉಳಿದ ಹುಣಿಸೆ ಬೀಜವನ್ನು ಕಮ್ಮಗೆ ಹುರಿದು  ಬಾಯಲ್ಲಿಟ್ಟುಕೊಂಡು ಗಂಟಾನುಗಟ್ಟಲೆ ಸಣ್ಣಗೆ ಅಗಿದು ಜಗಿದು ತಿನ್ನುತ್ತಿದ್ದೆವು. ಸ್ಕೂಲ್ ಶುರುವಾದ ಮೇಲೆ ಹುರಿದ ಹುಣಸೆ ಬೀಜವನ್ನು ಗೆಳತಿಯರಿಗೆ ಹಂಚುತ್ತಿದ್ದುದೂ ಉಂಟು.  

ಹೌದು ಎಲ್ಲೋ  ಓದಿದ ನೆನಪು. ಹುಣಸೆ ಬೀಜವನ್ನು ಹುರಿದು ಪುಡಿ ಮಾಡಿ ನೀರಿನಲ್ಲಿ ಬೆರಸಿ ಕುಡಿದರೆ ಮೂಳೆ ಗಟ್ಟಿಯಾವುವುದಂತೆ, ಮೂಳೆಯ ಕ್ಯಾಲ್ಷಿಯಂ ಕೊರತೆ ನೀಗುವುದಂತೆ ಎಂದು. ಅದೆಲ್ಲ ನಮಗೆ ತಿಳಿದಿರಲಿಲ್ಲ ಬಿಡಿ. ಹುಣಸೆ ಹಣ್ಣು ಬಹುಪಯೋಗಿ. ಬಹುತೇಕ ಅಡುಗೆಗೆ ಹುಳಿಗಾಗಿ ಹುಣಸೆ ಹಣ್ಣಿನ್ನೇ ಬಳಸಲಾಗುತ್ತಿತ್ತು. ನಂತರದಲ್ಲಿ ಟೊಮೆಟೋ ಬಳಕೆ ಶುರುವಾಯಿತು. ಆರೋಗ್ಯದ ದೃಷ್ಟಿಯಿಂದ ಕೂಡ ಟೊಮೆಟೋಗಿನ್ನ ಹುಣಸೆ ಹುಳಿ ಬಳಕೆ ಹೆಚ್ಚು ಉತ್ತಮವೆನ್ನುತ್ತಾರೆ ತಜ್ಞ ವೈದ್ಯರುಗಳು. ಹಿಂದೆ ಹಿತ್ತಾಳೆ ಕಂಚು ಮತ್ತು ತಾಮ್ರದ ಪಾತ್ರೆಗಳನ್ನು ತೊಳೆಯಲು ಈ ಹುಣಸೆ ಹಣ್ಣನ್ನೇ ಬಳಸಲಾಗುತ್ತತ್ತು. ಈಗಲೂ ಕೂಡ ನಮ್ಮ ಮನೆಯಲ್ಲಿರುವ ಹಳೆಯ ಕಾಲದ ಹಿತ್ತಾಳೆ, ಕಂಚು, ತಾಮ್ರದ ಪಾತ್ರೆಗಳನ್ನು ಇದರಿಂದಲೇ ತೊಳೆಯುತ್ತೇವೆ. ಇದರಿಂದ ತೊಳೆದ ಪಾತ್ರೆಗಳು ಫಳಫಳ ಹೊಳೆಯುತ್ತಿದ್ದವು. ಹಿಂದೆ ಮಡಿಯೆಂದು  ಹುಣಸೆ ನೀರು ಚುಮುಕಿಸುವುದು ರೂಢಿಯಲ್ಲಿತ್ತು. ಇನ್ನು ಹುಣಸೆ ಹುಳಿಯ ಕುರಿತು “ಹುಣಸೆ ಮರ ಮುಪ್ಪಾದರು ಹುಳಿ ಮುಪ್ಪೇ” ಎಂಬ ಗಾದೆಯಂತೆ ಹುಣಸೆ ಮರ ಎಷ್ಟೇ ಹಳತಾದರೂ ಅದರ ಹಣ್ಣಿನ ಹುಳಿಯ ತೀವ್ರತೆ ಕಡಿಮೆಯಾಗದು.

ಹುಣಸೆ ಹಣ್ಷಿನ ಬಳಕೆಯಿಂದ ಕ್ಯಾಲ್ಷಿಯಂ ಮತ್ತು ವಿಟಮಿನ್ ಬಿ ದೊರೆಯುವುದಂತೆ ಮೂಳೆಗಳು ಗಟ್ಟಿಯಾಗಿರುವುದಂತೆ, ಜೀರ್ಣಕ್ರಿಯೆಯನ್ನು ವೃದ್ಧಿಸುವುದಂತೆ. ಹುಣಸೆ ಹುಳಿ ಚಿತ್ರಾನ್ನ, ಪುಳಯೊಗರೆ ಭಾರಿ ಫೇಮಸ್. ಅಂತೆಯೇ ನಮ್ಮ ಗ್ರಾಮೀಣ ಭಾಗದಲ್ಲಿ ಸಾವಾದರೆ ಶವ ಸಂಸ್ಕಾರದ ಬಳಿಕ ಮಾಡುವ ಹುಣಿಸೆ ಹುಳಿ ಸಾರು ಕಡ್ಡಾಯ. ಸಂಸ್ಕಾರ ಮುಗಿದ ಮೇಲೆ ಎಲ್ಲರಿಗೂ ಹುಳಿ ಮುಟ್ವವುದು ಎಂದು ಹುಣಸೆ ಹುಳಿ ಸಾರು ಮತ್ತು ಅನ್ನವನ್ನು ಬಡಿಸುವುದು ರೂಢಿ. ಹುಣಸೆ ಹಣ್ಣಿನ ಹುಟ್ಟು ಹಿನ್ನೆಲೆ ಉಪಯೋಗ ಏನೂ ತಿಳಿಯದ ನಾವು ಬಾಲ್ಯದಲ್ಲಿ ನಮ್ಮದೇ ಆದ ರೀತಿಯಲ್ಲಿ ಬಳಸಿಕೊಂಡು ತಿಂದು ಸಂಭ್ರಮಿಸುತ್ತದ್ದುದಂತೂ ಸತ್ಯ ಈ ಅನುಭವ ಬಹಳಷ್ಟು ನಮ್ಮ ಸಮಕಾಲೀನರು ಹಾಗೂ ಆಚೀಚೆಯವರಿಗೆ ಇದ್ದಿರಬಹುದು ಎನಂತೀರಾ? ಹೌದಲ್ಲಾ.!

ಇಂದಿನ ಮಕ್ಕಳಿಗೆ ನಮ್ಮ ಗೆಜ್ಜುಣಸೆ ಹಣ್ಷಿನ ಪರಿಚಯವೆಲ್ಲಿ ?ಅದರ ಹೆಸರೆಲ್ಲಿ? ಅದರ ರುಚಿಯೆಲ್ಲಿ? ಈಗ ಅಂಗಡಿಯಲ್ಲಿ ಅಂಥದೇ ಸಿಗುವುದೆಂದು ಮಕ್ಕಳು ಹೇಳುತ್ತಿದ್ದರು. ಆದರೆ ತಾಜಾ ಹುಣಸೆ ಹಣ್ಣಿನಿಂದ ನಾವೇ ಕುಟ್ಟಿ ತಯಾರಿಸಿದ ಅದಕ್ಕೆ ಹಾಕುವ ಪರಿಕರಗಳ ಪರಿಚಯ ಇಂದಿನ ಮಕ್ಕಳಿಗೆಲ್ಲಿಂದ ತಿಳಿಯಬೇಕು? ಈಗಿನ ಕಾಲದಲ್ಲಿ ರೆಡಿ ಟು ಈಟ್  ಇನ್ಸಟಂಟ್ ಫುಡ್ ತಾನೇ. ಅಂದಿನ ಅದರ ಸ್ವಾದ, ಒಗ್ಗಟ್ಟಾಗಿ ಎಲ್ಲರೂ ಕೂಡಿ ತಯಾರಿಸಿ ಹಂಚಿ ತಿನ್ನುವ ಸಂಭ್ರಮವನ್ನು ಅನುಭವಿಸಿದ ನಮ್ಮ ಬಾಲ್ಯವೇ ಸೊಗಸಲ್ಲವೇ? ಬಾಲ್ಯದ ನೆನಪಿನ ಪುಟಗಳನೊಮ್ಮೆ ತಿರುವಿ ಹಾಕಿ. ನೆನಪು ಮರುಕಳಿಸಿದರೆ ಹೊಸ ಹಣಸೆ ಹಣ್ಣಿನಿಂದ ಗೆಜ್ಜುಣಸೆ ಹಣ್ಣು ಮಾಡಿ ತಿಂದು ಸಂಭ್ರಮಿಸಿ!

‍ಲೇಖಕರು Admin

7 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading