ಗುರುತು ಕೊರತೆಗಳ ನಡುವೆ ಕಾವ್ಯದ ಹಕ್ಕಿ

ಮಹೇಶ ಬಳ್ಳಾರಿ

**

ಕವಿ ಅನ್ನಪೂರ್ಣ ಪದ್ಮಸಾಲಿ ಅವರ ಮೊದಲ ಕವನ ಸಂಕಲನ ಪ್ರಕಟವಾಗಿದೆ.

ಲಿಖಿತ್ -ರೀನಾ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಹಿತಿ ಮಹೇಶ ಬಳ್ಳಾರಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ.

**

‘ಪೆಣ್ಣು ಪೆಣ್ಣೆಂದೇತಕೆ ಗೀಳುಗಳೆವಿರಿ’ ಸಾಲುಗಳು ತಕ್ಷಣಕ್ಕೆ ಈ ಸಂಕಲನದ ‘ಕವಿನುಡಿ’ಗಳನ್ನೋದಿದಾಗ ನೆನಪಿಗೆ ಬಂದವು. ಮೌಢ್ಯದ ಕಾರಣ “ಹುಟ್ಟಿದ ಆರು ತಿಂಗಳಲ್ಲೇ ತಂದೆಯಿಂದ ಹತ್ಯೆಯಾಗಬೇಕಿದ್ದ ಮಗು ನಾನು” ಎಂದು ಕವಯಿತ್ರಿ ಅನ್ನಪೂರ್ಣ ಪದ್ಮಸಾಲಿಯವರು ಬರೆಯುವಾಗ ಎಂತಹ ಕಠಿಣ ಮನಸ್ಸುಗಳೂ ಕರಗದೇ ಇರಲಾರವು. ‘ಅನುಭವಿಸಿ ಬರೆದ ಸಾಹಿತ್ಯ – ಕಾಲ್ಪನಿಕ ಸಾಹಿತ್ಯಕ್ಕಿಂತ ಹೆಚ್ಚು ಕಾಲ ಬಾಳುತ್ತದೆ’ ಎನ್ನುವ ಆಂಗ್ಲ ಕವಿಯೊಬ್ಬರ ಮಾತನ್ನು ಉಲ್ಲೇಖಿಸಿ ಸಂಕಲನದ ಕುರಿತಾಗಿ ನನ್ನ ತಿಳುವಳಿಕೆಯ ಮಟ್ಟಕ್ಕೆ ಚರ್ಚಿಸಬಯಸುತ್ತೇನೆ.

ಬದುಕಿನ ಹಾದಿಗುಂಟ ಬರೀ ಕಲ್ಲು-ಮುಳ್ಳುಗಳನ್ನೇ ಚುಚ್ಚಿಸಿಕೊಂಡರೂ, ಛಲ ಬಿಡದೇ ‘ರಾಜಮಾರ್ಗ’ವೊಮ್ಮೆ ನನಗಾಗಿ ತೆರೆದುಕೊಳ್ಳಬಹುದೆನ್ನುವ ಅದಮ್ಯ ವಿಶ್ವಾಸ, ಛಲದಿಂದ ಹಳ್ಳಿಯಲ್ಲಿದ್ದುಕೊಂಡು, ಸೂಕ್ತ ಸೌಲಭ್ಯಗಳೂ ಕೊರತೆಯನುಭವಿಸಿ ಬಿ.ಎ., ಬಿ.ಎಡ್. ಪದವಿ ಪಡೆದು, ಸರಕಾರಿ ನೌಕರಿಯನ್ನೂ ಪಡೆದು ಬದುಕು ಗೆದ್ದ ಪರಿ ಎಲ್ಲ ಹೆಣ್ಣುಮಕ್ಕಳಿಗೂ ಮಾದರಿಯಾದುದು. ಭಾವುಕ ಜೀವಿಯಾಗಿರುವ ಕವಯಿತ್ರಿ ತಮ್ಮ ನೋವು, ಸಂಕಟ, ಆಶಯ, ಆಕ್ರೋಶ, ಸಮಾಜಮುಖಿ ಚಿಂತನೆ, ಬದುಕಿನ ವಿವಿಧ ಮಜಲುಗಳನ್ನು ‘ಗುರುತಿನ ಕೊರತೆಗಳು’ ಕೃತಿಯ ಮೂಲಕ ಹೇಳಲು ಗಟ್ಟಿಯಾಗಿ ಪ್ರಯತ್ನಿಸಿದ್ದಾರೆ. ಈ ಪ್ರಯತ್ನ ಬಹುಪಾಲು ಯಶಸ್ಸಾಗಿದೆ ಕೂಡ. ಓರೆ-ಕೋರೆಗಳನ್ನೂ ನಿಷ್ಠುರವಾಗಿ ಟೀಕಿಸಿದ್ದಾರೆ. ‘ಹೀಗಿದ್ದರೆ ಜಗವು ಹೀಗಿರುತ್ತಿತ್ತು’ ಎನ್ನುವ ಆಶಯದ ಕವಿತೆಗಳು ಭವಿಷ್ಯದ ಕನಸುಗಳನ್ನು ತೋರಿಸುತ್ತವೆ.

ರೆಕ್ಕೆಗಳು ಸೋತರೂ

ಹಾರಾಟ ನಿಲ್ಲದ ಹಕ್ಕಿಗೆ

ಗುರುತಿನ ಕೊರತೆಗಳು! (ಗುರುತಿನ ಕೊರತೆಗಳು)

ಎಂದು ಕೃತಿ ಶೀರ್ಷಿಕೆಯ ಕವಿತೆಯ ಸಮಾರೋಪದಲ್ಲಿ ಹೇಳುವಾಗ ಅಲಕ್ಷಿತ ಸಮುದಾಯಗಳ ನೋವನ್ನು, ನಿರ್ಲಕ್ಷಿತ ಪ್ರತಿಭೆಗಳ ಬೇಗುದಿಯನ್ನು, ತೆರೆಯ ಮರೆಯಲ್ಲಿಯೇ ಸರಿದು ಹೋದವರ ವ್ಯಥೆಗಳನ್ನು ಚಿತ್ರಿಸಿದ್ದಾರೆ. ಹಕ್ಕಿ ಪ್ರಯತ್ನದ ರೂಪಕವಾಗಿಯೂ, ಗುರುತಿನ ಕೊರತೆಯನ್ನು ವಿಷಾದ ಸಂಗತಿಯಾಗಿಯೂ ಸಾಲುಗಳು ಗಮನ ಸೆಳೆಯುತ್ತವೆ.

ಕತ್ತಲನು ತಿಂದುಂಡ ಕ್ಷಣಗಳಲ್ಲಿಯೂ

ಹೊಣೆ ಕಾಪಿಟ್ಟ ಒಡಲು

ನಾವೆಲ್ಲ ಕ್ಷಮೆಯ ಸಾಲಗಾರರು (‘ಕ್ಷಮೆಯ ಸಾಲಗಾರರು’)

ಕವಯತ್ರಿಗೆ ಕರ್ಮ ಸಿದ್ಧಾಂತ ಕಾಡಿದಂತಿದೆ. ಅದರ ಹೊರತಾಗಿಯೂ ವಚನಕಾರರ ಪ್ರಭಾವವೂ ಸಾಕಷ್ಟು ಆದಂತಿದೆ. ಹೀಗಾಗಿ ಒಳ್ಳೆಯದನ್ನು ಪ್ರೋತ್ಸಾಹಿಸುವ, ಒಳ್ಳೆಯದನ್ನು ಸ್ವೀಕರಿಸುವ ಗುಣ ಇರಬೇಕೆಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಇದು ಮನುಷ್ಯ ಸಿದ್ಧಾಂತವೂ ಹೌದು. ಹೀಗಾಗಿ ‘ಕ್ಷಮೆಯ ಸಾಲಗಾರರು’ ಕವಿತೆಯಲ್ಲಿ ಇಲ್ಲವಾದಂತಿರುವ ಮಾನವೀಯತೆ, ಸ್ಥಿರ ಸಮೃದ್ಧಿಯನ್ನು ಬಹುವಾಗಿ ಬಯಸುತ್ತಿದ್ದಾರೆ. ಇದು ಸರ್ವಕಾಲಕ್ಕೂ ಸಮಕಾಲೀನವಾಗಬಹುದಾದ ಸಮಾಜಮುಖಿ ಕವಿಯ ಆಶಯ.

‘ಎನ್ನೊಲವ ಹೊತ್ತಿಗೆ ನೀ’ ಕವಿತೆಗೆ ರಾಗ ಸಂಯೋಜಿಸಿದರೆ ಉತ್ತಮ ಭಾವಗೀತೆಯಾಗುವ ಅರ್ಹತೆ ಇದೆ. ನಡೆದು ಬಂದ ಬದುಕಿನ ಹೆಜ್ಜೆಗಳ ತುಂಬಾ ಬರೀ ಸವಾಲುಗಳನ್ನೇ ಎದುರಿಸಿರುವ ಇವರು ತಂಪೆರೆಯುವ ತಂಗಾಳಿಯನ್ನು, ನೆಮ್ಮದಿಯ ನೆರಳನ್ನು, ಭಾವನೆಗಳನ್ನು ಬೆಸೆಯುವ ಹೃದಯಗಳನ್ನು ಕೈ ಮಾಡಿ ಕರೆಯುತ್ತಿದ್ದಾರೆ. ಸ್ನೇಹವನ್ನು, ಪ್ರೀತಿಯನ್ನು ಆರಾಧಿಸುತ್ತಿದ್ದಾರೆ. ವಿವಿಧ ಉದಾಹರಣೆಗಳ ಮೂಲಕ ಒಲವನ್ನು ಸ್ವಾಗತಿಸುವ ಕವಿತೆ ಕವಯತ್ರಿಯ ಭಾವುಕತೆಯನ್ನು, ನಂಬಿಕೆಯನ್ನು ತೋರಿಸುತ್ತದೆ. ಇವರ ಕವಿತೆಗಳು ಸಾಂಸಾರಿಕ ಒಳ ಹೂರಣಗಳನ್ನೂ ಒಳಗೊಂಡಿದೆ. ತವರಿಗೆ ಹೋಗಬೇಕೆಂದು ಸಿಟ್ಟು ಮಾಡಿ ಮಲಗಿದ ಹೆಂಡತಿಯನ್ನು ಗಂಡ ರಮಿಸುವ, ಓಲೈಸುವ ರೀತಿ ಪುರುಷ ಸೋಲಿನ ಸಂಕೇತವಾಗಿ ಸೊಗಸಾಗಿ ಹೇಳಲಾಗಿದೆ. ‘ಕೇಡಿಗೂ ಕಡೆಗಾಲ’, ‘ದಹಿಸಲಾಗದ ದೌರ್ಭಾಗ್ಯ’, ‘ನೆಲದ ನೋವು’, ‘ಅಳಸಿದ ಅಂಗೈಗೆರೆ’, ‘ಒಡಲ ಚಡಪಡಿಕೆ’, ‘ಕ್ರೌರ್ಯ’, ‘ಉಳ್ಳವರ ಬತ್ತಳಿಕೆ’, ಕವಿತೆಗಳು ರೋಷದ, ಆಕ್ರೋಶದ, ಅಸಹನೆಯ, ತಾರತಮ್ಯ ಬದುಕಿಗೆ ವಿದಾಯ ಹೇಳುವ ಆಶಯ ಒಳಗೊಂಡಿವೆ.

ದಿಕ್ಕುಗಳಿಗೆ ನೆಟ್ಟು

ಕಣ್ಣು ಚಾಚಿ

ಕಿವಿ ವಿನೀತ ಬಿಕ್ಕು

ಕಾದು ಕಾಯಲಾಗದೆ ಕಾದು

ಕುದಿಯಲಾಗದೆ ಕುದಿದು

ಮಾತುಗಳ ಜಾಡಿನಲಿ ಹುಡುಕಿದರೆ

ನಡುನಡುವೆ

ಮೌನ ಬಿರುಕಿನ ಬಾಯಿ ತೆರೆದಂತೆ ಕೌತಕ (ಉಳ್ಳವರ ಬತ್ತಳಿಕೆ)

ಸಾಲುಗಳು ಪ್ರತಿರೋಧದ ಧ್ವನಿಗಳಾಗಿವೆ. ಇದೇ ಕವಿತೆಯಲ್ಲಿ ಬರುವ ‘ತುಳಿವ ಕಾಲುಗಳ ಮೇಳ ಕೊನೆಯಿಲ್ಲ’ ಎನ್ನುವ ಸಾಲು ಶತಮಾನಗಳಿಂದ ಬಂದ ದರ್ಪದ ಮುಂದುವರಿಕೆಯಾಗಿಯೂ, ‘ಕೊಳೆತ ಮನಸುಗಳು ದೌರ್ಬಲ್ಯದ ಸೆರೆಯಾಳುಗಳು’ ಎನ್ನುವ ಸಾಲು ಶರಣಾಗತಿಯ ಮತ್ತು ದಾರಿದ್ರ್ಯದ ಸಂಕೇತಗಳಾಗಿಯೂ ಚಿತ್ರಿತವಾಗಿವೆ. ಹೊಸತನಕ್ಕಾಗಿ ತುಡಿಯಬೇಕು, ಹೊಸ ಕನಸುಗಳನ್ನು ಕಾಣಬೇಕು, ಉಳ್ಳವರ ಬತ್ತಳಿಕೆಯ ಬಾಣಗಳಾಗಿ ತುಳಿಯಲ್ಪಡಬಾರದೆನ್ನುವ ಗಟ್ಟಿಧ್ವನಿಯನ್ನು ಇಲ್ಲಿ ಹೊರ ಹಾಕಿದ್ದಾರೆ. ಮಹಿಳಾ ಪರ ಒಲವು ನಿಲುವುಗಳನ್ನೂ ಕೆಲವು ಕವಿತೆಗಳಲ್ಲಿ ಕಾಣಬಹುದು. ಸ್ವತಃ ಮೌಢ್ಯದ ಸಮಸ್ಯೆ ಅನುಭವಿಸಿದವರಾಗಿದ್ದರಿಂದಲೇ ಇವರ ನೋವುಗಳು ಹೃದಯದಿಂದಲೇ ಬಂದಿರುವದ್ದಾಗಿವೆ.

ಅರ್ಥವಾಗುವುದಿಲ್ಲ ಅವಳ ನೋವು

ಎಲ್ಲರಿಗೂ

ಇತಿಹಾಸದ ಮಣ್ಣಲಿ

ಹೂತು ಹೋದವರಂತೆ

ಸ್ತ್ರೀ ಸ್ಥಿತಿ ಹುರಿದುಂಬಿಸಲು

ಕಾವ್ಯ ಕಟ್ಟಲಾದೀತೆ?’ (ಸ್ತ್ರೀ-ಸ್ಥಿತಿ)

ಎಂದು ಪ್ರಶ್ನಿಸುವಾಗ ಕಾವ್ಯವೂ ಹೆಣ್ಣಾಗಿ, ಕರಗುತ್ತದೆ, ಮರುಗುತ್ತದೆ. ತಕ್ಷಣವೇ ಛಲದ ಸಂಕೇತವಾಗಿಯೂ ಎದುರಾಗುತ್ತದೆ.

ಕುಟುಂಬದಲ್ಲೂ

ಸಮಾಜದಲ್ಲೂ

ಒಡಮೂಡಿ ಬರಬೇಕಿದೆ

ಪ್ರಜಾಸತ್ತತೆಯ ಅಂಶಗಳು (ಹೆಣ್ಣು ಅಬಲೆ ಅಲ್ಲ ಸಬಲೆ)

ಎನ್ನುವಾಗಲೂ ಸ್ತ್ರೀ ಸಮಾನತೆ ಮತ್ತು ಮಹಿಳಾ ಮಹತ್ವವನ್ನು ಕವಯತ್ರಿ ಸಾರುತ್ತಾರೆ. ‘ಪ್ರೀತಿಯ ಜೋಗುಳಕೆ ಶಬ್ದಗಳಿಲ್ಲ’ ಎನ್ನುವ ಸೊಗಸು ಪದಗಳ ಕವಿತೆಯು ವಿಭಿನ್ನ ಶೈಲಿಯಿಂದ ಗಮನ ಸೆಳೆಯುತ್ತದೆ. ಭಾವಗೀತೆಯ ಧಾಟಿಯಲ್ಲಿ

ಮಿಂಚುಗಳು ಚಂಚಲಿಸಿ

ಎದೆಗೂಡಲ್ಲಿ ನಗಲು

ಮೋಹದ ಚಿಟ್ಟೆಯ ಹಾರಾಟ

ಪ್ರೀತಿಯ ಜೋಗುಳಕೆ ಶಬ್ದಗಳಿಲ್ಲ

ತರತರಹದ ಭಾವಗಳು (ಎದೆ ಬಿರಿವ ಹಾಡು)

ಸೌಂದರ್ಯ ಪ್ರಜ್ಞೆಯ ಗೆಲುವನ್ನು ಈ ಕವಿತೆ ಪಡೆಯಲು ಯಶಸ್ವಿಯಾಗಿದೆ ಎಂದೆನ್ನಿಸುತ್ತಿದೆ. ಇನ್ನು ‘ಅಕ್ಷರ ಸೀಮೆಯ ಸೆಳೆತ’ದ ಆಶಯ ಎಲ್ಲರಿಗೂ ಅವಶ್ಯಕತೆ ಇರುವಂಥದ್ದು. ಶಿಕ್ಷಣದ ಶಕ್ತಿಯನ್ನು ಇದು ಸಾರುತ್ತದೆ. ಎಲ್ಲ ದಮನಿತರ ಪ್ರಬಲ ಅಸ್ತ್ರವೇ ಶಿಕ್ಷಣ ಎನ್ನುವುದು ಇಲ್ಲಿನ ತಿರುಳು.

ಒಲವ ಅಲೆಗಳ

ಚೆಲುವಾದ ಬಲ್ಲೆಯಲ್ಲಿ

ಪಾಡುತಿವೆ ಪ್ರೀತಿಯ

‘ಹಕ್ಕಿನ’ ರೆಕ್ಕೆಗಳು (‘ಅಕ್ಷರ ಸೀಮೆಯ ಸೆಳೆತ’)

ಶಿಕ್ಷಣ ಹೊಂದುವ ಹಕ್ಕು – ಹಕ್ಕಿಯನ್ನು ರೆಕ್ಕೆಗಳ ಮೂಲಕ ಆಕಾಶದೆತ್ತರಕ್ಕೆ ಒಯ್ಯುವಂತೆ ನಮ್ಮ ವಿಕಾಸಕ್ಕೆ ಪೂರಕವಾಗುತ್ತದೆನ್ನುವದು ಎಲ್ಲರೂ ಒಪ್ಪಬೇಕಾದ ಮಾತು. ಪ್ರೀತಿಸುವ ಹೃದಯಕ್ಕೆ ಕತ್ತಲೆ ಕೂಡಾ ಬೆಳದಿಂಗಳು (ಕತ್ತಲೆಯ ಬೆಳದಿಂಗಳು) ಎನ್ನುವಾಗ ಪರಸ್ಪರ ಅರಿತುಕೊಳ್ಳುವಿಕೆ, ನಂಬಿಕೆ, ಪ್ರೇಮದ ಕುರುಡುತನ, ಪ್ರೇಮದ ನೈಜತೆ ಎಲ್ಲವೂ ಅನಾವರಣವಾಗುತ್ತವೆ. ವಿವಿಧ ನೆಲೆಗಳಲ್ಲಿ ಯೋಚಿಸಿದಾಗೆಲ್ಲ ಈ ಸಾಲು ಪಲ್ಲಟವಾಗುತ್ತಾ ಸಾಗುತ್ತದೆ.

ಸಮುದ್ರದ ಲಾಲಿ

ಮಳೆಯ ಮೋಡದ ಜೋಲಿ

ಪ್ರೀತಿ ಪ್ರಣಯದ ಖಯಾಲಿ

ತಿಳಿಯುವುದಿಲ್ಲ ಬದುಕು

ಚಿಗುರುವುದು ಒಡಲು ತುಂಬುವ ಹಸುರು

ಅದೇ ಶೃಂಗಾರ

ಒಲವಿನ ಮುಖದಲಿ

ಪ್ರೀತಿಯ ಗೆಲುವಿನ ಹೊಸ ಚಹರೆಯ

ಆಕಾರ (‘ಹೊಸ ಚಹರೆ’)

ಕವಿತೆಯ ಈ ಭಾವ ರಮ್ಯತೆಯ ಭಾಗವಾಗಿ ಗೋಚರಿಸುತ್ತಿದೆ. ಪ್ರೀತಿ ಮತ್ತು ಪ್ರಕೃತಿಯ ಮೆಟಫರಿಕ್ ಹೋಲಿಕೆ ಇಲ್ಲಿ ಗಮನ ಸೆಳೆಯುತ್ತದೆ. ಈ ಸಂಕಲನದ ಕೆಲವು ಗಮನ ಸೆಳೆಯುವ ಕವಿತೆಯ ಸಾಲುಗಳಿವು :

ದಾಳಿ ದಟ್ಟ ಇರಲಿ

ಗಡಿಯಾಚೆಗಿನ ಗಾಳಿಯೂ ಬಾರದಂತೆ

ತಡೆಯೊಡ್ಡುತ ಬುಡಕ್ಕೆ ನೆತ್ತರು ಬಸಿದ

ಅಸಂಖ್ಯ ಉಸಿರುಗಳು

ಆ ಗೋಡೆಯಡಿಯಲ್ಲಿಯೇ

ಬರಿ ಹುಡಿಗಳಾಗಿ ಹೊರಟು ಹೋದರಂತಲ್ಲ

ಆದ್ರೆ ಏನಾಯಿತು? (ಏನಾಯಿತು)

ಅನ್ನದ ಅಗಳು

ಜೀವದ ತಿರುಳು

ಜಗದ ಜಗುಲಿಯ ಮೇಲೆ

ಬೆಂದ ಬೆಳದಿಂಗಳು (ಅಳಿಸಿದ ಅಂಗೈಗೆರೆ)

ಒಟ್ಟಾರೆ ಈ ಸಂಕಲನದ ಕವಿತೆಗಳಲ್ಲಿ ಹಲವು ವೈಚಾರಿಕ ಹಿನ್ನೆಲೆಗಳಿವೆ. ವಾಸ್ತು, ಮೂಢತ್ವಗಳು ವಿಜ್ಞಾನ, ದೂರ ಸಂಪರ್ಕ ಕಾಲದಲ್ಲಿಯೂ ಅಸ್ತಿತ್ವದಲ್ಲಿರುವುದರ ನೋವು ಕವಯತ್ರಿಗಿದೆ. ನಮ್ಮ ನೆಲ, ಜಲದ ಕುರಿತಾದ ಹೆಮ್ಮೆ, ಅವುಗಳ ಉಳಿಸುವಿಕೆಯ ಜವಾಬ್ದಾರಿಯನ್ನೂ ಇಲ್ಲಿನ ಕವಿತೆಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಕವಲೊಡೆದ ಬದುಕು, ನೋವುಗಳನ್ನು ಅನುಭವಿಸಿ ಬರೆದಿದ್ದಾರೆ. ‘ಕವಿತೆ’ ಶೀರ್ಷಿಕೆಯ ಕವಿತೆಯಲ್ಲಿ ಕವಿತೆ ಬರೆಯುವ ಮಹದಾನಂದವನ್ನು ಬಗೆಬಗೆಯಾಗಿ ಚಿತ್ರಿಸಿದ್ದಾರೆ. ಕವಯತ್ರಿಯು ತಮ್ಮ ನಿಲುವು, ಅಸ್ತಿತ್ವ ಏನೆಂಬುದನ್ನು ‘ನಾನು ನಾನೇ’ ಕವಿತೆಯಲ್ಲಿ ಹೇಳಿಕೊಂಡಿರುವಂತಿದೆ. ಸ್ವಯಂ ಮೌಲ್ಯಮಾಪನ ಕವಿಗಳಿಗೆ ಇರಬೇಕಾದ ಅವಶ್ಯಕತೆ ಇದೆ. ಈ ಮೌಲ್ಯಮಾಪನವೇ ಎಲ್ಲ ಕವಿಗಳಿಗೂ ಸ್ವೀಕಾರ ಗುಣವನ್ನು ಕಲಿಸುತ್ತದೆ. ರೈತರ ಬವಣೆಗಳು, ಜನಪರ ನಿಲುವುಗಳು ಕವನ ಸಂಕಲನದುದ್ದಕ್ಕೂ ಕಾಣಸಿಗುತ್ತವೆ. ವ್ಯಕ್ತಿಚಿತ್ರಗಣಗಳಲ್ಲಿ ದೀರ್ಘತೆ ಮತ್ತು ವಾಚ್ಯತೆಯನ್ನು ಕಡಿಮೆ ಮಾಡಬಹುದಿತ್ತು ಎನಿಸುತ್ತಿದೆ.

ಮೊದಲ ಕೃತಿಯಾಗಿದ್ದರಿಂದ ಇದು ಬಹುತೇಕ ಸ್ವೀಕಾರ್ಹವಾಗುತ್ತದೆ. ಕವಿ ಅಥವಾ ಕವಯಿತ್ರಿಯ ಒಳಗು ನಿರಂತರ ಅಧ್ಯಯನದ ಬೆಳಗಿನೊಂದಿಗೆ ಒಳಗೊಳ್ಳುತ್ತಾ ಹೋದಂತೆಲ್ಲ, ಕಾವ್ಯದ ಹತ್ತಾರು ದಾರಿಗಳು, ಮಗ್ಗಲುಗಳು, ಜವಾಬ್ದಾರಿಗಳು, ಸಾಲುಗಳು ಇನ್ನಷ್ಟು ಗಂಭೀರವಾಗುತ್ತ ಹೋಗುತ್ತವೆ. ವಾಚ್ಯತೆಗಳು, ಅನವಶ್ಯಕ ಸಾಲುಗಳು, ಪುನರಾವರ್ತನೆಯ ಪದಗಳು, ದೀರ್ಘ ಸಂಭಾಷಣೆಗಳು ತನ್ನಿಂತಾನೇ ಹೊಸ ರೂಪ ಹೊಂದುತ್ತವೆ. ಹೀಗಾಗಿ ಈ ಕೃತಿಯ ಕವಯತ್ರಿ ಅನ್ನಪೂರ್ಣ ಪದ್ಮಸಾಲಿಯವರು ಕಾವ್ಯದ ಒಳ-ಹೊರಗಿನ ಇನ್ನಷ್ಟು ದೀರ್ಘಕ್ಕೆ ಹೋದಂತೆಲ್ಲ ಇವರ ಕಾವ್ಯ ಖಂಡಿತ ವಿಸ್ತೃತ ರೂಪ ಹೊಂದಬಲ್ಲದು. ಕೊಪ್ಪಳ ಮಹಿಳಾ ಬರಹಗಾರರ ತಂಡಕ್ಕೆ ಈ ಕೃತಿಯ ಮೂಲಕ ಗಟ್ಟಿ ಕವಯಿತ್ರಿಯೊಬ್ಬರು ಜೊತೆಯಾಗಿದ್ದಾರೆ. ಇವರಿಗೆ ಕಾವ್ಯ ಕ್ಷೇತ್ರದಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಅವರ ಕಾವ್ಯ ಭರವಸೆ ನೀಡುತ್ತದೆ.

‍ಲೇಖಕರು Admin MM

May 15, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: