ಗುಬ್ಬಚ್ಚಿ ಗೂಡಿಗೆ ಈಗ ಹದಿನೈದರ ಸಂಭ್ರಮ

ಮಗು ಮನಸ್ಸಿಗೊಂದು ಕನ್ನಡಿ ‘ಗುಬ್ಬಚ್ಚಿ ಗೂಡು’

-ಚೇತನ್ ಸೊಲಗಿ

ಮುಂಡರಗಿ

ಮಕ್ಕಳ ಮನಸ್ಸೊಂದು ಸ್ವಚ್ಛಂದ ಬಿಳಿಯ ಹಾಳೆಯೇ ಸರಿ. ನಾವು ಮೂಡಿಸುವ ಹೊಸತನದ ಪರಿಕಲ್ಪನೆಗಳಿಗೆ, ಬದುಕಿನ ಲಹರಿಗಳಿಗೆ ಸದಾ ಆಸೆಗಣ್ಣಿನಿಂದ ಕಾಯುತ್ತಾ ಕುಳಿತುಕೊಳ್ಳುವ ಚಿಣ್ಣರು, ಅವುಗಳನ್ನೇ ಗಮನಿಸಿ ತಮ್ಮ ಬದುಕಿಗೆ ಪರಿಪಾಠ ಮಾಡಿಕೊಳ್ಳುವಂತವರು. ಆ ಆಸೆಗಣ್ಣಿನ ಪುಟಾಣಿ ಮನಸ್ಸುಗಳನ್ನು ನಾವು ಬದುಕಿನುದ್ದಕ್ಕೂ ಗಮನಿಸುವುದೇ ಕಡಿಮೆ. ಮಕ್ಕಳಲ್ಲವೇ…! ಎಂಬ ತಾತ್ಸಾರ ಮನೋಭಾವದವರೇ ಹಲವರಿರುವಾಗ ಮಕ್ಕಳ ಮನರಂಜನೆಗೆ, ರಂಜಿಸಿ ಪಾಠಕಲಿಸುವುದಕ್ಕೆ ಜೊತೆಗಿರುವ ಕೈಗಳು ಸಿಕ್ಕುವುದೆಲ್ಲಿಂದ. ಬಹುಷ್ಯ ಪತ್ರಿಕೆಗಳ-ಪುಸ್ತಕಗಳ ವಿಷಯದಲ್ಲೂ ಹಾಗೆಯೇ. ಮಕ್ಕಳಿಗಾಗಿಯೇ ಬರುವ ಪುಸ್ತಕಗಳು ಪತ್ರಿಕೆಗಳು ವಿರಳ. ಮಕ್ಕಳ ಮನಸ್ಸುಗಳನ್ನು ರಂಜಿಸಿ ಬದುಕನ್ನು ಅರಿಯುವಂತೆ ಬರೆಯುವ ಮಕ್ಕಳ ಸಾಹಿತಿಗಳೂ ಕಡಿಮೆಯೇ. ಮಕ್ಕಳಿಗಾಗಿ ಬರೆಯುವ ಲೇಖಕರನ್ನು ಸಾಹಿತಿಗಳೆನ್ನಬಹುದೇ ಎಂದು ಕೇಳುವ ವಿಚಿತ್ರ ಮನಸ್ಸುಗಳೂ ನಮ್ಮಲ್ಲುಂಟು. ಅಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗಾಗಿಯೇ ಮೂಡಿ ಬಂದ ಕೆಲವೇ ಕೆಲವು ಪತ್ರಿಕೆಗಳಲ್ಲಿ ಮುಂಚೂಣೆಯಲ್ಲಿದ್ದು ಸತತ 15 ವರ್ಷಗಳಿಂದ ಮಕ್ಕಳ ಕೈ ಸೇರುತ್ತಿರುವ ‘ಗುಬ್ಬಚ್ಚಿ ಗೂಡು’ ಪತ್ರಿಕೆಯ ಕೆಲಸವನ್ನು ಮೆಚ್ಚಲೇಬೇಕು…

ಹೌದು. ಮಕ್ಕಳ ಕನಸುಗಳಿಗೆ ಬಣ್ಣ ತುಂಬುವ ಆಸೆ ಹೊತ್ತು ಧಾರವಾಡದ ‘ಚಿಲಿಪಿಲಿ’ ಬಳಗ ಮಕ್ಕಳ ಕೈಗಿಟ್ಟ ‘ಗುಬ್ಬಚ್ಚಿ ಗೂಡು’ ಮಕ್ಕಳ ಮಾಸ ಪತ್ರಿಕೆಗೀಗ 15 ವರ್ಷ. ಈ ಪತ್ರಿಕೆ ಮಕ್ಕಳ ಕನಸು, ವಾಸ್ತವಗಳ ತಿಂಗಳ ಹಾಡನ್ನು ಹಾಡುತ್ತಾ ಮಕ್ಕಳನ್ನು ರಂಜಿಸಿದ ಪರಿ ಶ್ಲಾಘನೀಯ.

2000 ಸಾಲಿನ ಮಾರ್ಚಿ 8, ಅಂತರಾಷ್ಟ್ರೀಯ ಮಹಿಳಾ ದಿನದಂದು ಸಾಹಿತಿ ಎನ್. ಕೆ. ಕುಲಕರ್ಣಿಯವರಿಂದ ಬಿಡುಗಡೆಗೊಂಡ ಈ ಪತ್ರಿಕೆ ಸದಾ ಮಗು ಮನಸ್ಸಿಗೆ ಹತ್ತಿರವಾಗುತ್ತಲೇ ಬಂದಿರುವಂತದ್ದು. ಪ್ರತಿ ತಿಂಗಳೂ ಮಕ್ಕಳು ಕಾಯ್ದು ಓದಲಿಕ್ಕೆ ಹಾತೊರೆಯುವಂತಹ ಪತ್ರಿಕೆಯದು. ಮನಕ್ಕೆ ಮುದನೀಡುವ ಕಥೆಗಳನ್ನ, ಆಂಗ್ಲಭಾಷೆಯ ರೈಮ್ಸ್ಗಳಿಗಿಂತಲೂ ಹೆಚ್ಚು ಮಜಬೂತಾಗಿರುವ ಪುಟಾಣಿ ಪದ್ಯಗಳನ್ನ, ಅಜ್ಜಿ ಹೇಳುವ ಅನುಭವದ ಮಾತುಗಳನ್ನ, ಗುಂಡನ ನಗೆ ಹೊನಲನ್ನ ಸದಾ ಹೊತ್ತು ತಂದು ಮಕ್ಕಳ ಕೈಗಿಡುವಂತದ್ದು ‘ಗುಬ್ಬಚ್ಚಿ ಗೂಡು’ ಪತ್ರಿಕೆ. ಭಾಷೆಯ ಕಲಿಕೆಗೆ ಹೆಚ್ಚು ಒತ್ತು ನೀಡುವ ಈ ಪತ್ರಿಕೆ ಸಾಮಾನ್ಯ ಜ್ಞಾನದ ಅವಶ್ಯಕತೆಗಳನ್ನು, ಕ್ರಿಯಾತ್ಮಕ ಅಂಶಗಳನ್ನು, ವಿಜ್ಞಾನ ಜಾಗೃತಿ ಬರಹಗಳನ್ನು, ಮಕ್ಕಳಿಗೆ ಅರ್ಥವಾಗುವಂತೆ ಚಿತ್ರಿಸಿರುವ ಹಿರಿಕರು ಮಾಡಿಟ್ಟ ಗಾದೆಗಳ ಹೂರಣವನ್ನು, ಸಾಧಕರ ಪರಿಚಯವನ್ನು ಸಲೀಸಾಗಿ, ಸೊಗಸಾಗಿ ಮಕ್ಕಳ ಮುಂದಿಡುವ ತಾಕತ್ತನ್ನು ಹೊಂದಿರುವಂತದ್ದು.

ಮ್ಕಕಳಿಗಾಗೇ ಕಿರು ಧಾರಾವಾಹಿಗಳನ್ನು ಪ್ರಕಟಿಸಿದ ಹೆಮ್ಮೆ ಈ ಪತ್ರಿಕೆಗಿದೆ. ಸಂಪಾದಕ ಶಂಕರ ಹಲಗತ್ತಿ ಬರೆಯುವ ‘ಮನದೊಳಗಿನ ಮಾತು’ ಅಂಕಣಕ್ಕೆ ಮಕ್ಕಳಿಂದ ಹಿಡಿದು ದೊಡ್ಡವರಲ್ಲೂ ಸಹಿತ ಕಾಯ್ದು ಓದುವವರಿದ್ದಾರೆ. ಕೆಲವು ಪುಟಗಳನ್ನು ಮಾತ್ರ ಮಕ್ಕಳಿಗೆ ಮೀಸಲಿಡುವ ಎಲ್ಲ ಪತ್ರಿಗಳ ಸಾಲಿನಲ್ಲಿ ‘ಗುಬ್ಬಚ್ಚಿ ಗೂಡು’ ವಿಭಿನ್ನ ಸ್ಥಾನದಲ್ಲಿ ನಿಂತುಕೊಳ್ಳುತ್ತದೆ. ಪ್ರಕಟಗೊಳ್ಳುವ 48 ವರ್ಣಮಯ ಪುಟಗಳೂ ಮಕ್ಕಳಿಗಾಗಿಯೇ. ಸತತ ಹದಿನೈದು ವರ್ಷಗಳಿಂದಲೂ ಕಾಲ ಕಾಲಕ್ಕೆ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತಾ ಮಕ್ಕಳ ಮನಸ್ಸಿಗೆ ಹತ್ತಿರವಾಗುತ್ತಲೇ ಬಂದಿದೆ ‘ಗುಬ್ಬಚ್ಚಿ ಗೂಡು’ ಪತ್ರಿಕೆ. ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಬರಹಗಳನ್ನೂ ಮಕ್ಕಳಿಗೆ ಹತ್ತಿರುವಾಗುವಂತೆ ಕಟ್ಟಿಕೊಟ್ಟಿದೆ. ಇದು ಶಾಲಾ ಶಿಕ್ಷಕರಿಗೊಂದು ಕೈಪಿಡಿ ಇದ್ದಂತೆ ಎಂದರೆ ತಪ್ಪಾಗಲಿಕ್ಕಿಲ್ಲ.
‘ದೊಡ್ಡವರಿಗಾಗಿ ಬರೆದು ನಾವೂ ದೊಡ್ಡವರಾಗಬಹುದು. ಆದರೆ ಮಕ್ಕಳ ಮನಸ್ಸನ್ನು ಅರಿತು ಅವರಂತೆ ಚಿಕ್ಕವರಾಗಿ ದೊಡ್ಡ ದೊಡ್ಡ ಕನಸು ಕಾಣುವುದನ್ನು ಚಿತ್ರಿಸುವ ರೀತಿ ನಿಜಕ್ಕೂ ಕಠಿಣ. ಅವರ ಕಲ್ಪನಾ ವಿಹಾರವನ್ನು ಮುಟ್ಟುವಂತಹ ಬರಹಗಳನ್ನು ನೀಡುವ ಕೆಲಸ ಸುಲಭದಲ್ಲ ಎನ್ನುತ್ತಾರೆ ಪತ್ರಿಕೆ ಸಂಪಾದಕ ಶಂಕರ ಹಲಗತ್ತಿ.

‘ಮಕ್ಕಳೆಂದರೆ ನಾವು ಸಾಮಾನ್ಯರು ಎಂದುಕೊಳ್ಳುತ್ತೇವೆ. ಆ ಮಗುವಿನ ಮನಸ್ಸು ನಾವಂದುಕೊಂಡಷ್ಟು ಚಿಕ್ಕದ್ದಲ್ಲ. ಅದರ ಚಿಂತನಾ ಲಹರಿಯೇ ದೊಡ್ಡ ಮಟ್ಟದ್ದು. ಆ ಮಟ್ಟವನ್ನು ಮುಟ್ಟುವ ಬರಹ ನಮ್ಮಿಂದ ಮೂಡಿ ಬರಬೇಕು. ಮಕ್ಕಳನ್ನು ನಾವು ಓದಿಗೆ ಹಚ್ಚಬೇಕು’ ಎನ್ನುತ್ತಾರೆ ಗುಬ್ಬಚ್ಚಿ ಗೂಡು ಬಳಗದಲ್ಲೊಬ್ಬರಾದ ಸಾಹಿತಿ ಡಾ. ನಿಂಗು ಸೊಲಗಿ.
 
ಚಿಣ್ಣರಿಗೊಂದು ಬೃಹತ್ ವೇದಿಕೆ..
ಧಾರವಾಡದ ಚಿಲಿಪಿಲಿ ಬಳಗದ ಕಲ್ಪನೆಯ ಕೂಸು ಈ ‘ಗುಬ್ಬಚ್ಚಿ ಗೂಡು’ ಪತ್ರಿಕೆ. ಮಕ್ಕಳ ಕನಸುಗಳಿಗೆ ಬಣ್ಣ ತುಂಬುವ ಆಸೆಯೊಂದಿಗೆ ಮೂಡಿ ಬಂದ ಈ ತಂಡ ಯಶಸ್ವೀ 5 ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನೂ ನೆರವೇರಿಸಿದೆ. ಕಂಚಾಣೆ ಶರಣಪ್ಪ, ಡಾ. ಎಚ್. ಎಸ್. ವೆಂಕಟೇಶ ಮೂತರ್ಿ, ಶಂಗು ಬಿರಾದರ, ಬಿ. ಎ. ಸನದಿ, ಡಾ. ನಾ. ಡಿಸೋಜಾ ಹೀಗೆ ಅನುಕ್ರಮವಾಗಿ ಸಮ್ಮೇಳನದ ಅಧ್ಯಕ್ಷರಾಗಿ ಮಕ್ಕಳ ಕನಸುಗಳಿಗೆ ಬಣ್ಣತುಂಬಲು ನೆರವಾಗಿದ್ದಾರೆ. ಮಕ್ಕಳ ಪ್ರತಿಭೆ ಸ್ಪಧರ್ೆಗಿಟ್ಟು ನೋಡುವ ಸರಕಲ್ಲ ಎನ್ನುವ ಈ ತಂಡ ಆ ಪ್ರತಿಭೆಯ ಪ್ರದರ್ಶನಕ್ಕೆ ಮಕ್ಕಳ ಸಾಹಿತ್ಯ ಸಮ್ಮೇಳನದಂತಹ ಬೃಹತ್ ವೇದಿಕೆಗಳನ್ನು ಕಲ್ಪಿಸಿಕೊಟ್ಟಿದೆ. ಮಕ್ಕಳ ಸಾಹಿತ್ಯದ ಚಿಂತನೆಗೆ. ಮಕ್ಕಳ ಮನಸ್ಸಿನ ಆಗು ಹೋಗುಗಳ ಅರಿವಿಕೆಗೆ ಸಮ್ಮೇಳನ ವೇದಿಕೆಯಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.
‘ಕಲಾಂ’ರಿಂದ ಪ್ರಶಂಸೆ…
ಧಾರವಾಡದ ಚಿಲಿಪಿಲಿ ಬಳಗ ಸತತ ಹದಿನೈದು ವರ್ಷಗಳಿಂದಲೂ ನವೆಂಬರ್ 14 ರ ಮಕ್ಕಳ ದಿನಾಚರಣೆಯ ನೆನಪಿಗಾಗಿ. ಮಕ್ಕಳ ಕ್ಷೇತ್ರದಲ್ಲಿ ದುಡಿದ ಚಿಣ್ಣರ ಪರ ಮನಸ್ಸುಗಳಿಗೆ ‘ಶಿಕ್ಷಣ ಸಿರಿ’ ಪ್ರಶಸ್ತಿ ನೀಡಿ ಗೌರವಿಸಿದೆ. ವಿಶಿಷ್ಟ ಪ್ರತಿಭೆಯುಳ್ಳ, ಕ್ರಿಯಾತ್ಮಕ ಕನಸುಳ್ಳ ಮಕ್ಕಳಿಗೆ ‘ಚಿಣ್ಣರ ಚಿಣ್ಣ’ ಪ್ರಶಸ್ತಿ ನೀಡಿ ಬೆನ್ನು ತಟ್ಟಿದೆ. ಈ ಯಾವ ಪ್ರಶಸ್ತಿಗಳಿಗೂ ಅಜರ್ಿ ಆಹ್ವಾನಿಸದೇ ತಾವೇ ಗುರುತಿಸಿ ನೀಡುವುದು ಇನ್ನೊಂದು ವಿಶೇಷ. ಈ ಎಲ್ಲ ಮಕ್ಕಳ ಪರ ಕೆಲಸ ಕೈಗೊಂಡ ಈ ತಂಡಕ್ಕೆ ಅಭೂತ ಪೂರ್ವ ಗೌರವವೂ ದೊರೆತಿದೆ. ವಿಜ್ಞಾನಿ, ಮಕ್ಕಳನ್ನು ಎಲ್ಲರಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ಅಂದಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ‘ಗುಬ್ಬಚ್ಚಿ ಗೂಡು’ ಪತ್ರಿಕೆಯ ಸಂಪಾದಕ ಶಂಕರ ಹಲಗತ್ತಿಯವರನ್ನು ಜನವರಿ 26 ರಂದು ಚಹಾಕೂಟಕ್ಕೆ ಆಹ್ವಾನಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ಕೆಲಸವನ್ನು ಸದಾ ಹೀಗೆ ಮುಂದುವರೆಸುವಂತೆ ಪ್ರೀತಿಯಿಂದ ಸೂಚಿಸಿ ಕಳುಹಿಸಿದ್ದಾರೆ ಕೂಡ.
ಬಸವರಾಜ ಗಾಗರ್ಿ, ಡಾ. ಅಜರ್ುನ ಗೊಳಸಂಗಿ, ಡಾ. ನಿಂಗು ಸೊಲಗಿ, ರೂಪಾ ಹಾಸನ, ಎಮ್. ಎಸ್ ಪೂಜಾರ, ಚಂದ್ರುಗೌಡ ಕುಲಕಣರ್ಿ, ಆರ್. ಎಸ್. ಗುರುಮಠ, ಚಂದ್ರಪ್ಪ ಹೆಬ್ಬಾಳ್ಕರ, ಗುರು ತಿಗಡಿ, ಹನುಮಂತ ನಾಯಕ, ವಿವೇಕಾನಂದಗೌಡ ಪಾಟೀಲ, ಗುರುಸಿದ್ಧ ಸ್ವಾಮಿ, ಪರಮೇಶ್ವರಯ್ಯ ಸೊಪ್ಪಿಮಠ, ಮಮತಾ ಅರಸೀಕೆರೆ, ಎ. ಬಿ. ಕೊಪ್ಪದ, ಅವಳೆಕುಮಾರ ಹೀಗೆ ಇನ್ನು ಅತ್ಯಧಿಕ ಮನಸ್ಸುಗಳು ಈ ಪತ್ರಿಕೆಯ ನಿರಂತರ ಚೈತನ್ಯಕ್ಕೆ ಪ್ರೋತ್ಸಾಹದಾಹಿಗಳಾಗಿ ನಿಂತುಕೊಂಡಿವೆ. ವ್ಯಾಪಾರ ದೃಷ್ಟಿಕೋನವನ್ನು ಬಿಟ್ಟು ಮಕ್ಕಳ ರಂಜನೆಗೋಸ್ಕರವೇ ನೆಲೆ ನಿಂತ ಈ ಪತ್ರಿಕೆಯ ಕೆಲಸ ಹೀಗೆ ಸಾಗುತ್ತಿರಲಿ ಎಂದು ಹಾರೈಸೋಣ..
ಇದೇ ಮೇ 26 ರಂದು ಧಾರವಾಡ ರಂಗಾಯಣದ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ಮಧ್ಯಾನ್ಹ 3 ಗಂಟೆಗೆ ಈ ಪತ್ರಿಕೆಯ 15 ನೇ ವಾಷರ್ಿಕೋತ್ಸವ ಕಾರ್ಯಕ್ರಮ ನೆರವೇರುತ್ತಿದೆ. ಓದುಗರೊಟ್ಟಿಗೆ ಸಂವಾದ, ಪತ್ರಿಕೆಗೆ ದುಡಿದವರಿಗೆ ಗೌರವ ಸಮರ್ಪಣೆ ಹೀಗೆ ಕೆಲ ಕಾರ್ಯಕ್ರಮಗಳನ್ನು ಮೇ 26 ರಂದು ಚಿಲಿಪಿಲಿ ಬಳಗ ಹಮ್ಮಿಕೊಂಡಿದೆ ನಾವೂ ಕೂಡ ಈ ಕಾರ್ಯಕ್ರಮಕ್ಕೆ ಜೊತೆಯಾಗಬಹುದು.
ಮಕ್ಕಳ ಕಾರ್ಯಕ್ರಮಗಳೇ ಕಡಿಮೆಯಾದ ಹೊತ್ತಲ್ಲಿ ಸಾಂಸ್ಕೃತಿಕ ದೃಷ್ಟಿಕೋನವನ್ನಿಟ್ಟುಕೊಂಡು ಬಂದು ಮಕ್ಕಳ ಕೈಗೆ ಗುಬ್ಬಚ್ಚಿ ಗೂಡಿನಂತಹ ಸುಂದರ ಪತ್ರಿಕೆಯನ್ನಿಟ್ಟು, ಸಮ್ಮೇಳನಗಳನ್ನು ಸಂಘಟಿಸಿದ ಧಾರವಾಡದ ಚಿಲಿಪಿಲಿ ಬಳಗದ ಕೆಲಸವನ್ನು ಮೆಚ್ಚಲೇಬೇಕು. ಈ ಸಂಘಟನೆ ಮತ್ತೆ ತನ್ನ ಹಿಂದಿನ ಕೆಲಸಗಳನ್ನು ನೆನೆದು ಮಕ್ಕಳ ಸಮ್ಮೇಳನದಂತ ಬೃಹತ್ ಕಾರ್ಯಕ್ರಮಗಳನ್ನು ಸೃಷ್ಠಿಸುವತ್ತ ಯೋಚಿಸಬೇಕಿದೆ. ಆ ತೆರನಾದ ಕೆಲಸಗಳು ಮಕ್ಕಳ ವರ್ಗಕ್ಕೆ ಸದಾ ಬೇಕು. ಮಕ್ಕಳ ಆಗು ಹೋಗುಗಳ ಬಗೆಗೆ ಚಿಂತಿಸುವ ಕೆಲವೇ ಕೆಲವು ಮನಸ್ಸುಗಳಲ್ಲಿ ಒಂದಾದ ಈ ತಂಡ ಮತ್ತೆ ಇನ್ನಷ್ಟು ಸಕ್ರೀಯವಾಗಿ ತೊಡಗಿಸಿಕೊಂಡಲ್ಲಿ ನಾಡಿನ ಮಕ್ಕಳಿಗೆ ಸಾಂಸ್ಕೃತಿಕ ಅವಕಾಶಗಳ ಮಹಾಪೂರ ಹರಿದು ಬರುವಲ್ಲಿ ಎರಡು ಮಾತಿಲ್ಲ…
 

‍ಲೇಖಕರು G

May 26, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Anonymous

    The article exhibits the clear need of children writers..you put it in proper light..well done chethu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: