ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಣವಂತಪ್ಪನ ಕ್ಷೌರದ ಪೆಟ್ಟಿಗೆ ಮತ್ತು ಗೋವಾ ಹೇರ್ಕಟಿಂಗ್ ಸಲೂನ್

ಟಿ  ಎಸ್  ಗೊರವರ

ಚಂಜಿಯ ಹೊತ್ತು ಕವಿಯಲು ಹವಣಿಸುತ್ತ ಮೆಲ್ಲ ಮೆಲ್ಲಗೆ ಪುಟ್ಟ ಮಗುವಿನಂತೆ ಅಂಬೆಗಾಲಿಡತೊಡಗಿತ್ತು. ಚಿಳ್ಳೆ ಪಿಳ್ಳೆಗಳು ನಿತ್ಯ ತಮ್ಮ ಕಾಯಕವೆಂದು ಪರಿಭಾವಿಸಿಕೊಂಡು ಕೊರ್ರ ಎಲ್ಲವ್ವ ಇಚಲು ಗರಿಗಳಿಂದ ನೀಟಾಗಿ ಹೆಣೆದುಕೊಟ್ಟಿರುವ ಬುಟ್ಟಿಯೊಳಗೆ ಜತನದಿಂದ ಒಂದೊಂದೆ ಕೋಳಿಗಳ ಕಾಲನ್ನು, ಕತ್ತನ್ನು ಅಮುಕಿ ಹಿಡಿದು ಮುಚ್ಚತೊಡಗಿದ್ದವು. ಗ್ವಾದಲಿಯ ಗೂಟಕ್ಕೆ ಕಟ್ಟಿದ್ದ, ಕಣ್ಣೊಳಗೆ ನಕ್ಷತ್ರ ಮಿಂಚು ತುಂಬಿಕೊಂಡಿದ್ದ ಆಕಳ ಕರು ತನ್ನವ್ವ ಬರುವ ದಾರಿ ನಿರುಕಿಸುತ್ತ ನಿಂತಿತ್ತು. ಹನುಮಪ್ಪನ ಗುಡಿಯ ಮೈಕು ಊರಿನ ಕಿವಿ ಗುಂಯ್ ಅನ್ನುವಂತೆ ಅದ್ಯಾವುದೋ ಭಕ್ತಿ ಗೀತೆಯನ್ನು ಉನ್ಮಾದದಿಂದ ಉಲಿಯತೊಡಗಿತ್ತು. ಪಟ್ಟಣಕ್ಕೆ ತೆರಳುವ ಕೆಂಪು ಬಸ್ಸು ನಿಲ್ಲುವ ಜಾಗೆಯ ಅನತಿ ದೂರದಲ್ಲಿಟ್ಟಿದ್ದ ಡಬ್ಬಿ ಅಂಗಡಿ ಹುಚ್ಚಪ್ಪನ ಆಮ್ಲೇಟಿನ ಘಮ, ಕಲ್ಲವ್ವನ ಮಿಡ್ಚಿ ಬಜ್ಜಿಯ ಘಮ ಅಲೆ ಅಲೆಯಾಗಿ ತೇಲಿ ಬಂದು ಊರಿನ ಮೂಗಿಗೆ ತಾಗಿ ಬಾಯೊಳಗೆ ನೀರೂರಿಸತೊಡಗಿತ್ತು.
ನೆಟ್ಟಗೆ ಬದುಕಲು ಕೂಲಿ ಆಸರವೆಂದು ಮನಗಂಡು ರೊಟ್ಟಿ ಮಾಡಿದ್ದ ಒಲೆ ಆರಿಸಿ ಏರಿದ ಹೊತ್ತಿನೊಂದಿಗೆ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗಿದ್ದ ಕೂಲಿ ಜನ ತಮ್ಮ ಗುಡಿಸಲ ಕಡೆ ಪಾದವ ಬೆಳೆಸಿದ್ದರು. ಎದೆ ತುಂಬಾ ಹರೆಯ ತುಂಬಿಕೊಂಡ ದಾವಣಿ ಲಂಗದ ಹುಡಗಿಯರು ಅಂಗಳದ ಕಸ ಹೊಡೆದು, ನೀರು ಚಿಮುಕಿಸಿ , ಚುಕ್ಕಿಯ ರಂಗೋಲಿ ಇಟ್ಟು , ಬುಡ್ಡಿ ಚಿಮಣಿಗೆ ದೀಪ ಮುಡಿಸತೊಡಗಿದ್ದರು. ಬೆಳಗಿಂದ ಮೂಲೆ ಹಿಡಿದು ಕೂತು ಮೈಯೊಳಗೆ ಬ್ಯಾಸರ ತುಂಬಿಕೊಂಡಿದ್ದ ಋತುಮತಿಯಾದ ಐನೇರ ಹುಡುಗಿ ತನ್ನ ಅರಿಷಣ ಬಣ್ಣದ ಮೈಸಿರಿಯನ್ನು ಬೆಳಕು ನೋಡದಂತೆ ಮೈ ತುಂಬಾ ದುಪ್ಪಟ್ಟಿ ಹೊದ್ದುಕೊಂಡು ಬಯಲು ಕಡೆ ಹೊರಟಿದ್ದಳು. ಅದ್ಯಾರದೋ ಮಸಾರೆ ಹೊಲದಲ್ಲಿನ ರಾಸಿಯ ಕಣಕ್ಕೆ ಕಾಳು ನೀಡಿಸಿಕೊಳ್ಳಲು ಹೋಗಿದ್ದ ಹಡಪದ ಗುಣವಂತಪ್ಪನು ನಾಕೈದು ಸೇರಿನಷ್ಟು ಕಾಳನ್ನು ಹೆಗಲಿಗೆ ನೇತು ಹಾಕ್ಕೊಂಡು, ದಣಿವು ತುಂಬಿಕೊಂಡು ಭಾರವಾಗಿದ್ದ ಹೆಜ್ಜೆಗಳನ್ನು ತನ್ನ ಗುಡಿಸಲ ಕಡೆ ಬೆಳಸಿದ್ದ.

ಕಲೆ: ರೂಪಾ ಹಾಸನ

ಊರಿನ ಅದ್ಯಾರ ಹೊಲದಲ್ಲಾದರೂ ಸೈ. ಅಲ್ಲಿ ರಾಸಿಯಿದ್ದರೆ ಹಡಪದ ಗುಣವಂತಪ್ಪ ಗೊಬ್ಬರದ ಹಾಳಿ ಚೀಲದೊಂದಿಗೆ ತಪ್ಪದೇ ಹಾಜರಿ ಹಾಕುತ್ತಿದ್ದ. ಆ ರಾಸಿಯ ಕಣದಲ್ಲಿ ಕಾಳು ನೀಡಿಸಿಕೊಂಡು ತನ್ನ ಪಾಡಿಗೆ ತಾನು ಬರದೆ ರಾಸಿ ಮಾಡುವವರೊಂದಿಗೆ ಹೆಗಲೆಣೆಯಾಗುತ್ತಿದ್ದ. ಅವರ ಹತ್ತಿರ ಬ್ಯಾಸರ, ದಣಿವಿನ ನೆರಳು ಸುಳಿದಾಡದಂತೆ ನಗೆ ಚಾಟಿಕೆ ಹಾರಿಸುತ್ತ ಅಲ್ಲಿದ್ದವರ ಮ್ಯಾಲೆ ಪದ ಕಟ್ಟಿ ರಾಗವಾಗಿ ಹಾಡುತ್ತಾ ರಂಜಿಸಿ ಪೋಲಿ ಒಗಟುಗಳನ್ನು ಹೇಳಿ ರೇಗಿಸುತ್ತಿದ್ದ. ಆಳೆತ್ತರದ ಮೂರು ಕಾಲಿನ ಕಟ್ಟಿಗೆಯ ಮೆಟ್ಟಿನ ಮ್ಯಾಲೆ ನಿಂತು ಕಾಳು ತೂರಲು ತಯಾರುಗೊಂಡ ವ್ಯಕ್ತಿಗೆ ಪುಟ್ಟಿ ತುಂಬಿಕೊಟ್ಟು, ತೂರಿದ ಕಾಳಿನ ಮ್ಯಾಲೆ ಸೆಳ್ಳಾಡಿಸಿ ಜೊಳ್ಳು ಬೇರ್ಪಡಿಸಿ, ಜಂತುಗುಂಟಿ, ಗ್ವಾರಿಯಿಂದ ರಾಸಿಯನ್ನು ಏರುಗಟ್ಟಿ, ತುಂಬಿದ ಚೀಲಗಳ ಬಾಯಿ ಹೊಲೆಯುವವರೆಗೂ ಜೊತೆಯಾಗುತ್ತಿದ್ದ.
ಗುಣವಂತಪ್ಪ ತನ್ನ ಕುಲ ಕಸುಬಾಗಿದ್ದ ಕ್ಷೌರ ಮಾಡುತ್ತಿದ್ದ. ಊರೊಳಗೆ ಈತನಿಂದ ಕ್ಷೌರ ಮಾಡಿಸಿಕೊಳ್ಳದೆ ಉಳಿದ ತಲೆಗಳೇ ಇಲ್ಲವೆಂದರೂ ಅಡ್ಡಿಯಿಲ್ಲ. ಅಲಾದಿ ಗೆಣೂದ್ದ ಮೀಸೆ ಮ್ಯಾಲೆ ಬೆರಳಾಡಿಸುತ್ತಾ ಯಮಕು ತೋರುತ್ತಿದ್ದ ಊರ ಗೌಡನೂ ಇವನ ಕೈಗೆ ತಲೆಕೊಟ್ಟು ವಿಧೇಯತೆಯಿಂದ ಕ್ಷೌರ ಮಾಡಿಸಿಕೊಳ್ಳುತ್ತಿದ್ದ.
ಗುಣವಂತಪ್ಪನ ಹತ್ತಿರ ಒಂದು ಪುಟ್ಟದಾದ ಕಟ್ಟಿಗೆಯ ಪೆಟ್ಟಿಗೆ ಇದೆ. ಅದರಲ್ಲಿ ಅಂಗೈ ಗಾತ್ರದ ಕನ್ನುಡಿ, ಬಾಚುಣಿಕೆ, ಕತ್ತಿ, ಬ್ರೆಸ್, ತುಂಡು ಸಾಬೂನು, ಕತ್ತರಿ, ಕರಾಪು ಮಾಡುವ ಮಷಿನ್, ದಾಡಿ ಮಾಡುವಾಗ ಅಚಾನಕ್ಕಾಗಿ ಕತ್ತಿ ತಗುಲಿ ರಕ್ತ ಒಸರತೊಡಗಿದಾಗ ಅದನ್ನು ನಿಲ್ಲಿಸುವ ಹಿಮದ ಗಡ್ಡೆಯಂತ ಪಟಗ…. ಹೀಗೆ ಕ್ಷೌರ ಮಾಡಲು ಬೇಕಾಗುವ ಸಕಲ ಸರಂಜಾಮುಗಳೂ ಅದರಲ್ಲಿ ಅಂಡೂರಿ ನೆಲೆ ಕಂಡಿದ್ದವು. ನೀಟಾಗಿ ಹಣೆ ತುಂಬಾ ದಪ್ಪಗೆ ಒಡೆದು ಕಾಣುವಂತೆ ಕೈಬೆರಳಿಗೆ ನೀರು ಸವರಿ ಈಬತ್ತಿ ಹಚ್ಕೊಂಡು, ಕೊರಳ ಎರಡೂ ಬದಿಗೆ ಒಂದೀಟು ಯಲ್ಲಮ್ಮನ ಬಂಡಾರ ಹಚ್ಕೊಂಡು ಆ ಪೆಟ್ಟಿಗೆ ಹಿಡಿದುಕೊಂಡು ಮನೆಯಿಂದ ಹೊರ ಬೀಳುತ್ತಿದ್ದ. ಗೂಳಿಯವರ ಓಣಿ, ರಾಮನಗರ, ಜನತಾ ಪ್ಲಾಟ್, ಅಗಸರ ಓಣಿ, ಗೌಡರ ಓಣಿ, ಸಾಬರ ಓಣಿ, ತಾಂಡಾದ ಬೀದಿಗಳಲ್ಲಿ ಪಾದ ಬೆಳೆಸುತ್ತಿದ್ದ. ಅದು ಸೂರ್ಯ ಕಣ್ಣ ರೆಪ್ಪೆಗೆ ಅಂಟಿದ ಕಣ್ಣಪಿಚ್ಚು ಉಜ್ಜಿಕೊಂಡು ಮೆಲ್ಲಗೆ ಕಣ್ತೆರೆದು ಲೋಕ ನೋಡುವ ಮೊದಲ ನೋಟದ ಹೊತ್ತಾದ್ದರಿಂದ ಎದುರಿಗೆ ಬಂದವರಿಗೆ ` ಶರಣು ಶರಣು.. ಎದ್ವಿ ನೀವು ಎದ್ರೇನಪಾ…’ ಎಂದು ಅಕ್ಕರೆಯಿಂದ ಕೈ ಜೋಡಿಸಿ ನಮಸ್ಕಾರ ಹೇಳುತ್ತಿದ್ದ. ಭಾಳ ಆಸ್ಥೆಯಿಂದ ಕಷ್ಟ-ಸುಖ ವಿಚಾರಿಸುತ್ತಾ ಕಾಳಜಿಯ ಮಾತಾಡುತ್ತಿದ್ದ.
ಹೀಂಗ ಅವರಿವರ ಜೊತೆ ಲೋಕಾರೂಢಿಯಾಗಿ ಅದೂ ಇದೂ ಮಾತಾಡುತ್ತಾ ಹೋಗುವಾಗ ಯಾರಾದರೂ ಕ್ಷೌರ ಮಾಡಿಸಿಕೊಳ್ಳಲು ಕರೆದರೆ ಅಲ್ಲಿ ಹಾಜರಿ ಹಾಕುತ್ತಿದ್ದ. ಅವರ ಅಂಗಳದಲ್ಲಿ ಗೋಣಿ ಚೀಲ ಹಾಸಿ ಕಟಿಂಗ್ ಮಾಡಿಸಿಕೊಳ್ಳುವವನನ್ನು ಅದರ ಮ್ಯಾಲೆ ಕುಂದರಿಸಿ ಕ್ಷೌರ ಮಾಡಲು ಅಣಿಗೊಳ್ಳುತ್ತಿದ್ದ. ಬಾಯಿ ತುಂಬಾ ತುಂಬಿಕೊಂಡ ತಾಂಬೂಲ ಮೆಲ್ಲುತ್ತಾ, ಆಗಾಗ ಜಿನಗುತ್ತಾ ಬಾಯಿ ತುಂಬಿ ಬರುವ ರಸವನ್ನು ಪಿಚಕ್ಕೆಂದು ಉಗುಳುತ್ತಾ, ಊರಿನ ಸಕಲೆಂಟು ವಿಚಾರಗಳನ್ನು ಮಾತಾಡಿ ಕ್ಷೌರ ಮಾಡಿ ಮತ್ತೆ ಮುಂದಿನ ಮನೆಯ ಕಡೆಗೆ ಸವಾರಿ ಬೆಳೆಸುತ್ತಿದ್ದ.
ಆಗ ತಾನೆ ಮೊಲೆ ಹಾಲು ಕುಡಿಯುವುದನ್ನು ಬಿಟ್ಟಿರುವ ಮಕ್ಕಳು ಕ್ಷೌರ ಮಾಡಿಸಿಕೊಳ್ಳಲು ಒಲ್ಲೆಂದು ಚಂಡಿ ಹಿಡಿಯುತ್ತಿದ್ದವು. ಇದು ಆಯಾ ಮಕ್ಕಳ ಹುಟ್ಟಿಸಿದವರಿಗೆ ತಲೆ ಚಿಟ್ಟು ಹಿಡಿಸುತ್ತಿತ್ತು. ಹೀಂಗ ಅತ್ತು-ಕರೆಯುವ ಮಕ್ಕಳನ್ನು ಅದ್ಹಾಗೆ ರಮಿಸಬೇಕೆನ್ನುವುದನ್ನು ಗುಣವಂತಪ್ಪ ಭಾಳ ಚೆಂದಾಗಿ ಬಲ್ಲ. ಅದು ದಿನಂಪ್ರತಿ ಅವನಿಗೆ ರೂಢಿಯಾಗಿ ಕರಗತ ವಿದ್ಯೆಯಾಗಿತ್ತು. ಪುಟ್ಟ ಮಕ್ಕಳ ಕ್ಷೌರ ಮಾಡುವ ಮೊದಲು ಆ ಮಗುವಿನೊಂದಿಗೆ `ಹತ್ತಿ ಕಟಗಿ ಬತ್ತಿ ಕಟಗಿ ಭಾವ ನೋಡು…’ ಪದ ಹೇಳುತ್ತಾ ಆಟವಾಡುತ್ತಿದ್ದ. ರಾಜ ಮಾರಾಜರ ಕತೆ ಹೇಳುತ್ತಿದ್ದ. ಆಗ ಸಹಜವಾಗಿ ಮಕ್ಕಳು ಪುಂಗಿಯ ನಾದಕ್ಕೆ ತಲೆದೂಗುವ ನಾಗರಹಾವಿನಂತೆ ಗುಣವಂತಪ್ಪ ಹೇಳಿದಂತೆ ಕೇಳುತ್ತಿದ್ದವು. ಇಂವ ಆಗ ತಲೆ ಭೋಳಿಸಲೋ, ಕರಾಪು ಮಾಡಲೋ ಮುಂದಾಗುತ್ತಿದ್ದ. ತಲೆ ಭೋಳಿಸುವುದು ಮುಗಿಯುವವರೆಗೂ ಒಂದಿಲ್ಲೊಂದು ಕತೆ ಹೇಳುತ್ತಲೇ ಇರುತ್ತಿದ್ದ. ಇವನ ಕತೆಗಳು ಮಕ್ಕಳ ಮ್ಯಾಲೆ ಅದೆಷ್ಟೂ ಪ್ರಭಾವ ಬೀರಿದ್ದವೆಂದರೆ ಕೂದಲು ಕಟಿಂಗ್ ಮಾಡಿಸುವಷ್ಟು ಬೆಳೆಯದಿದ್ದರೂ ಗುಣವಂತಪ್ಪನ ಕತೆ ಕೇಳುವ ಉತ್ಸುಕತೆಯಿಂದಾಗಿ ಕಟಿಂಗ್ ಮಾಡಿಸೆಂದು ಹಡೆದವರ ದುಂಬಾಲು ಬಿದ್ದು ಹಠ ಮಾಡುತ್ತಿದ್ದವು.
ಶ್ರಾವಣ ಮಾಸ ಬಂತೆಂದರೆ ಸಾಕು. ಊರು ಸಂಭ್ರಮಗೊಳ್ಳುತ್ತಿತ್ತು. ತಿಂಗಾಳುನುಗಟ್ಟಲೇ ಹಚ್ಚುತ್ತಿದ್ದ ಭಜನೆ ಊರೊಳಗೆ ಒಂದು ರೀತಿಯ ಅಲೌಕಿಕ ವಾತಾವರಣ ಮೂಡಿಸುತ್ತಿತ್ತು. ಕೆಲವರು ಶ್ರಾವಣ ಮುಗಿಯುವವರೆಗೆ ಕ್ಷೌರ ಮಾಡಿಸುತ್ತಿರಲಿಲ್ಲ. ಅವೆರೆಲ್ಲ ದಾಡಿ ಬಿಟ್ಟು ಋಷಿ ಮುನಿಗಳಂತೆ ಗೋಚರಿಸುತ್ತಿದ್ದರು. ಈ ತಿಂಗಳು ಗುಣವಂತಪ್ಪನಿಗೆ ರೆಸ್ಟು ಸಿಗುತ್ತಿತ್ತು. ಆಗ ಅಂವ ಭಜನೆ ಪದದ ಮ್ಯಾಳ ಸೇರಿಕೊಳ್ಳುತ್ತಿದ್ದ. ಊರಿನ ಕಿವಿಗಳು ಗುಣವಂತಪ್ಪನ ಭಜನೆ ಪದಗಳನ್ನು ಆಲಿಸಲು ಕಾತುರವಾಗುತ್ತಿದ್ದವು. ಇಂವ ಪೀಯಂಪಟಿಗಿ ಭಾರಿಸುತ್ತಾ `ಪಾಪ ಪುಣ್ಯ ತಕ್ಕಡಿಯೊಳಗ ತೂಕವಾಗಿತ್ತ… ಅವ್ವನ ಕಣ್ಣಂಚು ತೊಯ್ಯಿಸದಿರು ತಮ್ಮ…’ ಅಂತ ಭಜನಾ ಪದಗಳನ್ನು ಭಾವಪರವಶನಾಗಿ ಹಾಡುತ್ತಿದ್ದರೆ ಕೇಳುಗರೊಳಗೆ ಅಲೌಕಿಕದ ಜರಿಯೊಂದು ತಣ್ಣಗೆ ಹರಿಯುತ್ತಿತ್ತು. ಇಂವ ಭಜನಿ ಪದಗಳನ್ನು ಹಾಡುತ್ತಾ ಹಾಡುತ್ತಾ ಅಲ್ಲೇ ಹೊಸ ಭಜನಿ ಪದ ಕಟ್ಟಿ ಕೇಳುಗರೊಳಗೆ ಕುತೂಹಲ, ಬೆರಗು ಮೂಡಿಸುತ್ತಾ ಹಾಡುತ್ತಿದ್ದ. ಹಂಗಾಗಿ ಭಜನೆ ಮ್ಯಾಳದವರ ಪಾಲಿಗೆ ಗುಣವಂತಪ್ಪ ಹೀರೊ ಆಗಿದ್ದ.
ಈ ಸಕಲ ಕಲಾವಲ್ಲಭನನ್ನು ಮೈತುಂಬಾ ಹರೆಯ ತುಂಬಿಕೊಂಡ ಹೆಣ್ಣು ಜೀವವೊಂದು ಅಗಾಧವಾಗಿ ಕ್ಷಣ ಹೊತ್ತು ಬಿಟ್ಟಿರಲಾರದಂತೆ ಪ್ರೀತಿಸತೊಡಗಿತ್ತು. ಜಂಪರಿನ ಮಲಕಟ್ಟಿನೊಳಗೆ ಗುಣವಂತಪ್ಪನ ಫೋಟೊವನ್ನು ಜತನದಿಂದ ಬೆಚ್ಚಗೆ ಇಟ್ಟುಕೊಂಡು ವಿರಹದ ಮೂಡಿನಲ್ಲಿದ್ದಾಗ ಫೋಟೊಗೆ ಲೊಚ ಲೊಚ ತುಟಿಮುತ್ತು ಕೊಡುತ್ತಾ ಆರಾಧಿಸುತ್ತಿದ್ದಳು. ಆತನ ಬಾಯೊಳಗಿನ ಎಲೆಡಿಕೆಯನ್ನು ಆಕೆ, ಆಕೆಯ ಬಾಯೊಳಗಿನ ಎಲೆಡಿಕೆಯನ್ನು ಆತ ಹಂಚಿಕೊಂಡು ತಿಂದು ಪ್ರೇಮದ ಉತ್ಕಟತೆಯನ್ನು ಅನುಭವಿಸುತ್ತಾ ಸಂತೃಪ್ತ ಭಾವದಿಂದ ತಮ್ಮ ಪ್ರೇಮ ಮೆರೆಯುತ್ತಿದ್ದರು. ಬಿಸಿಲು ನಡು ನೆತ್ತಿಯ ಮ್ಯಾಲೆ ಜಲ ಜಲ ಸುರಿಯುವಾಗ ಓಣಿಯಲ್ಲಿ ಅದ್ಯಾವ ನರಪಿಳ್ಳೆಯ ಸುಳಿವೂ ಇರದ ವ್ಯಾಳೆ ನೋಡಿ ಅವನಿಗೆ ಕೊಬ್ಬರಿ ಖಾರ ಕುಟ್ಟಿಕೊಟ್ಟು, ತನಗೆ ಸಾಕಾಗುವಷ್ಟು ತುಟಿಮುತ್ತು ಪಡೆದುಕೊಂಡು, ಗುಣವಂತಪ್ಪನ ತೆಕ್ಕೆಯೊಳಗೆ ಒಂದಾಗಿ ಪುನೀತಳಾಗುತ್ತಿದ್ದಳು ಎನ್ನುವ ಮಾತುಗಳು ಊರಿನ ಹರಕು ಬಾಯೊಳಗೆ ಚಾಲ್ತಿಯಲ್ಲಿದ್ದವು. ಈ ಮಾತುಗಳನ್ನು ಕೇಳಿದರೂ ಕೇಳದಂತೆ ಗುಣವಂತಪ್ಪ ತನ್ನ ಪಾಡಿಗೆ ತಾನು ದಿನಚರಿಯಲ್ಲಿ ತಲ್ಲೀಣನಾಗುತ್ತಿದ್ದ.
ಇದ್ದೊಂದು ಸಕರ್ಾರಿ ಆಶ್ರಯ ಯೋಜನೆಯ ಹೆಂಚಿನ ಮನೆಯಲ್ಲಿ ಗುಣವಂತಪ್ಪ, ಆತನ ತಮ್ಮ, ತಮ್ಮನ ಹೆಂಡತಿ ಎಲ್ಲ ಕೂಡಿಕೊಂಡು ಬದುಕಿನ ಬಂಡಿಯ ಕೀಲು ತಪ್ಪದಂತೆ ಬಾಳತೊಡಗಿದ್ದರು. ಮನೆಗೆ ಯಾವುದೂ ಕಡಿಮೆ ಬೀಳದಂತೆ ಗುಣವಂತಪ್ಪ ಸಕಲ ಆಗು ಹೋಗುಗಳ ಕಡೆ ನಿಗಾ ವಹಿಸುತ್ತಾ ಸರಿಯಾಗಿ ತೂಗಿಸಿಕೊಂಡು ಹೊರಟಿದ್ದ. ತನಗೆ ಅಂತ ಹೆಸರಿಸುವ ಯಾವ ಸ್ವತ್ತೂ ಮಾಡಿಕೊಳ್ಳದೆ, ನಯಾಪೈಸೆ ಗಳಿಕೆ ಮಾಡಿಕೊಳ್ಳದೆ ಬಂದ ರೊಕ್ಕವೆಲ್ಲವನ್ನೂ ತಮ್ಮನ ಕುಟುಂಬದ ಹೊಟ್ಟೆ ಬಟ್ಟೆಗೆ ಸುರಿಯುತ್ತಿದ್ದ.
********
ಇತ್ತೀಚೆಗೆ ಗುಣವಂತಪ್ಪನ ಬದುಕಿನ ಮ್ಯಾಲೆ ಮಾದರ ಎಂಕಪ್ಪನ ಮಗನಾದ ಶಿವ್ಯಾನ ರೂಪದಲ್ಲಿ ಚೇತರಿಸಿಕೊಳ್ಳಲಾರದಂತ ರಾವು ಬಡೆದಿತ್ತು. ಈ ಶಿವ್ಯಾ ಮನೆಯಲ್ಲಿ ಜಗಳಾಡಿ ಯಾರಿಗೂ ಹೇಳದೆ ಕೇಳದೆ ಗೋವಾಕ್ಕೆ ದುಡಿಯಲು ಓಡಿ ಹೋಗಿದ್ದ. ಅಲ್ಲಿ ಐದಾರು ವರ್ಷ ದುಡಿದು ಕೈ ತುಂಬಾ ಹಣಗಳಿಸಿಕೊಂಡು ಊರಿಗೆ ಬಂದಾಗ ಎಂಕಪ್ಪನಿಗೆ ತನ್ನ ಮಗನೆಂಬುದು ಗುರುತು ಹತ್ತದಷ್ಟು ಬದಲಾಗಿದ್ದ. ಜೀನ್ಸ್ಪ್ಯಾಂಟ್, ಮೈಗೆ ಅಂಟಿದ ಚರ್ಮದಂತೆ ತೋರುತ್ತಿದ್ದ ಟಿ ಶಟರ್್ ಹಾಕಿಕೊಂಡು, ಕೈಯಲ್ಲೊಂದು ಹಾಡುವ ಮೊಬೈಲ್ ಹಿಡಿದುಕೊಂಡು ಸಿನೇಮಾದ ಹಿರೋನಂತೆ ಗೋಚರಿಸುತ್ತಿದ್ದ. ಅವನು ಮಾದರ ಹುಡುಗನೆಂದು ಅದ್ಯಾರೂ ಗುರುತಿಸದಷ್ಟು ಫರುಕಾಗಿದ್ದ. ವಾರಿಗೆಯ ಗೆಳೆಕಾರರು ಅವನನ್ನು ಸೋಜಿಗದಿಂದ ದಿಟ್ಟಿಸತೊಡಗಿದ್ದರು. ಶಿವ್ಯಾನನ್ನು ಮುಟ್ಟಿದರೆ ಸಾಕು. ಊರಿನ ಸಕರ್ಾರಿ ಆಸ್ಪತ್ರೆಯ ನಸರ್್ಬಾಯಿ ನೆಪ್ಪು ತರುತ್ತಿತ್ತು. ಶಿವ್ಯಾ ಅಷ್ಟೊಂದು ಬೆಳ್ಳಗೆ ಮೋಹಕವಾಗಿದ್ದ. ಮೈಯೊಳಗೆ ಆಗ ತಾನೆ ಹರೆಯ ಹೊಕ್ಕ ಹುಡುಗಿಯರು ಶಿವ್ಯಾನನ್ನು ಕಣ್ಣರಳಿಸಿ ನೋಡಿ ತುಟಿಯಲ್ಲಿ ಮುಗುಳು ನಗೆಯ ಹೂ ಅರಳಿಸುತ್ತಿದ್ದವು.
ಗೋವಾದಲ್ಲಿ ಹೇರ್ ಕಟಿಂಗ್ ಸಲೂನ್ನಲ್ಲಿ ಕೆಲಸ ಮಾಡಿ, ಕ್ಷೌರ ಮಾಡುವ ನೈಪುಣ್ಯತೆ ಪಡೆದುಕೊಂಡಿದ್ದ ಶಿವ್ಯಾ ತನ್ನೂರಿನಲ್ಲಿಯೇ ಕ್ಷೌರದಂಗಡಿ ತೆರೆಯುವ ಇರಾದೆ ಇಟ್ಟುಕೊಂಡು ಊರ ಕಡೆ ಮುಖ ಮಾಡಿದ್ದ. ಹಾಗೆ ನೋಡಿದರೆ ಶಿವ್ಯಾ ಕ್ಷೌರದಂಗಡಿ ತೆರೆದರೆ ತಮ್ಮ ಮಾದಿಗರನ್ನು ಬಿಟ್ಟರೆ ಊರವರು ಕ್ಷೌರ ಮಾಡಿಸಿಕೊಳ್ಳುವುದು ಅನುಮಾನವಿತ್ತು. ತಾನು ಹಡಪದವನಲ್ಲದಿದ್ದರೂ ಆ ಅಳುಕನ್ನೆಲ್ಲ ಮೀರಿ ಕ್ಷೌರವನ್ನು ಒಂದು ವೃತ್ತಿ ಮಾತ್ರವೆಂದು ಪರಿಭಾವಿಸಿ ಕ್ಷೌರದಂಗಡಿ ತೆರೆಯಲು ಸಜ್ಜುಗೊಂಡ.
ಊರಿನ ಸಂತೆ ಬಜಾರದ ಹತ್ತಿರ ಖಾಲಿಯಿದ್ದ ರೂಮೊಂದನ್ನು ಬಾಡಿಗೆ ಪಡೆದು, ಅಲ್ಲಿ ಕ್ಷೌರದಂಗಡಿ ತೆರೆಯಲು ತಯಾರುಗೊಂಡ. ಪಟ್ಟಣದ ಗೌಂಡಿಗಳನ್ನು ಕರೆಸಿ ರೂಮಿನ ಗೋಡೆಗಳಿಗೆ ಸಿಮೆಂಟ್ ಮಾಡಿಸಿ, ಬಣ್ಣ ಹಚ್ಚಿಸಿ ಪಿಚ್ಚರಿನಲ್ಲಿಯ ಮನೆಯಂತೆ ನೀಟಾಗಿಸಿದ. ಕ್ಷೌರ ಮಾಡಲು ಅನುಕೂಲವಾಗಲು ತಿರುಗುವ ಕುಚರ್ಿಗಳನ್ನು, ಮುಖ ಮತ್ತು ಹಿಂದೆಲೆ ಗೋಚರಿಸುವಂತ ಕನ್ನುಡಿಗಳನ್ನು ನೇತು ಹಾಕಿದ. ಬ್ಯಾಸಿಗಿ ಬಿಸಿಲಿನ ಜಳ ಗಿರಾಕಿಗಳಿಗೆ ತಗುಲಿ ಕುದಿಯಾಗದಂತೆ ಮಾಡುವ ಪ್ಯಾನು ಆಗಲೇ ತನ್ನಷ್ಟಕ್ಕೆ ತಾನು ಧ್ಯಾನಸ್ಥವಾಗಿ ತಣ್ಣನೆಯ ಗಾಳಿ ಬೀಸತೊಡಗಿತ್ತು. ಅಂಗಡಿಯ ತಲಬಾಗಿಲಿಗೆ ನೇತು ಹಾಕಿದ್ದ ಬಣ್ಣದಿಂದ ಬರೆಸಿದ್ದ `ಶಿವರಾಜ ಗೋವಾ ಹೇರ್ ಕಟಿಂಗ್ ಸಲೂನ್’ ಎನ್ನುವ ಬೋಡರ್ು ಜನರ ಕಣ್ಣು ಸೆಳೆಯತೊಡಗಿತ್ತು. ಅವನು ಹಡಪದ ಜಾತಿಯವನಲ್ಲದಿದ್ದರೂ ಕ್ಷೌರದಂಗಡಿ ತೆರೆದಿದ್ದು ಕೆಲವರೊಳಗೆ ಇನ್ನಿಲ್ಲದ ಕುತೂಹಲ ಮೂಡಿಸಿತ್ತು.
ಅಂಗಡಿಯ ಮೈ ತುಂಬಾ ತುಂಬಿದ್ದ ಘಮ ಗುಡುವ ಸುವಾಸನೆಯ ಪರಿಮಳವನ್ನು ದಿವ್ಯಾನಂದದಿಂದ ಸವಿಯತೊಡಗಿದ್ದ ಗಿರಾಕಿಗಳಿಗೆ ಟೇಪ್ ರೇಕಾರ್ಡರಿನ ಹಿಂದಿ ಹಾಡು ಅದ್ಯಾವತ್ತೂ ಕೇಳದಂತ ಸಂಗೀತವನ್ನು ಅವರ ಕಿವಿಯೊಳಗೆ ಸುರಿಯತೊಡಗಿತ್ತು. ಹನುಮಂತನ ಗುಡಿಯ ಮೈಕಿನ ಹಾಡು, ಭಜನೆ ಪದ, ತತ್ವಪದ, ಹಂತಿಪದ, ಗೀಗೀ ಪದಗಳನ್ನು ಮಾತ್ರ ಆಲಿಸಿದ್ದ ಊರಿನ ಕಿವಿಗಳಿಗೆ ಹಬ್ಬವನ್ನುಂಟು ಮಾಡಿತ್ತು. ಮೊದ ಮೊದಲು ಮಾದಿಗರ ಹುಡುಗರು ಮಾತ್ರ ಶಿವ್ಯಾನ ಹತ್ತಿರ ಕ್ಷೌರ ಮಾಡಿಸಿಕೊಂಡು ಊರ ಹುಡುಗರಿಗಿಂತ ಚೆಂದ ಕಾಣತೊಡಗಿದರು. ಇದು ಊರ ಗೌಡನ ಮಗನ ಹೊಟ್ಟೆ ಊರಿಸಿತು. ಕ್ಷೌರ ಮಾಡಿಸಿದ ತರುವಾಯ ಹಿತ್ತಲಿನೊಳಗೆ ಸ್ನಾನ ಮಾಡಿ ಮಡಿ ಉಡಿಯಾದರಾಯಿತು ಎಂದು ತಕರ್ಿಸಿ ಶಿವ್ಯಾನ ಹತ್ತಿರ ಗೌಡನ ಮಗ ಕ್ಷೌರ ಮಾಡಿಸಿಕೊಂಡ. ಆ ದಿನದಿಂದ ಊರಿನ ಬೇರೆ ಬೇರೆ ಹುಡುಗರು ಹಿಂದೆ ಮುಂದೆ ನೋಡದೆ ಶಿವ್ಯಾನ ಹತ್ತಿರ ಕ್ಷೌರ ಮಾಡಿಸಿಕೊಳ್ಳತೊಡಗಿದರು.
ದಿನಗಳು ಉರುಳಿ ಕಾಲನ ಒಳಗೆ ಒಂದಾಗುತ್ತಾ ಹೋದಂತೆ ಶಿವ್ಯಾನ ಕಟಿಂಗ್ ಅಂಗಡಿ ಫೇಮಸ್ ಆಗತೊಡಗಿತ್ತು. ಶಿವ್ಯಾನ ಕ್ಷೌರದಂಗಡಿಯ ಸರಂಜಾಮುಗಳು ಊರ ಹುಡುಗರಿಗೆ ಇನ್ನಿಲ್ಲದಂತೆ ಕುತೂಹಲ ಮೂಡಿಸಿದ್ದವು. ವಾಟರ್ ಸ್ಪ್ರೇ, ಸೇವಿಂಗ್ ಮಶೀನ್, ತಿರುಗುವ ಚೇರು, ಫೇಸ್ವಾಸ್, ಸೇವಿಂಗ್ ಮಾಡಿದ ನಂತರ ಘಮಗುಡುವ ಅದ್ಯಾವುದೋ ಎಣ್ಣೆ ಹಾಕಿ ತುಸು ಹೊತ್ತು ಅಂವ ಮಸಾಜ್ ಮಾಡುವ ಪರಿ ಊರ ಹರಕು ಬಾಯೊಳಗೆ ತಾಂಬೂಲವಾಯಿತು. ಇಂವ ಗೋಡೆಗೆ ನೇತು ಹಾಕಿದ್ದ ಸಲ್ಮಾನ್ಖಾನ್, ಅಮೀರ್ಖಾನ್, ಸುದೀಪ್ ಹೇರ್ ಕಟಿಂಗ್ ಸ್ಟೈಲ್ ಹೀಗೆ ನಾನಾ ನಮೂನೆಯ ಕಟಿಂಗ್ಗಳ ಭಾವಚಿತ್ರದ ಮಾದರಿಯ ಹಾಗೆ ಊರಿನ ಜನ ಕ್ಷೌರ ಮಾಡಿಸಿಕೊಂಡು ಥೇಟು ಬೆಂಗಳೂರಿಗರಂತೆ ತೋರತೊಡಗಿದ್ದರು. ಅಪ್ಪಿತಪ್ಪಿಯೂ ಗುಣವಂತಪ್ಪನ ಹತ್ತಿರ ಯಾರೂ ಕ್ಷೌರ ಮಾಡಿಸಿಕೊಳ್ಳುವವರು ಇಲ್ಲವಾದರು. ಶಿವ್ಯಾನ ಈ ಪರಿ ಕಟಿಂಗ್ನ ವಿನ್ಯಾಸಗಳಿಗೆ ಗುಣವಂತಪ್ಪ ಥಂಡಾ ಹೊಡೆದು ಬೆರಗಾಗಿದ್ದ.
ಶಿವ್ಯಾನ ಮಾಯಕದ ಕ್ಷೌರದಿಂದ ಗುಣವಂತಪ್ಪನ ಬದುಕಿನೊಳಗೆ ಹಲವಾರು ಬದಲಾವಣೆಗಳು ಘಟಿಸಿದವು. ಕೊಂಚವೂ ಆದಾಯವಿಲ್ಲದಂತಾಗಿ ಯೋಚನೆಗಿಡಾದ. ಸರಾಗವಾಗಿ ಸಾಗುತ್ತಿದ್ದ ಬದುಕಿನ ಹಾಯಿದೋಣಿಗೆ ಬಿರುಗಾಳಿ ಬೀಸಿದಂಗಾಗಿತ್ತು. ಬಾಳ್ವೆ ಇದಿರಾದಂತಾಗಿ ಚಿಂತಾಕ್ರಾಂತನಾದ. ಮನಸು ನೂರು ನೋವು ಹಡೆಯಿತು. ಜಡ್ಡು ಜಪಾತ್ರಿ ಸುಳಿಯದ ಗುಣವಂತಪ್ಪನಿಗೆ ತಲೆ ನೋವು ಶುರುವಾಯಿತು. ರಾತ್ರಿ ಹಗಲಿಗೆ ಫರುಕಿಲ್ಲದೆ ತಲೆಯೊಳಗೆ ಅದ್ಯಾರೋ ಕುಳಿತು ಕಲ್ಲು ಕಟಿಯುತ್ತಿರುವಂತೆ ಭಾಸವಾಗುತ್ತಿತ್ತು. ಏನೊಂದು ತೋಚದಂತಾಯಿತು. ಗಿರಾಕಿಗಳಿಲ್ಲದೆ ಕಸುಬಿಗೆ ಎಳ್ಳು ನೀರು ಬಿಟ್ಟಿದ್ದರಿಂದ ಹೊಟ್ಟೆ ಹೊರೆಯುವ ಚಿಂತೆ ಕ್ಷಣ ಕ್ಷಣಕ್ಕೂ ಭೇತಾಳಾಗಿ ಕಾಡತೊಡಗಿತ್ತು. ಕೂಲಿ ಕೆಲಸಕ್ಕೆ ಹೋಗಬೇಕೆಂದರೆ ಬದುಕಿನ ಹೊಸಿಲೊಳಗೆ ಸಂಜೆಗತ್ತಲು ಕಾಲಿಟ್ಟು ರಟ್ಟೆಯಲ್ಲಿನ ಕಸುವು ಕಡಿಮೆಯಾಗಿತ್ತು. ಕಾಲನ ಕತ್ತಾಲೆ ಬೆಳದಿಂಗಳಾಟಕ್ಕೆ ಗುಣವಂತಪ್ಪ ಬೆರಗಾಗಿ ಹೋಗಿದ್ದ. ಬಗೆಹರಿಯದ ನೂರೆಂಟು ಪ್ರಶ್ನೆಗಳು ಮುಖವಗಲಿಸಿ ಅಣಕಿಸತೊಡಗಿದ್ದವು.
ಗುಣವಂತಪ್ಪನ ಆದಾಯ ಮೊದಲಿಗಿಂತ ಅಪೂಟ ಕಡಿಮೆಯಾಗತೊಡಗಿತು. ಮನೆಯ ಖಚರ್ು ನೀಗಿಸುವುದು ಅಸಹನೀಯವೆನಿಸಿ ಎದೆಯೊಳಗೆ ಚಿಟಮುಳ್ಳು ಆಡಿಸಿದಂಗಾಗತೊಡಗಿತು. ತನ್ನ ವೃತ್ತಿಯ ಮ್ಯಾಲೆ ಎಳೆದಿರುವ ಬರೆಯ ಗಾಯ ಅದ್ಯಾವತ್ತೂ ಮಾಯಲಾರದು ಎನಿಸಿ ತಲೆ ಚಿಟ್ಟು ಹಿಡಿದು ನೂರೆಂಟು ಚಿಂತೆಗಳು ಮುತ್ತತೊಡಗಿದವು. ಈ ಸಂದಿಗ್ದ ಹೊತ್ತಿನಲ್ಲಿ ಅವನಿಗೆ ಸಾಂತ್ವಾನ ಹೇಳಿ, ಹೆಗಲಿಗೆ ಹೆಗಲು ಕೊಡಬೇಕಾದ ತಮ್ಮ ಬರೀ ದುಡ್ಡಿನ ಮುಖ ನೋಡಿದ. ತಮ್ಮನ ಹೇಂತಿ ಹೆಜ್ಜೆಗೊಮ್ಮೆ ಅಂಗಿಸಿ ಮೂದಲಿಸತೊಡಗಿದಳು. ರೊಟ್ಟಿ ತಿನ್ನುವಾಗ `ಸುಮ್ನ ಮನಾಗ ಕುಂತು ತಿಂದ್ರ ತಂದ ಹಾಕೋರ್ನ ಇಟ್ಟಿಯನೂ. ದುಡೀಲಿಲ್ಲ ದುಕ್ಕ ಬಡೀಲಿಲ್ಲ. ಕುಂತು ತಿಂದ್ರ ಕುಡಿಕಿ ಹೊನ್ನು ಸಾಲ್ದು. ಹಿಟ್ಟ ಇಲ್ದ ರೊಟ್ಟಿ ಮಾಡಿ ಕೊಡು ಅಂದ್ರ ಎಲ್ಲಿಂದ ಮಾಡಿ ಕೊಡ್ಲಿ. ಹಂಗ ತಿನ್ನಾಕ ನಿಮ್ಮ ಜನ್ಮಕ್ಕ ಒಂದಿಷ್ಟು ನಾಚಿಕೆ ಬರಬೇಕು…..’ ಅಂತ ಇದ್ದದ್ದು ಇರಲಾರದ್ದನ್ನು ಆಡಿಕೊಂಡು ಸಾಪಳಿಸಿ ಬಯ್ಯುತ್ತಾ ಬೆಚ್ಚಿಸುತ್ತಿದ್ದಳು. ಇಂವ ಮನೆಗೆ ಬಂದರೆ ಸಾಕು. ಅಲ್ಲಿ ಅಸಮಾಧಾನದ ಹೊಗೆ ದಿಗ್ಗೆಂದು ಏಳುತ್ತಿತ್ತು. ನೆಮ್ಮದಿ ಎಂಬುದು ಬಿಸಿಲುಗುದರೆಯಂತೆ ಗಾವುದ ದೂರ ಓಟ ಕೀಳುತ್ತಿತ್ತು. ಮನದೊಳಗೆ ಇರುವೆ ಹರಿದಾಡಿದಂತೆನಿಸಿ ಹೇಳಿಕೊಳ್ಳಲಾಗದ ತೀವ್ರ ಯಾತನೆ ಅನುಭವಿಸತೊಡಗಿದ್ದ. ಜೀವ ಒಳಗೊಳಗೆ ಕಣ್ಣೀರು ಹಾಕುತ್ತಾ ತತ್ತರಿಸತೊಡಗಿತ್ತು. ಯೋಚಿಸಿದ… ಚಿಂತಿಸಿದ… ಮನೆ ಬಿಟ್ಟು ಬಿಡಬೇಕಿನಿಸಿತವನಿಗೆ. ಇನ್ಯಾವತ್ತೂ ಈ ಹೆಂಚಿನ ಮನೆಯ ಕಡೆ ಮುಖ ಮಾಡಬೇಡ ಅಂತ ಮನಸು ಫಮರ್ಾನು ಹೊರಡಿಸಿತು. ಗಟ್ಟಿ ಮನಸು ಮಾಡಿ ಮನೆಯಿಂದ ಕಾಲ್ಕಿತ್ತ.
ರಾತ್ರಿಯಾದೊಡನೆ ವಾಸ್ತವ್ಯದ ಚಿಂತೆ ತಲೆದೋರಿತು. ನಿವರ್ಾ ಇಲ್ಲದೆ ಒಂದೆರಡು ದಿನ ಗುಡಿಯಲ್ಲಿ ಕಾಲ ನೂಕಿ ಬೆಳಕು ಹರಿಸಿದ. ಅಗಸಿ ವಾರಿ ಕಡೆ ಬೀಳು ಬಿದ್ದಿದ್ದ ಜಾಗೆಯಲ್ಲಿ ಗುಡಿಸಲು ಹಾಕುವುದಾಗಿ ಅಕಲು ಹಾಕಿದ. ಲೆಕ್ಕಿ ಜರಲಿನ ತಡಿಕೆಗೆ ನೆಲ್ಲು ಹುಲ್ಲು ಹೊದಿಸಿದ ಗುಡಿಸಲು ಕಟ್ಟಿಕೊಂಡು ಅಲ್ಲಿಯೇ ಜೀವ ತೇಯತೊಡಗಿದ. ಸಂಬಂಧದ ಬಳ್ಳಿ ಹರಿದು ಬಿದ್ದದ್ದು ಆಗಾಗ ನೆಪ್ಪಾಗಿ ದುಃಖ ಒತ್ತರಿಸಿ ಬರುತ್ತಿತ್ತು. ಒಬ್ಬಂಟಿ ಬದುಕು ಬ್ಯಾಸರವಾಗಿ ತನ್ನ ಬದುಕು ಉಂಡು ಬೀಸಾಕಿದ ಎಲೆಯಂತಾಯಿತು ಅನಿಸುತ್ತಿತ್ತವನಿಗೆ. ಬದುಕಿನ ತುಂಬಾ ಅಮವಾಸ್ಯೆ ಕತ್ತಲು ಕವಿದಂತಾಗಿ ದಿನೇ ದಿನೆ ಬೊಗಸೆಯಷ್ಟಿದ್ದ ಉತ್ಸಾಹವೂ ಕರಗತೊಡಗಿತ್ತು. ತನ್ನ ಬಾಳೇ ಶೂನ್ಯವೆಂದುಕೊಂಡ. ಅದೇನನ್ನೋ ದಿಟ್ಟಿಸುತ್ತಾ ದೃಷ್ಟಿ ಬದಲಿಸದೆ ಸ್ಥಾವರವಾಗಿ ಕುಳಿತು ಬಿಡುತ್ತಿದ್ದ. ಊರಿನ ಜನಕ್ಕೆ ನಗು ಕಲಿಸಿದ್ದ ಇತ ಬಿಕ್ಕಳಿಕೆಯ ಪದಗಳನ್ನು ತನ್ನಷ್ಟಕ್ಕೆ ತಾನೇ ಹಾಡಿಕೊಳ್ಳುತ್ತಾ ಕಣ್ಣೀರಾಗುತ್ತಿದ್ದ.
ಇಳಿವಯಸ್ಸಿನಲ್ಲಿ ಮೆತ್ತನೆಯ ಬಿಸಿ ರೊಟ್ಟಿ ತಿನ್ನುತ್ತಾ ನೆಮ್ಮದಿಯಿಂದ ಬಾಳಬೇಕಿದ್ದ ಜೀವ ತಲ್ಲಣಿಸತೊಡಗಿತ್ತು. ತನ್ನಿಂದ ತಾನೇ ಕಣ್ಣಾಲಿಗಳು ತುಂಬತೊಡಗಿದ್ದವು. ಕ್ಷೌರದ ಪೆಟ್ಟಿಗೆಯ ಕಡೆ ದೃಷ್ಟಿ ಬೀರಿದ. ಅದು ಅನಾಥವಾಗಿ ತನ್ನಂತೆ ದುಃಖಿಸುತ್ತಿರುವಂತೆ ತೋರಿತು. ಅದರೊಳಗಿನ ಬ್ರೆಸ್ಸು, ಪಟಕದ ಚೂರು, ಕರಾಪು ಕತ್ತರಿ, ತುಂಡು ಸಾಬೂನು, ಬಾಚಣಿಕೆ, ಕತ್ತಿಗಳೆಲ್ಲಾ ಪಿಳಿ ಪಿಳಿ ಕಣ್ಣು ಬಿಡುತ್ತಾ ಜೋಲು ಮಾರಿ ಹಾಕಿದಂತೆ ಕಂಡವು. ಜತೆಗೇ ಇದ್ದ ಪೀಯಂಪಟಿಗಿ ಧ್ವನಿಯಿಲ್ಲದೇ ಕೂತಿತ್ತು. ಗುಣವಂತಪ್ಪ ಎದೆಮ್ಯಾಲೆ ಕೈ ಕಟ್ಟಿ ಅವನ್ನೇ ದಿಟ್ಟಿಸತೊಡಗಿದ್ದ. ಅವನರಿವಿಗೂ ಬಾರದೆ ಕಪಾಳದ ಮ್ಯಾಲೆ ಕಣ್ಣೀರ ಕಾಲುವೆ ಹರಿಯತೊಡಗಿತ್ತು.

‍ಲೇಖಕರು G

7 February, 2013

3 Comments

  1. ಹನುಮಂತ ಹಾಲಿಗೇರಿ

    ಕಥೆ ಚಲೋ ಬಂದದ ಗೆಳೆಯ,ಗೋವಾದ ಕಟೀಂಗ್ ಶಾಫ್ ಗುಣವಂತಪ್ಪನ ಕ್ಷೌರದ ಪೆಟ್ಟಿಗೆಗೆ ಕೆಲಸವಿಲ್ಲದಂತೆ ಮಾಡಿರುವ ಪರಿಯನ್ನು ಚಲೋ ನಿರೂಪಿಸಿದ್ದಿರಿ.

  2. Raghunandan K

    ಕಥೆ ಅಪೂರ್ಣವಾದಂತಿದೆ, ಕಥಾ ಭೂಮಿಕೆ ತೆರೆದುಕೊಳ್ಳುತ್ತಿರುವಾಗಲೇ ಮುಗಿದು ಬಿಟ್ಟಂತೆ ಭಾಸವಾಗುತ್ತಿದೆ. ಗುಣವಂತಪ್ಪನನ್ನ ಅಗಾಧವಾಗಿ ಹಚ್ಚಿಕೊಂಡ ಹರೆಯದ ಹೆಣ್ಣು ಜೀವ – ಮರೆಯಾಗಿದೆ, ಏನನ್ನೋ ಹೇಳ ಬಯಸಿ, ಸ್ತಿತ್ಯಂತರವನ್ನ ಅದರ ಪರಿಣಾಮವನ್ನ ಕಟ್ಟಿಕೊಡಲು ಹೊರಟಂತೆನಿಸಿ ಏನೂ ಹೇಳದ ಕಥಾ ಭೂಮಿಕೆಯೊಂದನ್ನೇ ಉಳಿಸಿ ಕಥೆ ಮುಗಿಯಿತಾ ಎನಿಸುತ್ತಿದೆ…
    ಕಥಾ ಭೂಮಿಕೆಯ ಸೊಗಡು ಸೊಗಸಾಗಿದೆ, ಕಥನ ಶೈಲಿ ಇಷ್ಟವಾಯಿತು…
    ಮುಂದುವರೆಯಲಿ..

  3. MANJUNATH.P

    chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading