ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಜರಿ ಆಯುವ ಹುಡುಗ!

-ಬಿ ಎಂ ಬಷೀರ್
street-kid-ronex-ahimbisibwe
ಕಾಯಿ ವ್ಯಾಪಾರಕ್ಕೆ ಸಂತೆಗೆ ಬಂದ
ಬ್ಯಾರಿಯಂತೆ ಅಪ್ಪ
ಹುಟ್ಟಿದ

ಗಿಡದಲ್ಲಿ ತೂಗುವ ಮಾವು
ಗೇರು, ಆಗಷ್ಟೇ ಕಣ್ಣು ಬಿಟ್ಟ ಗೊನೆ
ಹೂವು ಎಲ್ಲವನ್ನು
ಸರಕಿನಂತೆ ನೋಡಿದ

ವ್ಯಾಪಾರವೆನ್ನುವುದು ಅವನಿಗೆ
ಜೂಜಿನಂತೆ ಅಂಟಿತು
ಬದುಕನ್ನೇ ಒತ್ತೆ ಇಟ್ಟು
ಆಡಿದ

ಹಸಿವನ್ನು ಹೂಡಿ
ದಿನಸಿ ಅಂಗಡಿ ತೆರೆದ
ಗೆದ್ದ
ಗೆಲುವನ್ನು ಜವಳಿ ಅಂಗಡಿಗೆ
ಮಾರಿ ಸೋತ…
ಸಾಲಕ್ಕೆ ಹಳೆಯ
ಹೆಂಚನ್ನೇ ಮಾರಿದ
ಸೂರುವ ಸೂರನ್ನು
ದಿಟ್ಟಿಸುತ್ತಾ ಹೆಂಚಿನ ವ್ಯಾಪಾರಕ್ಕಿಳಿದ
ಗಂಜಿಗೆ ನೆಂಜಿಕೊಳ್ಳುವುದಕ್ಕೆಂದು
ತಂದ ಸಿಗಡಿಯ ರುಚಿ ಹಿಡಿದು
ಕಡಲ ತಡಿಗೆ ಹೋದ
ಮೀನಿನ ವ್ಯಾಪಾರಕ್ಕಿಳಿದ

ದುಂದುಗಾರ ಅಪ್ಪ
ಸವಕಲು ಮಾತುಗಳನ್ನೇ
ನಾಣ್ಯಗಳಂತೆ ಚಲಾವಣೆಗೆ ಬಿಟ್ಟ
ಅಮ್ಮನ ಮೌನದ ತಿಜೋರಿಯನ್ನೇ
ದೋಚಿದ

ಜೂಜಿನ ನಿಯಮವ ಮರೆತು
ನಂಬಬಾರದವರನ್ನೆಲ್ಲ ನಂಬಿದ
ಸೋಲಿನ ರುಚಿಯನ್ನು ಹಿಡಿದ
ಸೋಲಿಗಾಗಿಯೇ ಆಡ ತೊಡಗಿದ…

ಕೊನೆಗೆ ಎಲ್ಲ ಬಿಟ್ಟು
ಗುಜರಿ ಅಂಗಡಿ ಇಟ್ಟ
ಹರಿದ ಚಪ್ಪಲಿ, ತುಕ್ಕು ಹಿಡಿದ ಡಬ್ಬ
ಮುರಿದ ಬಕೀಟುಗಳ ರಾಶಿಯ
ನಡುವೆ ಆ
ರಾಮ ಕುರ್ಚಿಗೆ ಒರಗಿದ
ಅವನ ಮೌನದ ತಿಜೋರಿ ತುಂಬಾ
ಸಾಲ ಪತ್ರಗಳು
ಅಂಗಡಿಯ ಬಾಗಿಲಲ್ಲಿ
ಕಾಲ
ವಸೂಲಿಗೆಂದು ಕುಕ್ಕರಗಾಲಿನಲ್ಲಿ ಕೂತಿದ್ದಾನೆ

ನಾನು ಅವನ ಮಗ
ಅವನ ಮೌನದ ಮನೆಯ
ಹಿತ್ತಲಲ್ಲಿ ನಿಂತ
ಗುಜರಿ ಆಯುವ ಹುಡುಗ

‍ಲೇಖಕರು avadhi

21 October, 2009

3 Comments

  1. prakash hegde

    ವಾಹ್….!
    ಸುಂದರ ಸಾಲುಗಳು….!
    ಬಷೀರ್…ನಾನು.. ನಿಮ್ಮ ಅಭಿಮಾನಿಯಾಗಿಬಿಟ್ಟೆ…
    ನಿಮ್ಮ ಸಾಲುಗಳ ಅರ್ಥ…
    ನೇರವಂತಿಕೆ ಬಹಳ ಇಷ್ಟವಾಯಿತು….
    ಅಭಿನಂದನೆಗಳು…

  2. ಚಂದಿನ

    ಅದ್ಭುತ ಸಾಲುಗಳು…
    ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ.
    ಆಳದ ಅನುಭಾವದಿಂದ ಹೊಮ್ಮಿದ ಕಾವ್ಯದಂತೆ ಗೋಚಿರಿಸುತ್ತದೆ!
    ಅಭಿನಂದನೆಗಳು ಬಷೀರ್
    ಪ್ರೀತಿಯಿಂದ,
    ಚಂದಿನ

  3. Swarnalatha

    So touching. A pictue of stupidity, ego, miserable life. These few lines are telling too many things. Wish many more such works will come out of your pen.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading