ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ನಾನೇನು ಕೂಸೆನೆ ದೊಡ್ಡವನಾಗಿನಿ..

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.

ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ‌ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…

ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ‌ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ‌ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ‌ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ…

11

ಮನೆಗೆ ಬರೊವಷ್ಟರಲ್ಲಿ ಮನೆ ತುಂಬಿತ್ತು, ಹುಬ್ಬಳ್ಳಿಯಿಂದ ಅತ್ತೆ ಮಾಮಾ, ಅಶು ರಾಜು ಎಲ್ಲಾ ಬಂದಿದ್ದರು. ಅವರೆಲ್ಲರೂ ಬಂದರೆ ನನಗೆ ಖುಷಿಯೋ ಖುಷಿ. ನನ್ನನ್ನ ಬಹಳ ಮುದ್ದು ಮಾಡತಿದ್ರು. ಹಿಡುಕೊಂಡು ಪಪ್ಪಿ ಕೊಡತಿದ್ರು. ನನಗೂ ಅವರಿಗೂ ವಯಸ್ಸಿನ ಅಂತರ ದೊಡ್ಡದಾದ್ರೂ ನಾನು ಈಗ ಪಾಪು ಅಲ್ಲದಿದ್ದರೂ ನನ್ನನ್ನು ‘ಪಾಪು’ ಎಂದೆ ಸಂಬೋಧಿಸುತ್ತಿದ್ದರು, ನನ್ನ ಮಾತುಗಳನ್ನು ಕೇಳಲು ಇಷ್ಟಪಡುತ್ತಿದ್ದರು. ಗೋವಿಂದರಾಜು ಮಾತ್ರ ನನ್ನ ಅಂಟಿಕೊ೦ಡ ಇರಾವ. ಅಮ್ಮ ಬೈತಿದ್ರು ‘ನೀನು ಅವನ ಸ್ವಾಟಿ ಹಿಂಡಬೇಡ’ ಅಂತ ಆದರೆ ನನಗೆ ಹಿಂಡಿಸಿಕೊಳ್ಳೊದು ಇಷ್ಟ.

ರಾಜು ಮಾಮ ನನಗೆ ಕಲಿಸದ ಆಟಗಳೆ ಇಲ್ಲ. ಗಾಳಿಪಟ ಮಾಡೋದ್ರದಿಂದ ಹಿಡಿದು ಗೋಲಿ, ಗಿಲ್ಲಿದಾಂಡು ಎಲ್ಲಾ ಕಲಿಸಿದ್ದ. ಸೈಕಲ್ ಹೊಡೆಯೋದು.. ಜೊತೆಗೆ ಕ್ರಿಕೆಟ್ ಶಟಲ್ ಕಾಕ್ ಎಲ್ಲವೂ ಕಲಿಸಿದ್ದ. ಕಳೆದ ಸಾರಿ ನಾನು ತೆಗದುಕೊಂಡ ಹೊಸ ಸೈಕಲ್ನಲ್ಲಿ ನನ್ನನ್ನು ಹಿಂದೆ ಕೂಡ್ರಸಿಕೊಂಡು ಹೊಡೆಯುತ್ತಿದ್ದಾಗ ನನ್ನ ಕಾಲು ಹಿಂದಿನ ಗಾಲಿಯೊಳಗೆ ಸಿಕ್ಕು ಬಿದ್ದೆ ಬಿಟ್ಟು ಒಂದು ಹತ್ತ ಫೀಟು ಹೋಗಿತ್ತು. ಅದು ಹೇಗಾಯ್ತೊ ಗೊತ್ತೆ ಇಲ್ಲ. ಕಾಲು ರಿಮ್‌ನೊಳಗೆ ಹೋಗಿ ಅದರ ಸೆಳೆತಕ್ಕೆ ಕೆಳಗೆಬಿದ್ದಿದ್ದೆ. ಪುಣ್ಯಕ್ಕೆ ಏನೂ ಆಗಿರಲಿಲ್ಲ ಆದರೆ ಅವನು ಪೈಡಲ್ ತುಳಿದ್ದರಿಂದ ರಿಮ್‌ಗಳೆ ಮುರಿದು ಹೋಗಿದ್ದವು. ನನಗೆ ನೋವಾಗಿ ಅಳು ಬಂದರೂ ಚಾಡಿ ಹೇಳಬಾರದೆಂದು ಸುಮ್ಮನಿದ್ದೆ.. ಸಣ್ಣವನಿದ್ದ ನನಗೆ ಮಾಡಿದ್ದನ್ನು ನೋಡಿ ಅಪ್ಪ ಬೈತಾರೆಂದು ಹೆದರಿದ್ದ. ಮನೆಗೆ ಹೋದ ಮೇಲೆ ಸೈಕಲ್ ರಿಮ್ ಮುರದದ್ದು ನಾನು ಕುಂಟಿಗೊ೦ತ ಬಂದಿದ್ದು ನೋಡಿ ಏನು ಕೇಳಿದರೂ ನಾನು ಮಾತಾಡಲೆ ಇಲ್ಲ ಏನಾಗಿಲ್ಲ ಬಿಡಪ್ಪ ನೋಡು ಎಂದು ಸುಮ್ಮನಿರಿಸಿದ್ದೆ. ನಾನು ಬಚಾವು ಮಾಡಿದ್ದಕ್ಕಾಗಿ ನನ್ನ ಬಗ್ಗೆ ಎಲ್ಲಿಲ್ಲದ ಪ್ರೀತಿ. ಗಾಲಿ ರಿಮ್ ಮುರಿದದ್ದು ನೋಡಿ ಇಂದಿಗೂ ಅಪ್ಪನಲ್ಲಿ ಪ್ರಶ್ನೆಯಾಗಿಯೆ ಉಳಿದಿದೆ.

ಕಳೆದ ಸಾರಿ ಕೊರೊನಾ ಬಂದು ಇಲ್ಲೆ ಇದ್ದಾಗ ಎಲ್ಲರೂ ಕೂಡಿ ಮಸ್ಕಿ ಗುಡ್ಡದ ಚಾರಣ ಮಾಡಿದ್ದಿವಿ. ಸೇಮ್ ಫಿಲ್ಮನಲ್ಲಿ ಹೋಗತಾರಲ್ಲ ಮಕ್ಕಳು ಹಾಗೆ ನಾನು ಸಕತ್ ಎಂಜಾಯ್ ಮಾಡಿದ್ದೆ. ಬೆನ್ನಿಗೆ ಏರ್ ಬ್ಯಾಗು, ತಲೆಗೆ ಟೋಪಿ, ಕೈಯಲ್ಲಿ ಸ್ಟಿಕ್ಕು, ಹಗ್ಗ… ಏನು ಮಜಾ ಇತ್ತಂದ್ರಿ? ಬೆಳಿಗ್ಗೆ ಎದ್ದು ಉಪ್ಪಿಟ್ಟ ಸಿರಾನ್ ಮಾಡಿಸಿಕೊಂಡು ಸಪರೇಟ್ ಪ್ಯಾಕ್ ನಾಡಿಕೊಂಡು ಹೋಗಿದ್ವಿ.

ಗುಡ್ಡ ಹತ್ತೋದು. ಕಡಿದಾದ ಬೆಟ್ಟದಲ್ಲಿ ಹಗ್ಗ ಹಾಕಿ ಹತ್ತೋದು, ಕೆಳಗಿದ್ದವರನ್ನು ಜಗ್ಗಿಕೊಳ್ಳೊದು… ಏನು ಚಂದ.. ಅಲ್ಲಿಯ ನಾನಾ ತರಹ ಗಿಡಗಳು ಹೂಗಳು ಕಣ್ಣಿಗೆ ಹಬ್ಬ. ವಿಶೇಷವಾಗಿ ಕವಳಿ ಕಾಯಿ ಹಣ್ಣು, ಕಾರೆ ಹಣ್ಣು ತಿನ್ನಲು ಎಂತಹ ಸವಿ… ವಿಶೇಷವಾಗಿ ನಾವು ಹೋಗಿದ್ದು ಶಿಲಾಯುಗದ ಮಾನವನ ಜನವಸತಿ ಇದ್ದ ಸ್ಥಳಕ್ಕೆ. ಆ ಗುಡ್ಡ ಕಡಿದಾಗಿರುವುದರಿಂದ ಎಲ್ಲರೂ ಎಲ್ಲ ಕಡೆ ಸುತ್ತಾಡಿದರೂ ಅಲ್ಲಿ ಮಾತ್ರ ಭಯ ಪಡತಾರೆ. ಕುರಿಕಾಯೋರು ಮಾತ್ರ ಅಡ್ಡಾಡೋರು. ಅವರಿಗೆ ಇಡಿ ಗುಡ್ಡವೆ ಪರಿಚಯ. ಅಲ್ಲಿ ಸಿಕ್ಕ ಹಲವು ಮೊಟ್ಟೆಗಳ ಬಗ್ಗೆ ಮಾಹಿತಿ ನೀಡಿದವರೆ ಅವರು. ನಾವು ಆ ಬೆಟ್ಟ ಹತ್ತಿದ ಮೇಲೆ ಅಲ್ಲಿ ಶಿಲಾಯುಗದ ಮಾನವ ಚಿತ್ರಸಿದ ಅನೇಕ ಚಿತ್ರಗಳ್ನು ನೋಡಿದಿವಿ…ಹಾಗೆ ಅಲ್ಲಿರುವ ನಾನಾ ಧ್ವನಿ ಹೊರಡಿಸುವ ಕಲ್ಲುಗಳನ್ನು ಬಾರಿಸಿ ಸಂಭ್ರಮಿಸಿದ್ವಿ. ‘ಹಂಪಿಯಲ್ಲಿಯ ವಿಜಯ ವಿಠ್ಠಲನು ದೇವಸ್ಥಾನದಲ್ಲಿರುವ ವಿವಧ ವಾದ್ಯಗಳ ಧ್ವನಿಯನ್ನು ಹೊಮ್ಮಿಸುವ ಕಲ್ಲುಗಳು ಇವೆನಾ?’ ಎನ್ನುವ ಸಂಶಯವನ್ನು ರಾಜು ಹಾಕಿದ. “ನನಗೇನು ಗೊತ್ತು, ನಾನು ಸಣ್ಣವ, ಮುಂದೆ ಓದಿದ ಮೇಲೆ ಹೇಳತೀನಿ” ಎಂದಿದ್ದೆ..ಎಲ್ಲರೂ ಬಿದ್ದುಬಿದ್ದು ನಕ್ಕಿದ್ದರು. ಸಿಟಿಯಲ್ಲಿ ಓದುವ ಅಶು ರಾಜುಗೆ ಇಷ್ಟೆಲ್ಲ ನೋಡಿದಾಗ ಆದ ಖುಷಿ ಅಷ್ಟಿಷ್ಟಲ್ಲ. ಅವರಿಗಿಂತ ಚಿಕ್ಕವನಾದ ನಾನು ಅವರೊಟ್ಟಿಗೆ ಹತ್ತಿದ್ದು ಅವರಲ್ಲೂ ಉತ್ಸಾಹ ತಂದಿತ್ತು… ಅ೦ತಿಮ ತುದಿ ತಲುಪಿದಾಗ ಎವರೆಸ್ಟ ಏರಿದಷ್ಟೆ ಖುಷಿಯಾಗಿತ್ತು. ಜೊತೆಗೆ ‘ಓ…ಓ…ಓ…ಓ…ಓ..ಓ…’ ಎಂದು ಜೋರಾಗಿ ಕೂಗಿದ್ವಿ, ಚೀರಿದ್ವಿ. ಮೇಲಿನಿಂದ ಊರನ್ನು ನೋಡಿದಾಗ ಸಂಭ್ರಮಿಸಿದ್ವಿ.. ನಮ್ಮ ಮನೆಯನ್ನು ಹುಡಿಕಿದ್ವಿ..

ಎರಡನೆ ಬಾರಿ ಚಾರಣದಲ್ಲಿ ಅಶೋಕ ಶಾಸನದ ಹಿಂದಿ ಗುಡ್ಡಕ್ಕೆ ಹೋಗಿದ್ವಿ. ಅಶೋಕ ಶಿಲಾಶಾಸನ ಎಂದರೆ ಕಳಿಂಗ ರಾಜ ಅಶೋಕ ಯುದ್ಧದಿಂದ ಪರಿವರ್ತನ ಹೊಂದಿ ಬೌದ್ಧ ಧರ್ಮ ಸ್ವೀಕರಿಸಿ ಧರ್ಮ ಪ್ರಚಾಋ ಮಾಡಿಸಿದ ವ್ಯಕ್ತಿ. ಅವನು ಬುದ್ಧನ ವಿಚಾರಗಳನ್ನು ದೇಶಾದ್ಯಂತ ತಿಳಿಸಲು ತನ್ನ ಅನುಯಾಯಿಗಳನ್ನು ಕಳಿಸಿದನಂತೆ. ಅದರಲ್ಲಿ ಮಗ ಮಗಳು ಮಹೇಂದ್ರ ಮತ್ತು ಸಂಘಮಿತ್ರೆನೂ ಹೋದರಂತೆ. ಕೆಲರು ಅಶೋಕನು ಇಲ್ಲಿ ಬಂದುದಾಗಿ ಇನ್ನೂ ಕೆಲವರು ಅವರು ಮಕ್ಕಳು ಬಂದು ಬರೆಸಿದುದಾಗಿ ಹೇಳುತ್ತಾರೆ. ಏನೆ ಇರಲಿ ಎರಡು ಸಾವಿರ ವರ್ಷಗಳ ಹಿಂದೆ ದೊಡ್ಡದಾದ ಮಹಾಬಂಡೆಯ ಕೆಳಗಡೆಯ ಚಿಕ್ಕಬಂಡಿಯಲ್ಲಿ ಶಾಸನದಲ್ಲಿ. ‘ದೇವನಾಂಪ್ರಿಯ ಅಶೋಕಸ’ ಎನ್ನುವ ಸಾಲುಗಳಿವೆ. ಯಾವ ಶಾಸನಗಳಲ್ಲೂ ಸಿಗದ ಈ ಸಾಲುಗಳು ಇಲ್ಲಿರುವುದರಿಂದ ಹಾಗೂ ಈ ಶಾಸನದಿಂದಲೆ ಇಂತಹ ಶಾಸನಗಳೆಲ್ಲವು ಅಶೋಕ ಬರೆಸಿದ ಶಾಸನಗಳು ಎಂದು ಮಾಹಿತಿ ಸಿಕ್ಕದ್ದಕ್ಕಾಗಿ ನಮ್ಮೂರ ಈ ಶಾಸನ ಜಗತ್ಪ್ರಸಿದ್ಧಿ ಎಂದು ಪಿಕ್‌ನಿಕ್‌ಗೆ ಶಾಲೆಯಿಂದ ಬಂದಾಗ ಶಾಸನದ ಪರಿಚಯ ಮಾಡಿಸಿ ನಮ್ಮ ಸರ್ ಹೇಳಿದ್ರು.

ಬೇರೆ ಊರುಗಳಿಗೆ, ಟೂರಗೆ ಹೋದಾಗ ಅಲ್ಲಿಯ ಐತಿಹಾಸಿಕ ಸ್ಥಳಗಳು ಬದಲಾದಂತೆ ನಮ್ಮೂರಲ್ಲಿ ಏನೂ ಆಗಿಲ್ಲ. ನಮ್ಮಪ್ಪನೂ ಸಣ್ಣೊರಿದ್ದಾಗಿನಿಂದ ಹಿಂಗೆ ಇದೆ.. ಏನೇನೂ ಬದಲಾಗಿಲ್ಲ.. ಒಂದು ಮ್ಯೂಜಿಯಂ ಆಗಿಲ್ಲ. ಹಾಗಾಗಿ ಇಲ್ಲಿ ಸಿಕ್ಕ ಅನೇಕ ಅವಶೇಷಗಳು ಹೈದರಾಬಾದಿನ ಸಾಲಾರಜಂಗ ಮ್ಯೂಜಿಯಂ, ಬೀದರ್ ಗುಲಬರ್ಗಾ ಮ್ಯೂಜಿಯಂನಲ್ಲಿ ಇವೆ ಎಂದು ಹೇಳತಿರತಾರೆ. ಅಂದು ಅದನ್ನು ನೋಡಲು ಬಂದಿದ್ದ ಕೆಲವರು ‘ಇದನ್ನ ಓದಿ ಬಿಟ್ರ ಬಂಗಾರ ಸಿಗುತ್ತಂತ..ಮೋಡಿ ಭಾಷೆಯಲ್ಲಿ ಬರದರಂತ… ಅದಕ ಇಷ್ಟು ವರ್ಷ ಆದ್ರೂ ಅಳದಿಲ್ಲ’ ಎಂದು ಒಬ್ಬಾಕಿ ಅಂದರೆ, ಮತ್ತೊಬ್ಬಾಕಿ ‘ಓದಿ ರಕ್ತ ಕಾರಿಕೊಂಡು ಸತ್ತ ಬಿಟ್ಟನಂತಬೆ’ ಎಂದು ಹೇಳತ್ತಿದ್ದಳು. ಆಗ ಜೊತೆಗಿದ್ದ ಅಕ್ಕ “ಅಲ್ಲಮ್ಮ ಹಾಗೆಲ್ಲ ತಪ್ಪು ಹೇಳಬಾರದು ಇದು ಪ್ರಾಕೃತ ಭಾಷೆಗ ಅದ, ಬ್ರಾಹ್ಮಿ ಲಿಪಿಯಾಗ ಅಕ್ಷರ ಅವ.. ಇದನ್ನ ಓದ್ಯಾರ.. ಯಾರಿಗೂ ಏನು ಸಿಕ್ಕಿಲ್ಲ ಯಾರೂ ಸತ್ತಿಲ್ಲ” ಎಂದು ಹೇಳಿದಾಗ “ಯವ್ವಾ, ನೀನು ಏನು ಮಾತಾಡತಿ ಅರ್ಥವಾಗಲದಬೆ” ಎಂದು “ನಡ್ರೆ, ಆಹುಡಗರ ಜೊತಿ ಏನದ, ಗಡಾನ ಊರು ಮುಟಿಗೆಣಮ, ಬಾರಬೆ, ಪೋಲಿಸುನೋರು ಕೈಯಾಗ ಸಿಕ್ರ ಫಜಿತಿ ಎಬ್ಬಸ್ತಾರ” ಎಂದು ಮೆಲ್ಲಗ ಜಾಗ ಖಾಲಿ ಮಾಡಿದ್ರು. ಅವರ ಮಾತು, ಭಾಷೆ ಕೇಳಿ ರಾಜು “ಎಷ್ಟು ಚಂದಲ್ಲ.. ಅವರ ಮಾತು” ಎಂದಿದ್ದ.

ಅಶೋಕನ ಶಾಸನವನ್ನು ಮತ್ತೆ ನೋಡಿಕೊಂಡು, ಕನ್ನಡದಲ್ಲಿ ಬರೆದ್ದನ್ನು ಓದಿಕೊಂಡು ಅದರ ಹಿಂಬದಿಯ ಗುಡ್ಡದಲ್ಲಿ ಬೆಳೆದಿದ್ದ ಪಾಪಸಕಳ್ಳಿ ಹಣ್ಣುಗಳನ್ನು ಮುಳ್ಳಿನಿಂದ ಬಡಿದುಕೊಂಡು ತಿಂದ್ವಿ. ಪಾಪಸ್ ಕಳ್ಳಿಯ ಹಣ್ಣಿನ ರುಚಿ ಬಲು ಚಂದ. ಮುಳ್ಳು ತೆಗೆಯೊದಷ್ಟೆ ಕೆಲಸ. ಹುಳಿ ಸಿಹಿಯಾಗಿರುವ ಆ ಹಣ್ಣು ಕಿಡ್ನಿಯಲ್ಲಿಯ ಕಲ್ಲನ್ನು ಕರಗಿಸುತ್ತದೆ, ರಕ್ತ ಶುದ್ಧಿ ಮಾಡುತ್ತದೆ ಅತಿದ್ರು. ಅದನ್ನು ತಿಂದಾದ ಮೇಲೆ ಬಾಯಲ್ಲ ಗುಲಾಬಿ ಕಲರ್ ಆಗೋದು.

ಗುಡ್ಡದ ಹಿಂದೆ ಹೋದಾಗ ಅದೆಂತಹ ಇಕ್ಕಟ್ಟಾದ ಸ್ಥಳ. ವಾರದ ಹಿಂದೆ ಹೋಗಿದ್ದಕ್ಕಿಂತಲೂ ಬಲು ಕಡಿದಾಗಿತ್ತು…ಜಾರಿದ್ರೆ ಸೀದಾ ಕೆಳಗ ಬೀಳುವಂತಿತ್ತು. ಮುಳ್ಳು ಚುಚ್ಚಿ ಜಾರುವ ಸಂದರ್ಭವು ಬಂದಿತ್ತು ಕೂಡಾ. ಆಗ ರಾಜು ಮಾಮಾ ಎತ್ತಕೊಂಡು ಕರಕೊಂಡು ಹೋಗಿದ್ದ. ಹಾಗೆ ಹೋಗುವಾಗ ನವಿಲನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ನರಿಯೋದು ನಮ್ಮನ್ನ ನೋಡಿ ನಮ್ಮತ್ತ ಬರುತ್ತಿರಬೇಕಾದ್ರೆ ರಾಜುನ ಸೂಚನೆಯಂತೆ ಕೂಗು ಹಾಕಿದ್ವಿ… ಕೂಡಲೆ ರಾಜು ಪುರಲ ಕಟ್ಟಿಗೆಗಳಿಗೆ ಬೆಂಕಿ ಹಚ್ಚಿ ಹಿಡದುಕೊಂಡು ಓಡಿಸಿದ್ದ. ನಮ್ಮ ಕೇಕೆ ಆಟಕ್ಕೆ, ಕೈಯಲ್ಲಿ ಹಿಡಿದಿದ್ದ ಬೆಂಕಿಗೆ ಓಟ ಕಿತ್ತಿತ್ತು.

ನಾನು ಶಾಲೆಯಿಂದ ಬಂದುದ್ದು ನೋಡಿ “ಸಮು ಬಂದ್ಯಾ?” ಎಂದು ಎತ್ತಿಕೊಂಡು ಮುದ್ದಾಡಿದಳು ಅಶು.
“ನಾನೇನು ಕೂಸೆನೆ ದೊಡ್ಡವನಾಗಿನಿ..ಛೀ ಹಾಗೆಲ್ಲ ಮಾಡಬ್ಯಾಡ” ಎಂದು ಬಿಡಿಸಿಕೊಂಡೆ.
“ನೀನು ಎಷ್ಟೆ ದೊಡ್ಡವನಾದರೂ ಸಣ್ಣ ಪಾಪು” ಎಂದಳು.
“ಲೇ ಸಮ್ಮೆ..ಈಗ ಬಂದೆನೋ?” ಎಂದು” “ಎಂದ ರಾಜು ಬಂದು ಸ್ವಾಟಿ ಹಿಂಡಿದ… “ಮಾಮಾ ನಾನು ದೊಡ್ಡವನಾಗಿನಿ ಬಿಡು ಇದು ಹಿಡಿಸೊಲ್ಲ” ಎಂದೆ.

‘ಮಾಮಾ’ ಎಂದು ಸಂಬೋದಿಸಿದ್ದು ನೋಡಿ ಅಚ್ಚರಿಪಟ್ಟ ರಾಜ.. “ಏನೊ ಇಷ್ಟು ದಿನ ನನ್ನ ಹೆಸರು ಹಿಡಿದು ಕರಿತಿದ್ದಿ ಇಷ್ಟೆಲ್ಲ ಬದಲಾವಣೆ ಆಗಿಬಿಟ್ಟಿರುವೆ..ಏನಾಯ್ತೊ ?”
“ಹೌದಲ್ಲ ಮೊದಲೆಲ್ಲ ಪೆದ್ದುಪೆದ್ದಾಗಿ ಮಾತಾಡತಿದ್ದೆ…ಏನಾಗಿದೆಲೆ ಸಮ್ಮೆ” ಎಂದಳು ಅಶು.

“ಹೌದಲ್ಲ..ನನ್ನ ಮಾತೆ ಬದಲಾಗಿವೆ. ನಾನು ಎಷ್ಟು ಸುಧಾರಿಸಿದ ಹಾಗೆ ಕಾಣುತ್ತಿರುವೆನಲ್ಲ” ಎಂದು ನನ್ನೊಳಗೆ ಖುಷಿ ಪಟ್ಟೆ ಜೊತೆಗೆ ನನ್ನ ಬಲಾವಣೆಗೂ ಸೊಳ್ಳೆನ ಕಾರಣವ ಅಂತ ಆಲೋಚಿಸಿದೆ. ಇವತ್ತೆಲ್ಲ ಅದರ ಜೊತೆಗೆ ಮಾತಾಡಬೇಕು ಅಂದ್ರ ಇವರು ನನ್ನ ಬಿಡಲಾರರೂ ಎಂದು ಕೊಂಡು ಏನೂ ಹೊಳೆಯದೆ ಅವರೊಂದಿಗೆ ಬೆರೆತೆ.

ಅಶು “ಅಮ್ಮ.. ನೋಡಿದ್ಯಾ ಸಮು ಬಹಳ ಚೆಂಜ್ ಆಗ್ಯಾನ, ಹತ್ತರನ ಬರವಲ್ಲ” ಅಂತ ಅಮ್ಮಗ ದೂರ ಕೊಡತಿದ್ದಳು.
“ಹೌದು ಅತ್ತಿ… ಡಿಸೆಂಟ್ ಆಗ್ಯಾನ” ಅಂತ ರಾಜು ಖುಷಿ ಪಟ್ಟ.
ಅತ್ತಿನೂ ತಿನ್ನಲೂ ಏನೇನೊ ಕೊಟ್ಟು ಮುದ್ದು ಮಾಡುದ್ಲು. ಏನೇ ಪ್ರೀತಿ ಮಾಡಿದ್ರೂ ನನ್ನ ತಲೆಯಲ್ಲಿ ಸೊಳ್ಳೆ ಜೊತೆ ಮಾತಾಡೋದೆ ಕೊರಿತಿತ್ತು. ನಿಂತ್ರು ಕೂತ್ರು ಸಮಾಧನಾನ ಇಲ್ಲ. ಅದರದೆ ಧ್ಯಾನ… ಏನು ಮಾಡತಿದೆ, ಹೇಗಿದೆ ಅಂತ ಯೋಚನೆ ಮಾತಾಡಬೇಕೆಂದ್ರ ಒಂದಿಲ್ಲ ಒಂದು ಅಡ್ಡ ಬರೋದು..

ರಾಜು ಮಾಮಾ ದೊಡ್ಡವನಿದ್ದರೂ ನನ್ನ ಜೊತೆಗೆ ಏನೆನೊ ಹೇಳತಿದ್ದ. ಈಗ ಮೆಡಿಕಲ್ ಓದುತ್ತಿರುವುದರಿಂದ ನನಗೆ ಸೊಳ್ಳೆ ಬಗ್ಗೆ ಅವನೊಂದಿಗೆ ಮಾತಾಡ ಬೇಕೆನಿಸಿತು, ನನಗಿಂತ ಹತ್ತು ವರ್ಷ ದೊಡ್ಡವನಿದ್ದರೂ ಮೊದಲೆಲ್ಲ ಮಾಮ ಅಂತಿರಲಿಲ್ಲ. ಅತ್ತಿ, ಮಾಮಾ “ಹೇ ಹೆಸರಿಟ್ಟು ಕರಿಬಾರದು..ಗೋವಿಂದರಾಜು ಮಾಮಾ ಅಂತ ಬೇಕಾದ್ರೆ ಕರಿ” ಅಂದ್ರು ನಾನು ‘ರಾಜು ರಾಜು’ ಅಂತ ಅಂತಿರತಿದ್ದೆ.
ಊಟ ಆದ ಮೇಲೆ ರಾಜುನ ಪಕ್ಕ ಮಲಗಿದ್ದಾಗ “ಮಾಮ, ನೀನು ಹೆಣ ಕೊಯ್ತಿಯಂತಲ” ಎಂದೆ.

“ಹಾ೦…ದೇಹದ ಬಗ್ಗೆ ತಿಳಿದುಕೊಳ್ಳಬೇಕಾದ್ರ ಕೊಯ್ಯಲೇಬೇಕು, ಡಾಕ್ಟರ್ ಆಗೋದು ಅಂದ್ರೇ ಅಂಜಿಕೊ೦ಡ್ರ ಆಗುತ್ತಾ”
“ಮತ್ತೆ ದೆವ್ವ”
“ಮನುಷ್ಯ ಸತ್ತ ಮೇಲೆ ಮುಗಿತು… ಅಲ್ಲೆ ಏನೂ ಇರಲ್ಲ”
“ಸತ್ತ ಮೇಲೆ ದೆವ್ವ ಆಗತಾರ.. ಹಾಗೆ ಹೀಗೆ ಅಂತಾರ.. ಅವಗೆಲ್ಲ ದೆವ್ವದ ಪಿಕ್ಚುರು ನೋಡತಿದ್ವಿ”
“ಮನೋರಂಜನೆಗಾಗಿ ಫಿಲ್ಮ ಮಾಡತಾರೊ…. ಅವರಿಗೆ ದುಡ್ಡ ಬರುತ್ತದ”
“ನಮಗ..”
“ಅದ.. ಭಯ.. ತಲೆಯಲ್ಲಿ ನೂರಂಟು ಯೋಚನೆ.. ರಾತ್ರಿ ನೀರು ಕುಡಿಯಾಕ ಹೋಗಬೇಕಾದ್ರೂ ಅಂಜಿಕೆ ಬರತ್ತಲ್ಲ” ಎಂದು ನಕ್ಕು “ಹುಚ್ಚ, ಅದೆಲ್ಲ ಬಿಡು ಏನೊ ಕೇಳಬೇಕು ಅಂತ ಮಾಡಿ ನೇರವಾಗಿ ಕೇಳು
“ಈ ಪ್ರಾಣಿ ಪಕ್ಷಿ ಕ್ರೀಮಿ ಕೀಟಗಳು ಮಾತಾಡತಾವಾ?”
“ಎಸ್ ಮಾತಾಡತಾವೆ”
ನನಗ ಆಶ್ಚರ್ಯ ಆಯಿತು. “ಹೌದಾ ಮಾಮಾ?”
“ಮತ್ತೆ..ಎಲ್ಲಕ್ಕೂ ಅವರದೆ ಆದ ಭಾಷೆ ಇದೆ. ಒಂದು ನಾಯಿ ‘ಬೌಬೌ’ ಎಂದ ಕೂಡಲೆ ಎಲ್ಲವೂ ಬೊಗಳ್ವಾ, ಕಾಗೆ ‘ಕಾ ಕಾ’ ಅಂದ್ರೆ ಎಲ್ಲಾ ಕಾಗೆಗಳು ಬರಲ್ವ? ಅದು ಅವರ ಭಾಷೆ”
“ಅದಲ್ಲ ಮಾಮ ನಮ್ಮ ಹಾಗೆ ಮಾತಾಡತಾವ”
“ಅದ್ಹೇಗೆ ಸಾಧ್ಯ?”
“ನಿನಗ ಸೊಳ್ಳೆಗಳ ಬಗ್ಗೆ ಗೊತ್ತಾ?”
“ಆ ದರಿದ್ರ ಸೊಳ್ಳೆಗಳ ಬಗ್ಗೆ ಯಾಕ ಕೇಳಿತಿರುವೆ”
“ಇಲ್ಲ ಮಾಮಾ ಹೇಳು”
“ಅವು ಮನುಷ್ಯರಿಗೆ ಪೀಡೆಗಳಪ. ಗಂಡು ಸೊಳ್ಳೆ ಒಂದು ರೀತಿ ಓಕೆ. ಕಾಟ ಕೊಡಂಗಿಲ್ಲ ಆದರೆ ಹೆಣ್ಣು ಸೊಳ್ಳೆ ಮೋಸ್ಟ ಡೆಂಜರಸ್… ಗಂಡು ಸೊಳ್ಳೆಗೆ ಊಟಕ್ಕೆ ಮಕರಂದ, ಗಿಡದ ರಸ ಸಾಕಾದ್ರೆ ಇವಕ್ಕ ಮನುಷ್ಯರ ರಕ್ತನ ಬೇಕು”
“ಎಸ್… ಎಸ್.. ಕರೆಕ್ಟ್ ಕರೆಕ್ಟ್ ಅದು ಹೇಳಿತಿತ್ತು..ಪಕ್ಕಾ ಆಯ್ತು.. ಹೆಣ್ಣು ಸೊಳ್ಳೆ ಮರಿ ಇಡೊ ಸಮಯದಲ್ಲಿ ಮಾತ್ರ ಪ್ರೋಟಿನ್‌ಗಾಗಿ ನಮ್ಮ ರಕ್ತ ಕುಡಿಯುತ್ತದೆ ಅಂತ”
“ನಿನಗ್ಯಾರು ಹೇಳಿದ್ರು?
“ಸೊಳ್ಳೆ?”
“ಸೊಳ್ಳೆನಾ….! ಅದು ಹೇಗೆ ಹೇಳತ್ತೊ.ನನ್ನ ಹತ್ರ ತಮಾಷೆನ”
ನಗುತ್ತಾ “ಇರಲಿ ಬಿಡು ಮಾಮ ಮುಂದೆ ಹೇಳು” ಎಂದೆ.
“ಅದೆ ಆ ಹೆಣ್ಣು ಸೊಳ್ಳೆಗಳಲ್ಲಿ ಅನಾಫೆಲಿಸ್, ಏಡಿಸ್. ಕ್ಯೂಲೆಸ್.. ಡೆಂಜರ್ ಇವು. ಹೆಣ್ಣು ಅನಾಫೆಲಿಸ್ ಸೊಳ್ಳೆ ಮಲೇರಿಯಾವನ್ನ, ಏಡಿಸ್ ಇದು ಡೆಂಗಿ, ಚಿಕನ್ನ ಗುನ್ಯಾವನ್ನ, ಕ್ಯೂಲೆಕ್ಸ ಮೆದುಳು ಜ್ವರ ಆನೆಕಾಲು ರೋಗವನ್ನ ತರುತ್ತದೆ. ಒಂದು ಹೆಣ್ಣು ೫೦೦ಮೊಟ್ಟೆ ಇಡುತ್ತೆ ಗೊತ್ತಾ. ನೀರು ಕಂಡ್ರ ಮುಗಿತು.. ಅದಕ್ಕ ಸ್ವರ್ಗ ಸಿಕ್ಕಂಗ..ನೀರು ನಿಲ್ಲಿಸಬೇಡಿ ಅಂತ ಅದಕ್ಕೆ ಹೇಳೊದು”
“ಮಾಮ ಅದು ಕಚ್ಚಿದ್ರ ಸೂಜಿ ಮಾಡದಂಗ ಆಗುತ್ತಲ್ಲ ಹ್ಯಾಂಗ”

“ಹೆಣ್ಣು ಸೊಳ್ಳೆಯಲ್ಲಿ ಮಾತ್ರ ರಕ್ತ ಹೀರಲು ಬಾಯಿಯಲ್ಲಿ ಎರಡು ಚೂಪಾದ ಕೊಳುವೆಗಳಿವೆ. ಕಚ್ಚಿದಾಗ ಎರಡು ಚರ್ಮದೊಳಗೆ ಇಳಿತಾವ. ರಕ್ತ ಹೆಪ್ಪುಹಟ್ಟದಂತೆ ಪರಿಚಲನೆಯಾಗದಿರಲು ಸ್ವಲ್ಪ ನೋವನ್ನು ನಿವಾರಿಸಿ ಕಚ್ಚಿದ ಅನುಭವ ಮರೆಸತಾವ. ಇನ್ನೊಂದು ಕೊಳುವೆ ರಕ್ತವನ್ನು ಹೀರಲು ಸಹಾಯ ಮಾಡುತದ, ಮನಿಗೆ ಬರುವ ಅಪ್ಪಣ್ಣ ಡಾಕ್ಟುç ನಿನಗರ ಇಲ್ಲ ಅಜ್ಜಿಗರ ಸೂಜಿ ಚುಚ್ಚಬೇಕಾದ್ರ..ಎಲ್ಲಾವನ್ನು ಸೀರಂಜಿನಲ್ಲಿ ಏರಸಿದ ಮೇಲೆ ನೋವುಮಟು ಮಾಡುವ ಇಂಜೆಕ್ಷನ್ ಗೆ ಸೇರಸ್ತಾರಲ್ಲ ಜೊಯಾಕಿನ್ ಎನ್ನುವ ಅರವಳಿಕೆ ಮದ್ದು ಅದು ಚರ್ಮದಾಗ ಇಳಿಯೋತನ ಗೊತ್ತಾಗೋದೆ ಇಲ್ಲ”

“ಹೌದಾ…ಭಾರಿ ಅವಲ ಅದರ ಕೊಂಡಿ… ನೋಡೋಕೆ ಕಾಣೊಲ್ಲ.. ಮಾಮಾ ಸೊಳ್ಳೆಗಳು ಎಲ್ಲರಿಗೂ ಕಚ್ಚೊದಿಲ್ಲ ಯಾಕೆ?” ಎಂದೆ.
“ಕಾರ್ಬನ್ ಡೈ ಆಕ್ಸೈಡ ಜಾಸ್ತಿ ಬಿಡೋರನ್ನು ಹುಡುಕಿಕೊಂಡು ಹೋಗುತ್ತವೆ. ಯಾರು ಹೆಚ್ಚಾಗಿ ಮೆಟಾಬೋಲಿಕ್ ರೇಟ್ ಅಂದರೆ ಚಯಾಪಚನ ಕ್ರಿಯೆಯನ್ನು ಜಾಸ್ತಿ ಹೊಂದಿವರ ಮೇಲೆ ಬಹಳ ಪ್ರೀತಿ. ಅಲ್ಲದೆ ಬೆವರಿನ ಮೂಲಕ ಲ್ಯಾಕ್ಟಿಕ್ ಆಸಿಡ್ ಬಿಡೋರನ್ನು, ಗಾಢವಾದ ಬಣ್ಣದ ಬಟ್ಟೆ ಹಾಕಿಕೊಂಡವರಿಗೆ, ದೇಹದ ಶಾಖ ಹೆಚ್ಚಾಗಿ ಇರುವವರಿಗೆ ಬೇಗ ಅಟ್ಯಾಕ ಮಾಡಿ ಸಕ್ ಮಾಡುತ್ತದೆ. ಕಪ್ಪು ಬಣ್ಣ ಅವುಗಳಿಗೆ ಫೆವರೆಟ್, ಇನ್ನೂ ಮಧ್ಯಪಾನ ಮಾಡುವವರಿಗೆ, ಗರ್ಭಧರಿಸಿದ ಹೆಂಗಸರನ್ನ ಬಹಳ ಪ್ರೀತಿ ಮಾಡತಾವೆ. ೧೦೦ಅಡಿ ದೂರದಿಂದನೆ ಪ್ರಾಣಿಗಳ ಇರುವಿಕೆಯನ್ನು ಗ್ರಹಿಸ್ತಾವ”
“ಅಂದರೆ ಕುಡಿದವರಿಗೆ ಎಚ್ಚರ ಇರೊಲ್ಲ ಅಂತ, ಅಮ್ಮ ಆಗೋರಿಗೆ ಚಲೊ ಚಲೊ ತಿಂಡಿ ತಿಂದಿರತಾರ ತಮ್ಮ ಮರಿಗಳಿಗೂ ಸಿಗಲಿ ಅಂತಾನ”
“ನೀನು ಭಾರಿ ತಲಿ ಓಡಿಸ್ತಿ ಬಿಡು, ನಿಜ ಇರಬಹುದು ಚೆನ್ನಾಗಿ ಉಂಡಿರತಾರೆ ಎಂದು ಕೊಂಡೊ ಸತ್ವ ತಮ್ಮ ಮಕ್ಕಳಿಗೂ ಬರೆಲೆಂದು ಕುಡಿತಾವೆನೊ.”
“ಮತ್ತೆ”
“ಮತ್ತೇನು ಕತೆ ಹೇಳಲಾ”
“ಇಲ್ಲ ಮಾಮಾ ಬಹಳ ಇಂಟರೆಸ್ಟಿ೦ಗ ಆಗಿದೆ. ಹೇಳು ಸೋಳ್ಳೆ ಬಗ್ಗೆನೆ”
“ಇನ್ನೊಂದು ವಿಷಯ ಗೊತ್ತಾ?”
“ಏನು?”
“ನಿನಗೆ ರಕ್ತದ ಗುಂಪುಗಳು ಗೊತ್ತಾ?”
“ಹಾಂ ಗೊತ್ತು… ಬಂದಿವೆ. ಎ.ಬಿ.ಎಬಿ.ಒ”
“ಹಾಂ ಅದರಲ್ಲಿ ‘ಓ’ ಗುಂಪಿನ ರಕ್ತದವರಿಗೆ ಸೊಳ್ಳೆ ಬಹು ಪ್ರೀತಿ. ‘ಎ’ ರಕ್ತದ ಗುಂಪಿನವರಿಗೆ ಗು೦ಪಿನವರಿಗೆ ಕಚ್ಚೋದು ವಿರಳ.. ‘ಬಿ, ಎಬಿ’ ಸೇಫ್ ಜೋನ್”
“ಅಮ್ಮಾ! ಅದಕ್ಕೇನು ನನಗೆ ಜಗ್ಗಿ ಕಡಿಯೋದು ಅಕ್ಕನಿಗೆ ಕಡಿಯೋದೆ ಇಲ್ಲ ಆಕಿದು ‘ಓ’ ಪಾಸಿಟಿವ್ ಅಲ”್ಲ
“ಹೌದು ನೋಡು” ಎಂದ.
“ಮಾಮಾ ಅದನ್ನ ಹೃದಯದ ರೋಗಕ್ಕ ಏನೊ ಬಳಸ್ತಾರಂತ ..ಹೌದಾ”
“ಎಲಾ … ಸಮು… ಮೊನ್ನೆ ತಾನೆ ನಮ್ಮ ಕ್ಲಾಸಿನ್ಯಾಗ ಹೇಳಿದ್ದು..ಚೋಟಿದ್ದಿ ನಿನಗೇಗೆ ಗೊತ್ತಾಯ್ತು?” ಎಂದ.
ಅಯ್ಯೊ ಜಾಸ್ತಿ ಮಾತಾಡಿ ಸಿಕ್ಕಬಿದ್ದ ಹಾಗಾಯ್ತಲ್ಲ ಎಂದು ಮನದಲ್ಲಿ ಅಂದುಕೊ೦ಡು “ಏನಿಲ್ಲ ಮಾಮಾ ಮೊನ್ನೆ ಟಿವಿಯಲ್ಲಿ ತೋರಸ್ತಿದ್ರು”
“ಹೌದು ಇಷ್ಟೆಲ್ಲ ಯಾಕ ಕೇಳತಿದ್ದಿ? ಆರು ತಿಂಗಳ ಹಿಂದ ಬಂದಾಗ ತಿಕ್ಕಲು ತರಹ ಮಾಡತಿದ್ದೆ ಈಗ ನೋಡಿದ್ರ ಎಷ್ಟು ಸುಧಾರಿಸಿಬಿಟ್ಟಿದಿ..ಸೊಳ್ಳೆ ಬಗ್ಗೆ ಯಾಕೆ ಇಂಟರೆಸ್ಟು ಬಂತು” ಎಂದ ಕುತೂಹಲದಿಂದ.
“ಇಲ್ಲ ಏನೊ ಕೇಳುವ ಹಾಗಾಯ್ತು ಕೇಳಿದೆ”
“ಇಲ್ಲ ಅಣ್ಣ, ಸಮು ಬಾಳ ಚೆಂಜ್ ಆಗ್ಯಾನ ಇವತ್ತು ಕಂಡೆ ಹಿಡಿತಿನಿ ಏನು ಅನ್ನೊದು” ಎಂದಳು ಅಲ್ಲಿವರೆಗೂ ನಮ್ಮ ಸಂಭಾಷಣೆನ ದೂರದಲ್ಲಿ ಕುಳಿತು ಕೇಳುತ್ತಿದ್ದ ಅಶು.
“ನೋಡು ನೀನು ಬಿ.ಎಸ್ಸಿಯಲ್ಲಿ ಸಿ.ಬಿ.ಝಡ್ ಓದುತಿ, ನಿನಗ ಏನೂ ಗೊತ್ತಿಲ್ಲ..ಇವನು ಎಷ್ಟೆಲ್ಲ ವಿಷಯ ತಿಳಕೊಂಡಾನ” ಎಂದು ರೇಗಿಸಿದ ಮಾಮ ಅಶುಗೆ.
“ಲೋ..ಗೋವ್ಯಾ, ಭಾಡೆ, ಬರಿ ನನ್ನನ್ನು ಗೋಳಾಡಿಸದಿದ್ದರೆ ನಿನಗ ಸಮಾಧಾನ ಇಲ್ಲನ.. ಅಮ್ಮ ನೋಡಮ್ಮ” ಎಂದು ಅಅಣ್ಣನ್ನು ಅಟ್ಟಸಿಕೊಂಡು ಹೋದಳು.
“ಇದೆ ಸಮಯ ಎಂದು ನನ್ನ ಸ್ಟಡಿ ಟೇಬಲ ಕಡೆ ಹೋಗಿ “ಸೊಳ್ಳೆ ಫ್ರೆಂಡು…ಸೊಳ್ಳೆ ಫ್ರೆಂಡು” ಎಂದು ಕೂಗಿದೊಡನೆ ಪಟಕ್ಕನೆ ಬಂದಿತು.
ಮೆಲ್ಲಕ ಮಾತಾಡೋ ಮಾರಾಯ. ನಿಮ್ಮ ಅಶುಗ ಗೊತ್ತಾದ್ರ ನನ್ನ ಜನ್ಮನ ಜಾಲಾಡಿ ಬಿಡತಾಳ”
“ನಿನಗೂ ಗೊತ್ತಾಯತಾ?”
“ಗೊತ್ತಾಗದೆ ಇರೋಕಾಗುತ್ತದನ, ಏನು ನಿಮ್ಮ ಡಾಕ್ಟರ್ ಮಾಮಾ ಎಲ್ಲ ನನ್ನ ಜಾತಕ ಹೇಳಿದನ”
“ಹೌದೋ ನೀನು ಹೇಳಿದೆಲ್ಲ ಕರೆಕ್ಟ. ನಿನ್ನಲ್ಲಿ ಇನ್ನು ಮಾತಾಡಬೇಕಿದೆ. ಅರ್ಧಕ್ಕರ್ಧ ನನ್ನ ಪ್ರಶ್ನೆಗಲಿಗೆಲ್ಲ ಮಾಮಾನ ಉತ್ತರ ಕೊಟ್ಟಾನ”
“ಆಯ್ತು ಆಯಿತು..ಇರಲಿ..ಇವತ್ತ ಮಾಡತೀನಿ ಅವನಿಗೆ”
“ಏನು ಮಾಡತಿ ಫ್ರೆಂಡು!”
“ಚಿಕನ್ ಗುನ್ಯಾ ಸೊಳ್ಳೆನ ಕಳಸ್ತೀನಿ ನಮ್ಮ ಬಗ್ಗೆ ಬೈಕೊಂಡನಲ್ಲ. ಕೈಕಾಲು ಮಡಚೋಕೆ ಬಂದಿರಬಾರದು”
“ಹೇ ಹಾಗೆ ಮಾಡಬೇಡ… ನನ್ನ ಪ್ರೀತಿಯ ಮಾಮಾ”
ನಿಧಾನವಾಗಿ ಕಿವಿಯ ಹತ್ತಿರ ಬಂದು “ಸರಿ.. ಸರಿ.. ಹೊರಡು ನಾಳೆ ಮಾತಾಡೋಣ ಹೇಗಾದ್ರೂ ಊರಿಗೆ ಹೋಗತಾರಲ್ಲ. ಅವಗಾ ಪೂರ್ಣ ನನ್ನ ಕತೆ ಮುಗಸ್ತಿನಿ”
“ಈಗ… ಹೇಳಿಬಿಡು.. ಅವರು ದೂರ ಹೋಗ್ಯಾರ.. ಅವರು ಜಗಳಕ್ಕ ನಿಂತರ ತಾಸಾದ್ರೂ ಮುಗಿಲ್ಲ”
“ಕಿವಿ ಹತ್ತಿರ ಬಂದು ಮಾತಾಡಿದ್ದು ನಿನಗ ಅರ್ಥ ಆಗಲಿಲ್ಲೇನು? ಈಗ ಅಲ್ಲೆ ಬಾಗಲದಾಗ ಸಿ.ಐ.ಡಿ ಆಫಿಸರ್ ನಿಂತಾರ”
“ಯಾರು…?”
“ಅದೆ ನಿಮ್ಮ ಆಶು ಟಿಶು.. ಬಹಳ ಡೆಂಜರ್ ಇದ್ದಾಳ ಆಕಿ.. ಲಾಯರ್.. ಪೋಲಿಸ್ ಆಗಿ ಬಿಟ್ರ ದೊಡ್ಡ ಸ್ಟಾರ್ ಆಗಿಬಿಡ್ತಾಳ”
“ಹಾಂಗತೀಯಾ?”
“ಬಹಳ ಸೂಕ್ಷ್ಮ ಅವ ಅವಳ ಆರ್ಗನ್ಸ್… ವಿಧು, ಪ್ರಿಯನ ಬಾಯಿ ಒಂದು ಲೆಕ್ಕಕ್ಕ ಓ.ಕೆ ಈಕಿ ಪುಕಾರ ಮಾಡತಾಳ, ಮೊದಲೆ ನಮ್ಮ ವಿಷಯನ್ನ ಓದಕತಾಳ..ಗೊತ್ತಾಯಿತು ಅಂದ್ರ ಮುಗಿತು..ನಡಿನಡಿ”
“ಲೋ ಸಮ್ಮು.. ಸಿಕ್ಕಿ ಬಿದ್ದಿ…. ಹೇಳು ಮಗನ ಯಾರೂ ಕೂಡಾ ಮಾತಾಡಕತ್ತಿದ್ದೆ…. ಹೇಳು ಹೇಳು” ಎಂದು ಹಿಂದಿನಿ೦ದ ಬಂದು ಗಟ್ಟಿಯಾಗಿ ಹಿಡಿದುಕೊಂಡಳು.
“ಯಾರ ಜೊತೆನೂ ಇಲ್ಲ..” ಎಂದೆ ಅವಳ ಹಿಡಿತದಿಂದ ಕೊಸರಿಕೊಂಡು.
“ಇಲ್ಲ ಇಲ್ಲ ಸುಳ್ಳ ಹೇಳತಿ. ಯಾರು ಕೂಡಾ ಏನೊ ಮಾತಡತಾ ಇದ್ದಿ.. ಕಂಡು ಹಿಡಿತಿನಿ… ಇಲ್ಲಾ ಪುಕಾರ ಎಬ್ಬಿಸಿಬಿಡತೀನಿ” ಎಂದು “ಅಮ್ಮ ಸಮ್ಮು ಯಾರ ಕೂಡ ಮಾತಾಡತಿದ್ದ ನೋಡಿದ್ರ ಅಲ್ಲಿ ಯಾರು ಇಲ್ಲ” ಎಂದು ಕೂಗಿಕೊಳ್ಳುತ್ತ ಹೊರ ಹೋದಳು.
“ಟೇಬಲ್ ಸಂಧಿಯಿ೦ದ ಹೊರ ಬಂದು ನೋಡಿದ್ಯಾ…. ನೋಡಿದ್ಯಾ…. ಎಷ್ಟು ಸೂಕ್ಷ್ಮ ಇದ್ದಳ”
“ಹೌದು ಹೌದು ನಾಳೆ ಬೆಳಿಗ್ಗೆ ಹೇಗಾದ್ರೂ ಊರಿಗೆ ಹೋಗ್ತಾರ. ಸಂಡೆ ನಾಳೆ ಶಾಲಿನೂ ಇರಲ್ಲ.. ಪೂರ್ತಿ ನಿನ್ನ ಜೊತೆನ” ಎಂದೆ
“ಪ್ಲೀಜ್ ಸಮು ನಾಳೆ ತಪ್ಪಸಬೇಡ.. ನಮ್ಮ ಆಯಸ್ಸು ಮುಗಿತಾ ಬಂತು”
“ಫ್ರೆ೦ಡು ಹಾಗೆನ್ನಬೇಡ.. ನಿನ್ನ ಆಯಸ್ಸು ಹೆಚ್ಚಾಗುವಂಗ ಇದ್ರ ನನ್ನ ರಕ್ತ ಕುಡದುಬಿಡು. ದಿನಾ ಕುಡಸ್ತಿನಿ.. ನೀನು ಹೋಗಬಾರದು ನನ್ನ ಜೊತೆನ ಇರಬೇಕು”
“ಹುಚ್ಚಪ್ಪ, ನೀನು ಅನಕೊಂಡ೦ಗ ಜಗತ್ತು ಇದ್ದಿತಪ ಅಂದ್ರ ಜಗತ್ತಿನಲ್ಲಿ ಯಾವ ಜೀವಿಗಳು ಸಾಯಲಾರದ.. ನಿಲ್ಲಾಕ ಜಾಗ ಸಹಿತ ಇರತಿರಲಿಲ್ಲ.. ಇದು ಒಂದು ನಿರಂತರ ಕ್ರಿಯೆ”
“ನೀನು ಏನೇನೊ ಒಗಟೊಗಟಾಗಿ ಮಾತಾಡತಾ ಇದ್ದಿಯಪ..”
“ಆಯ್ತು ಆಯ್ತು.. ಮೊದಲು ಅವರನ್ನ ಸಾಗು ಹಾಕು.. ಮೊದಲೆ ನಿಮ್ಮ ಅಶು ಬಹಳ ಡೆಂಜರು ಯಾವಗಾ ಬಂದು ನನ್ನ ಕಂಡುಹಿಡಿತಾಳ ಗೊತ್ತಿಲ್ಲ “ ಎಂದು ಹಾರಿತು.
ಮತ್ತೆ ಹಿಂದಿನಿ೦ದ ಬಂದ ಆಶು ಗಟ್ಟಿಯಾಗಿ ಹಿಡಕೊಂಡು “ಸಮ್ಮೆ ಸಿಕ್ಕಿಬಿದ್ದಿ ನೋಡಲೇ, ಆ ಸೊಳ್ಳೆ ಜೊತೆ ಮಾತಾಡತಾ ಇದ್ದಿಯಲ್ಲ.. ನೋಡಿಬಿಟ್ಟೆ ಸಿಕ್ಕಿಬಿದ್ದೆ”ಎಂದು ಕೂಗ ಹತ್ತಿದಳು.
ರಾಜು ಓಡಿ ಬಂದ. ಅತ್ತಿ ಮಾಮ ಅಮ್ಮ ಅಪ್ಪ ಎಲ್ಲರೂ ಓಡಿ ಬಂದ್ರು “ಏನಾಯ್ತು” ಅಂತ ಗಾಭರಿಯಾಗಿ.
ಅಪ್ಪ “ಏನಾಯ್ತು ಅಶ್ವಿನಿ.. ಅಣ್ಣ ಜೊತೆ ಜಗಳ ತೆಗೆದು ಬಂದುದಲ್ಲದ ಸಮು ಕೂಡಾ ಜಗಳ ತಗದೇನು?” ಎಂದ
“ಅಶು…ಏನಾಯಿತು ಮಗಳೆ” ಎಂದಳು ಅತ್ತಿ.
“ಏ ಸಮ್ಮೆ….. ಖರೆ ಹೇಳು ನೀನು ಸೊಳ್ಳೆ ಜೊತೆ ಮಾತಾಡತಿದ್ದಿ ಇಲ್ಲೊ…”
“ಸೊಳ್ಳೆನ…! ಅದರ ಜೊತಿಗೆ ಮಾತಾಡಕ ಆಗುತ್ತನ.. ಅಪ್ಪ ಈಕಿ ಏನೇನೊ ಹೇಳಕತಾಳಪ” ಎಂದೆ.
“ಬರಿ ಇಪ್ಪತ್ನಾಲ್ಕು ತಾಸು ಮೊಬೈಲ ಹಿಡಕೊಂಡು ಕೂತು ಕೂತು ನಿನಗ ತಲಿನ ಹೋಗಿಬಿಟ್ಟಾದ… ಸೊಳ್ಳೆ ಕೂಡಾ ಮಾತಾ..? ಎಲ್ಲ ನಿನ್ನ ಹುಚ್ಚು ಮೊಬೈಲ್ ಫೋಬಿಯಾ” ಎಂದ ಮಾಮಾ.
“ಹೌದಪ ಈಕಿನ ಸಲುವಾಗಿ ಸಾಕಾಗೇದ… ನೀನರ ಹೇಳಪ” ಎಂದು ಅಪ್ಪಗ ಅತ್ತಿ ಹೇಳಿದ್ಲು.
ಎಲ್ಲರೂ ನಂಬದೆ ಬೈಯುವುದನ್ನು ನೋಡಿ ಇಂಗುತಿ೦ದ ಮಂಗನ೦ತಾಗಿ
“ಸಮ್ಮೆ… ಲೋ ಮಾಡತೀನಿ.. ನಿಜ ಅಲ್ಲಾ ಬೊಗಳು… ಸತ್ಯ ಅಂತ ಹೇಳು” ಎಂದು ಅಟ್ಟಸಿಕೊಂಡು ಬಂದ್ಲು.

‍ಲೇಖಕರು avadhi

17 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading