ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಂಡುರಾವ್ ದೇಸಾಯಿ ಓದಿದ ‘ಸೋನು’

ಮನಕಲಕುವ ಕಥನದ ಸೋನು ಕಾದಂಬರಿ

-ಗುಂಡುರಾವ್ ದೇಸಾಯಿ

*

‘ಅಭಿನವ’  ಪ್ರಕಟಿಸಿರುವ ಹಿರಿಯ ಸಾಹಿತಿಗಳು, ಆತ್ಮೀಯರು ಆದ ತಮ್ಮಣ್ಣ ಬೀಗಾರ ಅವರ  ‘ಸೋನು’ ಕೃತಿ ನೀಳ್ಗತೆಯೂ ಹೌದು ಕಿರು ಕಾದಂಬರಿಯು ಹೌದು. ಚಿಂದಿ ಆಯುವ ಮಕ್ಕಳ ಬದುಕಿನ ಚಿತ್ರಣದ ಹೃದಯವನ್ನು ಕಲಕುವ ಕಥನ.‌ ಈ ಹಿಂದೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲಸಾಹಿತ್ಯ ಪುರಸ್ಕಾರ ಪಡೆದ ಬಾವಲಿ ಗುಹೆ, ಫ್ರಾಗಿ‌ ಮತ್ತು ಗೆಳೆಯರು ಎನ್ನುವ ವಿಭಿನ್ನ ಕತಾ ಹಂದರದ ಕಾದಂಬರಿ ಒಂದೆಡೆಯಾದರೆ. ಕುವೆಂಪು ಅವರ ಕತೆಗಳಂತೆ ಮಕ್ಕಳ ಕತೆಯಲ್ಲಿ ಮಲೆನಾಡ ಪರಿಸರವನ್ನು ಇಟ್ಟೆ ಬರೆಯುವ ಬೀಗಾರವರು ಸಾಮಾಜಿಕ ಪರಿಸರದ ಮಕ್ಕಳ ಬಾಲ್ಯದ ಬದುಕನ್ನು  ಕಣ್ಣಿಗೆ ಕಟ್ಟುವಂತೆ ಇಲ್ಲಿ ಅಷ್ಟೆ ಗಟ್ಟಿಯಾಗಿ ಚಿತ್ರಿಸಿದ್ದಾರೆ.  

ಸೋನು ಎನ್ನುವ ಬಾಲಕ ಅಮ್ಮನನ್ನು ಕಳೆದುಕೊಂಡು ಕಷ್ಟಕ್ಕೆ ಇಡಾಗುವುದು. ಒಂದು ಹಂತದಲ್ಲಿ‌ ಸೋನು ಪಡುವ ಸಂಕಟ ನಮ್ಮವೂ ಆಗುತ್ತವೆ. ಸೋನು, ಪರಮೇಶಿ, ಫಾತಿಮಾ, ಕಮಲಾ ಟೀಚರ್, ಅಬ್ದುಲ್ ಕಾಕಾ, ರುದ್ರಜ್ಜ ಓದು ಮುಗಿದ ಮೇಲೂ ಕಾಡುತ್ತಾರೆ. ಪರಮೇಶಿಯ ಹಾಸ್ಯ ಪ್ರಸಂಗಗಳು ಖುಷಿಕೊಡುತ್ತವೆ. ಪಾಟಿ ಚೀಲದಲ್ಲಿ ಹಾವಿನ ಪ್ರಸಂಗ ಕುತೂಹಲ ಹಾಗೂ ನಗು ತರುವಂತಹದ್ದು.  

ಮಂತ್ರಿಗಳು ಬಂದಾಗ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸೋನುವಿನ ಅಮ್ಮನನ್ನು ಆರೋಗ್ಯ ಇಲಾಖೆ ಸಿಬ್ಬಂದಿ ತರಾತುರಿಯಲ್ಲಿ ಕರೆದುಕೊಂಡು ಹೋಗಿ ಅಮ್ಮನ ಕೊರಳಲ್ಲಿದ್ದ ತಂಗಿಗೆ  ಮಂತ್ರಿಗಳಿಂದ ಪಲ್ಸ್ ಪೋಲಿಯೊ ಹಾಕಿಸುವರು. ಅವರೆಲ್ಲ  ಫೋಟೊಕ್ಕೆ  ಫೋಜ್ ಕೊಟ್ಟು ಹೋದಾಗ ಅದರ ಯಾವುದರ ಅರಿವಿಲ್ಲದ ತಾಯಿ ತಾನು ಹೋಗಬೇಕಾದ ಶಿರಸಿಗೆ ಬಸ್ ಹಿಡಿಯಲು ಅವಸರಿಸಿ ಹೋರಟಾಗ ಅಪಘಾತಕ್ಕೆ ಈಡಾಗಿ ಅಮ್ಮ ತಂಗಿ ಸಾಯುವುದು, ಆ ನಂತರ ಸೋನುವಿನ ಬದುಕು ಶಾಲೆಯನ್ನು ಬಿಡಲೇಬೆಕಾದ ಸ್ಥಿತಿ ಬರುವುದು. ಅಮ್ಮನ ಆಸೆಯಿಂದಲೇ‌ ಶಾಲೆಗೆ ಸೇರಿದ ಸೋನು ಅಮ್ಮ ಸತ್ತ ಮೇಲೆ‌ಪೂರ್ತಿ ಅನಾಥನಾಗುತ್ತಾನೆ. ಅಮ್ಮ‌ಬದುಕಿದ್ದಾಗಲೇ ಮಗನನ್ನು ದುಡಿಸಬೇಕೆನ್ನುವ ವಿಚಾರದ ಅಪ್ಪ, ಅಮ್ಮ ತೀರಿದ ಸೋನುವೆ ಚಿಂದಿ ಆಯ್ದು ತನ್ನ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಸಂಕಷ್ಟ ಬರುತ್ತದೆ.  

ಶಾಲೆ ಬಿಟ್ಟು ಚಿಂದಿ ಆಯುವಾಗ ಗೆಳೆಯರೆಲ್ಲ ‘ಸೋನು ಸೋನು’ ಎಂದು ಓಡಿಬರುವುದು.  ಗೆಳೆಯರಿಂದ ತಪ್ಪಿಸಿಕೊಂಡು ಗೋಡೆಯ ಹತ್ತಿರ ಬಂದಾಗ ಪೋಲಿಯೊ ಹನಿ ಜಾಹಿರಾತಿನ ಚಿತ್ರ ನೋಡಿ ಅದರಲ್ಲಿ ಅಮ್ಮ‌ತಂಗಿಯ ಚಿತ್ರ ನೋಡಿ ಖುಷಿಯಿಂದ ಅದನ್ನು ತೆಗೆದುಕೊಳ್ಳುವುದು,ಚಿಂದಿ‌ ಆಯುವ ಹುಡುಗ ಪೋಸ್ಟರ್ ಕದಿಯುತ್ತಿದ್ದಾನೆ ಎಂದು ಬೆನ್ನು ಹತ್ತುವುದು, ಭಯಕ್ಕೆ  ಓಡುತ ಓಡುತ ಹೋಗಿ ಶಾಲೆಯ ಕಂಪೌಂಡ ಹಾರಿ ಶಾಲೆಯ ಕೋಣೆಯೊಳಗೆ ಹೋಗುವನು. ಸೋನುವನ್ನು ನೋಡಿ ಮಕ್ಕಳೆಲ್ಲ ‘ಸೋನು ಬಂದ ಸೋನು ಬಂದ’ ಎಂದು  ಕೂಗುವರು.

ಸೋನು ಕಮಲಾ ಟೀಚರ ಅಪ್ಪುಗೆಯಲ್ಲಿ ಸೇರಿಕೊಳ್ಳುವುದರ ಮೂಲಕ  ಸುಖಾಂತ ಅಂತ್ಯದೊಂದಿಗೆ ಕಿರು‌ಕಾದಂಬರಿ‌ ಮುಕ್ತಾಯಗೊಂಡು ಸೋನುವಿನ ಬದುಕು ಏನಾಗುತ್ತದೆ ಎನ್ನುವ ಆತಂಕದಲ್ಲಿದ್ದವರಿಗೆ ನಿರಾಳತೆ ಉಂಟಾಗುತ್ತದೆ. ದೊಡ್ಡವರೂ ಓದಿ ಮಕ್ಕಳಿಗೂ ಓದಿಸಬೇಕಾದ ಒಂದೆ ಓದಿನಲ್ಲಿ ಮುಗಿಸಬಹುದಾದ 53 ಪುಟಗಳ ಕಾದಂಬರಿ ಇದಾಗಿದೆ.  

ಜಿ. ಎಸ್. ನಾಗನಾಥ ಅವರ ಅಂದದ ಚಿತ್ರಗಳು ಕೃತಿಗೆ ಮೆರಗು ನೀಡಿವೆ. ತುಂಬು ಮಾಗಿರುವ ತಮ್ಮಣ್ಣ ಬೀಗಾರ್ ಅವರಿಂದ ಸಾಮಾಜಿಕ ಸಂವೇದನೆಯ ಇಂತಹ ಹಲವು ಕೃತಿಗಳು ಹೊರಬರಲಿ ಎಂದು ಆಶಿಸುವೆ 

‍ಲೇಖಕರು avadhi

11 March, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading