ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು.
ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಹಲವು ಕತೆ,ಕವಿತೆಗಳನ್ನು ಬೆಂಗಳೂರಿನ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಪೂರಕ ಪಠ್ಯಗಳಾಗಿ ಬಳಸಿಕೊಂಡಿದೆ.
ಇದೆ ಅವಧಿಯಲ್ಲಿ ಪ್ರಸಾರವಾದ ‘ಸೊಳ್ಳೆ ಫ್ತೆಂಡು ಒಳ್ಳೆ ಫ್ರೆಂಡು’ ಕೃತಿಗೆ ಜಿ.ಬಿ ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ, ಕಲಬುರಗಿ ಯ ಕನ್ನಡ ನಾಡು ಓದುಗರ ಹಾಗೂ ಲೇಖಕರ ಸರಕಾರಿ ಸಂಘದ’ ಉತ್ತಮಕಾದಂಬರಿ ಪ್ರಶಸ್ತಿ ದೊರಕಿದೆ.
ಪೆಣ್ಣತ್ತ ಖುಷಿಗೆ ಕಸಾಪದ ಕುಂಭಾಸ ಹಾಸ್ಯ ಸಾಹಿತ್ಯ ದತ್ತಿ ಗೌರವ, ಚಾರ್ಲಿ ಚಾರ್ಲಿ ವೇರ್ ಆರ್ ಯೂ ಕೃತಿಗೆ ಜನಸಿರಿ ಸಾಹಿತ್ಯ ಪ್ರಶಸ್ತಿ ದೊರಕಿದೆ. ಹಲವು ಪತ್ರಿಕೆಗಳಲ್ಲಿ ಇವರ ಕತೆ, ಕವಿತೆ, ನಾಟಕ, ಪ್ರಬಂಧ, ಹಾಸ್ಯ ಬರೆಹಗಳು ಪ್ರಕಟವಾಗಿವೆ.
ಭಾಗ –೧ ೦
“ಖಾಲಿ ತಲೆ ದೆವ್ವಗಳ ತವರುಮನೆ” ಅಂತಾರಲ್ಲ ಇವನು ಮನೆಯಲ್ಲಿ ಇದ್ದರೆ ಒಣ ಆಲೋಚನೆ ಮಾಡಿ ಮನಸ್ಸನ್ನು ಹಾಳುಮಾಡಿಕೊಳ್ಳುತ್ತಾನೆಂದು ಶಾಲೆಗೆ ಒತ್ತಾಯ ಪೂರ್ವಕವಾಗಿ ಕಳುಹಿಸಿದರು. ನಾನು ಒಲ್ಲದ ಮನಸ್ಸಿನಿಂದ ಶಾಲೆಗೆ ಹೋದೆ. ನಡುವೆ ರಫಿ, ಕಿರಣ ಬಂದರು. ನನಗೆ ನಡುಕನ ಸ್ಟಾರ್ಟ ಆಯ್ತು. ಕನಸಿನಲ್ಲಿ ಕಂಡದ್ದು ನೆನಪಾಯಿತು. “ಯಾಕೊ ಏನಾಗಿದೆ? ಸರಿಯಾಗಿ ಮಾತನಾಡುತ್ತಿಲ್ಲ?” ಎಂದ ಕಿರಣ. “ಅರಾಮ ಆದ ಮೇಲೆ ಶಾಲೆಗ ಬರಬೇಕಿತ್ತಿಲ್ಲ. ನಿನ್ನೆ ಕಾರ್ಯಕ್ರಮದಲ್ಲಿ ಎಲ್ಲರ ಕಣ್ಣು ನಿನ್ನ ಮೇಲೆ ಬಿದ್ದಂತಿದೆ, ದೃಷ್ಟಿ ತೆಗೆಸಿಕೊಂಡಿಯಾ?” ಎಂದ ರಫಿ. ನಾನು ಸಹಜವಾಗಿ ಮಾತನಾಡಲು ಯತ್ನಿಸಿದೆ. ಶಾಲೆ ಪ್ರವೇಶಿಸುತ್ತಿದ್ದಂತೆ ಎದುರು ಬಂದ ರೀಟಾ ಸ್ಮೈಲ್ ಕೊಟ್ಟಳು.
ಬಿದ್ದ ಕನಸಿನಿಂದಾಗಿ ಮುದ್ದಾಂ ಮಾತಾಡಲು ಬಂದ ರೀಟಾಳನ್ನು ಮಾತನಾಡಿಸಲಿಲ್ಲ. ಸಪ್ಪೆ ಮೊರೆ ಹಾಕಿಕೊಂಡು ಹೋದಳು. ಕನಸು ನನ್ನನ್ನು ನಿಚ್ಚಳು ಮಾಡಿತ್ತು. ಎದುರಿಗೆ ಬಂದ ಮೀರಾ ‘ನೋಟ್ಸ್ ಬೇಕಾಗಿತ್ತು’ ಎಂದು ಕೇಳಿದಾಗ ನಡುಗಿಯೆ ಬಿಟ್ಟೆ. ಮುಖಕ್ಕೆ ಎದುರು ಕೊಟ್ಟು ನೋಡದೆ ‘ಬರೆದಿಲ್ಲ’ ಎಂದು ಹೇಳಿ ಅಲ್ಲಿಂದ ಜಾಗ ಖಾಲಿಮಾಡಿ ತರಗತಿಗೆ ಬಂದು ಕುಳಿತೆ. ಎದೆಯಲ್ಲಿ ನಡುಕ ಇನ್ನೂ ಇತ್ತು. ಹಾಳದ್ದು ರಿಟಾ, ಮೀರಾ ನನ್ನನ್ನೆ ನೋಡುತ್ತಿರಬೇಕೆ? ಯಾಕಾದರೂ ಶಾಲೆಗೆ ಬಂದೆನೋ ಎನಿಸಿತು. ಅವತ್ತು ಯಾಕೊ ಶಾಲೆಯ ಬೋರ್ ಹೊಡೆಯಿತು. ದೇಹ ಕಂಪಿಸುತ್ತಿತ್ತು. ಬೇಗ ಶಾಲೆಗೆ ಮುಗಿದರೆ ಸಾಕಾಗಿತ್ತು. ಗಂಟೆ ಹೊಡೆಯುತ್ತಿದ್ದಂತೆ ಮನೆಯತ್ತ ಹೆಜ್ಜೆ ಹಾಕಿದೆ.
ಮನೆಗೆ ಬಂದು ಬಾಗಿಲು ಹಾಕಿಕೊಂಡು ಮಿ.ರೆಡ್ ಕೈಟ್‌ನ್ನು ನೆನೆದು ಮನಸಾರೆ ಅತ್ತೆ. “ಮಿ.ರೆಡ್ ಕೈಟ್ ಮೊದಲಿನಂತೆ ಶಾಂತಿ ನೆಲೆಸುವವರೆಗೂ ನೀನು ಬಂದು ಹೋಗು ನನ್ನದು ತಪ್ಪಾಗಿದೆ ತಪ್ಪಾಗಿದೆ ತಪ್ಪಾಗಿದೆ” ಎಂದು ಬೇಡಿಕೊಂಡೆ. ಮನಸ್ಸಿಗೆ ಬೇಜಾರಾಗಿ “ನೀನು ಬರದಿದ್ರೆ ನಾನು ಸತ್ತುಹೊಗತೀನಿ” ನೋಡು ಎಂದು ಅರಿವಿರದಂತೆ ಫ್ಯಾನ್‌ಗೆ ಹಗ್ಗ ಹಾಕಲು ಮುಂದಾದೆ.
ಕ್ಷಣಾರ್ಧದಲ್ಲಿ ‘ರಾಜಾಧಿರಾಜ… ರಾಜಾ ಮಾರ್ತಾಂಡ… ನಮ್ಮ ರಾಯ, ದಿನಕರ ಪ್ರಭುಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಬನ್ನಿರಿ ಬನ್ನಿರಿ” ಎಂದು ಕೂಗುತ್ತಾ ಟಿ,ವಿಯ ಹಿಂದಿನಿ೦ದ ಹಾರಿ ಬಂದು ಮುಂದೆ ನಿಂತಿತು ಮಿ.ರೆಡ್ ಕೈಟ್.
ಮಿ.ರೆಡ್ ಕೈಟ್ ನ್ನು ನೋಡಿ ನನಗೆ ಆದ ಸಂಭ್ರಮ ಅಷ್ಟಿಷ್ಟಲ್ಲ. ಅದರ ಚುಂಗು ಹಿಡಿದು “ಏನೋ ಒಂದು ಮಾತಿಗೆ ಅಷ್ಟು ಶೆಟುಕೊಂಡು ಹೋಗಿಬಿಡೊದಾ. ಎಷ್ಟು ಮಿಸ್ ಮಾಡಕೊಂಡೆ. ಏನೆಲ್ಲಾ ಆಗಿ ಬಿಟ್ಟಿತ್ತು” ಎಂದು ಕುಣಿದು ಸಂಭ್ರಮಿಸಿದೆ. ಗಳಗಳನೆ ಅತ್ತೆ
“ಏನು ಆಗಿದೆ, ಏನೇನೂ ಆಗಿಲ್ಲ ಬಿಡು” ಎಂದಿತು.
“ಆಗಿಲ್ಲ ಖರೆ ನಿನ್ನ ಮಾತೆಲ್ಲ ಸತ್ಯ ಅನಿಸಿತು”
“ದೊಡ್ಡೋರ ಮಾತೆಲ್ಲ ಸತ್ಯ ಇರತಾವ. ಆದರ ಕಿವ್ಯಾಗ ಈ ವಯಸ್ಸಲ್ಲಿ ಹತ್ತೊಲ್ಲ. ಅಷ್ಟೆ ಹತ್ತಿಸಿಕೊಂಡೋರು ಉದ್ಧಾರ ಆಗತಾರ ಬೇಜಾರ ಮಾಡಿಕೊಂಡವರು ಹಾಳಾಗಿ ಹೋಗತಾರ”
“ಹೌದಪ್ಪ ಇರಲಿ, ನಾನು ಸಾಯ್ತಿನಂತೆ ನೀನು ಬಂದ್ಯಾ?”
“ನೀನು ಸಾಯಲ್ಲ ಅಂತ ಗೊತ್ತು. ನಿನ್ನ ಆಟ ಆಡಿಸಬೇಕು ಅಂತ ಟಿ.ವಿ ಹಿಂದೆ ಬಚ್ಚಿಟ್ಟಕೊಂಡಿದ್ದೆ, ಎಷ್ಟು ಸ್ವಚ್ಛ ಇಟ್ಟುಕೊಂಡಿರಪಾ ಮನೆನ! ಅಬ್ಬಬ್ಬಾ . . . ಏನು ಸೊಳ್ಳೆ, ಜೇಡ ನನ್ನ ಕಾಡಿಬಿಟ್ಟವಪ. ಅದಕ್ಕ ತಾಳಲಾರದೆ ಹೊರಗ ಬಂದೆ. ನೀನು ಅದಾ ಸಮಯಕ್ಕ ಸಾಯೊ ಡೈಲಾಗ ಹೊಡಿತಿದ್ದೆ”
ಮಿ.ರೆಡ್ ಕೈಟ್‌ನ ಡೈಲಾಗಗೆ ಜೋರಾಗಿ ನಕ್ಕೆ
ಅಪ್ಪಮ್ಮ ಓಡಾಡಿ ಬಂದರು. “ಏನಾಯಿತು ಹಾಗೇಕೆ ನಗುತ್ತಿದ್ದೀಯಾ?” ಎಂದಳು ಅಮ್ಮ.
“ಎಷ್ಟು ಖುಷಿ ಆಯ್ತೋ ನಿನ್ನ ಮುಖದಲ್ಲಿ ಬಂದ ಕಳೆ ನೋಡಿ. ಯಾಕೆ ನಕ್ಕಿದ್ದು ಎಂದರು” ಅಪ್ಪ
“ಅಯ್ಯೊ? ಹೌದಲ್ಲ” ಎಂದ ಅಮ್ಮ ನನ್ನ ಕೈಯಲ್ಲಿಯ ಗಾಳಿಪಟ ನೋಡಿ “ಓಹೋ . . . ಇದಾ ವಿಷಯ, ಇವನ ಚಿಂತೆ ಕಾರಣ ಗೊತ್ತಾಯಿತು. ಗಾಳಿಪಟ ಟಿ.ವಿ ಹಿಂದೆ ಒಗೆದು ಅದು ಸಿಗದ ಕಾರಣಕ್ಕೆ ಚಿಂತಿ ಹಚ್ಚಿಕೊಂಡು ನಮ್ಮನ್ನ ಮೆತ್ತಗೆ ಮಾಡಿದ” ಎಂದು ಗಾಳಿಪಟವನ್ನು ಸ್ವಚ್ಛಗೊಳಿಸಿ ಕೊಟ್ಟಳು ಅಮ್ಮ. ಇಬ್ಬರೂ “ಹುಚ್ಚ ಹುಡುಗ” ಎಂದು ನಗುತ್ತಾ ಹೋದರು.
“ಮಿ.ರೆಡ್ ಕೈಟ್ ನೀನು ಬಂದು ನನಗೆ ಧೈರ್ಯ ಬಂದ೦ಗಾಯಿತು. ನಾನು ಮೀರಾಳೊಂದಿಗೆ ನಡೆದುದೆಲ್ಲವೂ ಸತ್ಯವೆಂದೆ ತಿಳಿದಿದ್ದೆ. ಪುಣ್ಯಕ್ಕೆ ಅದು ಕನಸಾಗಿತ್ತು. ಇಲ್ಲಂದ್ರೆ ಇಷ್ಟೊತ್ತಿಗೆ”
“ಇರಲಿ ಇಲರಿ ಕೆಟ್ಟ ಮೇಲಾದರೂ ಬುದ್ಧಿ ಬಂತಲ್ಲ”ಎAದಿತು.
“ನಾನೇನು ಕೆಟ್ಟಿಲ್ಲ” ಎಂದೆ.
“ಕೆಟ್ಟ ಕನಸಿನಿಂದ ನಿನ್ನ ಬುದ್ಧಿ ನೆಟ್ಟಗಾಯಿತಲ್ಲ, ಆದರೂ ಇವತ್ತು ಹಾದಿ ತಪ್ಪುವುದರಲ್ಲಿದ್ದೆ, ಮನಸ್ಸು ಗಟ್ಟಿ ಮಾಡಿಕೊಂಡು ಗೆದ್ದಿ” ಎಂದಿತು.
“ಸಣ್ಣ ಕನಸಾ ನೀನು ಬೀಳಿಸಿದ್ದು” ಎಂದೆ.
“ಹೇ. . . ನಾನ್ಯಾಕೆ ಬೀಳಿಸಲಿ. ನಿನ್ನ ಮನಸ್ಸು ನಿನ್ನ ಹಿಂದೆ”
“ನಾಟಕ ಬೇಡಾ. ಅದು ಬಿಡು. ಸಂಜೆಯಾಗಿದೆ, ನನಗೆ ಖುಷಿ ಆಗಿದೆ. ನಡೆ ಹಾರಾಟಕ್ಕೆ ಹೋಗೋಣ” ಎಂದೆ
“ಅದು ಒಮ್ಮೆಲೆ ಎಸ್” ಎಂದಿತು.
ಹೊಸ ಉತ್ಸಾಹದಲ್ಲಿ ಪಟವನ್ನು ಹಾರಿಸುತ್ತಾ ಓಣಿ ಸಂಧಿಗಳಲ್ಲಿ ಓಡುತ್ತಾ ಹೋದೆ, ಬಜಾರದಲ್ಲಿ ಹೋದೆ. ಅಲ್ಲಿಂದ ನೇರವಾಗಿ ಕೆರೆಯ ಬಯಲಿಗೆ ಬಂದೆ. ನನ್ನನ್ನು ಹಿಂಬಾಲಿಸುತ್ತಾ ರಾಕೇಶ ಬಂದ. ಈ ಗಾಳಿಪಟದಿಂದ ಇವನು ಬಹಳ ಉರಿಯುತ್ತಿದ್ದಾನೆ. ಇದನ್ನು ಹೇಗಾದರೂ ಕದಿಯಬೇಕೆಂದು ಬಂದಿದ್ದ. ಓಡಿ ಬರುವ ಕಾಲಿಗೆ ಸೆಗಣಿ ಹತ್ತಿದೆಯಂದು ಗಾಳಿಪಟವನ್ನು ಕಟ್ಟೆಯ ಮೇಲಿಟ್ಟು ಕಾಲುತೊಳೆಯಲು ಹೋದೆ. ಅದೆ ಸಮಯಕ್ಕೆ ಕಾಯುತ್ತಿದ್ದ ರಾಕೇಶ ಅದನ್ನು ತೆಗೆದುಕೊಂಡು ಓಡತೊಡಗಿದ.
ಓಡುತ್ತಾ ಓಡುತ್ತ ಓಡಿ ಅಮ್ಮ ಅಂತ ನಿಂತ. ಅವನಿಗೆ ನಂಬಲಾಗಲಿಲ್ಲ. ಅವನು ಆಕಾಶದಲ್ಲಿ ಅಂತರದಲ್ಲಿ ನಿಂತಿದ್ದ. ಗಾಭರಿ ಆಯ್ತು ರಾಕೇಶನನ್ನು ಗಾಳಿಪಟವೆ ಅವನನ್ನು ಎತ್ತಿಕೊಂಡು ಹೊರಟಿತ್ತು.
“ಅಮ್ಮಾ ಏನಿದು, ಗಾಳಿಪಟವನ್ನು ನಾನು ಹಿಡಿದಿದ್ದೇನೆಯೇ ಗಾಳಿಪಟ ನನ್ನ ಹಿಡಿದಿದೆ” ಎಂದು ಕೆಳಗಡೆ ನೊಡಿದರೆ ಎರಡುನೂರು ಫೀಟ ಮೇಲೆ ಬಂದಿದ್ದ. ಇದೇನು ಪಟನಾ ದೆವ್ವನ ಎಂದು ಭಯದಿಂದ ನಡುಗತೊಡಗಿದ. ಭಯದಲ್ಲಿ ‘ಸುಸೂ’ ಮಾಡೋದನ್ನು ನೋಡಿ ನಕ್ಕ ಪಟ ಅವನನ್ನು ಮತ್ತೆ ಅದೆ ಕೆರೆಯ ಕಟ್ಟಿ ಹತ್ತಿರ ಇಳಿಸಿತು. ಕೆಳಗೆ ಇಳಿಸಿದ್ದೆ ತಡ ಪಟವನ್ನು ಇದ್ದ ಜಾಗದಲ್ಲಿ ಇಟ್ಟು ರಾಕೇಶ ಎದ್ನೋ ಬಿದ್ದನೊ ಎಂದು ಓಡತೊಡಗಿದ.
ನಾನು ಕಾಲನ್ನು ಸ್ವಚ್ಛಮಾಡಿಕೊಂಡು ಬಂದು ಕಟ್ಟೆಯ ಮೇಲಿದ್ದ ಗಾಳಿಪಟವನ್ನು ತೆಗೆದುಕೊಂಡೆ. “ಆಟಕ್ಕೆ ಎಂದು ಕರೆದುಕೊಂಡು ಬಂದು ಎಷ್ಟೊತ್ತು ಹೋಗೊದು. ಒಂದಕ್ಕ ಹೋಗಿದ್ದಿಯಾ, ಎರಡಕ್ಕೆ ಹೋಗಿದ್ಯಾ” ಎಂದು ನಕ್ಕಿತು
“ಇಲ್ಲ ಮಿ.ಕೈಟ್, ಕಾಲು ಹೊಲಸಾಗಿತ್ತು ಅಂತ ಕಾಲು ತೊಳಿಯುತಿದ್ದೆ. ಲೇಟಾಯ್ತಾ?”
“ಲೇಟಾಗಿಲ್ಲ ನಾನೇ ಲೇಟ್ ಕೈಟ್ ಆಗುತ್ತಿದ್ದೆ”
“ಅಂದ್ರೆ”
“ನಿನಗೆ ಅರ್ಥ ಆಗಲ್ಲ, ಒಬ್ಬನೇ ಬಿಟ್ಟು ಹೋಗಬೇಡಾ”
“ನಿನಗೆ ಅಂಜಿಕಿನಾ? ಕಿಂಗ್ ಆಫ್ ಕಿಂಗ್ ಮಿ.ರೆಡ್ ಕೈಟಗೆ!”
“ಏನು ಸಾಹೇಬರು, ಡಲ್ ಹೊಡಿತಿದ್ರಿ, ಇವತ್ತು ನಮಗ ಟಾಂಗ್ ಕೊಡುತ್ತದ್ದೀರಿ, ನಿನ್ನ ಸೇಫ್ಟಿ, ನನ್ನದು ಟೈಮ್ ಬಂದ ಹಾಗೆ ಕಾಣುತ್ತಿದೆ. ನಿನ್ನ ಜೊತೆ ಇರೋದು ಡೇಂಜರ್, ಬರಲಾ” ಎಂದಿತು.
“ಸ್ವಾರಿ ಫ್ರೆಂಡು, ನಾನು ಏನೋ ತಪ್ಪು ಮಾತನಾಡಿದೆ. ಕ್ಷಮಿಸು. ಇನ್ನೊಮ್ಮೆ ಹಾಗೆ ಮಾತನಾಡೊಲ್ಲ”
“ಮಾತಿಗೂ ಇದಕ್ಕೂ ಸಂ೦ಧವಿಲ್ಲ. ಹೇಳಬಾರದ ವಿಷಯ. ಇದ್ದರೆ ನಿನಗೂ ತೊಂದರೆ ನನಗೂ ತೊಂದರೆ”
“ಏನಾಯ್ತು ಹೇಳು. ಎಲ್ಲಾ ಒಗೊಟೊಗಟಾಗಿ ಮಾತಾಡುತ್ತಿದ್ದೀಯಾ?”
“ಏನಿಲ್ಲ, ಮನೆಗೆ ಹೋಗೋಣ ನಡಿ”
“ರಿಫ್ರೆಶ್ ಆಗಲು ಬಂದಿದ್ದು”
“ಬೇಡಾ ನಡೆ, ಮನೆಗೆ ಹೋಗೋಣ” ಎಂದು ಕರೆದುಕೊಂಡು ಬಂದಿತು.
। ನಾಳೆಗೆ ।






0 Comments