
ಗೀತಾ ಹೆಗಡೆ
ಅನಾರ್ಕಲಿಯ ಸೇಫ್ಟಿಪಿನ್- ಜಯಂತ ಕಾಯ್ಕಿಣಿಯವರ, ಇದೇ ಶೀರ್ಷಿಕೆಯ, ಇತ್ತೀಚಿನ ಕಥಾಸಂಕಲನದೊಂದು ಕತೆ. ಹೆಸರೇ ಒಂದು ಕುತೂಹಲವನ್ನು ಹುಟ್ಟಿಸುವಂತಿದೆ- ಅಲ್ಲವೆ?
ಅನಿ, ಅನುಕ್ತಾ ಅನಾರ್ಕಲಿಯಾಗುವ ಒಂದು ಸುಂದರ, ಸೂಕ್ಷ್ಮ ಹೊಳಹಿನ ಪ್ರಕ್ರಿಯೆ; ಈ ಪ್ರಕ್ರಿಯೆಗೆ ಒಂದು ಕಲಾತ್ಮಕ ನಿಮಿತ್ತವಾಗುವ ಅನಿ ಮತ್ತವಳ ತಂಡದ ಪ್ರವಾಸ; ಕಾರವಾರದಿಂದ ದೇವಗಡದ ದೀಪಸ್ತಂಭ ನೋಡಲು, ಪಾಂಗಮ್ಸರ್ ನೇತೃತ್ವದಲ್ಲಿ- ಅದು, ಹತ್ತನೇ ತರಗತಿಯ ಪ್ರವಾಸ. ಎಲ್ಲ, ಹೊಸಾ ಹದಿ-ಹರಯದ ಹೊಸ್ತಿಲ ಪ್ರವೇಶ-ಪತ್ರ ಪಡೆದ ಕನಸುಗಂಗಗಳ, ಹೊಸ ಹುರುಪಿನ ಯುವ ಜೀವಗಳು. ಸಮುದ್ರವನ್ನು ಸೀಳುತ್ತ ಹೊರಟ ಶಾಲಾ-ಪ್ರವಾಸದ ಲಾಂಚಿನೊಳಗೆ, ಕಡೆಗೆ ಸರೀ ಸಮಯದಲ್ಲಿ ತಿನ್ನಲಿಕ್ಕಾಗಿ ಮನೆಯಿಂದ ತಂದ ತಂತಮ್ಮ ತಿಂಡಿ ಡಬ್ಬಿಗಳನ್ನು ಅವಚಿಕೊಂಡು ಕೂತವರು.
ಜೊತೆ-ಜೊತೆಯಲ್ಲಿ, ಇಷ್ಟು ದಿನ ಬರೀ ಕಾರವಾರದ ದೂರತೀರದಲ್ಲಿ ಮಿನುಗುವ, ಅಸಂಖ್ಯ ದೋಣಿ, ಹಡಗು, ಬೆಸ್ತರಿಗೆ ದಿಶಾ-ನಕ್ಷೆಯಾಗಿ ಮುನ್ನಡೆಸುವ ದೇವಘಡದ ದೀಪಸ್ತಂಭವನ್ನು ಇನ್ನೇನು- ಕಣ್ಣಾರೆ ಕಂಡು ಬರುವ, ಇದೇ ನೆವದಲ್ಲಿ ಒಂದು ಸಮವಯಸ್ಕ- ಸಮಮನಸ್ಕ ಸಮೂಹಯಾನದ, ನಿರೀಕ್ಷೆಗಳ ಭಾರ- ಬಳಲಿಕೆ ಗೊತ್ತಿರದ, ಅಸಲಿಗೆ ಅವು ಇದ್ದೇ ಇಲ್ಲದ ಒಟ್ಟಾರೆ ಮಜದ ಉತ್ಸಾಹದಲ್ಲಿದ್ದವರು. ಪ್ರವಾಸ ದಾರಿಸಾಗುವಾಗ, ಸಮುದ್ರದ ಅಲೆಗಳು ಮುಮಮ್ಮಖವಾಗಿಯೂ, ಹಿಮ್ಮಖವಾಗಿಯೂ ಸರಿದಂತೆ, ಈ ಯುವ ಯಾತ್ರಿಕರ ದೈನಿಕ ಫ್ಲಾಷ್ಬ್ಯಾಕ್ ವಿವರಗಳು ಸಹಜ ಗತಿಯಲ್ಲಿ ನೇಯ್ದುಕೊಳ್ಳುತ್ತ ಹೋಗುತ್ತವೆ. ಅನಾರ್ಕಲಿಯ ಸೇಫ್ಟಿಪಿನ್ ಬೆಸೆದುಕೊಡುವ ಈ ಕಥಾನಕದ ಉಡುಗೆಯಲ್ಲಿ, ಅವರದೇ ಪ್ರಪಂಚ-ದ ಚೇತೋಹಾರೀ ಸಣ್ಣ-ಸಣ್ಣ ವಿವರಗಳನ್ನೂ ಓದುಗ ಈ ಕತೆಯಲ್ಲಿ ಕಾಣಬಲ್ಲ.

ಅನುಕ್ತಾ, ಚಮೇಲಿ ಅತ್ಯಾಪ್ತ ಗೆಳತಿಯರು.ಇವರಿಬ್ಬರಿಗೇ ಸಂಬಂಧಿಸಿದ ಪ್ರಪಂಚ ತೆರೆದುಕೊಂಡಾಗ ಅಲ್ಲೊಂದು ಮಾಮೂಲಾದ ಸರಳ ಕೌಟುಂಬಿಕ ಚಿತ್ರ ತೆರೆದುಕೊಳ್ಳುವುದು. ಕಿನಾರೆಯಲ್ಲಿ ಕೂತು
೧
ಎಂದಿನಂತೆ ಸುಖದುಃಖ ಹಂಚಿಕೊಳ್ಳುವಾಗೊಮ್ಮೆ ಚಮೇಲಿಯ ದುಗುಡ-ಚಿಂತೆಗಳ ಕಾರಣ
ತಿಳಿಯಲು ಅನುಕ್ತಾ ಕಾಳಜಿಯಿಂದ ಪ್ರಯತ್ನಿಸುತ್ತಾಳೆ. ಹೇಳು-ಹೇಳೆಂಬ ಒತ್ತಾಯದಿಂದಲ್ಲ; ತನ್ನ
ಮೌನದಿಂದಲೇ! ಇದೊಂದು ತಾಳ್ಮೆಯ ಸುಂದರ ಪ್ರಯೋಗ!
ಚಮೇಲಿಯ ಅಪ್ಪನ ನಿರ್ಲಿಪ್ತ ಕ್ರೌರ್ಯ, ಸಿಡುಕುತನ, ಅವೆಲ್ಲಕ್ಕೂ ಅಮ್ಮನ ಕಟ್ಟೊಡೆಯದ ಸಹನೆ..ಮತ್ತೆ ಇಂಥ ಸಹನೆಗೂ ಒಂದು ಪ್ರೇರಣೆ/ಪರಿಹಾರದಂತೆ ಭಾಸವಾಗಿಬಿಟ್ಟಂತೆ- ಚಮೇಲಿಯ ಕಣ್ಣಿಗೆ ಒಂದು ದಿನ ಬಿದ್ದ ದೃಶ್ಯ!.. ಅದು ಅವಳಮ್ಮ ಬೇರೆ ಯಾರೋ- ಗೊತ್ತಿರುವ ಗಂಡಸಿನೊಂದಿಗೆ ಚಿತ್ರ-ಮಂದಿರದಿಂದ ಹೊರಬೀಳುವ ದೃಶ್ಯ!. ಆ ಸಂಗತಿ ಅಮ್ಮನೊಂದಿಗೆ, ಅಮ್ಮನ ಬಗೆಗೆ ತನಗೂ ವಿಚಿತ್ರ ನೆಮ್ಮದಿ, ತಂದಿದ್ದನ್ನು ಅರ್ಥೈಸಲಾರದ, ವ್ಯಕ್ತಪಡಿಸಲಾಗದ ಸ್ಥಿತಿ, ಒಮ್ಮ ಅನುಕ್ತಾಳೊಡನೆ ಹಂಚಿಕೊಂಡದ್ದೇ, ಇಬ್ಬರಿಗೂ ಒದಗಿದ ನಿರಾಳತೆ! ಇಲ್ಲೆಲ್ಲ ಕತೆಗಾರ ಆ ಮುಗ್ಧ ಮನಸುಗಳ ಒಳ-ಹೊರಗುಗಳ ಚಿತ್ರಣ ಕೊಟ್ಟ ಶೈಲಿ ಅಕೃತ್ರಿಮ. ಉದಾಹರಣೆಗೆ.. ಚಮೇಲಿ ದುಗುಡದ ಈ ಗುಟ್ಟನ್ನು ಬಿಟ್ಟುಕೊಡುತ್ತಿದ್ದಂತೆಯೇ, ಇಬ್ಬರೂ ಅದನ್ನು ಹೇಳಿಯೇ- ಕೇಳಿಯೇ ಇಲ್ಲವೆಂಬಂತೆ, ಸಹಜವಾಗಿ, ನಿರುಮ್ಮಳವಾಗಿ ಇದ್ದುಬಿಡುವುದು!
ಕತೆ ಘಟಿಸುವುದು ದಂತಗೋಪುರದಲ್ಲಲ್ಲ. ಅದು ತೀರಾ ನೆಲಮಟ್ಟದಲ್ಲಿ, ಹಾಗಾಗಿ, ಚಿಗುರೊಡೆಯುವ ಗರಿಕೆ-ಹುಲ್ಲಿನ ಎಳೆತನ, ತಾಜಾತನ ಓದುಗನಿಗೆ ಕತೆಯುದ್ದಕ್ಕೂ ಅನಿಸುವುದು; ಅನಿ ಮತ್ತು ಚಮೇಲಿಯರದಷ್ಟೇ ಅಲ್ಲ, ಬದುಕಿನ ಬವಣೆಗಳಡಿ ಅರಳುವ ಸೂಕ್ಷ್ಮಮನಸುಗಳ ಸ್ಪರ್ಶದಲ್ಲಿ.
ಜಯಂತರ ಕೃತಿಗಳಲ್ಲಿ ಸದಾ ಮೊರೆಯುವ ಸಮುದ್ರ ಇಲ್ಲಿಯೂ ಇದೆ; ಒಂದು ಜೀವಂತಿಕೆಯ ನಿರಂತರತೆಯ ಪ್ರತೀಕವಾಗಿ, ಎಲ್ಲವನ್ನೂ, ಎಲ್ಲರನ್ನೂ ಹೃದಯವಂತಿಕೆಯಿಂದ ಒಳಗೊಳ್ಳುವ, ಸಮಾವಿಷ್ಟಗೊಳಿಸಬಲ್ಲ, ದಾಟಿಸಬಲ್ಲ ಅಗಾಧತೆಯ ಪ್ರತೀಕವಾಗಿ. ಮನುಷ್ಯನ ಮನೋ ವ್ಯಾಪಾರದ ಸೂಕ್ಷ್ಮಕಂಪನಗಳನ್ನು ಹಗುರಾಗಿ ಗುರುತಿಸುವಂತೆ, ಅನಿ ಅನಾರ್ಕಲಿಯಾಗುವ ಒಂದು ರೂಪಕವಾಗುವುದೇ ಒಂದು ಸಾಂಕೇತಿಕ, ಸಿನಿಮೀಯವಲ್ಲದ ಘಟನೆಯಿಂದ.
೨
ದೇವಗಡವನ್ನು ತಲುಪಿ, ಲಾಂಚಿನಿಂದ ಈಚೆದಡವನ್ನು ಇಳಿಯುವಾಗ ನವಿರಾದ ಅದರೆ ಬಲವಾದ, ಆಕರ್ಷಕವಾದ ಅದರೆ ಸುಪ್ತವಾದ, ಆಹ್ಲಾದಕರವಾದ ಆದರೆ ಅಸ್ಪಷ್ಟವಾದ ಒಂದು ಅನುಭವ ಅನುಕ್ತಾಳ ಪ್ರಪಂಚವನ್ನು ನವಿಲುಗರಿಯಂತೆ ಮೆಲ್ಲಗೆ ಸೋಕುವುದು! ಲಾಂಚನ್ನು ನೆಲೆಗೆ ತರುವುದರಿಂದ ಹಿಡಿದು, ಅದರಿಂದ ಸುರಕ್ಷಿತವಾಗಿ ಈ ಬಾಲಪ್ರವಾಸಿಗರನ್ನು ಇಳಿಸುವವರೆಗೆ, ಅಲ್ಲಿ ಕೆಲಸಗಳನ್ನು ಚುರುಕಾಗಿ ಮುಗಿಸಿ ಮತ್ತೆ, ಹೊರಟುನಿಂತ ಲಾಂಚ್ ಒಳಗೆ ತನ್ನ ಆಬೋಲಿ ಬಣ್ಣದ ಹೆಡ್ಬ್ಯಾಂಡ್ನೊಂದಿಗೆ ಮಾಯವಾಗುವವರೆಗೆ..ಗುಂಗಿನಂಥ ಆಕೃತಿಯಾದ ಅವ- ಅವನೊಬ್ಬ ಗುಂಗುರುಗೂದಲ ತರುಣ. ಮಿಂಚಿನಂಥ ಲವಲವಿಕೆಯ ಕೇಂದ್ರಬಿಂದುವಿನಂಥವ! ಅದ್ಯಾವುದೋ ತಾರೆ ಹೊಳೆದಂತೆ ಅನುಕ್ತಾಳ ಚಿತ್ತದಲ್ಲಿ ಮಿನುಗಿದವ!..ದೇವಗಡದ ದೀಪಸ್ತಂಭದಂತೆ ಅನಿಯ ಹಸಿಮನದಲ್ಲಿ ಹೊಳೆಯುವ ಘಳಿಗೆಗಳು!

ಇಳಿಯುವಾಗ ಕಡೆಯಲ್ಲುಳಿದ ಹುಡುಗಿಗೆ, ಅನೀ?..ಅಂದ್ರೇನು?..ಅನಾರ್ಕಲಿ?- ಎಂದುಬಿಟ್ಟ. ನೂರಾರು, ಸಾವಿರಾರು ಪಿನ್ಗಳಿಂದ ಬೆಸೆಯಲ್ಪಟ್ಟ ಚಿಮ್ಮುವ ನಿರಿಗೆಗಳ ನರ್ತನದ ಸೊಬಗಿ ಅನಾರ್ಕಲಿ ತಾನೇ ಆದಂತೆ, ಅದೊಂದು ಅಪರಿಚಿತನ ಪರಿಚಿತರೂಪದ ಸಂಬೋಧನೆಗೆ ಅನಿಯ ಕನಸೆಂಬಂಥ ಕನಸು ಹಣಿಕಿಕ್ಕುತ್ತದೆ. ಅವಳದೆಷ್ಟು ವಿಚಲಿತಳಾಗುತ್ತಾಳೆಂದರೆ, ಅವಳ ಪಾಡನ್ನು ಬಲ್ಲ ಕತೆಗಾರ ಹೇಳುವಂತೆ, ಭೂಮಿ-ಆಕಾಶ- ನಡುಗಡ್ಡೆ, ಕಾಳಿ, ಕೈಗಾ, ಸಮುದ್ರಗಳ ನೋಟದಲ್ಲಿ, –
ಈ ಕ್ಷಣದಲ್ಲಿ ಕಣ್ಣಿಗೆ ಬೀಳುತ್ತಿರುವ ವಿಶಾಲತೆಯೂ ಅವನು ಕರುಣಿಸಿದ ಅನುಭೂತಿಯನ್ನೇ ಹೊಮ್ಮಿಸುತ್ತಿತ್ತು. ಎಲ್ಲವೂ ಆ ಕಂಪನಕೇಂದ್ರದಿಂದಲೇ ಹೊರಟಿದ್ದು-ಎಂದವಳಿಗೆ ಅನಿಸತೊಡಗುತ್ತದೆ.
ಪ್ರವಾಸದ ಮುಂದಿನೆಲ್ಲ ಘಟನೆಗಳು ಎಂದರೆ, ಹುಡುಗ- ಹುಡುಗಿಯರ ಸಮುದ್ರ-ಸ್ನಾನದ ಮನರಂಜನೆ, ಬಾಲ್ಆಟ, ವಿಹಾರ ಚಮೇಲಿ ನೀರಲ್ಲಿ ಬಿದ್ದಾಗ ಇತರರು ಅವಳನ್ನು ಪಾರು ಮಾಡುವುದು, ಇತ್ಯಾದಿ..
ದೊಡ್ಡಮ್ಮನ ಹಳೆ-ಸಿನೆಮಾ-ಪುಟಗಳ ನೆನಪುಗಳಿಂದ, ಅನಾರ್ಕಲಿಯನ್ನು ಮನದಲ್ಲಿ
೩
ಕಂಡುಕೊಂಡ ಅನಿಗೆ, ಜೀವಂತ ಗೋರಿಯಾಗಹೊರಟ ಅನಾರ್ಕಲಿಯ ವಿಷಾದದ ಕಣ್ಣುಗಳು
ಚಮೇಲಿಯ ಅಮ್ಮನ ಕಣ್ಣುಗಳ ನೆನಪಂತೆ ಭಾಸವಾಗುತ್ತದೆ- ಒಂದು ಕ್ಷಣ! ಚಮೇಲಿ ಆಪ್ತಗೆಳತಿಯೇ ಆದರೂ, ಈಗಷ್ಟೇ ತನ್ನ ತಲೆದುಂಬಿದ ಈ ವಿಷಯವನ್ನವಳು ಹಂಚಿಕೊಳ್ಳಲಾರಳು; ಶಾಲೆಗೆ ಹೋಗಲು ತಾನೀಗ ಇರುತ್ತಿರುವ ದೊಡ್ಡಮ್ಮನ ವಿಷಯ, ಬಹಳ ಹಿಂದೆ, ಮನೆಬಾಗಿಲಿಗೆ ಬಂದು ಜಯತು ಜಯ ವಿಠಲಾ..ಮುಂತಾದ ಹಾಡುಗಳನ್ನು ಭಕ್ತಿಪರವಶರಾಗಿ ಹಾಡಿ, ದೊಡ್ಡಮ್ಮನಿಂದ, ತುಸು ಊಟವೋ/ವಸ್ತ್ರವನ್ನೋ ಪಡೆದು ಹೋಗುತ್ತಿದ್ದ ಹಾರ್ಮೋನಿಯಂ ಹಾಡುಗಾರ ತಂದೆ/ ಮಗಳ ಕತೆ- ಇಂಥವನ್ನೂ! ಈಗ ಇದನ್ನೂ! ಏಕೆಂದರೆ– ದೋಸ್ತಿ ಏನಿದ್ದರೂ ನೇರ ಜೀವನದ ಜೊತೆಗಂತೆ- ಇತರರ ಇಂಬಿನ ಮೂಲಕವಂತೆ!“
“ನಿತ್ಯ ಸಂಸಾರದ ಭಾರದಂತೆ ಕೊರಳಿಗೆ ಬಿದ್ದ ಆ ಹಾರ್ಮೋನಿಯಮ್ನಿಂದಲೇ ಹಾಡನ್ನು ಹೊರಡಿಸುತ್ತ” ಸಾಗುವ ಅವರಲ್ಲಿ ಆ ಎಂಟು ವರ್ಷದ ಪೋರಿ ಒಮ್ಮೆ ಭಾವೋತ್ಕಂಠಿತಳಾಗಿ
ಹಾಡಿ, ಅತೀತದ ಸ್ಪರ್ಶದ ಉಕ್ಕಂದವನ್ನು ತನ್ನಲ್ಲೂ ಉಕ್ಕಿಸಿದ್ದನ್ನೂ ಅವಳು ಗೆಳತಿಗೆ ಹೇಳಿರಲಿಲ್ಲ. ಆ ಅದೇ ಆಲಾಪದ ಇನ್ನೊಂದು ರೂಪದಂತೆ ಆಕಾಶದ ಆಬೋಲಿ ವರ್ಣ ವ್ಯಾಪಿಸುತ್ತಿದ್ದಂತೆ ಅನುಕ್ತಾಳಿಗೆ ಅನಿಸುವುದು ಕೂಡ- ಅದೇ ಆ ಅನಾರ್ಕಲೀ? ಎಂಬ ಉದ್ಗಾರದಿಂದಲೇ.
ಸೇಫ್ಟಿಪಿನ್ ಸಮಯಕ್ಕೆ ಒದಗುವುದು ಅನಾರ್ಕಲಿಯ ದಿರಿಸಿಗೊಂದೇ ಅಲ್ಲ; ಬಾಲ್ ಆಡುವಾಗ ಹರಿದ ರೂಬಿಯ ಫ್ರಾಕಿನ ಹರಕು ಮುಚ್ಚಲೂ, ಟೆಂಥ್ ಬಿ.ಯ ಗೀತಾಳ ಕಾಲಿಗೆ ಚುಚ್ಚಿದ ಮುಳ್ಳು ತೆಗೆಯಲೂ, ಮತ್ತೆ, ಮರಳುವಾಗ ಸ್ವತಃ ಅನಾರ್ಕಲಿ/ಅನುಕ್ತಾಳ ಹರಿದ ಚಪ್ಪಲಿಯ ತಾತ್ಕಾಲಿಕ ಜೋಡಣೆಗೂ!.. ಕತೆ- ಒಂದು ಪುಟ್ಟ ಪ್ರವಾಸದ್ದು. ಯಾನದ ಮಾರ್ಗ ಸಮುದ್ರ. ಬದುಕಿನ ಅಗಾಧ ವಿಸ್ತರದ ನೀಲ-ಹಾಸಿನಲ್ಲಿ, ದೇವಗಡದ ದೀಪಸ್ತಂಭ ಮನದಲ್ಲಿ ಕಿರಣವನ್ನುಳಿಸಿದ ಹಾಗೆ, ಹೊಮ್ಮಿಸಿದ ಆಹ್ಲಾದದ ಹಾಗೆ- ಒಬ್ಬ ಆ ಆಬೋಲಿಬಣ್ಣದ ತಲೆವಾಸಿನ, ಗುಂಗುರುಕೂದಲ, ಉಕ್ಕುವ ಲವಲವಿಕೆಯ, ಸವಿ-ಸಂಬೋಧನೆಯೊಂದರ ಮೂಲಕ ಮನವನ್ನಾವರಿಸಿಬಿಟ್ಟ ಅನುಕ್ತಾಳ ಸದ್ಯೋಭವಿಷ್ಯದ ಕನಸನ್ನು ಜೋಡಿಸುವ ಸೇಫ್ಟಿಪಿನ್!
೪
ಕತೆಯಲ್ಲಿ ಸೇಫ್ಟಿಪಿನ್, ಅನಾರ್ಕಲಿ ಒಬ್ಬಳದೇನು, ಸಂಸಾರವೆಂಬುದರ ಸಾಂಸಾರಿಕ ಎಳೆಗಳನ್ನು ತಾತ್ಕಾಲಿಕವಾಗೇ ಆದರೂ- ಜೋಡಿಸುವ ಜವಾಬ್ದಾರಿ ಹೊರುತ್ತದೆ! ನಿಬಿಡವಾದ ಬಡ ಜೋಪಡಿಗಳ ಸೂರಿನಡಿ ಜರುಗುವ ಒಂದಲ್ಲ, ಹತ್ತು-ಹನ್ನೊಂದು ತೇಪೆಗಳ ಅಡಗಿಸುತ್ತ, ಅದರಲ್ಲೇ ನಿತ್ಯ ನವೀನವೆಂಬಂಥ ಜೀವನೋತ್ಸಾಹವನ್ನು ಬಡಿದೆಬ್ಬಿಸುತ್ತ, ಏನೇನೂ/ಏನೋ.. ಸರಿಯಿಲ್ಲವೆ?- ಪರವಾಗಿಲ್ಲ; ಏನಾದರೊಂದು ರೀತಿಯಿಂದ ಸರಿ ಮಾಡುವಾ!- ಎಂಬ ಬೆಸುಗೆಯ ಭರವಸೆಯ, ಆಶಾವಾದದ- ಪ್ರಾಪಂಚಿಕತೆಯ ಸೇಫ್ಟಿಪಿನ್/ಸುರಕ್ಷಿತ ಕೊಂಡಿ- ಅದು! ಕತೆಯಲ್ಲಿ ಲಘುಶೈಲಿಯಲ್ಲಿ, ಅದರ ವಿವರಗಳಲ್ಲಿ, ನವಿರಾಗಿ ಅನಾವರಣಗೊಳ್ಳುವುದು- ಈ ಲೋಕ.






ಚಂದದ ವಿಮರ್ಶೆ